ಕನ್ನಡ ಮೇರು ನಟ ಡಾ. ವಿಷ್ಣುವರ್ಧನ್ ಅವರ ಅಂತ್ಯ ಸಂಸ್ಕಾರವಾದ ಅಭಿಮಾನ್ ಸ್ಟುಡಿಯೋದಲ್ಲೇ ವಿಷ್ಣು ಪುಣ್ಯಭೂಮಿ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿ ವಿಷ್ಣು ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದಾರೆ. ಅಭಿಮಾನಿಗಳ ಪ್ರತಿಭಟನೆಗೆ ನಟ ಸುದೀಪ್ ಕೂಡ ಬೆಂಬಲ ಸೂಚಿಸಿದ್ದಾರೆ.
ಭಾನುವಾರ ಡಾ. ವಿಷ್ಣುವರ್ಧನ್ ಅಭಿಮಾನಿ ಸಂಘಗಳ ಒಕ್ಕೂಟವು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದೆ. ಮೇರು ನಟನಿಗೆ ಪುಣ್ಯಭೂಮಿ ನಿರ್ಮಾಣ ಮಾಡಬೇಕು. ವಿಷ್ಣು ಪುಣ್ಯಭೂಮಿ ವಿಚಾರದಲ್ಲಿ ಸರ್ಕಾರದ ಮೌನ ಖಂಡನೀಯ ಎಂದು ಕಿರಿಕಾರಿದ್ದಾರೆ.
ಪ್ರತಿಭಟನೆಗೆ ಬೆಂಬಲ ನೀಡಿರುವ ನಟ ಸುದೀಪ್, “ಡಾ.ವಿಷ್ಣು ಅಪ್ಪಾಜಿ ಸ್ಮಾರಕ ಕುರಿತು ನನ್ನದು ಅಂದು -ಇಂದು ಒಂದೇ ನಿಲುವು. ಮೈಸೂರಿನಲ್ಲಿ ಸ್ಮಾರಕವಾದರೂ, ಅಂತ್ಯ ಸಂಸ್ಕಾರಗೊಂಡ ಸ್ಥಳದಲ್ಲಿಯೂ ಪುಣ್ಯಭೂಮಿ ಆಗಬೇಕು. ಈ ವಿಷಯವಾಗಿ ಅಭಿಮಾನಿ ಸಂಘಗಳ ಹೋರಾಟಕ್ಕೆ ನನ್ನ ಬೆಂಬಲವಿದೆ. ನಾನೂ ನಿಮ್ಮಲ್ಲೊಬ್ಬ ಎಂದು ಭಾವಿಸಿ ನೀವು ಮುನ್ನಡೆಯಿರಿ. ನನ್ನಿಂದಾಗುವ ಎಲ್ಲವನ್ನೂ ಪುಣ್ಯಭೂಮಿಗಾಗಿ ಮಾಡುವೆ” ಎಂದು ಟ್ವೀಟ್ ಮಾಡಿದ್ದಾರೆ.
ಅಲ್ಲದೆ, ಭಾನುವಾರ ಸಂಜೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಕೂಡ ಸುದೀಪ್ ಭೇಟಿ ಮಾಡಿದ್ದಾರೆ. ಆದರೆ, ಅವರ ಭೇಟಿಯ ವಿಚಾರ ಏನೆಂಬುದು ತಿಳಿದುಬಂದಿಲ್ಲ. ವಿಷ್ಣು ಪುಣ್ಯಭೂಮಿಯ ಬಗ್ಗೆ ಚರ್ಚೆ ನಡೆಸಿರುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಜೊತೆಗೆ, ಕೆಸಿಸಿ ಟೂರ್ನಮೆಂಟ್ ಉದ್ಘಾಟನೆಗೆ ಡಿಕೆ ಶಿವಕುಮಾರ್ ಅವರನ್ನ ಆಹ್ವಾನಿಸಲು ಹೋಗಿದ್ದರು ಎಂದೂ ಹೇಳಲಾಗಿದೆ.




