ಆಳವಾದ ಅಸಮಾನತೆ ಮತ್ತು ಜಾತಿ ಶೋಷಣೆಯ ವಿರುದ್ಧ ದನಿ ಎತ್ತಿರುವ, ನಟ ದುನಿಯಾ ವಿಜಯ್ ಮುಖ್ಯಭೂಮಿಕೆಯ ‘ಲ್ಯಾಂಡ್ ಲಾರ್ಡ್’ ಚಲನಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವ ಪ್ರಸ್ತಾವನೆಯನ್ನು ಪರಿಶೀಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಮಂಗಳವಾರ ಸೂಚನೆ ನೀಡಿದ್ದಾರೆ.
ನಟ ದುನಿಯಾ ವಿಜಯ್ ನೇತೃತ್ವದ ಚಿತ್ರತಂಡವು ಮುಖ್ಯಮಂತ್ರಿಗಳನ್ನು ಅವರ ಗೃಹ ಕಚೇರಿಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿತು. ಗ್ರಾಮೀಣ ಭಾರತದ ಊಳಿಗಮಾನ್ಯ ಪದ್ಧತಿಯ ಕರಾಳತೆ ಹಾಗೂ ಶೋಷಿತ ವರ್ಗದ ಮೇಲಿನ ದೌರ್ಜನ್ಯವನ್ನು ಈ ಚಿತ್ರದಲ್ಲಿ ನೈಜವಾಗಿ ಕಟ್ಟಿಕೊಡಲಾಗಿದೆ. ಇದು ಕೇವಲ ಮನರಂಜನಾತ್ಮಕ ಚಿತ್ರವಾಗಿರದೆ, ಸಮಾಜದ ಕಣ್ಣು ತೆರೆಸುವ ಪ್ರಯತ್ನವಾಗಿದೆ ಎಂದು ಚಿತ್ರತಂಡವು ಮುಖ್ಯಮಂತ್ರಿಗಳ ಗಮನಕ್ಕೆ ತಂದಿತು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ| ₹100 ತೆರಿಗೆಯಲ್ಲಿ ₹5 ಕೂಡ ವಾಪಸು ಸಿಗ್ತಿಲ್ಲ; ರಾಜ್ಯಕ್ಕೆ ಮೋದಿ ಮುಂದುವರೆಸಿದ ಅಗಾಧ ಅನ್ಯಾಯ!
ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳು, “ಸಾಮಾಜಿಕ ಪಿಡುಗುಗಳ ವಿರುದ್ಧ ಜಾಗೃತಿ ಮೂಡಿಸುವ ಇಂತಹ ಉತ್ತಮ ಸಂದೇಶವುಳ್ಳ ಚಿತ್ರಗಳಿಗೆ ಸರ್ಕಾರದ ಪ್ರೋತ್ಸಾಹ ಸದಾ ಇರುತ್ತದೆ,” ಎಂದು ಅಭಿಪ್ರಾಯಪಟ್ಟರು. ಕೂಡಲೇ ಈ ಕುರಿತು ಪರಿಶೀಲಿಸಿ, ನಿಯಮಾನುಸಾರ ಮನರಂಜನಾ ತೆರಿಗೆಯಿಂದ ವಿನಾಯಿತಿ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆರ್ಥಿಕ ಮತ್ತು ವಾರ್ತಾ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಅವರು ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕರು ಹಾಗೂ ತಂತ್ರಜ್ಞರು ಉಪಸ್ಥಿತರಿದ್ದರು.





