ರಸರೆಕ್ಷನ್: ಇಂದ್ರಿಯಗಳ ಮೂಲಕ ಒಂದು ಶತಮಾನದ ಸಿನೆಮಾ ಪಯಣ ಬಿಡಿಸಿಡುವ ಚಿತ್ರ

Date:

'ರಸರೆಕ್ಷನ್' ಸಿನಿಮಾ ಅಂತಿಮವಾಗಿ ಹೇಳುವುದೇನೆಂದರೆ ಬದುಕು ಎಷ್ಟೇ ದೀರ್ಘವಾಗಿದ್ದರೂ, ಕನಸುಗಳಿಲ್ಲದಿದ್ದರೆ ಅದು ಅರ್ಥಹೀನ. ಈ ಚಿತ್ರವು ನಮ್ಮ ಮುಂದೆ ಒಂದು ಕಠಿಣ ಆಯ್ಕೆಯನ್ನು ಇಡುತ್ತದೆ- ಭಾವನೆಗಳಿಲ್ಲದ ಶೂನ್ಯ ಅಮರತ್ವ ಬೇಕೇ ಅಥವಾ ಕನಸು ಕಂಡು ಸುಟ್ಟು ಹೋಗುವ ಅರ್ಥಪೂರ್ಣ ಸಾವು ಬೇಕೇ?

‘ರಸರೆಕ್ಷನ್’ ಇತ್ತೀಚೆಗೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ(BIFFES) ಪ್ರದರ್ಶನವಾದ ಚಿತ್ರ. ಚೀನಾದ ಮೂಲದ ನಿರ್ದೇಶಕ ಬಿ ಗಾನ್ ನಿರ್ದೇಶನದ ಮೂರನೇ ಚಿತ್ರ.

ಬಿ ಗಾನ್ ಅವರದು ನಿಜಕ್ಕೂ ಒಂದು ಅದ್ಭುತ ಪಯಣ. ಚೀನಾದ ಅತ್ಯಂತ ಹಿಂದುಳಿದ ಪ್ರಾಂತ್ಯಗಳಲ್ಲಿ ಒಂದಾದ ಗೈಝೌನ ಕೈಲಿ (Kaili) ಎಂಬ ಪುಟ್ಟ ಪಟ್ಟಣದಿಂದ ಬಂದ ಈ ಯುವಕನಿಗೆ ಯಾವುದೇ ಸಿನೆಮಾ ಹಿನ್ನೆಲೆ ಇರಲಿಲ್ಲ. ಆದರೆ ಇಂದು ಅವರು ಜಾಗತಿಕ ಸಿನೆಮಾ ರಂಗವೇ ಬೆರಗಾಗುವಂತೆ ಬೆಳೆದು ನಿಂತಿದ್ದಾರೆ. ಇವರ ಚಿತ್ರಗಳ ವಿಶೇಷವೆಂದರೆ, ಅವು ಸ್ಥಳೀಯ ಮಣ್ಣಿನ ಸೊಗಡನ್ನು ಉಳಿಸಿಕೊಳ್ಳುತ್ತಲೇ ವಿಶ್ವದಾದ್ಯಂತ ಕಾವ್ಯಾತ್ಮಕ ಭಾಷೆಯಾಗಿ ಆಪ್ತವಾಗುತ್ತವೆ.

ಓದಿನಲ್ಲಿ ಅಷ್ಟೇನೂ ಮುಂದಿರದ ಬಿ ಗಾನ್ ಅವರಿಗೆ ಕವಿತೆಗಳನ್ನು ಬರೆಯುವ ಹುಚ್ಚಿತ್ತು. ಒಂಟಿತನವೂ ಜೊತೆಯಾಗಿತ್ತು. ಈ ಒಂಟಿತನ ಮತ್ತು ಕಾವ್ಯದ ಹವ್ಯಾಸವೇ ಅವರ ಸಿನಿಮಾಗಳಲ್ಲಿ ನಮಗೆ ಕಾಣುವ ಆ ‘ಕಾವ್ಯಾತ್ಮಕ ಶೈಲಿ’ಗೆ ಅಡಿಪಾಯ ಹಾಕಿತು. ಆರಂಭದಲ್ಲಿ ಟೆಲಿವಿಷನ್ ಎಡಿಟಿಂಗ್ ಕಲಿತ ಅವರು, ಕಾಲೇಜಿನಲ್ಲಿ ಮಾಧ್ಯಮ ಅಧ್ಯಯನ ಮಾಡುವಾಗ ಮದುವೆ ಸಮಾರಂಭಗಳ ವಿಡಿಯೋ ಎಡಿಟಿಂಗ್ ಮಾಡುತ್ತಿದ್ದರು. ಆದರೆ ಅವರಿಗೆ ಸಾಮಾನ್ಯ ಕಮರ್ಷಿಯಲ್ ಸಿನಿಮಾಗಳಿಗಿಂತ ಭಿನ್ನವಾದದ್ದನ್ನು ಸೃಷ್ಟಿಸುವ ಹಸಿವಿತ್ತು. ರಷ್ಯಾದ ಖ್ಯಾತ ನಿರ್ದೇಶಕ ಆಂಡ್ರೇ ತಾರ್ಕೋವ್‌ಸ್ಕಿ(Andrei Tarkovsky) ಅವರ ಚಿತ್ರಗಳನ್ನು ನೋಡಿದ ಮೇಲೆ ಅವರಿಗೆ ಸಿನಿಮಾ ಎಂದರೆ ಕೇವಲ ಕಥೆ ಹೇಳುವುದಲ್ಲ, ಅದು ಕಾಲ ಮತ್ತು ನೆನಪುಗಳ ಪದರಗಳನ್ನು ಅನ್ವೇಷಿಸುವ ಒಂದು ಮಾಧ್ಯಮ ಎಂದು ಅರ್ಥವಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕೈಲಿ ಬ್ಲೂಸ್ (Kaili Blues) ಮತ್ತು ಲಾಂಗ್ ಡೇಯ್ಸ್ ಜರ್ನಿ ಇಂಟು ನೈಟ್ (Long Day’s Journey Into Night) ಚಿತ್ರಗಳ ನಂತರ, ‘ರಸರೆಕ್ಷನ್’ (Resurrection) ಬಿ ಗಾನ್ ಅವರ ವೃತ್ತಿಜೀವನದ ಮೂರನೇ ಹಾಗೂ ಅತ್ಯಂತ ಮಹತ್ವಾಕಾಂಕ್ಷೆಯ ಮತ್ತು ಭಾರೀ ಬಜೆಟ್‌ನ ಚಿತ್ರವಾಗಿದೆ. ಇದು ಕೇವಲ ಒಂದು ಸಿನಿಮಾ ಅಲ್ಲ ತಾಂತ್ರಿಕ ಮಿತಿಗಳನ್ನು ಮೀರಿ ಅವರು ಹೊಸದೊಂದು ಸಿನೆಮಾ ಭಾಷೆಯನ್ನು ಸೃಷ್ಟಿಸುತ್ತಿದ್ದಾರೆ. ಈ ಸಿನಿಮಾವು ಒಂದು ಕಾಲ್ಪನಿಕ ಭವಿಷ್ಯತ್ತಿನಲ್ಲಿ(Futuristic setting) ನಡೆಯುತ್ತದೆ. ಆ ಜಗತ್ತಿನಲ್ಲಿ ಮನುಷ್ಯರು ಹೆಚ್ಚು ಕಾಲ ಬದುಕುವ ಆಸೆಯಿಂದ ಕನಸು ಕಾಣುವ ಶಕ್ತಿಯನ್ನೇ ತ್ಯಾಗ ಮಾಡಿರುತ್ತಾರೆ. ಆದರೆ ಕೆಲವೇ ಕೆಲವು ವ್ಯಕ್ತಿಗಳು ಮಾತ್ರ ಈ ನಿಯಮವನ್ನು ಮೀರಿ ಗುಟ್ಟಾಗಿ ಕನಸು ಕಾಣುತ್ತಿರುತ್ತಾರೆ. ಅವರನ್ನು ‘ಡೆಲಿರಿಯಂಟ್ಸ್’ (Deliriants) ಎಂದು ಕರೆಯಲಾಗುತ್ತದೆ. ಚಿತ್ರದ ಮುಖ್ಯ ಕಥೆ ಒಬ್ಬ ಬಂಡಾಯಗಾರ ಕನಸುಗಾರನ (Rebel Dreamer) ಸುತ್ತ ಸುತ್ತುತ್ತದೆ. ಈ ಪಾತ್ರದಲ್ಲಿ ಜಾಕ್ಸನ್ ಯೀ (Jackson Yee) ನಟಿಸಿದ್ದಾರೆ. ಈತ ಸಾಯುವ ಮೊದಲು ತನ್ನ ಮನಸ್ಸಿನಲ್ಲೇ ಒಂದು ಶತಮಾನದಷ್ಟು ಸುದೀರ್ಘವಾದ ಕಾಲವನ್ನು ಕ್ರಮಿಸುತ್ತಾ, ನಾಲ್ಕು ವಿಭಿನ್ನ ಕನಸಿನ ಲೋಕಗಳಲ್ಲಿ ಸಂಚರಿಸುತ್ತಾನೆ. ಈ ನಾಲ್ಕು ಕನಸಿನ ಲೋಕಗಳು ಮನುಷ್ಯನ ಅಧಃಪತನದ ಹಿಂಸೆ, ಆತ್ಮದ ಅಪರಾಧ ಪ್ರಜ್ಞೆ, ಬದುಕಿನ ವಂಚನೆ ಮತ್ತು ಅಂತಿಮವಾಗಿ ಮುಕ್ತಿಯನ್ನು ನೀಡುವ ಪ್ರೀತಿ ಹಾಗೂ ತ್ಯಾಗವನ್ನು ಚಿತ್ರದ ವಿವಿಧ ಮಜಲುಗಳಲ್ಲಿ ಅನಾವರಣಗೊಳಿಸುತ್ತವೆ.

狂野时代 Pittsburgh

ಬಿ ಗನ್ ಸೃಷ್ಟಿಸಿರುವ ಈ ವಿಚಿತ್ರ ಜಗತ್ತಿನಲ್ಲಿ ‘ದ ಬಿಗ್ ಅದರ್’ ಶೂ ಕಿ (Shu Qi) ಅಭಿನಯದ ಪಾತ್ರ- ಅದು ಕನಸುಗಳಿಲ್ಲದ, ಅಮರವಾದ ವಾಸ್ತವವನ್ನು ಕಾವಲು ಕಾಯುವ ಒಂದು ನಿಯಂತ್ರಕ ಶಕ್ತಿ. ಈ ನಿಷ್ಕಪಟ ಜಗತ್ತಿನಲ್ಲಿ ಗೊಂದಲ ಸೃಷ್ಟಿಸುವ ‘ಫ್ಯಾಂಟಸ್ಮರ್ಸ್’ ಅಥವಾ ಕನಸುಗಾರರನ್ನು ಪತ್ತೆಹಚ್ಚಿ ನಿರ್ಮೂಲನೆ ಮಾಡುವುದೇ ಇದರ ಮುಖ್ಯ ಕೆಲಸ. ಒಬ್ಬ ಕನಸುಗಾರನ ಅಸ್ತವ್ಯಸ್ತ ಹಾಗೂ ಮಿತಿಯಿಲ್ಲದ ಕಾಲ್ಪನಿಕ ಶಕ್ತಿಗೆ ವ್ಯತಿರಿಕ್ತವಾಗಿ, ಈ ಪಾತ್ರವು ಭಾವನೆಗಳಿಲ್ಲದ ಶಿಸ್ತಿನ ವಾಸ್ತವವನ್ನು ಪ್ರತಿನಿಧಿಸುತ್ತದೆ. ಸಿನೆಮಾದ ಉದ್ದಕ್ಕೂ ಭ್ರಮೆ ಮತ್ತು ನೈಜತೆಯನ್ನು ಬೇರ್ಪಡಿಸುವ ಒಬ್ಬ ನಿಷ್ಠುರ ನಿರೂಪಕಿಯಂತೆ ಇದು ಕೆಲಸ ಮಾಡುತ್ತದೆ. ಡೆಲಿರಿಯಂಟ್‌ನ ಇಂದ್ರಿಯಗಳ ಗ್ರಹಿಕೆಯನ್ನು ಪದರ ಪದರವಾಗಿ ಕುಂದಿಸುತ್ತಾ ಹೋಗುವ ಈ ಶಕ್ತಿ, ಅಂತಿಮವಾಗಿ ಅವನನ್ನು ಮರಳಿ ಕನಸುಗಳಿಲ್ಲದ ವಾಸ್ತವಕ್ಕೆ ಎಳೆತರಲು ಅಥವಾ ಅವನ ಅಸ್ತಿತ್ವವನ್ನೇ ಅಳಿಸಿಹಾಕಲು ನಿರಂತರವಾಗಿ ಯತ್ನಿಸುತ್ತದೆ.

ಇದನ್ನು ಓದಿದ್ದೀರಾ?: ಒನ್ ಬ್ಯಾಟಲ್ ಆಫ್ಟರ್ ಅನದರ್ | ಸಾಧಾರಣ ಚಿತ್ರಕ್ಕೆ ಆಸ್ಕರ್ ಚಿನ್ನದ ಚೌಕಟ್ಟು!

ಬಿ ಗನ್ ಅವರು ಈ ಚಿತ್ರದಲ್ಲಿ ಚಾನ್ ಬೌದ್ಧ ಧರ್ಮದ ಷಡ್ ಇಂದ್ರಿಯಗಳ (Six Roots) ಪರಿಕಲ್ಪನೆಯು ಸಿನೆಮಾದ ಇತಿಹಾಸದ ವಿಕಾಸದ ಜೊತೆಗೆ ಅತ್ಯಂತ ಸಂಕೀರ್ಣವಾಗಿ ಹೆಣೆಯಲ್ಪಟ್ಟಿದೆ. ದೃಶ್ಯ (Sight), ಶ್ರವಣ (Hearing), ವಾಸನೆ (Smell), ರುಚಿ (Taste), ಸ್ಪರ್ಶ (Touch) ಮತ್ತು ಮನಸ್ಸು(Mind), ಈ ಆರು ಇಂದ್ರಿಯಗಳನ್ನು ಆಧರಿಸಿ ಕಥೆಯನ್ನು ನಿರೂಪಿಸಿದ್ದಾರೆ. ಇಲ್ಲಿ ಫಿಲ್ಮ್ ನಾಯ್ರ್‌ನ (Film Noir) ನಿಗೂಢತೆ, ಬೌದ್ಧ ನೀತಿಕಥೆಗಳ ದಾರ್ಶನಿಕತೆ (Buddhist Fable) ಮತ್ತು ನವವಾಸ್ತವವಾದದ (Neorealism) ಹಸಿ ಸತ್ಯಗಳು ಮೇಳೈಸಿವೆ. ನಾಯಕ ‘ಡೆಲಿರಿಯಂಟ್’ ಕಾಣುವ ಕನಸುಗಳು 1900 ರಿಂದ 2000ನೇ ಇಸವಿಯವರೆಗಿನ ಕಾಲಘಟ್ಟದಲ್ಲಿ ಹರಡಿಕೊಂಡಿದ್ದು, ನಾವಿಲ್ಲಿ ಒಂದು ಶತಮಾನದ ವಿವಿಧ ಸಿನೆಮಾ ದೃಷ್ಟಿಕೋನಗಳ ವಿಕಾಸವನ್ನು ಗಮನಿಸಬಹುದು.

ದೃಶ್ಯ ಅಧ್ಯಾಯ(Sight): ಇದು ಚಲನಚಿತ್ರದ ಆರಂಭಿಕ ದಿನಗಳ ಮೂಕಿ ಚಿತ್ರಗಳ (Silent Cinema) ಶೈಲಿಗೆ ಹತ್ತಿರವಾಗಿದೆ. ಇಲ್ಲಿ ಕೇವಲ ಬೆಳಕು ಮತ್ತು ನೆರಳಿನ ಆಟ ಮುಖ್ಯ. ನೋಡುವುದು ಎಂದರೆ ಕೇವಲ ಭೌತಿಕವಾಗಿ ನೋಡುವುದಲ್ಲ, ಅದು ನೆನಪಿನ ಆಳದಲ್ಲಿರುವ ಚಿತ್ರಗಳನ್ನು ಗ್ರಹಿಸುವುದು. ಚಿತ್ರದ ಮೊದಲ ಇಪ್ಪತ್ತು ನಿಮಿಷಗಳವರೆಗೆ ಪಾತ್ರಗಳು ಒಂದೇ ಒಂದು ಪದವನ್ನೂ ಮಾತನಾಡುವುದಿಲ್ಲ. ಸಿನಿಮಾ ಆರಂಭವಾಗುವುದೇ ಹಳೆಯ ಕಾಲದ ಮೂಕಿ ಚಿತ್ರದ ಮಾದರಿಯಲ್ಲಿ. ಕಥೆಯ ವಿವರಣೆಗಳೆಲ್ಲವೂ ಟೆಕ್ಸ್ಟ್ ಕಾರ್ಡ್‌ಗಳ ಮೂಲಕವೇ ಮೂಡಿಬರುತ್ತವೆ.

ಶ್ರವಣ(Hearing): ಶಬ್ದದ ಮಹತ್ವ ಮತ್ತು ಜಾಗೃತಿ, ಈ ಅಧ್ಯಾಯವು ಸಿನೆಮಾ ಇತಿಹಾಸದ ಟಾಕಿ (Talkies) ಯುಗವನ್ನು ನೆನಪಿಸುತ್ತದೆ. ಕೇವಲ ಕಣ್ಣಿಗೆ ಕಾಣುವ ದೃಶ್ಯಗಳು ಶಬ್ದದ ಲೋಕಕ್ಕೆ ತೆರೆದುಕೊಂಡಾಗ ಸಿನೆಮಾ ಹೇಗೆ ಬದಲಾಯಿತು. ಇಲ್ಲಿ ಶಬ್ದವು ಬರಿ ಮಾತುಗಳಲ್ಲ, ಅದು ದೃಶ್ಯದಷ್ಟೇ ಪ್ರಬಲವಾದ ಅನುಭವ. ಇಲ್ಲಿ ಬರುವ ಕಿವಿಯನ್ನು ಇರಿಯುವ (Stabbing) ದೃಶ್ಯವು ಬರಿ ಹಿಂಸೆಯಲ್ಲ. ಅದು ಹೊರಗಿನ ಪ್ರಪಂಚದ ಗದ್ದಲ ಮತ್ತು ಅಧಿಕಾರದ ಆಜ್ಞೆಗಳನ್ನು ನಿಲ್ಲಿಸಿ, ತನ್ನೊಳಗಿನ ನಿಜವಾದ ನೆನಪುಗಳನ್ನು ಎದುರಿಸುವ ಒಂದು ದಾರಿ. ಈ ದೃಶ್ಯವು ಪ್ರೇಕ್ಷಕರನ್ನು ಕೇವಲ ನೋಡುಗರನ್ನಾಗಿ ಉಳಿಸದೆ, ಸಿನಿಮಾದ ನೋವನ್ನು ಅವರೂ ಕೂಡ ದೈಹಿಕವಾಗಿ ಅನುಭವಿಸುವಂತೆ ಮಾಡುತ್ತದೆ.

ವಾಸನೆ(Smell): ಸಿನಿಮಾ ಎಂಬುದು ಕೇವಲ ದೃಶ್ಯ ಮಾಧ್ಯಮ ಎಂಬ ಕಲ್ಪನೆಯನ್ನು ಮೀರಿ, ಬಿ ಗನ್ ಅದನ್ನು ಇಂದ್ರಿಯಗಳ ಅನುಭವವನ್ನಾಗಿ ಪರಿವರ್ತಿಸುತ್ತಾರೆ. ವಿಜ್ಞಾನದ ಪ್ರಕಾರ, ವಾಸನೆಯು ನಮ್ಮ ಮೆದುಳಿನ ನೆನಪಿನ ಕೇಂದ್ರಗಳಿಗೆ ನೇರವಾಗಿ ಸಂಬಂಧಿಸಿದೆ. ಬಿ ಗನ್ ಈ ಅಧ್ಯಾಯದಲ್ಲಿ ಇದನ್ನೇ ಕಲಾತ್ಮಕವಾಗಿ ಬಳಸಿಕೊಂಡಿದ್ದಾರೆ. ಇಲ್ಲಿ ವಾಸನೆಯು ಕೇವಲ ಒಂದು ಮೋಸದ ಟ್ರಿಕ್ ಆಗಿ (ಇಸ್ಪೀಟ್ ಕಾರ್ಡ್‌ಗಳನ್ನು ಗುರುತಿಸುವುದು) ಆರಂಭವಾದರೂ, ಅಂತ್ಯದಲ್ಲಿ ಅದು ಕಳೆದುಹೋದ ಮಗಳ ಕೊನೆಯ ನೆನಪಿನ ಬೂದಿಯ ವಾಸನೆಯಾಗಿ ಬದಲಾಗುತ್ತದೆ.

Resurrection 1

ರುಚಿ(Taste): ಕಹಿ (Bitterness) ಎನ್ನುವುದು ಕೇವಲ ನಾಲಿಗೆಗೆ ಸಂಬಂಧಿಸಿದ ರುಚಿಯಲ್ಲ, ಅದು ಮನುಷ್ಯನ ಒಳಗಿರುವ ದುಃಖ ಮತ್ತು ಅಪರಾಧ ಪ್ರಜ್ಞೆಯ (Guilt) ಸಂಕೇತವಾಗಿದೆ. ಜ್ಞಾನೋದಯದ ಹಾದಿಯಲ್ಲಿ ಮನುಷ್ಯ ತನ್ನ ತಪ್ಪುಗಳನ್ನು ಒಪ್ಪಿಕೊಳ್ಳುವುದು ಮತ್ತು ಪಶ್ಚಾತ್ತಾಪ ಪಡುವುದು ಎಷ್ಟು ಮುಖ್ಯ ಎಂಬುದನ್ನು ಈ ಅಧ್ಯಾಯ ತೋರಿಸುತ್ತದೆ. ಇಲ್ಲಿ ರುಚಿ ಎಂದರೆ ಆಹಾರ ಸವಿಯುವುದಲ್ಲ, ಬದಲಾಗಿ ಬದುಕಿನ ಕಹಿ ಸತ್ಯಗಳನ್ನು ಜೀರ್ಣಿಸಿಕೊಳ್ಳುವ ಕ್ರಿಯೆ. ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ. ದೈವತ್ವ ಎಂಬುದು ಕಲ್ಲಿನ ವಿಗ್ರಹಗಳಲ್ಲಿಲ್ಲ, ಬದಲಾಗಿ ಮನುಷ್ಯನು ತನ್ನ ಒಳಗಿನ ಸತ್ಯವನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವುದರಲ್ಲಿದೆ.

ಸ್ಪರ್ಶ(Touch): ಈ ಅಧ್ಯಾಯವು ಸಿನೆಮಾದ ತಾಂತ್ರಿಕ ಶಕ್ತಿ ಮತ್ತು ಸ್ಪರ್ಶದ ಅನುಭವವನ್ನು ನೀಡುವಂತೆ ವಿನ್ಯಾಸಗೊಂಡಿದೆ. ಇದು ಆಧುನಿಕ ಸಿನೆಮಾದ ಕಾಲಘಟ್ಟವನ್ನು ಪ್ರತಿನಿಧಿಸುತ್ತದೆ. 1999ರ ಹೊಸ ವರ್ಷದ ಮುನ್ನಾದಿನ, ಒಂದು ಹಳೆಯ ಬಂದರು ಪ್ರದೇಶದಲ್ಲಿ ಈ ಕಥೆ ನಡೆಯುತ್ತದೆ. ನಾಯಕ ಇಲ್ಲಿ ಹೊಂಬಣ್ಣದ ಕೂದಲಿನ ರೌಡಿಯಾಗಿ ಕಾಣಿಸಿಕೊಳ್ಳುತ್ತಾನೆ. ಅವನಿಗೆ ತಾಯ್ ಶಿಯೋಮಿ ಎಂಬ ಗಾಯಕಿ ಮತ್ತು ಗ್ಯಾಂಗ್‌ಸ್ಟರ್ ಹುಡುಗಿಯ ಪರಿಚಯವಾಗುತ್ತದೆ (Li Gengxi ನಟಿಸಿದ್ದಾರೆ). ಇಲ್ಲಿ ದೈಹಿಕ ಅಸ್ತಿತ್ವ ಮತ್ತು ಸ್ಪರ್ಶಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಈ ವಿಭಾಗವು ಸುಮಾರು 30 ನಿಮಿಷಗಳ ಸುದೀರ್ಘವಾದ ಸಿಂಗಲ್ ಟೇಕ್ (Long take) ದೃಶ್ಯವನ್ನು ಹೊಂದಿದೆ.

ಮನಸ್ಸು(Mind): ಅನುಭವಗಳ ಸಂಗಮ ಬೌದ್ಧ ಧರ್ಮದ ಪ್ರಕಾರ ಮನಸ್ಸು ಆರನೇ ಇಂದ್ರಿಯ. ಇದು ಉಳಿದ ಐದೂ ಇಂದ್ರಿಯಗಳ ಅನುಭವಗಳನ್ನು (ದೃಶ್ಯ, ಶಬ್ದ, ವಾಸನೆ, ರುಚಿ, ಸ್ಪರ್ಶ) ಒಟ್ಟುಗೂಡಿಸುವ ಶಕ್ತಿ. ಡೆಲಿರಿಯಂಟ್‌ನ ನೂರು ವರ್ಷಗಳ ಈ ಸುದೀರ್ಘ ಪಯಣವು ಅಂತಿಮವಾಗಿ ಅವನ ಪ್ರಜ್ಞೆಯಲ್ಲಿ ಬಂದು ನಿಲ್ಲುತ್ತದೆ. ಇಲ್ಲಿ ಅವನ ಮನಸ್ಸು ಕೇವಲ ನೆನಪುಗಳ ಸಂಗ್ರಹವಲ್ಲ, ಅದು ಸರಿಯಾದ ಹಾದಿಯನ್ನು ಆರಿಸುವ ವಿವೇಚನೆಯ ಕೇಂದ್ರವೂ ಹೌದು. ಭಾವನೆಗಳಿಲ್ಲದ ಶೂನ್ಯ ಅಮರತ್ವಕಿಂತ, ಕನಸುಗಳಲ್ಲಿ ತಾನು ಅನುಭವಿಸಿದ ನೋವು ಮತ್ತು ಪ್ರೀತಿಯೇ ನಿಜವಾದ ಬದುಕು ಎಂದು ಅವನ ಮನಸ್ಸು ನಿರ್ಧರಿಸುತ್ತದೆ. ಹೀಗೆ, ವಾಸ್ತವದ ಬದುಕಿಗಿಂತ ಕನಸುಗಳಿಗಾಗಿ ಸಾಯುವ ‘ಪುನರುತ್ಥಾನ’ದ (Resurrection) ಹಾದಿಯನ್ನು ಅವನು ಆರಿಸಿಕೊಳ್ಳುತ್ತಾನೆ.

ಇದನ್ನು ಓದಿದ್ದೀರಾ?: ಅಕಾಡೆಮಿ ಪ್ರಶಸ್ತಿಗಳು: ಆಸ್ಕರ್‌ಗಳ ಉದ್ಭವ ಮತ್ತು ಪ್ರಭಾವ

ಇಲ್ಲಿ ಕಥೆಗಿಂತ ಹೆಚ್ಚಾಗಿ ಸುದೀರ್ಘ ದೃಶ್ಯಗಳು ಮತ್ತು ಕನಸಿನ ಲೋಕಗಳೇ ಪ್ರಾಮುಖ್ಯತೆ ಪಡೆಯುತ್ತವೆ. ಈ ಸಿನಿಮಾ ಅಂತಿಮವಾಗಿ ಹೇಳುವುದೇನೆಂದರೆ ಬದುಕು ಎಷ್ಟೇ ದೀರ್ಘವಾಗಿದ್ದರೂ, ಕನಸುಗಳಿಲ್ಲದಿದ್ದರೆ ಅದು ಅರ್ಥಹೀನ. ನೋವು, ಪ್ರೀತಿ, ಪಶ್ಚಾತ್ತಾಪ ಮತ್ತು ಹಂಬಲಗಳೇ ಮನುಷ್ಯನನ್ನು ನಿಜವಾಗಿ ಜೀವಂತವಾಗಿರಿಸುತ್ತವೆ. ಸಿನೆಮಾ ಎನ್ನುವುದು ಒಂದು ಮಧುರ ಕನಸಿನಂತೆ ಮನುಷ್ಯನ ಭಾವನೆಗಳನ್ನು ಕಾಲಾತೀತವಾಗಿ ಉಳಿಸುತ್ತದೆ. ಈ ಚಿತ್ರವು ನಮ್ಮ ಮುಂದೆ ಒಂದು ಕಠಿಣ ಆಯ್ಕೆಯನ್ನು ಇಡುತ್ತದೆ- ಭಾವನೆಗಳಿಲ್ಲದ ಶೂನ್ಯ ಅಮರತ್ವ ಬೇಕೇ ಅಥವಾ ಕನಸು ಕಂಡು ಸುಟ್ಟು ಹೋಗುವ ಅರ್ಥಪೂರ್ಣ ಸಾವು ಬೇಕೇ?

Babu Eshwar Prasad
ಬಾಬು ಈಶ್ವರ್ ಪ್ರಸಾದ್
+ posts

ಲೇಖಕರು, ಚಿತ್ರನಿರ್ದೇಶಕರು, ದೃಶ್ಯ ಕಲಾವಿದರು. ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ BFA ಹಾಗೂ ಮಹಾರಾಜಾ ಸಾಯೋಜಿರಾವ್ ವಿಶ್ವವಿದ್ಯಾಲಯ, ವಡೋದರದ ಫೈನ್ ಆರ್ಟ್ಸ್ ಫ್ಯಾಕಲ್ಟಿಯಿಂದ MA ಪದವಿಯನ್ನು ಪಡೆದಿರುತ್ತಾರೆ. 1993ರಿಂದ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಚಿತ್ರಕಲಾ ಪ್ರದರ್ಶನಗಳನ್ನು ಮಾಡಿರುತ್ತಾರೆ. ಚಿತ್ರಕಲೆಯ ಹೊರತಾಗಿಯೂ, ಇವರಿಗೆ ಶಿಲ್ಪ, ಧ್ವನಿ ವಿನ್ಯಾಸ, ಫೋಟೋಗ್ರಫಿ ಮತ್ತು ವಿಶೇಷವಾಗಿ ವೀಡಿಯೊ ಮತ್ತು ಚಲನಚಿತ್ರಗಳಂತಹ ಇತರ ಮಾಧ್ಯಮಗಳನ್ನು ಅನ್ವೇಷಿಸುವಲ್ಲಿ ಆಳವಾದ ಆಸಕ್ತಿ ಇದೆ. ಇವರು 'ಗಾಳಿಬೀಜ' ಹಾಗೂ 'ಹರಿವ ನದಿಗೆ ಮೈಯೆಲ್ಲಾ ಕಾಲು' ಎಂಬ ಎರಡು ಚಿತ್ರಗಳನ್ನು ಹಾಗೂ ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿರುತ್ತಾರೆ.

ಪೋಸ್ಟ್ ಹಂಚಿಕೊಳ್ಳಿ:

ಬಾಬು ಈಶ್ವರ್ ಪ್ರಸಾದ್
ಬಾಬು ಈಶ್ವರ್ ಪ್ರಸಾದ್
ಲೇಖಕರು, ಚಿತ್ರನಿರ್ದೇಶಕರು, ದೃಶ್ಯ ಕಲಾವಿದರು. ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ BFA ಹಾಗೂ ಮಹಾರಾಜಾ ಸಾಯೋಜಿರಾವ್ ವಿಶ್ವವಿದ್ಯಾಲಯ, ವಡೋದರದ ಫೈನ್ ಆರ್ಟ್ಸ್ ಫ್ಯಾಕಲ್ಟಿಯಿಂದ MA ಪದವಿಯನ್ನು ಪಡೆದಿರುತ್ತಾರೆ. 1993ರಿಂದ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಚಿತ್ರಕಲಾ ಪ್ರದರ್ಶನಗಳನ್ನು ಮಾಡಿರುತ್ತಾರೆ. ಚಿತ್ರಕಲೆಯ ಹೊರತಾಗಿಯೂ, ಇವರಿಗೆ ಶಿಲ್ಪ, ಧ್ವನಿ ವಿನ್ಯಾಸ, ಫೋಟೋಗ್ರಫಿ ಮತ್ತು ವಿಶೇಷವಾಗಿ ವೀಡಿಯೊ ಮತ್ತು ಚಲನಚಿತ್ರಗಳಂತಹ ಇತರ ಮಾಧ್ಯಮಗಳನ್ನು ಅನ್ವೇಷಿಸುವಲ್ಲಿ ಆಳವಾದ ಆಸಕ್ತಿ ಇದೆ. ಇವರು 'ಗಾಳಿಬೀಜ' ಹಾಗೂ 'ಹರಿವ ನದಿಗೆ ಮೈಯೆಲ್ಲಾ ಕಾಲು' ಎಂಬ ಎರಡು ಚಿತ್ರಗಳನ್ನು ಹಾಗೂ ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿರುತ್ತಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಧ್ಯಪ್ರಾಚ್ಯ ಸಂಘರ್ಷ | ಕದನ ವಿರಾಮ ಎಂದ ಟ್ರಂಪ್; ಮಾತುಕತೆ ನಡೆದಿಲ್ಲವೆಂದ ಇರಾನ್

ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಸಂಘರ್ಷವನ್ನು ಕೊನೆಗಾಣಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ನಾನಾ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ಕದನ ವಿರಾಮ ಸೋಗಿನಲ್ಲಿ ಅಮೆರಿಕದ ಹೈಡ್ರಾಮ: ಟ್ರಂಪ್ ದಾಳಿ ಮುಂದೂಡಿಕೆಗೆ ಇರಾನ್ ವ್ಯಂಗ್ಯ

ಯುದ್ಧೋನ್ಮಾದಲ್ಲಿ ಮೆರೆಯುತ್ತಿದ್ದ ಅಮೆರಿಕ ಕೊನೆಗೂ ಇರಾನ್‌ನ ಖಡಕ್ ಎಚ್ಚರಿಕೆಗೆ ಮಣಿದಂತೆ ಕಾಣುತ್ತಿದೆ....