ಕನ್ನಡ ಖ್ಯಾತ ನಟ ಶಿವರಾಜ್‌ಕುಮಾರ್ ಅವರು ತಮ್ಮ ಸಿನಿ ಪಯಣದ ಮೂರು ದಶಕಗಳ ಬಳಿಕ ತೆಲುಗು ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟಿದ್ದಾರೆ. ಅವರು ತೆಲುಗು ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ‘ಗುಮ್ಮಡಿ ನರಸಯ್ಯ’ ಸಿನಿಮಾದಲ್ಲಿ ಮುಖ್ಯ ಭೂಮಿಕೆಯಲ್ಲಿ ಬಣ್ಣ ಹಚ್ಚಲಿದ್ದಾರೆ. ಸಿನಿಮಾದ ಮುಹೂರ್ತ ಶನಿವಾರ (ಡಿ.6) ನೆರವೇರಿದೆ.
ಕಮ್ಯುನಿಸ್ಟ್ ಹೋರಾಟಗಾರ ಗುಮ್ಮಡಿ ನರಸಯ್ಯ ಅವರ ಜೀವನಾಧಾರಿತ ಸಿನಿಮಾ ಇದಾಗಿದೆ. ಗುಮ್ಮಡಿ ನರಸಯ್ಯ ಅವರ ಪಾತ್ರದಲ್ಲಿ ಶಿವರಾಜ್‌ಕುಮಾರ್ ಅಭಿನಯಿಸಲಿದ್ದಾರೆ. ಸಿನಿಮಾವನ್ನು ಪ್ರಶಾಂತ್ ಹಿರ್ವಾಲೆ ನಿರ್ದೇಶನ ಮಾಡುತ್ತಿದ್ದಾರೆ. ಪ್ರವಲ್ಲಿಕಾ ಆರ್ಟ್ಸ್ ಕ್ರಿಯೇಷನ್ಸ್ ನಿರ್ಮಾಣ ಮಾಡುತ್ತಿದೆ.
ನರಸಯ್ಯ ಅವರ ಹುಟ್ಟೂರು ಆಂಧ್ರಪ್ರದೇಶದ ಪಲ್ವಂಚಾದಲ್ಲಿ ಸಿನಿಮಾದ ಮುಹೂರ್ತ ಸಮಾರಂಭ ನಡೆದಿದೆ. ಶಿವರಾಜ್‌ಕುಮಾರ್ ಮತ್ತು ಅವರ ಪತ್ನಿ ಗೀತಾ ಶಿವರಾಜ್‌ಕುಮಾರ್ ಅವರು ಸಮಾರಂಭದಲ್ಲಿ ಭಾಗಿಯಾಗಿದ್ದು, ಚಿತ್ರ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ.




