
ಜೋಗಿ ಪ್ರೇಮ್ ಕೆಡಿ ದ ಡೆವಿಲ್ ಸಿನಿಮಾದ “ಸರ್ಸೆ ನಿನ್ನ ಸೆರಗು…” ಹಾಗೆ ಭಾರೀ ವಿರೋಧ ವ್ಯಕ್ತವಾದ ನಂತರ ಪ್ರತಿಕ್ರಿಯೆ ನೀಡಿರುವ ಪ್ರೇಮ್, “ವಿವಾದಿತ ಹಾಡಿನ ಸಾಹಿತ್ಯ ಬದಲಿಸುತ್ತೇನೆ. ಬೇರೆಯದೇ ಸಾಹಿತ್ಯ ರಚನೆ ಮಾಡಿ ಹಾಡು ಮಾಡುವುದಾಗಿ ಹೇಳಿದ್ದಾರೆ. ಯಾರಿಗಾದರೂ ನನ್ನಿಂದ ತೊಂದರೆಯಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದಿದ್ದಾರೆ.
ಈ ಹಾಡಿನ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದರು. ಕೆಡಿ ದ ಡೆವಿಲ್ ಸಿನಿಮಾದ ಹಾಡು ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ಇದೇ ಸೋಮವಾರದಂದು ಬಿಡುಗಡೆಯಾಗಿತ್ತು. ಹಾಡಿನ ಸಾಹಿತ್ಯವು ಅಶ್ಲೀಲತೆಯಿಂದ ಕೂಡಿದ್ದು ಸಿನಿ ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿತ್ತು.
ಸಂಜಯ್ ದತ್ ಹಾಗೂ ನೊರಾ ಫತೇಹಿ ಈ ಹಾಡಿಗೆ ಹೆಜ್ಜೆ ಹಾಕಿದ್ದು ಹಾಡಿನ ಉದ್ದಕ್ಕೂ ಹೆಣ್ಣನ್ನು ಅಪಮಾನಿಸುವ ದೃಶ್ಯಗಳು, ಅಶ್ಲೀಲ ನೃತ್ಯ ಸಂಯೋಜನೆಯೇ ತುಂಬಿ ಹೋಗಿತ್ತು. ಕಳೆದ ದಶಕಗಳಲ್ಲೇ ಇಂತಹ ಅಶ್ಲೀಲ ಸಾಹಿತ್ಯವಿರುವ ಸಿನಿಮಾ ಹಾಡು ಕೇಳಿ ಕಂಡಿರಲಿಲ್ಲ ಎಂದು ನೆಟ್ಟಿಗರು ಛೀಮಾರಿ ಹಾಕಿದ್ದರು.
ಕಂಗನಾ ರನೌತ್ ಹಾಗೂ ಅರ್ಮಾನ್ ಮಲಿಕ್ ರಂತಹ ಪ್ರಸಿದ್ಧರು ಸರ್ಸೆ ನಿನ್ನ ಸೆರಗ ಹಾಡಿನ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ವಕೀಲರೊಬ್ಬರು ಕೇಂದ್ರ ಚಲನಚಿತ್ರ ಮಂಡಳಿಗೆ ದೂರು ನೀಡಿದ್ದು, ಈ ಹಾಡು ಅಪ್ರಾಪ್ತ ವಯಸ್ಕರ ಮೇಲೆ ದುಷ್ಪರಿಣಾಮ ಬೀರುವುದಾಗಿ ಆರೋಪಿಸಿದ್ದರು. ಹಾಡಿನ ಸಾಹಿತ್ಯ ಬದಲಿಸಿ ಮರು ಬಿಡುಗಡೆ ಮಾಡುವುದಾಗಿ ಪ್ರೇಮ್ ಮಾಧ್ಯಮ ಹೇಳಿಕೆ ನೀಡಿದ್ದಾರೆ.





