Eko ಮಲೆಯಾಳಂ ಚಲನಚಿತ್ರ| ಹೆಣ್ಣನ್ನು ತಣ್ಣನೆಯ ಕ್ರೌರ್ಯದ ಪಂಜರದಲ್ಲಿ ಕೂಡಿಡುವ ಪಿತೃತ್ವದ ಪ್ರತಿಧ್ವನಿ!

Date:

ಮ್ಲಾಥಿ / ಸೋಯಿ ಎನ್ನುವ ಪಾತ್ರ, ಯಾವುದೇ ದೇಶವಿರಲಿ ಹೆಣ್ಣು “ರಕ್ಷಣೆ” ಎಂಬ ಸೋಗಿನ ಮುಖವಾಡದೊಳಗೆ ನಿರ್ಬಂಧಗಳ ಸಂಕೋಲೆಗಳಲ್ಲಿ ಹೇಗೆ ಸಿಲುಕಿಕೊಂಡಿರುತ್ತಾಳೆ ಎಂಬುದನ್ನು ಎಕೋ ಚಲನಚಿತ್ರ ಸೂಕ್ಷ್ಮವಾಗಿ ಬಿಚ್ಚಿಡುತ್ತದೆ. ಮೊದಲು ಯೋಸಿಹಾನ ಬಂಧನದಲ್ಲಿ ನಂತರ ಕುರಿಯಾಚ್ಚನ್ ಬಂಧನದಲ್ಲಿ. ಆ ಬಂಧನವೂ ಆಕೆಗೆ ಬಂಧನವೆಂದು ತಿಳಿದಿರಲಿಲ್ಲ ಮೊದಮೊದಲು. ಪೋಥನ್ ನಿಜವಾದ ಉದ್ದೇಶವನ್ನು ಬಿಚ್ಚಿಡುವವರೆಗೂ.

“Sometimes Protection and Restriction look the same…” ರಕ್ಷಣೆ ಎಂಬುದು ಯಾವಾಗ ನಿರ್ಬಂಧವಾಗಿ ಬದಲಾಗುತ್ತದೆ, ಮತ್ತು ಅಚಲ ನಿಷ್ಠೆ ಎಂದರೆ ನಿಜಕ್ಕೂ ಏನು?

ನನ್ನ ಅಭಿಪ್ರಾಯದಲ್ಲಿ, ‘Ekō’ ಎಂಬ ಮಲೆಯಾಳಂ ಚಲನಚಿತ್ರ ಈ ಎರಡೂ ಪ್ರಶ್ನೆಗಳ ಸುತ್ತಲೇ ತಿರುಗುತ್ತದೆ. ಮೊದಲನೆಯದಾಗಿ ಹೇಳಬೇಕೆಂದರೆ, ಚಿತ್ರದ ಕಥಾಸೂತ್ರವೇ ಒಂದು ಕಲಾಕೃತಿ. Master Piece. ಕುರಿಯಾಚ್ಚನ್ ಎಂಬ ರಹಸ್ಯಮಯ ಪಾತ್ರದ ಬಗ್ಗೆ ನಾವು ನೇರವಾಗಿ ತಿಳಿದುಕೊಳ್ಳುವ ಬದಲು ಇತರ  ಪಾತ್ರಗಳು ಪರಸ್ಪರ ಹಂಚಿಕೊಳ್ಳುವ  ಪ್ರಶ್ನೆಗಳು, ಚರ್ಚೆಗಳು ಮತ್ತು ಕಥೆಗಳ ಮೂಲಕ ನಿಧಾನವಾಗಿ ತಿಳಿದುಕೊಳ್ಳುವ ವಿಧಾನ ಬಹಳ ಕುತೂಹಲ ಹುಟ್ಟಿಸುತ್ತದೆ. ಹೀಗೆ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತ ಸರಳವಾದ ಕತೆಯನ್ನು ಸ್ವಾರಸ್ಯಕರ ಥ್ರಿಲ್ಲರ್ ಆಗುವಂತೆ ಹೇಳುವ ಕಲೆ ಮಲೆಯಾಳಿಗಳಿಗೆ ಸಿದ್ಧಿಸಿದೆ ಎನಿಸುತ್ತದೆ. ಹಲವು ವರ್ಷಗಳಿಂದ ಮಲೆಯಾಳಂ ಭಾಷೆಯ ಸಿನೆಮಾಗಳನ್ನು ನೋಡುತ್ತಾ ಬಂದಿದ್ದೇನೆ. 2007ರಲ್ಲಿ ಬಂದಿದ್ದ Ore Kadal ಚಿತ್ರ ನನ್ನನ್ನೆಷ್ಟು ಪ್ರಭಾವಿಸಿತ್ತೆಂದರೆ ಅದು ಈಗಲೂ 20 ವರ್ಷಗಳ ನಂತರವೂ ಮನಸ್ಸಿನಲ್ಲಿ ಅಚ್ಚೊತ್ತಿ ಕುಳಿತುಬಿಟ್ಟಿದೆ. ಮರೆಯುವಂತೆಯೇ ಇಲ್ಲ. ಮಮ್ಮುಟ್ಟಿ, ಮೀರಾ ಜಾಸ್ಮಿನ್ ಅದ್ಭುತ ನಟನೆ, ಆ ಕಾಲಕ್ಕೆ Daring, Bold ಎನಿಸಬಲ್ಲ ಕಥಾ ವಸ್ತುವುಳ್ಳ ಕಲಾತ್ಮಕ ಚಿತ್ರ ನನ್ನ ಅಭಿರುಚಿಯನ್ನೇ ಬದಲಿಸಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇರಲಿ ಈಗ ಎಕೊಗೆ ಬರೋಣ.  

’Eko‘ ಆರಂಭವಾಗುವುದೇ ಮೋಹನ್ ಪೋಥನ್ ಬೋನಿನಲ್ಲಿ ನಾಯಿಯನ್ನು ಕೊಂಡು ಹೋಗುತ್ತಿರುವ ದೃಶ್ಯದಿಂದ. ಆ ಬೋನಿನಲ್ಲಿರುವುದು ಹೆಣ್ಣುನಾಯಿ.  ಎತ್ತ ನೋಡಿದರೂ ಹಸಿರು, ಇಬ್ಬನಿ ಹೊದ್ದ ಬಿಳಿ ಬೆಟ್ಟಗಳೇ ಸುತ್ತುವರಿದ ಎತ್ತರವಾದ, ರಮಣೀಯವಾದ ಕಾಟುಕುನ್ನಿ ಬೆಟ್ಟದ ಒಂದು ಮನೆಯಲ್ಲಿ ಒಬ್ಬ ವೃದ್ಧ ಮಹಿಳೆ, ಮ್ಲಾಥಿ ಚೇಟಥಿ ಮತ್ತು ಅವಳನ್ನು ನೋಡಿಕೊಳ್ಳಲು ಇರುವ ಒಬ್ಬ ಹುಡುಗ ’ಪಿಯೂಸ್’ ಇಬ್ಬರದೇ ಒಂದು ಲೋಕ. ಇಬ್ಬರ ಸಂಭಾಷಣೆ, ನೆನಪುಗಳನ್ನು ಹಂಚಿಕೊಳ್ಳುವುದರ ಮೂಲಕ ಕಥೆ ಸುರುಳಿ ಬಿಚ್ಚಿಕೊಳ್ಳತೊಡಗುತ್ತದೆ. ಕುರಿಯಾಚ್ಚನ್ ಒಬ್ಬ ಕುಖ್ಯಾತ ನಾಯಿ ಸಾಕಣೆದಾರ ತರಬೇತುದಾರ. ಆದರೆ ಅವನು ರಹಸ್ಯಮಯವಾಗಿ ಕಾಣೆಯಾಗಿದ್ದಾನೆ. ಅವನನ್ನು ಹುಡುಕುತ್ತಿರುವವರ ಮೂಲಕ, ಹುಡುಕಿಕೊಂಡು ಕಾಟುಕುನ್ನಿ ಬೆಟ್ಟಕ್ಕೆ ಬರುತ್ತಿರುವವರ ಮೂಲಕ ನಮಗೆ ಕತೆ ಸಿಗುತ್ತದೆ. ಸಮಾಧಿಯಾಗಿ ಹೂತು ಹೋದ ರಹಸ್ಯಗಳುಹಂತಹಂತವಾಗಿ ಬಯಲಾಗತೊಡಗುತ್ತವೆ. ಪ್ರೇಕ್ಷಕರಾದ ನಾವೇ ಸುಳಿವುಗಳ ಬೆಂಬತ್ತಿ ಹುಡುಕಿಕೊಳ್ಳಬೇಕು. ಚಿತ್ರ ನಿರ್ದೇಶಕರ ಈ ಕಲಾತ್ಮಕತೆಯನ್ನು ಶ್ಲಾಘಿಸಲೇಬೇಕು. ಎಲ್ಲೂ ಯಾವುದನ್ನೂ ಪ್ರೇಕ್ಷಕರಿಗೆ ನೇರವಾಗಿ ಹೇಳುವುದಿಲ್ಲ. ಸೂಚ್ಯವಾಗಿಸುತ್ತಾರೆ. ನೋಡುಗರ ಊಹೆಗೇ ಬಿಟ್ಟುಬಿಡುತ್ತಾರೆ.  

eko

ಎರಡನೇ ಮಹಾಯುದ್ಧದ ನಂತರ ಮಲೆಯಾಳಿಗಳು ಬಹುಸಂಖ್ಯೆಯಲ್ಲಿ ಮಲೇಷಿಯಾ, ಸಿಂಗಪುರ ದೇಶಗಳಿಗೆ ವ್ಯಾಪಾರ ವ್ಯವಹಾರಕ್ಕೆಂದು ಹೋಗುವುದು ಸಾಮಾನ್ಯವಾಗಿತ್ತು. ಒಂದು ವಿಶಿಷ್ಟ ಪ್ರಕಾರದ ನಾಯಿ ತಳಿ ಮಲೇಷಿಯಾದಲ್ಲಿ ಮಾತ್ರ ಲಭ್ಯವಿದ್ದುದರಿಂದ  ನಾಯಿ ಪ್ರೇಮಿ, ಸಾಕಣೆಗಾರ, ಪೊಲೀಸು, ಮಿಲಿಟರಿಗೆ ಅಂತಹ ತಳಿಯ ನಾಯಿಗಳನ್ನು ಒದಗಿಸುವ ದಂಧೆಯಲ್ಲಿ ತೊಡಗಿದ್ದ ಕುರಿಯಾಚ್ಚನ್, ತನ್ನ ಗೆಳೆಯ ಮೋಹನ್ ಪೋಥನ್ ಜತೆ ಮಲೇಷಿಯಾಕ್ಕೆ ತೆರಳಿರುತ್ತಾನೆ. ಅಲ್ಲಿ  ಆತ ನಾಯಿಗಳ ವ್ಯಾಪಾರಿ ತರಬೇತುದಾರ ಯೋಶಿಹಾನ ಮನೆಯಲ್ಲಿ ತಂಗಿರುತ್ತಾರೆ. ಮಧ್ಯವಯಸ್ಕ ಯೋಶಿಹನ ಎಳೆಯ ಹೆಂಡತಿ ಸೋಯಿ ಅಥಿತಿಗಳನ್ನು ಸ್ವಾಗತಿಸುತ್ತಾಳೆ.  

ಸುತ್ತಲೂ ನೀರಿನಿಂದ ಆವೃತ್ತವಾದ ಜನರಿಲ್ಲದ ಏಕಾಂತ ನಡುಗಡ್ಡೆಯೊಂದರಲ್ಲಿ ಯೋಶಿಹ- ಸೋಯಿಯ ಮನೆ. ಅಲ್ಲಿ ಯೋಶಿಹ ಆ ವಿಶಿಷ್ಟ ತಳಿಯ ನಾಯಿಗಳನ್ನು ತರಬೇತಿ ನೀಡಿ ಸಾಕಿಕೊಂಡಿರುತ್ತಾನೆ. ಅವನ್ನು ಸಾಕಣೆದಾರರಿಗೆ ಮಾರುವುದು ಅವನ ವೃತ್ತಿ. ಸದಾ ವ್ಯಾಪಾರ ಕೆಲಸವೆಂದು ಹೊರಗಿರುವ ಯೋಶಿಯ ಎಳೆ ಹೆಂಡತಿಯ ರಕ್ಷಣೆಗೆ ಹಾಗೂ ಕಾವಲಿಗೆಂದು ನಾಯಿಗಳನ್ನು ಪಳಗಿಸಿರುತ್ತಾನೆ. ಸದಾ ನಾಯಿಗಳ ಕಾವಲಿನಲ್ಲಿ ಸೋಯಿ ಅಲ್ಲಿ ನಗರದಿಂದ ದೂರದ ಆ ನಡುಗಡ್ಡೆಯಲ್ಲಿ ವಾಸಿಸುತ್ತಿರುತ್ತಾಳೆ. 

ಮೊದಮೊದಲು ಇದು ಅಸಹಜ ಎನಿಸುವುದಿಲ್ಲ. ಜಪಾನ್ ಯುದ್ಧದ ದಾಳಿ ನಡೆಸಿರುತ್ತಿರುವ ಕಾಲ. ಜನ ಮಲೇಷಿಯಾದಲ್ಲೂ ಸಾಯುತ್ತಿರುತ್ತಾರೆ. ಈ ಸಂದರ್ಭವನ್ನು ಬಳಸಿಕೊಂಡು ಕುರಿಯಾಚ್ಚನ್ ಯೋಶಿಯನನ್ನು ಜೈಲು ಸೇರುವಂತೆ ಮಾಡಿ ವಾಪಸ್ ಯೋಶಿಹ ಮನೆ ಕಡೆ ಬರುತ್ತಾರೆ. ನಾಯಿಗಳು ಅವರನ್ನು ಮನೆಯ ಕಡೆ ಬರದಂತೆ ಬೊಗಳತೊಡಗುತ್ತವೆ. ಮನುಷ್ಯನ ಒಳಗೇನಿದೆ ಎಂಬುದು ಮನುಷ್ಯನಿಗೆ ಅರ್ಥವಾಗುವುದಿಲ್ಲ, ಆದರೆ ಪ್ರಾಣಿಗಳಿಗೆ ಗೊತ್ತಾಗಿಬಿಡುತ್ತದೆ. ಕುರಿಯಾಚ್ಚನ್‌ನನ್ನು ಮನೆಯ ಹತ್ತಿರಕ್ಕೂ ಸೇರಿಸುವುದಿಲ್ಲ ನಾಯಿಗಳು. ಸೋಯಿ ಕೂಡ ಮನೆಯಿಂದ ಹೊರಗೆ ಕಾಲಿಡದಂತೆ  ಬೊಗಳಿ ಕಚ್ಚುತ್ತವೆ. ಪೋಥನ್ ಹೊರಡು ಎಂದರೂ ಕುರಿಯಾಚ್ಚನ್ ಅಲ್ಲಿಂದ ಕದಲುವುದಿಲ್ಲ. “ಅಂತಹ ಸಮಯದಲ್ಲಿ ಸೋಯಿಯನ್ನು ಬಿಟ್ಟುಹೋಗಲಾರೆ’ ಎನ್ನುತ್ತಾನೆ. ನಾಯಿಗಳು ಒಂದು ಹೆಜ್ಜೆ ಮುಂದೆ ಬರಲೂ ಬಿಡುತ್ತಿದ್ದಿಲ್ಲ. ಸುರಿಯುವ ಮಳೆಯಲ್ಲಿ ತಿಂಗಳುಗಳ ಕಾಲ ತಾಳ್ಮೆಯಿಂದ ಕಾದಿದ್ದು, ಕೊನೆಗೆ ಕುರಿಯಾಚ್ಚನ್ ಅತಿಯಾಗಿ ಪ್ರೀತಿಸುವ ಯೋಶಿಯ ನಾಯಿಗಳನ್ನು ಗುಂಡು ಹೊಡೆದು ಸಾಯಿಸಬೇಕಾಗುತ್ತದೆ ಸೋಯಿಯನ್ನು ‘ರಕ್ಷಿಸಲು’.  

ಅನಾಥಳಾದ ಸೋಯಿ ನಾಯಿಗಳೊಂದಿಗೆ ಕೇರಳ ತಲುಪುತ್ತಾಳೆ. ಕುರಿಯಾಚ್ಚನ್ ಬಹಳ ಚಾಲಾಕಿತನದಿಂದ ಅವಳ ಮನ ಗೆಲ್ಲುತ್ತಾನೆ. ಅವಳ ಗಂಡನೇ ಅವಳನ್ನು ಕಾಯುವ, ಹೊರಗೆ ಕಾಲಿಡದಂತೆ, ಹೊರಗಿನವರು ಇತ್ತ ಬರದಂತೆ ಕಾವಲು ಕಾಯುವ ತರಬೇತಿಯನ್ನು ನಾಯಿಗಳಿಗೆ ಕೊಟ್ಟಿದ್ದನೆಂಬ ರಹಸ್ಯವನ್ನು ಸೋಯಿಗೆ ಮನದಟ್ಟು ಮಾಡಿಸಿ ಅವಳಲ್ಲಿ ತನ್ನ ಬಗ್ಗೆ ಅಭಿಮಾನ ಹುಟ್ಟುವಂತೆ ಮಾಡುತ್ತಾನೆ.   

ಮಲೇಷಿಯಾದಲ್ಲಿ ನಡೆದ ಈ ಘಟನೆ ತಕ್ಷಣ ನಮಗೆ ಕೊಡುವ ಚಿತ್ರಣವೆಂದರೆ —“ ಸಂಕಟದಲ್ಲಿರುವ ಒಂಟಿ ಮಹಿಳೆಯನ್ನು ರಕ್ಷಿಸಲು ದಿನಗಟ್ಟಲೆ ಕಾಯುವ ವ್ಯಕ್ತಿ, ಮತ್ತು ತಾನು ಪ್ರೀತಿಸುವ ನಾಯಿಗಳನ್ನು ಕೊಲ್ಲುವಾಗ ಪಶ್ಚಾತ್ತಾಪಪಡುವ ವ್ಯಕ್ತಿಯಲ್ಲಿ ತಾನು ಯೋಶಿಯಂತೆ “ಆದರ್ಶ ಮಾಲಿಕ”. ನಾಯಿಗಳ ಮಾಸ್ಟರ್, ಯೋಸಿಯಾ ನಾಯಿಗಳನ್ನು ತನ್ನದಾಗಿಸಿಕೊಳ್ಳುವ ಹಠ, ಯೋಶಿ ತರಬೇತಿಗೊಳಿಸಿದ್ದ ವಿದ್ಯೆಯನ್ನು ತನ್ನದಾಗಿಸಿಕೊಳ್ಳುವ ಹಠ. ಅವೆಲ್ಲ ಒಬ್ಬ ಪುರುಷಹಂಕಾರದ ಭಾಗವಾಗಿ ನೋಡಿದಾಗ ಕಾಣುವ ನೋಟವೇ ಭಿನ್ನವಾಗುತ್ತದೆ.

ಇದರ ಜೊತೆಗೆ, ಈ ಘಟನೆಗಳು ಇತರ ಪಾತ್ರಗಳನ್ನೂ ಬಿಚ್ಚಿಡುತ್ತವೆ; ಅವರ ಹೊರಗಿನ ಮುಖವಾಡಗಳ ಹಿಂದಿನ ಸತ್ಯವನ್ನು ನಾವು ಕಾಣುತ್ತೇವೆ.

ಮೋಹನ್ ಪೋಥನ್ ಕುರಿಯಾಚ್ಚನ್ ನನ್ನು ಹುಡುಕಿಕೊಂಡು ಬಂದಾಗ ಸೋಯಿಗೆ ಯೋಶಿಯ ಬಗ್ಗೆ ಕುರಿಯಾಚ್ಚನ್ ತಾನು ರೂಪಿಸಿದ ಷಡ್ಯಂತ್ರದ ಬಗ್ಗೆ ರಹಸ್ಯವನ್ನು ಬಿಚ್ಚಿಟ್ಟ ಬಳಿಕವೇ ಕುರಿಯಚ್ಚನ್ ಕುರಿತ ಕಟು ಸತ್ಯ ಸೋಯಿಗೆ ಗೊತ್ತಾಗುತ್ತದೆ. 

ನಂತರ ಮೋಹನ್ ಪೋಥನ್ ನ ಸಂಶಯಾಸ್ಪದ ಸಾವು ಮತ್ತು ಕುರಿಯಾಚ್ಚನ್‌ನ ನಿಗೂಢ ಕಣ್ಮರೆಗೆ ಹೊಸ ಹೊಳಹು ಸಿಗುತ್ತದೆ. “ಕೆಲವೊಮ್ಮೆ ರಕ್ಷಣೆ ಮತ್ತು ನಿರ್ಬಂಧ ಎರಡೂ ಒಂದೇ ತರಹ ಕಾಣಿಸುತ್ತದೆ” ಎಂಬ ಮಾತಿನ ಹೊಳಹು ನಮ್ಮನ್ನು ಮೂಕರನ್ನಾಗಿಸುತ್ತದೆ. ಆಕೆಗೆ ಬ್ಲ್ಯಾಕ್ ಮ್ಯಾಜಿಕ್ ಕೂಡ ಬರುತ್ತದೆಂಬುದನ್ನು ಪಿಯೂಸ್ ಮಾತಿನಲ್ಲಿ ಸೂಚನೆ ಸಿಕ್ಕಿರುತ್ತದೆ. ವರುಷ ವರುಷಗಳಿಂದ ನಾಯಿಗಳಿಗಳಿಗೆ ಊಟ ಹಾಕುವ ಮ್ಲಾಥಿ ಚೆಟ್ಟಥಿ (ಸೋಯಿ) ನಾಯಿಗಳನ್ನು ಪಳಗಿಸುವ ಕಲೆಯನ್ನು ಸಿದ್ಧಿಸಿಕೊಂಡಿರುತ್ತಾಳೆ. ಆದರೆ ಆಕೆಗೆ ತನ್ನ ವಿದ್ಯೆಯನ್ನು, ಸಿದ್ಧಿಯನ್ನು ಬಳಸಿಕೊಳ್ಳುವ ಪ್ರಸಂಗವಾಗಲಿ ಯೋಚನೆಯಾಗಲಿ ಬಂದಿರುವುದಿಲ್ಲ. ಈ ಚಲನಚಿತ್ರದಲ್ಲಿ ಗಂಡು ಪಾತ್ರಗಳು ಮತ್ತೆ ಮತ್ತೆ ಹೇಳುವ ಇನ್ನೊಂದು ಮಾತಿದೆ- If she is in heat, she must be caged. Be it a woman or a Dog. (ಮಹಿಳೆಯಾಗಿರಲಿ, ಇಲ್ಲಾ ನಾಯಿಯಾಗಿರಲಿ ಆಕೆ ಬೆದೆಗೆ ಬಂದಿದ್ದರೆ ಅವಳನ್ನು ಪಂಜರದಲ್ಲಿ ಕೂಡಿ ಇಡಬೇಕು). ಅಬ್ಬಾ ಪುರುಷವರ್ಗವೇ!

ಕಥಾನಕ ಜಟಿಲವೆನಿಸಿದರೂ ಆಕರ್ಷಕವಾಗಿದೆ. ಕುರಿಯಾಚ್ಚನ್ ಬಗ್ಗೆ ನಮ್ಮ ಅಭಿಪ್ರಾಯವೂ ಒಂದೇ ರೀತಿ ಉಳಿಯದೆ, ಒಮ್ಮೆ ನೈತಿಕತೆಯುಳ್ಳ ಸ್ವತಂತ್ರ ಆತ್ಮದಂತೆ, ಮತ್ತೊಮ್ಮೆ ಅಹಂಕಾರಭರಿತ ಕಾನೂನುಬಾಹಿರನಂತೆ ಬದಲಾಗುತ್ತಿರುತ್ತದೆ.

ಉದಾಹರಣೆಗೆ, ಚಿತ್ರದ ಅಂತ್ಯದತ್ತ ಸೋಯಿ ಹೇಳುವ ಮಾತು ಗಮನಾರ್ಹ: ಕುರಿಯಾಚ್ಚನ್ ಎಂದೂ ತಾನು ರೂಪಿಸಬಹುದಾದ “ಆದರ್ಶ ಜಾತಿಯ” ನಾಯಿಯನ್ನು ಹೊಂದಬೇಕೆಂದಿದ್ದ. ಅವನು ತನ್ನನ್ನು ಒಬ್ಬ ಮಾಸ್ಟರ್ ಡಾಗ್ ಟ್ರೈನರ್ ಎಂದುಕೊಂಡಿದ್ದ. ಆದರೆ ಅವನ ಅತ್ಯಂತ ನಿಷ್ಠಾವಂತ “ನಾಯಿ” ಅಂತಿಮವಾಗಿ ಪೀಯೂಸ್ / ಮಣಿಕಂಡನ್ ಆಗಿರುವುದು ವ್ಯಂಗ್ಯಾತ್ಮಕ ಸತ್ಯ. ಮಣಿಕಂಡನ್, ಕುರಿಯಾಚ್ಚನ್ ನ ಜೀವನಕ್ಕೆ ಹೇಗೆ ಬಂದನು ಎಂಬುದರ ಕುರಿತು ಕೆಲವು ಸುಳಿವುಗಳನ್ನು ಚಿತ್ರ ನೀಡುತ್ತದೆ — ಅವನ ನಕ್ಸಲೈಟ್ ಪೋಷಕರು ಅಂತಹ ಒಂದು ಸಾಧ್ಯತೆಯ ಕೊಂಡಿಯಾಗಿರಬಹುದು, ಏಕೆಂದರೆ ಕುರಿಯಾಚ್ಚನ್ ಪೊಲೀಸ್ ವಿಚಾರಣಾಧಿಕಾರಿಯಾಗಿದ್ದವನು. ಹೋರಾಟದ ದೃಶ್ಯಗಳಲ್ಲಿ ಮಣಿಕಂಡನ್ ನಾಯಿಯಂತೆ ವರ್ತಿಸುವುದು ವಿಶೇಷ: ಮಾಲೀಕ ಇಲ್ಲದಿದ್ದರೂ ಅವನ ಆದೇಶಗಳನ್ನು ಕುರುಡಾಗಿ ಪಾಲಿಸುವ ನಡವಳಿಕೆ.

ಮ್ಲಾಥಿ / ಸೋಯಿ ಎನ್ನುವ ಪಾತ್ರ, ಯಾವುದೇ ದೇಶವಿರಲಿ ಹೆಣ್ಣು “ರಕ್ಷಣೆ” ಎಂಬ ಸೋಗಿನ ಮುಖವಾಡದೊಳಗೆ ನಿರ್ಬಂಧಗಳ ಸಂಕೋಲೆಗಳಲ್ಲಿ ಹೇಗೆ ಸಿಲುಕಿಕೊಂಡಿರುತ್ತಾಳೆ ಎಂಬುದನ್ನು ಎಕೋ ಚಲನಚಿತ್ರ ಸೂಕ್ಷ್ಮವಾಗಿ ಬಿಚ್ಚಿಡುತ್ತದೆ. ಮೊದಲು ಯೋಸಿಹಾನ ಬಂಧನದಲ್ಲಿ ನಂತರ ಕುರಿಯಾಚ್ಚನ್ ಬಂಧನದಲ್ಲಿ. ಆ ಬಂಧನವೂ ಆಕೆಗೆ ಬಂಧನವೆಂದು ತಿಳಿದಿರಲಿಲ್ಲ ಮೊದಮೊದಲು. ಪೋಥನ್ ನಿಜವಾದ ಉದ್ದೇಶವನ್ನು ಬಿಚ್ಚಿಡುವವರೆಗೂ.

ಕಾಳಜಿಯ ಹೆಸರಿನಲ್ಲಿ, ರಕ್ಷಣೆಯ ನೆಪದಲ್ಲಿ, ಸಂಬಂಧಗಳ ಒಳಗೇ ನಿರ್ಬಂಧಿಸುವವರಿರುತ್ತಾರೆ. ಮಹಿಳೆಯರಿಗೆ ಅಪಾಯ ಹೊರಗಿನಿಂದ ಬರುತ್ತದೆ ಎಂಬ ನಂಬಿಕೆಯೇ ಸುಳ್ಳು. ಮನೆಯೊಳಗಿನ ಪರಿಚಿತ ಮುಖಗಳೊಳಗಿನ ಅಪಾಯವನ್ನು ‘ಎಕೋ’ ಎದುರು ಇಡುತ್ತದೆ. ಚಿತ್ರದಲ್ಲಿನ ಪುರುಷ  ಪಾತ್ರಗಳು “ಅಸಹಾಯಕ ಹೆಣ್ಣಿನ ರಕ್ಷಕ”ರಾಗಿ ಕಾಣಿಸಿಕೊಳ್ಳುತ್ತವೆ. ಆದರೆ ರಕ್ಷಣೆಯ ಹೆಸರಿನಲ್ಲಿ ಮಹಿಳೆಯ ಸ್ವಾತಂತ್ರ್ಯವನ್ನು ನಿಯಂತ್ರಿಸುವ ಅದೇ ಪೌರಾಣಿಕ ಪ್ರಾಚೀನ ಸ್ತ್ರೀವಿರೋಧಿ- ಸ್ತ್ರೀ ದ್ವೇಷಿ ಷಡ್ಯಂತ್ರವಿದು. ಪಿತೃತ್ವದ ಅತ್ಯಂತ ಅಪಾಯಕಾರಿ ರೂಪ — ಹೊಡೆಯದೇ, ಬಡಿಯದೇ, ಹಿಂಸಿಸದೇ “ನಿನಗಾಗಿ, ನಿನ್ನ ಪ್ರೀತಿಗಾಗಿ ” ಎಂದು ಮೋಹಕ ಮಾಯಾಜಾಲದಲ್ಲಿ ಮೃದು ಭಾಷೆಯಲ್ಲೇ ನಿರ್ಬಂಧಿಸುವ ತಣ್ಣನೆಯ ಕ್ರೌರ್ಯ.   

ಹೆಚ್ಚಾಗಿ ಮಹಿಳೆಯರು ತಮ್ಮ ಮೇಲಿನ  ಹಿಂಸೆಯನ್ನು ಮೌನವಾಗಿಯೇ ಸಹಿಸಿಕೊಳ್ಳುತ್ತಾರೆ. ಆದರೆ ಮ್ಲಾಥಿಯ ಮೌನ, ತಣ್ಣನೆಯ ನೋಟ ಅದು ಸಹನೆಯ ಮೌನವಲ್ಲ. ಪ್ರತೀಕಾರದ ಮೌನ. ಯಾವುದೋ ಗವಿಯಲ್ಲಿ ಅಡಗಿ ಕುಳಿತಿರುವ ಕುರಿಯಾಚನ್ ಅವನ ನಾಯಿಗಳು ಈಗ  ಮ್ಲಾಥಿಯ ಆಜ್ಞೆಯ ಬಂದಿಗಳು. ತನ್ನ ಮಾಲೀಕ ಎಲ್ಲಿರುವನೆಂದು ಗೊತ್ತಿದ್ದ ಪಿಯೂಸನಿಗೂ ಆತನ ಬಿಡುಗಡೆಯ ಹಾದಿ ಅಜ್ಞಾತ! ಈ ನಾಯಿಗಳ ನಿಜವಾದ “ಮಾಸ್ಟರ್” ಮ್ಲಾಥಿ / ಸೋಯಿ ಎಂಬುದು ಗೊತ್ತಾಗುತ್ತದೆ. ನಾಯಿಗಳು ಅವಳದೇ ಆಜ್ಞಾನುವರ್ತಿಗಳು. ಒಬ್ಬನ ಬಂಧನದ ನಂತರ ಇನ್ನೊಬ್ಬನ ಪಂಜರದಲ್ಲಿ ಕಾಲಕಳೆದ ಮ್ಲಾಥಿ/ ಸೋಯಿ ಸೇಡು ತೀರಿಸಿಕೊಂಡ ಬಗೆಯೇ ಇಡೀ ಚಿತ್ರದ ಕ್ಲ್ಯೈಮ್ಯಾಕ್ಸ್ ದೃಶ್ಯ. ಕುರಿಯಾಚ್ಚನ್‌ ಈಗ ಅವಳ ಬಂಧಿ. ಅವಳ ಆದೇಶ ಪಾಲಿಸುವ ನಾಯಿಗಳಿಂದ ಸುತ್ತುವರಿದಂತೆ, ಕಾಡಿನ ಯಾವುದೋ ಅಡಗುಮೂಲೆಯಲ್ಲಿ ನಿರ್ಬಂಧಿತ ಜೀವನ ನಡೆಸುತ್ತಿದ್ದಾನೆ ಎಂಬ ಸೂಚನೆ ಸಿಗುತ್ತದೆ. ಇದನ್ನು ಸೂಚಿಸುವ ಸೂಕ್ಷ್ಮ ಫ್ರೇಮ್‌ಗಳು ಅತ್ಯಂತ ಗಮನಾರ್ಹ — ಅನ್ನ ಅಂಟಿದ ಬಿದಿರು, ದುರ್ಬೀನಿನ ಮೂಲಕ ನೋಡುತ್ತಿರುವ ಸೋಯಿ ಮತ್ತು ಪೀಯೂಸ್ /ಮಣಿಕಂಡನ್ ಸುತ್ತ ನಾಯಿಗಳು ನಿಂತಿರುವ ದೃಶ್ಯಗಳು. ಇಲ್ಲಿ ಮಣಿಕಂಡನ್ ಸಿಲುಕಿರುವ ಅತ್ತ ದರಿ ಇತ್ತ ಪುಲಿ (Catch-22) ಪರಿಸ್ಥಿತಿಯೂ ಗಮನ ಸೆಳೆಯುತ್ತದೆ: ತನ್ನ ಮಾಲೀಕ ಎಲ್ಲಿದ್ದಾನೆ ಎಂಬುದನ್ನು ತಿಳಿದಿರುವ ಏಕೈಕ ವ್ಯಕ್ತಿ ಅವನ ಎದುರಲ್ಲೇ ಇದ್ದರೂ, ನಾಯಿಗಳ ಕಾರಣದಿಂದ ಅವಳ ಕೂದಲನ್ನೂ ಕೊಂಕಿಸಲಾಗದ ಪರಿಸ್ಥಿತಿ. ಆ ದೃಶ್ಯವೇ  ಮಾರ್ಮಿಕವಾಗಿದೆ. ಅತ್ಯಂತ ಪರಿಣಾಮಕಾರಿ.   

ಇದನ್ನೂ ಓದಿ eko | ಮುಗಿದ ನಂತರವೂ ಕಾಡುವ-ಕೆಣಕುವ ಚಿತ್ರ

ಛಾಯಾಗ್ರಹಣ ಅತ್ಯುತ್ತಮವಾಗಿದೆ. ಪರ್ವತಗಳ ವಿಶಾಲ ದೃಶ್ಯಗಳು, ಮಂಜು ಮುಸುಕಿದ ಬೆಟ್ಟಗಳು, ಹರಿಯುವ ತೊರೆ, ಸುತ್ತಲಿನ ಪ್ರಕೃತಿಯಂತೂ ರಮಣೀಯ. ಕತೆ, ಚಿತ್ರಕಥೆ  ಮತ್ತು ಸಂಭಾಷಣೆ ರಚಿಸಿರುವ ಬಾಹುಲ್ ರಮೇಶ್, ಸ್ವತಃ ಸಿನಿಮಾಟೋಗ್ರಾಫರ್ ಕೂಡ ಆಗಿದ್ದು ತಮ್ಮೆಲ್ಲಾ ಕಲಾತ್ಮಕತೆಯನ್ನು ಈ ಚಿತ್ರಕ್ಕೆ ತುಂಬಿದ್ದಾರೆ. ಅದಕ್ಕೆ ಮುಜೀಬ್ ಮಜೀದ್ರ ಸೂರೆಗೊಳ್ಳುವ ಸಂಗೀತ ಸಂಯೋಜನೆ ಚಿತ್ರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತವೆ. ಸಂದೀಪ್ ಪ್ರದೀಪ್, ನರೇನ್, ಸೌರಭ್ ಸಚ್‌ದೇವ್, ಬಿಯಾನಾ ಮೊಮಿನ್, ಬಿನು ಪಪ್ಪು ಪಾತ್ರಗಳಿಗೆ ಜೀವ ತುಂಬಿದ್ದಾರೆ. ನಿರ್ದೇಶಕ ದಿನಜಿತ್ ಅಯ್ಯಥನ್- ಪಾತ್ರಗಳನ್ನು ಸರಿಯಾದ ರೀತಿಯಲ್ಲಿ ದುಡಿಸಿಕೊಂಡಿದ್ದಾರೆ. ಹಿಂಸೆ, ರಕ್ತಪಾತ, ಕ್ರೌರ್ಯಗಳಿಲ್ಲದ; ಸಸ್ಪೆನ್ಸ್ ಥ್ರಿಲ್ಲರ್ ನ ವಿಶಿಷ್ಟವಾದ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ.

ಇದನ್ನೂ ಓದಿ ʼಹೋಂಬೌಂಡ್‌ʼ – ಮೌನವಾಗಿ ಮಣ್ಣುಗೂಡಿದ ಕನಸುಗಳು!

‘Ekoʼ ಎಂಬುದು echo ದ ಅಪಭ್ರಂಶವೋ ಗೊತ್ತಿಲ್ಲ. ಆದರೆ ಅದು ನಾವು ಈಗಾಗಲೇ ಬದುಕುತ್ತಿರುವ ಸಮಾಜದ ಪ್ರತಿಬಿಂಬ. ಶಬ್ದವಿಲ್ಲದ, ನಿಧಾನವಾದ, ಆದರೆ ಆಳವಾಗಿ ಗಾಯ ಮಾಡುವ ಪಿತೃತ್ವದ ಪ್ರತಿಧ್ವನಿಯನ್ನು ಈ ಚಿತ್ರ  ಪ್ರೇಕ್ಷಕರ ಮುಂದಿಡುತ್ತದೆ.

WhatsApp Image 2025 11 17 at 5.18.15 PM
ರೇಣುಕಾ ನಿಡಗುಂದಿ
+ posts

ಲೇಖಕಿ, ದೆಹಲಿ ನಿವಾಸಿ

ಪೋಸ್ಟ್ ಹಂಚಿಕೊಳ್ಳಿ:

ರೇಣುಕಾ ನಿಡಗುಂದಿ
ರೇಣುಕಾ ನಿಡಗುಂದಿ
ಲೇಖಕಿ, ದೆಹಲಿ ನಿವಾಸಿ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...