ಕಾಲಿವುಡ್‌ನ ಬಹುಬೇಡಿಕೆಯ ನಟ ‘ದಳಪತಿ ವಿಜಯ್‘, ಸ್ಟಾರ್ ನಟರಾಗಿ ಮಿಂಚುತ್ತಿರುವಾಗಲೇ ರಾಜಕೀಯಕ್ಕೆ ಧುಮುಕಿದ್ದಾರೆ. 2024ರಲ್ಲಿ ತಮ್ಮದೇ ಆದ ಸ್ವಂತ ‘ತಮಿಳಗ ವೆಟ್ರಿ ಕಳಗಂ’(ಟಿವಿಕೆ) ಎಂಬ ರಾಜಕೀಯ ಪಕ್ಷವನ್ನು ಘೋಷಿಸಿ, ರಾಜಕೀಯ ರ್ಯಾಲಿ, ಸಮಾವೇಶಗಳನ್ನು ನಡೆಸುತ್ತಿದ್ದಾರೆ. ಇನ್ನೆನೂ ಕೆಲವೇ ತಿಂಗಳಿನಲ್ಲಿ ಬರುವ ವಿಧಾನಸಭಾ ಚುನಾವಣೆಯಲ್ಲಿ ಇತಿಹಾಸ ಬರೆಯಲು ಸಿದ್ಧತೆ ನಡೆಸಿದ್ದಾರೆ.
ತಮಿಳುನಾಡಿನಲ್ಲಿ ಸಿನಿಮಾ ಮತ್ತು ರಾಜಕೀಯ ಬಹುಕಾಲದಿಂದಲೂ ಬೆಸೆದುಕೊಂಡು ಬಂದಿವೆ. ಸಿನಿಮಾ ನಟರಾಗಿ ಮಿಂಚಿದ ಅನೇಕರು ರಾಜಕಾರಣದಲ್ಲಿಯೂ ತಮ್ಮ ಛಾಪು ಮೂಡಿಸಿದ್ದಾರೆ. ವಿಶೇಷವಾಗಿ ಎಂಜಿಆರ್ 10 ವರ್ಷಗಳು, ಎಂ.ಕರುಣಾನಿಧಿ 19 ವರ್ಷಗಳು, ಜಯಲಲಿತಾ 14 ವರ್ಷಗಳು ಮುಖ್ಯಮಂತ್ರಿಯಾಗಿ ತಮಿಳುನಾಡಿನ ಆಡಳಿತದ ಚುಕ್ಕಾಣಿಯನ್ನು ಹಿಡಿದಿದ್ದಾರೆ. ಈಗ, ಇವರ ಸಾಲಿನಲ್ಲಿ ನಿಲ್ಲಲು ವಿಜಯ್ ಹಂಬಲಿಸುತ್ತಿದ್ದಾರೆ.
ತಮಿಳುನಾಡಿನ ರಾಜಕೀಯಕ್ಕೆ ವಿಜಯ್ ಅವರ ಎಂಟ್ರಿ ಆಡಳಿತರೂಢ ಡಿಎಂಕೆ ಸೇರಿದಂತೆ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರಕ್ಕೂ ಭಯ ಬಂದಂತಿದೆ. ಅವರ ಕೊನೆಯ ಸಿನಿಮಾ ಎಂದು ಘೋಷಿಸಿರುವ ‘ಜನ ನಾಯಗನ್’ ಬಿಡುಗಡೆಗೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ(CBFC) ಸೆನ್ಸಾರ್ ಪ್ರಮಾಣಪತ್ರ ನೀಡದೆ ಸತಾಯಿಸುತ್ತಿದೆ. ಪ್ರಪಂಚದಾದ್ಯಂತ ಬಹುಬೇಡಿಕೆಯ ನಟ ‘ವಿಜಯ್’ನ ಕೊನೆಯ ಚಿತ್ರವನ್ನು ಕೆವಿಎನ್ ನಿರ್ಮಾಣ ಸಂಸ್ಥೆ, ಸುಮಾರು 500 ಕೋಟಿಯನ್ನು ಖರ್ಚು ಮಾಡಿ ರಾಜಕೀಯಕ್ಕೆ ಮೆಟ್ಟಿಲನ್ನಾಗಿ ಮಾಡುವ ನಿಟ್ಟಿನಲ್ಲಿ ಕಥಾವಸ್ತು ಹೆಣೆಯಲಾಗಿತ್ತು.
ಇದನ್ನು ಓದಿ : ತಮಿಳುನಾಡು ಚುನಾವಣೆ | ದಳಪತಿ ವಿಜಯ್ ಸೆಳೆಯಲು ಖೆಡ್ಡಾ ತೋಡಿತೇ ಬಿಜೆಪಿ?
ಡಿಸೆಂಬರ್ 18, 2025ರಂದು ಸೆನ್ಸಾರ್ ಮಂಡಳಿಗೆ ಚಿತ್ರವನ್ನು ಸಲ್ಲಿಸಲಾಗಿತ್ತು. ಅದರಲ್ಲಿ ಗುಂಡಿನ ದಾಳಿ, ಸ್ಫೋಟ, ಚೂರಿ ಇರಿತ, ರಕ್ತಪಾತ ಅತಿಯಾಗಿದೆ ಎಂದು ತಕರಾರು ತೆಗೆದ ಸೆನ್ಸಾರ್ ಮಂಡಳಿ- ಪರಿಶೀಲನಾ ಸಮಿತಿ ಹೇಳಿತು. ಹೇಳಿರುವುದನ್ನೆಲ್ಲ ಚಿತ್ರತಂಡ ಕಟ್ ಮಾಡಿ ಕೊಟ್ಟರೂ, 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಇದು ಸೂಕ್ತವಲ್ಲ ಎಂಬ ಕಾರಣ ಕೊಟ್ಟ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಪ್ರಮಾಣಪತ್ರ ನೀಡಲು ನಿರಾಕರಿಸಿತು. ಚಿತ್ರ ನಿರ್ಮಾಪಕರು ಹೈಕೋರ್ಟ್ ಮೆಟ್ಟಿಲು ಹತ್ತಿದ್ದೂ ಆಯಿತು. ಮದ್ರಾಸ್ ಹೈಕೋರ್ಟ್, ‘ಇದು ಅಪಾಯಕಾರಿ ಪ್ರವೃತ್ತಿ’ ಎಂದು ಸೆನ್ಸಾರ್ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡು, ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ವಿತರಿಸುವಂತೆ ಆದೇಶಿಸಿದೆ.
ಇಷ್ಟಾದರೂ ಸೆನ್ಸಾರ್ ಮಂಡಳಿ ಇಲ್ಲಿಯವರೆಗೂ ಪ್ರಮಾಣಪತ್ರ ಕೊಟ್ಟಿಲ್ಲ. ಇವೆಲ್ಲಕ್ಕೂ ಕಾರಣಗಳನ್ನು ಹುಡುಕುತ್ತಾ ಹೋದರೆ, ವಿಜಯ್ ಸಿನಿಮಾ ನಟನಿಗಿಂತ ರಾಜಕಾರಣಿಯಾಗಿ ತಮಿಳುನಾಡಿಲ್ಲಿ ಸೃಷ್ಟಿಸಿರುವ ಅಲೆ ಎಲ್ಲರಿಗೂ ನಿದ್ದೆಗೆಡಿಸಿದೆ. ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ(CBFC) ಸೆನ್ಸಾರ್ ಪ್ರಮಾಣಪತ್ರ ಕೊಡದಿರುವುದು ಸಿನಿಮಾ ಸಂಸ್ಕೃತಿಯ ಮೇಲೆ ಮಾಡುತ್ತಿರುವ ಪ್ರಹಾರವೇ ಆಗಿದೆ. ಇದರ ಹಿಂದೆ ಕೇಂದ್ರದಲ್ಲಿರುವ ನರೇಂದ್ರ ಮೋದಿ ಸರ್ಕಾರ ನೇರ ಕಾರಣವಾಗಿದೆ.
2014ರಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಒಂದು ರೀತಿಯ ಮಾದರಿಯನ್ನು ಗಮನಿಸಬಹುದು. ದೇಶದಲ್ಲಿರುವ ಎಲ್ಲಾ ಸಂಸ್ಥೆಗಳ ಮೇಲೆ ಅಧಿಕಾರ ಸಾಧಿಸುವ ಜೊತೆಗೆ, ಅದರ ಸ್ವಾಯತ್ತತೆಯನ್ನು ಕಿತ್ತುಕೊಂಡು ಸರ್ಕಾರದ ಪರವಾಗಿ, ಒಂದು ಪಕ್ಷದ ಪರವಾಗಿ ಅಥವಾ ಒಂದು ಸಿದ್ಧಾಂತದ ಪರವಾಗಿ ಗುರಾಣಿ ತರ ಬಳಸಿಕೊಳ್ಳುತ್ತಿರುವುದನ್ನು ಗಮನಿಸಬಹುದು. ಹಣಕಾಸಿನ ಸಂಸ್ಥೆಗಳಾಗಿರಬಹದು, ತನಿಖಾ ಸಂಸ್ಥೆಗಳಾಗಿರಬಹುದು, ಸಿಬಿಐ, ಇ.ಡಿ ಹೀಗೆ ಎಲ್ಲಾ ಸಂಸ್ಥೆಗಳಲ್ಲೂ ಅವರ ಕಾರ್ಯಕರ್ತರನ್ನು ಅಥವಾ ಅವರ ಸಿದ್ಧಾಂತಕ್ಕೆ ಒಪ್ಪುವವರನ್ನು ಕೂರಿಸಿ, ಅವರ ಮೂಲಕ ಸಂಸ್ಥೆಗಳನ್ನು ನೈತಿಕವಾಗಿ ದಿವಾಳಿಯಾಗುವ ಮಟ್ಟಕ್ಕೆ ತಲುಪಿಸಿದ್ದಾರೆ.
ಇವೆಲ್ಲದರ ಹೊಸ ಉದಾಹರಣೆ ಅಂದರೇ, ‘ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ'(CBFC). ಈ ಸೆನ್ಸಾರ್ ಮಂಡಳಿಯಲ್ಲಿಯೂ ಕೂಡ ಪಕ್ಷದ ಕಾರ್ಯಕರ್ತರನ್ನು ಅಥವಾ ಅವರ ಸಿದ್ಧಾಂತಕ್ಕೆ ಒಪ್ಪುವವರನ್ನೋ ತಮ್ಮ ಚೇಲಾಗಳ ರೀತಿ ಬಳಸಿಕೊಳ್ಳುಲಾಗುತ್ತಿದೆ. ಇದರ ಮೂಲಕ ಮನರಂಜನಾ ಕ್ಷೇತ್ರವನ್ನು ಕೂಡ ನಿಯಂತ್ರಣ ಮಾಡಲು ಪ್ರಯತ್ನಿಸುತ್ತಿದೆ. ಕೇವಲ ಸಿನಿಮಾಗೆ ಮಾತ್ರವಲ್ಲ, ರಂಗಭೂಮಿ ಕ್ಷೇತ್ರದಲ್ಲಿಯೂ ತಮ್ಮ ಸಿದ್ಧಾಂತ ಒಪ್ಪುವವರನ್ನು ಕೂರಿಸಿ ತಮಗೆ ಬೇಕಾದ ರೀತಿಯಲ್ಲಿ ನಾಟಕಗಳನ್ನು ತಯಾರಿಸಿ ಪ್ರದರ್ಶಿಸಿರುವುದನ್ನು ಗಮನಿಸಬಹುದು. ಉದಾಹರಣೆಗೆ ಅಡ್ಡಂಡ ಕಾರ್ಯಪ್ಪ ಎನ್ನುವ ವ್ಯಕ್ತಿ ಮೈಸೂರು ರಂಗಾಯಣದ ನಿರ್ದೇಶಕರಾಗಿ ‘ಟಿಪ್ಪುವಿನ ನಿಜಕನಸುಗಳು’ ಎಂಬ ನಾಟಕ ತಯಾರಿಸಿದ್ದು. ಇತಿಹಾಸವನ್ನೇ ತಿರುಚಿದ್ದು ಎಲ್ಲರಿಗೂ ಗೊತ್ತಿರುವಂತದ್ದೇ.
ಇದನ್ನು ಓದಿ : ತಮಿಳುನಾಡು ರಾಜಕಾರಣ | ಪ್ರಾದೇಶಿಕತೆ ಮತ್ತು ರಾಷ್ಟ್ರೀಯ ಪಕ್ಷಗಳ ಪಡಿಪಾಟಲು
ಅದೇ ರೀತಿ ಪ್ರೊಪಗಂಡ ತುಂಬಿದ ಅನೇಕ ಸಿನಿಮಾಗಳು ಕೇಂದ್ರ ಸರ್ಕಾರವನ್ನು ಮೆಚ್ಚಿಸಲು ಬಂದಿರುವುದನ್ನು ಗಮನಿಸಬಹುದು. ಉದಾಹರಣೆಗೆ ಕಾಶ್ಮೀರ ಫೈಲ್ಸ್(2022), ದ ಕೇರಳ ಸ್ಟೋರಿ(2023), ಆರ್ಟಿಕಲ್ 370(2024), ಪಿಎಂ ನರೇಂದ್ರ ಮೋದಿ(2019), ದ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್(2019), ಉರಿ(2019), ಸ್ವಾತಂತ್ರ್ಯ ವೀರ ಸಾವರ್ಕರ್(2024), ಜಹಾಂಗೀರ್ ನ್ಯಾಶನಲ್ ಯೂನಿವರ್ಸಿಟಿ(2024), ಸಬರಮತಿ ರಿಪೋರ್ಟ್(2024), ರಾಮಸೇತು(2024) ಧುರಂಧರ್(2025) ಹೀಗೆ ಮುಂತಾದ ಪ್ರೊಪಗಂಡ ಸಿನಿಮಾಗಳು ಬಿಡುಗಡೆಯಾದವು. ಇವೆಲ್ಲವನ್ನೂ ಒಟ್ಟುಗೂಡಿಸಿ ಒಂದು ಸಿನಿಮಾ ಮಾಡಿದರೂ ಅದರ ಕತೆ, ಚಿತ್ರಕತೆ ಮತ್ತು ಪರಿಣಾಮದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಎಲ್ಲವೂ ಒಂದೇ ಸಿದ್ಧಾಂತವನ್ನು ಹೇಳುವಲ್ಲಿ ಅಚ್ಚು ಹೊಡೆದಿವೆ.
ಇತಿಹಾಸವನ್ನೇ ತಿರುಚಿ ಸಿನಿಮಾ ತಯಾರಿಸಿದ್ದರೂ CBFC ಯಾವುದೇ ತಕರಾರು ತೆಗೆಯದೆ ಬಿಡುಗಡೆಗೆ ಅನುಮತಿ ನೀಡಿರುವುದನ್ನು ಗಮನಿಸಬಹುದು. ಇದಕ್ಕೆ ಉದಹಾರಣೆಯಾಗಿ, ಇತ್ತೀಚೆಗೆ ಬಿಡುಗಡೆಯಾದ ಆದಿತ್ಯ ಧರ್ ನಿರ್ದೇಶನದ ‘ಧುರಂದರ್’. ಬಹುತೇಕ ಚಿತ್ರವೇ ರಕ್ತ, ಕ್ರೌರ್ಯ ಮತ್ತು ಸುಳ್ಳು ಇತಿಹಾಸದಲ್ಲಿ ಮುಳುಗಿ ಹೋಗಿತ್ತು. ಆ ಚಿತ್ರದಲ್ಲಿ ಪಾಕಿಸ್ತಾನವೂ ಇತ್ತು. ಇದ್ಯಾವುದು ಕೇಂದ್ರ ಸೆನ್ಸಾರ್ ಮಂಡಳಿಗೆ ಕಾಣದೆ ಹೋಗಿದೆ.
ವಿಶೇಷವಾಗಿ ಚಿತ್ರದಲ್ಲಿ ಅಜಯ್ ಸನ್ಯಾಲ್ (ನಿಜ ಜೀವನದ ಎನ್‌ಎಸ್‌ಎ ಅಜಿತ್ ಡೋವಲ್‌ನ ಪ್ರತಿರೂಪ) ಎಂಬ ಪಾತ್ರವನ್ನು ನಟ ಆರ್.ಮಾಧವನ್ ಅಭಿನಯಿಸಿದ್ದಾರೆ. ಸಿನಿಮಾದಲ್ಲಿ ಇಂಟೆಲಿಜೆನ್ಸ್ ಬ್ಯೂರೋದ ಮುಖ್ಯಸ್ಥರಾಗಿರುವ ಇವರು ʼಕಾರ್ಯಾಂಗದಲ್ಲಿ ಭ್ರಷ್ಟಾಚಾರವಿರುವ ಕಾರಣ ನಕಲಿ ನೋಟುಗಳ ಕುರಿತು ತನ್ನ ಮೇಲಧಿಕಾರಿಗಳಿಗೆ ಹೇಳಿ ಉಪಯೋಗವಿಲ್ಲʼ ಎಂದು ತನ್ನ ಸಹೋದ್ಯೋಗಿಗೆ ಹೇಳುತ್ತಾರೆ. ಅದು ಯುಪಿಎ 2 ಆಡಳಿತದಲ್ಲಿದ್ದ ಸುಮಾರು 2008ರ ಕಾಲಘಟ್ಟ. ಮುಂದುವರೆದು ʼನಮ್ಮನ್ನು ಬೆಂಬಲಿಸುವ ಸರ್ಕಾರ ಬೇಕು, ಅದು ಈಗಿಲ್ಲʼ ಅಂತ ಹೇಳುವುದರ ಮೂಲಕ ನೇರವಾಗಿ ಮನಮೋಹನ್ ಸಿಂಗ್ ಸರ್ಕಾರವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಾರೆ. ನಂತರ ʼಈ ದಾಖಲೆಯನ್ನು ಸುರಕ್ಷಿತವಾಗಿಡು, ಯಾರಿಗೆ ಗೊತ್ತು. ಭವಿಷ್ಯದಲ್ಲಿ ಭ್ರಷ್ಟಾಚಾರದ ವಿರುದ್ಧ ಕೆಲಸ ಮಾಡುವ ಸರ್ಕಾರ, ರಾಜಕಾರಣಿ ಬರಬಹುದುʼ ಎಂದು ಹೇಳುವುದರ ಮೂಲಕ ಐದು ನಿಮಿಷಗಳ ದೃಶ್ಯದಲ್ಲಿ ʼಕಾಂಗ್ರೆಸ್ ಭ್ರಷ್ಟ, ಮೋದಿ ಸ್ವಚ್ಛʼ ಎನ್ನುವ ನೆರೇಶನ್ ಕಟ್ಟುತ್ತಾರೆ. ಇದನ್ನೇ ಪ್ರೊಪಗಂಡ ಅನ್ನದೇ ಬೇರೆ ಏನೆನ್ನಬಹುದು.
ಸಿನಿಮಾ ಎಂಬ ಪ್ರಭಾವಶಾಲಿ ಮಾಧ್ಯಮವನ್ನು ಬಳಸಿಕೊಂಡು ಇತಿಹಾಸವನ್ನು ತಿರುಚಿ, ನೈಜ ಘಟನೆಗಳನ್ನು ತಪ್ಪಾಗಿ ಬಿಂಬಿಸಿ ಆ ಮೂಲಕ ಸುಳ್ಳುಗಳನ್ನು ಬಿತ್ತುತ್ತಿರುವುದು ನಿರ್ದೇಶಕ ಅದಿತ್ಯ ಧರ್ ಅವರ ಸಾಧನೆಯಾಗಿದೆ. ಬಿಜೆಪಿ ಸರ್ಕಾರವನ್ನು ದೇಶಭಕ್ತಿಯ ಸ್ಥಾನದಲ್ಲಿ ನಿಲ್ಲಿಸುವ ಧಾವಂತದಲ್ಲಿ ಕಾಂಗ್ರೆಸ್ ಪಕ್ಷವನ್ನು ಶಿಲುಬೆಗೇರಿಸುವ ಪ್ರಯತ್ನ ಮಾಡಿದ್ದಾರೆ. ಉದ್ದೇಶಪೂರ್ವಕವಾಗಿಯೇ ಸಿನಿಮಾದಲ್ಲಿ ನೈಜ ಚಿತ್ರಣಗಳನ್ನು ಬಳಸಿಕೊಳ್ಳಲಾಗಿದೆ. ಇದರ ಮೂಲಕ ಜನರ ಭಾವನೆಗಳನ್ನು ಕೆರಳಿಸುವಲ್ಲಿ ಸಿನಿಮಾ ಯಶಸ್ವಿಯಾಗಿದೆ. ದ್ವೇಷವನ್ನೇ ಸಾರುವ, ರಕ್ತ, ಹಿಂಸೆಯನ್ನು ಪ್ರಚೋದಿಸುವ ಸಿನಿಮಾಗಳು ಬಂದರೆ CBFC ಯಾವುದೇ ತಕರಾರು ತೆಗೆಯದೆ ಬಿಡುಗಡೆಗೆ ಪ್ರಮಾಣ ಪತ್ರವನ್ನು ನೀಡುತ್ತದೆ.
ಸಿನಿಮಾ ಎನ್ನುವ ಕಲೆಯು ಸಾರ್ವಜನಿಕವಾಗಿ ಒಳ್ಳೆಯ ಅಥವಾ ಕೆಟ್ಟ ರೀತಿಯಲ್ಲಿ ಪ್ರಚೋದಿಸುವಂತ ಸಾಧನ. ಸಿನಿಮಾ ಎಂಬ ಕಲೆಯಲ್ಲಿ ಜನರ ಭಾವನೆಗಳ ಪ್ರತಿಬಿಂಬವನ್ನು ಸಹ ಕಾಣಬಹುದು. ಸಿನಿಮಾಗಳು ಸತ್ಯದ ಪರವಾಗಿರಬೇಕು. ಆದರೆ ಸಿನಿಮಾಗಳನ್ನು ಕೇಂದ್ರ ಸೆನ್ಸಾರ್ ಮಂಡಳಿಗಳು ಪ್ರೊಪಗಂಡ ರೀತಿಯಲ್ಲಿ ಬಳಸಿಕೊಳ್ಳಬಾರದು. ಹಿಂಸೆಯನ್ನು, ಸುಳ್ಳನ್ನು ಹೇಳುವ ‘ಧುರಂದರ್’ ಸಿನಿಮಾಗೂ, ರಾಜಕೀಯ ಕಥಾಹಂದರವನ್ನು ಹೊಂದಿರುವ ‘ಜನ ನಾಯಗನ್’ ಸಿನಿಮಾಗೂ ವ್ಯತ್ಯಾಸಗಳು ಹಲವು. ಉದ್ದೇಶ ಪೂರ್ವಕವಾಗಿ ಸಿನಿಮಾಗಳ ಬಿಡುಗಡೆಯ ಮೇಲೆ ಕೇಂದ್ರ ಸರ್ಕಾರ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಮಾಡುತ್ತಿರುವ ದಾಳಿ ಖಂಡನೀಯ.





