ಪ್ರೇಮ್ ನಿರ್ದೇಶನದ “ಕೆಡಿ ದಿ ಡೆವಿಲ್” ಸಿನಿಮಾ ಏಪ್ರಿಲ್ 30ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಹೆಣ್ಣು ಮಕ್ಕಳ ಘನತೆಗೆ ಧಕ್ಕೆ ತರುವ ಈ ಚಿತ್ರದ ಹಾಡುಗಳು ಭಾರೀ ಟೀಕೆಗೆ ಗುರಿಯಾಗಿದೆ.
ಧ್ರುವ ಸರ್ಜಾ ನಟನೆಯ ಕೆಡಿ ದಿ ಡೆವಿಲ್ ಸಿನಿಮಾದ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವಿವಾದಕ್ಕೆ ಕಾರಣವಾಗಿದೆ. ʼಸರ್ಸೆ ನಿನ್ನ ಸೆರಗ ಸರಸೆʼ ಎಂಬ ಹಾಡು ಭಾರತದಲ್ಲಿ ಇದುವರೆಗೂ ಬಿಡುಗಡೆಗೊಂಡ ಹಾಡುಗಳಲ್ಲೇ ಅಸಭ್ಯ ಹಾಡು ಎಂಬ ಟೀಕೆಗೆ ಪಾತ್ರವಾಗಿದೆ. ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಹಾಡಿನಲ್ಲಿ ಹೆಣ್ಣನ್ನು ಅವಮಾನಿಸುವ ಅಂಶಗಳೇ ಇದ್ದು ಹಿಂದೆ “ತಾಯಿನೇ ಎಲ್ಲಾ ಮಿಗಿಲ್ಯಾರು ಇಲ್ಲ..” ಎಂದು ಹಾಡಿದ್ದ ಪ್ರೇಮ್ ಈಗ ಇಂತಹ ಹಾಡಿನ ಗೀತರಚನೆ ಮಾಡಿರುವುದು ಅಭಿಮಾನಿಗಳಲ್ಲಿ ಅಸಮಧಾನ ಉಂಟುಮಾಡಿದೆ.
ಇನ್ನೂ ಚಿತ್ರ ತಂಡದಲ್ಲಿ ಸಂಜಯ್ ದತ್ , ಶಿಲ್ಪಾ ಶೆಟ್ಟಿ, ರಮೇಶ್ ಅರವಿಂದ್ , ವಿ. ರವಿಚಂದ್ರನ್ ನಂತಹ ಹಿರಿಯ ಪಾತ್ರವರ್ಗವಿದ್ದೂ ಸಿನಿತಂಡ ಹೀಗೊಂದು ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ. ಸರ್ಸೆ ನಿನ್ನ ಸೆರ್ಗ ಹಾಡಿನಲ್ಲಿ ನೊರ ಫತೇಹಿ ಮತ್ತು ಸಂಜಯ್ ದತ್ ಹೆಜ್ಜೆ ಹಾಕಿದ್ದು, ಹಾಡಿನ ಉದ್ದಕ್ಕೂ ಡಬಲ್ ಮೀನಿಂಗ್ ಸಾಲುಗಳು ಹೆಣ್ಣನ್ನು ಭೋಗದ ವಸ್ತುವಾಗಿ ಬಿಂಬಿಸುವ ದೃಶ್ಯಗಳೇ ತುಂಬಿ ಹೋಗಿವೆ. ಸಾಮಾಜಿಕ ಜಾಲತಾಣದಲ್ಲಿ ಜೋಗಿ ಸಿನಿಮಾದ ಮೂಲಕ ಹೆಣ್ಣಿನ ವಾತ್ಸಲ್ಯದ ಮಿಡಿತಗಳ ತೆರೆಯ ಮುಂದೆ ತಂದಿದ್ದ ಪ್ರೇಮ್, ಕೆಡಿ ಸಿನಿಮಾದಲ್ಲಿ ಈ ಬಗೆಯ ಸ್ರೀ ಸಂವೇದನೆಯನ್ನು ಸಂಪೂರ್ಣವಾಗಿ ಕಳೆದು ಕೊಂಡಿದ್ದಾರೆ.

ಇದೆ ಸಿನಿಮಾದ ʼಅಣ್ಣತಮ್ಮ ಜೋಡೆತ್ತು ಕಣ್ರೋʼ ಎನ್ನುವ ಹಾಡಿನಲ್ಲೂ ಹೆಣ್ಣನ್ನು ನಿಂದಿಸುವ ಬಯ್ಗುಳಗಳ ʼರಂಡೆ ಮುಂಡೇರ ಕಣ್ಣು ನಿಮ್ಮ ಮೇಲೆ ಬೀಳ್ದಿರ್ಲಿ ಕಂಡ್ರೋʼ ಸಾಲು ಬಳಸಿದ್ದಾರೆ ಈ ಹಾಡನ್ನು ಪ್ರೇಮ್ ಹಾಡಿರುವುದು ಒಬ್ಬ ಸೃಜನಶೀಲ ವ್ಯಕ್ತಿ ತನ್ನಲ್ಲಿರುವ ಕಲಾ ಅಭಿವಯಕತಿಯನ್ನು ಹೇಗೆ ಬಳಸಬಾರದು ಎಂಬುದಕ್ಕೆ ಉದಾಹರಣೆ.
ಇನ್ನು ಧ್ರುವ ಸರ್ಜಾ ಇತ್ತೀಚಿಗೆ ವಿವಾದದ ಮೂಲಕ ಸುದ್ದಿಯಾಗುವುದೇ ಹೆಚ್ಚು, ಈ ಹಿಂದೆ ಮಾರ್ಟಿನ್ ಸಿನಿಮಾ ಚೆನ್ನಾಗಿಲ್ಲ ಎಂದು ವಿಮರ್ಶೆ ಮಾಡಿದವರ ಮೇಲೆ ಧೃವ ಹರಿಹಾಯ್ದಿದ್ದರು. ಪೊಗರು ಸಿನಿಮಾದ ಕೆಲ ದೃಶ್ಯಗಳು ನಿರ್ದಿಷ್ಟ ಸಮುದಾಯವನ್ನು ಅವಹೇಳಣ ಮಾಡುವಂತಿದೆ ಎಂಬ ವಿವಾದವೂ ಸರ್ಜಾ ಬೆನ್ನು ಹತ್ತಿತ್ತು. ಧ್ರುವ ಸರ್ಜಾ ನಟನೆಯ ಇತ್ತೀಚಿನ ಸಿನಿಮಾಗಳಲ್ಲಿ ಚಿತ್ರದ ಸಾಹಿತ್ಯ ಮತ್ತು ಹಾಡು ಎರಡೂ ಹಿಂಸೆಯನ್ನು ವೈಭವೀಕರಿಸುವ, ಅವಾಚ್ಯ ಸಂಭಾಷಣೆಗಳನ್ನು ಬಳಸಿ ಮಾಸ್ ಎಂಬ ಪರಿಕಲ್ಪನೆಯ ಸುತ್ತ ಸುತ್ತುವ ಅಸೂಕ್ಷ್ಮ ವಸ್ತುಗಳನ್ನೇ ಆಧರಿಸಿವೆ ಎನ್ನಬಹುದು.

ಪ್ರಸ್ತುತ ಇತರೆ ರಾಜ್ಯದ ಸಿನಿ ಪ್ರೇಕ್ಷಕರಿಂದಲೂ ಟೀಕೆಗೆ ಒಳಗಾಗಿರುವ ʼಸರ್ಸೆ ನಿನ್ನ ಸೆರಗ..ʼ ಹಾಡು ಕನ್ನಡಿಗರ ಸಿನಿ ಅಭಿರುಚಿಯನ್ನೇ ಟೀಕಿಸುವ ಹಂತಕ್ಕೆ ತಲುಪಿದೆ. ಸಾಮಾಜಿಕ ಜಾಲತಾಣದ ಎಕ್ಸ್ ಖಾತೆಯೊಂದರಲ್ಲಿ ಈ ಕುರಿತು ಬರೆದ ನೆಟ್ಟಿಗನೊಬ್ಬʼ ಕನ್ನಡ ಸಿನಿಮಾ ಲೈಂಗಿಕ ಗೀಳನ್ನು ಪ್ರಚೋದಿಸುತ್ತವೆʼ ಎಂದು ಬರೆದುಕೊಂಡಿದ್ದಾರೆ.





