ನೂರಾರು ಚಿತ್ರಗಳಲ್ಲಿ ನಟಿಸಿದರೂ ಕೆಲವೇ ಪಾತ್ರಗಳಲ್ಲಿ ಕನ್ನಡಿಗರ ಭಾವಬಿತ್ತಿಯಲ್ಲಿ ಬಿಂಬವಾಗಿ ಎಂ.ಎಸ್. ಉಮೇಶ್ ಅವರು ಉಳಿದಿರುತ್ತಾರೆ. ಹತ್ತು ಕಟ್ಟುವ ಬದಲು ಒಂದು ಮುತ್ತು ಕಟ್ಟು ಎಂಬ ಮಾತು ಇಂಥವರಿಗೆ ಒಪ್ಪುವ ಮಾತು.
ಎಂ ಎಸ್ ಉಮೇಶ್ ಅವರು ಕನ್ನಡದ ಚಲನ ಚಿತ್ರ ಪ್ರೇಕ್ಷಕರಿಗೆ ಅತ್ಯಂತ ಪರಿಚಿತ ಮುಖದ ಕಲಾವಿದರಲ್ಲೊಬ್ಬರು. ಯಾವುದೇ ಕಲಾವಿದನನ್ನು ನೆನೆದಾಗ ಆತ ನಟಿಸಿದ ಪಾತ್ರಗಳು ಕಣ್ಣ ಮುಂದೆ ಕುಣಿದರೆ ಆ ನಟನ ವೃತ್ತಿ ಬದುಕು ಸಾರ್ಥಕ ಪಡೆದಂತೆ. ಆ ದೃಷ್ಟಿಯಲ್ಲಿ ನಮಗೆ ಉಮೇಶ್ ಅವರು ನೆನಪಾದರೆ ಅವರು ವಹಿಸಿದ ಹಲವು ಪಾತ್ರಗಳು ಕಣ್ಣಮುಂದೆ ಸುಳಿದು ನಗೆಯ ಹಬ್ಬವನ್ನೇ ಆಚರಿಸಿಬಿಡುತ್ತವೆ. ಆ ದೃಷ್ಟಿಯಿಂದ ಪೋಷಕರ ಪಾತ್ರಗಳೇ ಸೊರಗುವ ಕಾಲದಲ್ಲಿ ನೂರಾರು ಚಿತ್ರಗಳಲ್ಲಿ ಟೈಪ್‌ಕ್ಯಾಸ್ಟ್ ಆದ ಪಾತ್ರಗಳಲ್ಲೇ ನಟಿಸಿದರೂ ಉಮೇಶ್ ಅವರು ಜನಮಾನಸದಲ್ಲಿ ಉಳಿದಿರುವುದಕ್ಕೆ ವಹಿಸಿದ ಹಲವು ಪಾತ್ರಗಳಿಗೆ ಅವರು ಕೊಟ್ಟ ಮೆರುಗು ಕಾರಣ.
ಟಿ ಎನ್ ಬಾಲಕೃಷ್ಣ, ಟಿ ಆರ್ ನರಸಿಂಹರಾಜು ಅವರಂಥ ಕನ್ನಡದ ಸುಪ್ರಸಿದ್ಧ ಹಾಸ್ಯ/ಪೋಷಕ ನಟರಂತೆ ಉಮೇಶ್ ಅವರೂ ಬಾಲ್ಯದಿಂದಲೇ ವೃತ್ತಿ ರಂಗಭೂಮಿಯಲ್ಲಿ ಅಭಿನಯಿಸಿ ಜನಪ್ರಿಯತೆ ಗಳಿಸಿದವರು. ಹಿರಣ್ಣಯ್ಯ ಮಿತ್ರಮಂಡಲಿ ಮತ್ತು ಗುಬ್ಬಿ ಕಂಪನಿಯಲ್ಲಿ ದಿಗ್ಗಜರ ಅಭಿನಯವನ್ನು ನೋಡುತ್ತಾ ಬೆಳೆದ ಅವರು ತಮ್ಮ ಸ್ಪಷ್ಟ ಭಾಷೆ ಮತ್ತು ಸಂಭಾಷಣೆಯೊಪ್ಪಿಸುವ ಚುರುಕಿನಿಂದ ಪ್ರೇಕ್ಷಕರ ಮನಗೆದ್ದವರು. ಇತರ ವೃತ್ತಿ ರಂಗಭೂಮಿಯ ಕಲಾವಿದರಂತೆ ಅವರು ಬಾಲ್ಯದಲ್ಲೇ ಚಿತ್ರರಂಗ ಪ್ರವೇಶ ಮಾಡಿದರು. ಎಂ ವಿ ರಾಜಮ್ಮ ಮತ್ತು ಪಂತುಲು ಅವರು ನಿರ್ಮಿಸುತ್ತಿದ್ದ ಮಕ್ಕಳ ರಾಜ್ಯ(1960) ಚಿತ್ರಕ್ಕೆ ಜನವಿರೋಧಿ ಪ್ರಭುತ್ವದ ವಿರುದ್ಧ ಬಂಡೇಳುವ ಮಕ್ಕಳ ನಾಯಕನ ಪಾತ್ರದ ಹುಡುಕಾಟದಲ್ಲಿದ್ದ ಬಿ ಆರ್ ಪಂತಲು ಅವರಿಗೆ ಉಮೇಶ್ ಅವರನ್ನು ಸೂಚಿಸಿದವರು ಚಿತ್ರದ ಸಹ ನಿರ್ದೇಶಕರಾಗಿದ್ದ ಎಸ್ ಆರ್ ಪುಟ್ಟಣ್ಣ ಅವರು. ಚಿತ್ರದ ನಾಯಕ ಎನ್ನಬಹುದಾದ ವಿಜಯನ ಪಾತ್ರದಲ್ಲಿ ಉಮೇಶ್ ಅವರು ಪ್ರೇಕ್ಷಕರ ಮೆಚ್ಚುಗೆ ಪಡೆದರು. ಕನ್ನಡಕ್ಕೆ ಭವಿಷ್ಯದಲ್ಲಿ ಒಳ್ಳೆಯ ನಾಯಕ ದೊರೆಯುವ ಭರವಸೆ ಮೂಡಿಸಿದರು. ಆದರೆ ಬಾಲಕನ ಶರೀರ ಬೆಳವಣಿಗೆ ಸಾಂಪ್ರದಾಯಿಕ ನಾಯಕನ ಇಮೇಜಿಗೆ ತಕ್ಕಂತೆ ರೂಪುಗೊಳ್ಳಲಿಲ್ಲ. ಮೊದಲ ಚಿತ್ರದ ಬಿಡುಗಡೆಯ ನಂತರ ಹದಿನಾರು ವರ್ಷ ಚಿತ್ರರಂಗದ ಹತ್ತಿರವೂ ಸುಳಿಯದ ಉಮೇಶ್ ಅವರನ್ನು ಮತ್ತೆ ‘ಕಥಾ ಸಂಗಮ'(1976) ಚಿತ್ರದ ಮುನಿತಾಯಿ ಕಥಾ ಭಾಗದ ಮುಖ್ಯ ಪಾತ್ರವೊಂದರಲ್ಲಿ ನಟಿಸಲು ಕರೆತಂದವರು ಅದೇ ಪುಟ್ಟಣ್ಣನವರು. ಮುನಿತಾಯಿ ನಂತರ ಬಹುತೇಕ ಹಾಸ್ಯ ಪಾತ್ರಗಳಲ್ಲೇ ನಟಿಸಿದ ಉಮೇಶ್ ಅವರಿಗೆ ತಮ್ಮ ಮೊದಲ ಚಿತ್ರದ ಗತ್ತು ಗೈರತ್ತು, ವೀರಾವೇಶ ತುಂಬಿದ, ಸಾಹಸ ಪ್ರದರ್ಶನಕ್ಕೆ ಅವಕಾಶವಿರುವ ಪಾತ್ರವೆಂದೂ ಅವರಿಗೆ ದೊರೆಯಲಿಲ್ಲ. ಬಹುತೇಕ ಚಿತ್ರಗಳಲ್ಲಿ ಸಿದ್ಧಮಾದರಿಯ ಹಾಸ್ಯ ಪಾತ್ರಗಳಲ್ಲೇ ಅವರು ತಮ್ಮ ವೃತ್ತಿ ಬದುಕನ್ನು ಮುಂದುವರೆಸಿದರು. ಚಲನ ಚಿತ್ರರಂಗ ಅವರಿಗೆ ಸಂಕಷ್ಟವಿಲ್ಲದ ಬದುಕು ಸಾಗಿಸಲು ನೆರವಾಗದಿದ್ದರೂ ಟಿ.ವಿ. ಜಗತ್ತು ಅವರನ್ನು ಕೈ ಹಿಡಿಯಿತು. ಅಭಿನಯ, ಸಂಗೀತದಂಥ ಲಲಿತಕಲೆಗಳಲ್ಲಿ ಪರಿಶ್ರಮವಿದ್ದ ಅವರ ಅನುಭವವನ್ನು ಕನ್ನಡ ಚಿತ್ರರಂಗಕ್ಕೆ ದುಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೂ ಅವರು ನಟಿಸಿದ ಹೇರಳ ಸಂಖ್ಯೆಯ ಚಿತ್ರಗಳಲ್ಲಿ (ಕೆಲವು ಪ್ರಕರಣ ಹೊರತುಪಡಿಸಿದರೆ ಕನ್ನಡದಲ್ಲಿ ನಟ ನಟಿಯರು ಅಭಿನಯಿಸಿದ ಚಿತ್ರಗಳ ಸಂಖ್ಯೆ ಬಗ್ಗೆ ಪತ್ರಿಕೆಗಳಲ್ಲಿ/ಲೇಖನಗಳಲ್ಲಿ ಉಲ್ಲೇಖವಾಗುವ ಮಾಹಿತಿ ಸಂದೇಹಾಸ್ಪದ) ಅವರ ಅಭಿನಯದ ವ್ಯಾಪ್ತಿಯನ್ನು ಪ್ರತಿನಿಧಿಸುವ ಕೇವಲ ಐದು ಚಿತ್ರಗಳಲ್ಲಿನ ಅವರ ಪಾತ್ರಗಳ ಮರು ಅವಲೋಕನ ಇಲ್ಲಿದೆ. ಈ ಪಾತ್ರಗಳು ಕನ್ನಡದ ಸಹೃದಯರ ಭಾವಭಿತ್ತಿಯಲ್ಲಿ ಬೆಚ್ಚನೆಯ ಚಿತ್ರಗಳಾಗಿ ಎಂದಿಗೂ ಉಳಿಯುತ್ತವೆ.
ಮಕ್ಕಳ ರಾಜ್ಯ(1960) ಪಾತ್ರ: ವಿಜಯ ವಿಕ್ರಮ
ಇದು ಬಿ ಆರ್ ಪಂತುಲು ಅವರು ನಿರ್ದೇಶಿಸಿದ ಮಕ್ಕಳೇ ಪ್ರಧಾನ ಪಾತ್ರ ವಹಿಸಿರುವ ಸಾಹಸ, ಮಾಯಾಮಂತ್ರ ಮತ್ತು ಫ್ಯಾಂಟಸಿ ಅಂಶಗಳಿರುವ ಚಿತ್ರ. ಪ್ರಜೆಗಳಿಗೆ ಅಧಿಕಾರವನ್ನು ಹಂಚಬಯಸುವ ಸ್ವರ್ಣಗಿರಿ ರಾಜನ ಉದ್ದೇಶವನ್ನು ವಿಫಲಗೊಳಿಸಿ ಅಧಿಕಾರಕ್ಕೆ ಬರುವ ವಿಕ್ರಮನೆಂಬ ದುಷ್ಟರಾಜ ರಾಜ್ಯವನ್ನು ಶೋಷಣೆ ಮಾಡುತ್ತಾನೆ. ಭೇತಾಳನ ಶಾಪಕ್ಕೆ ಗುರಿಯಾಗಿ ಮರವಾದ ರಾಜನ ಮಗ ವಿಜಯ ಮಕ್ಕಳ ಕೂಟವನ್ನು ಕಟ್ಟಿ ರಾಜನ ವಿರುದ್ಧ ಬಂಡೇಳುತ್ತಾನೆ. ಫ್ರೆಂಚ್ ಕಾದಂಬರಿಕಾರ ಅಲೆಕ್ಸಾಂಡರ್ ಡೂಮಾ ಮತ್ತು ಅಮೆರಿಕನ್ ಕಾದಂಬರಿಕಾರ ಜಾನ್‌ಸ್ಟನ್ ಮ್ಯಾಕುಲಿಯ ಸಾಹಸ ಪ್ರಧಾನ ಕಾದಂಬರಿಗಳಲ್ಲಿರುವ, ಕ್ರೂರ ಪ್ರಭುತ್ವದ ವಿರುದ್ಧ ಸಿಡಿದೇಳುವ ಬಂಡುಕೋರ ಪಾತ್ರಗಳನ್ನು ಹೋಲುವ ಅನೇಕ ಪಾತ್ರಗಳು ಇಲ್ಲಿವೆ. ಅಹಂಕಾರದ ಮುದ್ದೆಯಾದ ರಾಜಕುಮಾರಿಯ ಮನವೊಲಿಸಿ, ರಾಜ ಮತ್ತು ಅವನ ದುಷ್ಟಕೂಟದ ಹುನ್ನಾರಗಳನ್ನು ಎದುರಿಸಿ ಜಯಶಾಲಿಯಾಗುವ ವಿಜಯನೆಂಬ ಪದಚ್ಯುತ ಅರಸನ ಮಗನ ಕಥೆಯಿದು. ಅದಕ್ಕೆ ಪೂರಕವಾಗಿ ವಿಜ್ಞಾನಿಯೊಬ್ಬನ ನೆರವಿನಿಂದ ಚಂದ್ರ ಮಂಡಲಕ್ಕೆ ಹೋಗಿ ಚಂದ್ರಮಣಿಯನ್ನು ತಂದು ರಾಜನೊಡ್ಡುವ ಪರೀಕ್ಷೆಗಳನ್ನು ಗೆದ್ದು ಪ್ರಜಾರಾಜ್ಯವನ್ನು ಸ್ಥಾಪನೆ ಮಾಡುವ ವಿಜಯನ ಪಾತ್ರದಲ್ಲಿ ಉಮೇಶ್ ನಟಿಸಿದ್ದರು.
ನಿರ್ದೇಶಕರು ಜಾನಪದ ಕಥೆಗೆ ಫ್ಯಾಂಟಸಿ ಅಂಶಗಳನ್ನು ಬೆರೆಸಿ ಸಾಹಸ, ನೃತ್ಯ, ಮಧುರವಾದ ಹಾಡು, ಚುರುಕಾದ ಸಂಭಾಷಣೆ ಮೂಲಕ ರಂಜನೀಯ ಚಿತ್ರವಾಗಿಸಿದ್ದಾರೆ. ಚಿತ್ರದ ಬಹುಭಾಗವನ್ನು ಆಕ್ರಮಿಸಿರುವ ಪಾತ್ರದಲ್ಲಿ ಹದಿನಾಲ್ಕು ವರ್ಷದ ಉಮೇಶ್ ನುರಿತ ನಟನಂತೆ ಅಭಿನಯಿಸಿದ್ದಾರೆ. ಕಿಡಿಕಾರುವ ಸಂಭಾಷಣೆಯಲ್ಲಿ ತೋರುವ ಹಾವ ಭಾವ ಆ ಕಾಲದ ವೃತ್ತಿರಂಗಭೂಮಿಯ ನುರಿತ ಪಾತ್ರಧಾರಿಗಳ ಅಭಿನಯವನ್ನು ನೆನಪಿಸುತ್ತದೆ. ಮಾತು ಒಪ್ಪಿಸುವುದರಲ್ಲಿ ಸ್ಪಷ್ಟತೆ, ಮಿಂಚುವ ಕಣ್ಣಗಳಲ್ಲಿ ಸುರಿಸುವ ರೋಷ, ಆಂಗಿಕ ನ್ಯಾಸ, ಮಾತಿನ ಕಿಡಿಗಳುದುರಿಸುವ ಬಿಡುಬೀಸಾದ ನಟನೆಯಿಂದ ಉಮೇಶ್ ಬಾಲನಟನಂತೆ ಕಾಣುವುದೇ ಇಲ್ಲ. ರಾಜಕುಮಾರಿಯೊಂದಿಗೆ ಹಾಡುವ ‘ಹಾಡುವ ಆಡುವ ಉಯ್ಯಾಲೆ…’ ಯುಗಳಗೀತೆಯಲ್ಲಿ ತೋರುವ ರಮ್ಯಭಾವ ಮತ್ತು ‘ಮಳೆಯೇ ಸುರಿದು ಬಾ’ ಹಾಡಿನಲ್ಲಿ ತೋರುವ ದೈನ್ಯದ ಭಾವಗಳು ಅವರಲ್ಲಿನ ಸಮರ್ಥ ನಟನೊಬ್ಬನನ್ನು ಹೊರ ಹಾಕಿದ್ದವು. ಆ ಕಾಲಕ್ಕೆ ಚಿತ್ರದುದ್ದಕ್ಕೂ ವ್ಯಾಪಿಸಿಕೊಂಡ ಬಾಲನಟನೊಬ್ಬ ಯಾವುದೇ ಭಾಷೆಯಲ್ಲಿ ಆವರೆಗೂ ಅಷ್ಟು ಸಮರ್ಥವಾಗಿ ಅಭಿನಯಿಸಿದ ದಾಖಲೆ ಇರಲಿಲ್ಲ. ಮಕ್ಕಳ ರಾಜ್ಯ ಏಕಕಾಲದಲ್ಲಿ ಕನ್ನಡ, ತಮಿಳು (ಕುಳಂದೈಗಳ್ ಕಂಡ ಕುಡಿಯರಸು) ಮತ್ತು ತೆಲುಗು (ಪಿಲ್ಲಾಲು ತೆಚ್ಚಿ ಚಲ್ಲನಿ ರಾಜ್ಯಂ) –ಮೂರೂ ಭಾಷೆಗಳಲ್ಲಿ ತಯಾರಾದ ಚಿತ್ರ. ತೆಲುಗು ತಮಿಳು ಆವೃತ್ತಿಗಳಲ್ಲಿ ವಿಜಯನ ಪಾತ್ರ ವಹಿಸಿರುವ ಮಾಸ್ಟರ್ ಗೋಪಿ ಸಹ ಉತ್ತಮವಾಗಿ ಅಭಿನಯಿಸಿದ್ದರೂ ಉಮೇಶ್ ಅವರ ನಟನೆ ಬೇರೊಂದು ಸ್ತರದಲ್ಲಿದೆ ಎಂದೇ ಹೇಳಬಹುದು.

ಕಥಾ ಸಂಗಮ(ಮುನಿತಾಯಿ-1976): ಪಾತ್ರ: ತಿಮ್ಮರಾಯಿ
ಕನ್ನಡಕ್ಕೆ ಸಮರ್ಥ ನಾಯಕನಟರಾಗಿ ಭವಿಷ್ಯದಲ್ಲಿ ರೂಪುಗೊಳ್ಳಬಹುದೆಂದು ಮೂಡಿಸಿದ್ದ ಭರವಸೆಗೆ ಉಮೇಶ್ ಅವರ ದೈಹಿಕ ಬೆಳವಣಿಗೆಯು ಅಡ್ಡಿಯಾಯಿತು. ರಂಗಭೂಮಿಗೇ ಮರಳಿಹೋದ ಉಮೇಶ್ ಅವರನ್ನು ಹದಿನಾರು ವರ್ಷಗಳ ನಂತರ ಚಿತ್ರರಂಗಕ್ಕೆ ಮತ್ತೆ ಕರೆತಂದವರು ಅದೇ ಪುಟ್ಟಣ್ಣ ಕಣಗಾಲ್ ಅವರು. ಕನ್ನಡದಲ್ಲಿ ಹೊಸ ಅಲೆ ಹಣೆಪಟ್ಟಿಯ ಚಿತ್ರಗಳಿಗೆ ಮನ್ನಣೆ ದೊರೆಯುತ್ತಿದ್ದ ಕಾಲದಲ್ಲಿ ಸವಾಲು ಸ್ವೀಕರಿಸಿದ ಪುಟ್ಟಣ್ಣ ಅವರು ‘ಕಥಾ ಸಂಗಮ’ ಪ್ರಯೋಗಕ್ಕೆ ಸಿದ್ಧರಾದರು. ಕಥಾ ಸಂಗಮದ ಮೂರು ಕಥೆಗಳಲ್ಲಿ ಕೊನೆಯ ಎಪಿಸೋಡು ಮುನಿತಾಯಿ. ಅದು ಈಶ್ವರಚಂದ್ರ ಅವರ ಅದೇ ಹೆಸರಿನ ಸಣ್ಣಕತೆಯನ್ನು ಆಧರಿಸಿತ್ತು. ಕಣ್ಣು ಕಾಣದ ಗೃಹಿಣಿಯೊಬ್ಬಳನ್ನು ವಂಚಿಸಿ ಊರಿನ ಪೋಲಿಯೊಬ್ಬ ಎಸಗುವ ಅತ್ಯಾಚಾರಕ್ಕೆ ನೆರವು ನೀಡುವ ತಿಮ್ಮರಾಯಿ ಪಾತ್ರಕ್ಕೆ ಪುಟ್ಟಣ್ಣ ಅವರು ಉಮೇಶ್ ಅವರನ್ನು ಆಯ್ಕೆ ಮಾಡಿದ್ದರು. ಕನ್ನಡ ಪ್ರೇಕ್ಷಕರ ನೆನಪಿನಿಂದ ಆ ವೇಳೆಗೆ ಮಕ್ಕಳ ರಾಜ್ಯದ ಮಾಸ್ಟರ್ ಉಮೇಶ್ ಬಿಂಬ ಅಳಿಸಿಹೋಗಿತ್ತು. ಪುಟ್ಟಣ್ಣ ಅವರು ತಿಮ್ಮರಾಯಿ ಪಾತ್ರವನ್ನು ವಿಸ್ತರಿಸುವ ದೃಷ್ಟಿಯಿಂದ ಮೂಲ ಕಥೆಗೆ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದ್ದರು. ಮೂಲಕಥೆಯಲ್ಲಿ ತಿಮ್ಮರಾಯಿ ಶಾಲೆಗೆ ಹೋಗದೆ ಪೋಲಿ ಅಲೆಯುವ ದೊಡ್ಡವರ ಗುಂಪಿಗೆ ಸಣ್ಣ ಪುಟ್ಟ ಕೆಲಸಗಳಲ್ಲಿ ನೆರವಾಗುವ ಪಾತ್ರ. ಊರಿನ ಪೋಲಿ ಮುಖಂಡ ಕೊಂಡಾಜಿಯ ಬಲವಂತಕ್ಕೆ ಅವನನ್ನು ಮುನಿತಾಯಿಗೆ ಗೊತ್ತಾಗದಂತೆ ಮನೆಯೊಳಕ್ಕೆ ಸೇರಿಸುವ ಕೆಲಸದಲ್ಲಿ ನೆರವಾಗುತ್ತಾನೆ. ಆದರೆ ಚಿತ್ರದಲ್ಲಿ ತಿಮ್ಮರಾಯಿ ಕೆಲಸವಿಲ್ಲದೆ ಅಲೆಯುವ, ಪೋಲಿಗಳಗೆ ತಿಂಡಿ ‘ತೀರ್ಥ’ಗಳನ್ನು ಸರಬರಾಜು ಮಾಡುವ ಬಲಿತ ಹುಡುಗ. ಪೋಲಿಗಳು ಆಡುವ ಮಾತುಗಳನ್ನು ಕೇಳಿ ಅವನಲ್ಲೇ ಲೈಂಗಿಕ ತೃಷೆ ಜಾಗೃತವಾಗಿ ಮುನಿತಾಯಿ ಜಳಕ ಮಾಡುವ ದೃಶ್ಯವನ್ನು ಕದ್ದು ನೋಡುತ್ತಾನೆ. ತನ್ನ ಸಾಹಸವನ್ನು ಹೆಮ್ಮೆಯಿಂದ ಒಮ್ಮೆ ಬಾಯ್ಬಿಟಾಗ ಕೊಂಡಾಜಿಯ(ರಜನೀಕಾಂತ್- ಕನ್ನಡದಲ್ಲಿ ಮೊದಲ ಚಿತ್ರ) ಬೆದರಿಕೆಗೆ ಮಣಿದು ಅತ್ಯಾಚಾರಕ್ಕೆ ನೆರವಾಗುತ್ತಾನೆ. ಆದರೆ ಅದೇ ನೆಪಮಾಡಿಕೊಂಡು ಮುನಿತಾಯಿಯನ್ನು ಸುಲಿಯಲು ತೊಡಗುತ್ತಾನೆ. ಮಾಡಿದ ಪಾಪಕಾರ್ಯದ ಬಗ್ಗೆ ಪಶ್ಚಾತ್ತಾಪವಿಲ್ಲದೇ, ಮನುಷ್ಯನಾಗಿ ಅಧೋಗತಿಗೆ ಇಳಿಯುವ ಪಾತ್ರದಲ್ಲಿ ಪ್ರೇಕ್ಷಕರಲ್ಲಿ ಸಿಟ್ಟು ಹುಟ್ಟಿಸುವಷ್ಟು ಪರಿಣಾಮಕಾರಿಯಾಗಿ ಉಮೇಶ್ ನಟಿಸಿದ್ದಾರೆ. ಆವರೆವಿಗೂ ಅಂಥದ್ದೊಂದು ದುಷ್ಟ ಪಾತ್ರವನ್ನು ಅಷ್ಟೊಂದು ಪರಿಣಾಮಕಾರಿಯಾಗಿ ನಟಿಸಿದ್ದ ಉದಾಹರಣೆ ಇರಲಿಲ್ಲ. ಊರಲ್ಲಿ ಅಂಡಲೆಯುವವನೊಬ್ಬನ ಮಾದರಿಯೋ ಎಂಬಂತೆ ಹಾವಭಾವ, ಸೋಮಾರಿಯ ಕಳೆ, ಜೋಭದ್ರಗೇಡಿ ಮುಖಭಾವದಿಂದ ಒಂದು ಮಾದರಿ ಪಾತ್ರವನ್ನೇ ಕಡೆದು ನಿಲ್ಲಿಸಿದ್ದರು. ಆದರೆ ಮುನಿತಾಯಿ ಸ್ನಾನ ಮಾಡುವುದನ್ನು ಕದ್ದು ನೋಡುವಾಗ ಅವರು ಮುಖದ ಸ್ನಾಯುಗಳ ಚಲನೆ ಮತ್ತು ಕಣ್ಣೋಟದಲ್ಲಿ ತಂದ ಕುತೂಹಲ, ಆತಂಕ, ಭಯ ಮತ್ತು ಅರಗಿಸಿಕೊಳ್ಳಲಾಗದ ಅಚ್ಚರಿಯ ಸಮ್ಮಿಶ್ರಭಾವಗಳನ್ನು ಒಬ್ಬ ಮೆಥೆಡ್ ನಟನೊಬ್ಬ ಅಭಿನಯಿಸಲು ಸಾಧ್ಯವಿರುವ ಸಾಮರ್ಥ್ಯವನ್ನು ಮೂವತ್ತು ಸೆಕೆಂಡುಗಳಲ್ಲಿ ಹಿಡಿದಿಟ್ಟದ್ದು ಸಿನೆಮಾ ಅಭಿನಯದ ಸಾರ್ಥಕ ಕ್ಷಣಗಳಲ್ಲಿ ನಿಸ್ಸಂದೇಹವಾಗಿ ಒಂದಾಗಿತ್ತು. ಪುಟ್ಟಣ್ಣ ಅವರು ಇಡೀ ದೃಶ್ಯವನ್ನು ಉಮೇಶ್ ಅವರ ಕ್ಲೋಸ್ ಅಪ್ ಶಾಟ್‌ನಲ್ಲಿ ಚಿತ್ರೀಕರಿಸಿ ಸ್ನಾನಗೃಹದಲ್ಲಿ ನಡೆಯುತ್ತಿದ್ದ ಕ್ರಿಯೆಯನ್ನು ಅನುಭವಗಮ್ಯವಾಗಿಸಿದ ಅಮೋಘ ದೃಶ್ಯ ಅದಾಗಿತ್ತು. ಅನಂತರ ಕೊಂಡಾಜಿಯ ಅತ್ಯಾಚಾರವನ್ನು ಗಂಡನಿಗೆ ಹೇಳುತ್ತೇನೆಂದು ಹೆದರಿಸಿ ಅವಳನ್ನು ಸುಲಿಗೆ ಮಾಡುವಾಗ ಸೋಮಾರಿಯಾದ ವ್ಯಕ್ತಿ ಇದ್ದಕ್ಕಿದ್ದಂತೆ ಆಕ್ರಮಣಕಾರಿಯಾಗುವ ಪರಿವರ್ತನೆಯನ್ನು ಉಮೇಶ್ ಅವರು ಸೊಗಸಾಗಿ ಮೂಡಿಸಿದ್ದರು. ಬಹುಶಃ ಉಮೇಶ್‌ರವರ ಎಂಟ್ರಿ ಮತ್ತು ರೀಎಂಟ್ರಿ ಎರಡರಲ್ಲೂ ಪುಟ್ಟಣ್ಣ ವಹಿಸಿದ ಪಾತ್ರ ಮತ್ತು ಉಮೇಶ್ ಅವರು ಆ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡ ರೀತಿ ಕನ್ನಡ ಚಲನಚಿತ್ರರಂಗದಲ್ಲಿಯೇ ವಿಶಿಷ್ಟವಾದದ್ದು.

ಕಾಮನ ಬಿಲ್ಲು(1983) ಪಾತ್ರ: ರಂಗಾ
ಕಥಾಸಂಗಮದ ನಂತರ ಉಮೇಶ್ ಅವರಿಗೆ ಸವಾಲೆನಿಸುವ ಪಾತ್ರಗಳು ಅರಸಿ ಬರಲಿಲ್ಲ. ಆದರೆ ನಿರ್ದೇಶಕರು ಅವರಲ್ಲೊಬ್ಬ ಹಾಸ್ಯನಟನನ್ನು ಗುರುತಿಸಿ ಅಂಥದೇ ಸಣ್ಣ ಪುಟ್ಟ ಪಾತ್ರಗಳನ್ನು ನೀಡತೊಡಗಿದರು. ವಿಚಿತ್ರವಾದ ಧ್ವನಿ ವಿನ್ಯಾಸ ಮತ್ತು ಪೇಚಾಟದ, ಅಶ್ಲೀಲತೆಯ ಅಂಚಿನಲ್ಲಿ ಸುತ್ತುವ ಮಾತುಕತೆ ಹಾವಭಾವದ ಪಾತ್ರಗಳಲ್ಲೇ, ಮುಸುರಿ ಕೃಷ್ಣಮೂರ್ತಿ ಅವರ ಮುಂದುವರಿದ ಭಾಗದಂತೆ ಕನ್ನಡಿಗರು ಈ ಪ್ರತಿಭಾವಂತನನ್ನು ನೋಡಬೇಕಾಯಿತು. ವಸಂತ ಲಕ್ಷ್ಮಿ, ತಪ್ಪಿದ ತಾಳ, ಕಿಲಾಡಿ ಜೋಡಿ, ಹಾವಿನ ಹೆಡೆ, ಅಂತ, ಸುವರ್ಣ ಸೇತುವೆ, ಹಾಲು ಜೇನು ಮುಂತಾದ ಸುಮಾರು ಇಪ್ಪತ್ತೈದು ಚಿತ್ರಗಳಲ್ಲಿ ಹೀಗೆ ಬಂದು ಹಾಗೆ ಹೋಗುವ ಹಾಸ್ಯ ಪಾತ್ರಗಳಲ್ಲಿ ನಟಿಸಿದರು. ಗುರು ಶಿಷ್ಯರು(1981) ಚಿತ್ರದಲ್ಲಿ ಮಾತ್ರ ಹನ್ನೆರಡು ಜನ ಶಿಷ್ಯರಲ್ಲಿ ಒಬ್ಬರಾಗಿ ನಟಿಸುವ ಅವಕಾಶ ಒದಗಿತ್ತು. ಈ ಅವಧಿಯಲ್ಲಿ ಕತೆಗೆ ಪೂರಕವಾದ ಮತ್ತು ವಿಭಿನ್ನ ದಾಟಿಯ ಪಾತ್ರ ದೊರೆತದ್ದು ಕಾಮನಬಿಲ್ಲು ಚಿತ್ರದಲ್ಲಿ. ಅದು ಊರ ಶ್ರೀಮಂತ ಮತ್ತು ಚಿಕ್ಕಗೌಡನ ಹೆಡ್ಡ ಮಗ ರಂಗನ ಪಾತ್ರ. ನಮ್ಮ ವಾಣಿಜ್ಯ ಚಿತ್ರಗಳಲ್ಲಿ ಗ್ರಾಮದ ಜಮೀನುದಾರ ಮತ್ತು ಪಾಳೆಯಗಾರ (ಕೆಲವು ಅಪರೂಪದ ಪ್ರಕರಣ ಹೊರತುಪಡಿಸಿದರೆ) ಅಸಹಾಯಕರನ್ನು ಶೋಷಿಸುವ ದುಷ್ಟನೇ ಆಗಿರುತ್ತಾನೆ. ಅವನ ಮಗ ಸಾಮಾನ್ಯವಾಗಿ ಕೆಲಸಕ್ಕೆ ಬಾರದವನಾದರೂ ತನಗಿರುವ ಶ್ರೀಮಂತಿಕೆಯ ಹಿನ್ನೆಲೆಯಿಂದ ಹುಂಬನೂ, ತನ್ನ ವರ್ತನೆಯಿಂದ ಅಪಹಾಸ್ಯಕ್ಕೊಳಗಾಗುವ ಹೆಡ್ಡನೂ ಆಗಿರುತ್ತಾನೆ. ಈ ಟ್ರೋಪ್‌ನಲ್ಲೇ ಇರುವ ಕಾಮನಬಿಲ್ಲು ಚಿತ್ರದಲ್ಲಿ ಗೌಡನ ಮಗ ಹೆಡ್ಡ ರಂಗನ ಪಾತ್ರದಲ್ಲಿ ಉಮೇಶ್ ನಟಿಸಿದ್ದಾರೆ. ತನ್ನ ತಂದೆಯ ಆರ್ಭಟದಲ್ಲಿ ಪುಕ್ಕಲನೂ, ಅಂಜುಕುಳಿಯೂ ಆದ ರಂಗ ಸಮಯ ಸಿಕ್ಕಾಗ ತನ್ನ ಗೌಡಿಕೆಯನ್ನೂ ತೋರಬಲ್ಲ. ಅಪ್ಪನ ಹತ್ತಿರ ಹಣ ಕದಿಯಬಲ್ಲ. ಊರ ಹೆಣ್ಣು ಮಕ್ಕಳಿಗೆ ಆಮಿಷ ತೋರಿಸಿ ದುರ್ಬಳಕೆ ಮಾಡಿಕೊಂಡು ತಂದೆಯ ನೆರವಿನಿಂದ ತಪ್ಪಿಸಿಕೊಳ್ಳಬಲ್ಲ. ಅಂಥ ಸಂಕೀರ್ಣ ಭಾವದ ಪಾತ್ರವನ್ನು ಉಮೇಶ್ ಅವರು ಹಾಸ್ಯ ಲೇಪನ ನೀಡಿ ನಟಿಸಿದ್ದಾರೆ. ಚಿತ್ರದ ದೃಶ್ಯವೊಂದರಲ್ಲಿ ತಮಗಿಂತಲೂ ದೈಹಿಕವಾಗಿ ದೃಢವಾದ ನಾಯಕನ ಮೇಲೆ ಗೌಡನ ಗತ್ತಿನಿಂದ ಏರಿಹೋಗುವಾಗ ತೋರಿರುವ ಅಭಿನಯ ಉಕ್ಕಿಸುವ ನಗೆ ಉಮೇಶ್ ಅವರ ಅಭಿನಯಕ್ಕೆ ಹಿಡಿದ ಕನ್ನಡಿ. ಅಪ್ಪ ಬಡವರ ಮನೆಯನ್ನು ಒಪ್ಪಿಕೊಳ್ಳುವುದಿಲ್ಲವೆಂಬ ಕಾರಣಕ್ಕೆ ತಾನು ಆಕೆಯನ್ನು ಕೆಡಿಸಿದೆ ಎಂದು ಪಂಚಾಯತಿ ಕಟ್ಟೆಯಲ್ಲಿ ಹೇಳುವ ದೃಶ್ಯದಲ್ಲಿ ಉಮೇಶ್ ಸಂಭಾಷಣೆ ಮುಗಿಸಿದ ತಕ್ಷಣ ಬಿಗುವಿನ ವಾತಾವರಣ ಸಡಿಲವಾಗುವುದು ಥಿಯೇಟರ್‌ನಲ್ಲಿ ಕುಳಿತ ಪ್ರೇಕ್ಷಕರಿಗೂ ಆಗುತ್ತದೆ. ಅದು ಉಮೇಶ್ ಅವರಿಗಿದ್ದ ಸಾಮರ್ಥ್ಯ.
ಇದನ್ನು ಓದಿದ್ದೀರಾ?: ಕರ್ನಾಟಕ ಎದುರಿಸುತ್ತಿರುವ ಸಿನಿಮಾ ಸಂಸ್ಕೃತಿ-ಪರಂಪರೆ ರಕ್ಷಣೆಯ ʻತುರ್ತುಸ್ಥಿತಿʼ
ಶೃತಿ ಸೇರಿದಾಗ (1987) ಪಾತ್ರ: ಚಂದ್ರು
ಉಮೇಶ್ ಅವರನ್ನು ನೆನದಾಗ ರಾಜ್ ಅವರು ತೆರೆಯ ಹಿಂದೆ ನಿಂತು ಹಾಡುವ ಗಾಯನಕ್ಕೆ ತುಟಿ ಹೊಂದಿಸುವ ಪೇಚಿನ ಪ್ರಸಂಗದಲ್ಲಿ ನೀಡಿರುವ ಅಭಿನಯ ತಕ್ಷಣ ನೆನಪಾಗುವುದಂತೂ ಗ್ಯಾರಂಟಿ. ಚಿತ್ರ ನಟನಾಗಬೇಕೆಂಬ ಹಂಬಲದಿಂದ ವೈದ್ಯರಿಗೆ ಸಹಾಯಕನಾದ ಚಂದ್ರು ಪಾತ್ರದಲ್ಲಿ ಉಮೇಶ್ ಒಂದೇ ದೃಶ್ಯದ ಅಭಿನಯದಿಂದ ಶಾಶ್ವತವಾಗಿ ಉಳಿದುಬಿಡುತ್ತಾರೆ. ತಾನೆ ಮಾಡುವ ಅನಾಹುತದಿಂದ ತಪ್ಪು ಗ್ರಹಿಕೆ ಉಂಟಾಗಿ, ಪರವೂರಿನಲ್ಲಿ ಯಜಮಾನ ಡಾಕ್ಟರ್ ಮದುವೆಗೆ ಗೊತ್ತಾಗಿರುವ ಮನೆಯಲ್ಲಿ ಭಾವೀ ಅಳಿಯನಾಗಿ ನಟಿಸಬೇಕಾದ ಸಂದರ್ಭದಲ್ಲಿ ತೊಳಲಾಡುವ ಪಾತ್ರದಲ್ಲಿ ಉಮೇಶ್ ತಮ್ಮ ಪೇಚಾಟದಿಂದ ನಗೆಯುಕ್ಕಿಸುತ್ತಾರೆ. ಅನಿರೀಕ್ಷಿತವಾಗಿ ಗಾಯನ ಕಚೇರಿ ನಡೆಸಬೇಕಾದ ಸಂದರ್ಭ ಎದುರಾದಾಗ ಸಿನೆಮಾ ಕಲಾವಿದನಾಗುವ ಭರವಸೆಯಿದ್ದ ವ್ಯಕ್ತಿ ನಿಜಜೀವನದಲ್ಲಿ ಅದೆಷ್ಟು ಕಷ್ಟವೆಂಬುದನ್ನು ತಮ್ಮ ಹಾವ ಭಾವ, ವರ್ತನೆಯಿಂದಲೇ ದಾಟಿಸಿದ್ದಾರೆ. ಅಶ್ಲೀಲ ವರ್ತನೆ, ದ್ವಂದ್ವಾರ್ಥ ಸಂಭಾಷಣೆಯ ಹಂಗಿಲ್ಲದೆಯೇ ಪರಿಶುದ್ಧ ಮನರಂಜನೆಯ ‘ಸಂದರ್ಭ ಹಾಸ್ಯ’ಕ್ಕೆ (ಸಿಚುವೇಷನಲ್ ಕಾಮೆಡಿ) ಉಮೇಶ್ ಈ ಚಿತ್ರದಲ್ಲಿ ಮಾದರಿಯ ಅಭಿನಯವನ್ನು ತೋರಿದ್ದಾರೆ.
ಗೋಲ್‌ಮಾಲ್ ರಾಧಾ ಕೃಷ್ಣ (1990) ಪಾತ್ರ: ಸೀತಾಪತಿ
ಕನ್ನಡದ ವಿರಳ ಪೂರ್ಣಾವದೀ ಹಾಸ್ಯ ಚಿತ್ರಗಳಲ್ಲಿ ಅಪಾರ ಯಶಸ್ಸು ಸಾಧಿಸಿದ ‘ಗೋಲ್ ಮಾಲ್ ರಾಧಾಕೃಷ್ಣ’ ಚಿತ್ರದ ಎಲ್ಲ ಪಾತ್ರಗಳ (ರಾಧಾಕೃಷ್ಣ ಪಾತ್ರ ಹೊರತುಪಡಿಸಿ) ಹೆಸರು ಮರೆತುಹೋಗಬಹುದು. ಆದರೆ ಹಾಸ್ಯ ಚಿತ್ರಗಳು ಇರುವವರೆಗೆ ಉಮೇಶ್ ಅವರು ಅಭಿನಯಿಸಿದ ಸೀತಾಪತಿ ಪಾತ್ರವಂತೂ ಮರೆಯಲು ಸಾಧ್ಯವಿಲ್ಲ. ಸಾಯಿ ಪ್ರಕಾಶ್ ಅವರ ಈ ಚಿತ್ರದಲ್ಲಿ ನಾಯಕನಟ ಅನಂತನಾಗ್, ದಿನೇಶ್, ಮುಖ್ಯಮಂತ್ರಿ ಚಂದ್ರು, ಉಮಾಶ್ರೀ, ಸಿಹಿಕಹಿ ಚಂದ್ರು, ಮೈಸೂರು ಲೋಕೇಶ್, ಬೆಂಗಳೂರು ನಾಗೇಶ್ ಮತ್ತು ಲೀಲಾವತಿ ಮೊದಲದ ಹಾಸ್ಯದ ಹೊನಲು ಹರಿಸುವ ಕಲಾವಿದರ ದಂಡೇ ಇದೆ. ಜೊತೆಗೆ ರಂಗ ನಟಿ ಸತ್ಯಭಾಮ ಮತ್ತು ಕಚಗುಳಿಯಿಡುವ ವಿಶಿಷ್ಟ ಪಾತ್ರದಲ್ಲಿ ವನಿತಾವಾಸು ಇದ್ದಾರೆ. ಇವರ ನಡುವೆ ಎಂ ಎಸ್ ಉಮೇಶ್ ಅವರು ಸೀತಾಪತಿ ಪಾತ್ರದಲ್ಲಿ ತಮ್ಮದೇ ಪ್ರತ್ಯೇಕ ಎಳೆಯನ್ನು ಸೃಷ್ಟಿಸಿಕೊಂಡು ರಾರಾಜಿಸಿರುವುದು ಅವರ ಪ್ರತಿಭೆಯನ್ನು ನಿರೂಪಿಸಲು ಸಿಕ್ಕ ದೊಡ್ಡ ಅವಕಾಶ.

ಸೀತಾಪತಿಯ ಪಾತ್ರಕ್ಕೆ ಹಾಸ್ಯ ಪಾತ್ರದ ಲೇಬಲ್ ಇದ್ದರೂ ಅದನ್ನೂ ಮೀರಿದ ಮನೋವಿಶ್ಲೇಷಣೆಯ ಹತಾರುಗಳನ್ನು ಬಳಸಿ ಅರ್ಥಮಾಡಿಕೊಳ್ಳಬೆಕಾದ ಪಾತ್ರ. ಆತ್ಮವಿಶ್ವಾಸದ ಕೊರತೆಯಿರುವ, ಆತ್ಮಮರುಕದಲ್ಲಿ ನೆಮ್ಮದಿ ಅರಸುವ ಕೊನೆಗೆ ಎಂದೆಂದೂ ಬಿಡುಗಡೆಯೇ ಕಾಣದೆ ತೊಳಲುವ ವಿಚಿತ್ರ ಪಾತ್ರವದು. ಆ ಪಾತ್ರದ ಬಗ್ಗೆ ಗಂಭೀರವಾಗಿ ಚಿಂತಿಸಿದಾಗ ನನಗೆ ಅಂಥದ್ದೇ ಮತ್ತೊಂದು ಪಾತ್ರ ಕಂಡದ್ದು ಸುಪ್ರಸಿದ್ಧ ರಷ್ಯನ್ ಕತೆಗಾರ ಆಂಟನ್ ಚೆಕಾಫ್ ಬರೆದ ‘ಡೆತ್ ಆಫ್ ಅ ಗವರ್ನ್ಮೆಂಟ್ ಕ್ಲರ್ಕ್’ನಲ್ಲಿ ಚಿತ್ರಿತವಾಗಿರುವ ಸರ್ಕಾರಿ ಗುಮಾಸ್ತ ಐವಾನ್ ಡಿಮಿತ್ರಿ ಚರ‍್ವಿಯಕಾಫ್‌ನಲ್ಲಿ. ಸುಮಾರು ಎರಡೂವರೆ ಪುಟದಷ್ಟಿರುವ, ಚೆಕಾಫ್ ಬರೆದ ಅತಿ ಸಣ್ಣ ಕತೆಗಳಲ್ಲೊಂದಾದ ಇದರಲ್ಲಿ ನೃತ್ಯರೂಪಕವೊಂದನ್ನು ನೋಡುತ್ತಿದ್ದ ಚರ‍್ವಿಯಕಾಫ್ ಇದ್ದಕ್ಕಿದ್ದಂತೆ ಸೀನುತ್ತಾನೆ. ಮುಂದಿನ ಸಾಲಿನಲ್ಲಿ ಕುಳಿತಿದ್ದ ಸಾರಿಗೆ ಇಲಾಖೆಯ ಜನರಲ್ ಬ್ರಜ್ಲಾಪ್ ತನ್ನ ಬೋಳುಮಂಡೆ ಮತ್ತು ಕುತ್ತಿಗೆಯನ್ನು ಒರೆಸಿಕೊಳ್ಳುವುದನ್ನು ಕಂಡು ಭಯಗೊಳ್ಳುತ್ತಾನೆ. ಅವನ ಹತ್ತಿರ ಹೋಗಿ ತಾನು ಬೇಕೆಂದು ಸೀನಿಲ್ಲವೆಂದು ಕ್ಷಮೆ ಕೋರುತ್ತಾನೆ. ಪ್ರದರ್ಶನವನ್ನು ಆಸಕ್ತಿಯಿಂದ ನೋಡುತ್ತಿದ್ದ ಜನರಲ್ ಸರಿ ಆಯ್ತು ಹೋಗು ಎನ್ನುತ್ತಾನೆ. ಚರ‍್ವಿಯಕಾಪ್‌ಗೆ ಕ್ಷಮಿಸಲಿಲ್ಲವೆಂದು ಅನುಮಾನ. ಮಾರನೇ ದಿನ ಅವನಲ್ಲಿಗೆ ಹೋಗಿ ಮತ್ತೆ ಪೀಡಿಸುತ್ತಾನೆ. ಅವನ ವರ್ತನೆಯಿಂದ ಕನಲಿದ ಜನರಲ್ ರೇಗುತ್ತಾನೆ. ತನ್ನನ್ನು ಆತ ಕ್ಷಮಿಸಲಿಲ್ಲವೆಂದು ಮತ್ತಷ್ಟು ಚಿಂತೆ ಹತ್ತಿ ಕೊರಗುತ್ತಾನೆ. ನಿದ್ದೆಯಿಲ್ಲದೆ ತೊಳಲಿ ಕೊನೆಗೆ ಸತ್ತೇ ಹೋಗುವ ದುರಂತ ಕತೆ.
ಇಲ್ಲಿಯೂ ಕಚೇರಿಯಲ್ಲಿ ಗುಮಾಸ್ತನಾಗಿರುವ ಸೀತಾಪತಿಗೆ ತನ್ನ ವರ್ತನೆಯಿಂದ ಯಾರಿಗಾದರೂ ನೋವಾಯ್ತೇನೋ ಎಂಬ ಅನುಮಾನ. ಕ್ಷಮಿಸಬೇಕೆಂಬ ಬೇಡಿಕೆ. ಎದುರಿನವರು ಕ್ಷಮಿಸಿದ್ದೇವೆ ಎಂದು ಹೇಳಿದರೂ ಅನುಮಾನ. ಮತ್ತೆ ಬಿಡುಗಡೆಯಿಲ್ಲದೆ ಸಂಕೋಚ, ಇಲ್ಲದ ಪಾಪಪ್ರಜ್ಞೆ ಆತ್ಮಮರುಕದಲ್ಲಿ ಬೇಯುವ ಸೀತಾಪತಿ ಬದುಕಿನಲ್ಲಿ ಬಹುದೊಡ್ಡ ಬಿರುಗಾಳಿಯೇಳುತ್ತದೆ. ಊರಿಗೆ ಹೋದ ತನ್ನ ಹೆಂಡತಿಯ ಸೀರೆಯನ್ನು ಉಟ್ಟ ಪಕ್ಕದ ಮನೆಯ ಪ್ರಸಾದ್‌ನ ಹೆಂಡತಿ ಜಾನಕಿಯನ್ನು ತನ್ನ ಹೆಂಡತಿಯೆಂದೇ ತಬ್ಬಿ ನಂತರ ತಬ್ಬಿಬ್ಬಾಗುತ್ತಾನೆ. ತಾನು ಬೇಕೆಂದು ಜಾನಕಿಯವರನ್ನು ತಬ್ಬಿಕೊಳ್ಳಲಿಲ್ಲ, ತನ್ನ ಹೆಂಡತಿ ಇರಬಹುದೆಂದು ತಬ್ಬಿಕೊಂಡೆ ಎಂದು ಹಿಂಜರಿಯುತ್ತಲೇ ಜಗತ್ತಿಗೆಲ್ಲ ಸಾರುತ್ತಾನೆ. ಮೇಲುನೋಟಕ್ಕೆ ಹಾಸ್ಯದ ಹೊನಲೇ ಹರಿದರೂ ಒಂದು ಆಡಳಿತ ವ್ಯವಸ್ಥೆಯ ಕಟ್ಟುಪಾಡುಗಳು, ಸಾಮಾಜಿಕ ಶ್ರೇಣಿಗಳು (ಪ್ರಸಾದ್ ಮಾಲೀಕನ ಭಾವಮೈದ) ಕೆಳ ಹಂತದ ಸಿಬ್ಬಂದಿಯಲ್ಲಿ ಹಿಂಜರಿಕೆ, ತನ್ನ ಮೇಲೆ ತನಗೇ ವಿಶ್ವಾಸವಿಲ್ಲದ ಭಾವ, ಆತ್ಮಮರುಕುತನವನ್ನು, ಆಧೀನತೆ ಮತ್ತು ಭಯವನ್ನು ಹುಟ್ಟುಹಾಕಿ ಹೇಗೆ ಹಿಂಸಿಸುತ್ತವೆ ಎಂಬುದಕ್ಕೆ ಸೀತಾಪತಿ ಪಾತ್ರ ಚರ‍್ವಿಯಕಾಫ್‌ನಂತೆಯೇ ಒಂದು ಉಜ್ವಲ ಉದಾಹರಣೆ. ಆ ಪಾತ್ರದ ಹಿಂಜರಿಕೆ, ಹತಾಶೆ ಮತ್ತು ಪಾಪಪ್ರಜ್ಞೆಯನ್ನು ಉಮೇಶ್ ಈ ಚಿತ್ರದಲ್ಲಿ ಸಮರ್ಥವಾಗಿ ಉಪಯೋಗಿಸಿಕೊಂಡು ರಾರಾಜಿಸಿದ್ದಾರೆ. ಹೀಗೆ ನೂರಾರು ಚಿತ್ರಗಳಲ್ಲಿ ನಟಿಸಿದರೂ ಕೆಲವೇ ಪಾತ್ರಗಳಲ್ಲಿ ಕನ್ನಡಿಗರ ಭಾವಬಿತ್ತಿಯಲ್ಲಿ ಬಿಂಬವಾಗಿ ಉಮೇಶ್ ಅವರು ಉಳಿದಿರುತ್ತಾರೆ. ಹತ್ತು ಕಟ್ಟುವ ಬದಲು ಒಂದು ಮುತ್ತು ಕಟ್ಟು ಎಂಬ ಮಾತು ಇಂಥವರಿಗೆ ಒಪ್ಪುವ ಮಾತು.


ಡಾ. ಕೆ. ಪುಟ್ಟಸ್ವಾಮಿ
ಲೇಖಕ, ಪತ್ರಕರ್ತ. ಪತ್ರಕರ್ತರಾಗಿ, ಕರ್ನಾಟಕ ಸರಕಾರದ ಹಲವು ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಜೀವ ಸಂಕುಲಗಳ ಉಗಮ, ಜೀವಜಾಲ, ಸಿನಿಮಾಯಾನ ಮುಂತಾದವು ಮುಖ್ಯ ಕೃತಿಗಳು. ಮಣಿ ಭೂಮಿಕ್, ಸಹಸ್ರಬುದ್ಧೆ, ಭೀರೇಂದ್ರ ಭಟ್ಟಾಚಾರ್ಯ, ಎಚ್.ಜಿ.ವೇಲ್ಸ್, ಜೂಲ್ಸ್ ವರ್ನ್ ಮತ್ತು ಲ್ಯ್ ವ್ಯಾಲೆಸ್ ಮುಂತಾದವರ ಕೃತಿಗಳನ್ನು ಅನುವಾದಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಪರಿಸರ ಪ್ರಶಸ್ತಿ, ರಾಷ್ಟ್ರಪತಿಗಳು ಕೊಡಮಾಡುವ ಸ್ವರ್ಣ ಕಮಲ ಮುಂತಾದ ಪ್ರಶಸ್ತಿಗಳು ಸಂದಿವೆ.




