ತಂತ್ರಜ್ಞಾನದ ಬೆಳವಣಿಗೆಯ ಹೆಸರಲ್ಲಿ ಸಿನಿಮಾಗಳಲ್ಲಿ ಏಕರೂಪತೆ ಹೇರಲಾಗುತ್ತಿದೆ. ಕಥನಗಳ ರಚನಾಕ್ರಮ ಸಾಯಲು ಶುರುವಾಗಿದೆ ಎಂದು ನಿರ್ದೇಶಕ ಬಿ ಎಂ ಗಿರಿರಾಜ್ ಆತಂಕ ವ್ಯಕ್ತಪಡಿಸಿದರು.
ಬೆಂಗಳೂರಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾಜಮುಖಿ ಸಾಹಿತ್ಯ ಸಮ್ಮೇಳನದಲ್ಲಿ “ವರ್ತಮಾನದ ಸಿನಿಮಾ- ತಂತ್ರಜ್ಞಾನ ಮರೆಸುತ್ತಿರುವ ಮಾನವ ಸ್ವಭಾವಗಳು” ವಿಷಯದ ಕುರಿತು ಅವರು ಮಾತನಾಡಿದರು.
ಕೃತಕ ಬುದ್ಧಿಮತ್ತೆ (ಎಐ) ಸೃಷ್ಟಿಸುತ್ತಿರುವ ಆತಂಕ ಹಂಚಿಕೊಂಡ ಅವರು, “ಈ ಹಿಂದೆ ಬಂದಿದ್ದ ತಂತ್ರಜ್ಞಾನಗಳು ಒಂದನ್ನು ಸೃಷ್ಟಿಸಲು ಹೋಗಿ ಇನ್ನೊಂದು ಕಥಾನಕವನ್ನು ನುಂಗಿ ಹಾಕುವಂತಿರಲಿಲ್ಲ. ಆದರೆ ಇಂದು ವಿರುದ್ಧ ದಿಕ್ಕಿನಲ್ಲಿ ತಂತ್ರಜ್ಞಾನ ಸಾಗುತ್ತಿದೆ. ಎಐ ಬಂದಿದೆ ಎಂಬ ಕಾರಣಕ್ಕೆ ಎಲ್ಲವನ್ನೂ ಅದರಿಂದಲೇ ಮಾಡುವುದರಿಂದ ಕಥನವನ್ನು ಕಟ್ಟಲಾಗದು. ಈ ತಂತ್ರಾಂಶವನ್ನು ಕೊಡುವವನು ಯಾರೋ, ಖರೀದಿಸುವವನೋ ಯಾರೋ ಆದಾಗ, ವ್ಯತಿರಿಕ್ತ ಪರಿಣಾಮಗಳು ಬೀರುತ್ತವೆ. ಈ ತಂತ್ರಾಂಶದೊಳಗೆ ಕಲಾವಿದನಿದ್ದರೆ ಅದು ಬೇರೆಯ ಪರಿಣಾಮಗಳನ್ನು ತರಬಹುದು” ಎಂದು ಅಭಿಪ್ರಾಯಪಟ್ಟರು.
“ಸತ್ಯಜಿತ್ ರೇ ಅವರು ಬಡತನ ಮತ್ತು ಅದರೊಳಗೂ ಬದುಕು ಕಟ್ಟಿಕೊಳ್ಳುವ ಸೌಂದರ್ಯವನ್ನು ‘ಅಪ್ಪು’ವಿನ ಹರಿದು ಹೋದ ಬ್ಲಾಕೆಂಟ್ ಮೂಲಕ ತೋರಿಸಿದ್ದರು. ಆದರೆ ನಿರೂಪಣೆಯನ್ನು ಡಿಸೈನ್ ಮಾಡುವಲ್ಲಿ ತಂತ್ರಜ್ಞಾನದ ಹೇರಿಕೆ ಇದ್ದರೆ, ಕಥನ ಸಾಯುತ್ತದೆ, ಕಥೆಗಾರ ಸಾಯುತ್ತಾನೆ” ಎಂದು ಎಚ್ಚರಿಸಿದರು.
“ತಂತ್ರಜ್ಞಾನದ ವಿರುದ್ಧ ನಾವು ಹೋಗುತ್ತಿಲ್ಲ; ಹೋಗಲಾಗುವುದೂ ಇಲ್ಲ. ಸಿನಿಮಾದಲ್ಲಿ ಕಥೆ ಹೇಳಬೇಕೆಂದರೆ ನಾವು ಕ್ಯಾಮೆರಾ, ಲೈಟಿಂಗ್ ಮೂಲಕವೇ ಹೋಗಬೇಕು. ಆದರೆ ಇಂದು ತಂತ್ರಜ್ಞಾನವನ್ನು ಬಳಸಿ ಇಡೀ ಕಥಾನಕದ ಕುತ್ತಿಗೆ ಹಿಸುಕುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಶಾರ್ಟ್ ಹ್ಯಾಂಡ್ನಿಂದ ಟೈಪಿಂಗ್‌ಗೆ ಬದಲಾದೆವು. ಅದನ್ನು ತಂತ್ರಜ್ಞಾನದ ಬೆಳವಣಿಗೆ ಅನ್ನಬಹುದು. ಏಕೆಂದರೆ ಟೈಪಿಂಗ್ ನಮಗೆ ಕೆಲಸ ಕೊಡುತ್ತಿತ್ತು. ಆದರೆ ಎಐ ನಿಮ್ಮ ಕೆಲಸವನ್ನು ಕಿತ್ತುಕೊಳ್ಳುತ್ತಿದೆ. ಆದಷ್ಟು ಮನುಷ್ಯರನ್ನು ದೂರ ಇಡುತ್ತಿದೆ. ನೂರು ಕೋಟಿ ಜನರಲ್ಲಿ ತೊಂಬತ್ತು ಕೋಟಿ ಮಂದಿ ಉದ್ಯೋಗ ಕಳೆದುಕೊಂಡರೆ ಅತಂತ್ರ ಸ್ಥಿತಿ ನಿರ್ಮಾಣವಾಗುತ್ತದೆ. ಈ ಸ್ಥಿತಿ ನಿರ್ಮಾಣವಾದರೆ ಅತಂತ್ರರಾದವರನ್ನು ಸುಲಭವಾಗಿ ನಿಯಂತ್ರಿಸಬಹುದು ಎಂದು ಈ ವ್ಯವಸ್ಥೆ ನಿರ್ಮಾಣವಾಗುತ್ತದೆ ಎನ್ನಬಹುದು” ಎಂದರು.
ನಿರ್ದೇಶಕ ಕೆ ಎಂ ಚೈತನ್ಯ ಮಾತನಾಡಿ, “ಇಂದು ತಂತ್ರಜ್ಞಾನದ ಹೇರಿಕೆ ಎನ್ನುವುದು ಕೇವಲ ಕಲೆಗೆ ಇರುವ ಸವಾಲಲ್ಲ. ಇದು ಮನುಷ್ಯನ ಬದುಕಿನ ಸವಾಲಾಗಿದೆ. ಮೊಬೈಲ್ ಸ್ಕ್ರೀನ್ ಬಿಟ್ಟರೆ ಜಗತ್ತಿಲ್ಲವೆಂಬಂತೆ ಮಕ್ಕಳು ಬೆಳೆಯುತ್ತಿವೆ. ಕಮ್ಯುನಿಟಿ ಆಗಬೇಕಿದ್ದವರು ಕನ್ಸ್ಯೂಮರ್ (ಗ್ರಾಹಕ) ಆಗುತ್ತಿದ್ದಾರೆ. ಸ್ಪಂದನೆ ಎಂಬುದು ಇಲ್ಲವಾಗುತ್ತಿದೆ. ಚಾಟ್ ಜಿಪಿಟಿ ಮೂಲಕ ಸ್ಕ್ರಿಪ್ಟ್ ಬರೆಸುತ್ತಿದ್ದಾರೆ. ಆದರೆ ಮನುಷ್ಯನ ಸೃಜನಶೀಲತೆ ತಂತ್ರಜ್ಞಾನಕ್ಕೆ ಬರುವುದಿಲ್ಲ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅತಿಯಾದ ಇಂಟೆಲಿಜೆನ್ಸ್ ಕೂಡ ಹೌದು. ಮನುಷ್ಯನಲ್ಲಿ ಸಹಜವಾದ ತಪ್ಪುಗಳು ಇವೆ ಎಂಬುದು ಎಐಗೆ ಗೊತ್ತಾಗುವುದಿಲ್ಲ. ಒಬ್ಬ ಹೀರೋ ಕೇವಲ ಸತ್ಯವಂತನೇ ಆಗಿರುವುದಿಲ್ಲ. ಆತ ಎಲ್ಲೋ ಒಂದು ಕಡೆ ಸುಳ್ಳು ಹೇಳುತ್ತಿರುತ್ತಾನೆ. ಲಂಪಟ ಆಗುತ್ತಿರುತ್ತಾನೆ. ಇದನ್ನು ಒಬ್ಬ ಮನುಷ್ಯ ಮಾತ್ರ ಬರೆಯಲು ಸಾಧ್ಯ. ಆದರೆ ಚಾಟ್ ಜಿಪಿಟಿ ಇದನ್ನೆಲ್ಲ ಬರೆಯಲು ಸಾಧ್ಯವಿಲ್ಲ” ಎಂದು ವಿವರಿಸಿದರು.
“ಈ ತಂತ್ರಜ್ಞಾನವೆಲ್ಲವೂ ಒಂದು ಉತ್ತಂಗಕ್ಕೆ ಹೋಗುತ್ತದೆ. ಆಗ ಎಲ್ಲರೂ ತಿರುಗಿ ರಂಗಭೂಮಿ ಕಡೆಗೆ ಬರುತ್ತಾರೆ. ಮನುಷ್ಯನಿಗೆ ಜೀವಂತ ಅಭಿನಯ ಇಷ್ಟವಾಗುತ್ತದೆ ಹೊರತು, ತಂತ್ರಜ್ಞಾನವಲ್ಲ. ಇದೆಲ್ಲವೂ ಉತ್ತುಂಗಕ್ಕೆ ಹೋಗುವುದು ಒಳ್ಳೆಯದೇ. ಯಾಕೆಂದರೆ ಅದರಿಂದ ಮನುಷ್ಯತ್ವಕ್ಕೂ ಒಳ್ಳೆಯದಾಗುತ್ತದೆ” ಎಂದು ಆಶಿಸಿದರು.
ಇದನ್ನೂ ಓದಿ: ಸಮಕಾಲೀನ ಸಂಗೀತದಲ್ಲಿ ಪ್ರಯೋಗಗಳ ಪಾತ್ರ ಹೆಚ್ಚು: ಎಂ ಡಿ ಪಲ್ಲವಿ
“ಆಟಂ ಬಾಂಬ್ ತಯಾರಿಸಿದ್ದು ಮಾನವ ಕುಲಕ್ಕೆ ಎಷ್ಟು ಅಪಾಯ ತಂದಿತೋ ಅಷ್ಟೇ ಡೇಂಜರಸ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್. ಮಕ್ಕಳು ಫ್ರೆಂಡ್ಸ್ ಜೊತೆ ಮಾತನಾಡೋ ಬದಲು, ಚಾಟ್ ಜಿಪಿಟಿ ಜೊತೆ ಮಾತನಾಡುತ್ತಿದ್ದಾರೆ. ಥೆರಪಿಸ್ಟ್ ಜೊತೆ ಮಾತನಾಡಬೇಕಿದ್ದ ಮಗು, ಎಐ ಜೊತೆ ಮಾತನಾಡುತ್ತಾ ಸೂಸೈಡ್ಗೆ ಪ್ರೇರಣೆ ಪಡೆದಿರುವುದು ವರದಿಯಾಗಿದೆ. ಇದೆಲ್ಲವನ್ನು ತಡೆಯಬೇಕಾದರೆ ಅಂತಾರಾಷ್ಟ್ರೀಯ ಮಟ್ಟದ ನೀತಿಗಳನ್ನು ರೂಪಿಸಬೇಕಿದೆ. ಇಲ್ಲವಾದರೆ ಮನುಷ್ಯ ಮನುಷ್ಯನಾಗಿ ಉಳಿಯುವುದಿಲ್ಲ” ಎಂದು ಭವಿಷ್ಯ ನುಡಿದರು.
ನಿರ್ದೇಶಕಿ ಚಂಪಾ ಶೆಟ್ಟಿ ಮಾತನಾಡಿ, “ತಂತ್ರಜ್ಞಾನದ ಬೆಳವಣಿಗೆಯಿಂದಲೇ ಸೃಷ್ಟಿಯಾದ ರೀಲ್ಸ್ ಈಗ ಎಲ್ಲರ ಜೀವನದ ಭಾಗವಾಗಿದೆ. ಮಕ್ಕಳಲ್ಲಿ ತಾಳ್ಮೆ ಎನ್ನುವುದೇ ಹೊರಟು ಹೋಗಿದೆ. ಇದರ ಪರಿಣಾಮವಾಗಿ ಹಾಗೂ ತಂತ್ರಜ್ಞಾನ ಮತ್ತಷ್ಟು ಬೆಳೆದಂತೆ ರೀಲ್ಸ್‌ನ ಗಾತ್ರ ಮತ್ತಷ್ಟು ಚಿಕ್ಕದಾಗಲಿದೆ. ಅಲ್ಲಿ ಮನುಷ್ಯನ ಮೇಲೆ ಉಂಟಾಗುವ ಪರಿಣಾಮ ನಿತ್ಯದ ಜೀವನದಲ್ಲೂ ಕಾಣಸಿಗುತ್ತದೆ. ಸಾಧ್ಯವಾದಷ್ಟು ಕಡಿಮೆ ಸಮಯದಲ್ಲಿ ವಿಷಯ ತಿಳಿದುಕೊಳ್ಳಲು ಅಪೇಕ್ಷಿಸುತ್ತಾರೆ. ಆದರೆ ಎರಡು ಗಂಟೆಯಲ್ಲಿ ಮಾಡಬೇಕಾದ ಕಥೆಯನ್ನು ಅರ್ಧಗಂಟೆಯಲ್ಲಿ ಹೇಳುವುದು ಸಮಸ್ಯಾತ್ಮಕ. ಅದು ಕೃತಿಗೆ ಮಾಡುವ ಮೋಸ. ಒಂದೂವರೆ ಗಂಟೆಯಾದರೆ ಮಾತ್ರ ನಾಟಕಕ್ಕೆ ಹೋಗುತ್ತೇವೆ. ಕಡಿಮೆ ಟೈಮ್ ನಲ್ಲಿದ್ದರೆ ಮಾತ್ರ ಸಿನಿಮಾ ನೋಡುತ್ತೇವೆ ಎನ್ನುವ ಲೆಕ್ಕಾಚಾರಗಳು ನಡೆಯುತ್ತವೆ. ಕೃತಿಯ ಅಂಶವನ್ನು ಟೈಮ್ನಲ್ಲಿ ಅಳೆಯುವುದು ದುರಂತ ಅನಿಸುತ್ತದೆ” ಎಂದು ಬೇಸರ ವ್ಯಕ್ತಪಡಿಸಿದರು.





