ವೈವಿಧ್ಯಮಯ ಅಭಿನಯ, ಸಹಜ ಸರಳತೆ ಹಾಗೂ ಸೌಹಾರ್ದ ನಡವಳಿಕೆಯಿಂದ ಸಿನಿಪ್ರಿಯರ ಮನಗೆದ್ದ ಮೋಹನ್ ಲಾಲ್, 80ರ ದಶಕದಿಂದ ಸೂಪರ್‌ಸ್ಟಾರ್ ಆಗಿದ್ದವರು, ಈಗಲೂ ಸ್ಟಾರ್ ನಟರಾಗಿಯೇ ಮಿಂಚುತ್ತಿದ್ದಾರೆ. ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ದಕ್ಷಿಣ ಭಾರತ ಪ್ರಖ್ಯಾತ ನಟ, ನಿರ್ಮಾಪಕ ಮೋಹನ್ ಲಾಲ್ ಅವರಿಗೆ ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವಾದ ‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿ ದೊರೆತಿದೆ. ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿ, ಮೋಹನ್ ಲಾಲ್ ಅವರನ್ನು ಕೇಂದ್ರ ಸರ್ಕಾರ ಗೌರವಿಸಿದೆ. ಲಾಲ್ ಅವರ ಶ್ರಮ ಮತ್ತು ಕೊಡುಗೆಗೆ ಸಂದ ಗೌರವವೆಂದು ಸಿನಿಮಾ ಕ್ಷೇತ್ರದಲ್ಲಿ ಅಭಿನಂದನೆಗಳ ಮಹಾಪೂರ ಹರಿದುಬರುತ್ತಿದೆ.
ಮೋಹನ್ ಲಾಲ್ ಅವರು ಮೂಲತಃ, ಕೇರಳದವರು. ಮಲಯಾಳಂ ಚಿತ್ರರಂಗದಲ್ಲಿ ಮೀಯುತ್ತಿರುವವರು. ಬಹುಮುಖ ಪ್ರತಿಭಾವಂತರು. ವೈವಿಧ್ಯಮಯ ಅಭಿನಯ, ಸಹಜ ಸರಳತೆ ಹಾಗೂ ಸೌಹಾರ್ದ ನಡವಳಿಕೆಯಿಂದ ಸಿನಿಪ್ರಿಯರ ಮನಗೆದ್ದವರು. ಈ ಕಾಲಮಾನದಲ್ಲಿ ಜೀವಿಸುತ್ತಿರುವ ನಟ-ನಟಿಯರಲ್ಲಿ ಅತೀ ಹೆಚ್ಚು ಅಂದರೆ, 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ಏಕೈಕ ಕಲಾವಿದ. 1980ರ ದಶಕದಿಂದ ಸೂಪರ್‌ಸ್ಟಾರ್ ಆಗಿದ್ದವರು, ಈಗಲೂ ಸ್ಟಾರ್ ನಟರಾಗಿಯೇ ಮಿಂಚುತ್ತಿದ್ದಾರೆ. ಸುದೀರ್ಘ ಸಿನಿಪಯಣದಲ್ಲಿ ನಟನಾಗಿ ಮಾತ್ರವಲ್ಲ, ನಿರ್ಮಾಪಕ, ನಿರ್ದೇಶಕ ಹಾಗೂ ಗಾಯಕರಾಗಿಯೂ ಪಾತ್ರ ನಿರ್ವಹಿಸಿದ್ದಾರೆ.
ಅವರ ಪೂರ್ಣ ಹೆಸರು ಮೋಹನ್ ಲಾಲ್ ವಿಶ್ವನಾಥನ್, ಜನಿಸಿದ್ದು 1960ರಲ್ಲಿ, ಪಥನಾಂಥಿಟ್ಟ ಜಿಲ್ಲೆಯ ಎಲಂಥೂರ್‌ನಲ್ಲಿ. ಬಾಲ್ಯದಲ್ಲಿ ತಿರುವನಂತಪುರಂನ ಮುದವನ್ಮುಗಲ್‌ನಲ್ಲಿ ಬೆಳೆದ ಮೋಹನ್ ಲಾಲ್ ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. 1977-78ರಲ್ಲಿ ಕೇರಳ ರಾಜ್ಯ ಕುಸ್ತಿ ಚಾಂಪಿಯನ್ ಕೂಡ ಆಗಿದ್ದರು.
ತಮ್ಮ 18ನೇ ವಯಸ್ಸಿನಲ್ಲಿ ಚಿತ್ರರಂಗ ಪ್ರವೇಶಿಸಿದ ಮೋಹನ್ ಲಾಲ್, 1978ರಲ್ಲಿ ‘ಥಿರನೋಟ್ಟಮ್’ ಸಿನಿಮಾದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದರು. ಆದರೆ, ಸೆನ್ಸಾರ್ ಸಮಸ್ಯೆಯಿಂದಾಗಿ ಆಗ ಸಿನಿಮಾ ಬಿಡುಗಡೆ ಆಗಲೇ ಇದೆ. ಬರೋಬ್ಬರಿ 25 ವರ್ಷಗಳ ಬಳಿಕ, 2003ರಲ್ಲಿ ‘ಥಿರನೋಟ್ಟಮ್’ ಚಿತ್ರ ಬಿಡುಗಡೆಯಾಯಿತು. 1980ರಲ್ಲಿ ಫಾಜಿಲ್ ನಿರ್ದೇಶನದ ‘ಮಂಜಿಲ್ ವಿರಿಞ್ಜ ಪೂಕ್ಕಲ್’ ಸಿನಿಮಾದಲ್ಲಿ ಮೋಹನ್ ಲಾಲ್ ವಿಲನ್ ಪಾತ್ರದಲ್ಲಿ ನಟಿಸಿದ್ದರು. ಇದು, ಅವರ ಬಿಡುಗಡೆಯಾದ ಮೊದಲ ಸಿನಿಮಾ. ಈ ಸಿನಿಮಾ, ಬಾಕ್ಸ್ ಆಫೀಸ್‌ನಲ್ಲಿ ಭಾರೀ ಸದ್ದು ಮಾಡುವ ಮೂಲಕ, ಮೋಹನ್ ಲಾಲ್‌ರಿಗೆ ಯಶಸ್ಸು, ಹೆಸರು ತಂದುಕೊಟ್ಟಿತು.
ಸರಿಸುಮಾರು 40 ವರ್ಷಗಳ ದೀರ್ಘ ಸಿನಿ ಪಯಣದಲ್ಲಿ ಮೋಹನ್ ಲಾಲ್ ಮಲಯಾಳಂ, ತಮಿಳು, ಹಿಂದಿ, ತೆಲುಗು ಹಾಗೂ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸಿನಿಮಾ ಪ್ರೇಮಿಗಳನ್ನು ರಂಚಿಸಿದ್ದಾರೆ. 1986ರಲ್ಲಿ ತೆರೆಕಂಡ ‘ರಾಜವಿಂತೆ ಮಕನ್’ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದ ಮೋಹನ್ ಲಾಲ್, ಮಲಯಾಳಂ ಚಿತ್ರರಂಗದಲ್ಲಿ ಸೂಪರ್‌ಸ್ಟಾರ್‌ಆಗಿ ಬೆಳೆದರು. ವಿಲನ್‌ನಿಂದ ಕಾಮಿಡಿ, ಆಕ್ಷನ್, ಡ್ರಾಮಾಗಳನ್ನು ಒಳಗೊಂಡ ವಿವಿಧ ರೀತಿಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅಭಿಮಾನಿಗಳನ್ನು ರಂಜಿಸಿದ್ದಾರೆ.
ನಟನಾಗಿ ಮಾತ್ರವಲ್ಲದೆ, ನಿರ್ದೇಶಕನಾಗಿಯೂ ನಿರ್ದೇಶಕ ಜಿ. ಅರವಿಂದನ್, ಹರಿಹರನ್, ಪದ್ಮರಾಜನ್‌ರೊಂದಿಗೆ ಕೆಲಸ ಮಾಡಿದ್ದಾರೆ. 1990ರಲ್ಲಿ ತಮ್ಮದೇ ‘ಪ್ರಣವಂ ಆರ್ಟ್ಸ್’ ಎಂಬ ನಿರ್ಮಾಣ ಕಂಪನಿಯನ್ನು ಆರಂಭಿಸಿದ್ದು, ಹಲವು ಸಿನಿಮಾಗಳಿಗೆ ಹಣ ಹೂಡಿದ್ದಾರೆ. ಸಿನಿಮಾ ನಿರ್ಮಾಪಕರಾಗಿಯೂ ದುಡಿದಿದ್ದಾರೆ.
‘ಮಂಙಿಲ್ ವಿರಿಞ್ಜ ಪೂಕ್ಕಲ್’ (1980), ‘ರಾಜಾವಿಂಡೆ ಮಗನ್’ (1986), ‘ಕಿರೀಡಮ್’ (1989), ‘ಭಾರತಂ’ (1991), ‘ಮಾನಿಚಿತ್ರತಾಝು’ (1994), ‘ಸ್ಪಡಿಕಮ್’ (1995), ‘ವನಪ್ರಸ್ಥಂ’ (1999), ‘ಕಂಪನಿ’ (2002), ‘ತನ್ಮಾತ್ರ’ (2005), ‘ದೃಶ್ಯಂ’ (2013), ‘ಪುಲಿಮುರುಗನ್’ (2016 – 100 ಕೋಟಿ ರೂ. ಗಳಿಸಿದ ಮೊದಲ ಮಲಯಾಳಂ ಚಿತ್ರ), ಲೂಸಿಫರ್’ (2019), ‘ದೃಶ್ಯಂ 2’ (2021), ‘ನೇರು’ (2023), ‘ಜೈಲರ್’ (2023 ವಿಶೇಷ ಪಾತ್ರ), ‘ಎಲ್2: ಎಂಪುರಾನ್’ (2025), ‘ಥುಡರುಮ್’ (2025), ‘ಹೃದಯಪೂರ್ವಂ’ (2025) ಇವು ಮೋಹನ್ ಲಾಲ್ ಅಭಿನಯದ ಪ್ರಮುಖ ಮತ್ತು ಹಿಟ್ ಸಿನಿಮಾಗಳು.
ಬೆಳ್ಳಿತೆರೆ ಮಾತ್ರವಲ್ಲದೆ, ಕಿರುತೆರೆಯಲ್ಲಿಯೂ ಮೋಹನ್ ಲಾಲ್ ತಮ್ಮ ಛಾಪು ಮೂಡಿಸಿದ್ದಾರೆ. ಮಲಯಾಳಂ ಭಾಷೆಯ ಬಿಗ್ ಬಾಸ್ ರಿಯಾಲಿಟಿ ಶೋವನ್ನು ನಿರಂತರವಾಗಿ ಹೋಸ್ಟ್ ಮಾಡುತ್ತಾ ಬಂದಿದ್ದಾರೆ.
ಮೋಹನ್ ಲಾಲ್ ಅವರು ಚಿತ್ರರಂಗದ ಸುದೀರ್ಘ ಪಯಣದಲ್ಲಿ 5 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು (ಎರಡು ಬೆಸ್ಟ್ ಆಕ್ಟರ್), 9 ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಹಾಗೂ ಫಿಲ್ಮ್‌ಫೇರ್ ಸೌತ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಭಾರತ ಸರ್ಕಾರವು ಮೋಹನ್ ಅವರಿಗೆ 2001ರಲ್ಲಿ ಪದ್ಮಶ್ರೀ, 2019ರಲ್ಲಿ ಪದ್ಮ ಭೂಷಣ್ ಮತ್ತು 2025ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.
ಆದಾಗ್ಯೂ, ಮೋಹನ್ ಲಾಲ್ ಅವರು ಕೆಲವು ವಿವಾದಗಳನ್ನು ಎದುರಿಸಿದ್ದಾರೆ. 2012ರಲ್ಲಿ ಆನೆ ಕೊಂಬುಗಳನ್ನು ಕಾನೂನುಬಾಹಿರವಾಗಿ ಇಟ್ಟುಕೊಂಡಿದ್ದಾರೆ ಎಂದು ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. 2023ರಲ್ಲಿ ನ್ಯಾಯಾಲಯವು ಪ್ರಕರಣಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ಪ್ರಕರಣ ಇನ್ನೂ ಚಾಲ್ತಿಯಲ್ಲಿದೆ.
ಈ ಲೇಖನ ಓದಿದ್ದೀರಾ?: ಎಚ್1ಬಿ ವೀಸಾದಿಂದ ಅಮೆರಿಕಕ್ಕಾದ ಲಾಭವೇನು, ಭಾರತಕ್ಕಾದ ನಷ್ಟವೇನು?
ಮೋಹನ್ ಲಾಲ್ ಅವರು 2024ರಲ್ಲಿ ‘ಅಸೋಸಿಯೇಷನ್ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್ಸ್’ (ಅಮ್ಮ- AMMA) ಅಧ್ಯಕ್ಷರಾಗಿದ್ದರು. ಇದೇ ಅವಧಿಯಲ್ಲಿ, ಕೇರಳ ಚಿತ್ರರಂಗದಲ್ಲಿ ನಟಿಯರ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪಗಳಿಗೆ ಸಂಬಂಧಿಸಿದ ವಿವಾದಗಳು ಮುನ್ನೆಲೆಗೆ ಬಂದವು. 2024ರ ಆಗಸ್ಟ್‌ನಲ್ಲಿ, ಕೇರಳ ಸರ್ಕಾರವು ಚಿತ್ರರಂಗದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಗಳ ಕುರಿತಾದ ‘ಜಸ್ಟೀಸ್ ಕೆ. ಹೇಮಾ ಕಮಿಟಿ’ಯ ವರದಿಯನ್ನು ಬಿಡುಗಡೆ ಮಾಡಿತು. ವರದಿಯಲ್ಲಿ, AMMA ಸಂಸ್ಥೆಯ ಕೆಲವು ಪ್ರಮುಖ ಸದಸ್ಯರ ವಿರುದ್ಧವೂ ಗಂಭೀರ ಆರೋಪಗಳಿದ್ದವು. ಹೀಗಾಗಿ, ಅಮ್ಮ ಸಂಸ್ಥೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ, ಟೀಕೆಗಳು ಭುಗಿಲೆದ್ದವು. ಪರಿಣಾಮ, ಮೋಹನ್ ಲಾಲ್ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ, ಸಂಸ್ಥೆಯ ಜವಾಬ್ದಾರಿಗಳಿಂದ ಹೊರಬಂದರು. ‘ನೈತಿಕ ಜವಾಬ್ದಾರಿ ಹೊತ್ತು’ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿಕೊಂಡರು.
ಮೋಹನ್ ಲಾಲ್ ನಟನೆಯ ‘ಎಂಪುರಾನ್’ ಸಿನಿಮಾ ಕೂಡ ವಿವಾದ ಕೇಂದ್ರಬಿಂದುವಾಗಿತ್ತು. ಸಿನಿಮಾದಲ್ಲಿ, 2002ರ ಗುಜರಾತ್ ಗಲಭೆಗಳ ಉಲ್ಲೇಖ ಮತ್ತು ಹಿಂದುತ್ವ ರಾಜಕಾರಣವನ್ನು ಟೀಕಿಸುವ ದೃಶ್ಯಗಳಿವೆ ಎಂದು RSS, BJPಗಳು ವಿವಾದ ಹುಟ್ಟುಹಾಕಿದವು. ಪರಿಣಾಮ, ಸಿನಿಮಾದ ಹಲವು ದೃಶ್ಯಗಳಿಗೆ ಸೆನ್ಸಾರ್ ಮಂಡಳಿ ಕತ್ತರಿ ಹಾಕಿತು.
ಮತ್ತೊಂದು ವಿಚಾರವೆಂದರೆ, ಮೋಹನ್ ಲಾಲ್ ಅವರು 2021ರಲ್ಲಿ UAE ಗೋಲ್ಡನ್ ವೀಸಾ ಪಡೆದಿದ್ದಾರೆ. 2004ರಲ್ಲಿ ನಿರ್ದೇಶಕ ಅಡೂರು ಗೋಪಾಲಕೃಷ್ಣನ್ ಅವರಿಗೆ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದಿದ್ದು ಬಿಟ್ಟರೆ, ಮಲಯಾಳಂ ಚಿತ್ರರಂಗದ ಮತ್ತೊಬ್ಬರಿಗೆ ಈ ಪ್ರಶಸ್ತಿ ಸಂದಿರಲಿಲ್ಲ. ಈಗ- 2025ರಲ್ಲಿ ಮೋಹನ್ ಲಾಲ್ ಅವರಿಗೆ ಫಾಲ್ಕೆ ಪ್ರಶಸ್ತಿ ಸಂದಾಯವಾಗುವ ಮೂಲಕ ಆ ಕೊರಗು ನೀಗಿಕೊಂಡಿದೆ.




