ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸಂಸ್ಥಾಪಕ ಹಾಗೂ ನಟ ವಿಜಯ್ ಅವರಿಗೆ ಕರೂರು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಸಮನ್ಸ್ ಜಾರಿ ಮಾಡಿದೆ. ಜನವರಿ 12ರಂದು ವಿಚಾರಣೆಗೆ ಖುದ್ದು ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2025ರ ಸೆಪ್ಟೆಂಬರ್ 27ರಂದು ಕರೂರು ಜಿಲ್ಲೆಯ ವೇಲುಸ್ವಾಮಿಪುರಂನಲ್ಲಿ ಆಯೋಜಿಸಲಾಗಿದ್ದ ಟಿವಿಕೆ ರಾಜಕೀಯ ರ‍್ಯಾಲಿಯ ವೇಳೆ ಈ ದುರಂತ ಸಂಭವಿಸಿತ್ತು. ವಿಜಯ್ ಅವರ ಭಾಷಣವನ್ನು ಕೇಳಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಹಾಗೂ ಬೆಂಬಲಿಗರು ಜಮಾಯಿದ್ದ ಪರಿಣಾಮ ಉಂಟಾದ ನೂಕುನುಗ್ಗಲಿನಲ್ಲಿ 41 ಮಂದಿ ಪ್ರಾಣ ಕಳೆದುಕೊಂಡಿದ್ದರು ಮತ್ತು ಹಲವರು ಗಾಯಗೊಂಡಿದ್ದರು.
ಈಗಾಗಲೇ ಸಿಬಿಐ ಅಧಿಕಾರಿಗಳು ಟಿವಿಕೆ ಪಕ್ಷದ ಹಿರಿಯ ಪದಾಧಿಕಾರಿಗಳನ್ನು ವಿಚಾರಣೆ ನಡೆಸಿ, ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ತನಿಖೆಯ ಮುಂದಿನ ಹಂತವಾಗಿ ಇದೀಗ ಪಕ್ಷದ ಮುಖ್ಯಸ್ಥರಿಗೇ ನೋಟಿಸ್ ನೀಡಲಾಗಿದೆ.
ಎಸ್‌ಐಟಿ ಬದಲಿಗೆ ಸಿಬಿಐ ತನಿಖೆ ಏಕೆ?
ಆರಂಭದಲ್ಲಿ ತಮಿಳುನಾಡು ಸರ್ಕಾರವು ಈ ಪ್ರಕರಣದ ಸಿಬಿಐ ತನಿಖೆಯನ್ನು ವಿರೋಧಿಸಿತ್ತು. ಕಾನೂನು ಮತ್ತು ಸುವ್ಯವಸ್ಥೆ ರಾಜ್ಯ ಪಟ್ಟಿಯಲ್ಲಿರುವ ವಿಷಯವಾಗಿರುವುದರಿಂದ, ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡವೇ (ಎಸ್‌ಐಟಿ) ತನಿಖೆ ನಡೆಸಲು ಸಮರ್ಥವಾಗಿದೆ ಎಂದು ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿತ್ತು.
ಇದನ್ನು ಓದಿದ್ದೀರಾ? ಸಲ್ಮಾನ್ ಖಾನ್ ಅಭಿನಯದ ಗಲ್ವಾನ್ ಟೀಸರ್‌ಗೆ ಚೀನಾ ವಿರೋಧ
ಆದರೆ, ಕರೂರು ಕಾಲ್ತುಳಿತ ಘಟನೆಯು “ರಾಷ್ಟ್ರದ ಆತ್ಮಸಾಕ್ಷಿಯನ್ನೇ ಕಲಕಿದೆ” ಎಂದು ಸುಪ್ರೀಂ ಕೋರ್ಟ್ ಗಂಭೀರವಾಗಿ ಅವಲೋಕಿಸಿತ್ತು. ಸ್ವತಂತ್ರ ಮತ್ತು ನಿಷ್ಪಕ್ಷಪಾತ ತನಿಖೆಯ ಅಗತ್ಯವಿದೆ ಎಂದು ಪ್ರತಿಪಾದಿಸಿದ ನ್ಯಾಯಾಲಯವು, ರಾಜ್ಯ ಸರ್ಕಾರದ ಮನವಿಯನ್ನು ತಿರಸ್ಕರಿಸಿ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಿತ್ತು.
ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ಸಿಬಿಐ, ಕಾರ್ಯಕ್ರಮಕ್ಕೆ ನೀಡಲಾದ ಅನುಮತಿಗಳು, ಜನಸಂದಣಿ ನಿರ್ವಹಣಾ ಕ್ರಮಗಳು, ಪೊಲೀಸ್ ಬಂದೋಬಸ್ತ್ ಮತ್ತು ತುರ್ತು ಸ್ಪಂದನಾ ವ್ಯವಸ್ಥೆಗಳ ಬಗ್ಗೆ ಕೂಲಂಕಷ ಪರಿಶೀಲನೆ ನಡೆಸುತ್ತಿದೆ.
ಈಗಾಗಲೇ ಟಿವಿಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಬಸ್ಸಿ ಆನಂದ್, ಜಂಟಿ ಕಾರ್ಯದರ್ಶಿಗಳಾದ ನಿರ್ಮಲ್ ಕುಮಾರ್ ಮತ್ತು ಆಧವ್ ಅರ್ಜುನ್ ಹಾಗೂ ಕರೂರು ಪಶ್ಚಿಮ ಜಿಲ್ಲಾ ಕಾರ್ಯದರ್ಶಿ ಮತಿಯಳಗನ್ ಅವರು ಸಿಬಿಐ ಮುಂದೆ ಹಾಜರಾಗಿ ಹೇಳಿಕೆ ನೀಡಿದ್ದಾರೆ.
ಈ ದುರಂತದ ನಂತರ, ಮದ್ರಾಸ್ ಹೈಕೋರ್ಟ್ ತಮಿಳುನಾಡು ಸರ್ಕಾರಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿ, ರಾಜಕೀಯ ರ‍್ಯಾಲಿಗಳು ಮತ್ತು ಸಾರ್ವಜನಿಕ ಸಭೆಗಳಲ್ಲಿ ಸುರಕ್ಷತೆಯನ್ನು ಖಾತ್ರಿಪಡಿಸಲು ಕರಡು ‘ಪ್ರಮಾಣಿತ ಕಾರ್ಯಾಚರಣೆ ವಿಧಾನ’ವನ್ನು (SOP) ರೂಪಿಸಿ ಸಲ್ಲಿಸುವಂತೆ ಸೂಚಿಸಿತ್ತು.





