ಉಮಾಶ್ರೀ ಬಾಳಿಗೆ ತಿರುವು ಕೊಟ್ಟ ‘ಒಡಲಾಳ’; ಸವೆಸಿದ ಹಾದಿ ಹೇಗಿತ್ತು ಗೊತ್ತೇ?

Date:

ಮಹಿಳೆಯರ ಮೇಲೆ ಈ ಸಮಾಜ ಹೇರಿರುವ ದುಷ್ಟ ಕಟ್ಟುಪಾಡುಗಳ ನಡುವೆ, ತನ್ನ ಪ್ರತಿಭೆಯನ್ನೇ ಮಾಧ್ಯಮವಾಗಿ ಬಳಸಿಕೊಂಡು ಎದ್ದುನಿಂತ ಗಟ್ಟಿ ಹೆಣ್ಣು ಮಾಜಿ ಸಚಿವೆ, ಹಿರಿಯ ನಟಿ ಉಮಾಶ್ರೀ. ಕನ್ನಡ ಚಿತ್ರರಂಗ ಮತ್ತು ರಂಗಭೂಮಿ ಕಂಡ ಅಪರೂಪದ ಪ್ರತಿಭಾನ್ವಿತ ಅಭಿನೇತ್ರಿ. ತಮ್ಮ ನಟನೆ ಮತ್ತು ವ್ಯಕ್ತಿತ್ವದಿಂದಲೇ ಕನ್ನಡ ನಾಡಿನ ಪ್ರೇಕ್ಷಕರ ಹೃದಯ ಗೆದ್ದ ಈ ಕಲಾವಿದೆಯ ಬದುಕೇ ಒಂದು ಸ್ಫೂರ್ತಿದಾಯಕ ಕತೆ.

ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆ ಗ್ರಾಮದಲ್ಲಿ 1957ರ ಮೇ 10ರಂದು ಜನಿಸಿದ ಉಮಾಶ್ರೀ ಅವರ ಬದುಕು ಹೆತ್ತ ತಾಯಿಯ ಸಾವಿನಿಂದ ಆರಂಭವಾಗುತ್ತದೆ. ಹೋರಾಟ, ಹಸಿವು, ಅವಮಾನ, ಮರುಹುಟ್ಟುಗಳ ಪುನರಾವರ್ತೆಯೇ ಹಾಸು ಹೊದ್ದಿರುವ ಅವರ ಬದುಕಿನ ಹಾದಿ ಸುಲಭಕ್ಕೆ ಸವೆಸುವಂಥದ್ದಾಗಿರಲಿಲ್ಲ. ಆದರೆ ಅದೇ ಹೋರಾಟ ಅವರನ್ನು ಅಪ್ರತಿಮ ಪ್ರತಿಭೆಯನ್ನಾಗಿಸಿ ನಮ್ಮೆದೆರು ನಿಲ್ಲಿಸಿದೆ. ʼನಾನು ನಾಟಕಕ್ಕೆ ಸೇರಿದ್ದೇ ತಿನ್ನಲು ಊಟ ಸಿಗುತ್ತದೆ ಎಂಬ ಕಾರಣಕ್ಕೆʼ ಎಂದು ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿರುವ ಸಾಲು ಅವರ ಕಷ್ಟದ ದಿನಗಳನ್ನು ಬಿಚ್ಚಿಡುತ್ತದೆ.

ಉಮಾಶ್ರೀ ಅವರ ತಾಯಿಗೆ ಹಲವು ವರ್ಷ ಮಕ್ಕಳಾಗಿರಲಿಲ್ಲ. ಆಕೆಯ ಗಂಡನಿಗೆ ಎರಡನೇ ಮದುವೆ ಮಾಡಲು ಹೊರಟಾಗ ಪ್ರತಿಭಟಿಸಿದ ಆಕೆ, ಬಹಳ ಗಟ್ಟಿ ಹೆಣ್ಣು. ಬಹುಶಃ ಆ ಗುಣ ಮಗಳಾದ ಉಮಾದೇವಿಗೂ (ಉಮಾಶ್ರೀ ಮೂಲ ಹೆಸರು) ಬಂದಿತ್ತು ಎಂದು ಹೇಳಬಹುದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಗಂಡನಿಗೆ ಎರಡನೇ ಮದುವೆ ಮಾಡುವುದನ್ನು ವಿರೋಧಿಸಿ, ಮದುವೆಯ ಚಪ್ಪರದಲ್ಲಿ ಮಚ್ಚು ಹಿಡಿದು ಚಪ್ಪರವನ್ನೇ ಕತ್ತರಿಸಿ ಹಾಕಿ ಪ್ರತಿಭಟಿಸಿದ್ದರು ಉಮಾಶ್ರೀ ಅವರ ತಾಯಿ. ಮದುವೆ ನಿಂತು ಹೋಗುತ್ತದೆ. ಹಿರಿಯರ ಮಾತು ಕೇಳಲಿಲ್ಲವೆಂದು ಊರಿನಿಂದ ಹೊರಗೆ ಹಾಕುತ್ತಾರೆ. ಮುನಿಯೂರಿನಿಂದ ಮತ್ತೆ ನೊಣವಿನಕೆರೆಗೆ ತಾಯಿ ಹೋಗುತ್ತಾರೆ. ಊರಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿರುತ್ತಾರೆ. ಆಕೆ ಒಂದಿಷ್ಟು ಹಣ ಕೂಡಿಡಲು ಮೊದಲು ಮಾಡುತ್ತಾರೆ. ಗಂಡ ಮನೆಗೆ ಹೋಗಿ ಬರಲು ಶುರು ಮಾಡುತ್ತಾನೆ. ಆಗ ತಾಯಿ ಗರ್ಭಿಣಿಯಾಗುತ್ತಾರೆ. ಉಮಾಶ್ರೀ ಎಂಬ ಜೀವ ಹೊಟ್ಟೆಯಲ್ಲಿ ಬೆಳೆಯುತ್ತದೆ. ಹೆಂಡತಿ ಗರ್ಭಿಣಿಯಾದ ಮೇಲೆ ಹೆಂಡತಿ ಮನೆಗೆ ಬರುವುದನ್ನು ಗಂಡ ನಿಲ್ಲಿಸುತ್ತಾನೆ. ತಾನು ಊರಿಗೆ ಹೋಗಿ ಬರುತ್ತಿದ್ದೇನೆಂದು ಮನೆಯವರಿಗೆ ಗೊತ್ತಾಗಬಾರದೆಂದು, ‘ನಾನು ಊರಿಗೆ ಹೋಗಿಯೇ ಇಲ್ಲ. ಆ ಮಗು ನನಗೆ ಹುಟ್ಟಿದ್ದಲ್ಲ’ ಎಂದು ವಾದಿಸುತ್ತಾನೆ. ಅಪವಾದದಲ್ಲೇ ಮಗುವನ್ನು ಹೆತ್ತ ತಾಯಿಗೆ, ಸರಿಯಾದ ಬಾಣಂತವೂ ಇರುವುದಿಲ್ಲ. ಕೊರಗಿ ಕೊರಗಿ ಸಾಯುತ್ತಾಳೆ. ಆಗ ಉಮಾಶ್ರೀ 8 ತಿಂಗಳ ಮಗು.

unblurimageai image 30

ಉಮಾಶ್ರೀಯವರನ್ನು ಸಾಕಿದ್ದು ದೊಡ್ಡವ್ವ ರೇವಮ್ಮ. ಬೆಂಗಳೂರಿನ ಸಂಪಂಗಿನಗರದಲ್ಲಿ ಅವರ ಬಾಲ್ಯ ಆರಂಭವಾಗುತ್ತದೆ. ಓದಿನಲ್ಲಿ ಅಷ್ಟೇನೂ ಆಸಕ್ತಿಯಿಲ್ಲದ ಉಮಾಶ್ರೀ, ಹೇಗೋ 10ನೇ ತರಗತಿ ಪಾಸಾಗುತ್ತಾರೆ. ಆದರೆ ಆಗಲೇ ಹಾಡು, ಅಭಿನಯದಲ್ಲಿ ಆಸಕ್ತಿ ಬೆಳೆದಿರುತ್ತದೆ. ತಮ್ಮದೇ ಸಮುದಾಯದ (ನೇಕಾರ) ಹುಡುಗನೊಬ್ಬನೊಂದಿಗೆ ಕಾಲೇಜು ದಿನಗಳಲ್ಲಿ ಪ್ರೇಮಾಂಕುರವಾಗುತ್ತದೆ. ಇಬ್ಬರು ಪರಸ್ಪರ ಪ್ರೇಮಿಸುತ್ತಾರೆ. ಅಪ್ಪ-ಅಮ್ಮನಿಗೆ (ದೊಡ್ಡಪ್ಪ-ದೊಡ್ಡಮ್ಮ) ಪ್ರೀತಿಯ ವಿಷಯ ಗೊತ್ತಾಗುತ್ತದೆ. ಆ ಹುಡುಗನೊಂದಿಗೆ ಮದುವೆ ಮಾಡಿಕೊಡುತ್ತಾರೆ. ಆದರೆ ಮದುವೆಯ ನಂತರ ಗಂಡನ ನಿಜಮುಖ ದರ್ಶನವಾಗುತ್ತದೆ.

ತಮ್ಮ ಬದುಕಿನ ಆ ಕತ್ತಲೆಯ ಹಾದಿಯನ್ನು ಅವರು ಹೀಗೆ ವಿವರಿಸುತ್ತಾರೆ… “17ಕ್ಕೇ ಪ್ರೀತಿ, ಮದುವೆ, ಇಬ್ಬರು ಮಕ್ಕಳು. ಕುಡುಕ ಬೇಜವಾಬ್ದಾರಿ ಗಂಡನೊಂದಿಗೆ ಏಗಲು ಸಾಧ್ಯವಾಗಲಿಲ್ಲ. ಮಕ್ಕಳನ್ನು ಕರೆದೊಯ್ದು ಅಮ್ಮನ ಮನೆಯಲ್ಲಿ ಬಿಟ್ಟೆ. ಬದುಕಲು ದಾರಿ ಇರಲಿಲ್ಲ. ದೇಹ ಮಾರಿಕೊಳ್ಳುವುದು ನನ್ನಿಂದ ಆಗಲಿಲ್ಲ. ಆಗ ನನಗೆ ಸಾಯುವುದೇ ಮಾರ್ಗ ಎನ್ನಿಸಿತು. ಆದರೆ ಹೇಗೆ? ಸಾಯೋಕೆ ಮಾರ್ಗ ಗೊತ್ತಿರಲಿಲ್ಲ. ಕುಡಿದರೆ ಸಾಯುತ್ತಾರೆ ಎಂಬ ಮಾತು ಕೇಳಿದ್ದೆ. ಅಷ್ಟೇ, ಕುಡಿತ ನನ್ನ ಜೀವನದ ಭಾಗವಾಗಿಬಿಟ್ಟಿತು. ಮೂರ್ನಾಲ್ಕು ವರ್ಷ ಹೀಗೇ ಸಾಗಿತ್ತು. ಒಂದು ದಿನ ನನ್ನ ಮಗಳನ್ನು ಅಮ್ಮ ಹೊಡೆದಿದ್ದರು. ಅಳುತ್ತಾ ನನ್ನ ಬಳಿಗೆ ಬಂದ ಮಗಳು, ‘ಅಪ್ಪನೂ ಇಲ್ಲ, ಅಮ್ಮನೂ ಸಾಯ್ತಾಳೆ ಅಂತ ಅಜ್ಜಿ ಹೇಳ್ತಿದ್ದಾಳೆ, ನಾನು ಹೇಗೆ ಬದುಕೋದು?’ ಅಂತ ಕೇಳಿದಳು. ಆ ಮಾತು ನನ್ನ ಹೃದಯ ಚುಚ್ಚಿತು. ನಾನು ಕುಡಿಯುವುದನ್ನು ಬಿಟ್ಟೆ. ಸಾಯೋದಕ್ಕಿಂತ ಬದುಕೋದು ಕಷ್ಟ ಅಂತ ಗೊತ್ತಾಯ್ತು. ಆದರೆ ಬದುಕಬೇಕು ಎಂಬ ಇಚ್ಛೆ ಮತ್ತೆ ಹುಟ್ಟಿತು”.

“ಹೋರಾಟದ ಮಧ್ಯೆಯೇ ನಟ, ನಿರ್ದೇಶಕ ಟಿ.ಎನ್‌. ಸೀತಾರಾಮ್ ಅವರು ಎರಡನೇ ಮದುವೆ ಮಾಡಿಕೊಳ್ಳುವಂತೆ ಮನವೊಲಿಸಲು ಪ್ರಯತ್ನಪಟ್ಟರು. ನಾನೂ ಒಪ್ಪಿದ್ದೆ. ಆದರೆ ಮಗಳು ʼನನ್ನ ಅಮ್ಮನನ್ನು ಬೇರೆ ಯಾರೊಟ್ಟಿಗೂ ಹಂಚಿಕೊಳ್ಳಲು ನನಗೆ ಆಗುವುದಿಲ್ಲʼ ಎಂದಾಗ ಆ ಯೋಚನೆಯನ್ನೂ ಬಿಟ್ಟುಬಿಟ್ಟೆ. ಅದಾದ ಬಳಿಕ ಜೀವನ ಮತ್ತೆ ಹೊಸ ತಿರುವು ಪಡೆಯಿತು. ನಾನು ಸಿನಿಮಾ ಲೋಕದಿಂದ ಸಂಪಾದನೆ ಮಾಡುತ್ತಿದ್ದೆ. ನನ್ನ ಪತಿಯ ಎರಡನೇ ಕುಟುಂಬಕ್ಕೂ ನಾನು ನೆರವಾಗಬೇಕಾದ ಪರಿಸ್ಥಿತಿ ಎದುರಾಯಿತು. ಅವರ ಮಕ್ಕಳ ಶಿಕ್ಷಣಕ್ಕೂ ಸಹಾಯ ಮಾಡಿದೆ” ಎನ್ನುತ್ತಾರವರು.

WhatsApp Image 2025 11 05 at 1.30.10 PM

ಬದುಕಿಗಾಗಿ ಕಲೆಯನ್ನು ಅನಿವಾರ್ಯವಾಗಿ ಅಪ್ಪಿಕೊಂಡ ಉಮಾಶ್ರೀ ಅದಕ್ಕೆ ತೋರಿದ ನಿಷ್ಠೆ ಮಾತ್ರ ಅನನ್ಯವಾದದ್ದು. ವೃತ್ತಿ ರಂಗಭೂಮಿಯ ಅಖಾಡದಲ್ಲಿ ಐತಿಹಾಸಿಕ, ಪೌರಾಣಿಕ, ಸಾಮಾಜಿಕ ಸೇರಿದಂತೆ ಎಲ್ಲ ರೀತಿಯ ಪಾತ್ರಗಳಿಗೂ ಜೀವ ತುಂಬಿದ ಈ ನಟಿ, ನಾಟಕ ಲೋಕವನ್ನು ತನ್ನದೇ ಶೈಲಿಯಲ್ಲಿ ಅಲಂಕರಿಸಿದ್ದರು. ಹವ್ಯಾಸಿ ರಂಗಭೂಮಿಯಲ್ಲಿ ಬಿ.ವಿ ಕಾರಂತ್, ನಾಗಾಭರಣ, ಕೃಷ್ಣಸ್ವಾಮಿ ಮುಂತಾದ ದಿಗ್ಗಜರ ನಿರ್ದೇಶನದಲ್ಲಿ ಅಭಿನಯಿಸುವ ಅವಕಾಶ ಪಡೆದರು. ಅವರ ಅಭಿನಯದ ಸೊಗಸು ಉಮಾಶ್ರೀಯವರನ್ನು ಅಗ್ರಗಣ್ಯ ಕಲಾವಿದೆಯನ್ನಾಗಿ ಮಾಡಿತು. ದೇವನೂರ ಮಹಾದೇವರ ‘ಒಡಲಾಳ’ ಕೃತಿ ಆಧಾರಿತ ನಾಟಕದ ಸಾಕವ್ವ ಪಾತ್ರ ಅವರು ಅಭಿನಯಿಸಿದ ಪಾತ್ರಗಳಲ್ಲಿ ಅತ್ಯಂತ ಜನಪ್ರಿಯತೆ ತಂದುಕೊಟ್ಟಿತ್ತು.

ಸಂಗ್ಯಾಬಾಳ್ಯ ನಾಟಕದ ರಿಹರ್ಸಲ್ ನೋಡಲು ದಿನವೂ ಹೋಗುತ್ತಿದ್ದ ಉಮಾದೇವಿಯವರಿಗೆ ಅದೊಂದು ದಿನ ಅವಕಾಶದ ಬಾಗಿಲು ತೆರೆಯುತ್ತದೆ. ಒಂದು ದಿನ ರಿಹರ್ಸಲ್‌ಗೆ ಪಾತ್ರಧಾರಿಯೊಬ್ಬರು ಬಾರದಿದ್ದಾಗ, ದಿನವೂ ಹೋಗುತ್ತಿದ್ದ ಉಮಾಶ್ರೀ ತಾನು ಅದನ್ನು ತುಂಬುವುದಾಗಿ ಹೇಳುತ್ತಾರೆ. ಹೀಗೆ ರಂಗಭೂಮಿಗೆ ಪ್ರವೇಶವಾಗುತ್ತದೆ. ಮುಂದೆ ಒಡಲಾಳದ ಸಾಕವ್ವನ ಪಾತ್ರ ಸಿಕ್ಕಾಗ, ಅದು ನನ್ನದೇ ಕಥೆ ಎಂದು ಆ ಇಪ್ಪತ್ತೊಂದು ವರ್ಷದ ಉಮಾಶ್ರೀಗೆ ಅನಿಸಿ ಸಾಕವ್ವನಾಗಿ ಜೀವಿಸುತ್ತಾರೆ. ಆಕೆಯ ಅಭಿನಯ ನೋಡಿದವರೆಲ್ಲ ಅಕ್ಷರಶಃ ದಂಗಾಗಿ ಹೋಗುತ್ತಾರೆ. ಟೈಮ್ಸ್ ಆಫ್ ಇಂಡಿಯಾದ ವಿಮರ್ಶಕರೊಬ್ಬರು, “ಎಪ್ಪತ್ತು ವರ್ಷದ ಮುದುಕಿಯ ಪಾತ್ರ ಮಾಡಿದ ಈ ಇಪ್ಪತ್ತೊಂದು ವರ್ಷದ ಉಮಾಶ್ರೀ ಆಸ್ಕರ್ ಪ್ರಶಸ್ತಿಗೆ ಅರ್ಹವಾದ ರಂಗಭೂಮಿ ಕಲಾವಿದೆ” ಎಂದು ಬರೆದದ್ದನ್ನು ಒಡನಾಡಿಗಳು ಈಗಲೂ ನೆನೆಯುತ್ತಾರೆ. ‘ರಂಗಸಂಪದ’ಕ್ಕೆ ಸಿಕ್ಕ ಅವರ ಒಡನಾಟ, ಇಡೀ ಬದುಕನ್ನೇ ಬದಲಿಸಿಬಿಡುತ್ತದೆ.

1980ರಲ್ಲಿ ಟಿ.ಎಸ್ ನಾಗಾಭರಣ ನಿರ್ದೇಶನದ ʼಬಂಗಾರದ ಜಿಂಕೆʼಯಲ್ಲಿ ಚಿಕ್ಕ ಪಾತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು ಎನ್ನುವುದು ಹಲವು ಮಂದಿಗೆ ಗೊತ್ತಿಲ್ಲ. ಆದರೆ, 1984ರಲ್ಲಿ ತೆರೆಕಂಡ ಕಾಶಿನಾಥರ ʼಅನುಭವʼ ಚಿತ್ರದ ಪಾತ್ರ ರಾತ್ರೋ ರಾತ್ರಿ ಫೇಮ್‌ ತಂದುಕೊಟ್ಟಿತ್ತು. ಇದೇ ಪಾತ್ರ ಬೇಕೆಂದು ಆಯ್ಕೆ ಮಾಡಿಕೊಳ್ಳುವ ಪರಿಸ್ಥಿತಿಯಲ್ಲಿರದ ಉಮಾಶ್ರೀ ಸಿಕ್ಕ ಬೋಲ್ಡ್ ಪಾತ್ರವನ್ನೇ ಅಚ್ಚುಕಟ್ಟಾಗಿ ಮಾಡಿ ಜನಮನ ಗೆದ್ದಿದ್ದರು.‌ ಮುಂದೆ ʼಗೋಲ್‌ಮಾಲ್‌ ರಾಧಾಕೃಷ್ಣʼ, ʼಅಮೃತ ಘಳಿಗೆʼ, ʼಬಿಡುಗಡೆಯ ಬೇಡಿʼ, ʼನಾನು ನನ್ನ ಹೆಂಡ್ತಿʼ, ʼಅಂಜದ ಗಂಡುʼ.. ಹೀಗೆ ಮುಂದುವರೆಯುತ್ತಲೇ ಹೋಯಿತು ಅವರ ಸಿನಿಮಾ ಜರ್ನಿ. ʼಅನುಭವʼದ ಪಾತ್ರ ಕಂಡು ʼಸೆಕ್ಸ್‌ ಬಾಂಬ್‌ʼ ಎಂದು ಮೂದಲಿಸಿದವರ ಮುಂದೆಯೇ ಹೆಮ್ಮರವಾಗಿ ಬೆಳೆದು ನಿಂತದ್ದು ಈಗ ಇತಿಹಾಸ.

ಎನ್.ಎಸ್. ರಾವ್ ಮತ್ತು ಇವರ ಜೋಡಿ ಹಲವು ಚಿತ್ರಗಳ ಮೂಲಕ ಕನ್ನಡ ಚಲನಚಿತ್ರ ಪ್ರೇಕ್ಷಕರನ್ನು ರಂಜಿಸಿತು. ನಂತರ ಮುಖ್ಯಮಂತ್ರಿ ಚಂದ್ರು, ದೊಡ್ಡಣ್ಣ ಮತ್ತು ಕರಿಬಸವಯ್ಯರೊಂದಿಗೆ ಹಲವು ಪಾತ್ರಗಳ ಮೂಲಕ ಜನಪ್ರಿಯರಾದರು. ʼಪುಟ್ನಂಜʼ ಚಿತ್ರ ಉಮಾಶ್ರೀ ಸಿನಿ ಜೀವನದ ಅತ್ತ್ಯುತಮ ಚಿತ್ರ. ಈ ಚಿತ್ರದಲ್ಲಿ 80 ವರ್ಷ ವಯಸ್ಸಿನ ಹಣ್ಣು ಹಣ್ಣು ಮುದುಕಿ ಪಾತ್ರದಲ್ಲಿ ನಟಿಸಿದ ಅವರು ಎಲ್ಲರ ಮೆಚ್ಚುಗೆ ಪಡೆದರು. ಮಣಿ ಚಿತ್ರದಲ್ಲಿನ ತನ್ನ ವೃತ್ತಿಯಿಂದ ತನ್ನ ಮಗಳನ್ನು ಉಳಿಸಲು ಪ್ರಯತ್ನಿಸುವ ವೇಶ್ಯೆಯ ಪಾತ್ರದಲ್ಲಿ ಜೀವಿಸಿದ್ದರು. 2005ರಲ್ಲಿ ಅತ್ಯುತ್ತಮ ಪೋಷಕ ನಟಿ ವಿಭಾಗದಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆದರು. ಸತತ ಐದು ಬಾರಿ ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆದ ಏಕೈಕ ಕನ್ನಡ ನಟಿ ಎಂಬ ಹೆಗ್ಗಳಿಗೆ ಉಮಾಶ್ರೀ ಅವರದ್ದು.

1992ರಲ್ಲಿ ಬಂಗಾರಪ್ಪನವರ ಕೆಸಿಪಿ ಪಕ್ಷ ಸೇರಿ ಅವರ ಶಿಷ್ಯೆಯಾಗಿ ಗುರುತಿಸಿಕೊಳ್ಳುತ್ತಾರೆ. ಮುಂದೆ ಬಂಗಾರಪ್ಪ ತಮ್ಮ ಕೆಸಿಪಿಯನ್ನು ಕಾಂಗ್ರೆಸ್‌ನೊಳಗೆ ವಿಲೀನ ಮಾಡಿದಾಗ ಉಮಾಶ್ರೀ ಅವರು ಕಾಂಗ್ರೆಸ್‌ನಲ್ಲಿ ಮುಂದುವರೆಯುತ್ತಾರೆ. ಕೊಟ್ಟ ಕೆಲಸಗಳನ್ನು ಮಾಡುತ್ತಾರೆ. ಈವರೆಗೆ ಮೂರು ಬಾರಿ ಚುನಾವಣೆಯಲ್ಲಿ ಸೋತಿದ್ದರೂ, 2013ರ ಗೆಲುವು ಅವರನ್ನು ಜನನಾಯಕಿಯನ್ನಾಗಿ ಹೊಮ್ಮಿಸಿತ್ತು. ತೇರದಾಳದ ಮತದಾರರು ಉಮಾಶ್ರೀಯವರನ್ನು ವಿಧಾನಸಭೆಗೆ ಕಳಿಸಿ, ಅವರು ಸಿದ್ದರಾಮಯ್ಯನವರ ಸಂಪುಟದಲ್ಲಿ ಸಚಿವೆಯಾಗಲೂ ಕಾರಣರಾದರು.

unblurimageai WhatsApp Image 2025 11 05 at 1

ಹವ್ಯಾಸಿ, ಪೌರಾಣಿಕ ಮತ್ತು ವೃತ್ತಿಪರ ನಾಟಕದಲ್ಲಿ ಸುಮಾರು 30ಕ್ಕೂ ಹೆಚ್ಚು ವರ್ಷ ಅನುಭವ ಹೊಂದಿರುವ ಇವರು ಜರ್ಮನಿಯ ನಿರ್ದೇಶಕ ಫ್ರಿಟ್ಜ್ ಬೆನ್ನೆವಿಟ್ಜ್, ಬಿ ವಿ ಕಾರಂತ್, ಗಿರೀಶ್ ಕಾರ್ನಾಡ್, ಸಿ ಜಿ ಕೃಷ್ಣಸ್ವಾಮಿ, ಆರ್. ನಾಗೇಶ್, ನಾಗಾಭರಣ ಸೇರಿದಂತೆ ಮುಂತಾದ ಮೇರು ನಿರ್ದೇಶಕರ ಗರಡಿಯಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ರಾಜ್ಯದ ಹಲವು ಶ್ರೇಷ್ಠ ಥಿಯೇಟರ್ ಗುಂಪುಗಳ ಭಾಗವಾಗಿರುವ ಉಮಾಶ್ರೀ ಬೆಂಗಳೂರಿನ ರಂಗಸಂಪದ ಥಿಯೇಟರ್ ಗುಂಪಿನ ಸದಸ್ಯೆ. ಅವರ ಪ್ರತಿ ಪಾತ್ರವೂ ಒಂದೊಂದು ಪ್ರಶಸ್ತಿಗೆ ಅರ್ಹವಾಗುವಂತವು. 355ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಉಮಾಶ್ರೀ ಅವರದ್ದು ನಾಲ್ಕು ದಶಕಗಳ ರಂಗಭೂಮಿ ಒಡನಾಟ. ಆರು ರಾಜ್ಯ ಪ್ರಶಸ್ತಿಗಳ ಜೊತೆ ಗಿರೀಶ್ ಕಾಸರವಳ್ಳಿ ನಿರ್ದೇಶಿಸಿರುವ ‘ಗುಲಾಬಿ ಟಾಕೀಸ್’ ಚಿತ್ರದಲ್ಲಿ ಉಮಾಶ್ರೀ ಅವರು ಜೀವ ತುಂಬಿದ ಗುಲಾಬಿ ಪಾತ್ರ, ಪ್ರೇಕ್ಷಕರ ಮೆಚ್ಚುಗೆ ಮಾತ್ರವಲ್ಲ, ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನೂ ತಂದುಕೊಟ್ಟಿತು. ಕಾಸರವಳ್ಳಿಯವರ ‘ಕನಸೆಂಬ ಕುದುರೆಯನ್ನೇರಿ’ ಚಿತ್ರದಲ್ಲೂ ಉಮಾಶ್ರೀ ನಟಿಸಿದ್ದಾರೆ. ಇದೀಗ ಅವರ ಮುಕುಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಚಿತ್ರರಂಗಕ್ಕೆ ಸಲ್ಲಿಸಿರುವ ಸೇವೆ, ಅವರ ಅತ್ಯುತ್ತಮ ನಟನೆ ಮತ್ತು ಜೀವಮಾನ ಸಾಧನೆಗಾಗಿ ಕನ್ನಡ ಚಿತ್ರರಂಗದ ಪ್ರತಿಷ್ಠಿತ 2019ನೇ ಸಾಲಿನ ʼಡಾ. ರಾಜ್​ಕುಮಾರ್ ಪ್ರಶಸ್ತಿʼ ನೀಡಿ ಗೌರವಿಸಲಾಗಿದೆ. ಪ್ರಸ್ತುತ ಕರ್ನಾಟಕ ವಿಧಾನ ಪರಿಷತ್ ಸದಸ್ಯೆಯಾಗಿದ್ದರೂ ರಂಗಭೂಮಿ, ಕಿರುತೆರೆ ಮತ್ತು ಸಿನಿಮಾಗಳಲ್ಲಿ ಸಕ್ರಿಯವಾಗಿರುವ ಅವರು ಸರಳತೆ, ಸಾಮಾಜಿಕ ಕಳಕಳಿ ಮತ್ತು ಕಲಾತ್ಮಕ ಸಾಧನೆಗಾಗಿ ಜನರಿಗೆ ಸ್ಫೂರ್ತಿಯಾಗಿದ್ದಾರೆ.

ಆಕೆ ಅಸಾಮಾನ್ಯ ನಟಿ ಮಾತ್ರವಲ್ಲ; ಚಿಂತಕಿಯೂ ಹೌದು. ಒಂದೆಡೆ ಅವರು ಹೀಗೆ ಹೇಳುತ್ತಾರೆ- “ನನ್ನನ್ನು ಅತ್ಯಂತವಾಗಿ ಕಾಡಿದ ಪಾತ್ರ ʼಯಯಾತಿʼಯ ಶರ್ಮಿಷ್ಠೆಯದು. ಯಯಾತಿಗೆ ಕೊನೆವರೆಗೂ ಸಾಥ್ ನೀಡಿದ ಶರ್ಮಿಷ್ಠೆ ರಾಕ್ಷಸ ಕುಲದಲ್ಲಿ ಹುಟ್ಟಿದ್ದರೂ ನನಗೆ ಆದರ್ಶ ಎಂದು ತೋರುತ್ತಾಳೆ. ತನ್ನ ಲಾಭದವರೆಗೆ ಕಾದು, ಕೂಡಲೇ ಹೊರಟು ಹೋದ ದೇವಯಾನಿ ಮಾನವ ಕುಲದಲ್ಲಿ ಹುಟ್ಟಿದ್ದರೂ ರಾಕ್ಷಸಳಂತೆಯೇ ವರ್ತಿಸಿದಳು. ಮಾನವತ್ವದ ಮುಖವಾಡ ಧರಿಸಿದ ರಾಕ್ಷಸಳಂತೆಯೇ ಆಕೆ ನನಗೆ ತೋರುತ್ತಾಳೆ” ಎಂದು ಉಮಾಶ್ರೀ ಹೇಳಿದ್ದರು. ಇದು ಅವರ ಒಡಲಾಳದಲ್ಲಿನ ಸಾಮಾಜಿಕ ಸಂವೇದನೆಯನ್ನು ತೋರುತ್ತದೆ.

ಇದನ್ನೂ ಓದಿ: ಈ ದಿನ ಸಂಪಾದಕೀಯ | ಬಿಹಾರದಲ್ಲಿ ಕೋಟಿ ಉದ್ಯೋಗದ ಭರವಸೆ; ಹಳೆಯ ಭರವಸೆ ಎಲ್ಲಿ ಹೋಯಿತು ಮೋದೀಜೀ?

ರಂಗಭೂಮಿ ಗಟ್ಟಿತನ ಕಲಿಸುತ್ತದೆ. ಗುರಿ ಏನೆಂಬುದನ್ನು ಹೇಳಿಕೊಡುತ್ತದೆ. ಆ ಕಡೆ ಈ ಕಡೆ ತಲೆಕೆಡಿಸಿಕೊಳ್ಳಬೇಡಿ, ಗುರಿಯೆಡೆಗೆ ಮಾತ್ರ ನೋಡುತ್ತಿರಿ ಎನ್ನುವ ಉಮಾಶ್ರೀ ಅವರ ಮಾತುಗಳಲ್ಲಿ ಹೊಸತಲೆಮಾರಿಗೆ ಹಲವು ಪಾಠಗಳಿವೆ. ಅವಸರದ ಹಾದಿಗಳು ಬೇಡ, ನಿಮಗೊಂದು ಸಮಯ ಬರುತ್ತದೆ, ಅದಕ್ಕಾಗಿ ಕಾಯುವ ಸಂಯಮ ಇರಲಿ ಎಂದು ಅವರು ತಮ್ಮ ಅನುಭವದಿಂದ ಕಲಿತದ್ದನ್ನು ಹೇಳುವ ಮಾತುಗಳನ್ನು ಯುವತಲೆಮಾರು ಆಲಿಸಬೇಕಿದೆ.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...