ಮಲಯಾಳಂನ ಖ್ಯಾತ ನಟ ದುಲ್ಕರ್ ಸಲ್ಮಾನ್ ಅವರ ಕೊಚ್ಚಿಯ ಎಲಂಕುಲಂ ನಿವಾಸದ ಮೇಲೆ ಕಸ್ಟಮ್ಸ್ ಇಲಾಖೆ ದಾಳಿ ನಡೆಸಿದ್ದು, ಎರಡು ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆದಿದೆ. ಈ ಪ್ರಕರಣದಲ್ಲಿ ದುಲ್ಕರ್‌ಗೆ ಕಸ್ಟಮ್ಸ್ ಇಲಾಖೆಯಿಂದ ಶೀಘ್ರದಲ್ಲೇ ಸಮನ್ಸ್ ಜಾರಿಯಾಗಲಿದೆ ಎಂದು ವರದಿಗಳು ತಿಳಿಸಿವೆ.
ಕಸ್ಟಮ್ಸ್ ಮೂಲಗಳ ಪ್ರಕಾರ, ದುಲ್ಕರ್‌ಗೆ ಸೇರಿದ ನಾಲ್ಕು ವಾಹನಗಳ ಬಗ್ಗೆ ತನಿಖೆ ನಡೆಯುತ್ತಿದೆ. ವಶಪಡಿಸಿಕೊಂಡ ಕಾರುಗಳಲ್ಲಿ ಲ್ಯಾಂಡ್ ರೋವರ್ ಡಿಫೆಂಡರ್ ಮತ್ತು ಟೊಯೋಟಾ ಲ್ಯಾಂಡ್ ಕ್ರೂಸರ್ ಸೇರಿವೆ. ಅವುಗಳಲ್ಲಿ ಒಂದರ ನೋಂದಣಿ ಬೇರೆ ವ್ಯಕ್ತಿಯ ಹೆಸರಿನಲ್ಲಿ ಇದ್ದು, ಮಾನ್ಯತೆಯುಳ್ಳ ಫಿಟ್‌ನೆಸ್ ಪ್ರಮಾಣಪತ್ರವಿಲ್ಲದಿರುವುದು ಪತ್ತೆಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ವಾಹನಗಳ ದಾಖಲೆಗಳ ಪರಿಶೀಲನೆಗಾಗಿ ಮೋಟಾರ್ ವಾಹನ ಇಲಾಖೆಯೂ ಕ್ರಮ ಕೈಗೊಳ್ಳಲಿದೆ.
ಈ ಪ್ರಕರಣದಲ್ಲಿ ದುಲ್ಕರ್ ಮಾತ್ರವಲ್ಲದೆ, ನಟ ಪೃಥ್ವಿರಾಜ್ ಸುಕುಮಾರನ್ ಮತ್ತು ಅಮಿತ್ ಚಕ್ಕಲಕ್ಕಲ್ ಸಹ ಕಸ್ಟಮ್ಸ್ ತನಿಖೆಗೆ ಒಳಪಡುವ ಸಾಧ್ಯತೆಯಿದೆ.
ಇದನ್ನು ಓದಿದ್ದೀರಾ? ವಿಷ್ಣುವರ್ಧನ್ @ 75 | ಕಾಲಧರ್ಮ ಕಡೆದು ನಿಲ್ಲಿಸಿದ ಕಲಾವಿದ
“ಆಪರೇಷನ್ ನುಮ್ಖೂರ್” ಎಂಬ ಹೆಸರಿನಲ್ಲಿ ನಡೆದ ದಾಳಿಯಲ್ಲಿ ಹಲವು ಅನಧಿಕೃತವಾಗಿ ಭಾರತಕ್ಕೆ ತರಲಾದ ಐಷಾರಾಮಿ ವಾಹನಗಳನ್ನು ಪತ್ತೆ ಹಚ್ಚಲಾಗಿದೆ. ಕೊಚ್ಚಿಯ ಕಸ್ಟಮ್ಸ್ ಅಧಿಕಾರಿ ಟಿ. ಟಿಜು ಅವರು, “ಈ ರೀತಿಯ ಕಳ್ಳಸಾಗಣೆ ರಾಷ್ಟ್ರದ ಆರ್ಥಿಕ ಭದ್ರತೆಗೆ ದೊಡ್ಡ ಸವಾಲು” ಎಂದು ಹೇಳಿದ್ದಾರೆ.
ತನಿಖೆಯಲ್ಲಿ ಆಮದು ಸುಂಕ ತಪ್ಪಿಸುವುದು, ಜಿಎಸ್‌ಟಿ ಹಾಗೂ ಆದಾಯ ತೆರಿಗೆ ಲೋಪಗಳು, ಹಣದ ಅಕ್ರಮ ಚಲಾವಣೆ ಮುಂತಾದ ಉಲ್ಲಂಘನೆಗಳೂ ಬೆಳಕಿಗೆ ಬಂದಿವೆ. ದುಲ್ಕರ್ ಸಲ್ಮಾನ್ ಅವರನ್ನು ವಿಚಾರಣೆಗೆ ಕರೆಯಲಾಗುವುದು ಹಾಗೂ ವಾಹನಗಳ ದಾಖಲೆಗಳನ್ನು ಸಲ್ಲಿಸಲು ಸೂಚಿಸಲಾಗಿದೆ. ಈ ಘಟನೆಯಿಂದಾಗಿ ಚಿತ್ರರಂಗದ ಗಮನ ಸೆಳೆದಿರುವ ಈ ಪ್ರಕರಣದ ಮುಂದಿನ ಬೆಳವಣಿಗೆಗಳು ಕುತೂಹಲ ಕೆರಳಿಸಿವೆ.





