
ಪ್ರೇಮ್ ನಿರ್ದೇಶನದ ಕೆಡಿ ದ ಡೆವಿಲ್ ಸಿನಿಮಾದ ವಿವಾದಿತ ಹಾಡು ʼಸೆರಗ ಸರ್ಸೆ…ʼ ಈಗ ಬಾಲಿವುಡ್ ಮಂದಿಯ ಟೀಕೆಗೂ ಗುರಿಯಾಗಿದೆ.
ಸರ್ಸೆ ನಿನ್ನ ಸೆರಗ ಹಾಡಿನ ಹಿಂದಿ ವರ್ಷನ್ ಕೇಳಿದ ಕಂಗನಾ ರನೌತ್ ಈ ಹಾಡನ್ನು ಚಿತ್ರತಂಡ ಚೀಪ್ ಗಿಮಿಕ್ ಹಾಗೆ ಬಳಸಿಕೊಂಡಿದೆ ಎಂದು ಟೀಕಿಸಿದ್ದಾರೆ. ಇತ್ತೀಚಿಗೆ ಬಾಲಿವುಡ್ ಸಿನಿಮಾದ ಹಾಡುಗಳು ಎಲ್ಲಾ ಪರಿಮಿತಿ ದಾಟಿದ್ದು ಅಶ್ಲೀಲತೆಯೆ ಇವುಗಳ ಆಧಾರ, ಬಾಲಿವುಡ್ ಪ್ರದರ್ಶಿಸುವ ಇಂತಹ ಅಶ್ಲೀಲತೆಯ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಕಂಗನಾ ಕಿಡಿಕಾರಿದ್ದಾರೆ.
ಅರ್ಮಾನ್ ಅಸಹನೆ: ಇನ್ನು ಬಾಲಿವುಡ್ ಖ್ಯಾತ ಗಾಯಕ ಅರ್ಮಾನ್ ಮಲಿಕ್ ಈ ಹಾಡಿನ ಸಾಹಿತ್ಯ ಮೊದಲ ಬಾರಿ ಕೇಳಿದಾಗ ನಂಬಲಾಗದೆ ಇನ್ನೊಮ್ಮೆ ಪ್ಲೇ ಮಾಡಿ ಕೇಳಿ ಅಚ್ಚರಿಗೊಳಗಾದೆ ಎಂದಿದ್ದಾರೆ. ಇಂದಿನ ಸಿನಿಮಾದ ವಾಣಿಜ್ಯ ಹಾಡುಗಳು ತೀರಾಕೆಳಮಟ್ಟಕ್ಕೆ ತಲುಪಿವೆ. ನನ್ನ ಟೈಮ್ ಲೈನ್‌ನಲ್ಲಿ ಕಾಣಿಸಿಕೊಂಡ ಈ ಹಾಡನ್ನು ಕೇಳಿದ ಬಳಿಕ ನಾನು ಆಘಾತಕ್ಕೆ ಒಳಗಾಗಿದ್ದೇನೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ವಕೀಲರ ಆರೋಪ: ಇನ್ನು ಈ ಹಾಡನ್ನು ಆಲಿಸಿರುವ ವಕೀಲರೊಬ್ಬರು ಹಾಡಿನ ಸಾಹಿತ್ಯ ಮತ್ತು ನೃತ್ಯ ಸಂಯೋಜನೆಯಲ್ಲಿರುವ ಅಶ್ಲೀಲತೆ ಕಂಡು ಬೇಸತ್ತು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯನ್ನು ಸಂಪರ್ಕಿಸಿದ್ದಾರೆ. ಈ ಹಾಡು ಅಪ್ರಾಪ್ತ ವಯಸ್ಕರ ಕೆಟ್ಟ ಪರಿಣಾಮ ಬೀರಲಿದೆ ಎಂದು ಆರೋಪಿಸಿರುವ ಅವರು ಸೋಮವಾರ ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿರುವ ಈ ಹಾಡಿನಲ್ಲಿ “ಅತ್ಯಂತ ಅಶ್ಲೀಲ, ಲೈಂಗಿಕವಾಗಿ ಸೂಚಿಸುವ ಮತ್ತು ಅಶ್ಲೀಲ ಅಭಿವ್ಯಕ್ತಿಗಳು” ಇವೆ ಎಂದು ದೂರುದಾರರು ಆರೋಪಿಸಿದ್ದಾರೆ ಎಂದು ANI ವರದಿ ಮಾಡಿದೆ. ಚಿತ್ರೀಕರಣ ಮತ್ತು ನೃತ್ಯ ಸನ್ನಿವೇಶಗಳು ಪ್ರಚೋದನಕಾರಿ ಮತ್ತು ಅಶ್ಲೀಲತೆಯನ್ನು ಉತ್ತೇಜಿಸುತ್ತವೆ, ಇದರಿಂದಾಗಿ ಸಾರ್ವಜನಿಕ ಸಭ್ಯತೆಗೆ ಭಂಗ ಬರುತ್ತದೆ ಎಂದು ವಾದಿಸಲಾಗಿದೆ.





