ದೇಶ ಎಷ್ಟೇ ಅಭಿವೃದ್ಧಿಯಾದರೂ ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ, ದೌರ್ಜನ್ಯಗಳು ಇಂದಿಗೂ ಕಡಿಮೆಯಾಗಿಲ್ಲ. ಅವೆಲ್ಲವುದರ ನಡುವೆ ದೃಢವಾಗಿ ನಿಂತು, ಸಾಧಿಸಿ ತೋರಿಸಿದ ಮಹಿಳೆಯರ ಸಾಲಿನಲ್ಲಿ ನಮ್ಮ ನಾಡಿನ ಹೆಮ್ಮೆ ಬಾನು ಮುಷ್ತಾಕ್ ಅವರೂ ಸೇರಿದ್ದಾರೆ.
2025ರ ಕೊನೆಯ ದಿನದಲ್ಲಿ ನಾವಿದ್ದೇವೆ. ಈ ವೇಳೆ ಈ ವರ್ಷದಲ್ಲಾದ ಕೆಲವು ಬೆಳವಣಿಗೆಗಳತ್ತ ಕಣ್ಣು ಹಾಯಿಸೋಣ. ಪ್ರತಿ ವರ್ಷದಂತೆ ಈ ವರ್ಷವೂ ಭಾರತೀಯ ಮಹಿಳೆಯರು ಜಾಗತಿಕವಾಗಿ ಸಾಧನೆ ಮಾಡಿದ್ದಾರೆ. ಕಾರ್ಪೊರೇಟ್ ನಾಯಕತ್ವ, ಸಿನಿಮಾ, ಬಾಹ್ಯಾಕಾಶದಿಂದ ಹಿಡಿದು ವೈವಿಧ್ಯಮಯ ಕೈಗಾರಿಕೆಗಳಲ್ಲಿ ಐತಿಹಾಸಿಕ ಪ್ರಗತಿಯನ್ನು ಮಹಿಳೆಯರು ಸಾಧಿಸಿದ್ದಾರೆ.
ದೇಶ ಎಷ್ಟೇ ಅಭಿವೃದ್ಧಿಯಾದರೂ ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ, ದೌರ್ಜನ್ಯಗಳು ಇಂದಿಗೂ ಕಡಿಮೆಯಾಗಿಲ್ಲ. ಅವೆಲ್ಲವುದರ ನಡುವೆ ದೃಢವಾಗಿ ನಿಂತು, ಸಾಧಿಸಿ ತೋರಿಸಿದ ಮಹಿಳೆಯರ ಸಾಲಿನಲ್ಲಿ ನಮ್ಮ ನಾಡಿನ ಹೆಮ್ಮೆ ಬಾನು ಮುಷ್ತಾಕ್ ಅವರೂ ಸೇರಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದವರ ಬಗ್ಗೆ ಇಂತಿಷ್ಟು ಮಾಹಿತಿ ತಿಳಿಯೋಣ.
ಇದನ್ನು ಓದಿದ್ದೀರಾ? ವಿಶ್ಲೇಷಣೆ | ಜನಪ್ರಿಯ ಆಟಕ್ಕೆ ಮೆರಗು ತಂದವರು; ಭಾರತೀಯ ಮಹಿಳೆಯರ ಕ್ರಿಕೆಟ್ ಯಶೋಗಾಥೆ
ಕಲೆ, ಸಿನಿಮಾ, ಸಾಹಿತ್ಯ
ಬಾನು ಮುಷ್ತಾಕ್: ಬಾನು ಮುಷ್ತಾಕ್ ಅವರು ಪ್ರಸಿದ್ಧ ಕನ್ನಡ ಲೇಖಕಿ, ವಕೀಲೆ ಮತ್ತು ಸಾಮಾಜಿಕ ಕಾರ್ಯಕರ್ತೆಯಾಗಿದ್ದು 2025ರಲ್ಲಿ ಅವರ ‘ಹಾರ್ಟ್ ಲ್ಯಾಂಪ್’ (ಎದೆಯ ಹಣತೆ) ಕಥಾಸಂಕಲನಕ್ಕಾಗಿ ಪ್ರತಿಷ್ಠಿತ ಅಂತಾರಾಷ್ಟೀಯ ಬೂಕರ್ ಪ್ರಶಸ್ತಿ ಲಭಿಸಿದೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ಕನ್ನಡ ಸಾಹಿತ್ಯಕ್ಕೆ ದೊಡ್ಡ ಗೌರವ ತಂದುಕೊಟ್ಟವರು ಬಾನು. ಬಾನು ಮುಷ್ತಾಕ್ ಅವರ ‘ಎದೆಯ ಹಣತೆ’ ಸಣ್ಣ ಕಥೆಗಳ ಸಂಕಲನವನ್ನು ದೀಪಾ ಭಸ್ತಿ ಅವರು ‘Heart Lamp’ ಹೆಸರಿನಲ್ಲಿ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಬೂಕರ್ ಪ್ರಶಸ್ತಿಯ ಜತೆಗೆ ಬಾನು ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಗಳಂತಹ ಅನೇಕ ಗೌರವಗಳು ಲಭಿಸಿವೆ.

ಪಾಯಲ್ ಕಪಾಡಿಯಾ: ಮುಂಬೈ ಮೂಲದ ಖ್ಯಾತ ಭಾರತೀಯ ಚಲನಚಿತ್ರ ನಿರ್ದೇಶಕಿ ಮತ್ತು ಚಿತ್ರಕಥೆಗಾರ್ತಿ ಪಾಯಲ್ ಕಪಾಡಿಯಾ, 2024ರ ಕಾನ್ ಚಲನಚಿತ್ರೋತ್ಸವದಲ್ಲಿ ತಮ್ಮ ಚೊಚ್ಚಲ ಫಿಕ್ಷನ್ ಚಿತ್ರ “ಆಲ್ ವಿ ಇಮ್ಯಾಜಿನ್ ಆಸ್ ಲೈಟ್” ಕ್ಕಾಗಿ ‘ಗ್ರ್ಯಾಂಡ್ ಪ್ರಿಕ್ಸ್’ (Grand Prix) ಪ್ರಶಸ್ತಿಯನ್ನು ಗೆದ್ದಿದ್ದಾರೆ. ಈ ಮೂಲಕ ಕಾನ್ ಚಲನಚಿತ್ರೋತ್ಸವದ ಇತಿಹಾಸದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಮಹಿಳಾ ನಿರ್ದೇಶಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಈ ಸಾಧನೆಯಿಂದಾಗಿಯೇ 2025ರ ಕಾನ್ ಚಲನಚಿತ್ರೋತ್ಸವದಲ್ಲಿ ಫೀಚರ್ ಫಿಲ್ಮ್ ವಿಭಾಗದ ತೀರ್ಪುಗಾರರಾಗಿ ಆಯ್ಕೆಯಾಗಿದ್ದಾರೆ. ಪಾಯಲ್ ಕಪಾಡಿಯಾ ಸಿನಿಮಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ 2025ರಲ್ಲೇ ಫ್ರಾನ್ಸ್ ಸರ್ಕಾರದಿಂದ ಆಫೀಸರ್ ಡಾನ್ಸ್ ಎಲ್’ಆರ್ಡ್ರೆ ಡೆಸ್ ಆರ್ಟ್ಸ್ ಎಟ್ ಡೆಸ್ ಲೆಟ್ರೆಸ್” (Officier dans l’Ordre des Arts et des Lettres) ಗೌರವ ಪಡೆದಿದ್ದಾರೆ.

ಸುನಿಧಿ ಚೌಹಾಣ್: ಕೇವಲ 4ನೇ ವಯಸ್ಸಿನಲ್ಲೇ ಹಾಡಲು ಪ್ರಾರಂಭಿಸಿದ ಸುನಿಧಿ, ಕನ್ನಡ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ 2000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. 2025ರ ಡಿಸೆಂಬರ್‌ನಲ್ಲಿ ಇವರಿಗೆ ಪುಣೆಯಲ್ಲಿ ಕಲೆ ಮತ್ತು ಪ್ರದರ್ಶನ ಕ್ಷೇತ್ರದಲ್ಲಿನ ಸಾಧನೆಗಾಗಿ ಪ್ರತಿಷ್ಠಿತ ‘ಸೂರ್ಯದತ್ತ ರಾಷ್ಟ್ರೀಯ ಪ್ರಶಸ್ತಿ-2025’ ನೀಡಿ ಗೌರವಿಸಲಾಗಿದೆ. 2025ರಲ್ಲಿ ತಮ್ಮ ‘ಐ ಆಮ್ ಹೋಮ್’ ಎನ್ನುವ ಬೃಹತ್ ಭಾರತ ಪ್ರವಾಸವನ್ನು ಕೈಗೊಂಡಿದ್ದು 2026ರ ಮಾರ್ಚ್‌ವರೆಗೂ ಇದು ಮುಂದುವರೆಯಲಿದೆ. ಬೆಂಗಳೂರು ಸೇರಿದಂತೆ ದೆಹಲಿ, ಜೈಪುರ ಮತ್ತು ಕೊಲ್ಕತ್ತಾದಂತಹ ನಗರಗಳಲ್ಲಿ ಹತ್ತಾರು ಸಾವಿರ ಅಭಿಮಾನಿಗಳ ಸಮ್ಮುಖದಲ್ಲಿ ‘ಐ ಆಮ್ ಹೋಮ್’ ಎಂಬ ಲೈವ್ ಕಾನ್ಸರ್ಟ್‌ಗಳನ್ನು ನಡೆಸುವ ಮೂಲಕ ಸದ್ಯ ಸುದ್ದಿಯಲ್ಲಿದ್ದಾರೆ.

ಶ್ರೇಯಾ ಘೋಷಾಲ್: 2025ರ ಮಾರ್ಚ್‌ನಲ್ಲಿ ನಡೆದ 25ನೇ IIFA ಪ್ರಶಸ್ತಿ ಸಮಾರಂಭದಲ್ಲಿ ಶ್ರೇಯಾ ಘೋಷಾಲ್ ಅವರು ‘ಭೂಲ್ ಭುಲೈಯಾ 3’ ಚಿತ್ರದ “ಅಮಿ ಜೆ ತೋಮರ್ 3.0” ಹಾಡಿಗೆ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಇದು ಇವರ 10ನೇ IIFA ಪ್ರಶಸ್ತಿಯಾಗಿದೆ. ಅಲ್ಲದೆ ಸ್ಪಾಟಿಫೈನಲ್ಲಿ (Spotify) ಅತಿ ಹೆಚ್ಚು ಸ್ಟ್ರೀಮ್ ಆದ ಭಾರತೀಯ ಗಾಯಕಿಯರ ಪಟ್ಟಿಯಲ್ಲಿ ಶ್ರೇಯಾ ಘೋಷಾಲ್ ಸ್ಥಾನ ಪಡೆದಿದ್ದಾರೆ.

ಇದನ್ನು ಓದಿದ್ದೀರಾ? ಧಾರವಾಡ | ಆಧುನಿಕ ಮಹಿಳೆ ಸಾಧನೆಯ ಶಿಖರ ಮುಟ್ಟಿದ್ದಾಳೆ: ಡಾ.ರೇಖಾ ಜೋಗುಳ್
ಕಾರ್ಪೋರೇಟ್ ಮತ್ತು ಉದ್ಯಮ
ಜಯಶ್ರೀ ಉಳ್ಳಾಲ್: ಅರಿಸ್ಟಾ ನೆಟ್‌ವರ್ಕ್ಸ್ ಅಧ್ಯಕ್ಷೆ ಮತ್ತು ಸಿಇಒ ಆಗಿರುವ ಜಯಶ್ರೀ ಉಳ್ಳಾಲ್ 2025ರ ‘ಹುರುನ್ ಇಂಡಿಯಾ ರಿಚ್ ಲಿಸ್ಟ್’ ಪ್ರಕಾರ ವಿಶ್ವದ ಅತ್ಯಂತ ಶ್ರೀಮಂತ ಭಾರತೀಯ ಮೂಲದ ವೃತ್ತಿಪರ ವ್ಯವಸ್ಥಾಪಕಿಯಾಗಿದ್ದಾರೆ. 2025ರ ಡಿಸೆಂಬರ್ ಹೊತ್ತಿಗೆ ಅವರ ಒಟ್ಟು ಆಸ್ತಿ ಸುಮಾರು 50,170 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. 2025ರ ಜೂನ್‌ನಲ್ಲಿ ಸ್ಯಾಂಟಾ ಕ್ಲಾರಾ ಯೂನಿವರ್ಸಿಟಿಯು (Santa Clara University) ಅವರಿಗೆ ಎಂಜಿನಿಯರಿಂಗ್ ವಿಭಾಗದಲ್ಲಿ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ.

ಲೀನಾ ನಾಯರ್: ಭಾರತೀಯ ಮೂಲದ ಪ್ರಖ್ಯಾತ ಉದ್ಯಮಿ ಮತ್ತು ಪ್ರಸ್ತುತ ಫ್ರೆಂಚ್ ಐಷಾರಾಮಿ ಫ್ಯಾಶನ್ ಬ್ರ್ಯಾಂಡ್ ಶನೆಲ್ (Chanel) ನ ಜಾಗತಿಕ ಸಿಇಒ ಆಗಿರುವ ಲೀನಾ ನಾಯರ್ ಅವರು ಫಾರ್ಚೂನ್ ಇಂಡಿಯಾ ಪ್ರಕಟಿಸಿದ 2025ರ ಅತ್ಯಂತ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಬ್ರಿಟನ್‌ನ ಚಿಲ್ಲರೆ ಮತ್ತು ಗ್ರಾಹಕ ವಲಯಕ್ಕೆ ಲೀನಾ ನೀಡಿದ ಅಮೂಲ್ಯ ಕೊಡುಗೆಗಾಗಿ ಬ್ರಿಟಿಷ್ ರಾಜಮನೆತನವು ಅವರಿಗೆ ಪ್ರತಿಷ್ಠಿತ ‘ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್’ (CBE- Commander of the Order of the British Empire) ಪ್ರಶಸ್ತಿ ನೀಡಿ ಗೌರವಿಸಿದೆ. 2025ರ ಜೂನ್ 11ರಂದು ವಿಂಡ್ಸರ್ ಕ್ಯಾಸಲ್‌ನಲ್ಲಿ ನಡೆದ ಸಮಾರಂಭದಲ್ಲಿ ಪ್ರಿನ್ಸ್ ವಿಲಿಯಂ ಅವರು ಲೀನಾ ನಾಯರ್ ಅವರಿಗೆ ಈ ಪದಕವನ್ನು ಪ್ರದಾನ ಮಾಡಿದರು.

ಫಲ್ಗುಣಿ ನಾಯರ್: ಭಾರತದ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರಾಗಿರುವ ಫಲ್ಗುಣಿ ನಾಯರ್ ಅವರು ಪ್ರಸ್ತುತ ನೈಕಾ (Nykaa) ಸಂಸ್ಥೆಯ ಸ್ಥಾಪಕರು, ಕಾರ್ಯನಿರ್ವಾಹಕ ಅಧ್ಯಕ್ಷರು ಮತ್ತು ಸಿಇಒ ಆಗಿದ್ದಾರೆ. ಇವರ ನಾಯಕತ್ವದಲ್ಲಿ ನೈಕಾ ಕಂಪನಿಯು ಕೇವಲ ಇ-ಕಾಮರ್ಸ್ ವೇದಿಕೆಯಾಗಿ ಉಳಿಯದೆ, ದೇಶದಲ್ಲಿ ಹಲವು ಮಳಿಗೆಗಳನ್ನೂ ಹೊಂದಿರುವ ಬೃಹತ್ ಉದ್ಯಮವಾಗಿ ಬೆಳೆದಿದೆ. 2025ರಲ್ಲಿ ಫಾರ್ಚೂನ್ ಇಂಡಿಯಾ ಸೇರಿದಂತೆ ಹಲವು ಪ್ರತಿಷ್ಠಿತ ನಿಯತಕಾಲಿಕೆಗಳು ಫಲ್ಗುಣಿ ನಾಯರ್ ಅವರನ್ನು ಅತ್ಯಂತ ಪ್ರಭಾವಶಾಲಿ ಮಹಿಳಾ ಉದ್ಯಮಿಗಳ ಪಟ್ಟಿಯಲ್ಲಿ ಸೇರಿಸಿವೆ.

ಸಾಮಾಜಿಕ ಕಾರ್ಯ, ಪರಿಸರ ವಿಜ್ಞಾನ
ವರ್ಷಾ ಲಕ್ಷ್ಮಣ್‌ರಾವ್ ದೇಶಪಾಂಡೆ: ಮಹಾರಾಷ್ಟ್ರದ ಸತಾರಾ ಮೂಲದ ಖ್ಯಾತ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಮತ್ತು ವಕೀಲರಾಗಿರುವ ವರ್ಷಾ, ಕಳೆದ ಮೂರು ದಶಕಗಳಿಂದ ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟಲು ಮತ್ತು ಲಿಂಗ ಸಮಾನತೆಗಾಗಿ ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಲಿಂಗ ಆಧಾರಿತ ಭ್ರೂಣ ಹತ್ಯೆ ತಡೆಗಟ್ಟುವಿಕೆ ಮತ್ತು ಮಹಿಳಾ ಸಬಲೀಕರಣಕ್ಕಾಗಿ ಅವರು ನೀಡಿದ ಕೊಡುಗೆಯನ್ನು ಗೌರವಿಸಿ 2025ರ ಜುಲೈನಲ್ಲಿ ವಿಶ್ವಸಂಸ್ಥೆಯು ಅವರಿಗೆ ಪ್ರತಿಷ್ಠಿತ ‘2025 ವಿಶ್ವಸಂಸ್ಥೆ ಜನಸಂಖ್ಯಾ ಪ್ರಶಸ್ತಿ’ ನೀಡಿ ಗೌರವಿಸಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮತ್ತು ಉದ್ಯಮಿ ಜೆಆರ್‌ಡಿ ಟಾಟಾ ಬಳಿಕ ಈ ಪ್ರಶಸ್ತಿ ಗೆದ್ದ ಮೂರನೇ ಭಾರತೀಯರು ಮತ್ತು ಎರಡನೇ ಭಾರತೀಯ ಮಹಿಳೆ ಇವರಾಗಿದ್ದಾರೆ. ವರ್ಷಾ ಅವರು ಅಕ್ರಮವಾಗಿ ಲಿಂಗ ಪತ್ತೆ ಹಚ್ಚುವ ವೈದ್ಯರನ್ನು ಹಿಡಿಯಲು ಸುಮಾರು 56ಕ್ಕೂ ಹೆಚ್ಚು ‘ಸ್ಟಿಂಗ್ ಆಪರೇಷನ್’ (ರಹಸ್ಯ ಕಾರ್ಯಾಚರಣೆ)ಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ. 1990ರಲ್ಲಿ ದಲಿತ ಮಹಿಳಾ ವಿಕಾಸ ಮಂಡಲ (DMVM) ಸಂಸ್ಥೆಯನ್ನು ಸ್ಥಾಪಿಸಿ, ದಲಿತ ಮತ್ತು ಅವಕಾಶವಂಚಿತ ಮಹಿಳೆಯರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದಾರೆ.

ಜಯಶ್ರೀ ವೆಂಕಟೇಸನ್: ಡಾ. ಜಯಶ್ರೀ ವೆಂಕಟೇಸನ್ ಅವರು ಭಾರತದ ಪ್ರಖ್ಯಾತ ಪರಿಸರ ವಿಜ್ಞಾನಿ ಮತ್ತು ಜೌಗು ಪ್ರದೇಶಗಳ (Wetlands) ಸಂರಕ್ಷಣಾ ತಜ್ಞೆ. ಚೆನ್ನೈ ಮೂಲದ ಕೇರ್ ಅರ್ಥ್ ಟ್ರಸ್ಟ್ ಎಂಬ ಸ್ವಯಂಸೇವಾ ಸಂಸ್ಥೆಯ ಸಹ-ಸಂಸ್ಥಾಪಕರು ಮತ್ತು ಮ್ಯಾನೇಜಿಂಗ್ ಟ್ರಸ್ಟಿ ಆಗಿದ್ದಾರೆ. 2025ರಲ್ಲಿ ಇವರು ಜಾಗತಿಕ ಮಟ್ಟದ ಅತ್ಯುನ್ನತ ‘ರಾಮ್‌ಸರ್ ಪ್ರಶಸ್ತಿ’ ಪಡೆದಿದ್ದು, ಈ ಪ್ರಶಸ್ತಿ ಪಡೆದ ಮೊದಲ ಭಾರತೀಯ ವ್ಯಕ್ತಿ ಮತ್ತು ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ವಿಜ್ಞಾನ, ತಂತ್ರಜ್ಞಾನ ಮತ್ತು ರಕ್ಷಣೆ
ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA) ಕೆಡೆಟ್‌ಗಳು: 2025ರ ಮೇ 29ರಂದು 17 ಮಹಿಳಾ ಕೆಡೆಟ್‌ಗಳ ಮೊದಲ ಬ್ಯಾಚ್ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಿಂದ ಪದವಿ ಪಡೆದಿದ್ದಾರೆ.

ಕಲ್ಪನಾ ಕಾಳಹಸ್ತಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಪ್ರಖ್ಯಾತ ವಿಜ್ಞಾನಿ ಮತ್ತು ಏರೋಸ್ಪೇಸ್ ಎಂಜಿನಿಯರ್ ಆದ ಕಲ್ಪನಾ ಕಾಳಹಸ್ತಿ ಅವರು 2023ರಲ್ಲಿ ಭಾರತವು ಚಂದಿರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಇಳಿದ ಐತಿಹಾಸಿಕ ಚಂದ್ರಯಾನ-3 ಯೋಜನೆಯಲ್ಲಿ ಅಸೋಸಿಯೇಟ್ ಪ್ರಾಜೆಕ್ಟ್ ಡೈರೆಕ್ಟರ್ ಆಗಿ ಮಹತ್ವದ ಪಾತ್ರ ವಹಿಸಿದ್ದರು. ಇಸ್ರೋದಲ್ಲಿ ಸುಮಾರು 25 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಕಲ್ಪನಾ ವಿವಿಧ ವೇದಿಕೆಗಳ ಮೂಲಕ ಯುವತಿಯರು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಸ್ಫೂರ್ತಿ ನೀಡುತ್ತಿದ್ದಾರೆ.

ಡಾ. ದಿವ್ಯಾ ಕಾರ್ನಾಡ್: ದೇಶದ ಪ್ರಮುಖ ಸಮುದ್ರ ಜೀವವಿಜ್ಞಾನಿ (Marine Biologist) ಮತ್ತು ಸಂರಕ್ಷಣಾ ತಜ್ಞರಾಗಿರುವ ಡಾ. ದಿವ್ಯಾ ಕಾರ್ನಾಡ್ ಫ್ಯೂಚರ್ ಫಾರ್ ನೇಚರ್ ಅವಾರ್ಡ್ (2019) ಪಡೆದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2025ರಲ್ಲಿ ವಿಜ್ಞಾನ ಮತ್ತು ಸಂರಕ್ಷಣಾ ಕ್ಷೇತ್ರಕ್ಕೆ ದಿವ್ಯಾ ಅವರು ನೀಡಿದ ಕೊಡುಗೆಗಳಿಗಾಗಿ ಜಾಗತಿಕ ಮಟ್ಟದ ವಿಂಗ್ಸ್ ವುಮೆನ್ ಆಫ್ ಡಿಸ್ಕವರಿ ಅವಾರ್ಡ್ (2025) ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಸುನಿತಾ ವಿಲಿಯಮ್ಸ್: ಭಾರತೀಯ ಮೂಲದ ಸುನಿತಾ ವಿಲಿಯಮ್ಸ್ ಅಮೆರಿಕಾದ ನೌಕಾಪಡೆ ಅಧಿಕಾರಿ ಮತ್ತು ನಾಸಾ (NASA) ಗಗನಯಾತ್ರಿ. 2024ರ ಜೂನ್‌ನಲ್ಲಿ ಬೋಯಿಂಗ್ ಸ್ಟಾರ್‌ಲೈನರ್ (Boeing Starliner) ನೌಕೆಯ ಮೂಲಕ ಬಾಹ್ಯಾಕಾಶಕ್ಕೆ ತೆರಳಿದ ಅವರು ಅಲ್ಲಿಯೇ ಉಳಿಯಬೇಕಾಯಿತು. ಎಂಟು ದಿನಗಳ ಕಾಲದ ಮಿಷನ್ ತಾಂತ್ರಿಕ ದೋಷಗಳಿಂದಾಗಿ 286 ದಿನಗಳವರೆಗೆ ವಿಸ್ತರಣೆಯಾಗಿತ್ತು. 2025ರ ಮಾರ್ಚ್ 18ರಂದು ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಸ್ಪೇಸ್‌ಎಕ್ಸ್(SpaceX) ನ ‘ಡ್ರ್ಯಾಗನ್’ ನೌಕೆಯ ಮೂಲಕ ಭೂಮಿಗೆ ಮರಳಿದ್ದಾರೆ. ಅತಿ ಹೆಚ್ಚು ಸಮಯ ಬಾಹ್ಯಾಕಾಶದಲ್ಲಿ ನಡೆದ ಮಹಿಳಾ ಗಗನಯಾತ್ರಿಗಳಲ್ಲಿ ಸುನಿತಾ ಕೂಡಾ ಒಬ್ಬರು.

ದೀಪಿಕಾ ಟಿಸಿ: ಭಾರತದ ಅಂಧ ಮಹಿಳಾ ಕ್ರಿಕೆಟ್ ತಂಡದ ನಾಯಕಿ, ಅಂತಾರಾಷ್ಟ್ರೀಯ ಮಟ್ಟದ ಸಾಧಕಿ ದೀಪಿಕಾ ಟಿಸಿ ನೇತೃತ್ವದಲ್ಲಿ 2025ರಲ್ಲಿ ಭಾರತ ತಂಡವು ಅಂಧರ ಚೊಚ್ಚಲ ಮಹಿಳಾ ಟಿ20 ವಿಶ್ವಕಪ್ ಗೆದ್ದು ಇತಿಹಾಸ ಬರೆದಿದೆ. ತುಮಕೂರಿನ ಕುಣಿಗಲ್ ಮೂಲದವರಾದ ದೀಪಿಕಾ ಬಾಲ್ಯದಲ್ಲಿ ಉಗುರಿನಿಂದ ಕಣ್ಣಿಗೆ ಗಾಯವಾಗಿ ದೃಷ್ಟಿ ಕಳೆದುಕೊಂಡರು. 2025ರಲ್ಲಿ ಕೊಲಂಬೊದಲ್ಲಿ ನಡೆದ ಅಂಧರ ಮಹಿಳಾ ಟಿ20 ವಿಶ್ವಕಪ್ ಫೈನಲ್‌ನಲ್ಲಿ ದೀಪಿಕಾ ನೇತೃತ್ವದಲ್ಲಿ ನೇಪಾಳ ತಂಡವನ್ನು ಭಾರತ ಸೋಲಿಸಿ ಪ್ರಶಸ್ತಿ ಗೆದ್ದಿದೆ. ಇಡೀ ಟೂರ್ನಿಯಲ್ಲಿ 5 ಪಂದ್ಯಗಳನ್ನು ಆಡಿ 246 ರನ್ ಗಳಿಸಿದ ದೀಪಿಕಾ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 91 ರನ್ ಬಾರಿಸಿದ್ದರು. ದೀಪಿಕಾ ಅವರ ಕ್ರೀಡಾ ಸಾಧನೆಗೆ ಸರ್ಕಾರಿ ಕೆಲಸವನ್ನು ನೀಡಲಾಗಿದೆ. ಈ ಮೂಲಕ ಕ್ರೀಡಾ ಕೋಟಾದಡಿ ಸರ್ಕಾರಿ ಉದ್ಯೋಗ ಪಡೆದ ಮೊದಲ ಅಂಧ ಮಹಿಳಾ ಕ್ರಿಕೆಟರ್ ಎನಿಸಿಕೊಂಡಿದ್ದಾರೆ.

ಸ್ಮೃತಿ ಮಂಧಾನ: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಪ್ರಮುಖ ಆರಂಭಿಕ ಆಟಗಾರ್ತಿ ಮತ್ತು ಉಪನಾಯಕಿ ಸ್ಮತಿ ಮಂಧಾನ ಡಿಸೆಂಬರ್‌ನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10,000 ರನ್‌ಗಳ ಮೈಲಿಗಲ್ಲನ್ನು ತಲುಪಿದ್ದಾರೆ. ಈ ಸಾಧನೆಯನ್ನು ಕೇವಲ 281 ಇನಿಂಗ್ಸ್‌ಗಳಲ್ಲಿ ಪೂರೈಸುವ ಮೂಲಕ ಮಿತಾಲಿ ರಾಜ್ ಅವರ ದಾಖಲೆಯನ್ನು ಮುರಿದು, ವಿಶ್ವದ ಅತಿ ವೇಗದ ಮಹಿಳಾ ಕ್ರಿಕೆಟರ್ ಎನಿಸಿಕೊಂಡಿದ್ದಾರೆ. 2025ರಲ್ಲಿ ಒಟ್ಟು 1,703 ರನ್ ಗಳಿಸುವ ಮೂಲಕ, ಒಂದು ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮಹಿಳಾ ಕ್ರಿಕೆಟರ್ ಎಂಬ ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ. 2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡದ ಉಪನಾಯಕಿಯಾಗಿ ಸ್ಮೃತಿ ಪ್ರಮುಖ ಪಾತ್ರ ವಹಿಸಿದ್ದರು. ಈ ಟೂರ್ನಿಯನ್ನು ಭಾರತದ ಪರವಾಗಿ ಆಡಿ ಅತಿ ಹೆಚ್ಚು ರನ್ (434 ರನ್) ಗಳಿಸಿದ ಆಟಗಾರ್ತಿಯಾಗಿದ್ದರು.

ಜಾಹ್ನವಿ ಜಿಂದಾಲ್: ಚಂಡೀಗಢ ಮೂಲದ ಫ್ರೀಸ್ಟೈಲ್ ಸ್ಕೇಟರ್(freestyle skater) ಆಗಿರುವ ಜಾಹ್ನವಿ ಜಿಂದಾಲ್ 2025ರ ನವೆಂಬರ್‌ನಲ್ಲಿ ಫ್ರೀಸ್ಟೈಲ್ ಸ್ಕೇಟಿಂಗ್‌ನಲ್ಲಿ ಒಟ್ಟು 11 ಗಿನ್ನೆಸ್ ವಿಶ್ವ ದಾಖಲೆಗಳನ್ನು ನಿರ್ಮಿಸಿದ್ದಾರೆ. ಈ ಮೂಲಕ ಭಾರತದ ಅತಿ ಹೆಚ್ಚು ಗಿನ್ನೆಸ್ ದಾಖಲೆ ಹೊಂದಿರುವ ಕಿರಿಯ ಕ್ರೀಡಾಪಟು ಎನಿಸಿಕೊಂಡಿದ್ದಾರೆ. 2025ರ ಜುಲೈನಲ್ಲಿ ಅವರು 5 ದಾಖಲೆಗಳನ್ನು ನಿರ್ಮಿಸಿದ್ದು, ನವೆಂಬರ್‌ನಲ್ಲಿ ಮತ್ತೆ 6 ಹೊಸ ದಾಖಲೆಗಳನ್ನು ತಮ್ಮ ಪಟ್ಟಿಗೆ ಸೇರಿಸಿಕೊಂಡಿದ್ದಾರೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




