ಇನ್‌ಸ್ಟಾಗ್ರಾಮ್‌ನಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡಿದ್ದ ಕಿಡಿಗೇಡಿಗಳ ವಿರುದ್ಧ 7 ತಿಂಗಳ ಹಿಂದೆ ನಟಿ ರಮ್ಯಾ ದೂರು ನೀಡಿದ್ದರು. ಪ್ರಕರಣ ಸಂಬಂಧ ಇಂದು(ಮಾರ್ಚ್ 10) ಬೆಂಗಳೂರಿನ 46ನೇ ಸಿಸಿಹೆಚ್ ಕೋರ್ಟ್ ವಿಚಾರಣೆಗೆ ಹಾಜರಾಗಿದ್ದರು. ಈಗಾಗಲೇ ಪ್ರಕರಣದ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ವಿಚಾರಣೆಯಲ್ಲಿ ಇನ್ ಕ್ಯಾಮರಾ ಪ್ರೊಸಿಡಿಂಗ್ಸ್ ಕೂಡ ನಡೆದಿದೆ. ಜುಲೈ 28ರಂದು ಕೆಟ್ಟದಾಗಿ ಮೆಸೇಜ್ ಕಳಿಸಿದ್ದ 43 ಖಾತೆಗಳನ್ನು ಉಲ್ಲೇಖಿಸಿ 4 ಪುಟಗಳ ದೂರು ನೀಡಿದ್ದರು.
ಸೂಕ್ಷ್ಮ ಪ್ರಕರಣವಾಗಿರುವ ಕಾರಣ ಮುಚ್ಚಿದ ಕೊಠಡಿಯಲ್ಲಿ ವಿಚಾರಣೆ ನಡೆಯಿತು. ದರ್ಶನ್ ಅಭಿಮಾನಿಗಳು ತಮಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದಾರೆ ಎಂದು ನಟಿ ರಮ್ಯಾ ದೂರು ದಾಖಲಿಸಿದ್ದರು. ಅದರ ಬೆನ್ನಲ್ಲೇ 6 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. 50 ಇನ್‌ಸ್ಟಾ ಅಕೌಂಟ್‌ಗಳನ್ನು ಬ್ಲಾಕ್ ಮಾಡಿಸಿದ್ದರು. ಕೆಲ ಆರೋಪಿಗಳು ಪರಾರಿ ಆಗಿದ್ದರು. ಬಂಧಿತ ಆರೋಪಿಗಳು ಜಾಮೀನು ಪಡೆದಿದ್ದರು. ವಿಚಾರಣೆ ಬಳಿಕ ಮಾಧ್ಯಮಗಳ ಜೊತೆ ರಮ್ಯಾ ಮಾತನಾಡಿದ್ದರು.
‘ಇವತ್ತು ಸಾಕ್ಷಿ ನೀಡಬೇಕಿತ್ತು. ಕ್ರಾಸ್ ಎಕ್ಸಾಮಿನೇಷನ್ಗೆ ಮುಂದಿನ ದಿನಾಂಕದಲ್ಲಿ ಕರೆದಿದ್ದಾರೆ. ನನಗೆ ಈ ಕೇಸ್ ಮಾಡಬೇಕು ಅಂತ ಆಸೆ ಇಲ್ಲ. ಆರೋಪಿಗಳನ್ನು ನೋಡಿದರೆ ಬೇಜಾರಾಗುತ್ತದೆ. ಆದರೆ ನಾನು ಇದನ್ನು ನನಗೋಸ್ಕರ ಮಾಡುತ್ತಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಹೆಣ್ಮಕ್ಕಳಿಗೆ ತುಂಬಾ ಕಿರುಕುಳ ನೀಡುತ್ತಾರೆ. ಅದನ್ನು ನಿಲ್ಲಿಸಬೇಕು. ಹೆಣ್ಮಕ್ಕಳಿಗೆ ರಕ್ಷಣೆ ನೀಡಬೇಕು. ಆ ಕಾರಣಕ್ಕಾಗಿ ಕೇಸ್ ಹಾಕಿದ್ದೇನೆ’ ಎಂದು ರಮ್ಯಾ ಅವರು ಹೇಳಿದ್ದಾರೆ.





