ನಟ ಮನೋಜ್ ಬಾಜಪೇಯಿ ಅಭಿನಯದ ಮುಂಬರುವ ‘ಘೂಸ್ ಖೋರ್ ಪಂಡತ್’ ಚಿತ್ರದ ಶೀರ್ಷಿಕೆ ವಿವಾದಕ್ಕೆ ಕಾರಣವಾಗಿದ್ದು, ಉತ್ತರ ಪ್ರದೇಶ ಸರ್ಕಾರ ಚಿತ್ರದ ನಿರ್ಮಾಪಕರ ವಿರುದ್ಧ ಎಫ್‌ಐಆರ್ ದಾಖಲಿಸಿದೆ. ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವ ಹಾಗೂ ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡುವ ಉದ್ದೇಶದಿಂದ ಶೀರ್ಷಿಕೆ ಇಡಲಾಗಿದೆ ಎಂದು ಆರೋಪಿಸಲಾಗಿದೆ.
ಚಿತ್ರದ ಟೀಸರ್ ಅನ್ನು ಫೆ. 3, 2026ರಂದು ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಗಿತ್ತು. ಮೊದಲ ನೋಟಕ್ಕೆ ಮೆಚ್ಚುಗೆ ವ್ಯಕ್ತವಾದರೂ, ಶೀರ್ಷಿಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಗುರಿಯಾಯಿತು. ಮಂಗಳವಾರ 2026ನೇ ಸಾಲಿನ ಹೊಸ ಚಿತ್ರಗಳ ಪಟ್ಟಿಯನ್ನು ನೆಟ್‌ಫ್ಲಿಕ್ಸ್ ಪ್ರಕಟಿಸಿತ್ತು. 26ಕ್ಕೂ ಹೆಚ್ಚು ಶೀರ್ಷಿಕೆಗಳಲ್ಲಿ ‘ಘೂಸ್ ಖೋರ್ ಪಂಡತ್’ ಹೆಸರೂ ಒಳಗೊಂಡಿತ್ತು.
“ನಮ್ಮ ಹಿಂದಿನ ಚಿತ್ರಗಳಂತೆ ಈ ಚಿತ್ರವೂ ಪ್ರಾಮಾಣಿಕ ಉದ್ದೇಶದಿಂದ ಹಾಗೂ ಪ್ರೇಕ್ಷಕರನ್ನು ರಂಜಿಸುವ ದೃಷ್ಟಿಯಿಂದ ನಿರ್ಮಿಸಲಾಗಿದೆ. ಚಿತ್ರದ ಶೀರ್ಷಿಕೆ ಕೆಲವರಿಗೆ ನೋವುಂಟುಮಾಡಿರುವುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಆ ಭಾವನೆಗಳನ್ನು ಗೌರವಿಸುತ್ತೇವೆ. ಈ ಹಿನ್ನೆಲೆ ಸದ್ಯಕ್ಕೆ ಚಿತ್ರದ ಎಲ್ಲ ಪ್ರಚಾರ ಕಂಟೆಂಟ್‌ಗಳನ್ನು ಹಿಂಪಡೆಯಲು ನಿರ್ಧರಿಸಿದ್ದೇವೆ. ಭಾಗಶಃ ದೃಶ್ಯಗಳ ಆಧಾರದ ಮೇಲೆ ಚಿತ್ರವನ್ನು ನಿರ್ಣಯಿಸದೇ, ಸಂಪೂರ್ಣ ಕಥೆಯ ಪರಿಧಿಯಲ್ಲಿ ನೋಡಬೇಕು” ಎಂದು ವಿವಾದದ ನಡುವೆ ನಿರ್ದೇಶಕರು ಸ್ಪಷ್ಟನೆ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮೊಬೈಲ್ ಮೃತ್ಯು ಮೋಡಿಯಿಂದ ಮಕ್ಕಳನ್ನು ರಕ್ಷಿಸುವವರಾರು?
ಪೊಲೀಸರ ಹೇಳಿಕೆಯ ಪ್ರಕಾರ, ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಟ್ರೇಲರ್ ಗೆ ವ್ಯಾಪಕ ಆಕ್ಷೇಪಣೆ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ. ಜಾತಿ ಗುರುತಿಗೆ ಅವಮಾನ ಹಾಗೂ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತಂದ ಆರೋಪದಡಿ ಒಟಿಟಿ ವೇದಿಕೆ ಮತ್ತು ಚಿತ್ರದ ನಿರ್ಮಾಪಕರ ವಿರುದ್ಧ ಲಖನೌದಲ್ಲಿ ಎಫ್‌ಐಆರ್ ದಾಖಲಾಗಿದೆ.
ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ಹಜರತ್‌ಗಂಜ್ ಠಾಣೆ ಪೊಲೀಸರು ಒಟಿಟಿ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಚಿತ್ರದ ಪ್ರಚಾರ-ಪ್ರಸಾರ ನಡೆದ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡಿದ್ದಾರೆ. ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡಲಾಗಿದೆ ಎಂಬ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೊಂದೆಡೆ, ಚಿತ್ರದ ನಿರ್ಮಾಪಕ ನೀರಜ್ ಪಾಂಡೆ ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮೆಯಾಚಿಸಿದ್ದಾರೆ. ಟೀಸರ್ ತೆಗೆದುಹಾಕಿದ ಬಳಿಕ ಅವರು, “ನಮ್ಮ ಚಿತ್ರವು ಕಾಲ್ಪನಿಕ ಪೊಲೀಸ್ ಕಥೆಯ ಸುತ್ತ ಹೆಣೆದಿದೆ. ‘ಪಂಡತ್’ ಎಂಬ ಪದವು ಕಾಲ್ಪನಿಕ ಪಾತ್ರದ ಹೆಸರು ಮಾತ್ರ. ಕಥೆ ವ್ಯಕ್ತಿಯ ಕ್ರಿಯೆಗಳು ಮತ್ತು ಆಯ್ಕೆಗಳ ಮೇಲೆ ಕೇಂದ್ರೀಕೃತವಾಗಿದ್ದು, ಯಾವುದೇ ಜಾತಿ, ಧರ್ಮ ಅಥವಾ ಸಮುದಾಯವನ್ನು ಪ್ರತಿನಿಧಿಸುವುದಿಲ್ಲ. ಚಲನಚಿತ್ರ ನಿರ್ಮಾಪಕರಾಗಿ ಜವಾಬ್ದಾರಿಯುತ ಹಾಗೂ ಕಥನಕ್ಕೆ ಬದ್ಧನಾಗಿದ್ದೇನೆ” ಎಂದು ತಿಳಿಸಿದ್ದಾರೆ.





