ಆಸ್ಕರ್ ಪ್ರಶಸ್ತಿ ವಿಜೇತ ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಾಬರ್ಟ್ ರೆಡ್‌ಫೋರ್ಡ್ (89) ಅವರು ಯುಟಾ ರಾಜ್ಯದ ಪ್ರೊವೊದಲ್ಲಿರುವ ತಮ್ಮ ನಿವಾಸದಲ್ಲಿ ಮಂಗಳವಾರ ನಿಧನರಾದರು. ಅವರ ಪ್ರಚಾರ ಸಂಸ್ಥೆ ರೋಜರ್ಸ್ ಆಂಡ್ ಕೋವನ್ ಪಿಎಂಕೆ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದೆ.
1937ರ ಆಗಸ್ಟ್ 18ರಂದು ಕ್ಯಾಲಿಫೋರ್ನಿಯಾದ ಸಾಂಟಾ ಮೊನಿಕಾದಲ್ಲಿ ಜನಿಸಿದ ರೆಡ್‌ಫೋರ್ಡ್, ಆರಂಭದಲ್ಲಿ ಕಲೆಗಳತ್ತ ಹೆಚ್ಚು ಆಸಕ್ತಿ ತೋರಿದರು. ರಂಗಭೂಮಿಯ ಮೂಲಕ ಪಾದಾರ್ಪಣೆ ಮಾಡಿದ ಅವರು 1959ರಿಂದ ಬ್ರಾಡ್‌ವೇಯಲ್ಲಿ ಅಭಿನಯಿಸಿ ಗಮನಸೆಳೆದರು. 1962ರಲ್ಲಿ ವಾರ್‌ಹಂಟ್ ಚಿತ್ರದ ಮೂಲಕ ಬೆಳ್ಳಿಪರದೆಗೆ ಕಾಲಿಟ್ಟ ರೆಡ್‌ಫೋರ್ಡ್, 1967ರ ಬೇರ್‌ಫುಟ್ ಇನ್ ದ ಪಾರ್ಕ್ ಚಿತ್ರದ ಮೂಲಕ ಜನಪ್ರಿಯತೆ ಪಡೆದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ನ್ಯಾಯಾಲಯದ ವಿವೇಕದ ಮುಂದೆ ಬಯಲಾದ ಬಿಜೆಪಿ ನಾಯಕರ ಅವಿವೇಕ
ಅವರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗೆ ತಂದ ಎರಡು ಪ್ರಮುಖ ಚಿತ್ರಗಳು ಪೌಲ್ ನ್ಯೂಮನ್ ಜೊತೆ ಅಭಿನಯಿಸಿದ ‘ಬುಚ್ ಕ್ಯಾಸಿಡಿ ಅಂಡ್ ದ ಸಂಡಾನ್ಸ್ ಕಿಡ್’ (1969) ಮತ್ತು ‘ದಿ ಸ್ಟಿಂಗ್’ (1973). ನಂತರ ‘ಆಲ್ ದ ಪ್ರೆಸಿಡೆಂಟ್ಸ್ ಮೆನ್’ (1976), ‘ದಿ ಕ್ಯಾಂಡಿಡೇಟ್’, ‘ದಿ ವೇ ವೀ ವೇರ್’ ಚಿತ್ರಗಳಿಂದ 70ರ ದಶಕದ ಅತ್ಯಂತ ಜನಪ್ರಿಯ ನಟರ ಪಟ್ಟಿಯಲ್ಲಿ ಸ್ಥಾನ ಪಡೆದರು.
1980ರಲ್ಲಿ ನಿರ್ದೇಶಿಸಿದ ‘ಆರ್ಡಿನರಿ ಪೀಪಲ್’ ಚಿತ್ರಕ್ಕೆ ಅತ್ಯುತ್ತಮ ನಿರ್ದೇಶಕ ವಿಭಾಗದ ಆಸ್ಕರ್ ಹಾಗೂ ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡರು.
ರೆಡ್‌ಫೋರ್ಡ್ ಸ್ವತಃ ಸ್ಥಾಪಿಸಿದ ‘ಸಂಡಾನ್ಸ್ ಇನ್ಸ್ಟಿಟ್ಯೂಟ್’ ಹಾಗೂ ‘ಸಂಡಾನ್ಸ್ ಚಲನಚಿತ್ರೋತ್ಸವ’ ಅನೇಕ ಪೀಳಿಗೆಯ ನಿರ್ದೇಶಕರಿಗೆ ವೇದಿಕೆಯಾಗಿವೆ.





