ವರ್ಷಗಳ ಹಿಂದೆ ನಡೆದ ಒಂದು ಘಟನೆಯನ್ನ ಈಗಲೂ ನಮಗೆ ನೆನಪು ಮಾಡಿಕೊಳ್ಳಲು ಇಷ್ಟವಿಲ್ಲ. ಜಗತ್ತೇ ನಿಂತುಹೋಗಿತ್ತು, ರಸ್ತೆಗಳು ಖಾಲಿಯಾಗಿದ್ದವು, ಮನುಷ್ಯ ಮನುಷ್ಯನಿಂದ ದೂರವಾಗಿದ್ದ. ಅದೇ ಸಮಯದಲ್ಲಿ “ಮನೆ” ಅನ್ನೋ ಪದ ಮೊದಲ ಬಾರಿ ನಮ್ಮನ್ನು ಭಯಪಡಿಸಿತು. ಅದೇ ಕೊರೊನಾ ಲಾಕ್‌ಡೌನ್ ಸಮಯ. ಅದು ಕೇವಲ ಒಂದು ರೋಗವಲ್ಲ. ಅದು ಜನರನ್ನ ಹಿಂಡಿ–ಹಿಪ್ಪೆ ಮಾಡಿದ ಕಾಲವಾಗಿತ್ತು. ಕೆಲವರಿಗೆ ಮನೆ ಆಶ್ರಯವಾಗಿತ್ತು. ಇನ್ನೂ ಕೆಲವರಿಗೆ ಅದೇ ಮನೆ ಕಾರಾಗೃಹವಾಗಿತ್ತು. ಕೆಲವರು ಮನೆಯನ್ನೇ ತಲುಪಲಿಲ್ಲ. ಕೆಲವರು ಮನೆ ಇದ್ದರೂ ಮನೆಯವರನ್ನು ಕಳೆದುಕೊಂಡರು. ಅದೇ ಸಮಯದಲ್ಲಿ ಎಲ್ಲರನ್ನೂ ಕಾಡಿದ ಪ್ರಶ್ನೆ, “ನಾವು ಎಲ್ಲಿಗೆ ಸೇರಿದವರು?” “ನಮ್ಮ ಮನೆ ಎಲ್ಲಿ?” ಎಂಬ ಪ್ರಶೆಗಳ ಮಧ್ಯೆಯೇ ಹುಟ್ಟಿದ ಸಿನಿಮಾ – ಹೋಂಬೌಂಡ್ .
‘ಹೋಂಬೌಂಡ್’ – ಒಂದು ಕನಸು, ಒಂದು ಪಯಣ, ಕೊನೆಗೆ ಒಂದು ಪ್ರಶ್ನೆಯಾಗಿ ಉಳಿದ ಅದ್ಭುತ ಮೂವಿ. ಕೆಲವು ಸಿನಿಮಾಗಳ ಉದ್ದೇಶ ಹಣ ಮಾಡುವುದಾಗಿರುವುದಿಲ್ಲ. ಕೆಲವು ಸಿನಿಮಾಗಳು ಹೆಸರು ಮಾಡುವುದಕ್ಕೂ ಬರುವುದಲ್ಲ, ಅವು ಮನುಷ್ಯನ ಒಳಗಿನ ಮೌನವನ್ನು ಮುಟ್ಟಲು ಬರುವ ಸಿನಿಮಾಗಳಾಗಿರುತ್ತವೆ. ನೋವು, ಒಂಟಿತನ, ಸೂರು-ನೆರಳಿನ ಪರಿಕಲ್ಪನೆಯನ್ನು ಪ್ರಶ್ನಿಸಲು ಬರುತ್ತವೆ. ನೀರಜ್ ಘಾಯ್ವಾನ್ ನಿರ್ದೇಶನದ ‘Homebound’ ಅಂಥದ್ದೇ ಸಿನಿಮಾ.
ಕೆಲವರಿಗೆ ಲಾಕ್‌ಡೌನ್ ಅಂದ್ರೆ ಫ್ರಿಜ್ ತುಂಬಾ ಆಹಾರ. ಮೊಬೈಲ್, ಟಿವಿ, ನೆಟ್‌ಫ್ಲಿಕ್ಸ್, ವರ್ಕ್ ಫ್ರಂ ಹೋಮ್. ಆದರೆ ಬಡವರ ಪಾಲಿಗೆ ಲಾಕ್‌ಡೌನ್ ಅಂದ್ರೆ ನೂರಾರು ಮೈಲಿ ಕಾಲ್ನಡಿಗೆಗಳು, ಕೊನೆಯೇ ಇಲ್ಲದ ರಸ್ತೆಗಳು. ಬಿಸಿಲು ಸುರಿಯುವ ಹಗಲುಗಳು. ನೀರಡಿಕೆ- ಅರೆಹೊಟ್ಟೆ-ಉಪವಾಸದ ಉಸಿರುಗಟ್ಟಿಸುವ ರಾತ್ರಿಗಳು. ಪೊಲೀಸರ ಲಾಠಿಯೇಟುಗಳು, ದಸ್ತಗಿರಿಯ ಭಯಭೀತಿ, ಮುಖ್ಯರಸ್ತೆ ತೊರೆದು ಕಾಡುರಸ್ತೆ ಹಿಡಿದು ಊರು ತಲುಪುವ ಅನಿಶ್ಚಯತೆ. “ಲಾಕ್‌ಡೌನ್” ಅನ್ನೋ ಪದ ಟಿವಿ ಚಾನೆಲ್‌ಳಿಗೆ ಬೇರೆ ರೀತಿಯದ್ದೇ ಆಗಿತ್ತು. “ಮನೆಲ್ಲೇ ಇರಿ” “ಸೇಫ್ ಆಗಿರಿ” “ಎಲ್ಲವೂ ಸರಿಯಾಗುತ್ತದೆ” ಅಂತ. ಆದರೆ ಆ ಮಾತುಗಳು
ಎಲ್ಲರಿಗೂ ಒಂದೇ ಅರ್ಥ ಕೊಡಲಿಲ್ಲ. “ಮನೆಯೇ ಇಲ್ಲದವರಿಗೆ ಮನೆಯಲ್ಲೇ ಇರಿ ಅನ್ನೋದು ಯಾವ ನ್ಯಾಯ?” ಕೈಯಲ್ಲಿ ಚೀಲ, ಕಂಕುಳಲ್ಲಿ ಮಗು, ಕಾಲಲ್ಲಿ ಚಪ್ಪಲಿ ಇಲ್ಲ. ರಸ್ತೆ ಯಾವಾಗ ಮುಗಿಯುತ್ತದೆ ಅನ್ನೂವುದು ಗೊತ್ತಿಲ್ಲ. ಇದು ಬಡವರ ಲಾಕ್‌ಡೌನ್ ಆಗಿತ್ತು. ಬಡವರ ಬದುಕು ತಿಂಗಳ ಲೆಕ್ಕದಲ್ಲಿಲ್ಲ. ಅದು ದಿನದ ಲೆಕ್ಕ. ಇಂದು ಕೆಲಸ ಮಾಡಿದ್ರೆ, ಇಂದು ಊಟ, ಇಲ್ಲವಾದರೆ ಉಪವಾಸ.

ಲಾಕ್‌ಡೌನ್ ಶುರುವಾದ ದಿನವೇ ಅವರ ಕೆಲಸವೂ ನಿಂತಿತು. ಅದೇ ಕ್ಷಣದಿಂದ ಅವರ ಬದುಕೂ ನಿಂತಿತು. ಇದೇ ಲಾಕ್‌ಡೌನ್ ಸಮಯದಲ್ಲಿ ಲಕ್ಷಾಂತರ ಜನ ‘ಮನೆ’ಗೆ ಹೊರಟರು. ರೈಲು ಇಲ್ಲ, ಬಸ್ ಇಲ್ಲ, ರಸ್ತೆಯೇ ಮನೆಯಾಯಿತು. ಪ್ರತಿ ಹೆಜ್ಜೆಯ ಜೊತೆ ಮನೆ ಇನ್ನಷ್ಟು ದೂರವಾಗುತ್ತಾ ಹೋಯಿತು. ಪ್ರತಿ ಹೆಜ್ಜೆಯ ಜೊತೆ ದೇಹ ಇನ್ನಷ್ಟು ದಣಿಯಿತು. ಆದ್ರೆ ನಿಲ್ಲುವಂತಿಲ್ಲ. ನಿಂತರೆ, ಹಿಂದೆ ಏನೂ ಇಲ್ಲ. ಕಾನೂನು ಎಲ್ಲರಿಗೂ ಒಂದೇ ಇದ್ದರೂ, ಪರಿಣಾಮ ಎಲ್ಲರಿಗೂ ಒಂದೇ ಆಗಿರಲಿಲ್ಲ ಯಾಕೆ? ಲಾಕ್‌ಡೌನ್ ಮಧ್ಯಮ ವರ್ಗಕ್ಕೆ ಅಸೌಕರ್ಯವಾದರೆ, ಬಡವರಿಗೆ ಅಸ್ತಿತ್ವದ ಪ್ರಶ್ನೆಯಾಯಿತು. ಅಲ್ಲಿ ಕೊರೊನಾ ದೂರದ ಭಯವಾದರೆ ಹಸಿವು ಮುಂದೇ ನಿಂತಿರುವ ಯಮನಂತೆ ಕಾಡುತ್ತಿತ್ತು. ಈಗ ಕೊರೋನಾ ಹೋಗಿರಬಹುದು, ಆದರೆ ಹಿಂಡಿ–ಹಿಪ್ಪೆ ಆದ ಬದುಕುಗಳು ಇನ್ನೂ ಅಲ್ಲಿಯೇ ಇವೆ. ಇದನ್ನೇ ಹೋಮ್‌ಬೌಂಡ್ ಸಿನಿಮಾ ತೋರಿಸಿದ್ದು.
Homebound ಕೇಳಿತ್ತು – ಮನೆ ಅಂದ್ರೇನು? ಲಾಕ್‌ಡೌನ್‌ನ ನಾಲ್ಕು ಅದೃಶ್ಯ ಗೋಡೆಗಳಾ? ಅಥವಾ ನಮ್ಮನ್ನು ಒಪ್ಪಿಕೊಳ್ಳುವ ಮನಸ್ಸಾ? ಮನೆ ಯಾರಿಗೆ? ರಸ್ತೆ ಮೇಲೆ ನಡೆಯುತ್ತಿದ್ದ ವಲಸೆ ಕಾರ್ಮಿಕರಿಗಾ? ಒಂಟಿಯಾಗಿ ತಬ್ಬಲಿಗಳಂತೆ ಆಸ್ಪತ್ರೆಯಲ್ಲಿ ಸತ್ತವರಿಗಾ? Homebound ಕೊರೊನಾ ಕಾಲದಲ್ಲಿ ಮರೆತುಹೋದ ಜನರ ಕಥೆ. ಈ ಸಿನಿಮಾದಲ್ಲಿ ಹೀರೋ ಇಲ್ಲ, ವಿಲನ್ ಇಲ್ಲ. ಆದ್ರೆ ಈ ಸಿನಿಮಾದಲ್ಲಿ ಭಯ, ಒಂಟಿತನ, ‘ಮನೆ’ಗೆ ತಲುಪಬೇಕು ಅನ್ನೋ ಆಸೆ ಇದೆ. ಈ ಸಿನಿಮಾ ಜೋರಾಗಿ ಕೂಗದ ಲಕ್ಷಾಂತರ ಜನರ ಮೂಕರೋದನವಾಗಿ ದಾಖಲಾಗಿದೆ.
ಭಾರತೀಯ ಸಿನೆಮಾ ಜಗತ್ತಿನಲ್ಲಿ ನೀರಜ್ ಘಾಯ್ವಾನ್ ಒಬ್ಬ ಪ್ರತಿಭಾವಂತ ನಿರ್ದೇಶಕರಾಗಿ ಹೆಸರು ಮಾಡಿದ್ದಾರೆ. ಅವರ ಮೊದಲ ಸಿನೆಮಾ “ಮಸಾನ್” 2015ರಲ್ಲಿ ಕಾನ್ ಚಲನಚಿತ್ರೋತ್ಸವದಲ್ಲಿ ಭಾರೀ ಮನ್ನಣೆ ಪಡೆದಿತ್ತು. 2025ರಲ್ಲಿ ಬಿಡುಗಡೆಯಾದ ಅವರ ಇನ್ನೊಂದು ಸಿನೆಮಾ “ಹೋಂಬೌಂಡ್” (Homebound) ಕೂಡ ಇದೇ ರೀತಿ ವಿಶ್ವದಾದ್ಯಂತ ಚಲನಚಿತ್ರೋತ್ಸವಗಳಲ್ಲಿ ಪ್ರೇಕ್ಷಕರ ಮನಸ್ಸನ್ನು ಗೆದ್ದು, ‘ಸ್ಟ್ಯಾಂಡಿಂಗ್ ಓವೇಶನ್’ ಪಡೆದುಕೊಂಡಿತು. ಆದರೆ, ಆಸ್ಕರ್ ಪ್ರಶಸ್ತಿಯ ಓಟದಲ್ಲಿ ಬಾಲಿವುಡ್ ಮತ್ತು ಭಾರತೀಯ ಸಿನೆಮಾ ಪ್ರೇಮಿಗಳಿಗೆ ನಿರಾಸೆಯೇ ಕಾದಿತ್ತು. ಈ ಸಿನೆಮಾ ಆಸ್ಕರ್‌ನ ಟಾಪ್ 15 ಚಲನಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದರೂ, ಟಾಪ್ 5 ಚಿತ್ರಗಳ ಪಟ್ಟಿಯನ್ನು ತಲುಪಲಿಲ್ಲ. Homebound ಮೊದಲ ಬಾರಿಗೆ ಜಾಗತಿಕ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಾಗಲೇ ಒಂದು ಮಾತು ಕೇಳಿಬಂತು “ಇದು ಸಾಮಾನ್ಯ ಸಿನಿಮಾ ಅಲ್ಲ.”

“ಹೋಂಬೌಂಡ್” ಕಥೆಯು ಉತ್ತರ ಭಾರತದ ಒಂದು ಚಿಕ್ಕ ಹಳ್ಳಿಯ ಇಬ್ಬರು ಬಾಲ್ಯ ಸ್ನೇಹಿತರ ಸುತ್ತ ಹೆಣೆದದ್ದು. ಶೋಯಬ್ (ಇಶಾನ್ ಖಟ್ಟರ್ ಅಭಿನಯಿಸಿದ್ದಾರೆ) ಮತ್ತು ಚಂದನ್ (ವಿಶಾಲ್ ಜೆಥ್ವಾ ಅಭಿನಯಿಸಿದ್ದಾರೆ) ಇಬ್ಬರು ಸ್ನೇಹಿತರು. ಇವರಿಬ್ಬರು ಬಡತನ ಮತ್ತು ಜಾತಿ ತಾರತಮ್ಯದಿಂದ ಪಾರಾಗಲು ಪೊಲೀಸ್ ಇಲಾಖೆಗೆ ಸೇರುವ ಕನಸು ಕಾಣುತ್ತಾರೆ. ಆದರೆ, ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಅವರು ಹೇಳತೀರದ ಪಡಿಪಾಟಲಿಗೆ ಸಿಲುಕವಂತಾಗುತ್ತದೆ. ಕೊರೊನಾ ಲಾಕ್‌ಡೌನ್‌ನಲ್ಲಿ ಅವರ ಜೀವನ ಸಂಪೂರ್ಣವಾಗಿ ಬದಲಾಗುತ್ತದೆ. ನಗರದಿಂದ ಹಳ್ಳಿಗೆ ನಡೆಯುವ ಅವರ ಪಯಣ. ಚಂದನ್ ತೀವ್ರ ಜ್ವರದಿಂದ ಕುಸಿಯುತ್ತಾನೆ. ಟ್ರಕ್‌ನಲ್ಲಿ ಇತರರು “ಕೊರೊನಾ!” ಎಂದು ಕಿರುಚುತ್ತಾ ಅವರನ್ನು ರಸ್ತೆಗೆ ತಳ್ಳುತ್ತಾರೆ. ಸುಡುವ ಬಿಸಿಲಿನಲ್ಲಿ, ಒಂದು ಖಾಲಿ ಬಾಟಲ್ ನೀರು ಹಿಡಿದು ಶೋಯಬ್ ತನ್ನ ಸ್ನೇಹಿತನನ್ನು ಎದೆಗೆ ಅಪ್ಪಿಕೊಂಡು ಕುಳಿತುಕೊಳ್ಳುತ್ತಾನೆ. ಚಂದನ್ ಕಣ್ಣುಗಳು ಮಂಜಾಗುತ್ತಿರುವಾಗ, ಶೋಯಬ್ ಅವನ ಕೆನ್ನೆಯ ಮೇಲೆ ಕೈ ಇಟ್ಟು “ನಾನು ಇದ್ದೇನೆ… ಮನೆಗೆ ಹೋಗೋಣ” ಎಂದು ಆತನಿಗೆ ಸಮಾಧಾನ ಮಾಡುತ್ತಾನೆ. ಬಿಸಿಲು ಸುಡುತ್ತಿದ್ದರೂ ತನ್ನ ಸ್ನೇಹಿತನ್ನ ಭುಜದ ಮೇಲೆ ಹೊತ್ತು ನಡೆಯುವ ದೃಶ್ಯವೇ ಈ ಸಿನಿಮಾದ ಮೋಸ್ಟ್ ಹಾಂಟಿಂಗ್ ಸೀನ್. ಈ ಸಿನಿಮಾವನ್ನ ನೋಡುವಾಗ ನಿಮ್ಮ ಗಂಟಲು ತುಂಬಿಬರುತ್ತದೆ, ಕಣ್ಣುಗಳು ತೇವಗೊಳ್ಳುತ್ತವೆ.
ಒಂದು ದೃಶ್ಯದಲ್ಲಿ, ಚಂದನ್ ತನ್ನ ಸ್ನೇಹಿತನನ್ನು ಹೊತ್ತುಕೊಂಡು ಮೈಲುಗಟ್ಟಲೆ ನಡೆಯುತ್ತಾನೆ. ಜಾಹ್ನವಿ ಕಪೂರ್ ಅಭಿನಯದ ಪಾತ್ರ ಕೂಡ ಸಿನೆಮಾಕ್ಕೆ ಭಾವನಾತ್ಮಕ ಆಳ ನೀಡುತ್ತದೆ. ಇದು ಕೇವಲ ಸಿನೆಮಾ ಅಲ್ಲ, ಭಾರತದ ಸಾಮಾಜಿಕ ವಾಸ್ತವದ ಕನ್ನಡಿ. ನೀರಜ್ ಘಾಯ್ವಾನ್ ಈ ಕಥೆಯನ್ನು ಹೇಳುವಾಗ, ಪ್ರೇಕ್ಷಕರ ಮನಸ್ಸನ್ನ ಮುಟ್ಟಿದ್ದಾರೆ ಅನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ. ಸ್ನೇಹ, ಕಷ್ಟ, ಆಸೆ ಮತ್ತು ನಿರಾಸೆ – ಎಲ್ಲವೂ ಮಿಶ್ರಣವಾಗಿ, ಈ ಸಿನಿಮಾ ನಮ್ಮನ್ನು ಆಲೋಚನೆಗೆ ಹಚ್ಚುತ್ತದೆ. ಇಲ್ಲಿ ದೊಡ್ಡ ಡೈಲಾಗ್ ಇಲ್ಲ, ಅಬ್ಬರದ ಸಂಗೀತ ಇಲ್ಲ, ಹೀರೋ ಎಂಟ್ರಿ ಇಲ್ಲ, ವಿಲನ್ ಮೈಮುರಿಯುವ ಹೊಡೆತ ತಿನ್ನುವುದಿಲ್ಲ, ಬಸಿದು ಉಳಿಯುವುದು ಬರೀ ಮೌನ, ಕಣ್ಣಲ್ಲೇ ಉಳಿದ ಪ್ರಶ್ನೆಗಳು, ಮಾತಿಗೆ ನಿಲುಕದ ನೋವು. ಇದು ನೋಡಿದ ನಂತರ ಬೇಗನೆ ಮುಗಿದು ಆವಿಯಾಗುವ ಸಿನಿಮಾ ಅಲ್ಲ. ಮನಸ್ಸಿನ ಆಳಕ್ಕೆ ಇಳಿಯುವ ಹೃದಯಂಗಮ ನಿರೂಪಣೆ.

ಸಿನೆಮಾದಲ್ಲಿ ಜಾತಿ ವ್ಯವಸ್ಥೆಯ ಪ್ರಭಾವವನ್ನು ತೋರಿಸುವ ದೃಶ್ಯಗಳು ತುಂಬಾ ಪ್ರಭಾವಶಾಲಿ. ಉದಾಹರಣೆಗೆ, ಸ್ನೇಹಿತರು ಪೊಲೀಸ್ ಪರೀಕ್ಷೆಗೆ ತಯಾರಿ ಮಾಡುವಾಗ, ಅವರ ಹಿನ್ನೆಲೆಯ ಕಾರಣ ಅವಕಾಶಗಳು ಕಡಿಮೆಯಾಗುತ್ತವೆ. ಆದರೂ, ಅವರ ಸ್ನೇಹದ ಬಂಧನ ಅಚಲವಾಗಿರತ್ತೆ. ಕೋವಿಡ್ ಸಮಯದಲ್ಲಿ ಅವರು ಮನೆಗೆ ಹಿಂದಿರುಗುವ ಪಯಣ ನಿಜಕ್ಕೂ ಭಾವುಕ. “ವೈರಸ್ ನಿಮ್ಮಲ್ಲಿಲ್ಲ, ಅದು ಇತರರ ಮನಸ್ಸಿನಲ್ಲಿದೆ” ಎಂಬ ಸಂದೇಶವನ್ನ ನೀರಜ್ ನೀಡುತ್ತಾರೆ. ಈ ಸಿನೆಮಾ ಮೇ 2025ರ ಪ್ರತಿಷ್ಠಿತ ಕಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರೀಮಿಯರ್ ಆಯಿತು. ‘ಅನ್ ಸರ್ಟೈನ್ ರಿಗಾರ್ಡ್’ ವಿಭಾಗದಲ್ಲಿ ಪ್ರದರ್ಶನಗೊಂಡು, ಪ್ರೇಕ್ಷಕರು ಎದ್ದು ನಿಂತು ಐದು ನಿಮಿಷಗಳ ಕಾಲ ಚಪ್ಪಾಳೆ ತಟ್ಟಿ ಮೆಚ್ಚುಗೆ ಗೌರವ ತೋರಿದರು. ಮಾರ್ಟಿನ್ ಸ್ಕಾರ್ಸೆಸ್ ಅವರು ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ಸೇರಿದ್ದು, ಈ ಸಿನೆಮಾಕ್ಕೆ ಹೆಚ್ಚು ಗೌರವ ತಂದಿತು.
ಕಾನ್ ನಂತರ, ಸಿನೆಮಾ ಸೆಪ್ಟೆಂಬರ್‌ನಲ್ಲಿ ಟಿಫ್‌ನಲ್ಲಿ ಸ್ಕ್ರೀನ್ ಆಯಿತು. ಇಲ್ಲಿ ಕೂಡ ಪ್ರೇಕ್ಷಕರು ಭಾವುಕರಾಗಿ ಸಿನಿಮಾವನ್ನ ಅಪ್ಪಿಕೊಂಡರು. ಪ್ರತಿಯೊಂದು ಪ್ರದರ್ಶನದ ನಂತರವೂ ನಡೆದದ್ದು ಒಂದೇ, ಚಿತ್ರ ಮುಗಿಯುತ್ತಿದ್ದಂತೆ ಕೆಲ ಕ್ಷಣ ಮೌನವೇ ಆವರಿಸಿತ್ತು. ಆ ಮೌನದ ನಂತರ ಪ್ರೇಕ್ಷಕರು ನಿಧಾನವಾಗಿ ಎದ್ದು ನಿಂತು ಚಪ್ಪಾಳೆ ಹೊಡೆಯಲು ಆರಂಭಿಸಿದರು.
ಅದು ಸಾಮಾನ್ಯ ಚಪ್ಪಾಳೆಯಾಗಿರಲಿಲ್ಲ, ಅದು standing ovation ಆಗಿತ್ತು. ಅಲ್ಲಿ ಕೂತವರಲ್ಲಿ ಭಾರತೀಯರು ಮಾತ್ರ ಇರಲಿಲ್ಲ. ಬೇರೆ ಬೇರೆ ದೇಶದ ಜನರಿದ್ದರು. ಬೇರೆ ಭಾಷೆ, ಬೇರೆ ಸಂಸ್ಕೃತಿಯ ಮಂದಿಯಿದ್ದರು. ಆದರೂ Homebound ಅವರ ಮನಸ್ಸಿಗೆ ತಟ್ಟಿತ್ತು. ಏಕೆಂದರೆ ಈ ಸಿನಿಮಾ ಕೇಳಿದ್ದು, “ಮನೆ ಅಂದ್ರೇನು?” ಇಟ್ಟಿಗೆ-ಸಿಮೆಂಟು-ಮರಳು ಮಿಶ್ರತ ಕಟ್ಟಡವೇ ಮನೆನಾ? ಅಥವಾ ಒಬ್ಬ ಮನುಷ್ಯನ ಭಾವನೆಯೇ ಮನೆನಾ? ಅಂತ.

ಸೆಪ್ಟೆಂಬರ್ 26, 2025ರಂದು ಭಾರತದ ಥಿಯೇಟರ್‌ಗಳಲ್ಲಿ ಬಿಡುಗಡೆಯಾಯಿತು. ನಂತರ ನವೆಂಬರ್‌ನಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಶುರುವಾಯಿತು. ರಾಟನ್ ಟೊಮೇಟೋಸ್‌ನಲ್ಲಿ ಉತ್ತಮ ರೇಟಿಂಗ್ ಪಡೆದು, ವಿಮರ್ಶಕರ ಮೆಚ್ಚುಗೆ ಗಳಿಸಿತು. ಭಾರತದ ಅಧಿಕೃತ ಆಸ್ಕರ್ ಗೆ ಈ ಸಿನಿಮಾ ಎಂಟ್ರಿಯಾಯಿತು. 89 ದೇಶಗಳ ಎಂಟ್ರಿಗಳ ನಡುವೆ, ಡಿಸೆಂಬರ್ 2025ರಲ್ಲಿ 15 ಚಿತ್ರಗಳ ಶಾರ್ಟ್‌ಲಿಸ್ಟ್‌ಗೆ ಸೇರಿತು. ಜನವರಿ 2026ರಲ್ಲಿ ಆಸ್ಕರ್ ನಾಮಿನೇಷನ್ ಪ್ರಕಟವಾದಾಗ, “ಹೋಂಬೌಂಡ್” ಟಾಪ್ 5ಕ್ಕೆ ಬರಲಿಲ್ಲ. ಟಾಪ್ 5 ಚಿತ್ರಗಳು: ನಾರ್ವೇಯ “ಸೆಂಟಿಮೆಂಟಲ್ ವ್ಯಾಲ್ಯೂ”, ಸ್ಪೇನ್‌ನ “ಸಿರಾಟ್” ಇತ್ಯಾದಿ. ಇದು ಬಾಲಿವುಡ್‌ಗೆ ನಿರಾಸೆ ತಂದರೂ, ಸಿನೆಮಾದ ಪಯಣ ಮರೆಯಲಾಗದ್ದು. ಬಹುಶಃ ಆಸ್ಕರ್ ವೇದಿಕೆ ಇನ್ನೂ ಮೌನಕ್ಕಿಂತ ಶಬ್ದವನ್ನು, ಆಳಕ್ಕಿಂತ ಆರ್ಭಟವನ್ನು ಹೆಚ್ಚು ಇಷ್ಟಪಡುತ್ತಿರಬಹುದು.

ಆಸ್ಕರ್ ಕನಸು ಮತ್ತೆ ಕೈ ತಪ್ಪಿತು. ಬಾಲಿವುಡ್‌ಗೆ ಇದು ಹೊಸದೇನಲ್ಲ. ಆದರೆ Homebound ನಿರಾಸೆ ಬೇರೆ ರೀತಿಯದ್ದು. ಏಕೆಂದರೆ ಇದು ಫಾರ್ಮುಲಾ ಸಿನಿಮಾ ಅಲ್ಲ. ಗಿಮಿಕ್ ಸಿನಿಮಾ ಅಲ್ಲ. ಪ್ರಾಮಾಣಿಕ ಪ್ರಯತ್ನದ ಸಿನಿಮಾವಾಗಿತ್ತು. ಇದರಿಂದ ಒಂದು ಪ್ರಶ್ನೆ ಮತ್ತೆ ಎದುರಾಗತ್ತೆ, ನಮ್ಮ ಅತ್ಯುತ್ತಮ ಸಿನಿಮಾಗಳೇ ಯಾಕೆ ಅಂತಿಮವಾಗಿ ಗುರುತಿಸಿಕೊಳ್ಳಲು ವಿಫಲವಾಗುತ್ತಿದೆ? ಅಂತ. ಆದರೆ ಅದು ಸೋತಿಲ್ಲ. ಏಕೆಂದರೆ ಜಾಗತಿಕ ಪ್ರೇಕ್ಷಕರ ಮನಸ್ಸು ಗೆದ್ದಿದೆ. “ನಮ್ಮ ಕಥೆಗೂ ಜಾಗತಿಕ ಭಾಷೆ ಇದೆ” ಅನ್ನೋ ವಿಶ್ವಾಸ ಕೊಟ್ಟಿದೆ. ಕೆಲವು ಸಿನಿಮಾಗಳು ಪ್ರಶಸ್ತಿಗಳಿಗಾಗಿ ಹುಟ್ಟುವುದಿಲ್ಲ. ನಮ್ಮ ಒಳಗಿನ ಪ್ರಶ್ನೆಗಳಿಗಾಗಿ ಹುಟ್ಟುತ್ತವೆ, ನೆನಪಿಗಾಗಿ ಹುಟ್ಟುತ್ತವೆ. Homebound ಒಂದು ಪ್ರಶಸ್ತಿಯ ಕಥೆ ಅಲ್ಲ. ಅದು ಒಂದು ಪಯಣ. ಮನೆ ಅನ್ನೋ ಪದದ ಅರ್ಥ ಹುಡುಕುವ ಪಯಣ. ಒಬ್ಬ ಮನುಷ್ಯನ ಒಳಗಿನ ಖಾಲಿತನದ ಪಯಣ.
ಜಾತಿ, ಸ್ನೇಹ ಮತ್ತು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಈ ಸಿನೆಮಾ, ಭಾರತೀಯ ಸಿನೆಮಾದ ಹೊಸ ಮುಖವನ್ನು ತೋರಿಸಿದೆ. ನೀರಜ್ ಘಾಯ್ವಾನ್‌ರಂತಹ ನಿರ್ದೇಶಕರು ನಮ್ಮ ಸಮಾಜದ ಕಥೆಗಳನ್ನು ವಿಶ್ವಕ್ಕೆ ಹೇಳುತ್ತಾರೆ. ಇದು ಕೇವಲ ಸಿನೆಮಾ ಅಲ್ಲ, ಒಂದು ಭಾವನಾತ್ಮಕ ಅನುಭವ.





