ಮಲಯಾಳಂ ಸಿನಿಮಾ ರಂಗಕ್ಕೆ ಮಾತ್ರವಲ್ಲದೇ ಮಲಯಾಳಂ ಸಾಹಿತ್ಯ ಲೋಕಕ್ಕೂ ಕೊಡುಗೆ ನೀಡಿದವರು ಶ್ರೀನಿವಾಸನ್. ಅವರು ರಚಿಸಿದ ಚಿತ್ರಕಥೆಗಳ ಪುಸ್ತಕಗಳು ಇಂದಿಗೂ ಮತ್ತು ಮುಂದೆಯೂ ಉದಯೋನ್ಮುಖ ಲೇಖಕರಿಗೆ ಅಧ್ಯಯನ ಸಾಮಾಗ್ರಿಯಾಗಿದೆ ಮತ್ತು ಆಗಲಿದೆ.
ಮಲಯಾಳಂ ಚಿತ್ರರಂಗದ ಹೆಮ್ಮೆ ನಟ, ಬರಹಗಾರ ಮತ್ತು ಚಲನಚಿತ್ರ ನಿರ್ಮಾಪಕ ಶ್ರೀನಿವಾಸನ್ ಶನಿವಾರ ಇಹಲೋಕ ತ್ಯಜಿಸಿದ್ದಾರೆ. ದೀರ್ಘಕಾಲದಿಂದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ 69 ವರ್ಷದ ಶ್ರೀನಿವಾಸನ್ ಅವರು ಎರ್ನಾಕುಲಂ ತಾಲೂಕು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಶ್ರೀನಿವಾಸನ್ ಅವರು ಪತ್ನಿ ವಿಮಲಾ ಮತ್ತು ಪುತ್ರರಾದ ವಿನೀತ್ ಶ್ರೀನಿವಾಸನ್ ಹಾಗೂ ಧ್ಯಾನ್ ಶ್ರೀನಿವಾಸನ್ ಅವರನ್ನು ಅಗಲಿದ್ದಾರೆ. ಮಲಯಾಳಂ ಸಿನಿಮಾ ರಂಗದ ಹಿರಿಯ ಹಾಸ್ಯನಟನ ಅಗಲಿಕೆಗೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಖ್ಯಾತ ನಟರಾದ ಮಮ್ಮುಟ್ಟಿ, ಮೋಹನ್ ಲಾಲ್, ಕಮಲಹಾಸನ್, ಪೃಥ್ವಿರಾಜ್ ಸುಕುಮಾರನ್ ಹಾಗೂ ಮಲಯಾಳಂ ಚಿತ್ರರಂಗದ ಗಣ್ಯರು ಶ್ರೀನಿವಾಸನ್ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ಅಂತ್ಯಕ್ರಿಯೆಯು ಡಿಸೆಂಬರ್ 21ರಂದು ಅವರ ನಿವಾಸವಿರುವ ಕಂಡನಾಡ್‌ನಲ್ಲಿ ನಡೆಯಲಿದೆ.
ಇದನ್ನು ಓದಿದ್ದೀರಾ? ಮಲಯಾಳಂ ಸಿನಿಮಾ ರಂಗದ ದಿಗ್ಗಜ ಶ್ರೀನಿವಾಸನ್ ನಿಧನ
1956ರ ಏಪ್ರಿಲ್ 6ರಂದು ಕೇರಳದ ಕಣ್ಣೂರು ಜಿಲ್ಲೆಯ ಪಟ್ಯಂ ಎಂಬ ಗ್ರಾಮದಲ್ಲಿ ಜನಿಸಿದ ಶ್ರೀನಿವಾಸನ್, ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕುತ್ಪರಂಬ ಮತ್ತು ಕದಿರೂರು ಸರ್ಕಾರಿ ಶಾಲೆಯಲ್ಲಿ ಪೂರೈಸಿದರು. ಅದಾದ ಬಳಿಕ ಮಟ್ಟನ್ನೂರ್‌ನ PRNSS ಕಾಲೇಜಿನಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಅದಾದ ಬಳಿಕ ಚೆನ್ನೈನ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ತಮಿಳುನಾಡಿನಲ್ಲಿ ನಟನಾ ತರಬೇತಿ ಪಡೆದ ಶ್ರೀನಿವಾಸನ್ ನಟ ರಜನಿಕಾಂತ್ ಅವರ ಸಹಪಾಠಿಯಾಗಿದ್ದರು.
ಶ್ರೀನಿವಾಸನ್ ಅವರು 1984ರಲ್ಲಿ ವಿಮಲಾ ಅವರನ್ನು ವಿವಾಹವಾಗಿದ್ದು, ವಿನೀತ್ ಶ್ರೀನಿವಾಸನ್ ಮತ್ತು ಧ್ಯಾನ್ ಶ್ರೀನಿವಾಸನ್ ಎಂಬ ಇಬ್ಬರು ಪುತ್ರರಿದ್ದಾರೆ. ಇಬ್ಬರೂ ಮಲಯಾಳಂ ಚಿತ್ರರಂಗದ ಜನಪ್ರಿಯ ನಟ ಮತ್ತು ನಿರ್ದೇಶಕರಾಗಿದ್ದಾರೆ.
1976ರಲ್ಲಿ ಪಿ ಎ ಬ್ಯಾಕರ್ ಅವರ ‘ಮಣಿಮುಝಕ್ಕಂ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಶ್ರೀನಿವಾಸನ್ ಅವರು 225 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 1979ರಲ್ಲಿ ಸಂಘಗಾನಂ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದರು. ಸುಮಾರು ಐದು ದಶಕಗಳ ವೃತ್ತಿಜೀವನದಲ್ಲಿ, ಹೆಚ್ಚಾಗಿ ಹಾಸ್ಯ ಮತ್ತು ವಿಡಂಬನಾತ್ಮಕ ಪಾತ್ರಗಳಿಗೆ ಶ್ರೀನಿವಾಸನ್ ಹೆಸರುವಾಸಿಯಾಗಿದ್ದು ಸಾಮಾಜದಲ್ಲಿರುವ ಸಮಸ್ಯೆಗಳನ್ನು ಹಾಸ್ಯವಾಗಿಯೇ ಸಿನಿಮಾದಲ್ಲಿ ಎತ್ತಿ ತೋರಿಸಿದ್ದಾರೆ.

ಮಲಯಾಳಂ ಸಿನಿಮಾಕ್ಕೆ ಉತ್ತಮ ಚಿತ್ರಕಥೆಗಳನ್ನು ಬರೆದ ಕೀರ್ತಿಯೂ ಶ್ರೀನಿವಾಸನ್ ಅವರಿಗೆ ಸಲ್ಲಬೇಕು. 1984 ರ ‘ಓಡರುತಮ್ಮವ ಅಳರಿಯಂ’ ಚಿತ್ರದ ಮೂಲಕ ಶ್ರೀನಿವಾಸನ್ ಚಿತ್ರಕಥೆಗಾರರಾಗಿದ್ದು, ಸಮಾಜದ ಲೋಪದೋಷಗಳನ್ನು ಹಾಸ್ಯದ ಮೂಲಕ ಎತ್ತಿ ತೋರಿಸುವ ವಿಚಾರದಲ್ಲಿ ಅವರ ಚಿತ್ರಕಥೆಗಳು ಜನಪ್ರಿಯವಾಗಿದೆ.
ಶ್ರೀನಿವಾಸನ್ ನಿರ್ದೇಶಿಸಿದ ‘ವಡಕ್ಕು ನೊಕ್ಕಿಯಂತ್ರಂ’ (1989) ಮತ್ತು ‘ಚಿಂತಾವಿಷ್ಟಾಯಾಯ ಶ್ಯಾಮಲ’ (1998) ಚಿತ್ರಗಳು ರಾಷ್ಟ್ರೀಯ ಮತ್ತು ರಾಜ್ಯ ಪ್ರಶಸ್ತಿಗಳನ್ನು ಗೆದ್ದಿವೆ. ಅತ್ಯುತ್ತಮ ರಾಜಕೀಯ ವಿಡಂಬನಾತ್ಮಕ ಚಿತ್ರ ಸಂದೇಶಂ, ಕನ್ನಡದ ‘ಕಿರಾತಕ’ ಚಿತ್ರದ ಕಥಾಹಂದರಕ್ಕೆ ಹೋಲಿಕೆಯಿರುವ ಕಥಾ ಪರಯುಂಪೋಲ್, ನಾಡೋಡಿಕ್ಕಾಟ್ಟು, ಮಳಯೆತ್ತುಂ ಮುನ್ಪೆ, ಉದಯನಾಣು ತಾರಂ ಅವರ ಪ್ರಸಿದ್ಧ ಸಿನಿಮಾಗಳು.
ಶ್ರೀನಿವಾಸನ್ ತಮ್ಮ ವೃತ್ತಿಜೀವನದಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಎರಡು ಫಿಲ್ಮ್‌ಫೇರ್ ಪ್ರಶಸ್ತಿಗಳು, ದಕ್ಷಿಣ ಮತ್ತು ಆರು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಸೇರಿದಂತೆ ಹಲವಾರು ಗೌರವಗಳನ್ನು ಪಡೆದಿದ್ದಾರೆ. ಶ್ರೀನಿವಾಸನ್ ಅವರು ತಮ್ಮ ಜೀವನಾನುಭವಗಳು ಮತ್ತು ಚಿತ್ರರಂಗದ ಪಯಣದ ಬಗ್ಗೆ ಹಲವಾರು ಲೇಖನಗಳನ್ನು ಬರೆದಿದ್ದಾರೆ. ಇವರ ಸಿನಿಮಾ ಕಥೆಗಳೇ ಪುಸ್ತಕ ರೂಪದಲ್ಲಿಯೂ ಲಭ್ಯವಿವೆ.
ಪಟಚೋಂಟೆ ತಿರಕ್ಕಥಕಳ್ (Padachonte Thirakkathakal) ಎಂಬುದು ಶ್ರೀನಿವಾಸನ್ ಅವರು ಬರೆದ ಅತ್ಯಂತ ಜನಪ್ರಿಯ ಪುಸ್ತಕಗಳಲ್ಲಿ ಒಂದಾಗಿದೆ. ಈ ಪುಸ್ತಕವು ಕೇರಳದ ಸಮಾಜದಲ್ಲಿನ ಬದಲಾವಣೆಗಳನ್ನು ಓರ್ವ ಸಿನಿಮಾಲೋಕದ ವ್ಯಕ್ತಿಯ ದೃಷ್ಟಿಕೋನದಲ್ಲಿ ಹಾಸ್ಯಭರಿತವಾಗಿ ವಿವರಿಸುವ ಲೇಖನಗಳ ಗುಚ್ಛವಾಗಿದೆ. ಅವರ ಆತ್ಮಕಥೆಯ ನೆನಪುಗಳು, ಪ್ರಬಂಧಗಳನ್ನೂ ಒಳಗೊಂಡಿದೆ.
ಇನ್ನು ಚಿಂತಾವಿಷ್ಟಾಯಾಯ ಶ್ಯಾಮಲಯುಂ ಮಟ್ಟು ತಿರಕ್ಕಥಕಳುಂ ಶ್ರೀನಿವಾಸನ್ ಅವರ ಪ್ರಶಸ್ತಿ ವಿಜೇತ ಚಿತ್ರವಾದ ‘ಚಿಂತಾವಿಷ್ಟಾಯಾಯ ಶ್ಯಾಮಲ’ ಸೇರಿದಂತೆ ಇತರೆ ಪ್ರಮುಖ ಚಿತ್ರಕಥೆಗಳ ಸಂಕಲನ. ‘ನಾಡೋಡಿಕ್ಕಾಟ್ಟುಂ ಮಟ್ಟು ತಿರಕ್ಕಥಕಳುಂ’ ಪುಸ್ತಕವು ಪ್ರಸಿದ್ಧ ಹಾಸ್ಯ ಚಿತ್ರ ‘ನಾಡೋಡಿಕ್ಕಾಟ್ಟು’ ಮತ್ತು ಇತರ ಕೆಲವು ಚಿತ್ರಕಥೆಗಳನ್ನು ಒಳಗೊಂಡಿದೆ. ಉದಯನಾನು ತಾರಂ, ಕಥಾ ಪರಯುಂಪೋಲ್, ಜಾನ್ ಪ್ರಕಾಶನ್ ಶ್ರೀನಿವಾಸನ್ ಅವರ ಇತರೆ ಪುಸ್ತಕಗಳು. ಮಲಯಾಳಂ ಸಿನಿಮಾರಂಗಕ್ಕೆ ಮಾತ್ರವಲ್ಲದೇ ಮಲಯಾಳಂ ಸಾಹಿತ್ಯ ಲೋಕಕ್ಕೂ ಕೊಡುಗೆ ನೀಡಿದವರು ಶ್ರೀನಿವಾಸನ್. ಅವರು ರಚಿಸಿದ ಚಿತ್ರಕಥೆಗಳ ಪುಸ್ತಕಗಳು ಇಂದಿಗೂ ಮತ್ತು ಮುಂದೆಯೂ ಉದಯೋನ್ಮುಖ ಲೇಖಕರಿಗೆ ಅಧ್ಯಯನ ಸಾಮಾಗ್ರಿಯಾಗಿದೆ ಮತ್ತು ಆಗಲಿದೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




