ಬಿಗ್‌ ಬಾಸ್‌ | ರಿಯಾಲಿಟಿ ಶೋಗಳೂ, ಜನಪ್ರಿಯತೆಯ ಭ್ರಮೆಯೂ…

Date:

ರಿಯಾಲಿಟಿ ಶೋಗಳು ಸ್ಪರ್ಧಿಗಳನ್ನು ರಾತ್ರೋರಾತ್ರಿ ಸ್ಟಾರ್‌ಗಳನ್ನಾಗಿ ಮಾಡುತ್ತವೆ. ಆದರೆ, ಆ ಶೋಗಳು ಮನರಂಜನೆಯ ಮುಖವಾಡ ಹೊತ್ತು ಜನರ ಭಾವನೆಗಳನ್ನು ಹಣವಾಗಿ ಪರಿವರ್ತಿಸಿಕೊಳ್ಳುವ ವ್ಯಾಪಾರಿ ವೇದಿಕೆಗಳು. ಇವುಗಳ ಲಾಭಬಡುಕತನವನ್ನು, ಅಸಲಿಯತ್ತನ್ನು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ...  

ಈಗಂತೂ ಟಿವಿ ಪರದೆಯ ಮೇಲೆ ರಿಯಾಲಿಟಿ ಶೋಗಳದ್ದೇ ದರ್ಬಾರ್.‌ ಇಂಗ್ಲಿಷ್ ಹೆಸರಿನ ಕನ್ನಡ ಶೋ ಬಿಗ್‌ ಬಾಸ್‌ ಸೇರಿದಂತೆ ಹಲವು ಕಾರ್ಯಕ್ರಮಗಳು ಮನರಂಜನೆ ಹೆಸರಿನಲ್ಲಿ ಪ್ರತಿ ಮನೆಗೆ ನುಗ್ಗುತ್ತವೆ, ಪರದೆ ಒಳಗಿರುವ ಸ್ಪರ್ಧಿಗಳು ಮಾತ್ರವಲ್ಲ, ಪರದೆ ಮುಂದೆ ಕೂತು ನೋಡುಗರ ಮನಸ್ಥಿತಿಯನ್ನೂ ರೂಪಿಸುತ್ತವೆ. ಜನರ ಭಾವನೆ, ಸಮಯ ಹಾಗೂ ದುಡ್ಡನ್ನೂ ಕ್ರಮಬದ್ಧವಾಗಿ ಹೀರಿಕೊಳ್ಳುತ್ತವೆ. ಇದೊಂದು ಅಪ್ಪಟ ಕಮರ್ಷಿಯಲ್‌ ವ್ಯವಸ್ಥೆ. ಗೆದ್ದವನು ದುಡ್ಡಿನೊಂದಿಗೆ ಹೊರ ನಡೆಯುತ್ತಾನೆ, ಚಾನಲ್‌ಗಳು ಅಂದುಕೊಂಡಂತೆ ಕೋಟ್ಯಂತರ ಲಾಭ ಗಳಿಸುತ್ತವೆ. ಆದರೆ, ಇದಕ್ಕೆಲ್ಲ ಮೂಲ ಕಾರಣನಾದ ಪ್ರೇಕ್ಷಕನಿಗೆ ಸಿಗುವುದೆಷ್ಟು?

ಒಂದು ಕಾಲದಲ್ಲಿ, ಅಂದರೆ ಕೇಬಲ್‌, ಡಿಶ್‌ ನೆಟ್‌ವರ್ಕ್‌ಗಳು ಮನೆಮನೆಗೂ ನುಸುಳುವ ಮೊದಲು ಕನ್ನಡ ಟಿವಿ ಪರದೆ ಎಂದರೆ ಕಥೆ, ಸಂಸ್ಕೃತಿ, ಮೌಲ್ಯಗಳ ಪ್ರತಿಬಿಂಬವಾಗಿತ್ತು. ನಮ್ಮ ಮಟ್ಟಿಗೆ ಮೊದಲು ಆರಂಭವಾದ ಚಂದನ ವಾಹಿನಿಯ ಕಾರ್ಯಕ್ರಮಗಳು ನೆನಪಿರಬಹುದು. ಸಾರ್ವಜನಿಕ ಪ್ರಸಾರ ವ್ಯವಸ್ಥೆಯ ಭಾಗವಾಗಿದ್ದ ‘ಚಂದನ’ ಕನ್ನಡದ ಬದುಕು, ಸಾಹಿತ್ಯ, ನಾಟಕ, ಜನಪದ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಕೇಂದ್ರದಲ್ಲಿಟ್ಟುಕೊಂಡು ಕಾರ್ಯಕ್ರಮಗಳನ್ನು ರೂಪಿಸುತ್ತಿತ್ತು. ‘ನಾಡಿನ ನಾಡಿ ಚಂದನ’ ಎನ್ನುವ ಅದರ ಟೈಟಲ್‌ ಟ್ರ್ಯಾಕ್‌ ಕೂಡ ಭಾಷೆ, ನೆಲದ ಸಂಸ್ಕೃತಿ, ಸಹಬಾಳ್ವೆಯ ಪ್ರತೀಕದಂತಿತ್ತು. ಇಂದು ಅದೇ ಪರದೆ ಬಹುತೇಕ ಅಥವಾ ಸಂಪೂರ್ಣವಾಗಿ ರಿಯಾಲಿಟಿ ಮುಖವಾಡದ ಶೋಗಳ ವಶವಾಗಿದೆ. ಇತ್ತೀಚೆಗೆ ಭಾರೀ ಜನಪ್ರಿಯತೆ ಗಳಿಸುತ್ತಿರುವ ಬಿಗ್‌ಬಾಸ್‌, ಡ್ಯಾನ್ಸ್‌, ಸಿಂಗಿಂಗ್‌, ಟ್ಯಾಲೆಂಟ್‌, ಕಪಲ್‌ ಶೋಗಳೆಲ್ಲವೂ ಜನರನ್ನೇ ಕಚ್ಚಾ ವಸ್ತುವಾಗಿಸಿಕೊಂಡು ನಡೆಯುವ ವಾಣಿಜ್ಯ ವ್ಯಾಪಾರಗಳಾಗಿವೆ.

bigg boss kannada 12 1 2

ಮಾರುಕಟ್ಟೆ ಆಧಾರಿತ ಮಾಧ್ಯಮ ಯುಗ ಆರಂಭವಾದ ಬಳಿಕ ಈ ದೃಶ್ಯ ಮಾಧ್ಯಮ ಸಂಪೂರ್ಣವಾಗಿ ಬದಲಾಗಿದೆ. ಕೇಬಲ್‌ ಮತ್ತು ಡಿಶ್‌ ನೆಟ್‌ವರ್ಕ್‌ಗಳ ಮೂಲಕ ಖಾಸಗಿ ಚಾನಲ್‌ಗಳ ಪ್ರವಾಹ ಹರಿದಂತೆ, ಟಿವಿ ಪರದೆ ನಿಧಾನವಾಗಿ ಸಂಸ್ಕೃತಿಯಿಂದ ವ್ಯಾಪಾರಕ್ಕೆ ತಿರುಗಿದೆ. ಇಂದು ಬಹುತೇಕ ಎಲ್ಲಾ ಚಾನಲ್‌ಗಳು ರಿಯಾಲಿಟಿ ಶೋ ನಡೆಸುತ್ತವೆ. ಈ ಶೋಗಳಲ್ಲಿ ಸ್ಪರ್ಧಿಗಳ ಭಾವನೆ, ವೈಯಕ್ತಿಕ ಬದುಕು, ಜಗಳ, ಕಣ್ಣೀರು… ಎಲ್ಲವನ್ನೂ ಒಂದು ವಿಷಯವನ್ನಾಗಿ ಮಾಡಲಾಗುತ್ತದೆ. 24 ಗಂಟೆಗಳ ಬದುಕನ್ನು ಕತ್ತರಿಸಿ, ತಿದ್ದಿ, ತಿರುವಿ ಜನರಿಗೆ ಗಾಳ ಹಾಕಲು ಎಷ್ಟು ಬೇಕೋ ಅಷ್ಟನ್ನು ಮಾತ್ರ ಜೋಡಿಸಿ, ಕೆಲ ನಿಮಿಷಗಳ ನಾಟಕವಾಗಿ ಪ್ರದರ್ಶಿಸಲಾಗುತ್ತದೆ. ಒಬ್ಬರನ್ನು ನಾಯಕನನ್ನಾಗಿ, ಇನ್ನೊಬ್ಬರನ್ನು ಖಳನಾಯಕನನ್ನಾಗಿ ರೂಪಿಸಲಾಗುತ್ತದೆ. ಇಲ್ಲಿ ಯಾರದ್ದೂ ನಿಜ ಜೀವನವಿರುವುದಿಲ್ಲ. ನಾವು ನೋಡುವುದು, ನಂಬುವುದು ಚಾನಲ್‌ನ ಎಡಿಟಿಂಗ್ ಟೀಂ ರೂಪಿಸಿದ ಕಥೆ ಮತ್ತು ಪಾತ್ರಗಳನ್ನ ಮಾತ್ರ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ರಿಯಾಲಿಟಿ ಶೋಗಳು ಸ್ಪರ್ಧಿಗಳನ್ನು ರಾತ್ರೋರಾತ್ರಿ ಸ್ಟಾರ್‌ಗಳನ್ನಾಗಿ ಮಾಡುತ್ತವೆ. ಸ್ಪರ್ಧೆಗೆ ಮುನ್ನವೂ ಇಂಥದ್ದೇ ಒಂದು ಭ್ರಮೆ ಸೃಷ್ಟಿಸಿ ಕರೆತರಲಾಗಿರುತ್ತದೆ. ಲಕ್ಷಾಂತರ ಅಭಿಮಾನಿಗಳು, ಸೋಶಿಯಲ್ ಮೀಡಿಯಾ ಹೈಪ್‌,‌ ನಿರಂತರ ಮೀಡಿಯಾ ಅಟೆನ್ಷನ್ ಎಲ್ಲವೂ ಕ್ಷಣಾರ್ಧದಲ್ಲಿ ಸಿಗುತ್ತದೆ. ಆದರೆ ಈ ಹೈಪ್ ಬಹುತೇಕ ಕ್ಷಣಿಕ. ಶೋ ಮುಗಿದ ಬಳಿಕ ಆರಂಭವಾಗುವುದು ಅಸಲಿ ಹೋರಾಟ.

ರಾಜೇಶ

ಬಿಗ್ ಬಾಸ್ ಕನ್ನಡದ ಸೀಸನ್–3 ಸ್ಪರ್ಧಿ ಜಯಶ್ರೀ ರಾಮಯ್ಯ 2021ರಲ್ಲಿ ಡಿಪ್ರೆಷನ್‌ನಿಂದ ಆತ್ಮಹತ್ಯೆ ಮಾಡಿಕೊಂಡ ಘಟನೆ ಈ ವಾಸ್ತವವನ್ನು ಬಿಚ್ಚಿಡುತ್ತದೆ. ಅದೇ ರೀತಿ ಕಾಮಿಡಿ ಕಿಲಾಡಿ ಖ್ಯಾತಿಯ ಚಂದ್ರಶೇಖರ ಸಿದ್ದಿಯ ಆತ್ಮಹತ್ಯೆ, ಹಳ್ಳಿ ಹೈದ ಪ್ಯಾಟೆಗ್‌ ಬಂದ ಶೋನ ವಿಜೇತ ಜಂಗಲ್‌ ಜಾಕಿ ರಾಜೇಶ ಅವರ ದುರಂತ ಸಾವು- ಇವೆಲ್ಲವೂ ಶೋ ನಂತರದ ಮಾನಸಿಕ ಒತ್ತಡವನ್ನು ಬಯಲು ಮಾಡುತ್ತವೆ. ಸ್ಟಾರ್‌ ಆಗುವ ಕನಸು ಹೊತ್ತ ಇಂಡಿಯನ್ ವಿಜೇತ ಸುನಾಮಿ ಕಿಟ್ಟಿ ಕೂಡ ಜನಪ್ರಿಯತೆಯ ನಶೆಯಲ್ಲಿ ವಿವಾದ ಮಾಡಿಕೊಂಡು ಜನಪ್ರಿಯತೆ ಕಳೆದುಕೊಂಡರು. ಇದು ಆ ಸರಣಿಯ ಮುಂದುವರೆದ ಅಧ್ಯಾಯ.

image 2026 01 19T174932.903

ಇಂತಹ ಶೋಗಳಲ್ಲಿ ಭಾಗವಹಿಸಿದ ಹಲವರು ಇಂದು ಅಜ್ಞಾತರಾಗಿದ್ದಾರೆ. ಕಾರ್ಯಕ್ರಮದ ವೇಳೆ ದೊಡ್ಡ ಸ್ಟಾರ್‌ಗಳಂತೆ ಮೆರೆಸಿದವರನ್ನು, ಶೋ ಮುಗಿದೊಡನೆ ವ್ಯವಸ್ಥೆ ಇವರ ಕೈಬಿಟ್ಟು ಬಿಡುತ್ತದೆ. ಈ ಮನೋವೈಜ್ಞಾನಿಕ ಹೊಡೆತಕ್ಕೆ ಸಿದ್ಧರಾಗಿರದವರು, ಬದುಕನ್ನೇ ಕೊನೆಗೊಳಿಸಿಕೊಳ್ಳುವ ಮಟ್ಟಕ್ಕೆ ತಲುಪುತ್ತಾರೆ. ಇಲ್ಲಿ ಹೊಣೆಗಾರಿಕೆ ಯಾರದ್ದು? ಡ್ರಾಮಾ ಸೃಷ್ಟಿಸಿ ಟಿಆರ್‌ಪಿ ಗಳಿಸುವ ಚಾನಲ್‌ಗಳು, ಸ್ಪರ್ಧಿಗಳ ಮಾನಸಿಕ ಆರೋಗ್ಯಕ್ಕೆ ಯಾವುದೇ ಗ್ಯಾರಂಟಿ ನೀಡುವುದಿಲ್ಲ. ಕೆಲ ಅಮಾಯಕ ಸ್ಪರ್ಧಿಗಳನ್ನು ಬಳಸಿ ಬಿಸಾಡುವ ಈ ವ್ಯವಸ್ಥೆ ಶೋ ನಂತರದ ಅವರ ಬದುಕಿಗೆ ಜವಾಬ್ದಾರಿ ಹೊತ್ತುಕೊಳ್ಳುವುದೇ? ಖಂಡಿತ ಇಲ್ಲ. ಇಂತಹ ಘಟನೆಗಳಿಗೆ ಇಲ್ಲಿ ಆಯೋಜಕರಷ್ಟೆ ಜನರೂ ನೇರ ಹೊಣೆಗಾರರು. ಶೋ ನೋಡುವಾಗ ಇದ್ದ ಉನ್ಮಾದಕತೆ ಬಳಿಕ ಯಾಕಿರುವುದಿಲ್ಲ? ಅಥವಾ ಸ್ಪರ್ಧಿಗಳಿಗೆ ಜನಪ್ರಿಯತೆಯ ಭ್ರಮಾಲೋಕ ಸೃಷ್ಟಿಸಿ ಹೈಪ್‌ ಕೊಡುವ ಅಗತ್ಯ ಖಂಡಿತ ಇರುತ್ತದೆಯೇ? ಇಲ್ಲಿ ಜವಾಬ್ದಾರಿ ಮರೆತವರು ಯಾರು?

ಬಿಗ್ ಬಾಸ್ ಕನ್ನಡದ 12 ಸೀಸನ್‌ಗಳಲ್ಲಿ ನಟಿ ಶೃತಿ (ಸೀಸನ್‌ 3) ಹೊರತುಪಡಿಸಿ ಯಾವ ಸೀಸನ್ ನಲ್ಲೂ ಮಹಿಳಾ ಸ್ಪರ್ಧಿಗಳು ಗೆದ್ದೇ ಇಲ್ಲ. ಹಾಗೆಂದ ಮಾತ್ರಕ್ಕೆ ಗೆಲ್ಲುವ ಸಾಮರ್ಥ್ಯವಿರುವ ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಗಿಳಿಯುವುದೇ ಇಲ್ಲವೇ? ಇಲ್ಲಿ ಸಾಮರ್ಥ್ಯದ ಪ್ರಶ್ನೆಯೇ ಇಲ್ಲ; ಬದಲಾಗಿ ಶೋಗಳಲ್ಲಿರುವ ಜೆಂಡರ್ ಬಯಾಸ್‌, ವೋಟಿಂಗ್ ಡೈನಮಿಕ್ಸ್ ಮತ್ತು ನಿರೂಪಿತ ನರೇಟಿವ್‌ಗಳ ಪರಿಣಾಮ. ರಿಯಾಲಿಟಿ ಶೋಗಳು ಮನರಂಜನೆ ನೀಡಬಹುದು. ಆದರೆ ಸ್ಪರ್ಧಿಗಳ ಶೋ ನಂತರದ ಬದುಕಿಗೆ ಕಾನೂನುಬದ್ಧ, ಮಾನಸಿಕ ಬೆಂಬಲದ ಭರವಸೆ ಇಲ್ಲದಿದ್ದರೆ ಎಲ್ಲವೂ ಅಪಾಯಕಾರಿ.

ಲಾಭದ ಲೆಕ್ಕಾಚಾರದಿಂದಲೇ ಸೃಷ್ಟಿಸುವ ಶೋಗಳು ಪ್ರೇಕ್ಷಕರನ್ನೂ ಸಹ ಆಟದ ಭಾಗವನ್ನಾಗಿ ಮಾಡುತ್ತವೆ. ವೋಟಿನ ಹೆಸರಿನಲ್ಲಿ ಜನರ ಭಾವನೆಗಳನ್ನು ಹಣವಾಗಿ ಪರಿವರ್ತಿಸುತ್ತವೆ. ಒಬ್ಬ ಸ್ಪರ್ಧಿಯ ಗೆಲುವಿಗೆ ಹಾಕುವ ವೋಟು, ವಾಸ್ತವದಲ್ಲಿ ಚಾನಲ್‌ಗಳ ಲಾಭದ ಅಂಕೆಯಾಗುತ್ತದೆ. ಸ್ಪರ್ಧಿ ಗೆದ್ದರೂ, ಸೋತರೂ ಪ್ರೇಕ್ಷಕನ ಬದುಕಿನಲ್ಲಿ ಏನೂ ಬದಲಾಗುವುದಿಲ್ಲ. ಆದರೆ ಚಾನಲ್‌ಗಳು ಮಾತ್ರ ಕೋಟಿ ರೂ.ಗಳ ಲೆಕ್ಕ ಹಾಕುತ್ತವೆ. ಈ ಸ್ಪಷ್ಟ ಬ್ಯುಸಿನೆಸ್ ವ್ಯವಸ್ಥೆಯಲ್ಲಿ ಮೌಲ್ಯಗಳಿಗೆ ಸ್ಥಾನವಿಲ್ಲ. ಜಗಳ, ಅವಮಾನ, ಅಶ್ಲೀಲತೆ, ಹೆಚ್ಚು ಗಲಾಟೆ ಮಾಡಿದವನು ಹೆಚ್ಚು ಕಾಣಿಸುತ್ತಾನೆ, ಹೆಚ್ಚು ಕಾಣಿಸಿಕೊಂಡವನು ಹೆಚ್ಚು ಮತ ಪಡೆದುಕೊಳ್ಳುತ್ತಾನೆ. ಟಿವಿ ಪರದೆ ಎಂದರೆ, ಭಾವನೆಗಳನ್ನು ಬಳಸಿ ಲಾಭ ಮಾಡುವ ಮಾರುಕಟ್ಟೆಯೇ ಹೊರತು ಬೇರೇನಲ್ಲ.

ಇನ್ನು ಈ ಬಾರಿಯ ಬಿಗ್ ಬಾಸ್ (ಸೀಸನ್ 12) ಆಗಿ ಹಾಸ್ಯ ಕಲಾವಿದ ಗಿಲ್ಲಿ ನಟ ಹೊರ ಹೊಮ್ಮಿದ್ದಾರೆ. ಅವರಿಗೆ ಅಭೂತಪೂರ್ವ ಗೆಲುವು ಸಿಕ್ಕಿದೆ. ರನ್ನರ್ ಅಪ್ ಸ್ಥಾನಕ್ಕೆ ರಕ್ಷಿತಾ ಶೆಟ್ಟಿ ಖುಷಿಪಟ್ಟಿದ್ದಾರೆ. ಇಷ್ಟು ಸೀಸನ್‌ಗಳಲ್ಲಿ ಮೊದಲ ಬಾರಿಗೆ ರನ್ನರ್‌ ಅಪ್‌ ಆಗಿರುವ ಮಹಿಳಾ ಸ್ಪರ್ಧಿಯೂ ಅವರೇ. ಗಿಲ್ಲಿಗೆ ಸುಮಾರು 40 ಕೋಟಿಗೂ ಅಧಿಕ ವೋಟ್ ಬಿದ್ದಿವೆಯಂತೆ. ವಿನ್ನಿಂಗ್ ಅಮೌಂಟ್ ಆಗಿ 50 ಲಕ್ಷ ರೂಪಾಯಿ, ಉಡುಗೊರೆಯಾಗಿ ಸುಮಾರು 20 ಲಕ್ಷ ಮೌಲ್ಯದ ಮಾರುತಿ ಸುಜುಕಿ SUV ಕಾರು, ನಟ ಕಿಚ್ಚ ಸುದೀಪ್ ಕಡೆಯಿಂದ 10 ಲಕ್ಷ ರೂಪಾಯಿ… ಇನ್ನೂ ಹತ್ತಾರು ಬಹುಮಾನಗಳನ್ನು ಗಿಲ್ಲಿ ಬಾಚಿಕೊಂಡಿದ್ದಾರೆ. ಬೆಳ್ಳಿ ಪರದೆಯ ದೊಡ್ಡ ಅವಕಾಶಗಳೂ ಸಿಗಬಹುದು. ಉಳಿದ ಸ್ಪರ್ಧಿಗಳಿಗೂ ಅವರ ಜನಪ್ರಿಯತೆ ಆಧಾರದ ಮೇಲೆ, ಸ್ಪರ್ಧೆಯಲ್ಲಿ ಉಳಿದ ದಿನಗಳ ಆಧಾರದ ಮೇಲೆ ಇಂತಿಷ್ಟು ಲಕ್ಷ ಗೌರವಧನ ನೀಡಲಾಗಿದೆ. ನೆಚ್ಚಿನ ಸ್ಪರ್ಧಿ ಗೆದ್ದ ಎನ್ನುವ ಅತಿಶಯದ ಖುಷಿ, ತಾತ್ಕಾಲಿಕ ತೃಪ್ತಿ, ಸಮಾಧಾನಗಳನ್ನು ಬಿಟ್ಟು, ಅವರಿಗೆ ವೋಟ್‌ ಮಾಡಿದವರ ಕೈಗೆ ಎಷ್ಟು ಬಹುಮಾನ ಬಂದಿರಬಹುದು?

ಗಿಲ್ಲಿ ಬಿಗ್ ಬಾಸ್ ವಿನ್ನರ್ ಆದ ಬೆನ್ನಲ್ಲೇ ಜೆಡಿಎಸ್‌ ಎಂಎಲ್‌ಸಿ ಶರವಣ ಅವರು 20 ಲಕ್ಷ ರೂ. ನಗದು ಬಹುಮಾನ ಘೋಷಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಟ್ವೀಟ್ ಮೂಲಕ ಶುಭಾಶಯ ಕೋರಿದ್ದಾರೆ. ಇದು ವ್ಯಕ್ತಿಗತ ಅಭಿಮಾನ ಖಂಡಿತ ಅಲ್ಲ, ಟಿಆರ್‌ಪಿ ಹುಟ್ಟಿಸಿದ ಕ್ರೇಜ್‌ನ್ನು ರಾಜಕೀಯ ವೇದಿಕೆಗೆ ಎಳೆಯುವ ತಂತ್ರ. ಭಾರೀ ಜನಪ್ರಿಯತೆ ಗಳಿಸಿರುವ ಗಿಲ್ಲಿಯನ್ನು ‘ಸಾಫ್ಟ್‌ ಅಂಬಾಸಿಡರ್‌’ನಂತೆ ಬಳಸಲು, ಮುಂದಿನ ಚುನಾವಣೆಗೆ ಪಕ್ಷಕ್ಕೆ ಪ್ರಚಾರ ಗಿಟ್ಟಿಸಿಕೊಳ್ಳಲು ಮಾಡುತ್ತಿರುವ ಉಪಾಯ. ಗಿಲ್ಲಿಯ ಜನಪ್ರಿಯತೆ ಅವನ ವ್ಯಕ್ತಿತ್ವಕ್ಕೆ ಸಿಕ್ಕ ಗೌರವವಲ್ಲ. ಭವಿಷ್ಯದ ರಾಜಕೀಯ ಬಳಕೆಗೆ ಮುಂಗಡ ಹೂಡಿಕೆ. ಇದು ಗೆದ್ದೆತ್ತಿನ ಬಾಲ ಹಿಡಿಯುವ ತಂತ್ರಗಾರಿಕೆ, ಇವೆಲ್ಲಾ ಪಕ್ಕಾ ಲೆಕ್ಕಾಚಾರ ಎನ್ನುವುದು ಹಲವರ ಅಭಿಪ್ರಾಯ.

ಸಿನಿಮಾ, ಕ್ರಿಕೆಟ್, ರಿಯಾಲಿಟಿ ಶೋಗಳ ಮುಖಗಳನ್ನು ರಾಜಕೀಯಕ್ಕೆ ಬಳಸಿಕೊಂಡು ಬಿಟ್ಟಿರುವ ಉದಾಹರಣೆಗಳು ಅನೇಕ. ಜನಪ್ರಿಯತೆಯ ಬೆನ್ನುಹತ್ತಿ ರಾಜಕೀಯಕ್ಕೆ ಬಂದವರು ನಂತರ ವ್ಯವಸ್ಥೆಯಲ್ಲಿ ನಲುಗಿ ಹೋದವರೂ ಇದ್ದಾರೆ. ಇದು ಅಂಥದ್ದೇ ಉದಾಹರಣೆಯಾಗದಿರಲಿ.

ಇದನ್ನೂ ಓದಿ: ಈ ದಿನ ಸಂಪಾದಕೀಯ | ಮಹಿಳೆಯರ ಮೇಲಿನ ʼಪುರುಷಹಂಕಾರʼದ ದೌರ್ಜನ್ಯಕ್ಕೆ ಕೊನೆ ಎಂದು?

ಗಿಲ್ಲಿ ನಟ ಪ್ರತಿಭಾವಂತ ಎನ್ನುವುದರಲ್ಲಿ ಎರಡು ಮಾತಿಲ್ಲ. ಆತನ ನೇರ ನುಡಿ, ಹಾಸ್ಯ, ಸ್ಪಾಂಟೇನಿಟಿ ಎಲ್ಲರಿಗೂ ಬರುವುದಿಲ್ಲ. ಹಾಗೆ ನೋಡಿದರೆ, ಬಿಗ್‌ ಬಾಸ್‌ ಸೇರಿದಂತೆ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಸುವವರು, ಗೆದ್ದವರು ಒಂದಲ್ಲಾ ಒಂದು ರೀತಿ ಪ್ರತಿಭಾವಂತರೇ. ಅಂದರೆ, ಅತ್ಯುತ್ತಮವಾಗಿ ಎಡಿಟ್ ಆಗುವಂತವರು. ಪ್ರತಿಭೆ ಎನ್ನುವುದಕ್ಕಿಂತ ಜನರಿಗೆ ಏನು ಬೇಕು, ಟಿಆರ್‌ಪಿ ಏರಲು ಏನು ಮಾಡಬೇಕು, ಕ್ಯಾಮೆರಾ ಮುಂದೆ ಹೇಗಿರಬೇಕು, ಎನ್ನುವುದನ್ನು ಚೆನ್ನಾಗಿ ಅರಿತಿರುವವರೇ. ಆದರೆ ಇದೇ ಅರಿವು ಅವರನ್ನು ವೇದಿಕೆಯ ಮೇಲೆ ಎತ್ತಿದಷ್ಟೇ ವೇಗದಲ್ಲಿ ಕೆಳಗಿಳಿಸುವ ಶಕ್ತಿಯನ್ನೂ ಹೊಂದಿದೆ. ರಿಯಾಲಿಟಿ ಶೋಗಳಲ್ಲಿ ಪ್ರತಿಭೆ ಎಂದರೆ ನಟನೆ, ಹಾಡು, ನೃತ್ಯ ಮಾತ್ರವಲ್ಲ; ಪ್ರೇಕ್ಷಕರನ್ನು ಓದಿಕೊಳ್ಳುವ ಚಾತುರ್ಯ. ಅರ್ಥಾತ್, ಇದು ಕಲೆಗಿಂತ ಹೆಚ್ಚು ಕ್ಯಾಲ್ಕುಲೇಷನ್‌. ವೀಕ್ಷಕರಲ್ಲಿ ಮತ ಹಾಕಿ ಎಂದು ಕೇಳಿಕೊಳ್ಳುವವರು ಸ್ಪರ್ಧಿಗಳೇ, ಆದರೆ ವೀಕ್ಷಕರಿಗೆ ತೋರಿಸುವ ಕಥೆ ಯಾವುದು ಎಂಬುದನ್ನು ನಿರ್ಧರಿಸುವುದು ಚಾನಲ್‌ ಮತ್ತು ಕಂಟೆಂಟ್ ತಂಡ.

ಗಿಲ್ಲಿ

ಗಿಲ್ಲಿ ನಟನ ಜನಪ್ರಿಯತೆ ಎತ್ತರಕ್ಕೇರಿದಂತೆ, ಅವರ ಸುತ್ತಲಿನ ವಾತಾವರಣ ಅವರನ್ನು ನಿಧಾನವಾಗಿ ಬದಲಿಸತೊಡಗುತ್ತದೆ. ನಿನ್ನೆವರೆಗೆ ಹಳ್ಳಿ ಸೊಗಡು, ಸರಳ ಉಡುಪು, ನಿಷ್ಕಲ್ಮಶ ನಗು, ಎಲ್ಲರೊಂದಿಗೂ ಸಲೀಸಾಗಿ ಬೆರೆಯುತ್ತಿದ್ದ ಅವರ ಗುಣಗಳೇ ಅವರ ಬಲವಾಗಿದ್ದವು. ಈಗ ಶೋ ಗೆದ್ದ ಬಳಿಕ ಹೋದಲ್ಲಿ ಬಂದಲ್ಲಿ ಅಭಿಮಾನಿಗಳ ಗುಂಪು, ಮೂರ್ನಾಲ್ಕು ಮಂದಿ ಬಾಡಿ ಗಾರ್ಡ್ಸ್‌, ಕೂತಲ್ಲಿ ನಿಂತಲ್ಲಿ ಕ್ಯಾಮೆರಾ, ಪಾರ್ಟಿ–ಕಾರ್ಯಕ್ರಮಗಳ ಒತ್ತಡ ಅವರನ್ನು ʼಸೆಲೆಬ್ರಿಟಿ ಫ್ರೇಮ್‌ಗೆ ಸಿಕ್ಕಿಹಾಕಿಬಿಡುತ್ತದೆ. ದುಬಾರಿ ಜೀವನಶೈಲಿ ಅನಿವಾರ್ಯವಾಗುವಾಗ, ಗಿಲ್ಲಿಯನ್ನು ಗಿಲ್ಲಿಯಾಗಿಟ್ಟಿದ್ದ ಒರಿಜಿನಾಲಿಟಿಯೇ ಮರೆಯಾಗುತ್ತದೆ. ಇಲ್ಲಿ ಯಶಸ್ಸು ಎನ್ನುವುದು ತನ್ನನ್ನು ತಾನು ಕಾಪಾಡಿಕೊಳ್ಳುವಲ್ಲಿ ಇದೆ. ಜನರು ಮೆಚ್ಚಿದ್ದು ಅವರ ಸರಳ ವ್ಯಕ್ತಿತ್ವವನ್ನು. ಆದರೆ, ಅದನ್ನೇ ಬಿಟ್ಟು ಇನ್ನೇನೋ ಆಗಲು ಮಾಡಿಕೊಂಡ ಬದಲಾವಣೆ, ಕೊನೆಗೆ ಗಿಲ್ಲಿಯನ್ನು ಇನ್ನೊಬ್ಬ ಸಾಮಾನ್ಯ ನಟನ ಸಾಲಿಗೆ ತಳ್ಳುವ ಅಪಾಯವಿದೆ. ತನ್ನ ಬೇರುಗಳ ಮೇಲೆಯೇ ನಿಂತು ಇನ್ನಷ್ಟು ಎತ್ತರಕ್ಕೇರುವ ಜಾಣ್ಮೆ, ಮೂಲವನ್ನು ಬಿಡದ ಜವಾಬ್ದಾರಿ ಸದ್ಯ ಗಿಲ್ಲಿಗೆ ಅಗತ್ಯವಾಗಿ ಬೇಕಾಗಿದೆ.

ರಿಯಾಲಿಟಿ ಶೋಗಳು ಮನರಂಜನೆಯ ಮುಖವಾಡ ಹೊತ್ತು ಜನರ ಭಾವನೆಗಳನ್ನು ಹಣವಾಗಿ ಪರಿವರ್ತಿಸಿಕೊಳ್ಳುವ ಕ್ರೂರ ವ್ಯಾಪಾರ. ಇವುಗಳನ್ನು ಲಾಭಕ್ಕಾಗಿಯೇ ಸೃಷ್ಟಿಸಿ ಬ್ಯುಸಿನೆಸ್‌ ಮಾಡುವ ಚಾನಲ್‌ಗಳದ್ದು ನೈತಿಕ ದಿವಾಳಿತನ. ಸ್ಪರ್ಧಿಗಳನ್ನು ರಾತ್ರೋರಾತ್ರಿ ಸ್ಟಾರ್‌ಗಳಾಗಿ ಎತ್ತಿ ನಂತರ ಕೈಬಿಡುವ ಚಾನಲ್‌ಗಳು ಮತ್ತು ಪ್ರೇಕ್ಷಕರ ಅತಿರೇಕ, ಉನ್ಮಾದಗಳೇ ಇದಕ್ಕೆ ಹೊಣೆಗಾರರು. ರಿಯಾಲಿಟಿ ಶೋನ ಸ್ಪರ್ಧಿ, ಸಿನಿಮಾ ನಟ ಯಾರೇ ಆಗಿರಲಿ, ಅವರೆಡೆಗಿನ ಅತಿಯಾದ ಅಂಧಾಭಿಮಾನ ಒಳ್ಳೆಯದಲ್ಲ. ಅಚ್ಚೆ ಹಾಕಿಸಿಕೊಳ್ಳುವ ಮುನ್ನ, ಅವರನ್ನು ಬೆಂಬಲಿಸಿ ಎಂದು ಬೇರೆಯವರನ್ನು ಬೇಡಿಕೊಳ್ಳುವ ಮುನ್ನ, ಇದೆಲ್ಲವೂ ಚಾನಲ್‌ಗಳ ಲಾಭದ ಸರಕುಗಳು ಎಂದು ತಿಳಿದಿದ್ದರೂ ಅವುಗಳನ್ನು ಒಪ್ಪಿಕೊಳ್ಳುವ ಮುನ್ನ, ಸೋಷಿಯಲ್‌ ಮೀಡಿಯಾದಲ್ಲಿ ಬರುವುದೆಲ್ಲ ನಿಜವೇ ಎಂದು ನಂಬುವ ಮುನ್ನ, ಫೇಕ್‌ ಹೈಪ್‌ಗಳನ್ನು ಇನ್ನಷ್ಟು ಹೈಪ್‌ ಮಾಡಿ ಮಂಗಗಳಾಗುವ ಮುನ್ನ ಅರಿವಿನ ಅಗತ್ಯ ಖಂಡಿತ ಮುಖ್ಯ.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...