ರೌಡಿಸಂಗೆ ಸಂಬಂಧಿಸಿದ ಅನೇಕ ಸಿನಿಮಾಗಳು ಕನ್ನಡದಲ್ಲಿ ಬಂದಿವೆ. ಶಿವರಾಜ್‌ಕುಮಾರ್ ನಟನೆಯ ʼಓಂʼ ಚಿತ್ರವನ್ನು ರೌಡಿಸಂನ ಲ್ಯಾಂಡ್‌ಮಾರ್ಕ್ ಚಿತ್ರವೆಂದು ಅನೇಕ ಸಂದರ್ಭದಲ್ಲಿ ಹೇಳಿದ್ದೇವೆ. ಬೆಂಗಳೂರಿನ ಭೂಗತ ಜಗತ್ತಿನಲ್ಲಿದ್ದ ಹಲವಾರು ಜನರು ʼಓಂʼ ಸಿನಿಮಾದಲ್ಲಿ ತಾವೇ ಬಂದು ಅಭಿನಯಿಸಿದ್ದರು. ಬೆಂಗಳೂರಿನ ರೌಡಿಸಂ, ಪೊಲೀಸ್ ವ್ಯವಸ್ಥೆ, ಜೈಲಿನಲ್ಲಿ ಅನುಭವಿಸುವ ಯಾತನೆ, ಜೈಲಿನಲ್ಲಿ ನಡೆಯುವ ಅವ್ಯವಹಾರಗಳು, ಜೈಲಿನಿಂದ ಬಿಡುಗಡೆಯಾದ ಮೇಲೂ ʼಆರೋಪಿʼ ಎಂಬ ಹಣೆಪಟ್ಟಿಯನ್ನು ಕಳಚಿ ಬಿಡಲಾಗದ ಪರಿಸ್ಥಿತಿ ಇವೆಲ್ಲವೂ ಹೇಳುವ ಸಿನಿಮಾಗಳ ಸಾಲಿಗೆ “ಜೆಸಿ ದಿ ಯೂನಿವರ್ಸಿಟಿ” ಬಂದು ನಿಂತಿದೆ.
ಕಾಲೇಜು ವಿದ್ಯಾರ್ಥಿ ʼಮ್ಯಾಡಿʼ ಓರ್ವ ಮುಗ್ಧ ಹುಡುಗ. ಆತ ಸ್ನೇಹಕ್ಕೆ ಬೆಲೆ ಕೊಡುವ ಜೊತೆಗೆ ಕುಟುಂಬದಲ್ಲಿ ತುಂಬಾ ಪ್ರೀತಿಯಿಂದ ಬೆಳೆದ ಹುಡುಗ. ನ್ಯಾಯ ಸಿಗದೇ ಇದ್ದಾಗ ನ್ಯಾಯಕ್ಕಾಗಿ ಹೋರಾಡುವ ವ್ಯಕ್ತಿತ್ವವೇ ʼಮ್ಯಾಡಿʼ. ಒಮ್ಮೆ ಆತನ ಗೆಳತಿಗೆ ಆಗುವ ಅವಮಾನದಿಂದ ಸೇಡು ತೀರಿಸಿಕೊಳ್ಳಲು ಹೋಗುವ ಮ್ಯಾಡಿ ಪೊಲೀಸರಿಗೆ ಸಿಕ್ಕಿ ಬಿದ್ದು ಅಚಾನಕ್ಕಾಗಿ ಜೈಲಿಗೆ ಹೋಗುತ್ತಾನೆ. ಸಣ್ಣ ಕೇಸ್‌ನಲ್ಲಿ ಜೈಲಿಗೆ ಹೋಗುವ ಹೀರೋ ಮೂರು ದಿನಗಳು ಜೈಲಿನಲ್ಲಿಯೇ ಕಳೆಯುತ್ತಾನೆ. ಆತ ಇದ್ದ ಮೂರು ದಿನವೂ ಅವನಿಗೆ ರೌಡಿಸಂನ ಬೇರೆಯದೇ ಜಗತ್ತು ತೆರೆದುಕೊಳ್ಳುತ್ತದೆ. ಜೈಲಿನಲ್ಲಿ ನಡೆಯುವ ಅವ್ಯವಹಾರಗಳು ಕಣ್ಣಾರೆ ಕಾಣುತ್ತಾನೆ. ಅನೇಕ ರೌಡಿಗಳನ್ನು ಪರಿಚಯ ಮಾಡಿಕೊಳ್ಳುತ್ತಾನೆ.
ಒಮ್ಮೆ,ಯಾವುದೋ ಕಾರಣಕ್ಕೆ ಜೈಲಿಗೆ ಹೋಗಿ ಬಂದ ವ್ಯಕ್ತಿಯನ್ನು ಸಾಮಾನ್ಯ ಮನುಷ್ಯರಂತೆ ನೋಡುವುದು ಸಮಾಜದಲ್ಲಿ ಇಲ್ಲ ಎನ್ನುವುದೇ ದುರಂತ. ಆತನಿಗೆ ರೌಡಿ ಪಟ್ಟ ಕೊಡಲಾಗುತ್ತದೆ. ಮ್ಯಾಡಿ ಮತ್ತೆ ಸೇಡು ತೀರಿಸಿಕೊಳ್ಳುವ ಸಲುವಾಗಿ ಜೈಲಿನಲ್ಲಿ ಪರಿಚಯವಾಗಿದ್ದವರ ಜೊತೆ ಹೋಗುತ್ತಾನೆ. ಇಡೀ ಬೆಂಗಳೂರು ಭೂಗತ ಜಗತ್ತಿಗೆ ದೊರೆ ಎನಿಸಿಕೊಂಡಿದ್ದ ರೌಡಿಯನ್ನು ಕ್ಷಣದಲ್ಲಿ ಹೊಡೆದುರುಳಿಸುತ್ತಾನೆ. ಅಲ್ಲಿಂದ ಅವರ ರೌಡಿಸಂ ಕೆರಿಯರ್ ಆರಂಭವಾಗುತ್ತದೆ.
ಸಾಮಾನ್ಯವಾಗಿ ಕಾಲೇಜಿನಲ್ಲಿ ಓದುವಾಗ ಎಲ್ಲರಿಗೂ ಚೆನ್ನಾಗಿ ಕಾಣಬೇಕು, ಯಾರೂ ಅವಮಾನ ಮಾಡಬಾರದು ಎಂಬ ಆಲೋಚನೆ ಇರುತ್ತದೆ. ತನಗೆ ಅವಮಾನವಾದರೆ ಹೇಗಾದರೂ ಮಾಡಿ ಸೇಡು ತೀರಿಸಿಕೊಳ್ಳಬೇಕೆಂಬ ಹಟವೂ ಬಂದಿರುತ್ತದೆ. ಎಷ್ಟೋ ಸಂದರ್ಭದಲ್ಲಿ ಅವಮಾನವೇ ರೌಡಿಸಂಗೆ ಕಾರಣವಾಗುತ್ತದೆ. ಅದೇ ರೀತಿಯ ಕಥೆಯಿರುವ ಚಿತ್ರವೇ ಜೆಸಿ ದಿ ಯೂನಿವರ್ಸಿಟಿ.
ಜೆಸಿ ಅಂದರೆ ಜ್ಯೂಡಿಶಿಯಲ್ ಕಸ್ಟಡಿ. ಹಾಗಂತ ಇಡೀ ಸಿನಿಮಾ ಜೈಲಿನೊಳಗೆ ನಡೆಯುವುದಿಲ್ಲ. ಜೈಲಿನ ಹೊರಗೂ ಒಳಗೂ ನಡೆಯುವ ಅವ್ಯವಹಾರಗಳು, ಹದಗೆಟ್ಟಿರುವ ವ್ಯವಸ್ಥೆ, ರಾಜಕೀಯ ಎಲ್ಲವೂ ಒಳಗೊಂಡಿರುವ ಸಿನಿಮಾ. ಅದಕ್ಕೆ ಇದನ್ನು ʼಯೂನಿವರ್ಸಿಟಿʼ ಎಂದು ಸಿನಿಮಾದಲ್ಲಿ ಕರೆಯಲಾಗಿದೆ.
ಚಿತ್ರದ ನಾಯಕನಟನಾಗಿರುವ ಸೂರ್ಯ ಪ್ರಖ್ಯಾತ್ ಏಳು ವರ್ಷದ ಹಿಂದೆ ʼನಡುವೆ ಅಂತರವಿರಲಿʼ ಎಂಬ ಪ್ರೇಮ ಕಥೆಯಿಂದ ಬಂದ ಚಾಕೊಲೇಟ್ ಬಾಯ್ ಈಗ ಎಲ್ಲಾ ರೀತಿಯ ಪಾತ್ರಗಳನ್ನು ನಿರ್ವಹಿಸಬಲ್ಲಂತಹ ನಟನಾಗಿ ಹೊರಹೊಮ್ಮಿದ್ದಾರೆ. ರೌಡಿಸಂನಲ್ಲಿ ʼಎಳೆ ರೌಡಿʼ ಹೇಗೆ ಮಾಸ್ ಅವತಾರದಲ್ಲಿ ಕಾಣಬಹುದು ಎಂಬುದಕ್ಕೆ ಪ್ರಖ್ಯಾತ್ ಸಾಕ್ಷಿಯಾಗಿದ್ದಾರೆ. ಒಳ್ಳೆಯ ನಟನೆಯ ಮೂಲಕ ಕನ್ನಡ ಚಿತ್ರರಂಗದಲ್ಲಿ ಗಟ್ಟಿಯಾಗಿ ನಿಲ್ಲಬಹುದಾದ ಭರವಸೆಯನ್ನು ಮೂಡಿಸಿದ್ದಾರೆ.
ನಾಯಕ ನಟನಷ್ಟೇ ತೂಕವಿರುವ ಪಾತ್ರವನ್ನು ಅನೇಕರು ನಿರ್ವಹಿಸಿದ್ದಾರೆ. ತಂದೆ-ಮಗನ ಸಂಬಂಧದ ಬಗ್ಗೆಯೂ ಹೇಳುವ ಜೆಸಿಯಲ್ಲಿ ತಂದೆಯ ಪಾತ್ರದಲ್ಲಿ ರಂಗಾಯಣ ರಘು ಪ್ರೇಕ್ಷಕರನ್ನು ಭಾವನಾತ್ಮಕವಾಗಿ ಹಿಡಿದುಡುತ್ತಾರೆ. ಮಗ ದಾರಿ ತಪ್ಪಿ ರೌಡಿಸಂಗೆ ಹೋದಾಗ, ಮಗನನ್ನು ಮತ್ತೆ ಸಾಮಾನ್ಯನಂತೆ ಬದುಕಲು ಕರೆ ತರುವಲ್ಲಿರುವ ದೃಶ್ಯಗಳು ಪ್ರೇಕ್ಷಕರನ್ನು ಇನ್ನಷ್ಟು ದುಃಖಿತರನ್ನಾಗಿ ಮಾಡುತ್ತದೆ.
ಚೊಚ್ಚಲ ಸಿನಿಮಾದಲ್ಲಿ ನಾಯಕ ನಟಿಯಾಗಿರುವ ಭಾವನಾ ಎಸ್ ರೆಡ್ಡಿ ತಮ್ಮ ಅಭಿನಯನದ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ಪ್ರಮುಖ ಪಾತ್ರದಲ್ಲಿ ಥ್ರಿಲರ್ ಮಂಜು ಅಭಿನಯಿಸಿದ್ದಾರೆ.
ಈ ಸಿನಿಮಾವನ್ನು ಡಾಲಿ ಧನಂಜಯ್ ಅವರ ಡಾಲಿ ಪಿಚ್ಚರ್ಸ್ ನಿರ್ಮಾಣ ಮಾಡುತ್ತಿದ್ದು, ಚೇತನ್ ಜೈರಾಮ್ ಆಕ್ಷನ್ ಕಟ್ ಹೇಳಿದ್ದಾರೆ. ದೀಪು ಎಸ್ ಕುಮಾರ್ ಅವರ ಸಂಕಲನ ಹಾಗೂ ಕಾರ್ತಿಕ್ ಅವರ ಕ್ಯಾಮೆರಾ ಕೈಚಳಕ ಜೆಸಿ ಸಿನಿಮಾ ಮೂಡಿ ಬರುವಲ್ಲಿ ಸಾಕಷ್ಟು ಶ್ರಮವಿರುವುದು ಕಾಣುತ್ತದೆ. ಒಮ್ಮೆ ನೋಡಿಸಿಕೊಳ್ಳುವ ಚಿತ್ರ ʼಜೆಸಿ ದಿ ಯೂನಿವರ್ಸಿಟಿʼ.





