ಖ್ಯಾತ ನಟ ರಾಜ್ ಬಿ ಶೆಟ್ಟಿ ಅವರ ಲೈಟರ್ ಬುದ್ಧ ಫಿಲಂಸ್ ಸಂಸ್ಥೆ ಲಾಂಛನದಲ್ಲಿ ಶಶಿಧರ ಶೆಟ್ಟಿ ಬರೋಡಾ, ರವಿ ರೈ ಕಳಸ ಹಾಗೂ ರಾಜ್ ಬಿ ಶೆಟ್ಟಿ ನಿರ್ಮಾಣ ಮಾಡಿ, ಜೆಪಿ ತುಮಿನಾಡು ನಿರ್ದೇಶನದ ಕಾಮಿಡಿ ಹಾರರ್ ಜಾನರ್‌ನ “ಸು ಫ್ರಮ್ ಸೋ” ಚಿತ್ರ ಇದೇ ಜುಲೈ 25ಕ್ಕೆ ಬಿಡುಗಡೆಯಾಗಲಿದೆ.
ಇತ್ತೀಚೆಗೆ ಬಿಡುಗಡೆಯಾಗಿದ್ದ ಚಿತ್ರದ ಟ್ರೇಲರ್, ಚಿತ್ರಪ್ರೇಮಿಗಳಿಂದ ಭೇಷ್ ಎನಿಸಿಕೊಂಡಿದೆ. ಈಗಾಗಲೇ ಬಿಡುಗಡೆಯಾಗಿರುವ ʼಡಾoಕ್ಸ್ ಅಂಥಮ್ʼ ಹಾಡಿಗೂ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿತ್ರದ ಕುರಿತು ಹೆಚ್ಚಿನ ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.
“ರಂಗಭೂಮಿಯಲ್ಲಿ ಸಾಕಷ್ಟು ಹೆಸರು ಮಾಡಿರುವ ಗೆಳೆಯ ಜೆಪಿ ತುಮಿನಾಡ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಚಿತ್ರವಿದು. ಆರು ವರ್ಷಗಳ ಹಿಂದೆಯೇ ಅವರು ಸಿದ್ದ ಮಾಡಿಕೊಂಡಿದ್ದ ಈ ಕಥೆ ಈಗ ಸಿನಿಮಾ ರೂಪ ಪಡೆದುಕೊಂಡಿದೆ. ನಾನು ಬಹಳ ಇಷ್ಟಪಡುವ ಕಾಮಿಡಿ ಜಾನರ್ ನ ಚಿತ್ರವಿದು. “ಸು ಫ್ರಮ್ ಸೋ” ಎಂದರೆ ಸೋಮೇಶ್ವರ ಎಂಬ ಸ್ಥಳದ ಹಾಗೂ ಸುಲೋಚನ ಎಂಬ ಪಾತ್ರದ ಹೆಸರು. ಹಾಗಾಗಿ ಶಾರ್ಟ್ ಫಾರ್ಮ್‌ನಲ್ಲಿ ಸು ಫ್ರಮ್ ಸೋ. ಬಹುತೇಕ ಹೊಸತಂಡವೇ ಸೇರಿ ಮಾಡಿರುವ ಈ ಚಿತ್ರಕ್ಕೆ ಬೆಳ್ತಂಗಡಿ, ವೇಣೂರು, ಕಕ್ಯಪದವು ಸುತ್ತಮುತ್ತ 50ದಿನಗಳ ಚಿತ್ರೀಕರಣ ನಡೆದಿದೆ. ನಿರ್ದೇಶನ ಮಾಡಿರುವ ಜೆಪಿ ತುಮಿನಾಡ, ಶನೀಲ್ ಗೌತಮ್, ಪ್ರಕಾಶ್ ಕೆ ತುಮಿನಾಡ, ದೀಪಕ್ ರೈ ಪಣಜೆ, ಮೈಮ್ ರಾಮದಾಸ್, ಅರ್ಜುನ್ ಕಜೆ ಮುಂತಾದವರು ನಟಿಸಿದ್ದಾರೆ. ಚಂದ್ರಶೇಖರ್ ಛಾಯಾಗ್ರಹಣ, ಸುಮೇಧ್ ಕೆ ಅವರ ಸಂಗೀತ ನಿರ್ದೇಶನ ಚಿತ್ರದ ಹೈಲೆಟ್ ಎಂದರೆ ತಪ್ಪಾಗಲಾರದು. ಹಿನ್ನಲೆ ಸಂಗೀತ ಸಂದೀಪ್ ತುಳಸಿದಾಸ್ ಅವರದ್ದು. ಶಶಿಧರ್ ಶೆಟ್ಟಿ ಬರೋಡಾ ಹಾಗೂ ರವಿ ರೈ ಕಳಸ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ಬಿಡುಗಡೆಯಾಗಿರುವ ಚಿತ್ರದ ಫಸ್ಟ್ ಲುಕ್ ಪೋಸ್ಟರ್, ಈಗಾಗಲೇ ಜನರ ಮನ ತಲುಪಿದೆ. ಚಿತ್ರ ಜುಲೈ 25 ಚಿತ್ರ ಬಿಡುಗಡೆಯಾಗುತ್ತಿದೆ. ಎಲ್ಲರೂ ನೋಡಿ, ಪ್ರೋತ್ಸಾಹ ನೀಡಿ” ಎಂದು ರಾಜ್ ಬಿ ಶೆಟ್ಟಿ ತಿಳಿಸಿದರು.
ಇದನ್ನೂ ಓದಿ: ಮಲ್ಟಿಪ್ಲೆಕ್ಸ್ ಸೇರಿದಂತೆ ಎಲ್ಲ ಚಿತ್ರ ಮಂದಿರಗಳ ಗರಿಷ್ಠ ದರ 200 ರೂ.: ರಾಜ್ಯ ಸರ್ಕಾರದಿಂದ ಆದೇಶ
ನಿರ್ದೇಶಕ ಜೆಪಿ ತುಮಿನಾಡ, “ಸಿನಿಮಾ ನಿರ್ದೇಶಕನಾಗಬೇಕೆಂದು ಚಿತ್ರರಂಗಕ್ಕೆ ಬಂದ ನಾನು, ನಟನಾದೆ. ಈಗ ಕೆಲವು ವರ್ಷಗಳ ನಂತರ ಮೊದಲ ಚಿತ್ರವನ್ನು ನಿರ್ದೇಶನ ಮಾಡಿದ್ದೇನೆ. ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯವಾದ. ಇನ್ನೂ ಇದೊಂದು ಕಾಲ್ಪನಿಕ ಕಥೆ. ನೋಡುಗರನ್ನು ನಗೆಗಡಲಿನಲ್ಲಿ ತೇಲಿಸುವ ಕಥೆಯೂ ಹೌದು. ಚಿತ್ರತಂಡದ ಸಹಕಾರದಿಂದ ಇದೇ ಜುಲೈ 25ಕ್ಕೆ ಒಂದೊಳ್ಳೆ ಚಿತ್ರ ನಿಮ್ಮ ಮುಂದೆ ಬರುತ್ತಿದೆ. ನೋಡಿ ಹಾರೈಸಿ” ಎಂದರು.
ನಿರ್ಮಾಪಕ ರವಿ ರೈ ಕಳಸ ಮಾತನಾಡಿ, ನಮ್ಮ ಚಿತ್ರಕ್ಕೆ ಎಲ್ಲರ ಬೆಂಬಲವಿರಲಿ ಎಂದರು. ಚಿತ್ರದಲ್ಲಿ ಆರು ಹಾಡುಗಳಿರುವುದಾಗಿ ಸಂಗೀತ ನಿರ್ದೇಶಕ ಸುಮೇಧ್ ತಿಳಿಸಿದರು. ಕಲಾವಿದರಾದ ದೀಪಕ್ ರೈ ಪಣಜೆ, ಶನೀಲ್ ಗೌತಮ್, ಸಂಧ್ಯಾ ಅರ್ಕೆರೆ, ಮೈಮ್ ರಾಮದಾಸ್ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ಪ್ರೊಡಕ್ಷನ್ ಡಿಸೈನರ್ ಸುಷ್ಮ ಹಾಗೂ ಸಂಕಲನಕಾರ ನವೀನ್ ಶೆಟ್ಟಿ, ಎಕ್ಸಕ್ಯೂಟಿವ್ ಪ್ರೊಡ್ಯೂಸರ್ ಬಾಲು ಕುಮಟಾ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.





