ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸಿರುವ ಯುದ್ಧದ ಭೀತಿ ಕೇವಲ ಜಾಗತಿಕ ರಾಜಕಾರಣವನ್ನಷ್ಟೇ ಅಲ್ಲ, ಭಾರತೀಯ ಚಿತ್ರರಂಗದ ಮೇಲೂ ಪರಿಣಾಮ ಬೀರಿದೆ. ‘ಕೆಜಿಎಫ್’ ಸರಣಿಯ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸಿದ ನಟ ಯಶ್ ಅಭಿನಯದ, ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಚಿತ್ರ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಬಿಡುಗಡೆಯ ದಿನಾಂಕವು ದಿಢೀರನೆ ಮುಂದೂಡಿಕೆಯಾಗಿದೆ. ಈ ಮೊದಲು ಮಾರ್ಚ್ 19ರಂದು ವಿಶ್ವದಾದ್ಯಂತ ಅದ್ದೂರಿಯಾಗಿ ತೆರೆಕಾಣಬೇಕಿದ್ದ ಈ ಚಿತ್ರ, ಇದೀಗ ಜೂನ್ 4 ರಂದು ಪ್ರೇಕ್ಷಕರ ಮುಂದೆ ಬರಲಿದೆ. ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತೀವ್ರಗೊಂಡಿರುವುದರಿಂದ, ಸಾಗರೋತ್ತರ ಮಾರುಕಟ್ಟೆಯ ಹಿತದೃಷ್ಟಿಯಿಂದ ಚಿತ್ರತಂಡ ಈ ಕಠಿಣ ನಿರ್ಧಾರ ಕೈಗೊಂಡಿದೆ.
ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ ಚಿತ್ರವನ್ನು ಕೇವಲ ಭಾರತೀಯ ಪ್ರೇಕ್ಷಕರಿಗಷ್ಟೇ ಅಲ್ಲದೆ ಜಾಗತಿಕ ಮಟ್ಟದಲ್ಲಿ ಬಿಡುಗಡೆ ಮಾಡಲು ಕೆವಿಎನ್ ಪ್ರೊಡಕ್ಷನ್ಸ್ ಯೋಜನೆ ರೂಪಿಸಿತ್ತು. ಚಿತ್ರವನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲಕ್ಕೆ ಚಿತ್ರೀಕರಿಸಲಾಗಿದ್ದು, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಿಗೆ ಡಬ್ ಮಾಡಲಾಗುತ್ತಿದೆ. ಈ ಜಾಗತಿಕ ಬಿಡುಗಡೆಗೆ ಗಲ್ಫ್ ಮತ್ತು ಮಧ್ಯಪ್ರಾಚ್ಯ ದೇಶಗಳು ಪ್ರಮುಖ ವಾಣಿಜ್ಯ ಮಾರುಕಟ್ಟೆಯಾಗಿವೆ. ಸದ್ಯ ಅಲ್ಲಿನ ಅಸ್ಥಿರ ವಾತಾವರಣದಿಂದಾಗಿ ಚಿತ್ರಮಂದಿರಗಳ ಕಾರ್ಯಾಚರಣೆಗೆ ಅಡ್ಡಿಯಾಗುವ ಆತಂಕವಿದ್ದು, ಪ್ರಮುಖ ವಿತರಕ ಸಂಸ್ಥೆಯಾದ ‘ಫಾರ್ಸ್ ಫಿಲ್ಮ್ಸ್’ ಸಲಹೆಯ ಮೇರೆಗೆ ಬಿಡುಗಡೆಯನ್ನು ಜೂನ್‌ಗೆ ಮುಂದೂಡಲಾಗಿದೆ ಎಂದು ಚಿತ್ರತಂಡ ಪ್ರಕಟಣೆಯಲ್ಲಿ ತಿಳಿಸಿದೆ.
ಚಿತ್ರದ ಬಿಡುಗಡೆಯ ಮುಂದೂಡಿಕೆಯ ಜೊತೆಗೆ, ಚಿತ್ರದ ನಿರ್ಮಾಣ ಸಂಸ್ಥೆ ‘ಕೆವಿಎನ್ ಪ್ರೊಡಕ್ಷನ್ಸ್’ ಒಂದಷ್ಟು ವಿವಾದಗಳ ಸುಳಿಯಲ್ಲಿ ಸಿಲುಕಿದೆ. ಬೆಂಗಳೂರಿನ ಪೀಣ್ಯ-ಜಾಲಹಳ್ಳಿ ಬಳಿ ಇರುವ ಎಚ್‌ಎಂಟಿ ವಶದಲ್ಲಿರುವ ಅರಣ್ಯ ಪ್ರದೇಶದಲ್ಲಿ ಚಿತ್ರದ ಬೃಹತ್ ಸೆಟ್ ಹಾಕಲು ನೂರಾರು ಮರಗಳನ್ನು ಅಕ್ರಮವಾಗಿ ಕಡಿಯಲಾಗಿದೆ ಎಂಬ ಗಂಭೀರ ಆರೋಪ ಭಾರೀ ಸದ್ದು ಮಾಡಿತ್ತು. ಈ ಬಗ್ಗೆ ಖುದ್ದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಸ್ಥಳ ಪರಿಶೀಲನೆ ನಡೆಸಿ, ಕಠಿಣ ಕ್ರಮಕ್ಕೆ ಆದೇಶಿಸಿದ್ದರು. ಅರಣ್ಯ ನಾಶದ ಈ ವಿವಾದವು ಚಿತ್ರತಂಡಕ್ಕೆ ಪರಿಸರವಾದಿಗಳಿಂದ ಮತ್ತು ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾಗುವಂತೆ ಮಾಡಿತು. ತರುವಾಯ, ಅನಿವಾರ್ಯವಾಗಿ ಚಿತ್ರೀಕರಣದ ಬಹುಪಾಲು ಕೆಲಸಗಳನ್ನು ಮುಂಬೈಗೆ ಸ್ಥಳಾಂತರಿಸಬೇಕಾಯಿತು.
ಇದನ್ನು ಓದಿದ್ದೀರಾ? ಫಿಫಾ ವಿಶ್ವಕಪ್ 2026 | ಯುದ್ಧಗಳ ಕಾರ್ಮೋಡದ ನಡುವೆ ಫುಟ್‌ಬಾಲ್ ಹಬ್ಬಕ್ಕೆ 100 ದಿನಗಳ ಕ್ಷಣಗಣನೆ
’ಜನನಾಯಕನ್’ ಸಂಕಷ್ಟ, ಯಶ್ ಚಿತ್ರದ ಮೇಲಿನ ಅಪಾರ ನಿರೀಕ್ಷೆ
ಕೆವಿಎನ್ ಪ್ರೊಡಕ್ಷನ್ಸ್‌ಗೆ ಕೇವಲ ‘ಟಾಕ್ಸಿಕ್’ ವಿವಾದವಷ್ಟೇ ಅಲ್ಲ, ತಾವು ನಿರ್ಮಿಸುತ್ತಿರುವ ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ ‘ಜನನಾಯಕನ್’ ಚಿತ್ರವೂ ತಲೆನೋವಾಗಿ ಪರಿಣಮಿಸಿದೆ. ಎಚ್. ವಿನೋದ್ ನಿರ್ದೇಶನದ ಈ ಚಿತ್ರವು ಸೆನ್ಸಾರ್ ಮಂಡಳಿಯ ಪ್ರಮಾಣಪತ್ರ ಪಡೆಯುವಲ್ಲಿ ವಿಳಂಬ ಎದುರಿಸುತ್ತಿದ್ದು, ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ. ಹೀಗೆ ಒಂದೆಡೆ ಸೆನ್ಸಾರ್ ವಿವಾದ, ಮತ್ತೊಂದೆಡೆ ಮರ ಕಡಿದ ಪ್ರಕರಣ ಹಾಗೂ ಈಗ ಟಾಕ್ಸಿಕ್ ಚಿತ್ರದ ಬಿಡುಗಡೆಯ ಮುಂದೂಡಿಕೆ ನಿರ್ಮಾಣ ಸಂಸ್ಥೆಗೆ ದೊಡ್ಡ ಅಗ್ನಿಪರೀಕ್ಷೆ ಎದುರಾಗಿದೆ.
ಮತ್ತೊಂದೆಡೆ, ಯಶ್ ಅವರ ಹಿಂದಿನ ಚಿತ್ರಗಳಾದ ‘ಕೆಜಿಎಫ್ ಚಾಪ್ಟರ್ 1’ ಮತ್ತು ‘ಕೆಜಿಎಫ್ ಚಾಪ್ಟರ್ 2’ ಅಭೂತಪೂರ್ವ ಯಶಸ್ಸು, ‘ಟಾಕ್ಸಿಕ್’ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. 1940-1970ರ ದಶಕದ ಗೋವಾ ಹಿನ್ನೆಲೆಯ ಈ ಗ್ಯಾಂಗ್‌ಸ್ಟರ್ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಯಶ್ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ ಮತ್ತು ರುಕ್ಮಿಣಿ ವಸಂತ್ ತಾರಾಗಣವಿದೆ. ಕೆಜಿಎಫ್ ನಂತರ ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಯಶ್ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಳ್ಳುತ್ತಿರುವ ಕಾರಣ, ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಯುದ್ಧದ ಕಾರ್ಮೋಡ, ಕಾನೂನು ಸಮರ ಹಾಗೂ ಸೆನ್ಸಾರ್ ಸಂಕಷ್ಟಗಳನ್ನೆಲ್ಲಾ ಮೀರಿ, ಯಶ್ ಅವರ ‘ಟಾಕ್ಸಿಕ್’ ಜೂನ್ 4ರಂದು ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಯಾವ ರೀತಿಯ ಮ್ಯಾಜಿಕ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.





