ಕನ್ನಡ ಚಿತ್ರರಂಗದ ಹಿರಿಯ ನಟ ಶಿವ ರಾಜ್‌ಕುಮಾರ್ ಅಭಿನಯಿಸುತ್ತಿರುವ ತೆಲುಗು ಸಿನಿಮಾ ಗುಮ್ಮಡಿ ನರಸಯ್ಯ ಇತ್ತೀಚೆಗಷ್ಟೇ ಸೆಟ್ಟೇರಿದೆ. ಗೀತಾ ಶಿವರಾಜ್ಕುಮಾರ್ ಅವರು ಚಿತ್ರದ ಮೊದಲ ದೃಶ್ಯಕ್ಕೆ ಚಾಲನೆ ನೀಡಿದ್ದಾರೆ. ಈ ಚಿತ್ರಕ್ಕೆ ಪರಮೇಶ್ವರ್ ಹಿವ್ರಾಳೆ ಆ್ಯಕ್ಷನ್ ಕಟ್ ಹೇಳಲಿದ್ದು, ಎನ್ ಸುರೇಶ್ ರೆಡ್ಡಿ ಅವರು ನಿರ್ಮಾಣ ಮಾಡಲಿದ್ದಾರೆ.
ʼಗುಮ್ಮಡಿ ನರಸಯ್ಯ’ ಒಂದು ಬಯೋಪಿಕ್ ಆಗಿದ್ದು, ತೆಲಂಗಾಣದ ಯಲ್ಲಂದು ವಿಧಾನಸಭಾ ಕ್ಷೇತ್ರದಿಂದ (ಹಿಂದಿನ ಅವಿಭಜಿತ ಆಂಧ್ರಪ್ರದೇಶದಲ್ಲಿ) ಸ್ವತಂತ್ರ ಅಭ್ಯರ್ಥಿಯಾಗಿ 5 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಗುಮ್ಮಡಿ ನರಸಯ್ಯ ಅವರ ಜೀವನ ಚರಿತ್ರೆ ಇದಾಗಿದ್ದು, ಶಿವಣ್ಣ ಗುಮ್ಮಡಿ ನರಸಯ್ಯ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಕನ್ನಡದ ಹ್ಯಾಟ್ರಿಕ್ ಹೀರೋ ಶಿವ ರಾಜ್‌ಕುಮಾರ್ ಅವರು ಸಾಲುಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ 130ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಅವರು “ಸೆಂಚುರಿ ಸ್ಟಾರ್” ಎಂದೇ ಖ್ಯಾತಿಪಡೆದಿದ್ದಾರೆ. ಇಡೀ ಕನ್ನಡ ನಾಡಿನ ಚಿತ್ರ ಪ್ರೇಮಿಗಳ ಪಾಲಿಗೆ ಪ್ರೀತಿಯ “ಶಿವಣ್ಣ”ನಾಗಿ ಕನ್ನಡ ಚಿತ್ರರಂಗದ ಭರವಸೆಯಂತೆ ನಿಂತಿದ್ದಾರೆ. ಅವರು ಗುಮ್ಮಡಿ ನರಸಯ್ಯ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೂ ಕಾಲಿಡಲಿದ್ದಾರೆ. ಇದು ಶಿವಣ್ಣ ಅವರ ಜೀವನದ ಅತ್ಯುತ್ತಮ ಚಿತ್ರವೆಂದು ಹೇಳಿಕೊಂಡಿದ್ದಾರೆ.
ಎರಡು ದಿನ ಹಿಂದೆ ನಡೆದ ಚಿತ್ರದ ಮಹೂರ್ತದಲ್ಲಿ ಸ್ವತಃ ಗುಮ್ಮಡಿ ನರಸಯ್ಯ ಅವರೇ ಭಾಗವಾಗಿಸಿದ್ದರು. ಐದು ಬಾರಿ ಶಾಸಕರಾಗಿದ್ದ ಅವರು ಈಗಲೂ ಸಾಮಾನ್ಯ ಜನರಂತೆ ಜೀವನ ನಡೆಸುತ್ತಿದ್ದಾರೆ. ‘ಗುಮ್ಮಡಿ ನರಸಯ್ಯ ಅವರಂಥ ವ್ಯಕ್ತಿಯ ಬಯೋಪೀಕ್ ಅನ್ನು ನಾನು ಅಭಿನಯಿಸುತ್ತಿರುವುದು ಹೆಮ್ಮೆಯ ವಿಷಯ” ಎಂದು ಶಿವ ರಾಜ್‌ಕುಮಾರ್ ಅವರು ಹೇಳಿದ್ದಾರೆ. ಮುಂದುವರೆದು ‘ನನ್ನ ತಂದೆಯೂ ಕೂಡ ಗುಮ್ಮಡಿ ನರಸಯ್ಯರಂತೆಯೇ ಜನಸೇವೆಗಾಗಿ ಇಡೀ ಜೀವನವನ್ನು ಸಲ್ಲಿಸಿದ್ದರು. ಅವರು ಯಾವಾಗಲೂ ‘ನಿಮಗಾಗಿ ಬದುಕಬೇಡಿ, ಇತರರಿಗಾಗಿ ಬದುಕಿ’ ಎಂದು ಹೇಳುತ್ತಿದ್ದರು. ನಾನು ಗುಮ್ಮಡಿ ನರಸಯ್ಯ ಅವರ ಮನೆಗೆ ಭೇಟಿ ಕೊಟ್ಟಾಗ, ನಾನು ನನ್ನ ತಂದೆಯ ಬಳಿಗೆ ಹಿಂತಿರುಗಿದಂತೆ ಭಾಸವಾಯಿತು. ನಾನು ಈ ಚಿತ್ರಕ್ಕಾಗಿ ತೆಲುಗು ಕಲಿಯುತ್ತಿದ್ದೇನೆ. ಈ ಚಿತ್ರವು ರಾಜಕೀಯ ನಾಯಕರಿಗೆ ಸ್ಫೂರ್ತಿಯಾಗಲಿದೆ” ಎಂದು ಮಹೂರ್ತದ ಸಂದರ್ಭದಲ್ಲಿ ಹೇಳಿದ್ದಾರೆ.

ನಿಮಗೆಲ್ಲ ಗೊತ್ತಿರುವ ಹಾಗೆ ಶಿವ ರಾಜ್‌ಕುಮಾರ್ ಕನ್ನಡ ಚಿತ್ರರಂಗದ ದೊಡ್ಮನೆ ಎಂದೇ ಖ್ಯಾತಿ ಪಡೆದಿರುವ ಕನ್ನಡದ ವರನಟ ಡಾ.ರಾಜ್ಕುಮಾರ್ ಅವರ ಐದು ಮಕ್ಕಳಲ್ಲಿ ಮೊದಲ ಮಗ. ಶಿವರಾಜಕುಮಾರ್ ಅವರು ಬಾಲ್ಯದ ಹೆಸರು “ನಾಗರಾಜು ಶಿವ ಪುಟ್ಟಸ್ವಾಮಿ”. 1986 ರಲ್ಲಿ ‘ಆನಂದ್’ ಚಿತ್ರದ ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ. ನಂತರ ರಥಸಪ್ತಮಿ, ಓಂ, ಜನುಮದ ಜೋಡಿ, ನಮ್ಮೂರ ಮಂದಾರ ಹೂವೆ… ಹೀಗೆ ಸಾಲು ಸಾಲು ಹಿಟ್ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ಕೊಟ್ಟು “ಸೆಂಚುರಿ ಸ್ಟಾರ್” ಎಂಬ ಬಿರುದನ್ನು ಪಡೆಯುತ್ತಾರೆ. ಕನ್ನಡದಲ್ಲಿ ಮಿಂಚಿದ ಶಿವಣ್ಣ ಈಗ ತೆಲುಗು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಅದು ಒಬ್ಬ ರಾಜಕೀಯ ವ್ಯಕ್ತಿಯ ಜೀವನಾಧಾರಿತ ಕತೆಯ ಮೂಲಕ ಜನರ ಮುಂದೆ ಬರಲಿದ್ದಾರೆ. ಎರಡು ತಿಂಗಳ ಹಿಂದೆ ಬಿಡುಗಡೆಯಾಗಿದ್ದ ಗುಮ್ಮಡಿ ನರಸಯ್ಯ ಚಿತ್ರದ ಫಸ್ಟ್ ಲುಕ್ ಈಗ ಸೆಟ್ಟೇರಿದೆ. ಇದಕ್ಕೆ ಸ್ವತಃ ಗುಮ್ಮಡಿ ನರಸಯ್ಯ ಅವರು ಸಾಕ್ಷಿಯಾಗಿದ್ದಾರೆ.
ಯಾರು ಗುಮ್ಮಡಿ ನರಸಯ್ಯ?
ರಾಜಕಾರಣಿಗಳೆಂದರೆ ಸಾಮಾನ್ಯವಾಗಿ ಒಂದು ಚಿತ್ರಣ ಕಣ್ಣಮುಂದೆ ಬರುತ್ತದೆ. ಬಿಳಿ ಅಂಗಿ ಧರಿಸಿ, ಬಿಳಿ ಬಣ್ಣದ ಕಾರಿನಲ್ಲಿ ಬರುವ, ಅವರು ಬಂದರೆಂದರೆ ಹಿಂದೆ ನಾಲ್ಕೈದು ಜನ ಅವರಿಗೆ ಜೈಕಾರ ಹಾಕುವ ಭಟ್ಟಂಗಿಗಳು ಇರುತ್ತಾರೆಂದು. ಇನ್ನೂ ಕೆಲ ರಾಜಕಾರಣಿಗಳು ಶಾಸಕರು ಅಥವಾ ಸಚಿವರು ಆದರೆ ಕೋಟಿ ಕೋಟಿ ಆಸ್ತಿಯನ್ನು ಮಾಡಿಕೊಂಡು, ಜನ ಸೇವೆಯನ್ನೇ ಮರೆತ ಇರುವರೆಂದು. ಹೀಗೆ ಅನೇಕ ರೀತಿಯ ಕಲ್ಪನೆಗಳು ನಮ್ಮ ನಡುವೆ ಬರುತ್ತವೆ.
ಆದರೆ, ಗುಮ್ಮಡಿ ನರಸಯ್ಯ ಅವರು ರಾಜಕಾರಣಿಗಳು ಹೀಗೂ ಇರಬಹುದು ಎಂದು ಮಾದರಿ ಹಾಕಿಕೊಟ್ಟ ಲೆಜೆಂಡ್ ರಾಜಕಾರಣಿ. ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಎಂಎಲ್) ಪಕ್ಷದಿಂದ ಐದು ಬಾರಿ ಶಾಸಕರಾಗಿದ್ದ ಇವರು, ಒಂದು ದಿನವೂ ಕಾರು ಹತ್ತದೆ ಸೈಕಲ್ ನಲ್ಲಿಯೇ ಜನಸೇವೆಯನ್ನು ಮಾಡಿದವರು. ಅವಿಭಾಜಿತ ಆಂಧ್ರಪ್ರದೇಶದಲ್ಲಿ 1983ರಲ್ಲಿ ಮೊದಲ ಸಲ ಯೆಲ್ಲಾಂಡು ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದು ಶಾಸಕರಾದರು. ನಂತರ ನಡೆದ 1986 ಮತ್ತು 1989ರ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವನ್ನು ಸಾಧಿಸಿದ್ದಾರೆ. ಇವೆಲ್ಲದರ ಹೊರತಾಗಿಯೂ ನರಸಯ್ಯನವರು ತಮ್ಮನ್ನು ರೈತ ಎಂದು ಗುರುತಿಸಿಕೊಳ್ಳುತ್ತಾರೆ.

ಕಮ್ಯೂನಿಸ್ಟ್ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿದ್ದ ನರಸಯ್ಯನವರು 1978ರಲ್ಲಿ ರಾಜಕೀಯ ಜೀವನಕ್ಕೆ ಕಾಲಿಡುತ್ತಾರೆ. ಒಬ್ಬ ಮಾವೋವಾದಿ ನಾಯಕ ರಾಮಚಂದ್ರಯ್ಯ ಎಂಬುವವರ ಪೊಲೀಸರು ನಕಲಿ ಎನ್ ಕೌಂಟರ್ ಮಾಡಿದನ್ನು ನೋಡಿದ ನಂತರ ನರಸಯ್ಯ ತಾನು ರಾಜಕೀಯಕ್ಕೆ ಬರಬೇಕೆಂದು ತೀರ್ಮಾನ ಮಾಡಿಕೊಳ್ಳುತ್ತಾರೆ. ಮೊದಲು ಆಂಧ್ರಪ್ರದೇಶದ ಹಳ್ಳಿಗಳ ರೈತರ ಸಮಸ್ಯೆಗಳಿಗೆ ಹೋರಾಟ ಆರಂಭಿಸಿದ ಅವರು, ಟೇಕುಲಪಲ್ಲಿ ಎಂಬ ಗ್ರಾಮದ ಸರಪಂಚ್ (ಗ್ರಾಮದ ಮುಖ್ಯಸ್ಥ) ಆಗುತ್ತಾರೆ. ಇವರ ಸಂಘಟನ ಕೌಶಲ್ಯವನ್ನು ನೋಡಿದ ಸಿಪಿಐ(ಎಂಎಲ್) ನವರು ನರಸಯ್ಯರಿಗೆ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಕೊಟ್ಟು ಶಾಸಕರಾಗಿ ಆಯ್ಕೆಯಾಗುವಂತೆ ಮಾಡುತ್ತದೆ.
ಕಮ್ಯೂನಿಸ್ಟ್ ಪಕ್ಷದ ಸಿದ್ದಾಂತದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ಮತ್ತು ದುಡಿವ ಕಾರ್ಮಿಕ ಜನರ ಹಕ್ಕು ಅವರಿಗೆ ದೊರೆಯುವಂತೆ ಮಾಡುವುದಕ್ಕೆ ಸಾಕಷ್ಟು ಶ್ರಮವಹಿಸಿದ್ದ ನರಸಯ್ಯನವರು, ತಾವು ಶಾಸಕರಾಗಿ ಪಡೆದ ಅಷ್ಟು ಸಂಬಳವನ್ನು ಪಕ್ಷಕ್ಕಾಗಿ ಕೊಟ್ಟಿದ್ದಾರೆ. ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ಓದಿಸಿದ್ದಾರೆ. ಬಂಡವಾಳ ಶಾಹಿಗಳು ನಡೆಸುವ ದಬ್ಬಾಳಿಕೆಯ ಪರಿಭಾಷೆಯ ವಿರುದ್ಧವಾಗಿ ನರಸಯ್ಯ ಸಾಮಾನ್ಯ ವ್ಯಕ್ತಿಯಂತೆ ಬದುಕಿದ್ದಾರೆ. ಇದೇ ಜನಸಾಮಾನ್ಯರಿಗೆ ಅವರು ಹತ್ತಿರವಾಗುವಂತೆ ನೋಡಿಕೊಂಡಿರಬಹುದು. ಆದ್ದರಿಂದ ಆಂಧ್ರದ ಜನ ಇವರನ್ನು “ಪ್ರಜಾಲ ಮನಿಷಿ” (ಜನರ ಮನುಷ್ಯ) ಎಂದು ಕರೆಯುತ್ತಿದ್ದರು.
ತಮ್ಮ ಜೀವಿತಾವಧಿಯಲ್ಲಿ ಯಾವುದೇ ಹಣವನ್ನು ಮಾಡದ, ಕಾಲ್ನಡಿಗೆಯಲ್ಲಿ ವಿಧಾನಸಭೆಗೆ ಬರುತ್ತಿದ್ದ ಅವರು ನಂತರ ಸೈಕಲ್ ನಲ್ಲಿಯೇ ಇಡೀ ಜೀವನ ಸವೆಸಿದ ವ್ಯಕ್ತಿ ನರಸಯ್ಯ 2009ರ ಚುನಾವಣೆಯಲ್ಲಿ ತೆಲುಗು ದೇಶಂ ಪಕ್ಷದ ಅಭ್ಯರ್ಥಿ ವೂಕೆ ಅಬ್ಬಯ್ಯ ಅವರ ಎದುರು ಸೋಲಬೇಕಾಗುತ್ತದೆ. ಸೋತರು ಸಹ ಜನರ ಸೇವೆಗಾಗಿ ತಮ್ಮ ಇಡೀ ಜೀವನವನ್ನು ಅರ್ಪಣೆ ಮಾಡಿದ್ದಾರೆ. ಗುಮ್ಮಡಿ ನರಸಯ್ಯ ಒಬ್ಬರು ಜನಪರ ಕಾಳಜಿ ಇರುವಂತಹ ನಿಜಜೀವನದ ನಾಯಕ.






