ಇತ್ತೀಚಿನ ಹತ್ತು ವರ್ಷಗಳಲ್ಲಿ ಈ ಎಲ್ಲ ಮಾನವೀಯ ಸಾಂಸ್ಕೃತಿಕ ಮೌಲ್ಯಗಳಿಗೆ ತಿಲಾಂಜಲಿ ಇಟ್ಟಂತೆ ಕಾಣಿಸುತ್ತಿದೆ. ಭಾರತದಲ್ಲಿ ನಡೆಯುತ್ತಿರುವ ಬಹಳಷ್ಟು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ಯಾಲೆಸ್ತೀನ್ ಚಿತ್ರಗಳ ಪ್ರದರ್ಶನವನ್ನು ಒಂದು ರೀತಿಯಲ್ಲಿ ನಿರ್ಬಂಧಿಸಲಾಗಿದೆ ಎಂದು ಸ್ಪಷ್ಟವಾಗಿ ಅರ್ಥವಾಗುತ್ತಿದೆ
ಜನವರಿ 26 ರಿಂದ ಫೆಬ್ರುವರಿ 6ವರೆಗೆ ಬೆಂಗಳೂರಿನ ಲುಲುಮಾಲ್‌ನಲ್ಲಿ ನಡೆಯಲಿರುವ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಮೊಟ್ಟ ಮೊದಲ ಪತ್ರಿಕಾಗೋಷ್ಠಿ ನಡೆಯಿತು. ಅಧಿಕಾರಿಗಳ ನೇತೃತ್ವದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ (ಕೆಸಿಎ) ಅಧ್ಯಕ್ಷರಾದ ಸಾಧು ಕೋಕಿಲ ಮತ್ತು ಬಿಫೆಸ್ ನ ಅತ್ಯಂತ ಕಿರಿಯ ಕಲಾತ್ಮಕ ನಿರ್ದೇಶಕರಾಗಿರುವ ಪಿ. ಬಿ. ಮುರಳಿ ಅವರೂ ಹಾಜರಿದ್ದರು. ಆದರೆ ಚಿತ್ರೋತ್ಸವದ ವಿವರ ನೀಡಿದವರು ಹೆಚ್ಚು ಕಡಿಮೆ ಅಧಿಕಾರಿಗಳೇ ಎಂದು ಹೇಳಬಹುದು. ಈ ಪತ್ರಿಕಾಗೋಷ್ಠಿಯಲ್ಲಿ ಉಳಿದ ವಿಷಯಗಳೆಲ್ಲ ಎಂದಿನಂತೆ ಇರುವುದು ಸಾಬೀತಾಯಿತು. ಆದರೆ, ಒಂದು ಸಂಗತಿಯ ಬಗ್ಗೆ ಒಂದೆರಡು ಪತ್ರಕರ್ತರು ಕೇಳಿದ ಪ್ರಶ್ನೆಗೆ ಅಧಿಕಾರಿಗಳು, ಸಾಧು ಕೋಕಿಲ ಮತ್ತು ಮುರಳಿ ಹಾರಿಕೆಯ ಉತ್ತರ ನೀಡಿದಾಗ, ಅದು ದೊಡ್ಡ ಚರ್ಚೆಯ ವಿಷಯವೇ ಆಯಿತು. ಕೊನಗೆ ಒಬ್ಬ ಪತ್ರಕರ್ತರು, ತಮ್ಮ ಅನುಮಾನಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರತಿಕ್ರಿಯೆ ಬೇಕೇಬೇಕು ಎಂದು ಹಠ ಹಿಡಿದವರಂತೆ ಕೇಳಿದಾಗ, ಈ ಪ್ರಶ್ನೆ ಮತ್ತು ಸಮಸ್ಯೆಯನ್ನು ಸಿದ್ದರಾಮಯ್ಯನವರ ಗಮನಕ್ಕೆ ತಂದು ಅವರಿಂದ ʻಸಮರ್ಪಕʼ ಉತ್ತರ ದೊರಕಿಸಿಕೊಡುವುದಾಗಿ ಭರವಸೆ ನೀಡಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹೇಮಂತ್ ನಿಂಬಾಳ್ಕರ್ ಪತ್ರಿಕಾಗೋಷ್ಠಿಯನ್ನು ಬರ್ಕಾಸ್ತುಗೊಳಿಸಿದರು.
ಸಂಘಟಕರ ಅಸಹಾಯಕತೆ
ಹಾಗಿದ್ದರೆ, ಅಂಥ ಯಾವ ಪ್ರಶ್ನೆ ಸರ್ಕಾರ, ಅಧಿಕಾರಿಗಳು ಹಾಗೂ ಅಕಾಡೆಮಿ ಅಧ್ಯಕ್ಷರು ಮತ್ತು ಕಲಾತ್ಮಕ ನಿರ್ದೇಶಕರನ್ನು ಮುಜುಗರಕ್ಕೆ ಉಂಟು ಮಾಡಿತು ಎಂದರೆ ಅದು ಪ್ಯಾಲೆಸ್ತೀನ್ ಸಿನಿಮಾ ತೋರಿಸಲು ಬಿಫೆಸ್ ನ ಹದಿನೇಳನೇ ಆವೃತ್ತಿಗೆ ಸಾಧ್ಯವಾಗದಿರುವುದು? ಈ ಪ್ರಶ್ನೆ ಹುಟ್ಟಿಕೊಂಡಿದ್ದು ಕೂಡ, ಇತ್ತೀಚೆಗೆ ಮುಗಿದ ಕೇರಳ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕೆಲ ಚಿತ್ರಗಳನ್ನು ತೋರಿಸಲು, ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಅನುಮತಿ ನೀಡದಿರುವುದು, ಪ್ರಮುಖವಾಗಿ ಪ್ಯಾಲೆಸ್ತೀನ್ ಚಿತ್ರಗಳ ಮೇಲೆ ಒಂದು ಬಗ್ಗೆಯ ನಿರ್ಬಂಧವನ್ನೇ ಹೇರಿದ್ದು. ಕೊನೆಗೆ ಪ್ಯಾಲೆಸ್ತೀನ್ ಚಿತ್ರವೂ ಸೇರಿದಂತೆ, ಈ ರೀತಿಯ 19 ಚಿತ್ರಗಳ ಪೈಕಿ 13ನ್ನು ಪ್ರದರ್ಶಿಸಲು ಅನುಮತಿ ದೊರೆತದ್ದು, ಮುಖ್ಯಮಂತ್ರಿ ಪಿನರಾಯಿ ವಿಜಯನ್ ತೋರಿಸಿದ ದಾರ್ಷ್ಟ್ಯತೆಯಿಂದ. ಅವರು ಕೇಂದ್ರ ಸರ್ಕಾರದ ಆದೇಶವನ್ನು ಧಿಕ್ಕರಿಸಿ ಎಲ್ಲ ಚಿತ್ರವನ್ನು ತೋರಿಸುವ ಧೈರ್ಯ ತೋರಿದಾಗ. ಇದೇ ನಿಲುವನ್ನು ಈಗ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ತೋರಿಸುತ್ತಾರೆಯೇ? ಎಂಬ ಪ್ರಶ್ನೆ ಅಧಿಕಾರಿಗಳು, ಸಾಧು ಕೋಕಿಲ, ಹಾಗೂ ಮುರಳಿ ಅವರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿತು ಎಂದು ಹೇಳಬಹುದು.
ಪ್ಯಾಲೆಸ್ತೀನ್ ಚಿತ್ರಗಳಿಗೆ ನಿರ್ಬಂಧ
ಈ ರೀತಿ ನಿರ್ಬಂಧವನ್ನು ಎದುರಿಸುತ್ತಿರುವ ಪ್ಯಾಲೆಸ್ತೀನ್‌ನ ಚಿತ್ರಗಳಾದರೂ ಯಾವುದು ಎಂದರೆ; Palestine̳36̧, The Voice of Hind Raja, All That is Left of You, ಈ ಚಿತ್ರಗಳನ್ನು ತೋರಿಸಲು ಕೇಂದ್ರದ ವಿದೇಶಾಂಗ ಸಚಿವಾಲಯದ ಅನುಮತಿ ದೊರೆಯಲಿಲ್ಲ ಎಂಬುದು ಸಂಘಟಕರ ಸಮಜಾಯಿಷಿ. ಹಾಗೆಂದು ಚಿತ್ರೋತ್ಸವದಲ್ಲಿ ಒಳ್ಳೆಯ ಚಿತ್ರಗಳನ್ನು ತೋರಿಸುತ್ತಿಲ್ಲ ಎಂದು ಅರ್ಥವಲ್ಲ. ಅರ್ಥಪೂರ್ಣವಾದ ನೂರಾರು ಚಿತ್ರಗಳು ಈ ಸಂಚಿಕೆಯ ಬಿಫೆಸ್ ನಲ್ಲಿ ಇವೆ. ಆದರೆ ಈ ಲೇಖಕನ ಪ್ಯಾಲೆಸ್ತೀನ್ ಕುರಿತಾದ ಚಿತ್ರಗಳ ಬಗ್ಗೆ ಸಮರ್ಪಕವಾದ ಉತ್ತರ ದಕ್ಕುವುದು ಕಷ್ಟ ಎಂಬ ಅರಿವಿನ ಹಿನ್ನೆಲೆಯಲ್ಲಿ ಇಲ್ಲೊಂದಿಷ್ಟು ವಿವರಗಳನ್ನು ನೀಡುವ ಅಗತ್ಯವಿದೆ.

ಬದ್ಧತೆ ಅಳಿಸಿದ ರಾಜತಾಂತ್ರಿಕ ಸೂಕ್ಷ್ಮತೆ
ಭಾರತದಲ್ಲಿ ನಡೆಯುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳು ಒಂದು ದಶಕದ ಹಿಂದೆ ತಮ್ಮ ಕಲಾತ್ಮಕ ಬದ್ಧತೆ ಮತ್ತು ಜಾಗತಿಕ ಮಾನವೀಯತೆ, ಪ್ರತಿಭಟನೆಯ ಅಸ್ತ್ರವಾಗಿ ಸಿನಿಮಾ ಎಂಬ ನಿಲುವಿನಿಂದ ಜಗತ್ತಿನಾದ್ಯಂತ ತನ್ನದೇ ಆದ ಒಂದು ಛಾಪು ಮೂಡಿಸಿದ್ದವು. ಆದರೆ, ಇತ್ತೀಚಿನ ಹತ್ತು ವರ್ಷಗಳಲ್ಲಿ ಈ ಎಲ್ಲ ಮಾನವೀಯ ಸಾಂಸ್ಕೃತಿಕ ಮೌಲ್ಯಗಳಿಗೆ ತಿಲಾಂಜಲಿ ಇತ್ತಂತೆ ಕಾಣಿಸುತ್ತಿದೆ. ಭಾರತದಲ್ಲಿ ನಡೆಯುತ್ತಿರುವ ಬಹಳಷ್ಟು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ಯಾಲೆಸ್ತೀನ್ ಚಿತ್ರಗಳ ಪ್ರದರ್ಶನವನ್ನು ಒಂದು ರೀತಿಯಲ್ಲಿ ನಿರ್ಬಂಧಿಸಲಾಗಿದೆ ಎಂದು ಸ್ಪಷ್ಟವಾಗಿ ಕಾಣಿಸುತ್ತದೆ. ಖ್ಯಾತ ಸಾಹಿತಿ ಮತ್ತು ಚಿಂತಕ ರಘುನಂದನ ಅಂಥ ಕೆಲವರನ್ನು ಹೊರತುಪಡಿಸಿದರೆ, ಪ್ಯಾಲೆಸ್ತೀನ್ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸುವುದಕ್ಕೆ ನಿಮ್ಮ ಚಿಂತಕರ ಸಮುದಾಯ ಒಂದರ್ಥದಲ್ಲಿ ಅರ್ಥಪೂರ್ಣ ಮೌನವಹಿಸಿದಂತೆ ಕಾಣಿಸುತ್ತಿದೆ. ಪ್ಯಾಲೆಸ್ತೀನ್‌ನಲ್ಲಿ ನಡೆಯುತ್ತಿರುವ ʼನರಮೇಧʼ ಇಸ್ರೇಲ್ ಮತ್ತು ಅಮೆರಿಕದ ದೊಡ್ಡಣ್ಣ ನೀತಿ, ಸದ್ಯಕ್ಕೆ ನಮ್ಮ ದೇಶದಲ್ಲಿರುವ ರಾಜತಾಂತ್ರಿಕ ಸೂಕ್ಷ್ಮ ಸ್ಥಿತಿ ಹಾಗೂ ಕೇಂದ್ರದ ಬಿಜೆಪಿ ಸರ್ಕಾರದ ರಾಜಕೀಯ ನಿಲುವುಗಳು ಒಂದು ರೀತಿಯಲ್ಲಿ ಭೀತಿಯ ವಾತಾವರಣವನ್ನೇ ನಿರ್ಮಿಸಿದೆ.
ಪ್ಯಾಲೆಸ್ತೀನ್ ವಾಸ್ತವ ಚಿತ್ರಕ್ಕೆ ಕನ್ನಡಿ
ಹಾಗಾಗಿ ಬಿಫೆಸ್ ಪ್ಯಾಲೆಸ್ತೀನ್ ಚಿತ್ರಗಳನ್ನು ಪಕ್ಕಕ್ಕೆ ಸರಿಸಿರುವುದು, ಕೇವಲ ಚಿತ್ರಗಳನ್ನು ಆಯ್ಕೆ ಮಾಡಿದ ಸಮಸ್ಯೆಯೆಂದು ಖಂಡಿತವಾಗಿ ಹೇಳಲಾಗದು. ಇದು ಸಂಘಟಕರ ಸ್ವಯಂ ರಾಜಕೀಯ ಆಯ್ಕೆ ಎನ್ನಬಹುದು. ಸಾಕ್ಷ್ಯಚಿತ್ರಗಳಿಂದ ಕಥಾಚಿತ್ರಗಳವರೆಗೆ ಪ್ಯಾಲೆಸ್ತೀನ್ ಚಿತ್ರಗಳ ಯೂರೋಪ್, ಲ್ಯಾಟಿನ್ ಅಮೆರಿಕ ಮತ್ತು ಏಷ್ಯಾದ ಹಲವು ದೇಶಗಳಲ್ಲಿ ಪ್ರದರ್ಶನಗೊಂದು ನೊಡಿದವರಿಗೆ ಪ್ಯಾಲೆಸ್ತೀನ್ ನ ಹೃದಯವಿದ್ರಾವಕ ಸ್ಥಿತಿಯ ಪರಿಸ್ಥಿತಿಯನ್ನು ಪರಿಚಯಿಸಿದೆ. ಹೃದಯ ಹಿಂಡುವಂಥ ನೋವಿನ ದೃಶ್ಯಗಳನ್ನು ಕಂಡವರು ಮೊಮ್ಮಲ ಮರುಗುತ್ತಿದ್ದಾರೆ. ಇಂದಿನ ಪ್ಯಾಲೆಸ್ತೀನ್ ಸಿನಿಮಾ ನೋಡಿದವರ ಪ್ರಕಾರ ಪ್ರಸಕ್ತ ಸಂಕಟ ಮತ್ತು ಸಂಕಷ್ಟದ ದಿನಗಳ ದಾಖಲೆ ಎನ್ನುತ್ತಿದ್ದಾರೆ. ಇಂಥ ಚಿತ್ರಗಳು ಪ್ರತಿಭಟನೆಯ ಒಂದು ಅಸ್ತ್ರ ಅನ್ನಿಸುವಂತೆ ಮಾಡುತ್ತಿದೆ. ಆದರೆ ಈ ಚಿತ್ರಗಳು ಭಾರತದ ಯಾವುದೇ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳದಿರುವುದು ನಿಜಕ್ಕೂ ಪ್ರಜಾಪ್ರಭುತ್ವದ ದುರಂತ. ಈ ಜಾಲಕ್ಕೆ ಬಿಫೆಸ್ ಕೂಡ ಹೊರತಾಗಲಿಲ್ಲವಲ್ಲ ಎಂಬ ನೋವು ಅನೇಕ ಪ್ರೇಕ್ಷಕರನ್ನು ಕಾಡುತ್ತಿದೆ. ಏಕೆಂದರೆ, ಒಂದು ಕಾಲದಲ್ಲಿ ಬಿಫೆಸ್ ವಿಶ್ವದ ವಿದ್ಯಮಾನಗಳಿಗೆ ಧ್ವನಿಯಾಗಿ, ವಸಾಹತಿಕರಣ ವಿರೋಧದ ಏಕತೆ ಇಂಥ ಚಿತ್ರಗಳನ್ನು ಪ್ರದರ್ಶಿಸದಿರುವುದು ನೈತಿಕ ಕುಸಿತ ಮತ್ತು ಸಾಂಸ್ಥಿಕ ಹಿನ್ನಡೆಯನ್ನು ಸೂಚಿಸುತ್ತದೆ.
ನೆಹರೂ ಅಲಿಪ್ತ ನೀತಿ ಮತ್ತು ಪ್ಯಾಲೆಸ್ತೀನ್
ಹಾಗೆ ನೋಡಿದರೆ ಭಾರತ ಆರಂಭದಿಂದಲೂ, ಪ್ಯಾಲೆಸ್ತೀನ್ ಅನ್ನು ಬೆಂಬಲಿಸುತ್ತಲೇ ಬಂದಿದೆ. ನೆಹರೂ ಕಾಲದಿಂದ ನಡೆದುಬಂದಿರುವ ಅಲಿಪ್ತ ನಿಲುವಿನಿಂದಾಗಿ ಭಾರತ ಪ್ಯಾಲೆಸ್ತೀನ್ ಗೆ ರಾಜತಾಂತ್ರಿಕ ಮನ್ನಣೆ ದೊರೆತಿದೆ. ಚಲನಚಿತ್ರ ಸಮಾಜಗಳು, ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳು, ವಿಶ್ವವಿದ್ಯಾಲಯಗಳು ಅಂದಿನಿಂದಲೂ, ಪ್ಯಾಲೆಸ್ತೀನ್ ಚಿತ್ರಗಳನ್ನು ಪ್ರದರ್ಶಿಸಿಕೊಂಡೇ ಬಂದಿವೆ. ಜೊತೆಯಲ್ಲಿ ಇರಾನ್, ಲ್ಯಾಟಿನ್ ಅಮೆರಿಕ ಮತ್ತು ಆಫ್ರಿಕದಂಥ ತೃತೀಯ ವಿಶ್ವದ ಸಾಂಸ್ಕೃತಿಕ ತಿಳಿವಳಿಕೆಯ ಬಗ್ಗೆ ಅನುಸಂಧಾನ ನಡೆಸುತ್ತಲೇ ಇವೆ.

ಇಸ್ರೇಲ್ ಪರವಾಗಿರುವ ಕೇಂದ್ರ ಸರ್ಕಾರ
ಇಂಥ ಪರಂಪರೆ ಈಗ ನಿಧಾನವಾಗಿ ಅಳಿಸಿ ಹೋಗುತ್ತಿವೆ. ಏಕೆಂದರೆ ಪ್ರಸಕ್ತ ಬಿಜೆಪಿ ನೇತೃತ್ವದ ಬಲಪಂಥೀಯ ಸರ್ಕಾರ ಇಸ್ರೇಲ್ ಜೊತೆಗೆ ಸಹಜವಾಗಿಯೇ strategi̧c ideological ಮತ್ತು military ಕಾರಣಗಳಿಗಾಗಿ ಗುರುತಿಸಿಕೊಂಡಿರುವುದರಿಂದ ಸಾಂಸ್ಕೃತಿಕ ಸಂಸ್ಥೆಗಳ ಮೇಲೆ ಇನ್ನಿಲ್ಲದಂತೆ ತನ್ನ ಹಿಡಿತ ಸಾಧಿಸಿದೆ. ಪ್ರಜಾಸತ್ತಾತ್ಮಕವಾದ ಹಾಗು ಸಂವಿಧಾನದ ಅಡಿಯಲ್ಲಿ ರೂಪಗೊಂಡ ಸಂಸ್ಥೆಗಳನ್ನು ನಿಧಾನವಾಗಿ ತನ್ನ ಅಡಿಯಾಳಾಗಿಸಿಕೊಂಡಿದೆ. ಅದಕ್ಕೆ ತೀರಾ ಇತ್ತೀಚಿನ ನಿದರ್ಶನವೆಂದರೆ, ಕೇಂದ್ರ ಸಾಹಿತ್ಯ ಅಕಾದೆಮಿ ಪ್ರಶಸ್ತಿಗಳ ಪ್ರಕಟಣೆಯನ್ನು ತಡೆಹಿಡಿದಿರುವುದು. ಇನ್ನು ತನ್ನ ವಾರ್ತಾ ಮತ್ತು ಪ್ರಸಾರ ಖಾತೆಯಡಿ ಬರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ತನ್ನಿಚ್ಛೆಯಂತೆ ನಡೆಸುವುದು ಕೇಂದ್ರ ಸರ್ಕಾರಕ್ಕೆ ಕಷ್ಟವೇನಲ್ಲ. ಹೀಗೆ ಇಸ್ರೇಲ್ ಪರವಾಗಿ ನಿಂತಿರುವ, ನೇತನ್ಯಾಹುವನ್ನು ಆರಾಧಿಸುವ ಸರ್ಕಾರ ಹೇಗೆ ತಾನೆ ಇಸ್ರೇಲ್ ಶತ್ರು ರಾಷ್ಟ್ರವಾದ ಪ್ಯಾಲೆಸ್ತೀನ್ ಪರವಾದ ನಿಲುವಿನ ಚಿತ್ರಗಳ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡುತ್ತದೆ? ಅಲ್ಲವೇ? ಹಾಗಾಗಿ ಇದಕ್ಕೆಲ್ಲ ಲಿಖಿತ ನಿಷೇಧ ಅಗತ್ಯವಿಲ್ಲ. ಕೇಂದ್ರ ಸರ್ಕಾರದ ಅಥವಾ ರಾಜ್ಯ ಸರ್ಕಾರಗಳ ಮೌನವೇ ಸೆನ್ಸಾರ್ ಕೆಲಸ ಮಾಡುತ್ತದೆ ಅಂದುಕೊಳ್ಳಬಹುದು. ಹಾಗಾಗಿ ಪ್ಯಾಲೆಸ್ತೀನ್ ಚಿತ್ರಗಳನ್ನು ಪ್ರದರ್ಶಿಸದಿರುವುದು ಕೇವಲ ವಿದೇಶಾಂಗ ನೀತಿಯ ಕಾರಣಕ್ಕಂತೂ ಅಲ್ಲವೇ ಅಲ್ಲ. ನಿಜ ಅರ್ಥದಲ್ಲಿ, ಈ ನಿಲುವು ನಮ್ಮ ದೇಶದ ಸಾಂಸ್ಕೃತಿಕ ಸಂಸ್ಥೆಗಳು ಇನ್ನೊಂದು ರೀತಿಯಲ್ಲಿ ರೂಪಾಂತರವಾಗುತ್ತಿವೆ ಎಂದು ಸಂದೇಶವನ್ನು ರವಾನಿಸುವುದು ಎನ್ನಬಹುದು.
ರಾಜಕೀಯ ನರೇಟೀವ್ ಹಣೆಪಟ್ಟಿ
ಗೋವಾದಲ್ಲಿ ಪ್ರತಿವರ್ಷ ನಡೆಯುತ್ತಿರುವ International Film Festival of India (IFFI)ಗೆ ಒಂದು ಪ್ರಜಾಸತ್ತಾತ್ಮಕ ಒಕ್ಕೂಟ ವ್ಯವಸ್ಥೆಯ ಚಹರೆ ಇದ್ದರೂ, ಅದರ ಚಿತ್ರಗಳ ಆಯ್ಕೆಯನ್ನು ಗಮನಿಸಿದರೆ ದೆಹಲಿಯನ್ನು ಯಾವುದೇ ರೀತಿಯಲ್ಲೂ ಅಸಂತುಷ್ಟಗೊಳಿಸದಂಥ ನೀತಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿರುವುದು ಢಾಳಾಗಿ ಕಾಣಿಸುತ್ತದೆ. ಪ್ಯಾಲೆಸ್ತೀನ್ ಚಿತ್ರಗಳ ಪ್ರದರ್ಶನವನ್ನು ನಿರ್ಬಂಧಿಸುತ್ತಿರುವುದು ಕಲಾತ್ಮಕ ಕಾರಣಕ್ಕಾಗಿಯಂತೂ ಅಲ್ಲವೇ ಅಲ್ಲ. ಅದು ಕೇಂದ್ರ ಸರ್ಕಾರದ ಜಾಗತಿಕ ರಾಜಕಾರಣದ ನರೇಟೀವ್ ಗೆ ಧಕ್ಕೆಯಾಗಬಹುದೆಂಬ ಭಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳನ್ನು ಕಾಡುತ್ತಿರಬಹುದು. ಪ್ಯಾಲೆಸ್ತೀನ್ ಚಿತ್ರಗಳನ್ನು ಪ್ರದರ್ಶಿಸದಂತೆ ಅಧಿಕೃತ ಸುತ್ತೋಲೆ ಇದಕ್ಕೆ ಬೇಕಾಗಿಲ್ಲ. ಇದಕ್ಕೆಂದೇ ಹೊರಗುತ್ತಿಗೆ ಪಡೆದಿರುವ ಚಿತ್ರಗಳನ್ನು ಆಯ್ಕೆ ಮಾಡುವ ಮಂಡಳಿ, ಸಲಹಾ ಸಮಿತಿ ಸದಸ್ಯರು ಹಾಗೂ, ಸರ್ಕಾರದ ಅಧಿಕಾರಿಗಳ ನಿರ್ದೇಶನವಷ್ಟೇ ಸಾಕು. ಚಿತ್ರೋತ್ಸವಗಳು ರಾಜಕೀಯೇತರವಾಗಿ ಕಲಾತ್ಮಕ ಕಾರಣಕ್ಕಾಗಿ ಚಿತ್ರಗಳನ್ನು ಆಯ್ಕೆ ಮಾಡಬೇಕು, ಅವು ರಾಜಕೀಯ ನರೇಟೀವ್‌ಗಳ ಸಂಘರ್ಷದ ವೇದಿಕೆಯಾಗಬಾರದು ಎನ್ನುವ ಸಂಘಟನಾ ಸಮಿತಿಯ ವಾದ ಅವುಗಳು ಆಯ್ಕೆ ಮಾಡುವ ಹುಸಿ ರಾಷ್ಟ್ರೀಯತೆ ಬಿತ್ತುವ ಮಿಲಿಟರಿ ನರೇಟೀವ್ ಗಳನ್ನು ಹೇಳುವ ಅಥವ ಹಿಂದುತ್ವದ ಅಜೆಂಡಾಗೆ ಪೂರಕವಾಗಿರುವ ಅಧಿಕಾರಯುಕ್ತ ಸರ್ಕಾರಗಳ ವಿಷಯ ಸೂಚಿಗಳಿಗೆ ಪೂರಕವಾಗಿರುವುದು ಅವರ ಸಮರ್ಥನೆಯನ್ನೇ ಬುಡಮೇಲು ಮಾಡುತ್ತವೆ ಎನ್ನುವುದಕ್ಕೆ, ಬುಧವಾರ ಅಧಿಕಾರಿಗಳು ಕಲಾತ್ಮಕ ನಿರ್ದೇಶಕರ ಸಮರ್ಥನೆಯೇ ಸಾಕ್ಷಿ. ಅಭಿಪ್ರಾಯ ಭೇದ ಹೊಂದಿರುವ ಚಿತ್ರಗಳಿಗೆ ಮಾತ್ರ ರಾಜಕೀಯ ನರೇಟೀವ್ ಹಣೆಪಟ್ಟಿ ಅಂಟಿಸಬಹುದು.

ಹಾಗಿದ್ದರೆ ಪ್ಯಾಲೆಸ್ತೀನ್ ಸಿನಿಮಾಗಳನ್ನು ಹೊರಗಿಡುವ ಮೂಲಕ ಇಂಥ ಅಂತಾರಾಷ್ಟ್ರೀಯ ಚಿತ್ರಗಳು ಏನನ್ನು ತಾನೇ ಸಾಧಿಸಲು ಸಾಧ್ಯ ಹೇಳಿ? ತನ್ನ ಸಾಂಸ್ಕೃತಿಕ ಪ್ರಜಾಸತ್ತಾತ್ಮಕ ಬಹುತ್ವದ ಸಂಸ್ಕೃತಿಗೆ ಧಕ್ಕೆ ತಂದುಕೊಳ್ಳಬಹುದು ಅಷ್ಟೆ. ತಮಗಿರುವ ಮಿತಿಗಳ ನಡುವೆಯೇ, ಸಾಂಸ್ಕೃತಿಕ ದಮನನೀತಿಯಡಿಯಲ್ಲಿಯೇ, ತಮ್ಮನ್ನು ನಿರಂತರವಾಗಿ ಗಮನಿಸುತ್ತಿರುವ ಕಣ್ಣುಗಳನ್ನು ತಪ್ಪಿಸಿ, ಪ್ಯಾಲೆಸ್ತೀನ್ ಚಿತ್ರಕರ್ತರು, ಹೊರತರುತ್ತಿರುವ ಚಿತ್ರಗಳು ಹೇಳುವ ನಿಜದ ಪ್ರತಿರೂಪಗಳನ್ನು ತೋರಿಸದೇ, ನಮ್ಮ –ಪ್ರೇಕ್ಷಕರನ್ನು ವಂಚಿಸಬಹುದು ಅಷ್ಟೆ. ಹಾಗಾಗಿ ನಮಗೆ ದಕ್ಕುವುದು ಕೇವಲ ಶುದ್ಧೀಕರಿಸಿದ, ಯಾವ ಪ್ರತಿಭಟನೆಗೂ ದಾರಿ ಮಾಡಿಕೊಡದಂಥ, ಯಾವುದೇ ನೈತಿಕ ತುರ್ತಿಲ್ಲದಂಥ ಚಿತ್ರಗಳನ್ನು ತೋರಿಸಿ, ರಂಜಿಸುವ ಹುನ್ನಾರ ಇದು ಎಂದು ಸ್ಪಷ್ಟವಾಗಿ ಅರ್ಥವಾಗುತ್ತದೆ. ಇನ್ನೊಂದು ರೀತಿಯಲ್ಲಿ ಭಾರತದ ಚಿತ್ರಕರ್ತರು ಸೆನ್ಸಾರ್ ವಿರುದ್ಧ, ಜಾತಿ, ಧರ್ಮಗಳನ್ನು ಮತೀಯ ಗಲಭೆಗಳನ್ನು ಚಿಕಿತ್ಸಕ ದೃಷ್ಟಿಯಿಂದ ನೋಡುವುದು ಈ ಸಂದರ್ಭದಲ್ಲಿ ಕಷ್ಟ ಎಂಬ ನಂಬಿಕೆ ಮೂಡಿಸಿ, ಅವರಿಗೆ ಅಂಥ ಚಿತ್ರಗಳನ್ನು ತಯಾರಿಸದಂಥ ಪರಿಸ್ಥಿತಿಯನ್ನು ನಿರ್ಮಾಣ ಮಾಡುವುದು. “ಈಗ ನಮ್ಮ ದೇಶದಲ್ಲಿ ಗೋವಿಂದ್ ನಿಹಲಾನಿಯವರ ʻತಮಸ್ʼ ಈಗ ಮಾಡಲು ಸಾಧ್ಯವೇ? ಇಲ್ಲ. ಈಗೇನಿದ್ದರೂ, ಕಾಶ್ಮೀರ್ ಫೈಲ್ಸ್, ಕೇರಳ ಫೈಲ್ಸ್, ಬಂಗಾಳ ಫೈಲ್ಸ್ ನಂಥ ಚಿತ್ರಗಳನ್ನು ತಯಾರಿಸಬೇಕು. ಅವುಗಳಿಗೆ ಚಿತ್ರೋತ್ಸವಗಳಲ್ಲಿ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿ ಎಲ್ಲವೂ ದೊರೆಯುತ್ತದೆ. ಇನ್ನು ಉಳಿದವರು ನೊಂದವರು, ಅದರ ವಿರುದ್ಧದ ನರೇಟೀವ್ ಗಳ ಚಿತ್ರವನ್ನು ಮಾಡುವ ಅಪಾಯವನ್ನು ಯಾರು ಮೈಮೇಲೆ ಎಳೆದುಕೊಳ್ಳುತ್ತಾರೆ”, ಎಂದು ಹೆಸರು ಬಹಿರಂಗಪಡಿಸಲು ಬಯಸದ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕರೊಬ್ಬರು ಹೇಳುವುದಷ್ಟೇ ಅಲ್ಲ, ತಮ್ಮ ಬಳಿ ಕಳೆದ ಹತ್ತು ವರ್ಷಗಳಿಂದ ಚಿತ್ರ ಮಾಡಲಾಗದ ಚಿತ್ರಕಥೆಯೊಂದನ್ನು ಈ ಲೇಖಕರ ಮುಂದೆ ತಳ್ಳಿ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು.
ಈಗ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳ ಕಲಾತ್ಮಕ ನಿರ್ದೇಶಕರು, ತೀರ್ಪುಗಾರರು, ಸಿನಿಮಾವೂ ಸೇರಿದಂತೆ ಸಾಂಸ್ಕೃತಿಕ ಸಂಗತಿಗಳ ಬಗ್ಗೆ ಬರೆಯುವ ಪತ್ರಕರ್ತ, ಸಾರ್ವಜನಿಕ ಬುದ್ದಿಜೀವಿಗಳು ಎಲ್ಲರ ತಟಸ್ಥ ನಿಲುವು ಮತ್ತು ನೈತಿಕ ಬದ್ಧತೆ ಎಲ್ಲವೂ ಪ್ರಶ್ನೆಯಾಗಿಯೇ ಉಳಿದಿರುವುದು, ಈ ಕಾರಣಕ್ಕಾಗಿ. ಇಂಥ ಪ್ರಶ್ನೆಯನ್ನು ಪತ್ರಿಕಾಗೋಷ್ಠಿಯಲ್ಲಿ ಕೇಳಿದವರನ್ನು ದೇಶದ್ರೋಹಿಗಳೆಂದು ಹಣೆಪಟ್ಟಿ ಕಟ್ಟಿದರೂ, ಯಾರೂ ಆಶ್ಚರ್ಯಪಡಬೇಕಿಲ್ಲ. ಈಗ ಬಿಫೆಸ್ ಸೇರಿದಂತೆ, ಇತರ ಅಂತಾರಾಷ್ಟ್ರೀಯ ಚಿತ್ರೋತ್ಸವಗಳು ಪ್ಯಾಲೆಸ್ತೀನ್ ಚಿತ್ರಗಳನ್ನು ಪ್ರದರ್ಶಿಸಲಿಲ್ಲವೆಂದರೆ, ಏನಾಗಬಹುದು. ಇನ್ನು ಮುಂದೆ ಅನಾನುಕೂಲವಾಗುವಂಥ ವಾಸ್ತವಗಳನ್ನು ಕುರಿತು ಚಿತ್ರವನ್ನು ಮಾಡುವುದನ್ನೇ ನಿಲ್ಲಿಸಿ, ಅಧಿಕಾರದ ಮನವೊಲಿಸುವ, ಧಾರ್ಮಿಕ ಭಾವನೆಗಳನ್ನು ಕೆರಳಿಸುವ, ಮತೀಯ ಹಿಂಸೆಗಳಿಗೆ ಕಾರಣವಾಗುವಂಥ, ಬಹುತ್ವದ ಕಲ್ಪನೆ ನಾಶವಾಗಿ ಏಕ ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಗಳನ್ನು ಮಾಡಿದರೆ ಕ್ಷೇಮ ಮತ್ತು ಲಾಭದಾಯಕ ಎಂದು ಚಿತ್ರಕರ್ತರು ಯೋಚಿಸಿ, ತಮಗೆ ತಾವೇ ಮೋಸ ಮಾಡಿಕೊಳ್ಳಬಹುದು.
ಕೇರಳದ ಧೈರ್ಯ
ಈ ಕಾರಣಕ್ಕಾಗಿಯೇ ಕೇರಳ ಅಂತಾರಾಷ್ಟ್ರೀಯ ಚಿತ್ರೋತ್ಸವವನ್ನು ಅಭಿನಂದಿಸಬೇಕೆನ್ನಿಸುತ್ತದೆ. 2000ದಿಂದ 2010ರವರೆಗೆ ಕೇರಳ ಚಿತ್ರೋತ್ಸವ ಪ್ಯಾಲೆಸ್ತೀನ್ ಚಿತ್ರಗಳನ್ನು ಪ್ರದರ್ಶಿಸಿದಾಗ ಚಿತ್ರಮಂದಿರಗಳು ತುಂಬಿ ತುಳಕಿ, ನೊಡಲಾಗದವರು ಗದ್ದಲವನ್ನೇ ಎಬ್ಬಿಸಿದರು. ಈ ಬಾರಿ ಅವರು ಕೆಲವು ಚಿತ್ರಗಳನ್ನು ಪ್ರದರ್ಶಿಸಲು ಯತ್ನಿಸಿದಾಗ ಅದಕ್ಕೆ ತಡೆಯುಂಟಾಯಿತು. ಆದರೆ, ಕೇರಳ ಚಿತ್ರೋತ್ಸವ ಅದನ್ನು ಮೀರಿ ಧೈರ್ಯ ತೋರಿಸಿತು. ಸರ್ಕಾರವೇ ಚಿತ್ರೋತ್ಸವದ ಬೆಂಬಲಕ್ಕೆ ನಿಂತಿತು. ಆದರೆ ಕೇಂದ್ರದ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವಾಲಯ ಸರಿಯಾದ ಸಮಯಕ್ಕೆ ಚಿತ್ರಗಳ ಪಟ್ಟಿಯನ್ನು ನೀಡಿಲ್ಲ ಎಂದು ಕಾರಣ ನೀಡಿತು. ಆ ಕಾರಣ ನಿಜವೇ ಇರಬಹುದು. ಆದರೆ, ನಿಜವಾದ ಪ್ರಜಾಸತ್ತಾತ್ಮಕ ಸರ್ಕಾರವಾದರೆ, ಪ್ರೇಕ್ಷಕರ ಮತ್ತು ಐತಿಹಾಸಿಕ, ಕಲಾತ್ಮಕ ಮತ್ತು ಮಾನವ ಕುಲದ ಒಳಿತಿನ ಕಾರಣಕ್ಕೆ ಅದಕ್ಕೆ ಅನುಮತಿ ನೀಡಬಹುದಿತ್ತು. ಕೊನೆಗೆ ನಿರ್ವಾಹವಿಲ್ಲದೆ, ಕೆಲವು ಚಿತ್ರಗಳಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿತು ಎನ್ನುವುದು ಸತ್ಯ, No Other Laņd ̧ The Present Mediterranean Fever ̧ Foragers ̧ Ghost Hunting ̧ Gaza Mon Amoour Palestine 36 ̧ All That Left of You ಚಿತ್ರಗಳನ್ನು ಯಾತಕ್ಕಾಗಿ ಭಾರತದ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನವನ್ನು ನಿರಾಕರಿಸಲಾಯಿತು ಎಂಬ ಪ್ರಶ್ನೆಗೆ ಇನ್ನೂ ಉತ್ತರ ದಕ್ಕಿಲ್ಲ. ದಕ್ಕುವುದೂ ಇಲ್ಲ. ಈ ಚಿತ್ರಗಳನ್ನು ನೋಡಲಾಗದ್ದಕ್ಕೆ ನೋವಂತೂ ಇದೆ. ಹಾಗಾಗೇ ಪತ್ರಿಕಾಗೋಷ್ಠಿಯಲ್ಲಿ ಈ ಪ್ರಶ್ನೆಯನ್ನು ಎತ್ತುವುದು ಅನಿವಾರ್ಯವಾಯಿತು.
ನಮ್ಮ ಪ್ರಶ್ನೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು, ಉತ್ತರ ನೀಡುವುದಾಗಿ ಹೇಮಂತ್ ನಿಂಬಾಳ್ಕರ್ ಭರವಸೆಯನ್ನು ನೀಡಿದ್ದಾರೆ. ಬಿಫೆಸ್ ಆರಂಭವಾಗುವುದರಲ್ಲಿ ಉತ್ತರ ದೊರಕುವುದೇ ಕಾದು ನೋಡಬೇಕಿದೆ.

ಮುರಳೀಧರ ಖಜಾನೆ
ಹಿರಿಯ ಪತ್ರಕರ್ತ. ಉದಯವಾಣಿ, ಪ್ರಜಾವಾಣಿ, ದಿ ಹಿಂದೂ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಸದ್ಯ ಸ್ವತಂತ್ರ ಪತ್ರಕರ್ತರಾಗಿದ್ದಾರೆ.




