- ‘ಟೋಬಿ ಚಿತ್ರ ಚೆನ್ನಾಗಿಲ್ಲ’ ಎಂದ ಯುವತಿಗೆ ಬೆದರಿಕೆ ಹಾಕಿದ್ದ ಯುವಕನ ವಿಡಿಯೋ ವೈರಲ್ ಹಿನ್ನೆಲೆ
- ಸಿನಿಮಾದ ಮೂಲ ಕಥೆಗಾರ ದಯಾನಂದ್ ಟಿ ಕೆ ಫೇಸ್‌ಬುಕ್ ಪೋಸ್ಟ್
ಶುಕ್ರವಾರ ಬಿಡುಗಡೆಯಾಗಿದ್ದ ರಾಜ್ ಬಿ ಶೆಟ್ಟಿ ಮುಖ್ಯಪಾತ್ರಧಾರಿಯಾಗಿ ನಟಿಸಿದ್ದ ‘ಟೋಬಿ’ ಸಿನಿಮಾ ನೋಡಿದ ಬಳಿಕ ‘ಚೆನ್ನಾಗಿಲ್ಲ’ ಎಂದ ಮೈಸೂರಿನ ಯುವತಿಯೋರ್ವಳಿಗೆ ಯುವಕನೋರ್ವ ಬೆದರಿಕೆ ಹಾಕಿರುವ ವಿಡಿಯೋ ವೈರಲ್ ಆಗಿತ್ತು.
ಈ ಹಿನ್ನೆಲೆಯಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟೋಬಿ ಸಿನಿಮಾದ ಮೂಲ ಕಥೆಗಾರ ದಯಾನಂದ್ ಟಿ ಕೆ, ‘ಭಿನ್ನಾಭಿಪ್ರಾಯವನ್ನು ಗೌರವಿಸುವುದು ಆರೋಗ್ಯವಂತ ಸಮಾಜದ ಲಕ್ಷಣ’ ಎಂದು ಘಟನೆಯನ್ನು ಖಂಡಿಸಿದ್ದಾರೆ.

ಮೈಸೂರಿನ ಸಂಗಂ ಥಿಯೇಟರ್ ಬಳಿ ನಡೆದ ಘಟನೆಯ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿರುವ ದಯಾನಂದ್ ಟಿ ಕೆ, ‘ಭಿನ್ನಾಭಿಪ್ರಾಯವನ್ನು ಗೌರವಿಸುವುದು ಆರೋಗ್ಯವಂತ ಸಮಾಜದ ಲಕ್ಷಣ. ಚಿತ್ರ ಚೆನ್ನಾಗಿದೆ ಎಂದವರ ಅಭಿಪ್ರಾಯವನ್ನು ಗೌರವಿಸಿದಷ್ಟೇ, ಚೆನ್ನಾಗಿಲ್ಲ ಎಂದವರ ಅಭಿಪ್ರಾಯವನ್ನೂ ನಾವು ಗೌರವಿಸುತ್ತೇವೆ. ಟೋಬಿ ಚಿತ್ರತಂಡದ ಪರವಾಗಿ ಈ ವ್ಯಕ್ತಿಯ ಅಸಭ್ಯ ಕೃತ್ಯವನ್ನು ನಾವು ಬಲವಾಗಿ ಖಂಡಿಸುತ್ತೇವೆ’ ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ‘ಟೋಬಿ ಚಿತ್ರ ಚೆನ್ನಾಗಿಲ್ಲ’ ಎಂದ ಯುವತಿಗೆ ಬೆದರಿಕೆ ಹಾಕಿದ ಯುವಕ : ವಿಡಿಯೋ ವೈರಲ್
ಮೈಸೂರಿನ ಸಂಗಂ ಥಿಯೇಟರ್ ಎದುರು ‘ಟೋಬಿ ಚೆನ್ನಾಗಿಲ್ಲ’ ಎಂದು ಡಿಜಿಟಲ್ ಮಾಧ್ಯಮವೊಂದಕ್ಕೆ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದ ಯುವತಿಯೋರ್ವಳಿಗೆ ಸಿನಿಮಾ ವೀಕ್ಷಿಸಲು ಬಂದಿದ್ದ ಯುವಕನೋರ್ವ ಬೆದರಿಕೆ ಹಾಕಿದ್ದನು. ಈಗ ಇದರ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು.
‘ಒಂದು ವೇಳೆ ಯುವತಿಯೇ ಮುಂದೆ ಬಂದು ದೂರು ನೀಡಿದಲ್ಲಿ ಯುವಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ’ ಎಂದು ಮೈಸೂರು ನಗರ ಪೊಲೀಸ್ ಕಮಿಷನರ್ ರಮೇಶ್ ಬಾನೋತ್ ಈ ದಿನ.ಕಾಮ್ ಜೊತೆಗೆ ಮಾತನಾಡುತ್ತಾ ತಿಳಿಸಿದ್ದರು.





