ಸ್ಯಾಂಡಲ್ವುಡ್ ಜೋಡಿಗಳಲ್ಲಿ ಒಂದಾದ ಸಂಗೀತ ನಿರ್ದೇಶಕ, ಗಾಯಕ ಚಂದನ್ ಶೆಟ್ಟಿ ಮತ್ತು ನಟಿ ನಿವೇದಿತಾ ಗೌಡ ಜೋಡಿಯ ದಾಂಪತ್ಯ ಜೀವನದಲ್ಲಿ ಬಿರುಕುಂಟಾಗಿದ್ದು, ವಿಚ್ಛೇದನ ಪಡೆದುಕೊಳ್ಳುವ ನಿಟ್ಟಿನಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ವಿಚ್ಛೇದನ ನೀಡುವಂತೆ ಈ ಜೋಡಿಯು ಬೆಂಗಳೂರಿನ ಶಾಂತಿನಗರದ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
2017ರಲ್ಲಿ ಪ್ರಸಾರವಾದ ‘ಬಿಗ್ ಬಾಸ್ ಕನ್ನಡ ಸೀಸನ್ 5’ ರಿಯಾಲಿಟಿ ಶೋನಲ್ಲಿ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಅವರು ಪರಸ್ಪರ ಪರಿಚಯ ಆಗಿದ್ದರು. ಅವರಿಬ್ಬರ ಸ್ನೇಹ ನಂತರ ಪ್ರೀತಿಯಾಗಿ ಬದಲಾಗಿತ್ತು. ಮೈಸೂರಿನ ಯುವ ದಸರಾ ವೇದಿಕೆಯಲ್ಲಿ ನಿವೇದಿತಾಗೆ ಚಂದನ್ ಶೆಟ್ಟಿ ಅವರು ಪ್ರಪೋಸ್ ಮಾಡಿದ್ದರು.
ಆ ಬಳಿಕ ಈ ಜೋಡಿ ಅದ್ಧೂರಿಯಾಗಿ ಮದುವೆಯಾಗಿದ್ದರು. ಈ ಇಬ್ಬರೂ ಅನ್ಯೋನ್ಯ ಜೀವನ ನಡೆಸುತ್ತಿದ್ದರು ಎನ್ನುವುದಕ್ಕೆ ಅವರೇ ಮಾಡಿಕೊಂಡಿದ್ದ ಹಲವಾರು ರೀಲ್ಸ್ ಸಾಕ್ಷಿಯಾಗಿದ್ದವು. ಆದರೆ, ಏಕಾಏಕಿ ಇಬ್ಬರೂ ನಿನ್ನೆಯಷ್ಟೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವುದು ಹಲವು ಮಂದಿ ಅಭಿಮಾನಿಗಳಿಗೆ ಆಘಾತ ಉಂಟು ಮಾಡಿದೆ.
‘ಡಿವೋರ್ಸ್’ಗೆ ಇನ್ನೂ ಕಾರಣ ತಿಳಿದುಬಂದಿಲ್ಲ. ಆದರೆ, ವೃತ್ತಿ ಜೀವನದ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಇಬ್ಬರೂ ಒಪ್ಪಿಗೆಯ ಮೇರೆಗೆ ಅರ್ಜಿ ಸಲ್ಲಿಸಿದ್ದು, ಇಂದು ಇಬ್ಬರೂ ಬೆಂಗಳೂರಿನ ಫ್ಯಾಮಿಲಿ ಕೋರ್ಟ್ಗೆ ಹಾಜರಾಗಿದ್ದು, ಕೋರ್ಟ್ ಮೂಲಕ ದಂಪತಿ ವಿಚ್ಛೇದನ ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದೆ.
ಇದನ್ನು ಓದಿದ್ದೀರಾ? ಕರ್ನಾಟಕ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿ ನಿವೃತ್ತ ಐಜಿಪಿ ಯು ನಿಸಾರ್ ಅಹ್ಮದ್
26 ಫೆಬ್ರವರಿ 2020ರಂದು ಪ್ರೀತಿಸಿ ಮದ್ವೆ ಆಗಿದ್ದ ಜೋಡಿ, ಸದ್ಯ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಇವರಿಬ್ಬರೂ ಸೇರಿ ‘ಕ್ಯಾಂಡಿ ಕ್ರಶ್’ ಎಂಬ ಚಿತ್ರದಲ್ಲಿ ಸಿನಿಮಾವೊಂದರಲ್ಲಿ ನಟಿಸಿದ್ದು, ಇನ್ನೂ ಬಿಡುಗಡೆಯಾಗಬೇಕಿದೆ.





