ಮದುವೆಯಾಗುವುದಾಗಿ ನಂಬಿಸಿ ಕಳೆದ ಒಂದು ದಶಕದಿಂದ ಮನೆಕೆಲಸದಾಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ‘ಧುರಂಧರ್’ ಸಿನಿಮಾ ಖ್ಯಾತಿಯ ಬಾಲಿವುಡ್ ನಟ ನದೀಮ್ ಖಾನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಸುಮಾರು 41 ವರ್ಷದ ಸಂತ್ರಸ್ತೆ ನೀಡಿದ ದೂರಿನನ್ವಯ ಕಾರ್ಯಪ್ರವೃತ್ತರಾದ ಪೊಲೀಸರು ನಟನನ್ನು ವಶಕ್ಕೆ ಪಡೆದಿದ್ದಾರೆ. ಮದುವೆಯಾಗುವ ಭರವಸೆ ನೀಡಿ ತಮ್ಮೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದ ನಟ, ಬಳಿಕ ವಿವಾಹವಾಗಲು ನಿರಾಕರಿಸಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ದೂರುದಾರ ಮಹಿಳೆ ಕಳೆದ 10 ವರ್ಷಗಳ ಹಿಂದೆ ನಟ ನದೀಮ್ ಖಾನ್ ಅವರ ಮನೆಯಲ್ಲಿ ಮನೆಕೆಲಸಕ್ಕೆ ಸೇರಿಕೊಂಡಿದ್ದರು. ಈ ವೇಳೆ ನಟನ ಪರಿಚಯವಾಗಿದ್ದು, 2015ರ ಸುಮಾರಿಗೆ ಇಬ್ಬರ ನಡುವೆ ಸಲುಗೆ ಬೆಳೆದಿದೆ. ಇದನ್ನೇ ಬಂಡವಾಳವಾಗಿಸಿಕೊಂಡ ಆರೋಪಿ ನದೀಮ್, ಮದುವೆಯಾಗುವುದಾಗಿ ನಂಬಿಸಿ ಮಹಿಳೆಯ ಮನೆಯಲ್ಲಿಯೇ ಆಕೆಯೊಂದಿಗೆ ಮೊದಲ ಬಾರಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ‘ಬೋರ್ಡ್ ಆಫ್ ಪೀಸ್’ಗೆ ಸೇರದ ಭಾರತದ ನಿಲುವು ಸ್ವಾಗತಾರ್ಹ
ನಂತರದ ದಿನಗಳಲ್ಲಿ ವರ್ಸೋವಾದಲ್ಲಿರುವ ನಟನ ನಿವಾಸ ಹಾಗೂ ಸಂತ್ರಸ್ತೆಯ ಮನೆ ಸೇರಿದಂತೆ ವಿವಿಧೆಡೆ ಇಬ್ಬರ ನಡುವೆ ಲೈಂಗಿಕ ಸಂಬಂಧ ಮುಂದುವರಿದಿದೆ. ಸುದೀರ್ಘ 10 ವರ್ಷಗಳ ಕಾಲ ಸಂಬಂಧದಲ್ಲಿದ್ದ ಮಹಿಳೆ, ನದೀಮ್ ತಮ್ಮನ್ನು ಮದುವೆಯಾಗಲಿದ್ದಾರೆ ಎಂಬ ನಂಬಿಕೆಯಲ್ಲಿದ್ದರು. ಆದರೆ, ಇತ್ತೀಚೆಗೆ ನಟ ವಿವಾಹವಾಗಲು ಸ್ಪಷ್ಟವಾಗಿ ನಿರಾಕರಿಸಿದ ಹಿನ್ನೆಲೆಯಲ್ಲಿ ನೊಂದ ಮಹಿಳೆ ವರ್ಸೋವಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

ಸಂತ್ರಸ್ತೆ ಮೊದಲು ವರ್ಸೋವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ, ಆರೋಪಿ ಮತ್ತು ಸಂತ್ರಸ್ತೆಯ ನಡುವೆ ಮೊದಲ ಬಾರಿಗೆ ದೈಹಿಕ ಸಂಬಂಧ ನಡೆದಿರುವುದು ಸಂತ್ರಸ್ತೆಯ ಮನೆಯಲ್ಲಿ ಮತ್ತು ಸಂತ್ರಸ್ತೆ ಅದೇ ಪ್ರದೇಶದಲ್ಲಿ ವಾಸವಾಗಿರುವುದರಿಂದ ಮಾಲ್ವಾನಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.
ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಮಾಲ್ವಾನಿ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು, “ಮಹಿಳೆ ನೀಡಿರುವ ಹೇಳಿಕೆ ಮತ್ತು ದೂರಿನ ಅನ್ವಯ ನಟನನ್ನು ಬಂಧಿಸಲಾಗಿದ್ದು, ಆರೋಪಗಳ ಕುರಿತು ಕೂಲಂಕಷ ತನಿಖೆ ನಡೆಸಲಾಗುತ್ತಿದೆ,” ಎಂದು ತಿಳಿಸಿದ್ದಾರೆ. ಮಾಧ್ಯಮಗಳ ವರದಿ ಪ್ರಕಾರ ಸಂತ್ರಸ್ತೆ ಈ ಹಿಂದೆ ಹಲವು ಬಾಲಿವುಡ್ ನಟರ ಮನೆಗಳಲ್ಲಿ ಕೆಲಸ ನಿರ್ವಹಿಸಿದ್ದು, ನಂತರ ನದೀಮ್ ಖಾನ್ ಅವರ ಸಂಪರ್ಕಕ್ಕೆ ಬಂದಿದ್ದರು ಎನ್ನಲಾಗಿದೆ.





