ಮಗಳ ಪರೀಕ್ಷೆಯನ್ನು ಮುಂದಿಟ್ಟುಕೊಂಡು ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡಗೆ ನ್ಯಾಯಾಲಯ ಅರ್ಜಿ ವಜಾಗೊಳಿಸಿದೆ.
ಈ ಪ್ರಕರಣದಲ್ಲಿ ಪವಿತ್ರಾ ಗೌಡ ಅವರು ಎ1 ಆರೋಪಿ ಆಗಿದ್ದಾರೆ. ನಟ ದರ್ಶನ್ ಎ2 ಆರೋಪಿಯಾಗಿದ್ದಾರೆ. ಪವಿತ್ರಾ ಅವರ ಮಗಳು ಹತ್ತನೆ ತರಗತಿ ವ್ಯಾಸಂಗ ಮಾಡುತ್ತಿದ್ದು, ಪರೀಕ್ಷೆ ಸಮೀಪಿಸಿದೆ. ಹೀಗಾಗಿ, 25 ದಿನಗಳ ಮಧ್ಯಂತರ ಜಾಮೀನು ಕೋರಿ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಆದರೆ, ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ ಪವಿತ್ರಾಗೆ ಜಾಮೀನು ನೀಡಲು ನಿರಾಕರಿಸಿದೆ.
ಈ ಹಿಂದೆ ಪವಿತ್ರಾ ಅವರು ಮನೆ ಊಟಕ್ಕೆ ಕೋರ್ಟ್‌ಗೆ ಮನವಿ ಮಾಡಿದ್ದರು. ಕೆಲ ದಿನ ಅವಕಾಶ ನೀಡಿದ್ದ ಕೋರ್ಟ್ ನಂತರ ರದ್ದು ಮಾಡಿತು. ನಟ ದರ್ಶನ್ ಅವರ ಹುಟ್ಟುಹಬ್ಬದ ದಿನವೇ ಪವಿತ್ರಾ ಗೌಡ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.
ಇದೇ ಪ್ರಕರಣದಲ್ಲಿ 11ನೇ ಆರೋಪಿಯಾಗಿರುವ ನಾಗರಾಜ್ ಕೂಡ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ಪತ್ನಿಗೆ ಶಸ್ತ್ರಚಿಕಿತ್ಸೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ತನಗೆ ಜಾಮೀನು ಬೇಕು ಎಂದು ನಾಗರಾಜ್ ಮನವಿ ಮಾಡಿದ್ದಾರೆ. ಈ ಅರ್ಜಿಯ ವಿಚಾರಣೆಯನ್ನೂ ಕೂಡ ನ್ಯಾಯಾಲಯವು ಕೈಗೆತ್ತಿಕೊಳ್ಳಲಿದೆ ಎನ್ನಲಾಗಿದೆ.
ಪ್ರಕರಣದ ಹಿನ್ನೆಲೆ: ಚಿತ್ರದುರ್ಗದ ರೇಣುಕಾಸ್ವಾಮಿ ಎಂಬುವವರು ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದರೆಂಬ ಕಾರಣಕ್ಕಾಗಿ, ನಟ ದರ್ಶನ್ ಹಾಗೂ ಅವರ ಜೊತೆಗಾರರು ಅಪಹರಿಸಿ ಬೆಂಗಳೂರು ನಗರದ ಪಟ್ಟಣಗೆರೆಯಲ್ಲಿನ ಶೆಡ್‌ನಲ್ಲಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದರು.





