ಇತ್ತೀಚೆಗೆ ‘ಬಡವರ ರಾಜಕುಮಾರ’ ಪುಸ್ತಕ ಬಿಡುಗಡೆಯ ಕಾರ್ಯಕ್ರಮದಲ್ಲಿ ”ನಾನು ತುಂಬಾ ಇಷ್ಟ ಪಟ್ಟು ಓದುತ್ತಿರುವುದು ಬಾಬಾಸಾಹೇಬರನ್ನು ಮಾತ್ರ” ಎಂದ ವಿಜಯ್ ಅವರ ಮಾತು ಅಲ್ಲಿದ್ದ ಎಲ್ಲರಿಗೂ ಬೆರಗು ಮೂಡಿಸಿತ್ತು. ಜ.18ರಂದು ಬರ್ತಡೆ ನೆಪದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ”ಸಂವಿಧಾನವೇ ದೇಶದ ಶ್ರೇಷ್ಠ ಗ್ರಂಥವಾಗಬೇಕು. ಸಮಾನತೆ ಎಲ್ಲರಿಗೂ ಬರಬೇಕು” ಎಂದು ಹೇಳಿದ್ದರು. ಈಗ ಅದೇ ಸಮಾನತೆಯನ್ನು ‘ಲ್ಯಾಂಡ್ ಲಾರ್ಡ್’ ಚಿತ್ರದ ಮೂಲಕ ಸಾರುತ್ತಿದ್ದಾರೆ.
ಸಿನಿಮಾ ಸೇರಿದಂತೆ ಎಲ್ಲಾ ಕಲಾಮಾಧ್ಯಮಗಳ ಬಹುದೊಡ್ಡ ಜವಾಬ್ದಾರಿ ಸಮಕಾಲೀನ ಸಮಾಜದ ಓರೆ ಕೋರೆಗಳಿಗೆ ಕನ್ನಡಿ ಹಿಡಿಯುವುದಾಗಿದೆ. ಎಲ್ಲ ಸಮುದಾಯಗಳು ಜಾತ್ಯತೀತವಾಗಿ ಸಹಬಾಳ್ವೆ ನಡೆಸುತ್ತಾ ಮುನ್ನಡೆಯಲು ಪ್ರೇರೇಪಿಸುವುದೇ ಆಗಿದೆ. ಈ ಮಾತನ್ನು ಒಪ್ಪುವಂತೆ ‘ಲ್ಯಾಂಡ್ ಲಾರ್ಡ್’ ಸಿನಿಮಾ ಮೂಡಿ ಬಂದಿದೆ.
‘ಜಂಟಲ್ ಮ್ಯಾನ್’, ‘ಗುರುಶಿಷ್ಯರು’ ಚಿತ್ರಗಳ ನಿರ್ದೇಶಕ, ‘ಕಾಟೇರ’ ಸಿನಿಮಾದ ಕಥೆಗಾರ ಜಡೇಶ್ ಕೆ.ಹಂಪಿ ಬಹಳ ಸೂಕ್ಷ್ಮವಾಗಿ ನಿರ್ದೇಶಿಸಿರುವ ಚಿತ್ರ ‘ಲ್ಯಾಂಡ್ ಲಾರ್ಡ್’. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳನ್ನು ಪ್ರತಿ ಹಳ್ಳಿಗೂ ತಲುಪಿಸಿ, ಜನ ಜಾಗೃತಿಯಾಗಿ, ಪ್ರಶ್ನಿಸುವಂತಾಗಬೇಕು ಎಂಬ ಕನಸು ಹೊತ್ತ ಸಿನಿಮಾ. ‘ಇದು ಅಳಿದವರ ಕಥೆಯಲ್ಲ, ಅಳಿದು ಉಳಿದವರ ಕಥೆ’ ಎಂಬ ಸಿನಿಮಾದ ಟ್ಯಾಗ್ ಲೈನ್ ಮತ್ತು ಸಿನಿಮಾಕ್ಕೆ ಕೋಲಾರ ಸೀಮೆಯ ಭಾಷೆಯನ್ನು ಬಳಸಿಕೊಂಡಿರುವ ಬಗೆ ಆಪ್ತವೆನಿಸುತ್ತದೆ. ಅಸಮಾನತೆ, ದಬ್ಬಾಳಿಕೆ, ಕ್ರಾಂತಿ ಹಾಗೂ ಹೋರಾಟದ ಕಥೆಯುಳ್ಳ ಸಿನಿಮಾವನ್ನು ನಿರ್ದೇಶಕರ ಜೊತೆ ಇಡೀ ಚಿತ್ರತಂಡವೇ ಹೊತ್ತು ಸಾಗುತ್ತದೆ.
ಇದನ್ನು ಓದಿ : ಧುರಂಧರ್: ಪ್ರೊಪಗ್ಯಾಂಡ ಸಿನಿಮಾಗೆ ಹೊಸ ಚೌಕಟ್ಟು
ಇದು ಹಳ್ಳಿಯಲ್ಲಿ ನಡೆಯುವ ಕಥೆ. ಸುಮಾರು 80-90ರ ದಶಕದ ಕಥೆ. ರೈತನ ಪಾತ್ರದಲ್ಲಿ ದುನಿಯಾ ವಿಜಯ್ ಕಾಣಿಸಿಕೊಳ್ಳುತ್ತಾರೆ. ಎರಡು ಎಕರೆ ಭೂಮಿಗಾಗಿ ನಿರಂತರ ಹೋರಾಟ ಮಾಡುವ ರಾಚಯ್ಯ ಸಿನಿಮಾದ ಜೀವಾಳ. ಕೋಲಾರ ಭಾಗದ ಭಾಷೆಯನ್ನು ದುಡಿಸಿಕೊಳ್ಳುವ ಜೊತೆಗೆ, ನೆಲದ ಕಥೆಯನ್ನು, ಸೊಗಡನ್ನು ಒಂದು ಚೌಕಟ್ಟಿನಲ್ಲಿ ಕಟ್ಟಿಕೊಡಲಾಗಿದೆ.
ಸಿನಿಮಾದ ಒಂದು ಡೈಲಾಗ್ ಹೀಗಿದೆ ”ಕಾಟಿ, ಗುತ್ತಿ, ಚೋಮ, ಕರಿಯನಿಗೆ ಒಲಿಯದ ಭೂಮ್ತಾಯಿ ರಾಚಯ್ಯನಿಗೆ ಒಲಿದಳು” ಎಂದು. ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಬರುವ ಗುತ್ತಿ; ಕಾರಂತರ ‘ಚೋಮನದುಡಿ’ಯಲ್ಲಿ ಬರುವ ಚೋಮನಿಗೆ ಎಂದಿಗೂ ಭೂಮಿ ಒಲಿಯುವುದಿಲ್ಲ. ಆದರೆ, ಸಮಾನತೆಗಾಗಿ ಧ್ವನಿ ಎತ್ತಿದರೆ, ನಮ್ಮ ಹಕ್ಕನ್ನು ನಾವು ಪಡೆಯಬಹುದು ಎಂಬುದನ್ನು ಸಿನಿಮಾ ಆಗುಮಾಡುತ್ತದೆ.
ಊರಿನ ಧಣಿ ಎನಿಸಿಕೊಂಡವರ ದಬ್ಬಾಳಿಕೆ, ಅವರ ಪರ ನಿಲ್ಲುವ ಕಾನೂನು, ಪೊಲೀಸ್ ಎಂಬ ವ್ಯವಸ್ಥೆ ಬಡವರನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬುದನ್ನು ಸಿನಿಮಾ ಧ್ವನಿಸುತ್ತದೆ. ರಾಚಯ್ಯನಾಗಿ ದುನಿಯಾ ವಿಜಯ್ ಹಾಗೂ ನಿಂಗವ್ವನಾಗಿ ರಚಿತ ರಾಮ್, ಸಮಾನತೆಗಾಗಿ ದುಡಿಯುವ ಮನಸುಗಳನ್ನು ಒಂದುಗೂಡಿಸಲು ಪ್ರಯತ್ನಿಸುತ್ತಾರೆ. ಇಡೀ ಸಿನಿಮಾ ಅಸ್ತಿತ್ವದ ಹೋರಾಟವಾಗಿ, ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಧ್ವನಿಸುತ್ತದೆ.
ದುನಿಯಾ ವಿಜಯ್, ರಚಿತಾ ರಾಮ್, ಅಚ್ಯುತ್ ಕುಮಾರ್, ರಾಜ್ ಬಿ ಶೆಟ್ಟಿ, ಉಮಾಶ್ರೀ, ರಿತಿನ್ಯಾ(ದುನಿಯಾ ವಿಜಯ್ ಮಗಳು), ಶಿಶಿರ್ ಬೈಕಾಡಿ, ಬಿ ಸುರೇಶ್, ರಾಕೇಶ್ ಅಡಿಗಾ, ಲೋಹಿತಾಶ್ವ, ಗೋಪಾಲಕೃಷ್ಣ ದೇಶಪಾಂಡೆ ಸೇರಿದಂತೆ ಬಹಳ ದೊಡ್ಡ ತಾರಾ ಬಳಗವೇ ಸಿನಿಮಾದಲ್ಲಿದೆ.
ಇದು ದುನಿಯಾ ವಿಜಯ್ ಅವರ 29ನೇ ಸಿನಿಮಾ ಆಗಿದ್ದು, ಜಡೇಶ್ ಕೆ.ಹಂಪಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸ್ವಾಮಿ ಜೆ ಗೌಡ ಕ್ಯಾಮೆರಾ ಹಿಡಿದಿದ್ದು, ಅಜನಿಶ್ ಲೋಕನಾಥ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಇವೆಲ್ಲವನ್ನು ಮೀರಿಸುವ ಹಾಗೆ ಮಾಸ್ತಿ ಉಪ್ಪರಹಳ್ಳಿ, ಗಟ್ಟಿಯಾದ ಸಂಭಾಷಣೆ ಮೂಲಕ ಚಿತ್ರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ.





