ಇತ್ತೀಚಿಗೆ ಮಲಯಾಳಂನಲ್ಲಿ ಸೂಪರ್ ಡೂಪರ್ ಹಿಟ್ ಆಗಿದ್ದ ‘ಮಂಜುಮ್ಮೆಲ್ ಬಾಯ್ಸ್’ ಸಿನಿಮಾ ನಿರ್ಮಾಪಕರಿಗೆ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರು ತಮ್ಮ ಅನುಮತಿಯಿಲ್ಲದೆ “ಕಣ್ಮಣಿ ಅನ್‌ಬೊದು ಕಾದಲನ್” ಹಾಡು ಬಳಕೆ ಮಾಡಿಕೊಂಡಿದಕ್ಕೆ ಲೀಗಲ್ ನೋಟಿಸ್ ನೀಡಿದ್ದಾರೆ.
‘ಮಂಜುಮ್ಮೆಲ್ ಬಾಯ್ಸ್’ ಸಿನಿಮಾದಲ್ಲಿ ಬಳಸಿಕೊಂಡಿರುವ “ಕಣ್ಮಣಿ ಅನ್‌ಬೊದು ಕಾದಲನ್” ಹಾಡು ಇಳಯರಾಜ ಸಂಗೀತ ನಿರ್ದೇಶನದ ‘ಗುಣ’ ಸಿನಿಮಾದ್ದಾಗಿದೆ.
ನೋಟಿಸ್‌ಅನ್ನು ನಿರ್ಮಾಪಕರಾದ ಸೌಬಿನ್ ಶಾಹೀರ್, ಬಾಬು ಶಾಹೀರ್ ಹಾಗೂ ಶ್ವಾನ್ ಆಂಟೊನಿ ಅವರಿಗೂ ನೀಡಲಾಗಿದೆ.
“ನೀವು ನಿಮ್ಮ ಸಿನಿಮಾದಲ್ಲಿ ಬಳಸಿಕೊಂಡಿರುವ ಹಾಡು/ಸಂಗೀತವನ್ನು ನಮ್ಮ ಕಕ್ಷೀದಾರರ ಸೂಕ್ತ ಅನುಮತಿ/ ಒಪ್ಪಿಗೆ/ಪರವಾನಗಿ ಇಲ್ಲದೆ ಪಡೆದುಕೊಂಡಿದ್ದೀರಿ. ಬಳಸಲಾದ ಹಾಡನ್ನು ರದ್ದುಗೊಳಿಸುವುದರ ಜೊತೆ 15 ದಿನಗಳ ಒಳಗಾಗಿ ಪರಿಹಾರವನ್ನು ನೀಡಬೇಕು” ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಯುಪಿ-ಬಿಹಾರದಲ್ಲಿ ಧೂಳೆಬ್ಬಿಸಿದೆ ʼಖಟಾಖಟ್ ಖಟಾಖಟ್ʼ ಮಹಾಲಕ್ಷ್ಮೀ ಯೋಜನೆ
ಈ ನೋಟಿಸ್‌ಗೆ ಉತ್ತರ ನೀಡಲು ವಿಫಲವಾದಲ್ಲಿ ನಷ್ಟ ಉಂಟು ಮಾಡಿರುವ ಪರಿಣಾಮವಾಗಿ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.
ಕಾಪಿರೈಟ್ ನಿಯಮ 1957ರ ಅಡಿಯಲ್ಲಿ ಉದ್ದೇಶಪೂರ್ವಕವಾಗಿ ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ ನಿರ್ಮಾಪಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಕೂಡ ಹೇಳಲಾಗಿದೆ.
ಚಿದಂಬರಂ ನಿರ್ದೇಶನದ ‘ಮಂಜುಮ್ಮೆಲ್ ಬಾಯ್ಸ್’ ಚಿತ್ರ ಫೆ.22 ರಂದು ಬಿಡುಗಡೆಯಾಗಿದ್ದು, ಸಾಧಾರಣ ಬಜೆಟಿನ ಈ ಚಿತ್ರ 200 ಕೋಟಿಗೂ ಅಧಿಕ ಗಳಿಕೆ ಮಾಡಿತ್ತು. ನಿರ್ಮಾಪಕರಾದ ಸೌಬಿನ್ ಶಾಹೀರ್ ಕೂಡ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.





