ಕರ್ನಾಟಕ ಎದುರಿಸುತ್ತಿರುವ ಸಿನಿಮಾ ಸಂಸ್ಕೃತಿ-ಪರಂಪರೆ ರಕ್ಷಣೆಯ ʻತುರ್ತುಸ್ಥಿತಿʼ

Date:

ಬಹಳ ಕಾಲ ನಮ್ಮ ತೊಂಭತ್ತು ವರ್ಷದ ಇತಿಹಾಸವಿರುವ ಕರ್ನಾಟಕ ಚಿತ್ರರಂಗದ ಪರಂಪರೆ-ಆಸ್ತಿಯ ರಕ್ಷಣೆ ವಾರ್ತಾ ಮತ್ತು ಪ್ರಚಾರ ಇಲಾಖೆಯಡಿಯಲ್ಲಿ ಇತ್ತು. ಕರ್ನಾಟಕ ಚಲನಚಿತ್ರ ಅಕಾಡೆಮಿ ಸ್ಥಾಪನೆಯಾದ ನಂತರ ಅದರ ಬಹಳಷ್ಟು ಭಾಗವನ್ನು ಅಕಾಡೆಮಿಗೆ ಹಸ್ತಾಂತರಿಸಲಾಯಿತು. ಆದರೆ, ಚಿತ್ರರಂಗಕ್ಕೆ ಸಂಬಂಧಿಸಿದ ಬಹಳಷ್ಟು ಆಸ್ತಿ ಇನ್ನೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲೇ ಇದೆ ಎಂದು ಕೆಲವು ಮೂಲಗಳು ಖಚಿತಪಡಿಸಿವೆ.

ಅವಸಾನದ ಅಂಚಿನಲ್ಲಿರುವ ಚಲನಚಿತ್ರ ದೃಶ್ಯ ಸಂಸ್ಕೃತಿ -ಪರಂಪರೆ ರಕ್ಷಿಸುವುದು ಮತ್ತು ಅದನ್ನು ಪುನಶ್ವೇತನ ಗೊಳಿಸವುದು ಇಂದಿನ ತುರ್ತು ಅಗತ್ಯಗಳಲ್ಲೊಂದು. ಕನ್ನಡ ಚಿತ್ರರಂಗದ ಸಂಶೋಧಕರ ಪ್ರಕಾರ; ಕನ್ನಡ ಚಿತ್ರರಂಗದಲ್ಲಿ ಇದುವರೆಗೆ ತಯಾರಿಗಿದೆ ಎನ್ನಲಾದ ಐದು ಸಾವಿರಕ್ಕೂ ಹೆಚ್ಚು ಚಿತ್ರಗಳ ಪೈಕಿ 3500 ಚಿತ್ರಗಳು ನಾಪತ್ತೆಯಾಗಿವೆ. ಈ ಪೈಕಿ 1500 ಚಿತ್ರಗಳ ನೆಗೆಟಿವ್‌ಗಳು ಲಭ್ಯವಿದ್ದರೂ, ಅವೆಲ್ಲ ವಿನಾಶದ ಅಂಚಿನಲ್ಲಿವೆ. ಕಾಸರವಳ್ಳಿ ಅವರ ಎಂಟು ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಿತ್ರಗಳ ನೆಗೆಟಿವ್‌ ಸ್ಥಿತಿ ಕೂಡ ಭಿನ್ನವಾಗಿಲ್ಲ. ಈ ಚಲನಚಿತ್ರ ದೃಶ್ಯ ಸಂಸ್ಕೃತಿ ಮತ್ತು ಪರಂಪರೆಯನ್ನು ರಕ್ಷಿಸುವ ಜವಾಬ್ದಾರಿ ಹೊತ್ತಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿ, ಸಮಿತಿಗಳ ನಂತರ ಸಮಿತಿಗಳನ್ನು ರಚಿಸುತ್ತಾ, ಈಗಾಗಲೇ ನೀಡಿರುವ ವರದಿಯನ್ನು ನಿರ್ಲಕ್ಷಿಸುವ ಮೂಲಕ ತನ್ನ ಕರ್ತವ್ಯವನ್ನು ಮರೆತಿದೆ.

ಕಳೆದ ವರ್ಷದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಬಿಫೆಸ್)‌ ಒಂದರ್ಥದಲ್ಲಿ ಇತಿಹಾಸದ ಒಂದು ಮರೆಯಲಾಗದ ಪುಟ. ಕನ್ನಡ ಚಿತ್ರರಂಗಕ್ಕೆ ಒಂಭತ್ತು ದಶಕ ತುಂಬಿದ ಸಂಭ್ರಮವನ್ನು ಮಾರ್ಚಿ 3ರಂದು ಚಲನಚಿತ್ರೋತ್ಸವದ ಸಂದರ್ಭದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ಹಿಂದಿನ ನೆನಪುಗಳನ್ನು ಪುನರ್‌ ಸೃಷ್ಟಿಸಿ. ನೆರೆದಿದ್ದ ಪ್ರೇಕ್ಷಕರನ್ನು ತೊಂಭತ್ತು ವರ್ಷ ಹಿಂದಕ್ಕೆ ಕೊಂಡೊಯ್ಯಲಾಯಿತು. ಅಂದೇ ಸಂಜೆ ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ದಿಗ್ದರ್ಶಕ ಪಿ. ಶೇಷಾದ್ರಿ ತಮ್ಮ ಮಹತ್ವಾಕಾಂಕ್ಷೆಯ ʻಸತಿ ಸುಲೋಚನ 3-3-34’ ಚಿತ್ರವನ್ನು ಪುನರ್‌ ಸೃಷ್ಟಿಸುವುದಾಗಿ ಪ್ರಕಟಿಸಿದರು. ಇವರ ಬೆನ್ನಿಗೆ ನಿರ್ಮಾಪಕರಾಗಿ, ನಟರಾಗಿ ನಿಂತವರು, 1934ರಲ್ಲಿ ʻಸತಿ ಸುಲೋಚನʼ ಚಿತ್ರದ ನಿರ್ಮಾಣಕ್ಕೆ ಕಾರಣರಾದ ಸುಬ್ಬಯ್ಯ ನಾಯ್ಡು ಅವರ ಮೊಮ್ಮಗ ಸೃಜನ್‌ ಲೋಕೇಶ್.‌ ಆದಷ್ಟು ಪ್ರಯತ್ನಿಸಿ, ಈ ಚಿತ್ರವನ್ನು 2025ರ ಮಾರ್ಚ್‌ ವೇಳೆಗೆ ತೆರೆಗೆ ತರುವುದಾಗಿ ಅವರು ಪ್ರಕಟಿಸಿದರು. ಅಂದು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಗಿರೀಶ ಕಾಸರವಳ್ಳಿ ಅವರೂ ಸೇರಿದಂತೆ ಚಲನಚಿತ್ರ ದಿಗ್ಗಜರೆಲ್ಲರೂ, ಶೇಷಾದ್ರಿಗೆ ಶುಭ ಹಾರೈಸಿ, ಕನ್ನಡ ಚಿತ್ರರಂಗದ ಮೊಟ್ಟಮೊದಲ ವಾಕ್ಚಿತ್ರ ʼಸತಿ ಸುಲೋಚನʼ ಕನ್ನಡ ಚಿತ್ರರಂಗ 90ನೇ ವರ್ಷಕ್ಕೆ ಅರ್ಹ ಕೊಡುಗೆ ಎಂದು ಅಭಿನಂದಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
reel 1 1

`ಸತಿ ಸುಲೋಚನʼ ಕ್ಕೆ ತೊಂಭತ್ತು

ಈ ವರ್ಷ ಅಂದರೆ 2025ರ ಮಾರ್ಚ್‌ ತಿಂಗಳಿಗೆ ಇನ್ನು ಕೇವಲ ಮೂರು ತಿಂಗಳು ಉಳಿದಿದೆ. ಆದರೆ, ʻಸತಿ ಸುಲೋಚನ 3-3-34’ ಚಿತ್ರ ತಯಾರಿಕೆ ಯಾವ ಹಂತದಲ್ಲಿದೆ ಎಂಬುದರ ಬಗ್ಗೆ ವಿವರಗಳು ತಿಳಿದಿಲ್ಲ. ಈ ಕುರಿತು, ಶೇಷಾದ್ರಿ ಅವರನ್ನೇ ಮಾತನಾಡಿಸಿದರೆ, “ಚಿತ್ರಕಥೆ ಹಲವಾರು ಕರಡುಗಳು ದಾಟಿ ಅಂತಿಮವಾಗಿದೆ. ಆದರೆ, ನಿರ್ಮಾಪಕರಾದ ಸೃಜನ್‌ ಅವರು ತಮ್ಮʼ ಜಿಎಸ್‌ಟಿʼ ಬಿಡುಗಡೆಯಲ್ಲಿ ಮಗ್ನರಾಗಿರುವುದರಿಂದ ತುಸು ತಡವಾಗಿದೆ. ಆ ಚಿತ್ರ ಬಿಡುಗಡೆಯಾದ ನಂತರ ʻಸತಿ ಸುಲೋಚನ 3-3-34ʼ ತಯಾರಿಕೆ ಆರಂಭವಾಗಲಿದೆ” ಎನ್ನುವ ಆಶಾಭಾವನೆ ವ್ಯಕ್ತಪಡಿಸುತ್ತಾರೆ.

ಗ್ರಾಮಪೋನ್‌ ಹೊದಿಕೆ ಹೊರಗೆಡವಿದ ಸತ್ಯ

ಇಲ್ಲಿ ʻಸತಿ ಸುಲೋಚನ 3-3-34ʼ ರ ಪ್ರಸ್ತಾವನೆ ಏಕೆ? ಎಂದು ಓದುಗರಿಗೆ ಅನ್ನಿಸಬಹುದು. ಆದರೆ, ಮುಂದೆ ಹೇಳಲಿರುವ ಸಂಗತಿಗಳಿಗೆ ಇದೇ ಅಡಿಗಲ್ಲು. ಕನ್ನಡ ಚಿತ್ರರಂಗ ಕುರಿತು ಆಳವಾಗಿ ಬರೆಯುತ್ತಿರುವ ಲೇಖಕ ಎನ್‌ ಎಸ್.‌ ಶ್ರೀಧರಮೂರ್ತಿ ಸ್ವಲ್ಪ ದಿನಗಳ ಹಿಂದೆ ಈ ʼಸತಿ ಸುಲೋಚನʼ ಚಿತ್ರದ  ಗ್ರಾಮಫೋನ್‌ ರೆಕಾರ್ಡ್‌ನ ಮೇಲು ಹೊದಿಕೆ ಶೋಧಿಸಿದರು. ಇದರಿಂದಾಗಿ ಅದುವರೆಗೆ ಕನ್ನಡದ ಮೊದಲ ವಾಕ್ಷಿತ್ರದಲ್ಲಿ 18 ಹಾಡುಗಳಿದ್ದವು ಎಂಬ ನಂಬಿಕೆ ಸುಳ್ಳಾಯಿತು. ಗ್ರಾಮೋಫೋನ್‌ ರೆಕಾರ್ಡ್‌ನ ಮೇಲು ಹೊದಿಕೆಯಿಂದ ಈ ಚಿತ್ರದಲ್ಲಿ 30 ಹಾಡುಗಳಿರುವ ಸಂಗತಿ ಮೊದಲ ಬಾರಿಗೆ ತಿಳಿಯಿತು. ಆದರೆ ದುರಂತವೆಂದರೆ, ಇತಿಹಾಸಕಾರರು, ಇನ್ನೂ ಕೂಡ ಮೇಲು ಹೊದಿಕೆಯೊಳಗಿನ ಅಸಲಿ ರೆಕಾರ್ಡ್‌ ಸಿಕ್ಕೇ ಇಲ್ಲ. ಈ ಸಿನಿಮಾ ನಿರ್ಮಿಸಿದ ನಿರ್ಮಾಪಕರಿಗೆ ಕೂಡ ಅದರ ಬಗ್ಗೆ ಯಾವುದೇ ಅರಿವಿಲ್ಲ.

ಲಭ್ಯವಿಲ್ಲದ 1500 ನೆಗೆಟಿವ್‌ಗಳು

ಇದು ಕೇವಲ ʻಸತಿ ಸುಲೋಚನʼ ಚಿತ್ರವೊಂದರೆ ಕಥೆಯಲ್ಲ. ಭಾರತದ ಚಿತ್ರರಂಗಕ್ಕೆ ದೃಶ್ಯ ಸಂಸ್ಕೃತಿಯ ಬಗ್ಗೆ ಇರುವ ಅವಜ್ಞೆಯ ಸಾಕ್ಷಿ. ʻಸತಿ ಸುಲೋಚನʼ ನಂತರ 1934ರಲ್ಲಿ ಬಿಡುಗಡೆಯಾದ ವಾಕ್ಚಿತ್ರ ʼಭಕ್ತಧೃವʼ ಹಾಗೆಯೇ 1931ರಲ್ಲಿ ಬಿಡುಗಡೆಯಾದ ಮೊದಲ ಮೂಕಿ ಚಿತ್ರ ʼಮೃಚ್ಛಕಟಿಕʼ ಹಾಗೂ ಕನ್ನಡದ ಚಿತ್ರರಂಗದ ಇತಿಹಾಸ ನಿರ್ಮಾತೃಗಳಾದ ಬಿ. ವಿಠಲಚಾರ್ಯ, ಕೆಂಪರಾಜ ಅರಸ್‌, ಬಿ.ಎಸ್.‌ ರಂಗಾ, ಹುಣಸೂರು ಕೃಷ್ಣಮೂರ್ತಿ, ಆರ್.‌ ನಾಗೇಂದ್ರರಾವ್‌ ಅವರು ನಿರ್ಮಿಸಿದ ಮಹತ್ವದ ಚಿತ್ರಗಳ ನೆಗೆಟಿವ್ ಗಳೂ ಪತ್ತೆ ಇಲ್ಲ. ಕನ್ನಡ ಚಿತ್ರರಂಗದ ಸಂಶೋಧಕರ ಪ್ರಕಾರ ಕನ್ನಡ ಚಿತ್ರರಂಗದಲ್ಲಿ ಇದುವರೆಗೆ ತಯಾರಿಗಿದೆ ಎನ್ನಲಾದ ಐದು ಸಾವಿರಕ್ಕೂ ಹೆಚ್ಚು ಚಿತ್ರಗಳ ಪೈಕಿ 3500 ಚಿತ್ರಗಳು ನಾಪತ್ತೆ. ಈ ಪೈಕಿ 1500 ಚಿತ್ರಗಳ ನೆಗೆಟಿವ್‌ಗಳು ಲಭ್ಯವಿದ್ದರೂ, ಅವೆಲ್ಲ ವಿನಾಶದ ಅಂಚಿನಲ್ಲಿವೆ ಎಂದರೂ ತಪ್ಪಲ್ಲ. ಇದು ಸದ್ಯದ ವಾಸ್ತವದ ಸಂಗತಿ.

ಸಾಂಸ್ಕೃತಿಕ ತುರ್ತುಸ್ಥಿತಿ

ಇಂಥ ಸಂದರ್ಭದಲ್ಲಿ ನೆನಪಾಗುವುದು ಜಗದ್ವಿಖ್ಯಾತ ನಿರ್ದೇಶಕ, ನಿರ್ಮಾಪಕ ಚಿತ್ರ ಕಥೆಗಾರ ಮತ್ತು ನಟ- ಅಮೇರಿಕನ್-ಇಟಾಲಿಯನ್‌ ಮೂಲದ ಮಾರ್ಟಿನ್‌ ಸ್ಕಾರ್ಸೆಸೆ. ಜಗತ್ತಿನ ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆಗಿಂತ ಅತಿ ಮುಖ್ಯವಾಗುವುದು ಅವರಿಗೆ ಅಳಿದು ಹೋಗುತ್ತಿರುವ ಚಿತ್ರ ಅಥವಾ ದೃಶ್ಯ ಸಂಸ್ಕೃತಿಯನ್ನು ಉಳಿಸುತ್ತಿರುವುದು. ಚಲನಚಿತ್ರ ಸಂರಕ್ಷಣೆ ಮತ್ತು ಅವುಗಳಿಗೆ ಪುನರ್‌ ಜೀವ ದಾನ ಮಾಡುವ The Film Foundation ಅನ್ನು 2007ರಲ್ಲಿ ಅವರು ಹುಟ್ಟುಹಾಕಿದರು. ಮತ್ತು 2017ರಲ್ಲಿ African Film Heritage Project ಆರಂಭಿಸಿದರು. ನಾಶವಾಗುತ್ತಿರುವ ಚಿತ್ರ ಅಥವಾ ದೃಶ್ಯ ಪರಂಪರೆಯನ್ನು ಅವರು ʼಸಾಂಸ್ಕೃತಿಕ ತುರ್ತುಸ್ಥಿತಿʼ ಎಂದು ಅವರು ಹೇಳುತ್ತಾರೆ. ಅವರ The Film Foundation ಚಿತ್ರಗಳ ಸಂರಕ್ಷಣೆಯ ಮತ್ತು ಪುನಶ್ಚೇತನವನ್ನು ತನ್ನ ಗುರಿಯಾಗಿಸಿಕೊಂಡು ಕೆಲಸ ಮಾಡುತ್ತಿದೆ. ಪ್ರಪಂಚದ 19 ರಾಷ್ಟ್ರಗಳ ಏಳು ನೂರಕ್ಕೂ ಹೆಚ್ಚು ಚಿತ್ರಗಳನ್ನು ಸಂರಕ್ಷಿಸಿ, ಪುನಶ್ಚೇತನಗೊಳಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಅದು ಆಯಾ ದೇಶಗಳು ಮಾಡಬೇಕಿದ್ದ ಕೆಲಸ. ಅವು ಮಾಡದ ಕಾರಣ, ಸ್ಕಾರ್ಸೆಸೆ ಅವರು ಮುಂದೆ ಬಂದಿದ್ದಾರೆ. ಆದರೆ ಸ್ಕಾರ್ಸೆಸೆಯಿಂದ ಯಾರೂ ಏನೂ ಕಲಿತಂತೆ ಕಾಣುತ್ತಿಲ್ಲ. ಮುಖ್ಯವಾಗಿ 90 ವರ್ಷದ ಇತಿಹಾಸವಿರುವ ಕನ್ನಡ ಚಿತ್ರರಂಗ ಏನಾದರೂ ಕಲಿಯಿತೆ? ಖಂಡಿತ ಗೊತ್ತಿಲ್ಲ.  ಸ್ಕಾರ್ಸೆಸೆ ಸಂರಕ್ಷಿಸಿ, ಪುನಃಶ್ಚೇತನಗೊಳಿಸಿದ ಉದಯ ಶಂಕರ್‌ ನಿರ್ದೇಶನದ 1948ರ ʻಕಲ್ಪನಾʼ ಚಿತ್ರವನ್ನು ಕಾನ್‌ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 2012ರಲ್ಲಿ ಪ್ರದರ್ಶಿಸಿ, ಇತಿಹಾಸವನ್ನೇ ಸೃಷ್ಟಿಸಿದರು. “ಚಿತ್ರ ಸಂಸ್ಕೃತಿಯನ್ನು ಯುದ್ಧೋಪಾದಿಯಲ್ಲಿ ರಕ್ಷಿಸುವುದು ಇಂದಿನ ತುರ್ತು ಅಗತ್ಯ. ಇದು ಸರ್ಕಾರದ ಕೆಲಸ ಎಂದು ಕೈಕಟ್ಟಿ ಕೂರುವ ಸಮಯವೂ ಅಲ್ಲ. ಇದು ಒಂದು ಜನಾಂಗದ ಕರ್ತವ್ಯ. ಮುಖ್ಯವಾಗಿ ಆಯಾ ಭಾಷಾ ಚಿತ್ರರಂಗಗಳ ಕರ್ತವ್ಯ”, ಎನ್ನುತ್ತಾರೆ ಸ್ಕಾರ್ಸೆಸಿ.

ಇಷ್ಟೆಲ್ಲ ವಿವರಗಳನ್ನು ನೀಡುತ್ತಿರುವುದು, ಮಹತ್ವಾಕಾಂಕ್ಷೆಯ ಕರ್ನಾಟಕ ಚಲನಚಿತ್ರ ಅಕಾಡೆಮಿ ಎಡವುತ್ತಿರುವುದೆಲ್ಲಿ? ಎಂಬುದನ್ನು ಅರ್ಥ ಮಾಡಿಸಲು ಮಾತ್ರ. ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ನಮ್ರ ಪ್ರಯತ್ನದ ಇದು.

ದೃಶ್ಯ ಸಂಸ್ಕೃತಿ ಮತ್ತು ಪ್ರಜಾತಂತ್ರದ ಬುನಾದಿ

ದೃಶ್ಯ ಸಂಸ್ಕೃತಿಯನ್ನು ಕಾಪಾಡುವ ಅದನ್ನು ಪ್ರಜಾತಂತ್ರ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಪ್ರಯತ್ನ ವಿಶ್ವದಲ್ಲಿ ಆರಂಭವಾದದ್ದು ಇಪ್ಪತ್ತನೇ ಶತಮಾನದ ಆದಿಯಲ್ಲಿ. ಪ್ರಥಮ ಮಹಾಯುದ್ಧದ ಕಾಲದಲ್ಲಿ. ಆ ಸಂದರ್ಭದಲ್ಲಿ ಅತಿಮುಖ್ಯ ಕಾರಣಕ್ಕಾಗಿ ದೃಶ್ಯ ಮಾಧ್ಯಮಕ್ಕೆ ಸಂಬಂಧಿಸಿದ ಎಲ್ಲ ರೀತಿಯ ವಸ್ತುಗಳನ್ನು ಸಂರಕ್ಷಿಸುವ ಅಗತ್ಯ ಎಲ್ಲರಿಗೂ ಢಾಳಾಗಿ ಕಾಣಿಸತೊಡಗಿತು. ಏಕೆಂದರೆ ಯುದ್ಧದ ನಂತರ ಆ ಕಾಲದ ಸಮಾಜವನ್ನು ದಾಖಲಿಸಿದ ಸಿನಿಮಾಗಳನ್ನು ಮತ್ತು ದಾಖಲೆಗಳನ್ನು ನಾಶ ಮಾಡಲಾಯಿತು. 1930ರ ವೇಳೆಗೆ ಇದರ ಅಗತ್ಯವನ್ನು ಮನಗಂಡ ವಿಶ್ವದ ಚಿತ್ರರಂಗ The Federation Internationale des Archives du film (FIAF) ಎಂಬ ಸಂಸ್ಥೆಯನ್ನು ಹುಟ್ಟುಹಾಕಿತು. ಇಂದು ಈ ಸಂಸ್ಥೆಯ 120 ಶಾಖೆಗಳು ವಿಶ್ವದ ಅರವತ್ತು ರಾಷ್ಟ್ರಗಳಲ್ಲಿರುವುದು ಸಿನಿಮಾಗಳ ಸಂರಕ್ಷಣೆ ಮತ್ತು ಪುನಶ್ಚೇತನದ ಅಗತ್ಯವನ್ನು ಎತ್ತಿ ಹಿಡಿಯುತ್ತದೆ ಎಂದು ಖ್ಯಾತ ಸಿನಿಮಾ ಪತ್ರಕರ್ತ ಮತ್ತು ಇತಿಹಾಸಕಾರ ಥಾಮಸ್‌ ಬಲ್ಲಾಹುಸೇನ್‌ History and Function of Film Archives ಎಂಬ ತಮ್ಮ ಪ್ರಬಂಧದಲ್ಲಿ ಹೇಳಿರುವ ಮಾತುಗಳು ಎಚ್ಚರಿಕೆಯ ಗಂಟೆ ಎಂದು ಯಾರೂ ಭಾವಿಸಿದಂತೆ ಕಾಣಿಸುತ್ತಿಲ್ಲ. ನಮ್ಮ ದೇಶದ ಸಿನಿಮಾ ರಕ್ಷಣೆಯ ಪರಂಪರೆಯನ್ನು ಗಮನಿಸಿದರೆ, ಭಾರತದ ಮೊದಲ ವಾಕ್ಚಿತ್ರ ʻಅಲಂ ಅರʼ ಚಿತ್ರವನ್ನು ಅದರಲ್ಲಿದ್ದ ಬೆಳ್ಳಿ extract ಮಾಡಿಕೊಳ್ಳಲು ಮಾರಲಾಯಿತಂತೆ. ಇದು, ನಿಜ ಕೂಡ. ಏಕೆಂದರೆ, ನಮ್ಮಲ್ಲಿ ಸಿನಿಮಾವನ್ನು ಕೇವಲ ವಾಣಿಜ್ಯ ದೃಷ್ಟಿಯಿಂದ ಮಾತ್ರ ನೋಡಲಾಗುತ್ತಿದ್ದು, ಅದರ ಸಾಂಸ್ಕೃತಿಕ ಅಗತ್ಯವನ್ನು ಮರೆತೇ ಬಿಟ್ಟಿದ್ದೇವೆ. ಹಾಗಾಗಿ, ಭಾರತದ ಸಿನಿಮಾ ಪರಂಪರೆಯ ದೊಡ್ಡ ಆಸ್ತಿಯನ್ನು ನಾವು ಈಗಾಗಲೇ ಕಳೆದುಕೊಂಡಿದ್ದೇವೆ ಎನ್ನುವುದು ಅತ್ಯಂತ ವಿಷಾದದ ಸಂಗತಿ.

ಎನ್‌ ಎಫ್‌ ಎ ಐ ಮತ್ತು ಚಿತ್ರ ಪರಂಪರೆಯ ಪ್ರತಿಷ್ಠಾನ

ಹಾಗೆಂದು ನಮ್ಮ ದೇಶದಲ್ಲಿ ಸಿನಿಮಾ ರಕ್ಷಣೆಯ ಮತ್ತು ಪುನಶ್ಚೇತನಗೊಳಿಸುವ ಪ್ರಯತ್ನ ನಡೆದೇ ಇಲ್ಲ ಎಂದು ಹೇಳಲಾಗುವುದಿಲ್ಲ. ಸಿನಿಮಾ ಸಂಸ್ಕೃತಿಯನ್ನು ಸಂರಕ್ಷಿಸುವ ಮತ್ತು ಅಳಿದುಹೊಗುತ್ತಿರುವ ಚಿತ್ರಗಳನ್ನು ಪುನಶ್ಚೇತನಗೊಳಿಸಲು 1964ರಲ್ಲಿ ಕಾಂಗ್ರೆಸ್‌ ನೇತೃತ್ವದ ಕೇಂದ್ರ ಸರ್ಕಾರ ಪುಣೆಯಲ್ಲಿ ರಾಷ್ಟ್ರೀಯ ಚಲನಚಿತ್ರ ಭಂಡಾರ National Film Archives of India (NFAI) ಅನ್ನು ಹುಟ್ಟುಹಾಕಿತು. ಇದು 2020ರವರೆಗೂ ಸ್ವತಂತ್ರವಾಗಿ ತನ್ನದೇ ಸ್ವಾಯತ್ತತೆಯನ್ನು ಉಳಿಸಿಕೊಂಡಿತ್ತು. ಹಾಗಾಗಿ ಅಂಕಿ-ಅಂಶಗಳ ಪ್ರಕಾರ ಅದರ ಸಂಗ್ರಹದಲ್ಲಿ ಒಂದು ಲಕ್ಷ ಚಿತ್ರಗಳನ್ನು, ಆ ಚಿತ್ರಗಳಿಗೆ ಸಂಬಂಧಿಸಿದ ಚಿತ್ರಗಳ ಪೋಸ್ಟರ್ಸ್‌, ಚಿತ್ರಕಥೆಯ ಕರಡು, ಸ್ಥಿರ ಚಿತ್ರಗಳು ಹಾಗು ಇತರ ದಾಖಲೆಗಳನ್ನು ಸಂಗ್ರಹಿಸಿಟ್ಟಿರುವುದು ಈ ತಲೆಮಾರಿಗೆ ದಕ್ಕಿರುವ ಆಸ್ತಿ. ಈಗ NFAI ಈ ಎಲ್ಲ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಕ್ರಿಯೆಯಲ್ಲಿ ತನ್ನನ್ನು ತೀವ್ರವಾಗಿ ತೊಡಗಿಸಿಕೊಂಡಿದೆ. ಇದಕ್ಕಾಗಿ 5000 ಚಿತ್ರಗಳನ್ನು ಆಯ್ಕೆ ಮಾಡಿಕೊಂಡಿರುವುದಾಗಿ NFAI ಮೂಲಗಳು ಖಚಿತ ಪಡಿಸಿವೆ.

ವಿಲೀನ ತಂದ ಪ್ರತಿರೋಧ

ದುರಾದೃಷ್ಟದ ಸಂಗತಿ ಎಂದರೆ ಹಿಂದೂ ರಾಷ್ಟ್ರ ನಿರ್ಮಾಣದ ಕನಸು ನನಸಾಗಿಸುವ ಪ್ರಯತ್ನದಲ್ಲಿರುವ ಬಿಜೆಪಿ ನೇತೃತ್ವದ NDA ಸರ್ಕಾರ 2022ರಲ್ಲಿ National Film Archives of India ಅನ್ನು, Films Division, (FD) Directorate of Film Festivals (DFF), and Children’s Film Society of India (CFSI)ಯನ್ನು National Film Development Corporation (NFDC) ಜೊತೆಯಲ್ಲಿ ವಿಲೀನಗೋಳಿಸಿದೆ. ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಈ ಬಗ್ಗೆ ಖಚಿತವಾದ ತಾರ್ಕಿಕ ನಿಲುವನ್ನು ಕೂಡ ಪ್ರಕಟಿಸಲಿಲ್ಲ. ಇಡೀ ಭಾರತೀಯ ಚಿತ್ರರಂಗ ಇದನ್ನು ವಿರೋಧಿಸಿದರೂ, ಅದರ ಬಗ್ಗೆ ತಲೆಕೆಡಿಸಿಕೊಳ್ಳದಿರುವುದು ಆಶ್ಚರ್ಯದ ಸಂಗತಿ.

WhatsApp Image 2025 11 25 at 6.17.28 PM

ಸರ್ಕಾರದಿಂದ ಅಕಾಡೆಮಿಗೆ ಹಸ್ತಾಂತರ

ಇಷ್ಟೆಲ್ಲ ಹಿನ್ನೆಲೆಯನ್ನು ಹೇಳುತ್ತಿರುವುದರ ಉದ್ದೇಶ ಇಷ್ಟೆ; ಸರಿಯಾದ ಇತಿಹಾಸವನ್ನು, ಒಂದು ಸಾಮಾಜಿಕ ಕಳಕಳಿಯ ಚಳವಳಿಯೊಂದು ಇದುವರೆಗೆ ನಡೆದು ಬಂದ ದಾರಿಯನ್ನು ಸರಿಯಾಗಿ ಗುರುತಿಸದಿದ್ದರೆ ಅಥವಾ ಅರ್ಥೈಸದಿದ್ದರೆ, ಅದು ಇಡೀ ಸಾಮಾಜಿಕ ಕಳಕಳಿಗೆ ಮಾಡುವ ಅನ್ಯಾಯ ಎಂಬ ತಿಳಿವಳಿಕೆಯಿಂದ ಈ ವಿವರಗಳನ್ನು ನೀಡಲಾಗಿದೆ.

ಬಹಳ ಕಾಲ ನಮ್ಮ ತೊಂಭತ್ತು ವರ್ಷದ ಇತಿಹಾಸವಿರುವ ಕರ್ನಾಟಕ ಚಿತ್ರರಂಗದ ಪರಂಪರೆ-ಆಸ್ತಿಯ ರಕ್ಷಣೆ ವಾರ್ತಾ ಮತ್ತು ಪ್ರಚಾರ ಇಲಾಖೆಯಡಿಯಲ್ಲಿ ಇತ್ತು. ಕರ್ನಾಟಕ ಚಲನಚಿತ್ರ ಅಕಾಡೆಮಿ ಸ್ಥಾಪನೆಯಾದ ನಂತರ ಅದರ ಬಹಳಷ್ಟು ಭಾಗವನ್ನು ಅಕಾಡೆಮಿಗೆ ಹಸ್ತಾಂತರಿಸಲಾಯಿತು. ಆದರೆ, ಚಿತ್ರರಂಗಕ್ಕೆ ಸಂಬಂಧಿಸಿದ ಬಹಳಷ್ಟು ಆಸ್ತಿ ಇನ್ನೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲೇ ಇದೆ ಎಂದು ಕೆಲವು ಮೂಲಗಳು ಖಚಿತಪಡಿಸಿವೆ. ಇರಲಿ, ಚಿಂತೆ ಇಲ್ಲ. ಎಷ್ಟೋ ಮಂದಿ ನಿರ್ಮಾಪಕರು ತಮ್ಮ ಚಿತ್ರಗಳ ನೆಗೆಟಿವ್‌ಗಳನ್ನು ರಕ್ಷಿಸಿಡಲು ಸೂಕ್ತ ಅನುಕೂಲವಿಲ್ಲದೆ, ತಮ್ಮ ಕಪಾಟುಗಳಲ್ಲಿ ಕೊಳೆಯಲು ಬಿಟ್ಟುಬಿಟ್ಟಿದ್ದಾರೆ. ಅದರ ಮೌಲ್ಯ ಕೂಡ ಅವರಿಗೆ ಗೊತ್ತಿಲ್ಲ ಎಂದೇ ಹೇಳಬಹುದು. ಕೆಲವು ಚಿತ್ರಗಳಂತೂ, ಚಿತ್ರಮಂದಿರಗಳಲ್ಲಿ, ಗೋಡೌನ್ಗಳಲ್ಲಿ ಉಳಿದುಬಿಟ್ಟಿದೆ. ಅವುಗಳನ್ನು ಹುಡುಕಿ ಗುರುತಿಸುವ ಕೆಲಸ ನಡೆದಿದ್ದರೂ, ಅದಕ್ಕೆ ಕರ್ನಾಟಕ ಚಲನಚಿತ್ರ ಅಕಾಡೆಮಿಯಿಂದ ಯಾವುದೇ ರೀತಿಯ ನೆರವು ದೊರೆಯದಿರುವುದು ದುರಾದೃಷ್ಟಕರ, ಎನ್ನುತ್ತಾರೆ ಈ ಕ್ರಿಯೆಯಲ್ಲಿ ತಮ್ಮನ್ನು ತಮ್ಮ ಸ್ವಂತ ಆಸಕ್ತಿಯಿಂದ ತೊಡಗಿಸಿಕೊಂಡಿರುವ ಪತ್ರಕರ್ತ ಬಿ. ಎನ್.‌ ಸುಬ್ರಹ್ಮಣ್ಯ.

ರಾಷ್ಟ್ರೀಯ ಚಲನಚಿತ್ರ ಪರಂಪರೆ ಮಿಷನ್‌

ಕೇಂದ್ರದ ವಾರ್ತಾ ಮತ್ತು ಪ್ರಸಾರ ಸಚಿವಾಲಯಕ್ಕೆ 2022ರಲ್ಲಿ ಇದ್ದಕ್ಕಿದ್ದಂತೆ ನಿದ್ರೆಯಿಂದ ಎಚ್ಚರವಾಗಿ ದೇಶದ ದೃಶ್ಯ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಬೇಕೆಂದು ಪ್ರೇರೇಪಣೆಯಾಯಿತು. ಹಾಗಾಗೇ ರಾಷ್ಟ್ರೀಯ ಚಲನಚಿತ್ರ ಪರಂಪರೆಯ ರಕ್ಷಣೆ (National Film Heritage Mission) ಆರಂಭವಾಯಿತು. ಅದಕ್ಕಾಗಿ ಆಯ್ದ 2200 ಚಲನಚಿತ್ರಗಳ ಸಂರಕ್ಷಣೆ, ಪುನಶ್ಚೇತನಕ್ಕೆ 363 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿ National Film Archives of Indiaಗೆ ಅದರ ಜವಾಬ್ದಾರಿಯನ್ನು ನೀಡಿತು. ಈ 2200 ಚಿತ್ರಗಳ ಆಯ್ಕೆಯ ಮಾನದಂಡ ಮಾತ್ರ ಅನುಮಾನಾಸ್ಪದವಾಗಿಯೇ ಉಳಿಯಿತು. ಇದಲ್ಲದೆ National Film Heritage Mission ಅಡಿಯಲ್ಲಿ National Film Archives of India ದಲ್ಲಿರುವ ಚಿತ್ರಗಳ ರಕ್ಷಣೆಗೆ ಅವುಗಳು ಮತ್ತಷ್ಟು ಹದಗೆಡದಂತೆ ಕಾಪಾಡಲು ಹಾಗೂ ಅವುಗಳ ಡಿಜಿಟಲೀಕರಣಕ್ಕೆ 597 ಕೋಟಿ ರೂಪಾಯಿಗಳನ್ನು ಆಯವ್ಯಯದಲ್ಲಿ ಮೀಸಲಿಟ್ಟಿತು. ಆದರೆ ದುರಾದೃಷ್ಟಕರ ಸಂಗತಿ ಎಂದರೆ ಆಗ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧಿಕಾರ ಹಿಡಿದ ಸಂಘ ಪ್ರಣೀತ ಚಿತ್ರಕರ್ತರು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ಮೇಲೆ ತಮ್ಮ ಸಂಸದ, ಸಚಿವರಿಂದ ಒತ್ತಡ ತಂದು ಅಕಾಡೆಮಿಯಲ್ಲಿ ಕೊಳೆಯುತ್ತಿರುವ ಚಿತ್ರಗಳನ್ನು ರಕ್ಷಿಸಲು ಯಾವ ಪ್ರಯತ್ನವನ್ನೂ ಮಾಡಲಿಲ್ಲ.

ಸಿನಿಮಾ ರಕ್ಷಣೆಯಲ್ಲಿ ಕರ್ನಾಟಕದ್ದು ಪ್ರಥಮ ಸ್ಥಾನ

ತೊಂಭತ್ತು ವರ್ಷಗಳಲ್ಲಿ ಕರ್ನಾಟಕ ತನ್ನ ಅಪಾರವಾದ ಸಿನಿಮಾ ಸಂಪತ್ತನ್ನು ಕಳೆದುಕೊಂಡಿರುವುದು ನಿಜವಾದರೂ, ಇಲ್ಲಿ ಒಂದು ಸಂಗತಿಯನ್ನು ಗಮನಿಸಬೇಕು. ಸಿನಿಮಾ ಪರಂಪರೆಯ ರಕ್ಷಣೆ ಮೊದಲಿನಿಂದಲೂ ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆಯ ಆದ್ಯತೆಗಳಲ್ಲಿ ಒಂದಾಗಿತ್ತು. ಕರ್ನಾಟಕ ಸರ್ಕಾರ 80ರ ದಶಕದಲ್ಲಿಯೇ ತನ್ನದೇ ಆದ ಒಂದು ಸಿನಿಮಾ ಭಂಡಾರವನ್ನು ಹೊಂದಿತ್ತು. National Film Archives of India ವನ್ನು ಹೊರತುಪಡಿಸಿದರೆ, ಅಂಥ ಪ್ರಯತ್ನ ಮಾಡಿದ ಮೊದಲ ರಾಜ್ಯ ಕರ್ನಾಟಕ. National Film Archives of India ದಲ್ಲಿ ತರಬೇತಿ ಪಡೆದವರು, ಇಲ್ಲಿ ಸೆಲ್ಯೂಲಾಯಿಡ್‌ ಚಿತ್ರಗಳ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದ ಕಾರಣ, ಇಂದು ಕೆಲವು ಚಿತ್ರಗಳ ಮೂಲ ಪ್ರತಿಗಳಾದರೂ ನಮ್ಮಲ್ಲಿ ಉಳಿದಿವೆ. ಇಲಾಖೆಯ ಮೂಲಗಳ ಪ್ರಕಾರ ಸುಮಾರು 200 ಸೆಲ್ಯೂಲಾಯಿಡ್‌ ಚಿತ್ರಗಳು, ಸಾವಿರಾರು ಸಾಕ್ಷ್ಯ ಚಿತ್ರಗಳು, ಪೋಸ್ಟರ್‌, ಸ್ಥಿರಚಿತ್ರಗಳು ಈ ಭಂಡಾರದಲ್ಲಿ ಇವೆ. ಸುಬ್ಬರಾವ್‌ ಸಮಿತಿ 1994ರಲ್ಲಿ ನೀಡಿದ ವರದಿಯಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಸ್ಥಾಪನೆ ಮಾತ್ರವಲ್ಲದೆ, ಕರ್ನಾಟಕದ್ದೇ ಅದ ಪ್ರತ್ಯೇಕ ಚಲನಚಿತ್ರ ಭಂಡಾರ ಸ್ಥಾಪನೆಯ ಅಗತ್ಯವನ್ನು ವರದಿಯಲ್ಲಿ ಶಿಫಾರಸು ಮಾಡಲಾಗಿತ್ತು. ಅಕಾಡೆಮಿ ಸ್ಥಾಪನೆಯಾದ ನಂತರ, ಅದರ ಮೊದಲ ಅಧ್ಯಕ್ಷರಾದ ಟಿ. ಎಸ್.‌ ನಾಗಾಭರಣ, ಈ ಜವಾಬ್ದಾರಿಯನ್ನು ಸರಿಯಾಗಿಯೇ ನಿರ್ವಹಿಸಿದರು. ಕರ್ನಾಟಕ ಚಲನಚಿತ್ರ ಭಂಡಾರದ ರೂಪುರೇಷೆಗಳನ್ನು ಮೊದಲ ರೂಪಿಸಿದವರು ಅವರೇ. ಅದಕ್ಕೆಂದು ಅಂದಿನ ಕಾಲಕ್ಕೆ ಆರು ಕೋಟಿ ರೂಪಾಯಿಗಳ ಯೋಜನೆಯೊಂದನ್ನು ರೂಪಿಸಲಾಗಿತ್ತು. ಇದಕ್ಕೆಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ನೆರವು ನೀಡಲು ಮುಂದಾಯಿತು. ಈ ಆಲೋಚನೆಯ ಹಿನ್ನೆಲೆಯಲ್ಲಿ BDA ಒಂದು ಕೋಟಿ ರೂಪಾಯಿಯನ್ನು ಬಿಡುಗಡೆ ಕೂಡ ಮಾಡಿತ್ತು. ಸರ್ಕಾರ ಕೂಡ ತನ್ನ ಆಯವ್ಯಯದಲ್ಲಿ 2 ಕೋಟಿ ರೂಪಾಯಿ ಘೋಷಿಸಿತು. ಎಸ್.‌ ವಿ. ರಾಜೇಂದ್ರ ಸಿಂಗ್‌ ಬಾಬು ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ಈ ಯೋಜನೆಗಾಗಿ ಸರ್ಕಾರದಿಂದ ನೂರು ಕೋಟಿ ರೂಪಾಯಿ ಅನುದಾನವನ್ನು ಕೋರಿದರು. ಆದರೆ, ʼಬಿಫೆಸ್‌ʼ ಸರ್ಕಾರದ ಮತ್ತು ಅಕಾಡೆಮಿಯ ಮೊದಲ ಆದ್ಯತೆಯಾದ್ದರಿಂದ ಯೋಜನೆ ಕುಂಠಿತವಾಯಿತು.

ಕಾಸರವಳ್ಳಿ ಚಿತ್ರಗಳ ಸ್ಥಿತಿ-ಗತಿ

ಇತ್ತೀಚೆಗೆ ಗಿರೀಶ್‌ ಕಾಸರವಳ್ಳಿ ಅವರೊಂದಿಗೆ ಮಾತನಾಡುತ್ತಿದ್ದಾಗ ಅವರ ಚಿತ್ರಗಳ ನೆಗೆಟಿವ್‌ಗಳ ಸ್ಥಿತಿ ಹೇಗಿದೆ? ಎಂದು ಕೇಳಿದಾಗ, ಅವರು ಹೇಳಿದ ಉತ್ತರದಿಂದ ಎದೆಬಡಿತ ನಿಂತು ಹೋಯಿತು. “ಸಾಮಾನ್ಯವಾಗಿ ತಾವು ನಿರ್ದೇಶಿಸುವ ಚಿತ್ರಗಳು ನಿರ್ದೇಶಕರ ಸ್ವತ್ತಾಗಿರುವುದಿಲ್ಲ. ಅವೆಲ್ಲ, ನಿರ್ಮಾಪಕರ ಸ್ವತ್ತಾಗಿರುತ್ತದೆ. ನನ್ನ ಚಿತ್ರದ ನೆಗೆಟೀವ್‌ ಗಳೆಲ್ಲ. ಪ್ರಸಾದ್‌ ಲ್ಯಾಬ್‌ ನಲ್ಲಿ ಇದ್ದವು. ಅದು ಈಗ ಮುಚ್ಚಿದೆ. ಮುಚ್ಚುವ ಮುನ್ನ ಪ್ರಸಾದ್‌ ಲ್ಯಾಬ್ ನವರು, ನಿರ್ಮಾಪಕರಿಗೆ ತಮ್ಮ ಚಿತ್ರಗಳ ನೆಗೆಟಿವ್‌ ಗಳನ್ನು ತೆಗೆದುಕೊಂಡು ಹೋಗುವಂತೆ ಮನವಿ ಮಾಡಿದರು. ಇಷ್ಟು ದಿನ ಕಾಪಾಡಿದ್ದಕ್ಕೆ ಸಣ್ಣ ರೂಪದ ಬಾಡಿಗೆ ಕೊಟ್ಟರೆ ಸಾಕೆಂದರು. ನನ್ನ ಚಿತ್ರಗಳನ್ನು ನಿರ್ಮಿಸಿದವರು, ಬಹು ಮಂದಿ ಕಮರ್ಷಿಯಲ್‌ ಚಿತ್ರಗಳ ನಿರ್ಮಾಪಕರಲ್ಲ. ಅವರ ಬಳಿ ಹಣವೂ ಇಲ್ಲ. ಹಾಗಾಗಿ ಆ ಚಿತ್ರಗಳ ನೆಗೆಟಿವ್‌ಗಳ ಕಥೆ ಏನಾಗಿದೆ ನನಗೆ ಗೊತ್ತಿಲ್ಲ. ಹಾಗಾಗಿ ನನ್ನ ಮೊದಲ ಚಿತ್ರ ʻಘಟಶ್ರಾದ್ಧʼದಿಂದ ʻದ್ವೀಪ ಚಿತ್ರದವರೆಗಿನ, ನೆಗಟಿವ್‌ಗಳ ಬಗ್ಗೆ ನನಗೇನೂ ಗೊತ್ತಿಲ್ಲ, ಅವು ಎಲ್ಲಿ ಕೊಳೆಯುತ್ತಿವೆ ಎಂಬುದರ ಅರಿವೂ ನನಗಿಲ್ಲ” ̤ ಆದರೆ ಕಾಸರವಳ್ಳಿ ಅವರ ಚೊಚ್ಚಲ ಚಿತ್ರವಾದ ʻಘಟಶ್ರಾದ್ಧʼ ಚಿತ್ರವನ್ನು Martin Scorsese’s Film Foundation, the Hobson/Lucas Family Foundation (George Lucas), and the film heritage foundation ಸಹಯೋಗದಲ್ಲಿ ಪುನಶ್ಚೇತನಗೊಳಿಸಲಾಯಿತು. ಅದನ್ನು ಕಳೆದ ವರ್ಷದ 81ನೇ ವೆನಿಸ್‌ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಯಿತು.

202971 emjuzlcakt 1724533832
ಘಟಶ್ರಾದ್ಧ ಚಿತ್ರದ ದೃಶ್ಯ

ವೈಜ್ಞಾನಿಕ ವರದಿ ಹೊದದ್ದೆಲ್ಲಿಗೆ

2020ರಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಅಧಿಕಾರ ವಹಿಸಿಕೊಂಡ ಸುನಿಲ್‌ ಪುರಾಣಿಕ್.‌ ಕರ್ನಾಟಕ ಚಲನಚಿತ್ರ ಭಂಡಾರ ಮತ್ತು ಕರ್ನಾಟಕ ಚಲನಚಿತ್ರ ವಸ್ತುಸಂಗ್ರಹಾಲಯ ಕುರಿತು ಆಸಕ್ತಿ ವಹಿಸಿದರು. ಆಗ ಇಂಥ ಕೆಲಸದಲ್ಲಿ ತಜ್ಞರಾದವರ ಸಮಿತಿಯೊಂದನ್ನು ಸ್ಥಾಪಿಸಲಾಯಿತು. ಪುರಾಣಿಕ್‌ ಅವರೇ ಅಧ್ಯಕ್ಷರಾದ ಏಳು ಮಂದಿ ಸಮಿತಿ, ತಿಂಗಳುಗಳ ಕಾಲ ಶ್ರಮಿಸಿ, ಪುಣೆಯ National Film Archives of Indiaಗೆ ಭೇಟಿ ನೀಡಿ, ಅಲ್ಲಿನ ಎಲ್ಲ ಪ್ರಕ್ರಿಯೆಗಳನ್ನು ಅಧ್ಯಯನ ಮಾಡಿ, ವರದಿಯೊಂದನ್ನು ಸಿದ್ಧಪಡಿಸಿತು. ಆ ಸಂದರ್ಭದಲ್ಲಿ National Film Archives of India ಈ ರೀತಿಯ state of art ಚಿತ್ರ ಭಂಡಾರ ಸ್ಥಾಪನೆಗೆ ಎಲ್ಲ ರೀತಿಯಲ್ಲೂ ನೆರವಾಗುವ ಭರವಸೆಯನ್ನೂ ನೀಡಿತ್ತು. ವೈಜ್ಞಾನಿಕವಾಗಿ ಸಿದ್ಧವಾದ ವರದಿಯನ್ನು ಅಕಾಡೆಮಿಗೆ ಸಲ್ಲಿಸಿದರೂ, ಇದುವರೆಗೆ ಅದು ಸರ್ಕಾರದ ಕೈ ಸೇರಿದ ಬಗ್ಗೆ ಅರಿವಿಲ್ಲ. (ವರದಿಯ ಮೂಲ ಪ್ರತಿ ಈದಿನದ ಬಳಿ ಲಭ್ಯವಿದೆ. ಹಲವು ದಾಖಲೆಗಳ ಅನುಬಂಧವಿರುವ ಈ ವರದಿಯಲ್ಲಿ ಕರ್ನಾಟಕ ಸಿನಿಮಾ ಸಂಸ್ಕೃತಿ-ಪರಂಪರೆಯ ರಕ್ಷಣೆಗೆ ಅಗತ್ಯವಾದ ಎಲ್ಲ ಶಿಫಾರಸುಗಳಿವೆ). ಆದರೆ ಪಕ್ಕದ ಕೇರಳ ರಾಜ್ಯ ಈಗಾಗಲೇ ಇಂಥ ಚಲನಚಿತ್ರ ಭಂಡಾರವನ್ನು CIFRA (centre for International Film Research and Archives)

ಹೋದಿದ್ದು, ಅದು 2018ರಲ್ಲಿ ಕಾರ್ಯಾರಂಭ ಮಾಡಿತು. ಕೇರಳ ಚಲನಚಿತ್ರ ಭಂಡಾರದಲ್ಲಿ ಈಗಾಗಲೇ 2000 ಚಿತ್ರಗಳಿರುವುದಾಗಿ ಆ ಅಕಾಡೆಮಿಯ ಮೂಲಗಳು ಹೇಳುತ್ತವೆ.

ಸುನಿಲ್‌ ಪುರಾಣಿಕ್‌ ನಂತರ ಬಂದ ಅಧ್ಯಕ್ಷರು, ಹಿಂದಿನ ವರದಿಯನ್ನು ಗಣನೆಗೆ ತೆಗೆದುಕೊಳ್ಳದೆ, ಮತ್ತೊಂದು ಸಮಿತಿಯನ್ನು ರೂಪಿಸಿದರು. ಆದರೆ ಆ ಸಮಿತಿ ವರದಿ ನೀಡಿರುವ ಬಗ್ಗೆ ಇದುವರೆಗೆ ಯಾವ ಮಾಹಿತಿಯೂ ಇಲ್ಲ. ಇಷ್ಟರಲ್ಲಿ ಬಿಜೆಪಿ ಸರ್ಕಾರ ಅಧಿಕಾರ ಕಳೆದುಕೊಂಡು, ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೂ, ಎನ್.‌ ವಿದ್ಯಾಶಂಕರರಂಥ ಚಿತ್ರರಂಗದ ಬಗ್ಗೆ ತಿಳವಳಿಕೆ ಇರುವವರು ಸಲ್ಲಿಸಿದ ವರದಿಗೆ ಯಾವುದೇ ಬೆಲೆ ಬರಲಿಲ್ಲ.

ಸಾಧು ಕೋಕಿಲ ಸಮಿತಿ ಪ್ರವಾಸ

ಈಗ ಕರ್ನಾಟಕ ಚಲನಚಿತ್ರ ಅಕಾಡೆಮಿಯು ಮತ್ತೊಂದು ಕರ್ನಾಟಕ ಚಲನಚಿತ್ರ ಭಂಡಾರವನ್ನು ಉನ್ನತೀಕರಣಗೊಳಿಸಲು ಮತ್ತೊಂದು ಸಮಿತಿಯನ್ನು ರೂಪಿಸಿದೆ. ಈ ಸಮಿತಿಯ ನೇತೃತ್ವವನ್ನು ವಹಿಸಿರುವವರು ಅಕಾಡೆಮಿ ಅಧ್ಯಕ್ಷರಾದ ಸಾಧು ಕೋಕಿಲ. ಹಿಂದಿನ ವರದಿಗಳನ್ನೆಲ್ಲ ಮೂಲೆಗುಂಪು ಮಾಡಿ, ಮತ್ತೆ ಸಮಿತಿಯೊಂದನ್ನು ರೂಪಿಸುವ ಅಗತ್ಯ ಮಾತ್ರ ಅರ್ಥವಾಗುತ್ತಿಲ್ಲ. ಈ ಸಮಿತಿ ಮತ್ತೆ ಪುಣೆಯ ರಾಷ್ಟ್ರೀಯ ಚಲನಚಿತ್ರ ಭಂಡಾರದ ಕಾರ್ಯವೈಖರಿಯನ್ನು ಅಧ್ಯಯನ ಮಾಡಿ, ಮುಂಬೈನ ಸಿನಿಮಾ ಮ್ಯೂಸಿಯಂಗೆ ಭೇಟಿ ನೀಡಿ ನಂತರ ಅದೇ ಮಾದರಿಯ ವ್ಯವಸ್ಥೆಯನ್ನು ಕರ್ನಾಟಕದಲ್ಲಿಯೂ ರೂಪಿಸಲು ವರದಿಯೊಂದನ್ನು ನೀಡಲಿದೆ. ಆದರೆ ಅಕಾಡೆಮಿಯ ತಕ್ಷಣದ ತುರ್ತು, ಜನವರಿ ಕೊನೆಯ ವಾರದಲ್ಲಿ ನಡೆಯಲಿರುವ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ʻಬಿಫೆಸ್‌ʼ ಸಂಘಟಿಸುವುದಾದ್ದರಿಂದ, ವರದಿ ಯಾವಾಗ ಹೊರಬರುತ್ತದೆ ಎಂದು ಈ ಕ್ಷಣದಲ್ಲಿ ಹೇಳುವುದು ಕಷ್ಟ. ಸರ್ಕಾರ ಈ ಸಮಿತಿಯ ಅಧ್ಯಯನಕ್ಕೆ ಹಣ ಕೂಡ ಬಿಡುಗಡೆ ಮಾಡಿದೆ. ಈ ಹಣ ತೆರಿಗೆದಾರರ ಹಣ ಎಂದು ಮತ್ತೊಮ್ಮೆ ಹೇಳಬೇಕಿಲ್ಲ. ಸಮಿತಿಗಳನ್ನು ರಚಿಸುವುದು ಸರ್ಕಾರದ ತಂತ್ರಗಾರಿಕೆಯಲ್ಲೊಂದು ಎನ್ನುವುದಂತೂ ಮನದಟ್ಟಾಗಿದೆ. ಈಗ ಅದು ಕರ್ನಾಟಕ ಚಲನಚಿತ್ರ ಅಕಾಡೆಮಿಗೂ ತಗುಲಿರುವು ಸಾಂಕ್ರಾಮಿಕ ರೋಗವಾಗಿದೆ. ಆದರೆ ಸಾಧುಕೋಕಿಲ ಅವರ ಸಮಿತಿ ವರದಿಯನ್ನಾದರೂ, ಅಕಾಡೆಮಿ ಮತ್ತು ಸರ್ಕಾರ ಗಣನೆಗೆ ತೆಗೆದುಕೊಂಡು ಕರ್ನಾಟಕದ ಚಲನಚಿತ್ರರಂಗದ ಸಂಸ್ಕೃತಿ ಮತ್ತು ಪರಂಪರೆಯನ್ನು ರಕ್ಷಣೆ ಮಾಡುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ ಗ್ರಹಣ ಹಿಡಿದ ಕರ್ನಾಟಕ ಚಲನಚಿತ್ರ ಅಕಾಡೆಮಿ: ʻಬಿಫೆಸ್‌ʼ ಅಂತಾರಾಷ್ಟ್ರೀಯ ಚಿತ್ರೋತ್ಸವ ಎಂಬ ಗೊಂದಲದ ಗೂಡು

ಮುಗಿಸುವ ಮುನ್ನ: ಈ ಲೇಖನ ಮುಗಿಸುತ್ತಿರುವ ವೇಳೆಗೆ ಒಂದು ಒಳ್ಳೆ ಸುದ್ದಿ ಬಂದಿದೆ. The Film Heritage Foundation 1970ರಲ್ಲಿ ಪಟ್ಟಾಭಿರಾಮರೆಡ್ಡಿ ನಿರ್ಮಿಸಿ, ನಿರ್ದೇಶಿಸಿದ ಸಂಸ್ಕಾರ ಚಿತ್ರವನ್ನು ಪುನಶ್ಚೇತನಗೊಳಿಸಲು ಕೈಗೆತ್ತಿಕೊಂಡಿದೆಯಂತೆ. Arsenal – Institute for Film and Video Art, Berlin ಈ ಚಿತ್ರವನ್ನು ಬೆಂಗಳೂರಿನಲ್ಲಿ ಪ್ರದರ್ಶಿಸಲಿದೆ. ಆದರೆ ಅದು ಪ್ರದರ್ಶಿಸುತ್ತಿರುವುದು, ವಿಡಿಯೋ ಫಾರ್ಮೆಟ್‌ ನಲ್ಲಿರುವ ಚಿತ್ರವನ್ನು. ಏಕೆಂದರೆ ಮೂಲ ನೆಗೆಟೀವ್‌ ಪ್ರದರ್ಶಿಸುವ ಸ್ಥಿತಿಯಲ್ಲಿ ಇಲ್ಲ. ಈ ಚಿತ್ರ ನವೆಂಬರ್‌ 30ರಂದು ಸಂಜೆ 5ಕ್ಕೆ ಗಯಟೆ ಇನ್‌ಸ್ಟಿಟ್ಯೂಟ್‌ ಮ್ಯಾಕ್ಸ್ ಮುಲ್ಲರ್‌ ಭವನದಲ್ಲಿ ಪ್ರದರ್ಶಿಸಲಾಗುತ್ತಿದೆ.

IMG 20251121 WA0005
ಮುರಳೀಧರ ಖಜಾನೆ
+ posts

ಹಿರಿಯ ಪತ್ರಕರ್ತ. ಉದಯವಾಣಿ, ಪ್ರಜಾವಾಣಿ, ದಿ ಹಿಂದೂ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಸದ್ಯ ಸ್ವತಂತ್ರ ಪತ್ರಕರ್ತರಾಗಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಮುರಳೀಧರ ಖಜಾನೆ
ಮುರಳೀಧರ ಖಜಾನೆ
ಹಿರಿಯ ಪತ್ರಕರ್ತ. ಉದಯವಾಣಿ, ಪ್ರಜಾವಾಣಿ, ದಿ ಹಿಂದೂ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಸದ್ಯ ಸ್ವತಂತ್ರ ಪತ್ರಕರ್ತರಾಗಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...