ಸಾವಿನ ನಂತರ ಮುಕ್ತಿ ಸಿಗದೆ ಅಂತರ್ ಪಿಶಾಚಿಗಳಾಗಿ ಓಡಾಡುವ ಆರು ಪ್ರೇತಾತ್ಮಗಳು 'GST' ಸಿನಿಮಾದ ಕತೆಯಲ್ಲಿವೆ. ಸಾಯಲು ಹೊರಟ ಚಿತ್ರದ ಹೀರೋಗೆ ಈ ಪ್ರೇತಾತ್ಮಗಳು ಮುಖಾಮುಖಿಯಾಗುತ್ತವೆ.
ನಟ ಸೃಜನ್ ಕಿರುತೆರೆ ಕಾಮಿಡಿ ರಿಯಾಲಿಟಿ ಶೋಗಳಲ್ಲಿ ದೊಡ್ಡ ಹೆಸರು ಮಾಡಿದವರು. ‘ಮಜಾ ಟಾಕೀಸ್’ ಶೋ ಯಶಸ್ಸಿನ ನಂತರ ಅವರು ‘ಟಾಕಿಂಗ್ ಸ್ಟಾರ್’ ಎಂದೇ ಕರೆಸಿಕೊಂಡರು. ಕಿರುತೆರೆಯಿಂದ ಬಿಡುವು ಮಾಡಿಕೊಂಡು ಆಗಾಗ ಬೆಳ್ಳಿತೆರೆಯಲ್ಲೂ ಕಾಣಿಸಿಕೊಳ್ಳುತ್ತಿದ್ದರು. ಆದರೆ ಸಿನಿಮಾದಲ್ಲಿ ಅವರಿಗೆ ದೊಡ್ಡ ಯಶಸ್ಸು ಸಿಕ್ಕಿರಲಿಲ್ಲ. ಇದೀಗ ‘GST’ ಎನ್ನುವ ವಿಶಿಷ್ಟ ಶೀರ್ಷಿಕೆಯ ಸಿನಿಮಾದೊಂದಿಗೆ ಮತ್ತೆ ಹಿರಿತೆರೆಗೆ ಹಿಂದಿರುಗಿದ್ದಾರೆ. ನಟನೆ ಜೊತೆ ಚಿತ್ರದ ಕತೆ ಮತ್ತು ನಿರ್ದೇಶನವೂ ಅವರದ್ದೆ ಎನ್ನುವುದು ವಿಶೇಷ.
ತಮಗೆ ಯಶಸ್ಸು ತಂದುಕೊಟ್ಟ ಕಾಮಿಡಿ ಜಾನರ್‌ನ ಕತೆಯನ್ನೇ ಈ ಸಿನಿಮಾಗೆ ಆಯ್ಕೆ ಮಾಡಿಕೊಂಡಿದ್ದಾರೆ ಸೃಜನ್. ಸಾವಿನ ನಂತರ ಮುಕ್ತಿ ಸಿಗದೆ ಅಂತರ್ ಪಿಶಾಚಿಗಳಾಗಿ ಓಡಾಡುವ ಆರು ಪ್ರೇತಾತ್ಮಗಳು ಕತೆಯಲ್ಲಿ ಹಾಸುಹೊಕ್ಕಾಗಿವೆ. ಚಿತ್ರದ ಹೀರೋ ‘ಲಕ್ಕಿ’ಗೆ luck ಇಲ್ಲ. ಆತನಿಗೆ ಜೀವನದ ಮೇಲೆ ಜಿಗುಪ್ಸೆ. ಸಾಯಲು ಹೊರಟ ಆತನಿಗೆ ಈ ಪ್ರೇತಾತ್ಮಗಳು ಮುಖಾಮುಖಿಯಾಗುತ್ತವೆ. ಚಿತ್ರದ ಹೀರೋಗೇಕೆ ಜೀವನದ ಮೇಲೆ ಜಿಗುಪ್ಸೆ? ಪ್ರೇತಾತ್ಮಗಳಿಗೇಕೆ ಮುಕ್ತಿ ಇಲ್ಲ? ಈ ಎಲ್ಲಾ ಪ್ರಶ್ನೆಗಳಿಗೆ ‘GST’ಯಲ್ಲಿ ಉತ್ತರ ಕಂಡುಕೊಳ್ಳಬಹುದು.
GST ಸಿನಿಮಾದ ಅಡಿಶೀರ್ಷಿಕೆ Ghosts in Trouble! ತಮ್ಮ ಚಿತ್ರವನ್ನು ಹಾರರ್ – ಕಾಮಿಡಿ ಜಾನರ್‌ಗೆ ಸೇರಿಸುತ್ತಾರೆ ನಿರ್ದೇಶಕ ಸೃಜನ್ ಲೋಕೇಶ್. ಇಲ್ಲಿ ಹಾರರ್ ಅಂಶಗಳು ಹೆಚ್ಚೇನೂ ಇಲ್ಲದಿದ್ದರೂ ಕಾಮಿಡಿಗೆ ಭರಪೂರ ಜಾಗವಿದೆ. ಹಾಸ್ಯ ಕಲಾವಿದರ ದೊಡ್ಡ ಬಳಗವೇ ಇಲ್ಲಿದೆ. ಈ ಹಿಂದೆ ತಾವು ನಿರೂಪಿಸುತ್ತಿದ್ದ ಕಾಮಿಡಿ ಶೋಗಳ ಹಾಸ್ಯ ಪ್ರತಿಭೆಗಳಿಗೂ ಸೃಜನ್ ಚಿತ್ರದಲ್ಲಿ ಅವಕಾಶ ಕಲ್ಪಿಸಿದ್ದಾರೆ. ಎಲ್ಲರೂ ಕತೆಯ ಹದವರಿತು ಕ್ಯಾಮೆರಾ ಎದುರಿಸಿದ್ದಾರೆ. ಖಳಪಾತ್ರಗಳಲ್ಲೇ ಕಾಣಿಸಿಕೊಳ್ಳುವ ಶರತ್ ಲೋಹಿತಾಶ್ವ ಮತ್ತು ಶೋಭರಾಜ್ ಇಲ್ಲಿ ಹಾಸ್ಯ ಪಾತ್ರಗಳಲ್ಲಿ ಮೋಡಿಮಾಡುತ್ತಾರೆ.
ಇದನ್ನು ಓದಿದ್ದೀರಾ?: ಅಧಿಕಾರ ಹಂಚಿಕೆ ವಿಚಾರ: ರಾಜಕೀಯ ಅಂದ್ರೆ ಇದೇ ಎಂದ ನಟಿ ರಮ್ಯ
ಮಧ್ಯಂತರದ ನಂತರ ತೆರೆಗೆ ಬರುವ ನಟ ರವಿಶಂಕರ್ ಗೌಡ ಮತ್ತು ಪ್ರೇತಾತ್ಮಗಳಲ್ಲೊಬ್ಬರಾಗಿ ನಟಿಸಿರುವ ತಬಲಾ ನಾಣಿ ಅವರ ಅಭಿನಯಕ್ಕೆ ವಿಶೇಷ ಮೆಚ್ಚುಗೆ ಸಲ್ಲಬೇಕು. ನಾಯಕಿ ರಜನಿ ಭಾರದ್ವಾಜ್ ಗ್ಲಾಮರ್ ಜೊತೆ ನಟನೆಗೂ ಸೈ ಎಂದು ಸಾಬೀತು ಮಾಡಿದ್ದಾರೆ. ಸೃಜನ್ ಅವರಿಗೆ ನಿರ್ದೇಶನದ ಒತ್ತಡ ನಟನೆಗೇನೂ ಅಡ್ಡಿ ಮಾಡಿದಂತಿಲ್ಲ. ಸುಲಲಿತವಾಗಿ ಪಾತ್ರ ನಿರ್ವಹಿಸಿದ್ದಾರೆ. ಬಹುಶಃ Rapper ಚಂದನ್ ಶೆಟ್ಟಿ ಅವರಿಗೆ ಸಂಗೀತದಲ್ಲಿ ಇದು ಮೊದಲ ಹಾರರ್ – ಕಾಮಿಡಿ. ಈ ಜಾನರ್‌ಗೆ ಅಗತ್ಯವಿರುವ ಸಂಗೀತದಿಂದ ಅವರು ಗಮನ ಸೆಳೆಯುತ್ತಾರೆ. ಹತ್ತಾರು ಸೀನ್‌ಗಳಿರುವ ಸ್ಮಶಾನದ ಸೆಟ್‌ಗೆ ಇನ್ನಷ್ಟು ಸಹಜತೆ ಬೇಕಿತ್ತು ಎನಿಸದಿರದು. ಇಂತಹ ಸಣ್ಣ ಪುಟ್ಟ ಓರೆಕೋರೆಗಳ ಮಧ್ಯೆಯೂ ಪ್ರೇಕ್ಷಕರನ್ನು ನಗಿಸುತ್ತಾ ಮನಸ್ಸು ಹಗುರಗೊಳಿಸುವಲ್ಲಿ ‘GST’ ಯಶಸ್ವಿಯಾಗುತ್ತದೆ.
–ಶಶಿಧರ ಚಿತ್ರದುರ್ಗ





