ಕೇರಳದಲ್ಲಿ ಸಾಮಾನ್ಯವಾಗಿ ತಿನ್ನುವ ದನದ ಮಾಂಸವನ್ನು ಒಬ್ಬ ಹಿಂದು ಯುವತಿಗೆ ಬಲವಂತವಾಗಿ ತಿನ್ನಿಸಲಾಗುತ್ತದೆ. ಇದು ಇತ್ತೀಚಿಗೆ ಬಿಡುಗಡೆಯಾದ ‘ದಿ ಕೇರಳ ಸ್ಟೋರಿ-2’ ಸಿನಿಮಾದ ಟ್ರೈಲರ್‌ನಲ್ಲಿ ಬರುವ ಒಂದು ಸೀನ್. ಈ ದೃಶ್ಯ ನೋಡಿ ಬಹಳಷ್ಟು ಜನರು ನಗುತ್ತಾರೆ, ಏಕೆಂದರೆ ಕೇರಳದಲ್ಲಿ ಬೀಫ್ ತಿನ್ನುವುದು ಸಾಮಾನ್ಯ ಸಂಗತಿ. ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲ ಸಮುದಾಯಗಳಲ್ಲಿ ಇದು ಭೋಜನದ ಭಾಗವಾಗಿದೆ. ಆದರೆ, ಈ ಸಿನಿಮಾ ಇದನ್ನು ಭಯಾನಕವಾಗಿ ತೋರಿಸುತ್ತದೆ. ಜೊತೆಗೆ, ಮುಸ್ಲಿಮರು ಹಿಂದು ಮಹಿಳೆಯರನ್ನು ಬಲವಂತವಾಗಿ ಧರ್ಮಾಂತರ ಮಾಡಿ, ಐಸಿಸ್‌ಗೆ ಸೇರಿಸುವಂತೆ ಚಿತ್ರಿಸುತ್ತದೆ. ಟ್ರೈಲರ್ ನೋಡಿದ ಹಲವರು ಇದೊಂದು ಕಾಮನ್ ಸೆನ್ಸ್ ಬಳಸದ ಸ್ಕ್ರಿಪ್ಟ್ ಅಂತ ಟ್ರೋಲ್ ಮಾಡ್ತಿದ್ದಾರೆ.
ಇದರಿಂದಾಗಿ ಸಿನಿಮಾ ವೈರಲ್ ಆಗಿದೆ. ಆದರೆ ಜೊತೆಗೆ ದೊಡ್ಡ ವಿವಾದವನ್ನೂ ಸೃಷ್ಟಿಸಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಇದನ್ನು ‘ಫಾಲ್ಸ್ ಪ್ರೊಪಗಾಂಡಾ’ ಎಂದು ಕರೆದಿದ್ದಾರೆ. ದೇಶದಲ್ಲಿ ವಿಭಜನೆಯನ್ನು ಹುಟ್ಟುಹಾಕುವ, ಸಾಮರಸ್ಯವನ್ನು ಹಾಳುಮಾಡುವ ಅಂತಹ ಸಿನಿಮಾಗಳ ಮೇಲೆ UAPA (ಅನ್‌ಲಾಫುಲ್ ಆಕ್ಟಿವಿಟೀಸ್ ಪ್ರಿವೆನ್ಷನ್ ಆ್ಯಕ್ಟ್) ಕಾಯ್ದೆಯಡಿ ಕ್ರಮ ಜರುಗಿಸಬೇಕೇ? ಈ ಪ್ರಶ್ನೆ ಈಗ ದೊಡ್ಡ ಚರ್ಚೆಯ ವಿಷಯವಾಗಿದೆ.
ಇದು ಮೊದಲ ಬಾರಿಗೆ ಆಗ್ತಾ ಇರುವುದಲ್ಲ. ಚುನಾವಣೆಯ ಮುನ್ನ ಅಥವಾ ಚುನಾವಣೆಯ ಹೊತ್ತಿಗೆ ದೇಶಭಕ್ತಿ, ಧರ್ಮ, ಭಯ, ರಾಷ್ಟ್ರೀಯ ಭದ್ರತೆ, ಸಂಸ್ಕೃತಿ ಇಂತಹ ಭಾವನೆಗಳನ್ನ ಹುಟ್ಟಿಸುವ ಸಿನಿಮಾಗಳು ಬಿಡುಗಡೆ ಆಗುವುದು ವಿಶ್ವಗುರು ಕಾಲದಲ್ಲಿ ಸಾಮಾನ್ಯ ಆಗಿಬಿಟ್ಟಿದೆ.
‘ದಿ ಕೇರಳ ಸ್ಟೋರಿ’ ಸಿನಿಮಾದ ಮೊದಲ ಭಾಗ 2023ರಲ್ಲಿ ಬಿಡುಗಡೆಯಾಯಿತು. ನಿರ್ದೇಶಕ ಸುದಿಪ್ತೋ ಸೆನ್ ಅವರು ಇದನ್ನು ‘ನಿಜ ಘಟನೆಗಳಿಂದ ಪ್ರೇರಿತ’ ಎಂದು ಹೇಳಿದ್ದರು. ಸಿನಿಮಾದ ಪಾರ್ಟ್-1ನ ಟ್ರೈಲರ್‌ನಲ್ಲಿ ಲವ್ ಜಿಹಾದ್ (ಮುಸ್ಲಿಂ ಯುವಕರು ಹಿಂದು ಮಹಿಳೆಯರನ್ನು ಪ್ರೇಮದ ಹೆಸರಿನಲ್ಲಿ ಮೋಸಗೊಳಿಸಿ ಧರ್ಮಾಂತರ ಮಾಡಿ ಭಯೋತ್ಪಾದಕ ಸಂಘಟನೆಗಳಿಗೆ ಸೇರಿಸುವುದು) ಮೂಲಕ ‘ಕೇರಳದ 32,000 ಮಹಿಳೆಯರು ಐಸಿಸ್‌ಗೆ ಸೇರಿದ್ದಾರೆ’ ಎಂದು ಹೇಳಲಾಗಿತ್ತು. ಆದರೆ ಇದು ಸುಳ್ಳು ಎಂದು ಸಾಬೀತಾಯಿತು. ಸುಪ್ರೀಂ ಕೋರ್ಟ್ ಆದೇಶದ ನಂತರ ಸಿನಿಮಾ ನಿರ್ಮಾಪಕರು ‘ಇದು ಕಾಲ್ಪನಿಕ’ ಎಂದು ಡಿಸ್‌ಕ್ಲೇಮರ್ ಹಾಕಬೇಕಾಯಿತು. ವಿಮರ್ಶಕರು ಇದನ್ನು ಇಸ್ಲಾಮೋಫೋಬಿಯಾ (ಮುಸ್ಲಿಂ ವಿರೋಧಿ ಭಾವನೆ) ಹರಡುವ ಪ್ರೊಪಗಾಂಡಾ ಸಿನಿಮಾ ಎಂದು ಕರೆದರು. ಆದರೂ, ವಿವಾದಗಳಿಂದ ಜನರನ್ನು ಸೆಳೆದ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಆಯಿತು, ಆದರೆ ವೆಸ್ಟ್ ಬೆಂಗಾಲ್ ಮತ್ತು ತಮಿಳುನಾಡಿನಲ್ಲಿ ಬ್ಯಾನ್ ಮಾಡಲಾಯಿತು. ನಂತರ ಸುಪ್ರೀಂ ಕೋರ್ಟ್ ಬ್ಯಾನ್ಅನ್ನು ತೆಗೆದುಹಾಕಿತು.
ಈಗ ‘ದಿ ಕೇರಳ ಸ್ಟೋರಿ 2: ಗೋಸ್ ಬಿಯಾಂಡ್’ ಫೆಬ್ರವರಿ 27, 2026ಕ್ಕೆ ಬಿಡುಗಡೆಯಾಗಲಿದೆ. ಟ್ರೈಲರ್‌ನಲ್ಲಿ ಮೂರು ಹಿಂದು ಮಹಿಳೆಯರ ಕಥೆ ತೋರಿಸಲಾಗಿದೆ. ಅವರು ಮುಸ್ಲಿಂ ಪುರುಷರನ್ನು ಮದುವೆಯಾಗಿ ಧರ್ಮಾಂತರಗೊಳ್ಳುವುದು ಮತ್ತು ಕಷ್ಟಗಳನ್ನು ಎದುರಿಸುವುದು. ಬೀಫ್ ಸೀನ್ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಕೇರಳದಲ್ಲಿ ಬೀಫ್ ತಿನ್ನುವುದು ಸಾಮಾನ್ಯ, ಶತಮಾನಗಳಿಂದ ಇದು ಅಲ್ಲಿನ ಸಂಸ್ಕೃತಿಯ ಭಾಗ. ಹಿಂದುಗಳೂ ಸೇರಿದಂತೆ ಎಲ್ಲರೂ ಬೀಫ್ ತಿನ್ನುತ್ತಾರೆ. ಆದರೆ, ಸಿನಿಮಾ ಇದನ್ನು ಬಲವಂತವೆಂದೂ, ಧರ್ಮಾಂತರದ ಭಾಗವೆಂದೂ ತೋರಿಸುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಕೇರಳದ ಜನರು ಇದನ್ನು ಟ್ರೋಲ್ ಮಾಡುತ್ತಿದ್ದಾರೆ. ‘ಬೀಫ್ ಇಲ್ಲದೆ ಪರೋಟಾ ಹೇಗೆ ತಿನ್ನೋದು?’ ಎಂದು ಹಾಸ್ಯ ಮಾಡುತ್ತಿದ್ದಾರೆ.
ಪ್ರಶ್ನೆ ಏನೆಂದರೆ – ಸಿನಿಮಾ ಕಾಲ್ಪನಿಕ ಎಂಬ ಹೆಸರಿನಲ್ಲಿ ಒಂದು ರಾಜ್ಯದ ಜನರ ಬದುಕು, ಸಂಸ್ಕೃತಿ, ಸಮಾಜವನ್ನು ಒಟ್ಟಾಗಿ ಅನುಮಾನಾಸ್ಪದವಾಗಿ ತೋರಿಸುವ ಹಕ್ಕು ಎಷ್ಟರವರೆಗೆ? ಪ್ರತಿ ನಿರ್ದೇಶಕನಿಗೂ ಕಲಾತ್ಮಕ ಸ್ವಾತಂತ್ರ್ಯ ಇದೆ. ಆದರೆ ಆ ಸ್ವಾತಂತ್ರ್ಯ ಸಮಾಜದಲ್ಲಿ ದ್ವೇಷ, ಅನುಮಾನ, ವಿಭಜನೆ ಹುಟ್ಟಿಸುವ ಮಟ್ಟಕ್ಕೆ ಹೋದರೆ – ಅದಕ್ಕೆ ತಕ್ಕ ಶಿಕ್ಷೆ ಆಗಬೇಕಲ್ಲವೇ?
ಕೇರಳ CM ಪಿಣರಾಯಿ ವಿಜಯನ್ ಅವರು ಸಿನಿಮಾವನ್ನು ‘ಸಂಘ ಪರಿವಾರದ ಪ್ರೊಪಗಾಂಡಾ’ ಎಂದು ಕರೆದಿದ್ದಾರೆ. ಇದು ಕೇರಳದ ಸೆಕ್ಯುಲರ್ ಫ್ಯಾಬ್ರಿಕ್‌ಗೆ ಧಕ್ಕೆ ತರುತ್ತದೆ ಎಂದು ಹೇಳಿದ್ದಾರೆ. ಕೇರಳ ಹೈಕೋರ್ಟ್‌ಗೆ ಬಿಡುಗಡೆ ತಡೆ ನೀಡಬೇಕೇಂದು ಅರ್ಜಿ ಸಲ್ಲಿಕೆಯಾಗಿದೆ, ಏಕೆಂದರೆ ಸಿನಿಮಾ ಟ್ರೈಲರ್ ಕೇರಳವನ್ನು ಟೆರರಿಸಂ ಹಬ್ ಎಂದು ತೋರಿಸುತ್ತದೆ ಎಂದು ಆರೋಪ. ಕಾಂಗ್ರೆಸ್ ಮತ್ತು ಸಿಪಿಐಎಂ ಎರಡೂ ಪಕ್ಷಗಳು ಸಿನಿಮಾವನ್ನು ವಿರೋಧಿಸಿವೆ. ಇದು ಕೇರಳದ ಇಮೇಜ್ ಹಾಳುಮಾಡುವ ಪ್ರಯತ್ನ ಎಂದು ಹೇಳುತ್ತಿವೆ. ಆದರೆ, ಸಿನಿಮಾವನ್ನು ಬಿಜೆಪಿ ಸಪೋರ್ಟ್ ಮಾಡುತ್ತಿದೆ, ಇದು ನಿಜ ಘಟನೆಗಳ ಕುರಿತಾಗಿದೆ ಎಂದು ಹೇಳುತ್ತಿದೆ. ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್, ‘ಸಿನಿಮಾ ನೋಡಬೇಕೋ ಬೇಡವೋ ನಿಮ್ಮ ಇಷ್ಟ’ ಎಂದಿದ್ದಾರೆ.
ಇಂತಹ ಸಿನಿಮಾಗಳು ದೇಶದಲ್ಲಿ ವಿಭಜನೆಯನ್ನು ಹೆಚ್ಚಿಸುತ್ತವೆ. ‘ದಿ ಕೇರಳ ಸ್ಟೋರಿ’ ಮೊದಲ ಭಾಗದ ನಂತರ ಕೆಲವು ಸ್ಥಳಗಳಲ್ಲಿ ಸಾಮುದಾಯಿಕ ಘರ್ಷಣೆಗಳು ಉಂಟಾದವು. ಚುನಾವಣೆ ಸಮಯದಲ್ಲಿ ಹಿಂದು-ಮುಸ್ಲಿಂ ವಿಭಜನೆಯನ್ನು ಬಳಸಿಕೊಂಡು ಮತಗಳನ್ನು ಗಿಟ್ಟಿಸಿಕೊಳ್ಳುವುದು ಬಿಜೆಪಿಯ ರಾಜಕೀಯ ತಂತ್ರ. ಕೇರಳದಲ್ಲಿ ಬಿಜೆಪಿಗೆ ಕಡಿಮೆ ಬೆಂಬಲವಿದೆ. ಆದರೆ ಇಂತಹ ಸಿನಿಮಾಗಳ ಮೂಲಕ ಅಲ್ಲಿನ ಜನರನ್ನು ಭಾವನಾತ್ಮಕವಾಗಿ ಸೆಳೆಯುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಲೇ ಬಂದಿದೆ.
ಇದೇ ಟ್ರೈರಲ್‌ನಲ್ಲಿ ‘ಇನ್ನು 25 ವರ್ಷದಲ್ಲಿ ಇಡೀ ಭಾರತ ಒಂದು ಇಸ್ಲಾಮಿಕ್ ರಾಷ್ಟ್ರವಾಗತ್ತದೆ’ ಅಂತ ಹೇಳುವ ಒಂದು ಡೈಲಾಗ್ ಕೂಡ ಇದೆ. ಇದನ್ನ ನಾವು ಈ ಸಿನಿಮಾದಲ್ಲಿ ಮಾತ್ರವಲ್ಲ, ಬಿಜೆಪಿ ನಾಯಕರ ಹಲವು ಭಾಷಣಗಳಲ್ಲೂ ಕೇಳಿದ್ದೇವೆ. ಮುಸ್ಲಿಂ ಜನಸಂಖ್ಯೆ ಹೆಚ್ಚಾಗುತ್ತಿದೆ, ಹಿಂದುಗಳು ಜಾಸ್ತಿ ಮಕ್ಕಳನ್ನ ಮಾಡಿಕೊಳ್ಳಿ ಅಂತ ಕರೆಕೊಡುವ, ಅಂಕಿ ಅಂಶ ಗೊತ್ತಿಲ್ಲದೇ ಬಾಯಿಗೆ ಬಂದ ಹಾಗೇ ಮಾತಾಡುವ ತಲೆಯಲ್ಲಿ ಲದ್ದಿ ತುಂಬಿರೋರು ಇದ್ದಾರೆ.
ಭಾರತದ ಕೊನೆಯ ಅಧಿಕೃತ ಜನಗಣತಿ 2011ರಲ್ಲಿ ನಡೆದಿದೆ. ಅದರ ಪ್ರಕಾರ, ಹಿಂದುಗಳು 79-80% ಇದ್ದರೆ, ಮುಸ್ಲಿಮರು 14% ಇದ್ದಾರೆ. ಜನಸಂಖ್ಯಾ ತಜ್ಞರ ವಿಶ್ಲೇಷಣೆ ಪ್ರಕಾರ, ಎಲ್ಲ ಸಮುದಾಯಗಳ ಜನನ ಪ್ರಮಾಣವೂ ನಿಧಾನವಾಗಿ ಕುಸಿಯುತ್ತಿದೆ. ಮುಸ್ಲಿಂ ಸಮುದಾಯದಲ್ಲೂ ಜನನ ಪ್ರಮಾಣ ಇಳಿಮುಖದಲ್ಲೇ ಇದೆ. ಸಮಾಜದಲ್ಲಿ ಈಗಾಗಲೇ ಸೂಕ್ಷ್ಮವಾದ ಕೋಮುದ್ವೇಷದ ವಾತಾವರಣ ಇದ್ದಾಗ, ‘ಇನ್ನು 25 ವರ್ಷದಲ್ಲಿ ಭಾರತ ಮುಸ್ಲಿಂ ರಾಷ್ಟ್ರವಾಗತ್ತದೆ’ ಎಂಬಂತಹ ಡೈಲಾಗ್ ಕಥೆಗೆ ಅಗತ್ಯವಿತ್ತಾ? ಅಥವಾ ಇದು ಪ್ರಚೋದನೆಗೋಸ್ಕರ ಇಟ್ಟಿರೋದಾ?
ಇದು ಕೇವಲ ಈ ಸಿನಿಮಾ ಮಾತ್ರವಲ್ಲ. ಇತ್ತೀಚಿನ ಕೆಲವು ಬಾಲಿವುಡ್ ಸಿನಿಮಾಗಳು (ಉದಾ: ಕಾಶ್ಮೀರ್ ಫೈಲ್ಸ್) ಮುಸ್ಲಿಂಗಳನ್ನು ಭಯೋತ್ಪಾದಕರಂತೆ ತೋರಿಸಿ ವಿವಾದ ಹುಟ್ಟುಹಾಕಿವೆ. ಇದರಿಂದಾಗಿ ಸಮಾಜದಲ್ಲಿ ದ್ವೇಷ ಹರಡುತ್ತದೆ, ಸಾಮರಸ್ಯ ಹಾಳಾಗುತ್ತದೆ. ಕೇರಳದಂತಹ ಸೆಕ್ಯುಲರ್ ರಾಜ್ಯದಲ್ಲಿ ಇದು ಇನ್ನಷ್ಟು ಅಪಾಯಕಾರಿ, ಏಕೆಂದರೆ ಅಲ್ಲಿ ಹಿಂದೂ (56%), ಮುಸ್ಲಿಂ (27%), ಕ್ರಿಶ್ಚಿಯನ್ (18%) ಎಲ್ಲರೂ ಸಾಮರಸ್ಯದಿಂದ ಇದ್ದಾರೆ.
UAPA ಕಾಯ್ದೆಯಡಿ ಕ್ರಮ ಸಾಧ್ಯವೇ?
UAPA (1967ರ ಕಾಯ್ದೆ) ಭಯೋತ್ಪಾದನೆ, ದೇಶದ್ರೋಹ, ಅಕ್ರಮ ಚಟುವಟಿಕೆಗಳನ್ನು ತಡೆಯುವ ಕಾಯ್ದೆ. ಇದನ್ನು ಮುಖ್ಯವಾಗಿ ಟೆರರಿಸ್ಟ್ ಗ್ರೂಪ್‌ಗಳ ವಿರುದ್ಧ ಬಳಸುತ್ತಾರೆ. ಆದರೆ, ಕೆಲವೊಮ್ಮೆ ಇದನ್ನು ಭಾಷಣ, ಬರಹ, ಸಿನಿಮಾಗಳ ಮೇಲೆಯೂ ಬಳಸಲಾಗಿದೆ. ಉದಾಹರಣೆಗೆ, ಕೆಲವು ಜರ್ನಲಿಸ್ಟ್‌ಗಳು, ಆಕ್ಟಿವಿಸ್ಟ್‌ಗಳ ಮೇಲೆ UAPA ಅಡಿ ಪ್ರಕರಣ ದಾಖಲಿಸಿ, ಜೈಲಿಗೆ ಹಾಕಲಾಗಿದೆ. ಸಿನಿಮಾಗಳ ಮೇಲೆ UAPA ಅಪ್ಲೈ ಮಾಡುವುದು ಸಾಧ್ಯವೇ? ಕಾನೂನು ತಜ್ಞರು ಹೇಳುವಂತೆ, ಸಿನಿಮಾ ಸಾಮುದಾಯಿಕ ಘರ್ಷಣೆಗೆ ಕಾರಣವಾಗುತ್ತದೆ ಎಂದು ಸಾಬೀತಾದರೆ ಅದು ಸಾಧ್ಯ. ಆದರೆ ಸಾಮಾನ್ಯವಾಗಿ ಸಿನಿಮಾಗಳನ್ನು ಸೆನ್ಸಾರ್ ಬೋರ್ಡ್ (CBFC) ಮೂಲಕ ನಿಯಂತ್ರಿಸುತ್ತಾರೆ ಅಥವಾ ಬ್ಯಾನ್ ಮಾಡುತ್ತಾರೆ. ‘ದಿ ಕೇರಳ ಸ್ಟೋರಿ’ ಮೇಲೆ ವೆಸ್ಟ್ ಬೆಂಗಾಲ್ ಬ್ಯಾನ್ ಮಾಡಿದಾಗ, ಸುಪ್ರೀಂ ಕೋರ್ಟ್ ‘ಸಿನಿಮಾ ಹೇಟ್ ಸ್ಪೀಚ್ ಆಗಿದೆ’ ಎಂದು ಹೇಳಿ ಆದೇಶ ನೀಡಿತು. ಆದರೆ UAPA ಬಳಸಲಿಲ್ಲ. ಆದರೆ ಸುಪ್ರೀಂ ಕೋರ್ಟ್ ಇಂತಹ ಸಿನಿಮಾಗಳ ಮೇಲೆ ನಿಗಾ ಇಡಲೇಬೇಕಿದೆ. ಇಲ್ಲದಿದ್ದರೆ ದೇಶವನ್ನ ಒಡೆಯಲೇ ಬೇಕು, ಭಾರತೀಯರನ್ನ ವಿಭಜಿಸಲೇ ಬೇಕು ಎಂಬ ಧೋರಣೆ ಇಟ್ಟಿರುವ ಕೆಲವು ದೇಶದೊಳಗಿನ ಭಯೋತ್ಪಾದಕರು ದೇಶವನ್ನ ಮಾರಿಬಿಡುತ್ತಾರೆ.
ಇಂತಹ ಸಿನಿಮಾಗಳು ದ್ವೇಷ ಹರಡಿ ಘರ್ಷಣೆಗೆ ಕಾರಣವಾಗುತ್ತವೆ. UAPAಯಿಂದ ನಿರ್ಮಾಪಕರನ್ನು ಶಿಕ್ಷಿಸಿದರೆ, ಭವಿಷ್ಯದಲ್ಲಿ ಅಂತಹ ಪ್ರೊಪಗಾಂಡಾ ಕಡಿಮೆಯಾಗಬಹುದು. ದೇಶದ ಸಾಮರಸ್ಯ ರಕ್ಷಣೆಗೆ ಸಹಾಯವಾಗುತ್ತದೆ. ಕೇರಳದ ಜನರು ಸಿನಿಮಾವನ್ನು ಟ್ರೋಲ್ ಮಾಡುತ್ತಿದ್ದಾರೆ.
ದೇಶದಲ್ಲಿ ಸಿನಿಮಾಗಳ ಮೂಲಕ ದ್ವೇಷ ಹರಡುವುದು ಅಪಾಯಕಾರಿ. ‘ದಿ ಕೇರಳ ಸ್ಟೋರಿಯಂತಹ ಸಿನಿಮಾಗಳು ರಾಜಕೀಯ ಲಾಭಕ್ಕಾಗಿ ಸಮಾಜವನ್ನು ವಿಭಜಿಸುವ ಪ್ರಯತ್ನ. UAPAಯಂತಹ ಕಠಿಣ ಕಾಯ್ದೆಗಳನ್ನು ಬಳಸಿ ಇಂತಹ ವಿಭಜಕ ಸಿನಿಮಾಗಳಿಗೆ ಫುಲ್‌ಸ್ಟಾಪ್ ಇಡಲೇ ಬೇಕಿದೆ. ಚುನಾವಣೆ ಸಮೀಪಿಸುತ್ತಿರುವಾಗ ಈ ಚಿತ್ರ ಬಿಡುಗಡೆ ಮಾಡುತ್ತಿರುವವರ ಬಣ್ಣ ಕೇರಳದ ಜನ ಬಯಲು ಮಾಡಬೇಕು.




