ಹದಿನಾಲ್ಕು ವರ್ಷಗಳ ಸುದೀರ್ಘ ಕಾಯುವಿಕೆ ಇನ್ನೇನು ಅಂತ್ಯಗೊಳ್ಳಲಿದೆ. ಫುಟ್ಬಾಲ್ ಜಗತ್ತಿನ ಅನಭಿಷಕ್ತ ದೊರೆ, ಅರ್ಜೆಂಟೀನಾದ ಮೋಡಿಗಾರ ಲಿಯೋನೆಲ್ ಮೆಸ್ಸಿ ಮತ್ತೆ ಭಾರತದ ʼಫುಟ್ಬಾಲ್ ಕಾಶಿʼ ಕೋಲ್ಕತ್ತಾಕ್ಕೆ ಕಾಲಿಡಲು ಕ್ಷಣಗಣನೆ ಆರಂಭವಾಗಿದೆ. ಇದೇ ಡಿಸೆಂಬರ್ 13ರಂದು ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಐತಿಹಾಸಿಕ ಕ್ಷಣಕ್ಕೆ ಕೇವಲ ಐದು ದಿನಗಳಷ್ಟೇ ಬಾಕಿಯಿದ್ದು, ಇಡೀ ನಗರವೇ ಸಂಭ್ರಮದ ಅಲೆಯಲ್ಲಿ ತೇಲುತ್ತಿದೆ.
ವಿಶೇಷವೆಂದರೆ, ಈ ಬಾರಿ ಮೆಸ್ಸಿ ಏಕಾಂಗಿಯಾಗಿ ವೇದಿಕೆ ಏರುತ್ತಿಲ್ಲ. ಬಾಲಿವುಡ್‌ನ ಬಾದ್‌ಷಾ ಶಾರುಖ್ ಖಾನ್ ಮತ್ತು ಭಾರತೀಯ ಕ್ರಿಕೆಟ್‌ನ ಮಹಾರಾಜ, ಪ್ರಸ್ತುತ ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸೌರವ್ ಗಂಗೂಲಿ ಅವರು ಮೆಸ್ಸಿ ಜತೆಗೂಡಲಿದ್ದಾರೆ. ಫುಟ್ಬಾಲ್, ಕ್ರಿಕೆಟ್ ಮತ್ತು ಸಿನಿಮಾ ಲೋಕದ ಈ ಮೂವರು ದಿಗ್ಗಜರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳ ಪಾಲಿಗೆ ಹಬ್ಬದೂಟವೇ ಸರಿ.
ದಾದಾ- ಶಾರುಖ್ ಜೊತೆ – ರೋಂಡೋ ತರಬೇತಿ
ಈ ಕುರಿತು ಮಾಹಿತಿ ನೀಡಿರುವ ಮೆಸ್ಸಿ ಅವರ ಭಾರತ ಪ್ರವಾಸದ ಆಯೋಜಕ ಶತದ್ರು ದತ್ತಾ, “ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಮೆಸ್ಸಿ ಅವರೊಂದಿಗೆ ಸೌರವ್ ಮತ್ತು ಶಾರುಖ್ ಇಬ್ಬರೂ ಇರಲಿದ್ದಾರೆ. ಮೆಸ್ಸಿ ಸುಮಾರು ಒಂದು ಗಂಟೆ 10 ನಿಮಿಷಗಳ ಕಾಲ ಕ್ರೀಡಾಂಗಣದಲ್ಲಿ ಕಳೆಯಲಿದ್ದಾರೆ. ಕೇವಲ ವೇದಿಕೆ ಕಾರ್ಯಕ್ರಮವಷ್ಟೇ ಅಲ್ಲದೆ, ಅವರು ಮಕ್ಕಳೊಂದಿಗೆ ಮೈದಾನಕ್ಕಿಳಿದು ಬಾರ್ಸಿಲೋನಾ ಶೈಲಿಯ ‘ರೊಂಡೋ’ (Rondo) ಫುಟ್ಬಾಲ್ ಕೌಶಲವನ್ನು ಕಲಿಸಿಕೊಡಲಿದ್ದಾರೆ,” ಎಂದು ಖಚಿತಪಡಿಸಿದ್ದಾರೆ.
‘ರೊಂಡೋ’ ಎಂಬುದು ಎಫ್‌ಸಿ ಬಾರ್ಸಿಲೋನಾದಲ್ಲಿ, ವಿಶೇಷವಾಗಿ ಮೆಸ್ಸಿ ಅಲ್ಲಿ ಆಡುತ್ತಿದ್ದ ಸಮಯದಲ್ಲಿ ಪ್ರಖ್ಯಾತವಾಗಿದ್ದ ಒಂದು ತರಬೇತಿ ವಿಧಾನ. ಇದರಲ್ಲಿ ಆಟಗಾರರು ವೃತ್ತಾಕಾರದಲ್ಲಿ ನಿಂತು ಚೆಂಡಿನ ಮೇಲೆ ಹಿಡಿತ ಸಾಧಿಸಲು ಪಾಸ್ ಮಾಡುತ್ತಿದ್ದರೆ, ಮಧ್ಯದಲ್ಲಿರುವ ರಕ್ಷಕ ಆಟಗಾರರು ಚೆಂಡನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಾರೆ. ಮೆಸ್ಸಿ ಅವರಿಂದಲೇ ಈ ತಂತ್ರವನ್ನು ಕಲಿಯುವ ಭಾಗ್ಯ ಕೋಲ್ಕತ್ತದ ಮಕ್ಕಳಿಗೆ ಸಿಗುತ್ತಿರುವುದು ವಿಶೇಷ.

ಟಿಕೆಟ್ ದರ ಲೆಕ್ಕಕ್ಕಿಲ್ಲ, ದರ್ಶನವೇ ಮುಖ್ಯ!
‘ಗೋಟ್ ಟೂರ್ ಆಫ್ ಇಂಡಿಯಾ 2025’ ಹೆಸರಿನಲ್ಲಿ ನಡೆಯುತ್ತಿರುವ ಈ ಖಾಸಗಿ ಕಾರ್ಯಕ್ರಮಕ್ಕಾಗಿ ಕೋಲ್ಕತ್ತದ ಯುವ ಸಮುದಾಯ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಲು ಹಿಂದೇಟು ಹಾಕುತ್ತಿಲ್ಲ. ಟಿಕೆಟ್ ದರಗಳು ₹5,500 ರಿಂದ ₹13,000 ರವರೆಗೆ ಏರಿಕೆಯಾಗಿದ್ದರೂ, ಮೆಸ್ಸಿ ಎಂಬ ‘ದೇವ’ನ ದರ್ಶನ ಪಡೆಯಲು ಹಣದ ಹಂಗು ತೊರೆದು ಮುಗಿಬಿದ್ದಿದ್ದಾರೆ. ಮೆಸ್ಸಿ ಕೋಲ್ಕತ್ತ ನಂತರ ಹೈದರಾಬಾದ್, ಮುಂಬೈ ಮತ್ತು ದೆಹಲಿಗೆ ಮೆಸ್ಸಿ ಪ್ರಯಾಣ ಬೆಳೆಸಲಿದ್ದಾರೆ. ಆದರೆ, ಫುಟ್ಬಾಲ್ ಹುಚ್ಚು ಹೆಚ್ಚಿರುವ ಕೋಲ್ಕತ್ತದಲ್ಲಿನ ಕ್ರೇಜ್ ಎಲ್ಲೆ ಮೀರಿದೆ.
ಅಭಿಮಾನಿಗಳ ಮನದಾಳ: ‘ಇದು ಬರೀ ಆಟವಲ್ಲ, ಭಾವನೆ’
ವಿಡಿಯೋಗ್ರಾಫರ್ ಆಗಿರುವ ಅಪ್ರತಿಮ್ ಮಜುಂದಾರ್ ಅವರ ಮಾತುಗಳಲ್ಲಿ ಅಭಿಮಾನದ ಪರಾಕಾಷ್ಠೆ ಎದ್ದು ಕಾಣುತ್ತದೆ. “ಈ ಪ್ರವಾಸವು ಕೇವಲ ಒಂದು ಕಾರ್ಯಕ್ರಮವಲ್ಲ; ಇದು ಲಿಯೋನೆಲ್ ಮೆಸ್ಸಿಯ ಕೋಲ್ಕತ್ತಗೆ ಮರಳುತ್ತಿರುವ ಐತಿಹಾಸಿಕ ಘಳಿಗೆ. ಇಲ್ಲಿನ ಪ್ರತಿಯೊಬ್ಬರ ಎದೆಬಡಿತವೂ ಮೈದಾನದಲ್ಲಿನ ಮೆಸ್ಸಿಯ ಚಲನೆಯೊಂದಿಗೆ ಮಿಡಿಯುತ್ತದೆ. ಇದೊಂದು ಹಬ್ಬವಿದ್ದಂತೆ. ಸಾವಿರಾರು ಜನರು ಆ ಜೀವಂತ ದಂತಕತೆಯನ್ನು ಕಣ್ಣಾರೆ ಕಾಣಲು, ಆ ಮಾಂತ್ರಿಕ ಪಾದಚಲನೆಯನ್ನು ನೋಡಲು ಮತ್ತು ದಶಕಗಳಿಂದ ಅವರನ್ನು ದೇವರಂತೆ ಆರಾಧಿಸುತ್ತಿರುವ ಅಭಿಮಾನಿಗಳ ನಂಟನ್ನು ಅನುಭವಿಸಲು ಕಾಯುತ್ತಿದ್ದಾರೆ,” ಎಂದು ಅವರು ಬಣ್ಣಿಸುತ್ತಾರೆ.
“ನಾನು ಟಿಕೆಟ್‌ಗಾಗಿ ₹5,500 ಖರ್ಚು ಮಾಡಿದೆ. ಆದರೆ, ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಹಣದ ವಿಚಾರ ಇಲ್ಲಿ ಅಪ್ರಸ್ತುತ. ನನ್ನ ಮನಸ್ಥಿತಿಯೇ ಅವರ ಪಂದ್ಯದ ಫಲಿತಾಂಶದ ಮೇಲೆ ನಿರ್ಧಾರವಾಗುವಾಗ, ನನ್ನದೇ ಊರಿಗೆ ನನ್ನ ಹೀರೋ ಬಂದಾಗ ನೋಡದೇ ಇರುವುದು ಅಸಾಧ್ಯ. ಮೆಸ್ಸಿ ಅವರ ಆಟದ ತಾಂತ್ರಿಕ ನೈಪುಣ್ಯತೆಯಷ್ಟೇ ಅಲ್ಲ, ಅವರ ಸರಳತೆ ಮತ್ತು ವಿನಯ ನನಗೆ ಹೆಚ್ಚು ಇಷ್ಟವಾಗುತ್ತದೆ. ಅವರು ಮಾತಿಗಿಂತ ಹೆಚ್ಚಾಗಿ ಆಟದ ಮೂಲಕವೇ ಉತ್ತರಿಸುತ್ತಾರೆ,” ಎಂದು ಮಜುಂದಾರ್ ಹೇಳುತ್ತಾರೆ.
ಸೋಷಿಯಲ್ ಮೀಡಿಯಾ ಮ್ಯಾನೇಜರ್ ಆಗಿರುವ ಆದಿತ್ಯ ಮುಖರ್ಜಿ ₹7,000 ಕೊಟ್ಟು ಟಿಕೆಟ್ ಖರೀದಿಸಿದ್ದಾರೆ. “ಬಾಲ್ಯದಿಂದಲೂ ನಾನು ವೃತ್ತಿಪರ ಫುಟ್ಬಾಲ್ ಆಟಗಾರನಾಗಬೇಕೆಂದು ಕನಸು ಕಂಡಿದ್ದೆ. ಯೂಟ್ಯೂಬ್‌ನಲ್ಲಿ ಮೆಸ್ಸಿ ಆಟ ನೋಡುತ್ತಲೇ ಹಗಲು ರಾತ್ರಿ ಕಳೆದಿದ್ದೇನೆ. ಕೆಲಸದ ಒತ್ತಡದಿಂದಾಗಿ ಈಗ ಫುಟ್ಬಾಲ್ ಆಡುವುದು ಕಡಿಮೆಯಾಗಿದ್ದರೂ, ಮೆಸ್ಸಿ ಈಗಲೂ ನನ್ನ ಹೀರೊ,” ಎನ್ನುತ್ತಾರೆ ಆದಿತ್ಯ. ಅವರ ಸ್ನೇಹಿತೆ ಸೃಷ್ಟಿ ಸಿನ್ಹಾ ಕೂಡ ₹5,000 ನೀಡಿ ಟಿಕೆಟ್ ಪಡೆದಿದ್ದು, “ಮೆಸ್ಸಿ ಒಬ್ಬ ಕಠಿಣ ಪರಿಶ್ರಮಿ ಹಾಗೂ ಸಂಭಾವಿತ ವ್ಯಕ್ತಿ,” ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.
ಹಳೆಯ ನೆನಪು ಮತ್ತು ಪಶ್ಚಾತ್ತಾಪದ ಪರಿಹಾರ
ಭಾರತೀಯ ಫುಟ್ಬಾಲ್ ತಂಡದ ಫಿಫಾ ಶ್ರೇಯಾಂಕ 142 ಇದ್ದರೂ, ಅಂತಾರಾಷ್ಟ್ರೀಯ ದಂತಕತೆಗಳ ಮೇಲಿನ ಅಭಿಮಾನಕ್ಕೆ ಭಾರತದಲ್ಲಿ, ವಿಶೇಷವಾಗಿ ಕೋಲ್ಕತ್ತದಲ್ಲಿ ಕೊರತೆಯಿಲ್ಲ. 1955ರಲ್ಲಿ ಸೋವಿಯತ್ ಗೋಲ್‌ಕೀಪರ್ ಲೆವ್ ಯಾಶಿನ್, 1977ರಲ್ಲಿ ಪೀಲೆ ಮತ್ತು 2008 ಹಾಗೂ 2017ರಲ್ಲಿ ಮರಡೋನಾ ಕೋಲ್ಕತ್ತಗೆ ಭೇಟಿ ನೀಡಿದ್ದರು. 2011ರಲ್ಲಿ ಮೆಸ್ಸಿ ವೆನೆಜುವೆಲಾ ವಿರುದ್ಧದ ಸೌಹಾರ್ದ ಪಂದ್ಯದಲ್ಲಿ ಅರ್ಜೆಂಟೀನಾ ತಂಡದ ನಾಯಕನಾಗಿ ಇದೇ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಆಡಿದ್ದರು.

ಅಂದು ಮೆಸ್ಸಿ ಅವರನ್ನು ನೋಡಲಾಗದಿದ್ದವರ ಪಾಲಿಗೆ ಇದೀಗ ಸುವರ್ಣಾವಕಾಶ ಒದಗಿಬಂದಿದೆ. ಉದ್ಯಮಿ ಜುಲ್ಫಿಕರ್ ಅಹ್ಮದ್ ಹೇಳುವಂತೆ, “ನನಗೆ ಫುಟ್ಬಾಲ್ ಎಂದರೆ ಮರಡೋನಾ ಮತ್ತು ಮೆಸ್ಸಿ. ನಾನು ಮರಡೋನಾ ಅವರನ್ನು ಎರಡು ಬಾರಿ ನೋಡುವ ಭಾಗ್ಯ ಪಡೆದೆ. ಆದರೆ 14 ವರ್ಷಗಳ ಹಿಂದೆ ಮೆಸ್ಸಿ ಬಂದಾಗ ಕೌಟುಂಬಿಕ ಕಾರಣಗಳಿಂದ ಊರಹೊರಗಿದ್ದೆ. ಅಂದು ಕಳೆದುಕೊಂಡ ಅವಕಾಶವನ್ನು ಈ ಬಾರಿ ಬಿಡಲು ಸಿದ್ಧನಿಲ್ಲ. ಅದೃಷ್ಟಕ್ಕೆ ಏನನ್ನೂ ಬಿಡದೆ ಈಗಲೇ ಟಿಕೆಟ್ ಖರೀದಿಸಿದ್ದೇನೆ.”
“ಅವರ ಎಲ್ಲ ಪಂದ್ಯಗಳು, ವಿಡಿಯೋಗಳು ಆನ್‌ಲೈನ್‌ನಲ್ಲಿ ಸಿಗುತ್ತವೆ ಎಂಬುದು ನಿಜ. ಸ್ಟೇಡಿಯಂನಲ್ಲಿ ನಾವು ದೂರದಿಂದಲೇ ನೋಡಬೇಕಾಗುತ್ತದೆ ಎಂಬುದೂ ಗೊತ್ತು. ಆದರೆ, ಸಿಡಿ ಸಿಗುತ್ತದೆ ಎಂದು ಯಾರಾದರೂ ಅಮ್ಜದ್ ಅಲಿ ಖಾನ್ ಅವರ ಕಛೇರಿಗೆ (Concert) ಹೋಗುವುದನ್ನು ನಿಲ್ಲಿಸುತ್ತಾರೆಯೇ? ಮನೆಯಲ್ಲಿ ಆರಾಮವಾಗಿ ಕುಳಿತು ನೋಡಬಹುದಾದರೂ ಕ್ರೀಡಾಂಗಣಕ್ಕೆ ಜನ ಏಕೆ ಹೋಗುತ್ತಾರೆ? ಏಕೆಂದರೆ, ಆ ವಾತಾವರಣವನ್ನು ಅನುಭವಿಸುವುದು, ಆ ದಂತಕತೆ ನಮ್ಮೆದುರೇ ಉಸಿರಾಡುತ್ತಿದ್ದಾರೆ ಎಂಬ ರೋಮಾಂಚನವನ್ನು ಪಡೆಯುವುದು ಮುಖ್ಯ,” ಎಂಬ ಅಹ್ಮದ್ ಅವರ ಮಾತು, ಕ್ರೀಡಾಭಿಮಾನದ ನಿಜವಾದ ಅರ್ಥವನ್ನು ಸಾರುವಂತಿದೆ.
ಒಟ್ಟಿನಲ್ಲಿ, ‘ಸಿಟಿ ಆಫ್ ಜಾಯ್’ ಎಂದು ಕರೆಯಲ್ಪಡುವ ಕೋಲ್ಕತ್ತ, ಫುಟ್ಬಾಲ್ ಲೋಕದ ಮಾಂತ್ರಿಕನ ಸ್ವಾಗತಕ್ಕೆ ಸರ್ವಸನ್ನದ್ಧವಾಗಿದೆ. ಡಿಸೆಂಬರ್ 13ರ ಸಂಜೆ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಏಳುವ ಕರತಾಡನ, ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟುವುದರಲ್ಲಿ ಸಂಶಯವಿಲ್ಲ.





