‘ತುಳ್ಳುವಧೋ ಇಲಮೈ’ ಸಿನಿಮಾ ಖ್ಯಾತಿಯ ತಮಿಳು ನಟ ಅಭಿನಯ್ ಕಿಂಗರ್ ಅವರು ನಿಧನರಾಗಿದ್ದಾರೆ. ದೀರ್ಘ ಕಾಲದಿಂದ ಯಕೃತ್ತಿನ ಸಮಸ್ಯೆಗಳಿಂದ ಬಳಲುತ್ತಿದ್ದ 44 ವರ್ಷದ ಅಭಿನಯ್ ಸೋಮವಾರ ಬೆಳಿಗ್ಗೆ ಚೆನ್ನೈನಲ್ಲಿ ನಿಧನರಾಗಿದ್ದಾರೆ.
ಅಭಿನಯ್ ಕಿಂಗರ್ ಅವರಿಗೆ ಯಾವುದೇ ಕುಟುಂಬ ಸದಸ್ಯರು ಇಲ್ಲದ ಕಾರಣದಿಂದಾಗಿ ದಕ್ಷಿಣ ಭಾರತೀಯ ಕಲಾವಿದರ ಸಂಘದ ಸದಸ್ಯರು ನಟನ ಅಂತ್ಯಕ್ರಿಯೆ ನಡೆಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಇದನ್ನು ಓದಿದ್ದೀರಾ? ಬಾಲಿವುಡ್‌ನ ಹಿರಿಯ ನಟ ಗೋವರ್ಧನ ಅಸ್ರಾನಿ ನಿಧನ
2002ರಲ್ಲಿ ನಿರ್ಮಾಪಕ ಕಸ್ತೂರಿ ರಾಜಾ ಅವರ ‘ತುಳ್ಳುವಧೋ ಇಲಮೈ’ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅಭಿನಯ್ ಅವರು ನಟ ಧನುಷ್ ಜೊತೆಗೆ ನಟಿಸಿದ್ದಾರೆ.
ಜ್ಜಂಕ್ಷನ್ (2002), ಸಿಂಗಾರ ಚೆನ್ನೈ (2004), ಪೊನ್ ಮೇಗಲೈ (2005), ಸೊಲ್ಲ ಸೊಲ್ಲ ಇನಿಕ್ಕುಂ (2009), ಪಲೈವನ ಸೊಲ್ಲ (2009), ತುಪ್ಪಕ್ಕಿ (2012) ಮತ್ತು ಅಂಜಾನ್ (2014) ನಂತಹ ಚಿತ್ರಗಳಲ್ಲಿಯೂ ಅಭಿನಯ್ ನಟಿಸಿದ್ದಾರೆ.
ಅಭಿನಯ್ ಅವರು ದೀರ್ಘಕಾಲದಿಂದ ಪಿತ್ತಜನಕಾಂಗದ ಕಾಯಿಲೆಯಿಂದ ಬಳಲಿದ್ದು, ಇದರಿಂದಾಗಿ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಒಳಗಾಗಿದ್ದರು. ಅವರು ಜನರಿಂದ ಆರ್ಥಿಕ ಸಹಾಯವನ್ನು ಕೋರಿದ್ದ ಸುದ್ದಿ ಕೆಲವು ತಿಂಗಳ ಹಿಂದೆ ಬಹಿರಂಗವಾಗಿತ್ತು. ಈ ವೇಳೆ ತುಳ್ಳುವಧೋ ಇಲಮೈ ಸಹನಟ ಧನುಷ್ ಚಿಕಿತ್ಸೆಗಾಗಿ 5 ಲಕ್ಷ ರೂ. ನೀಡಿದ್ದರು.





