ʼನಾನು ಎಣ್ಣೆ ಹಾಗೂ ಉಪ್ಪಿನಕಾಯಿಯ ಬಗ್ಗೆ ಬರೆದಿದ್ದೇನೆʼ. ʼಈ ಹಾಡಿನ ಸಾಹಿತ್ಯದಲ್ಲಿ ಯಾವ ತರಹದ ಅಶ್ಲೀಲತೆಯು ನನಗೆ ಕಂಡಿಲ್ಲʼ ಎಂದು ಸಮರ್ಥಿಸಿಕೊಂಡ ಪ್ರೇಮ್, ತಾವೇ ಬರೆದ ಸಾಲುಗಳನ್ನು ಕಣ್ಣು ತೆರೆದು ನೊಡಲಿಲ್ಲವೋ ಬರೆಯುವಾಗ ಅವರ ಬುದ್ಧಿ ಎಚ್ಚರದಲ್ಲಿ ಇರಲಿಲ್ಲವೋ ಅವರೇ ಉತ್ತರಿಸಲಿ. ʼಕೆಡಿ ದ ಡೆವಿಲ್ʼ ಸಿನಿಮಾದ ಅಶ್ಲೀಲ ಹಾಡು ಎಲ್ಲಡೆ ವಿವಾದ ಹುಟ್ಟುಹಾಕಿದ ಬೆನ್ನಲ್ಲೇ ನಿರ್ದೇಶಕ ಪ್ರೇಮ್ ಮಾಧ್ಯಮದ ಮುಂದೆ ಕ್ಷಮೆ ಕೇಳಿದ್ದಾರೆ. ಧ್ರುವ ಸರ್ಜಾ ನಟನೆಯ ಪ್ರೇಮ್ ನಿರ್ದೇಶನದ ಈ ಸಿನಿಮಾ ಏಪ್ರಿಲ್ 30 ರಂದು ತೆರೆ ಕಾಣಲಿದೆ.
ಪ್ರೇಮ್ ಬೇಡಿದ ಕ್ಷಮೆ, ಕ್ಷಮೆಯ ದಾಟಿಯಲ್ಲೇ ಇತ್ತಾ?
ಚಿತ್ರತಂಡ ʼಸರ್ಸೆ ನಿನ್ನ ಸೆರಗʼ ಹಾಡನ್ನು ಸೋಮವಾರ ಬಿಡುಗಡೆ ಮಾಡಿತ್ತು. ಬಿಡುಗಡೆಯಾದ ಅರ್ಧ ತಾಸಿನಲ್ಲೇ ನೆಟ್ಟಿಗರಿಂದ ಹಿಗ್ಗಾ-ಮುಗ್ಗಾ ಟೀಕೆಗೆ ಗುರಿಯಾದ ಹಾಡನ್ನು ತಕ್ಷಣವೇ ಯೂಟೂಬ್‌ನಿಂದ ಹೈಡ್ ಮಾಡಿದ ಕೆಡಿ ತಂಡ ಅರ್ಧ ಗಂಟೆ ತಡೆದು ಮತ್ತೆ ಅಪ್ಲೋಡ್ ಮಾಡಿತ್ತು.

ಮೂರು ದಿನಗಳ ಕಾಲ ಚಿತ್ರತಂಡ ಯಾವುದೇ ಚಕಾರ ಎತ್ತದೆ ಮೌನವಾಗಿದ್ದು, ಗುರುವಾರ ಸಂಜೆ ಮಾಧ್ಯಮದ ಮುಂದೆ ಕ್ಷಮೆ ಕೇಳಿದ ಪ್ರೇಮ್, ತಮ್ಮಲ್ಲಿ ನೈತಿಕತೆಯ ತುಣುಕು ಉಳಿದಿಲ್ಲ ಎಂಬುದನ್ನು ಸಾಬೀತು ಮಾಡಿದರು.
ಹೊರ ರಾಜ್ಯದ ನರ್ತಕಿಯರನ್ನು ಕರೆದು ಅವರಿಂದ ಇಂತಹ ಅಸಂಬದ್ಧ ಹಾಡಿಗೆ ಹೆಜ್ಜೆ ಹಾಕಿಸಿ ಕರ್ನಾಟಕ ಚಿತ್ರರಂಗದ ಮಾನವನ್ನು, ಹೆಣ್ಣಿನ ಘನತೆಯನ್ನು ಕಳೆದವರು ಖಾಲಿ ಕ್ಷಮೆ ಕೇಳಿದರೆ ಸಾಕೆ? ಸಾವಿರಾರು ಜನರಿಂದ ವೀಕ್ಷಣೆ ಪಡೆದು, ದೇಶದೆಲ್ಲೆಡೆ ಕನ್ನಡ ಸಿನಿಲೋಕದ ಮಾನ ಕಳೆದ ಪ್ರೇಮ್, ಸ್ತ್ರೀಯರ ಆತ್ಮಗೌರವ ಕುರಿತು ಒಂದಿಷ್ಟೂ ಕಾಳಜಿಯಿಲ್ಲದ ಹಾಗೆ ನಡೆದು ಕೊಳ್ಳುತ್ತಾರೆಂದು ಯಾರೂ ಅಂದಾಜಿಸಿರಲಿಲ್ಲ.
ನೊರಾ ಹೇಳಿಕೆಯಂತೆ ಪ್ರೇಮ್ ಹಾಗೂ ಕೆಡಿ ಚಿತ್ರತಂಡ ಕನ್ನಡ ಬಾರದ ಕಲಾವಿದೆಗೆ ಹಾಡಿನ ಸಾಹಿತ್ಯ ಅರ್ಥ ಮಾಡಿಸದೆ ನೃತ್ಯ ಸಂಯೋಜಿಸಿ ಕೊಟ್ಟದ್ದು ನಿಜವೇ ಆಗಿದ್ದರೆ, ಈ ಕೃತ್ಯ ಪ್ರೇಮ್ ಹಾಗೂ ಅವರ ತಂಡ ವ್ಯಕ್ತಿಗೌರವದ ಜೊತೆಗೆ ವೃತ್ತಿಗೌರವಕ್ಕೆ ಮಾಡಿಕೊಂಡ ಬಹುದೊಡ್ಡ ಮೋಸ.
ಇದೇ ಪ್ರೇಮ್ ತಮ್ಮ ಜೋಗಿ ಚಲನಚಿತ್ರದಲ್ಲಿ ತಾಯಿಯ ಕುರಿತು ಬರೆದ ಸಾಲುಗಳು ಪ್ರೇಮ್,ಜೋಗಿ ಪ್ರೇಮ್ ಆಗಲು, ಕನ್ನಡದ ಹೆಸರಾಂತ ನಿರ್ದೇಶಕರ ಪಟ್ಟಿಯಲ್ಲಿ ತಮ್ಮ ಛಾಪು ಮೂಡಿಸಲು ಸಾಧ್ಯವಾಗಿಸಿತು. ʼತಾಯೀನೆ ಎಲ್ಲಾ ಮಿಗಿಲ್ಯಾರು ಇಲ್ಲ ಹಣೆಬರಹ ಬದಲಾದರು..ʼ ಎಂದು ಬರೆದು ಹಾಡಿದ್ದ ಪ್ರೇಮ್‌ರ ಹಣೆಬರಹ ಬದಲಿಸಿದ್ದು ತಮ್ಮ ಕಲಾಭಿವ್ಯಕ್ತಿಯ ಹೊರ ತರುವಾಗ ಹೆಣ್ಣಿನ ಕುರಿತು ಅಂದು ಅವರಿಗಿದ್ದ ಅಪಾರ ವಾತ್ಸಲ್ಯ, ಗೌರವ ಹಾಗೂ ಪ್ರೀತಿ.

ಇಂದು ಅದೇ ವೇದಿಕೆಯನ್ನೇ ಹೆಣ್ಣನ್ನು ಅರೆಬರೆ ಬಟ್ಟೆಯಲ್ಲಿ ತೋರಿಸಿ ತಮ್ಮ ಕಾಮವಾಂಛೆ ತಣಿಸಲು ಇರುವ ಸಾಧನವಾಗಿ ಚಿತ್ರಿಸುವ ಆತ್ಮವಂಚನೆಗೆ ಬಿದ್ದಿದ್ದಾರೆ. ವಂಚಿಸಿದ್ದು ಕೇವಲ ಅವರ ಆತ್ಮವನ್ನು ಮಾತ್ರವಲ್ಲ ಬದಲಿಗೆ ಜೋಗಿ ಪ್ರೇಮ್ ಎಂದು ಕರೆದು ಮನವಪ್ಪಿದ ಲಕ್ಷಾಂತರ ತಾಯಂದಿರ ಮಮತೆ ಅಭಿಮಾನವನ್ನೂ ಸಹ.
ಹಾಡಹಗಲೇ ನಿದ್ರಿಸುತ್ತಾ ಇದೆಯಾ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ?
ಇನ್ನೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತನ್ನ ಮಾನ ಸ್ಥಾನ ಎರಡನ್ನೂ ಮರೆತು ಶಾಶ್ವತ ನಿದ್ರೆಗೆ ಜಾರಿದಂತಿದೆ. ನೈತಿಕತೆಯ ಆಧರಿಸಿ ಮಂಡಳಿ ಕೆಲಸ ಮಾಡುವುದೇ ಆದರೆ ಸ್ತ್ರೀಯರನ್ನು ತಮ್ಮ ಕಾಮಾಭಿಲಾಷೆ ಪೂರೈಸುವ ಮನರಂಜನೆಯ ವಸ್ತುವಾಗಿ ನೋಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಿ. ಪ್ರೇಮ್ ಕ್ಷಮೆ ಕೇಳಿ, ಬಂದಿರುವ ಅಪವಾದದಿಂದ ಪಾರಾದರೆ ಮುಂದೆ ಇಂತಹ ಲಜ್ಜೆಗೇಡಿತನ ಮೆರೆಯುವವರಿಗೆ ಯಾವ ಅಂಜಿಕೆಯೂ ಇರಲಾರದು.





