ವಲಸೆಯಂತಹ ಜ್ವಲಂತ ಸಮಸ್ಯೆಯನ್ನು ಹೇಳುವ ರಾಜಕೀಯ ಚಿತ್ರವೆನಿಸಿದರೂ; ಕ್ರಾಂತಿಕಾರಿ ಚಟುವಟಿಕೆಗಳ ಕುರಿತು ಮಾತನಾಡುವ ಪ್ರಯತ್ನ ಮಾಡಿದರೂ; ಗಟ್ಟಿ ನಿಲುವು ತಳೆಯುವುದಿಲ್ಲ. ಇದು ಹೋರಾಟಗಳ ಕಥೆಯಂತೆ ತೋರಿದರೂ, ನಿಜವಾದ ಹೋರಾಟದಿಂದ ತಪ್ಪಿಸಿಕೊಂಡಿರುವ ಚಿತ್ರ. ಇದು ಪ್ರಶ್ನೆಗಳನ್ನು ಎತ್ತುವ ಚಿತ್ರದಂತೆ ಕಂಡರೂ, ಪ್ರಶ್ನೆಗಳನ್ನು ನಯವಾಗಿ ತಳ್ಳಿಹಾಕುವ ಚಿತ್ರ.
ಸಿನೆಮಾ ಜಗತ್ತಿನ ಪ್ರತಿಷ್ಠಿತ ಪುರಸ್ಕಾರವಾದ ಆಸ್ಕರ್ ಪ್ರಶಸ್ತಿ ಪ್ರಕಟವಾಗಿದೆ. ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಖ್ಯಾತನಟ ಲಿಯೊನಾರ್ಡೊ ಡಿಕ್ಯಾಪ್ರಿಯೊ ನಟಿಸಿರುವ ‘ಒನ್ ಬ್ಯಾಟಲ್ ಆಫ್ಟರ್ ಅನದರ್‘ ಚಿತ್ರ ಗೆದ್ದುಕೊಂಡಿದೆ. ಈ ಚಿತ್ರದ ನಿರ್ದೇಶಕ ಪೌಲ್ ಥಾಮಸ್ ಆಂಡರ್ಸನ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದಿದ್ದಾರೆ.
ಹಾಗೆ ನೋಡಿದರೆ, ‘ಒನ್ ಬ್ಯಾಟಲ್ ಆಫ್ಟರ್ ಅನದರ್’ ಒಮ್ಮೆ ನೋಡಬಹುದಾದ ಸಾಧಾರಣ ಚಿತ್ರ. ಪ್ರತಿಷ್ಠಿತ ಆಸ್ಕರ್ ಪುರಸ್ಕಾರಕ್ಕೆ ಪರಿಗಣಿಸಬೇಕಾದ, ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಅರ್ಹವಾದ ಚಿತ್ರವಲ್ಲ. ಅದಕ್ಕೆ ಬೇಕಾದ ಕಥಾಹಂದರವಾಗಲಿ, ಪ್ರೇಕ್ಷಕನನ್ನು ಗಾಢವಾಗಿ ಕಲಕುವಂತಹ ಸನ್ನಿವೇಶಗಳಾಗಲಿ, ಒಳನೋಟಗಳಾಗಲಿ ಚಿತ್ರದಲ್ಲಿಲ್ಲ. ಚಿತ್ರವು ಮೊದಲ ನೋಟಕ್ಕೆ ಪೊಲಿಟಿಕಲ್ ಅಂಡ್ ಆಕ್ಟಿವಿಸಂ ಡ್ರಾಮಾದಂತೆ ಕಂಡರೂ, ನಿಲುವು ತಳೆಯುವಲ್ಲಿ ಸೋಲುತ್ತದೆ.
ಚಿತ್ರವು ಅಮೆರಿಕ-ಮೆಕ್ಸಿಕೋ ಗಡಿದಾಟುವ ವಲಸಿಗರ ಕತೆ ಕುರಿತು ಹೇಳುತ್ತದೆ. ಮಕ್ಕಳನ್ನು ಅವರ ಪೋಷಕರಿಂದ ಬೇರ್ಪಡಿಸುವ ಘಟನೆಗಳ ಸರಮಾಲೆಯನ್ನು ಬಿಡಿಸಿಡುತ್ತದೆ. ವಲಸೆ ಕುರಿತ ಸದ್ಯದ ಅಮೆರಿಕದ ಮನಸ್ಥಿತಿ- ಅಧಿಕಾರಪರ ಹಾಗೂ ಹಿಂಸಾತ್ಮಕ ಪ್ರವೃತ್ತಿಗಳನ್ನು ಸಹಜವಾಗಿ ಒಪ್ಪಿಕೊಳ್ಳುವ ರಾಜಕೀಯ ಮನೋಭಾವನ್ನು ಹೊರಹಾಕುತ್ತದೆ. ಒಬ್ಬ ಕ್ರಾಂತಿಕಾರಿ ವ್ಯಕ್ತಿಯ ಜೀವನವನ್ನು ಕೇಂದ್ರವಾಗಿಟ್ಟುಕೊಂಡಿದೆ. ಆತ ಬದುಕಿನಲ್ಲಿ ಶಾಂತಿ, ಸ್ಥಿರತೆ ಮತ್ತು ಆತ್ಮತೃಪ್ತಿಯ ಹುಡುಕಾಟದಲ್ಲಿರುತ್ತಾನೆ. ಹುಡುಕುವ ಹಾದಿಯಲ್ಲಿ ನಾಯಕ ತನ್ನ ಸುತ್ತಲಿನ ಅನ್ಯಾಯ, ಅಸಮಾನತೆ ಹಾಗೂ ವ್ಯವಸ್ಥೆಯ ದೋಷಗಳನ್ನು ಗಮನಿಸುತ್ತಾನೆ. ತನ್ನ ಸ್ವಂತ ಸಮಸ್ಯೆಗಳನ್ನಷ್ಟೇ ಅಲ್ಲ, ಸಮಾಜದ ಸಮಸ್ಯೆಗಳ ವಿರುದ್ಧವೂ ಅವನು ಹೋರಾಡಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಇದು ಅವನ ಒಳಗಿನ ಸಂಘರ್ಷವನ್ನು ಇನ್ನಷ್ಟು ಜಟಿಲಗೊಳಿಸುತ್ತದೆ. ಸಾಮಾಜಿಕ ಮತ್ತು ಭಾವನಾತ್ಮಕ ಸಂಘರ್ಷಗಳಿಗೆ ಈಡುಮಾಡುತ್ತದೆ. ಬದುಕು ಅವನು ನಿರೀಕ್ಷಿಸಿದಂತೆ ಸಾಗದೆ, ಒಂದು ಸಮಸ್ಯೆ ಮುಗಿಯುವಷ್ಟರಲ್ಲಿ ಮತ್ತೊಂದು ಸಮಸ್ಯೆಗೆ ಒಡ್ಡಿಕೊಳ್ಳುವ ಅನಿವಾರ್ಯತೆಗೆ ಒಳಗಾಗುತ್ತದೆ. ಈ ನಿರಂತರ ಸಂಘರ್ಷವೇ ಕಥೆಯ ಕುದಿಬಿಂದುವಾಗಿದೆ.
ಇದನ್ನು ಓದಿದ್ದೀರಾ?: ಹೀರೋ ಆರಾಧನೆ ವಿರುದ್ಧ ಧ್ವನಿ ಎತ್ತಿದ ನಿತ್ಯಾ ಮೆನನ್
ವ್ಯಕ್ತಿಯ ಕನಸುಗಳು, ಕುಟುಂಬದ ಒತ್ತಡಗಳು, ಸಂಬಂಧಗಳ ಸಂಕೀರ್ಣತೆ, ಸಮಾಜದ ನಿರೀಕ್ಷೆಗಳ ನಡುವೆ ನಡೆಯುವ ಸಂಘರ್ಷಗಳು ಕಥೆಗೆ ತೀವ್ರತೆ ನೀಡುತ್ತವೆ. ಮುಖ್ಯ ಪಾತ್ರ ತನ್ನ ನೈತಿಕ ಮೌಲ್ಯಗಳನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿದರೂ, ಪರಿಸ್ಥಿತಿಗಳು ಅವನನ್ನು ನಿರಂತರವಾಗಿ ಪರೀಕ್ಷೆಗೊಡ್ಡುತ್ತವೆ. ಒಟ್ಟಿನಲ್ಲಿ, ಚಿತ್ರ ಹೋರಾಟಗಳ ಸರಮಾಲೆ ಎಂದು ಹೇಳುವುದಕ್ಕಷ್ಟೇ ಸೀಮಿತಗೊಂಡಿದೆ.
ಚಿತ್ರದ ಕಥಾಹಂದರದಲ್ಲಿ ಕೆಲವು ಭಾವನಾತ್ಮಕ ಕ್ಷಣಗಳು ಇದ್ದರೂ, ಅವು ಪ್ರೇಕ್ಷಕರ ಮನಸ್ಸಿನಲ್ಲಿ ದೀರ್ಘಕಾಲ ಉಳಿಯುವಷ್ಟು ತೀವ್ರವಾಗಿಲ್ಲ. ಪಾತ್ರಗಳ ಪೋಷಣೆಯೂ ಸಮರ್ಪಕವಾಗಿಲ್ಲ. ಕೆಲ ಪಾತ್ರಗಳು ಕೇವಲ ಸಂಕೇತಗಳಂತೆ ಕಂಡು, ಜೀವಂತಿಕೆ ಕಳೆದುಕೊಂಡಿವೆ. ಹಾಗೆ ನೋಡಿದರೆ, ಅಮೆರಿಕದ ಅಧಿಕಾರಿ ಪಾತ್ರವೇ ಚಿತ್ರದ ಬಹುಮುಖ್ಯ ಭಾಗ. ಅದನ್ನು ನಿರ್ವಹಿಸಿರುವ ಶಾನ್ ಪೆನ್ ನಟನೆಯೂ ಅದ್ಭುತ. ಆ ಪಾತ್ರವು ಒಳಗೆ ತೀವ್ರ ಸಂಘರ್ಷಗಳನ್ನು ಹುದುಗಿಟ್ಟುಕೊಂಡಿರುವಂಥದ್ದು. ಆತಂಕ, ಅನುಮಾನ, ನೋವು ಮತ್ತು ಜವಾಬ್ದಾರಿಗಳ ಒತ್ತಡದಿಂದ ಕಂಗೆಟ್ಟಿರುವಂಥದ್ದು. ಸಮಾಜದ ಅನ್ಯಾಯಗಳನ್ನು, ವೈಯಕ್ತಿಕ ಬದುಕಿನ ಸಂಕಷ್ಟಗಳನ್ನು ಒಂದೇ ಸಮಯದಲ್ಲಿ ಎದುರಿಸಬೇಕಾದ ಸಂಕೀರ್ಣ ವ್ಯಕ್ತಿತ್ವದ್ದು. ಅದನ್ನವರು ಚೆನ್ನಾಗಿಯೇ ನಿಭಾಯಿಸಿದ್ದಾರೆ, ಅದಕ್ಕೆ ತಕ್ಕಂತೆ ಅತ್ಯುತ್ತಮ ಪೋಷಕ ಪ್ರಶಸ್ತಿಯನ್ನೂ ಪಡೆದಿದ್ದಾರೆ.

ಚಿತ್ರದ ನಾಯಕನಟ ಡಿಕ್ಯಾಪ್ರಿಯೊ, ಮೂಲ ಮೆಕ್ಸಿಕನ್‌ನಂತೆ ಕಂಡರೂ, ವಿಶಿಷ್ಟ ಮ್ಯಾನರಿಸಂಗಳಿಂದ, ಸಂಭಾಷಣೆಗಳಿಂದ ಭಿನ್ನವಾಗಿ ನಟಿಸಿದ್ದರೂ, ತನ್ನನ್ನು ತಾನು ಮೀರುವಂತಹ ಅಭಿನಯ ಸಾಧ್ಯವಾಗಿಲ್ಲ ಎನಿಸುತ್ತದೆ. ಅಥವಾ ಆತನ ಈ ಹಿಂದಿನ ಚಿತ್ರಗಳು ಮತ್ತು ಪಾತ್ರಗಳ ಮುಂದೆ ಇದು ಕೊಂಚ ಕಳೆಗುಂದಿದಂತೆ ಕಾಣಿಸುತ್ತದೆ. ಹಾಗೆ ನೋಡಿದರೆ, ಆತನಿಗಿಂತ ಆತನ ಮಗಳ ಪಾತ್ರದಲ್ಲಿ ನಟಿಸಿರುವ ಚೇಸ್ ಇನ್ಫಿನಿಟಿ, ನಿಜಕ್ಕೂ ಅದ್ಭುತ ಅಭಿನೇತ್ರಿ. ಆಕೆಯ ಪಾತ್ರವೇ ಚಿತ್ರದ ಜೀವಾಳ.
ಇನ್ನು ಚಿತ್ರದ ತಾಂತ್ರಿಕ ಅಂಶಗಳಾದ ಸಿನಿಮಟೋಗ್ರಫಿ, ಸಂಗೀತ ಸರಾಸರಿ ಮಟ್ಟದಲ್ಲಿವೆ. ಚಿತ್ರದ ಕ್ಲೈಮ್ಯಾಕ್ಸ್- ರೋಡ್ ಚೇಸಿಂಗ್ ದೃಶ್ಯಗಳು ಕುತೂಹಲ ಕೆರಳಿಸುವಂತಿದ್ದರೂ, ಭಾವಬಿತ್ತಿಯಲ್ಲಿ ಉಳಿಸುವಷ್ಟು ಪ್ರಭಾವಶಾಲಿಯಾಗಿಲ್ಲ. ಆದರೆ ಆಸ್ಕರ್ ಪ್ರಶಸ್ತಿಗೆ ಶಿಫಾರಸು ಮಾಡುವ ವಿಮರ್ಶಕರಿಗೆ ಬೇಕಾದ ಆಕ್ಟಿವಿಸಂ, ಎಡಪಂಥೀಯ ನಿಲುವು, ವಲಸೆಗಳಿರುವುದರಿಂದ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಇದನ್ನು ಓದಿದ್ದೀರಾ?: ಆಸ್ಕರ್ 2026 ಪ್ರಶಸ್ತಿ | ಅತ್ಯುತ್ತಮ ನಟ ಮೈಕೆಲ್ ಬಿ, ನಟಿ ಜೆಸ್ಸಿ ಬಕ್ಲಿ: ಸಂಪೂರ್ಣ ವಿಜೇತರ ಪಟ್ಟಿ
ಚಿತ್ರವು ಪ್ರಮುಖವಾಗಿ ವಲಸೆಯಂತಹ ಜ್ವಲಂತ ಸಮಸ್ಯೆಯನ್ನು ಹೇಳುವ ರಾಜಕೀಯ ಚಿತ್ರವೆನಿಸಿದರೂ; ಕ್ರಾಂತಿಕಾರಿ ಚಟುವಟಿಕೆಗಳ ಕುರಿತು ಮಾತನಾಡುವ ಪ್ರಯತ್ನ ಮಾಡಿದರೂ, ದೃಶ್ಯಸಂಯೋಜನೆಯಲ್ಲಿ ತೀಕ್ಷ್ಣತೆ ಇಲ್ಲ. ನಿಲುವಿನಲ್ಲಿ ಗಟ್ಟಿತನವಿಲ್ಲ. ಇದು ಹೋರಾಟಗಳ ಕಥೆಯಂತೆ ತೋರುವ, ಆದರೆ ನಿಜವಾದ ಹೋರಾಟದಿಂದ ತಪ್ಪಿಸಿಕೊಂಡಿರುವ ಚಿತ್ರ. ಇದು ಪ್ರಶ್ನೆಗಳನ್ನು ಎತ್ತುವ ಚಿತ್ರವಲ್ಲ, ಪ್ರಶ್ನೆಗಳನ್ನು ನಯವಾಗಿ ತಳ್ಳಿಹಾಕುವ ಚಿತ್ರ.
ಪ್ರಸ್ತುತ ಜಗತ್ತಿನಲ್ಲಿ ವಲಸೆ, ಆಕ್ಟಿವಿಸಂ, ಬಣ್ಣ ಮತ್ತು ಅವುಗಳನ್ನು ಆವರಿಸಿರುವ ರಾಜಕಾರಣ ಕೇವಲ ಚರ್ಚೆಯ ವಿಷಯಗಳಲ್ಲ; ಅವು ಬದುಕಿನ ಅವಿಭಾಜ್ಯ ಅನುಭವಗಳು. ಆದರೆ, ಈ ಗಂಭೀರ ವಿಷಯಗಳನ್ನು ಚಿತ್ರ ಆಳವಾಗಿ ಅರ್ಥೈಸುವ ಬದಲು, ಸುರಕ್ಷಿತ ಮಧ್ಯಮ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದೆ. ಚಿತ್ರದಲ್ಲಿ ಅಮೆರಿಕ ವಲಸಿಗರ ಪರವಿದೆ ಎನಿಸಿದರೂ; ಅದು ಕೂಡ ಪ್ರಾಪಗ್ಯಾಂಡವಿರಬಹುದೇ ಎಂಬ ಅನುಮಾನವನ್ನು ಬಿತ್ತುತ್ತದೆ. ಏಕೆಂದರೆ, ಚಿತ್ರ ಯಾರನ್ನೂ ಗುರಿ ಮಾಡುವುದಿಲ್ಲ; ಯಾರನ್ನೂ ಪ್ರಚೋದಿಸುವುದಿಲ್ಲ; ಯಾರನ್ನೂ ಸ್ಪರ್ಶಿಸುವುದಿಲ್ಲ. ಸಿನೆಮಾ ಜಗತ್ತಿನ ಪ್ರತಿಷ್ಠಿತ ಪುರಸ್ಕಾರವಾದ ಆಸ್ಕರ್ ಪ್ರಶಸ್ತಿಯೂ ಟೀಕೆಗಳಿಂದ ಹೊರತಾಗಿಲ್ಲ.

ಲೇಖಕ, ಪತ್ರಕರ್ತ




