ಮದರ್ ಸೆಂಟಿಮೆಂಟ್ ಚಿತ್ರಗಳು ಸಾಮಾನ್ಯ. ಆದರೆ ಈ ಚಿತ್ರದಲ್ಲಿ ನಿರ್ದೇಶಕ ಜಗನ್ನಾಥ್ ತಂದೆಯ ಕತೆ ಹೇಳಿದ್ದಾರೆ. ಎಲ್ಲಿಯೂ ವಾಚ್ಯ ಎನಿಸದ ಕತೆ ಭಾವನಾತ್ಮಕವಾಗಿ ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತಾ ಹೋಗುತ್ತದೆ...
‘ಹೊಂದಿಸಿ ಬರೆಯಿರಿ’ ಚೊಚ್ಚಲ ಸಿನಿಮಾದಲ್ಲೇ ಸಾಕಷ್ಟು ಭರವಸೆ ಮೂಡಿಸಿದ್ದವರು ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್. ಈಗ 2026ರ ವರ್ಷಾರಂಭದ ಮೊದಲ ದಿನ ‘ತೀರ್ಥರೂಪ ತಂದೆಯವರಿಗೆ’ ಚಿತ್ರದೊಂದಿಗೆ ತೆರೆಗೆ ಮರಳಿದ್ದಾರೆ. ಇಲ್ಲಿ ಕೂಡ ಅವರು ಮೊದಲ ಸಿನಿಮಾದ ಹದವಿದೆ. ಗಟ್ಟಿಯಾದ ಚಿತ್ರಕಥೆ ಇದೆ. ಕಲಾವಿದರು ಹಾಗೂ ತಂತ್ರಜ್ಞರನ್ನು ಸೊಗಸಾಗಿ ದುಡಿಸಿಕೊಂಡಿದ್ದಾರೆ. ಒಂದೊಳ್ಳೆಯ ಫ್ಯಾಮಿಲಿ ಎಮೋಷನಲ್ ಡ್ರಾಮಾ ಆಗಿ ‘ತೀರ್ಥರೂಪ ತಂದೆಯವರಿಗೆ’ ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತದೆ.
ಚಿತ್ರದ ಕಥಾನಾಯಕ ಪೃಥ್ವಿ ಸಂಚಾರಿ ಸೋಷಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್. ಅವನ ತಾಯಿ ಜಾನಕಿ. ಇವರ ಬದುಕಿಗೊಂದು ವಿಷಾದದ ಛಾಯೆಯಿದೆ. ಅಮ್ಮನ ಕುರಿತ ಪೃಥ್ವಿಯ ಅಸಮಾಧಾನದ ಭೂಮಿಕೆಯೊಂದಿಗೆ ಶುರುವಾಗುವ ಕತೆಯ ಬಗ್ಗೆ ಸಹಜವಾಗಿಯೇ ಪ್ರೇಕ್ಷಕರಲ್ಲಿ ಕುತೂಹಲ ಮೂಡುತ್ತದೆ. ಅಲ್ಲಿಂದ ಮುಂದೆ ಒಂದೊಂದೇ ಪಾತ್ರಗಳು ಪರಿಚಯವಾಗುತ್ತಾ ಹೋಗುತ್ತವೆ. ಪ್ರತೀ ಪಾತ್ರಗಳ ಜೊತೆಜೊತೆಗೆ ಕತೆಯೂ ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತಾ ಹೋಗುತ್ತದೆ. ನಿರ್ದೇಶಕ ಜಗನ್ನಾಥ್ ಸಮಾಧಾನದಿಂದ ಕತೆಯನ್ನು ನಿರೂಪಿಸುತ್ತಾ ಹೋಗುತ್ತಾರೆ. ತಂದೆಯ ಹುಡುಕಾಟದ ಅವಸರದಲ್ಲಿಯೂ ಇಲ್ಲೊಂದು ಸಾವಧಾನದ ನಡೆ!
ಮೂಡಿಗೆರೆಯಿಂದ ಶುರುವಾಗುವ ಕತೆ ಮೈಸೂರು, ಕೊಚ್ಚಿ, ಮೇಘಾಲಯ ಹಾದು ಅಮೆರಿಕಾದವರೆಗೂ ಕರೆದೊಯ್ಯುತ್ತದೆ. ಆಯಾ ಪ್ರದೇಶಗಳ ಜೊತೆ ಅಲ್ಲಿನ ನೇಟಿವಿಟಿಯನ್ನೂ ಕತೆಗೆ ಬೆಸೆದಿರುವುದು ನಿರ್ದೇಶಕರ ಜಾಣ್ಮೆ. ಅದೇ ರೀತಿ ಅವರ ಸಾಹಿತ್ಯ ಪ್ರೀತಿಯೂ ಅಲ್ಲಲ್ಲಿ ಗೋಚರಿಸುತ್ತದೆ. ಚಿತ್ರದ ಹಾಡುಗಳಿಗೆ ಭಾವಗೀತೆಯ ಲಯವಿದೆ. ಕೆಲವೆಡೆ ಸಾಹಿತಿಗಳ ಕೋಟ್‌ಗಳನ್ನು ಬಳಕೆ ಮಾಡಿದ್ದಾರೆ. ಇವು ಕೂಡ ಪ್ರತ್ಯೇಕವಾಗಿ ಕಾಣಿಸದೆ, ಚಿತ್ರಕಥೆಗೆ ಬೆಸೆದುಕೊಂಡಂತಿವೆ ಎನ್ನುವುದು ವಿಶೇಷ. ಮದರ್ ಸೆಂಟಿಮೆಂಟ್‌ನ ಚಿತ್ರಗಳು ಆಗಿಂದಾಗ್ಗೆ ಬರುತ್ತಲೇ ಇರುತ್ತವೆ. ಇವುಗಳ ಪೈಕಿ ಹೆಚ್ಚಿನ ಪಾಲು ಮಚ್ಚು – ಲಾಂಗ್‌ಗಳ ಗಲಾಟೆಯಲ್ಲೇ ಕಳೆದುಹೋಗುತ್ತವೆ. ಈ ಚಿತ್ರದಲ್ಲಿ ಜಗನ್ನಾಥ್ ತಂದೆಯ ಕತೆ ಹೇಳಿದ್ದಾರೆ. ಎಲ್ಲಿಯೂ ವಾಚ್ಯ ಎನಿಸದ ಈ ಕತೆ ಭಾವನಾತ್ಮಕವಾಗಿ ತಟ್ಟುತ್ತದೆ.
ಇದನ್ನು ಓದಿದ್ದೀರಾ?: ಗಡಿ ವಿವಾದದ ಗರಿಗೆದರಿದ ಗಾಯ: ಸಲ್ಮಾನ್ ಖಾನ್ ಟೀಸರ್‌ಗೆ ಡ್ರ್ಯಾಗನ್ ಗರ್ಜನೆ
ನಿರ್ದೇಶಕರು ಸಾಕಷ್ಟು ಹೋಂವರ್ಕ್ ಮಾಡಿಕೊಂಡು ಚಿತ್ರಕಥೆ ಹೆಣೆದಿರುವುದು ಸಿನಿಮಾದಲ್ಲಿ ಕಾಣಿಸುತ್ತದೆ. ಕಲಾವಿದರ ಆಯ್ಕೆಯಲ್ಲೂ ಅವರು ಅಷ್ಟೇ ಹೋಂವರ್ಕ್ ಮಾಡಿದ್ದಾರೆ. ಹಾಗಾಗಿ ಪಾತ್ರಗಳು ಪ್ರೇಕ್ಷಕರಿಗೆ ಕನ್ವಿನ್ಸ್ ಆಗುತ್ತವೆ. ಬಹುದಿನಗಳ ನಂತರ ತೆರೆಗೆ ಮರಳಿರುವ ಸಿತಾರಾ, ‘ಜಾನಕಿ’ಯಾಗಿ ಇಷ್ಟವಾಗುತ್ತಾರೆ. ರಂಗಭೂಮಿ ಹಿನ್ನೆಲೆಯ ಕಲಾವಿದರಾದ ರವೀಂದ್ರ ವಿಜಯ್, ಅಜಿತ್ ಹಂದೆ, ರಾಜೇಶ್ ನಟರಂಗ ತಮ್ಮ ಪಾತ್ರಗಳನ್ನು ಜೀವಿಸಿದ್ದಾರೆ. ನಾಯಕನಟನಾಗಿ ಬೆಳ್ಳಿತೆರೆಗೆ ಪರಿಚಯವಾಗಿರುವ ನಿಹಾರ್ ಮುಖೇಶ್ ಭರವಸೆ ಮೂಡಿಸಿದರೆ, ನಾಯಕನಟಿ ರಚನಾ ಇಂದರ್ ಅವರ ವೃತ್ತಿಬದುಕಿಗೆ ಇದೊಂದು ಪ್ರಮುಖ ಸಿನಿಮಾ. ನಟಿ ರಚನಾ ಇಂದರ್ ಅವಕಾಶವನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ. ನಿರ್ದೇಶಕರ ಕತೆ ಹೇಳುವಿಕೆಗೆ ಜೋ ಕೋಸ್ಟಾ(ಸಂಗೀತ) ಮತ್ತು ದೀಪಕ್(ಛಾಯಾಗ್ರಹಣ) ಅವರು ಸೂಕ್ತ ಸಾಥ್ ಕೊಟ್ಟಿದ್ದಾರೆ. 2026ರ ಮೊದಲ ದಿನ ತೆರೆಕಂಡಿರುವ ‘ತೀರ್ಥರೂಪ ತಂದೆಯವರಿಗೆ’, ನೋಡುಗರಿಗೆ ಒಂದೊಳ್ಳೆಯ ಸದಭಿರುಚಿಯ ಸಿನಿಮಾ.
-ಶಶಿಧರ ಚಿತ್ರದುರ್ಗ





