28ನೇ ವಯಸ್ಸಿನಲ್ಲಿ ಚಿತ್ರರಂಗದಲ್ಲಿ ಪಯಣ ಆರಂಭಿಸಿದ ಶಿವರಾಜ್‌ಕುಮಾರ್ ಬರೋಬ್ಬರಿ 125ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆ ಮೂಲಕ, ಇತ್ತೀಚಿನ ಕಲಾವಿದರಲ್ಲಿ ನಾಯಕನಾಗಿ ಹೆಚ್ಚು ಸಿನಿಮಾಗಳನ್ನು ಮಾಡಿದ ಏಕೈಕ ಕಲಾವಿದ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಡಾ. ಶಿವರಾಜ್‌ಕುಮಾರ್– ಕನ್ನಡ ಚಿತ್ರರಂಗದಲ್ಲಿ ‘ಶಿವಣ್ಣ’ ಎಂದೇ ಜನಪ್ರಿಯತೆ ಗಳಿಸಿರುವ ಹಿರಿಯ ನಟ. ಶಿವರಾಜ್‌ಕುಮಾರ್ ಕೇವಲ ನಟನಾಗಿ ಮಾತ್ರವಲ್ಲದೆ, ನಿರ್ಮಾಪಕ, ಟೆಲಿವಿಷನ್ ಸಂಗೀತಗಾರ ಹಾಗೂ ಒಬ್ಬ ಮಾನವೀಯ ವ್ಯಕ್ತಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಕನ್ನಡಪರ ಹೋರಾಟಗಳು ಸೇರಿದಂತೆ ನಾನಾ ಹೋರಾಟಗಳಲ್ಲಿಯೂ ಭಾಗಿಯಾಗಿದ್ದಾರೆ. ಹಲವು ಸಂದರ್ಭಗಳಲ್ಲಿ ಜನರೊಂದಿಗೆ ನಿಂತಿದ್ದಾರೆ.
ಕನ್ನಡ ಚಿತ್ರರಂಗದ ದಿಗ್ಗಜ ಡಾ. ರಾಜ್‌ಕುಮಾರ್ ಮತ್ತು ಪಾರ್ವತಮ್ಮ ರಾಜ್‌ಕುಮಾರ್ ದಂಪತಿಯ ಹಿರಿಯ ಪುತ್ರ ಶಿವರಾಜ್ ಕುಮಾರ್. ಅವರು ಜನಿಸಿದ್ದು 1962ರ ಜುಲೈ 12ರಂದು ಮದ್ರಾಸ್‌ನಲ್ಲಿ. ಅವರ ಮೂಲ ಹೆಸರು ಶಿವಪುಟ್ಟಸ್ವಾಮಿ. ಇದು ರಾಜ್‌ಕುಮಾರ್ ಅವರ ತಾತ ಸಿಂಗಾನಲ್ಲೂರು ಪುಟ್ಟಸ್ವಾಮಿ ಅವರ ಗೌರವಾರ್ಥವಾಗಿ ಇಟ್ಟ ಹೆಸರು.
ತಮ್ಮ 28ನೇ ವಯಸ್ಸಿನಲ್ಲಿ ಚಿತ್ರರಂಗದಲ್ಲಿ ಪಯಣ ಆರಂಭಿಸಿದ ಶಿವರಾಜ್‌ಕುಮಾರ್ ಬರೋಬ್ಬರಿ 125ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆ ಮೂಲಕ, ಇತ್ತೀಚಿನ ಕಲಾವಿದರಲ್ಲಿ ನಾಯಕನಾಗಿ ಹೆಚ್ಚು ಸಿನಿಮಾಗಳನ್ನು ಮಾಡಿದ ಏಕೈಕ ಕಲಾವಿದ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.
ರಾಜ್‌ಕುಮಾರ್ ಅವರ ಹೆಜ್ಜೆ ಗುರುತುಗಳನ್ನು ಅನುಸರಿಸಿದ ಶಿವರಾಜ್‌ಕುಮಾರ್, ತಮ್ಮ ಬಾಲ್ಯದಿಂದಲೇ ಶಿಸ್ತು ಮತ್ತು ಸಂಯಮವನ್ನು ರೂಢಿಸಿಕೊಂಡಿದ್ದರು. ಕ್ರೀಡಾ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿದ್ದ ಶಿವರಾಜ್‌ಕುಮಾರ್, ತಮ್ಮ ಶಿಕ್ಷಣದ ಜೊತೆಗೆ ನಟನೆಯಲ್ಲೂ ತೊಡಗಿಸಿಕೊಂಡಿದ್ದರು. ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ರಸಾಯನಶಾಸ್ತ್ರ ವಿಭಾಗದಲ್ಲಿ ಸ್ನಾತಕ ಪದವಿ ಪಡೆದರು. ಮಾತ್ರವಲ್ಲದೆ, ಮುಂಬೈನಲ್ಲಿ ನಟನಾ ತರಬೇತಿ ಪಡೆದರು.
ಬಾಲ ಕಲಾವಿದನಾಗಿಯೇ ಚಿತ್ರರಂಗಕ್ಕೆ ಕಾಲಿಟ್ಟ ಶಿವರಾಜ್‌ಕುಮಾರ್, 1974ರಲ್ಲಿ ಬಾಲ ಕಲಾವಿದನಾಗಿ ‘ಶ್ರೀ ಶ್ರೀನಿವಾಸ ಕಲ್ಯಾಣ’ ಚಿತ್ರಕ್ಕೆ ಮೊದಲ ಬಾರಿಗೆ ಬಣ್ಣ ಹಚ್ಚಿದರು. ಅದಾದ, 12 ವರ್ಷಗಳಲ್ಲಿ- 1986ರಲ್ಲಿ- ನಾಯಕ ನಟನಾಗಿ ‘ಆನಂದ್’ ಚಿತ್ರದ ಮೂಲಕ ಚಿತ್ರರಂಗದಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಂಡರು. ಆನಂದ್ ಸಿನಿಮಾ 100 ದಿನಗಳನ್ನು ಪೂರೈಸುವ ಮೂಲಕ ಪ್ರೇಕ್ಷಕರ ಮನ ಗೆದ್ದಿತು. ಮಾತ್ರವಲ್ಲದೆ ಆರ್ಥಿಕವಾಗಿಯೂ ಲಾಭ ಗಳಿಸಿತು. ಇದರ ಬೆನ್ನಲ್ಲೇ ಬಂದ, ‘ರಥಸಪ್ತಮಿ’ ಮತ್ತು ‘ಮನ ಮೆಚ್ಚಿದ ಹುಡುಗಿ’ ಚಿತ್ರಗಳು ಕೂಡ 100 ದಿನಗಳ ಕಾಲ ಪ್ರದರ್ಶನ ಕಂಡವು. ಮೊದಲ ಮೂರು ಚಿತ್ರಗಳೇ ‘ಸೆಂಚುರಿ’ ಬಾರಿಸಿದ್ದರಿಂದ, ಶಿವರಾಜ್‌ಕುಮಾರ್ ‘ಹ್ಯಾಟ್ರಿಕ್ ಹೀರೋ’ ಎಂಬ ಬಿರುದು ಗಳಿಸಿದರು.
ಒಂದೇ ಥರನಾದ ಚಿತ್ರಗಳು, ಪಾತ್ರಗಳ ಮೊರೆಹೋಗದ ಶಿವರಾಜ್‌ಕುಮಾರ್, ವಿವಿಧ ಪಾತ್ರಗಳಲ್ಲಿ, ವೈವಿಧ್ಯಮಯವಾಗಿ ನಟಿಸಿದ್ದಾರೆ. ಆ ಮೂಲಕ, ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
1994ರಲ್ಲಿ ಉಪೇಂದ್ರ ನಿರ್ದೇಶನದ ‘ಓಂ’ ಚಿತ್ರದಲ್ಲಿ ಭೂಗತ ಲೋಕದ ಸತ್ಯ ಎಂಬ ಪಾತ್ರದಲ್ಲಿ ಮಚ್ಚು ಹಿಡಿದು ತೆರೆಯ ಮೇಲೆ ಕಾಣಿಸಿಕೊಂಡ ಶಿವರಾಜ್‌ಕುಮಾರ್, ವಿಭಿನ್ನ ಇಮೇಜ್‌ನ್ನು ಗಳಿಸಿದರು. ಈ ಚಿತ್ರವು ಕನ್ನಡ ಚಿತ್ರರಂಗದ ಐತಿಹಾಸಿಕ ಯಶಸ್ಸನ್ನು ಕಂಡಿತು. ಬರೋಬ್ಬರಿ 25 ವರ್ಷಗಳ ಕಾಲ ಕಿರುತೆರೆಗೆ ಬಾರದೆ, ಆಗಾಗ್ಗೆ ಥಿಯೇಟರ್‌ಗಳಲ್ಲಿ ಬಿಡುಗಡೆಗೊಂಡು, ಪ್ರೇಕ್ಷಕರನ್ನು ರಂಜಿಸಿತು.
1995ರಲ್ಲಿ ತೆರೆಗೆ ಬಂದ ‘ಜನುಮದ ಜೋಡಿ’ ಮತ್ತು ‘ನಮ್ಮೂರ ಮಂದಾರ ಹೂವೆ’ ಚಿತ್ರಗಳು ಶಿವರಾಜ್‌ಕುಮಾರ್ ಅವರನ್ನು ಚಿತ್ರರಂಗದಲ್ಲಿ ಅಗ್ರಸ್ಥಾನಕ್ಕೆ ಕೊಂಡೊಯ್ದವು. ‘ನಮ್ಮೂರ ಮಂದಾರ ಹೂವೆ’ ಚಿತ್ರವು 500 ದಿನಗಳಿಗೂ ಹೆಚ್ಚು ಕಾಲ ಪ್ರದರ್ಶನ ಕಂಡಿತು. ಇದು ಅವರ ವೃತ್ತಿಜೀವನದಲ್ಲೇ ಒಂದು ಮೈಲಿಗಲ್ಲಾಯಿತು.
ಜೋಗಿ (2005), ಭಜರಂಗಿ (2013), ಮಫ್ತಿ (2017), ಟಗರು (2018) ಮತ್ತು ಭೈರತಿ ರಣಗಲ್ (2024)ನಂತಹ ಚಿತ್ರಗಳು ಶಿವರಾಜ್‌ಕುಮಾರ್ ಅವರ ನಟನಾ ಸಾಮರ್ಥ್ಯವನ್ನು ಪ್ರದರ್ಶಿಸಿದವು.
ಕನ್ನಡ ಚಿತ್ರರಂಗಕ್ಕೆ ನಿರಂತರವಾಗಿ ತಮ್ಮ ನಟನೆಯನ್ನು ಧಾರೆ ಎರೆದ ಶಿವರಾಜ್‌ಕುಮಾರ್, 32 ವರ್ಷಗಳ ನಟನಾ ವೃತ್ತಿಯ ಬಳಿಕ, ಕನ್ನಡ ಚಿತ್ರರಂಗವನ್ನು ದಾಟಿ, ಇತರ ಚಿತ್ರರಂಗಗಳಿಗೂ ಕಾಲಿಟ್ಟರು. ತಮಿಳಿನ ಜೈಲರ್ (2023) ಮತ್ತು ಕ್ಯಾಪ್ಟನ್ ಮಿಲ್ಲರ್ (2024) ಚಿತ್ರಗಳಲ್ಲಿ ಕಾಣಿಸಿಕೊಂಡು, ದಕ್ಷಿಣ ಭಾರತದಾದ್ಯಂತ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ನಟನೆಯ ಜೊತೆಗೆ ಮಾನವೀಯ ಕೆಲಸಗಳು ಮತ್ತು ಹೋರಾಟಗಳಲ್ಲೂ ಶಿವರಾಜ್‌ಕುಮಾರ್ ತೊಡಗಿಸಿಕೊಂಡಿದ್ದಾರೆ. ಕಳೆದ ವರ್ಷ ಹುಬ್ಬಳ್ಳಿಯಲ್ಲಿ ನಡೆದ ‘ಮಾದಕ ವಸ್ತುಗಳ ವಿರುದ್ಧ ಜಾಗೃತಿ ಅಭಿಯಾನ’ದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ‘ಬದುಕನ್ನು ಸಂಭ್ರಮಿಸಿ – ಮಾದಕ ವಸ್ತುಗಳಿಗೆ ದಾಸರಾಗಬೇಡಿ’ ಎಂದು ಯುವಜನರು ಮತ್ತು ತಮ್ಮ ಅಭಿಮಾನಿಗಳಿಗೆ ಕಿವಿಮಾತು ಹೇಳಿದ್ದರು. ಕಾವೇರಿ ಹೋರಾಟ, ಕನ್ನಡ ಪರ ಚಳವಳಿ ಹಾಗೂ ಮಹದಾಯಿ ಹೋರಾಟಗಳಲ್ಲಿ ಭಾಗಿಯಾಗಿ ಕನ್ನಡಿಗರಿಗೆ, ರೈತರಿಗೆ ಬೆಂಬಲ ನೀಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಪಯಣ ಮತ್ತು ಸಾಧನೆಗಳ ಜೊತೆಗೆ, ಕೆಲವು ವಿವಾದಗಳನ್ನು ಶಿವರಾಜ್ ಕುಮಾರ್ ಎದುರಿಸಿದ್ದಾರೆ. 2017ರಲ್ಲಿ ಬಿಡುಗಡೆಯಾದ ‘ಮಫ್ತಿ’ ಚಿತ್ರವು ರಾಜಕೀಯ ವಿವಾದವನ್ನು ಹುಟ್ಟುಹಾಕಿತ್ತು. ಈ ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಅವರು ಭೈರತಿ ರಣಗಲ್ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಪಾತ್ರವು ಕರ್ನಾಟಕದ ಮಾಜಿ ಸಚಿವ ಜನಾರ್ದನ ರೆಡ್ಡಿಯವರನ್ನು ಆಧರಿಸಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಕರ್ನಾಟಕ ವಿಧಾನಸಭಾ ಚುನಾವಣೆಗೆ ಆರು ತಿಂಗಳಷ್ಟೇ ಸಮಯ ಇದ್ದಾಗ ಈ ಸಿನಿಮಾ ಬಿಡುಗಡೆಯಾಗಿದ್ದು, ರಾಜಕೀಯ ಒಳಸಂಚಿನ ಭಾಗವಾಗಿದೆ. ಬಿಜೆಪಿ ವಿರುದ್ಧ ಕಾಂಗ್ರೆಸ್‌ಗೆ ಸಹಕಾರ ನೀಡುವ ಉದ್ದೇಶ ಹೊಂದಿದೆ ಎಂದು ಆರೋಪಿಸಲಾಗಿತ್ತು.
2024ರ ಲೋಕಸಭಾ ಚುನಾವಣೆಯಲ್ಲಿ ಶಿವರಾಜ್‌ಕುಮಾರ್ ಅವರ ಪತ್ನಿ ಗೀತಾ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಗೀತಾ ಅವರ ಪರ ಪ್ರಚಾರದಲ್ಲಿ ಶಿವರಾಜ್‌ಕುಮಾರ್ ಸಕ್ರಿಯವಾಗಿ ತೊಡಗಿಸಿಕೊಂಡಾಗ, ರಾಜ್‌ಕುಮಾರ್ ಅವರು ರಾಜಕೀಯದಿಂದ ದೂರವಿದ್ದರು. ಆದರೆ, ಶಿವರಾಜ್‌ಕುಮಾರ್ ರಾಜಕೀಯದಲ್ಲಿ ತೊಡಗಿಕೊಂಡಿದ್ದಾರೆ. ಇದು ಅವರ ತಂದೆಯ ಗೌರವಕ್ಕೆ ಧಕ್ಕೆ ತರುತ್ತದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದವು.
ಇನ್ನು, ಇತ್ತೀಚೆಗಷ್ಟೇ ಚೆನ್ನೈನಲ್ಲಿ ನಡೆದ, ತಮಿಳು ಸಿನಿಮಾ ‘ತಗ್ ಲೈಫ್’ನ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ, ಕಮಲ್ ಹಾಸನ್ ಅವರು ‘ಕನ್ನಡ ತಮಿಳಿನಿಂದ ಹುಟ್ಟಿತು’ ಎಂಬ ಹೇಳಿಕೆ ನೀಡಿದ್ದರು. ಆ ಕಾರ್ಯಕ್ರಮದಲ್ಲಿ ಶಿವರಾಜ್‌ಕುಮಾರ್ ಕೂಡ ಭಾಗಿಯಾಗಿದ್ದರು. ಆದರೆ, ಅವರು ಕಮಲ್ ಹೇಳಿಕೆಯನ್ನು ವಿರೋಧಿಸಲಿಲ್ಲ. ಬದಲಾಗಿ, ಚಪ್ಪಾಳೆ ತಟ್ಟಿದರು ಎಂಬ ಕಾರಣಕ್ಕೆ ಹಲವಾರು ಕನ್ನಡಿಗರು ಶಿವರಾಜ್ ವಿರುದ್ಧ ಆಕ್ರೋಶಗೊಂಡಿದ್ದರು. ‘ಕನ್ನಡದ ಹೆಮ್ಮೆ ಡಾ. ರಾಜ್‌ಕುಮಾರ್ ಅವರ ಮಗನಾಗಿ ಈ ರೀತಿಯ ಹೇಳಿಕೆಗೆ ಬೆಂಬಲ ನೀಡಿದ್ದು ಲಜ್ಜೆಗೇಡಿತನ’ ಎಂಬ ಟೀಕೆಗೆ ಗುರಿಯಾಗಿದ್ದರು.
ಈ ಲೇಖನ ಓದಿದ್ದೀರಾ?: ರೈತರಿಂದ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಸರ್ಕಾರ ಬಳಸಿಕೊಂಡಿದ್ದೆಷ್ಟು? ಇಲ್ಲಿದೆ ನೋಡಿ…
ಶಿವರಾಜ್‌ಕುಮಾರ್ ಇತ್ತೀಚೆಗಷ್ಟೇ ಆರೋಗ್ಯ ಸಮಸ್ಯೆಯನ್ನೂ ಎದುರಿಸಿ, ಗೆದ್ದು ಬಂದಿದ್ದಾರೆ. ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದ ಅವರು ಚಿಕಿತ್ಸೆಗಾಗಿ 2025ರ ಜನವರಿಯಲ್ಲಿ ಅಮೆರಿಕಗೆ ತೆರಳಿದ್ದರು. ಅಲ್ಲಿ, ಸುಮಾರು ಒಂದು ತಿಂಗಳ ಕಾಲ ಚಿಕಿತ್ಸೆ ಪಡೆದು, ಗುಣಮುಖರಾಗಿ ಬಂದಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಬರೋಬ್ಬರಿ 40 ವರ್ಷಗಳ ಕಾಲ ಕಲಾಸೇವೆ ಸಲ್ಲಿಸಿರುವ ಶಿವರಾಜ್‌ಕುಮಾರ್ ಅವರಿಗೆ ನಾಲ್ಕು ‘ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ’ಗಳು, ನಾಲ್ಕು ‘ಫಿಲ್ಮ್‌ಫೇರ್’ ಪ್ರಶಸ್ತಿಗಳು, ಆರು ‘ಸೌತ್ ಇಂಡಿಯನ್ ಇಂಟರ್‌ನ್ಯಾಷನಲ್ ಮೂವೀ ಅವಾರ್ಡ್ಸ್’ (SIIMA) ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ. ಅಲ್ಲದೆ, ಬಳ್ಳಾರಿಯಲ್ಲಿರುವ ‘ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ’ವು ಶಿವರಾಜ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ಸದ್ಯ, ರಾಜ್‌ಕುಮಾರ್ ಅವರ ಮೂವರು ಮಕ್ಕಳಲ್ಲಿ ಸ್ಟಾರ್ ನಟ ಪುನೀತ್ ರಾಜ್‌ಕುಮಾರ್ ಅವರ ಅಕಾಲಿಕ ಮರಣ, ರಾಘವೇಂದ್ರ ರಾಜ್‌ಕುಮಾರ್ ಅವರ ಅನಾರೋಗ್ಯದಿಂದಾಗಿ ಶಿವರಾಜ್‌ಕುಮಾರ್ ಒಬ್ಬರೇ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿ ಉಳಿದಿದ್ದಾರೆ. ಆದಾಗ್ಯೂ, ಯುವರಾಜ್‌ಕುಮಾರ್ ಅವರನ್ನು ಬೆಳ್ಳಿತೆರೆಯಲ್ಲಿ ಬೆಳೆಸುವ ಪ್ರಯತ್ನಗಳು ನಡೆಯುತ್ತಿವೆ. ಆದರೂ, ಚಿತ್ರರಂಗದಲ್ಲಿ ರಾಜ್ ಕುಟುಂಬದ ಪ್ರಭಾವ ಶಿವರಾಜ್‌ಕುಮಾರ್ ಅವರ ಜರ್ನಿಯೊಂದಿಗೆ ಮಾತ್ರವೇ ಬೆಸೆದುಕೊಂಡಿದೆ.




