ಝುಬಿನ್ ಗರ್ಗ್ ಅಸ್ಸಾಮಿ ಜನರಿಗೆ ಮಗನಾಗಿ, ಅಣ್ಣನಾಗಿ ಜನಪದದಲ್ಲಿ ಬೆರೆತು ಹೋಗಿದ್ದರು. ಜನರ ಎದೆಬಡಿತವೇ ಆಗಿದ್ದರು. ಅವರು 38 ಸಾವಿರ ಗೀತೆಗಳನ್ನು ಹಾಡಿದ್ದು, ಆ ಹಾಡುಗಳು ಆತ ತನ್ನ ಜನರೊಂದಿಗೆ ನಡೆಸಿದ ಆತ್ಮೀಯ ಸಂಭಾಷಣೆಗಳೇ ಆಗಿವೆ
ಈಶಾನ್ಯದ ದೊಡ್ಡ ರಾಜ್ಯ ಅಸ್ಸಾಂ ಕಳೆದ ನಾಲ್ಕು ದಿನಗಳಿಂದ ಶೋಕದಲ್ಲಿ ಮುಳುಗೆದ್ದು ಕಣ್ಣೀರು ಹರಿಸಿದೆ. ತನ್ನ ಜನಪರ ಗಾಯಕನ ಸಾವಿನ ಬೇಗುದಿಯಲ್ಲಿ ರಾಜ್ಯಕ್ಕೆ ರಾಜ್ಯವೇ ಪರಿತಾಪ ಪಡುತ್ತಿದೆ. ತನ್ನ ಗಾಯಕನೊಬ್ಬನಿಗೆ ಹೀಗೆ ಜನಸಾಗರವೇ ಉಕ್ಕಿ ಹರಿದು ದುಃಖಿಸಿದ್ದು ಇತಿಹಾಸದಲ್ಲಿ ಅತಿ ವಿರಳ. ಆತನಿಗಾಗಿ ನಿಸರ್ಗವೇ ಕಣ್ಣೀರು ಸುರಿಸಿದಂತೆ ಮಳೆಗರೆಯಿತು. ಇಡೀ ಅಸ್ಸಾಂಅನ್ನು ದುಃಖದಲ್ಲಿ ಮುಳುಗುವಂತೆ ಮಾಡಿದ್ದು, ಖ್ಯಾತ ಅಸ್ಸಾಮಿ ಗಾಯಕ, 52 ವರ್ಷದ ಝುಬಿನ್ ಗರ್ಗ್ ಅವರ ಸಾವು.
ಗಾಯಕ ಝುಬಿನ್ ಗರ್ಗ್ ಸಿಂಗಾಪುರದಲ್ಲಿ ಸ್ಕೂಬಾ ಡೈವಿಂಗ್ ಮಾಡುವಾಗ ಸಮುದ್ರಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಅವರ ಸಾವಿಗೆ ಇಡೀ ದೇಶ ಕಂಬನಿ ಮಿಡಿಯುತ್ತಿದೆ. ಅಸ್ಸಾಂ ಕಣ್ಣೀರಿನ ನದಿ ಹರಿಸಿದೆ. 2006ರಲ್ಲಿ, ಬಾಲಿವುಡ್‌ನಲ್ಲಿ ರಿಲೀಸ್ ಆದಂತಹ ‘ಗ್ಯಾಂಗ್‌ಸ್ಟರ್’ ಸಿನಿಮಾದಲ್ಲಿನ ‘ಯಾ ಅಲಿ ರೆಹಮ್ ಅಲಿ’ ಹಾಡು ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತ್ತು. ಇಂದಿಗೂ ಈ ಹಾಡು ಕೇಳಿದವರು, ಗುನುಗೋದು ನಿಜ. ಜೊತೆಗೆ ಕನ್ನಡದ ‘ಹುಡುಗಾಟ’ ಸಿನಿಮಾದ ‘ಒಮ್ಮೊಮ್ಮೆ ಹೀಗೂ ಆಗುವುದು’ ಹಾಡು ಹಾಡಿದ್ದ ಖ್ಯಾತ ಅಸ್ಸಾಮಿ ಝುಬಿನ್ ಗರ್ಗ್. ಅವರು ‘ಯಾ ಅಲಿ’ ಹಾಡಿನ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದ್ದರು. ಅವರ ನಿಧನವು ಭಾರತದ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ.
ಸಿಂಗಾಪುರದಲ್ಲಿ ಆಯೋಜಿಸಿದ್ದ ಮ್ಯೂಸಿಕ್ ಕಾನ್ಸರ್ಟ್‌ಗಾಗಿ ತೆರಳಿದ್ದ ಝುಬಿನ್ ಗರ್ಗ್, ಕಾನ್ಸರ್ಟ್‌ಗೂ ಮೊದಲಿನ ಬಿಡುವಿನ ವೇಳೆಯಲ್ಲಿ ಸಿಂಗಾಪೂರದ ಪ್ರಸಿದ್ದ ಪ್ರವಾಸಿ ಆಕರ್ಷಣ ಕೇಂದ್ರವಾಗಿರುವ ಸ್ಕೂಬಾ ಡೈವಿಂಗ್‌ಗೆ ತೆರಳಿದ್ದಾರೆ. ಸಮುದ್ರದ ಆಳದಲ್ಲಿ ವಿಹರಿಸಿ ಜಲಚರಗಳು, ಸೌಂದರ್ಯ ವೀಕ್ಷಿಸುವ ಸ್ಕೂಬಾ ಡೈವಿಂಗ್, ಗಾಯಕ ಝುಬಿನ್‌ಗೆ ಮುಳುವಾಗಿದೆ. ಸಿಂಗಾಪುರದಲ್ಲಿ ಸ್ಕೂಬಾ ಡೈವಿಂಗ್ ಸಮಯ ಸಮುದ್ರದಲ್ಲಿ ಪ್ರಜ್ಞೆ ಕಳೆದುಕೊಂಡು, ಪ್ರಾಣ ಬಿಟ್ಟಿದ್ದಾರೆ. ಅವರು ಲೈಫ್ ಜ್ಯಾಕೆಟ್ ಧರಿಸದೇ ಈಜುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆನ್‌ಲೈನ್‌ನಲ್ಲಿ ಹರಡಿರುವ ವಿಡಿಯೋದಲ್ಲಿ ಝುಬಿನ್ ಗರ್ಗ್ ನೀರಿನಲ್ಲಿ ಈಜುತ್ತಿರುವುದು ಕಾಣಿಸುತ್ತದೆ. ಆದರೆ, ಯಾವುದೇ ಸುರಕ್ಷತಾ ಉಪಕರಣ ಧರಿಸಿಲ್ಲ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು, “ಲೈಫ್‌ಗಾರ್ಡ್‌ಗಳು ಗರ್ಗ್‌ಗೆ ಲೈಫ್ ಜ್ಯಾಕೆಟ್ ಧರಿಸಲು ಸೂಚಿಸಿದ್ದರು” ಎಂದು ತಿಳಿಸಿದ್ದಾರೆ. ಮೊದಲು ಇದನ್ನು ಸ್ಕೂಬಾ ಡೈವಿಂಗ್ ಅಪಘಾತ ಎಂದು ಭಾವಿಸಲಾಗಿತ್ತು. ಆದರೆ, ಅದನ್ನು ತಳ್ಳಿಹಾಕಿದ ಅಸ್ಸಾಂ ಮುಖ್ಯಮಂತ್ರಿ ಈಜುವಾಗ ಲೈಫ್ ಜಾಕೆಟ್ ಧರಿಸದೆ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದ್ದರು. ಆದರೆ, ಅವರ ಸಾವು ನಿಗೂಢದಿಂದಲೇ ಕೂಡಿದೆ.
ಝುಬಿನ್ ಗರ್ಗ್ ಅಸ್ಸಾಮಿ ಜನರಿಗೆ ಮಗನಾಗಿ, ಅಣ್ಣನಾಗಿ ಜನಪದದಲ್ಲಿ ಬೆರೆತು ಹೋಗಿದ್ದರು. ಜನರ ಎದೆಬಡಿತವೇ ಆಗಿದ್ದರು. ಅವರು 38 ಸಾವಿರ ಗೀತೆಗಳನ್ನು ಹಾಡಿದ್ದು, ಈ ಹಾಡುಗಳು ಆತ ತನ್ನ ಜನರೊಂದಿಗೆ ನಡೆಸಿದ ಆತ್ಮೀಯ ಸಂಭಾಷಣೆಗಳೇ ಆಗಿವೆ. ಆತನೇ ನೇರವಾಗಿ ಅವರ ಮನಮುಟ್ಟಿ ಭುಜತಟ್ಟಿ ಮಾತಾಡಿಸಿದಂತಹ ಹಾಡುಗಳು. ಅಸ್ಸಾಮಿ ಜನರ ಬದುಕಿನ ಸೌಂಡ್ ಟ್ರ್ಯಾಕ್ ಝುಬಿನ್ ದಾ ಎನ್ನುತ್ತಾರೆ ಜನಪ್ರಿಯ ಯ್ಯೂಟೂಬ್ ವ್ಲಾಗರ್ ಡಾ. ಮೆಡೂಸಾ.
ಅಹೋಮ್ ಜನಜೀವನದ ಎಲ್ಲ ಏರಿಳಿತಗಳು, ಸುಖ ದುಃಖಗಳು, ಪ್ರೀತಿ, ಪ್ರೇಮ, ವಿರಹ, ಭಗ್ನಪ್ರೇಮ, ಕಲಹ, ಹುಟ್ಟು, ಸಾವು, ಆಶೆ ನಿರಾಶೆ, ಹತಾಶೆಗಳು, ನಿಗೂಢ ಭಾವಗಳು ಝುಬಿನ್ ಬರೆದು ಹಾಡಿದ ಗೀತೆಗಳಲ್ಲಿ ರಾಗಗಳಲ್ಲಿ ಜೀವಂತವಾಗಿ ಧ್ವನಿಸಿವೆ. ನಾನಾ ಕಾರಣಗಳಿಗಾಗಿ ತೊರೆದು ಹೊರಗೆ ಜೀವಿಸಿರುವ ಅಸ್ಸಾಮಿ ಜನರ ಪಾಲಿಗೆ ಝುಬಿನ್ ದಾ ಹಾಡುಗಳು ತಮ್ಮ ತಾಯ್ನಾಡಿನೊಂದಿಗೆ ಬೆಸೆಯುವ ಜೀವಂತ ಕೊಂಡಿ. ದುಃಸ್ವಪ್ನ ಕಂಡು ಬೆಚ್ಚಿ ಬಿದ್ದವರನ್ನು ಸಂತೈಸುವ ತಾಯಿ. ಝುಬಿನ್ ಎಂದರೆ ಹುಟ್ಟಿ ಬೆಳೆದ ಮನೆ. ಅಸ್ಸಾಮಿ ಜನರ ಗುಂಡಿಗೆಯಲ್ಲಿ ಹುಟ್ಟಿ ನಡೆಯುವ ಹೋರಾಟ. ಅವರ ಕೆಚ್ಚು, ಅವರ ಬಲ. ಖುದ್ದು ಹಲವು ನಿರಾಶೆಗಳನ್ನು ದುರಂತಗಳನ್ನು ಎದುರಿಸಿದ್ದರೂ ತನ್ನ ಜನರ ಹೋರಾಟಗಳ ಹಿಂದಿರುವ ಶಕ್ತಿಯೇ ಆಗಿ ಹೋಗಿದ್ದರು.
ಅಂದಹಾಗೆ, ಝುಬಿನ್ ಎಂದರೆ ಖಡ್ಗ ಎಂದರ್ಥ. ಆತ ತನ್ನ ಜನರ ಮನಸು ಮಿದುಳುಗಳನ್ನು ಮಸೆದು ಕತ್ತಿಯಾಗಿಸಿದವರು. ಒಬ್ಬರು ಮತ್ತೊಬ್ಬರ ಸುಖ ದುಃಖಗಳಿಗೆ ಮಿಡಿಯುವಂತೆ ಪ್ರೇರೇಪಿಸಿದವರು.

ತಾನು ಹುಟ್ಟಿದ್ದ ಬ್ರಾಹ್ಮಣ ಜಾತಿಯನ್ನು ಸಾರ್ವಜನಿಕವಾಗಿ ತಿರಸ್ಕರಿಸಿದ್ದ ಝುಬಿನ್, ತನ್ನನ್ನು ತಾನು ಮಾನವನೆಂದೂ ಕಲಾವಿದನೆಂದೂ ಕರೆದುಕೊಂಡಿದ್ದರು. ಏನಾದರೂ ಆಗು ಮೊದಲು ಮಾನವನಾಗು ಎಂದು ಕನ್ನಡದ ರಸಋಷಿ ಕುವೆಂಪು ಹೇಳಿರುವಂತೆ. ದಲಿತ ದಮನಿತ ನಿರ್ಲಕ್ಷಿತರ ಪರವಾಗಿ ದನಿಯೆತ್ತಿದ್ದರು. ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ವಿರುದ್ಧದ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದರು. ಜೀವಜಂತುಗಳು, ಗಿಡಮರಗಳು, ಪ್ರಕೃತಿ ಸಂರಕ್ಷಣೆಗಾಗಿ ವಾದಿಸಿದ್ದರು. ಅಧಿಕಾರದ ನೆಲೆಗಳನ್ನು ಅನಾದರದಿಂದ ಕಾಣುವಷ್ಟು ನೈತಿಕ ಶಕ್ತಿ ಆತನಿಗಿತ್ತು. ತನ್ನ ಅಹೊಮ್ ಜನಸಮುದಾಯದ ಹೃದಯಗಳಲ್ಲೂ ಇಂತಹುದೇ ನಿರ್ಭೀತಿಯನ್ನು ಬಿತ್ತಿದ್ದರು. ಅಂಧ ಆಳ್ವಿಕೆ, ಭ್ರಷ್ಟ ಆಡಳಿತಗಾರರು, ಸಿರಿಸಂಪತ್ತುಗಳನ್ನು ಬೆಂಬತ್ತಿ ಓಡುವವರು, ಜನಸಾಮಾನ್ಯರ ಸ್ಪಪ್ನಗಳು, ಬದುಕು ಸಾವುಗಳನ್ನು ನಿರ್ಧರಿಸುವವರು ವಿಲಾಸದ ಬಾಹುಗಳಲ್ಲಿ ಮೈ ಮರೆತಿರುವರು ಎಂದು ಟೀಕಿಸಿ ಹಾಡಿದ್ದರು.
ಝುಬಿನ್ ಗರ್ಗ್ ವಿವಿಧ ಸಂಗೀತ ವಾದ್ಯಗಳನ್ನು ನುಡಿಸುವುದರಲ್ಲಿ ಪರಿಣಿತರಾಗಿದ್ದರು. ಧೋಲ್, ಡ್ರಮ್ಸ್, ದೋತಾರ, ಗಿಟಾರ್, ಹಾರ್ಮೋನಿಕಾ, ಹಾರ್ಮೋನಿಯಂ, ಮ್ಯಾಂಡೋಲಿನ್, ಕೀಬೋರ್ಡ್ ಹಾಗೂ ತಬಲಾ ಸೇರಿದಂತೆ 12 ಸಂಗೀತ ವಾದ್ಯಗಳನ್ನು ನುಡಿಸುತ್ತಿದ್ದರು. ತಮ್ಮ ಮೂರನೇ ವಯಸ್ಸಿನಲ್ಲಿ ಹಾಡಲು ಪ್ರಾರಂಭಿಸಿದರು. ಅವರ ತಾಯಿಯಿಂದ (ದಿವಂಗತ) ಸಂಗೀತದ ಮೊದಲ ಅಧ್ಯಯನ ಪಡೆದರು. ತಾಯಿ ಸ್ವತಃ ಗಾಯಕಿಯಾಗಿದ್ದರು. ನಂತರ, ಸುಮಾರು 11 ವರ್ಷಗಳ ಕಾಲ ಪಂಡಿತ್ ರಾಬಿನ್ ಬ್ಯಾನರ್ಜಿ ಅವರ ಶಿಷ್ಯರಾಗಿದ್ದರು ಮತ್ತು ಅವರಿಂದ ತಬಲಾ ನುಡಿಸುವುದನ್ನು ಕಲಿತರು. ಗುರು ರಮಣಿ ರೈ ಅವರು ಅಸ್ಸಾಮಿ ಜಾನಪದ ಪರಿಚಯಿಸಿದರು.
ಝುಬಿನ್ ಸಾವಿನ ಸುದ್ದಿ ಚಿತ್ರರಂಗವನ್ನು ಶೋಕದಲ್ಲಿ ಮುಳುಗಿಸಿತ್ತು. ಝುಬಿನ್ ಅಭಿಮಾನಿಗಳು ಗುವಾಹಟಿ ವಿಮಾನ ನಿಲ್ದಾಣದ ಹೊರಗೆ ಜಮಾಯಿಸಿದ್ದರು. ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಅವರ ದೇಹವನ್ನು ಗುವಾಹಟಿಗೆ ತರಲಾಗುವುದು ಎಂಬ ಸುದ್ದಿ ಹರಡಿದಾಗ, ಜನಸಮೂಹ ಎರಡು ಬ್ಯಾರಿಕೇಡ್‌ಗಳನ್ನು ಮುರಿದು ವಿಮಾನ ನಿಲ್ದಾಣದ ಟರ್ಮಿನಲ್ ಕಡೆಗೆ ಓಡಲು ಪ್ರಾರಂಭಿಸಿದರು. ಕೊನೆಗೆ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಜನಸಮೂಹದ ಮೇಲೆ ಲಾಠಿ ಚಾರ್ಜ್ ಮಾಡಬೇಕಾಯಿತು. ಕೆಲವರು ಭದ್ರತಾ ಸಿಬ್ಬಂದಿಯ ಮೇಲೆ ನೀರಿನ ಬಾಟಲಿಗಳನ್ನು ಎಸೆದು ಪೊಲೀಸ್ ವಾಹನಗಳಿಗೆ ಹಾನಿ ಮಾಡಲು ಪ್ರಯತ್ನಿಸಿದರು.
ಸಪ್ಟೆಂಬರ್ 22ರಂದು ಅವರ ಅಂತ್ಯಕ್ರಿಯೆ ಗುವಾಹಟಿಯಲ್ಲಿ ನಡೆಯಿತು. ಈ ವೇಳೆ ಸೇರಿದ ಅಪಾರ ಜನಸ್ತೋಮ ಹೊಸ ದಾಖಲೆಯನ್ನೇ ಬರೆದಿದೆ. ಇದು ಲಿಮ್ಕಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲಾಗಿದೆ. ಝುಬಿನ್‌ಗೆ ವಿದಾಯ ಹೇಳಲು ಲಕ್ಷಾಂತರ ಅಭಿಮಾನಿಗಳು ಬೀದಿಗಳಲ್ಲಿ ಜಮಾಯಿಸಿದ್ದರಿಂದ ಗುವಾಹಟಿಯಲ್ಲಿ ಅಭೂತಪೂರ್ವ ದುಃಖದ ಪ್ರವಾಹವೇ ಉಕ್ಕಿ ಹರಿದಂತೆ ತೋರುತ್ತಿತ್ತು. ಅಸ್ಸಾಂನಾದ್ಯಂತ ಮತ್ತು ಅದರಾಚೆಗಿನ ಜನರು ಪ್ರೀತಿಯ ತಾರೆಯನ್ನ ಕೊನೆ ಬಾರಿ ನೋಡಲು ಆಗಮಿಸಿದ್ದರಿಂದ ಇಡೀ ನಗರವೇ ಶೋಕದ ಸಮುದ್ರವಾಯಿತು. ಅಸ್ಸಾಂ ತನ್ನ ನೆಚ್ಚಿನ ಪುತ್ರರಲ್ಲಿ ಒಬ್ಬನನ್ನು ಕಳೆದುಕೊಂಡಿದೆ. ಝುಬಿನ್ ಅಸ್ಸಾಂಗೆ ಏನಾಗಿದ್ದರು ಎಂದು ವಿವರಿಸಲು ನಿಜವಾಗಿಯೂ ಪದಗಳೇ ಸಾಲವು. ಮನುಷ್ಯರು ಮಾತ್ರ ಝುಬಿನ್ ಅವರ ಅಂತಿಮ ದರ್ಶನವನ್ನು ಪಡೆದಿಲ್ಲ, ಬದಲಾಗಿ ಮೂಕ ಪ್ರಾಣಿಗಳೂ ಈ ವೇದನೆಯನ್ನು ಅನುಭವಿಸಿವೆ.
ಈ ಲೇಖನ ಓದಿದ್ದೀರಾ?: ಪ್ರತಿಷ್ಠಿತ ‘ಫಾಲ್ಕೆ’ಯ ಮೆರಗು ಹೆಚ್ಚಿಸಿದ ಮೋಹನ್ ಲಾಲ್
ಅಂತ್ಯಕ್ರಿಯೆಯಲ್ಲಿ ಸೇರಿದ್ದ ಜನರನ್ನು ನೋಡಿದ್ರೆ, ಝುಬಿನ್‌ನನ್ನು ಅವರು ಎಷ್ಟು ಪ್ರೀತಿಸುತ್ತಿದ್ದರು ಎಂಬುದು ಪ್ರತಿಬಿಂಬಿಸುತ್ತದೆ. ತಲೆಮಾರುಗಳ ಅಭಿಮಾನಿಗಳು, ಯುವಕರು ಮತ್ತು ಹಿರಿಯರು, ಗೌರವ ಸಲ್ಲಿಸಲು ಗಂಟೆಗಟ್ಟಲೆ ಸಾಲುಗಟ್ಟಿ ನಿಂತಿದ್ದರು. ಸಾಮಾಜಿಕ ಮಾಧ್ಯಮಗಳಲ್ಲೂ ಅವರ ಸುದ್ದಿ, ಅಂತ್ಯಕ್ರಿಯೆಯ ಫೋಟೋ, ವಿಡಿಯೋಗಳು ವೈರಲ್ ಆಗಿದ್ದವು. ಹಲವರು ಇದನ್ನು ಅಸ್ಸಾಂ ಹಿಂದೆಂದೂ ನೋಡಿರದ ದುಃಖದ ಕ್ಷಣ ಅಂತ ಕರೆದಿದ್ದಾರೆ. ಇನ್ನು ಅಂತಿಮಯಾತ್ರೆಯಲ್ಲಿ ಝುಬಿನ್‌ಗೆ ಜಯವಾಗಲಿ, ಝುಬಿನ್ ದೀರ್ಘಕಾಲ ಉಳಿಯಲಿ ಎಂಬ ಘೋಷ ವಾಕ್ಯಗಳು ಕೇಳಿಬಂದವು. ಝುಬಿನ್ ಸಾವಿನ ಹಿಂದೆ ಯಾವುದೇ ಅಪರಾಧ ಕೃತ್ಯಗಳು ನಡೆದಿಲ್ಲ ಎಂದು ಖಚಿತಪಡಿಸಲು ಸರ್ಕಾರ ಮತ್ತೊಮ್ಮೆ ಮರಣೋತ್ತರ ಪರೀಕ್ಷೆ ನಡೆಸಲು ಸೂಚಿಸಿತ್ತು. ಅದರಂತೆ 2ನೇ ಬಾರಿಗೆ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ನಡೆಸಲಾಗಿದೆ.

ಇನ್ನು ಝುಬಿನ್ ಗರ್ಗ್ ಅವರ ಅಂತಿಮ ಯಾತ್ರೆಯನ್ನು ವಿಶ್ವದಾದ್ಯಂತ ನಾಲ್ಕನೇ ಅತಿದೊಡ್ಡ ಸಾರ್ವಜನಿಕ ಸಭೆ ಎಂದು ಪಟ್ಟಿ ಮಾಡಲಾಗಿದೆ, ಮೈಕೆಲ್ ಜಾಕ್ಸನ್, ಪೋಪ್ ಫ್ರಾನ್ಸಿಸ್ ಮತ್ತು ರಾಣಿ ಎಲಿಜಬೆತ್ II ಅವರಂತಹ ಖ್ಯಾತ ನಾಮರ ಅಂತಿಮಯಾತ್ರೆ ಬಳಿಕ ಅತೀ ಹೆಚ್ಚು ಜನ ಸೇರಿದ ನಾಲ್ಕನೇ ಅಂತಿಮ ಯಾತ್ರೆ ಇದಾಗಿದೆ. ಗುವಾಹಟಿ ರಸ್ತೆಗಳು ದುಃಖಿತ ಅಭಿಮಾನಿಗಳಿಂದ ತುಂಬಿ ತುಳುಕುತ್ತಿದ್ದವು. ಜನರ ದೈನಂದಿನ ಜೀವನವು ದುಃಖದಲ್ಲಿ ಮುಳುಗಿಹೋದ ಕಾರಣ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತು. ಅಂತ್ಯಕ್ರಿಯೆಯ ಮೆರವಣಿಗೆಗೆ ಎಲ್ಲಾ ಕಡೆಯಿಂದ ಜನರು ಬಂದು ಸೇರಿದ್ದರು.
ನಾವು ಬದುಕಿದ್ದಾಗ ಜನರು ನಮ್ಮ ಜೊತೆ ಬರೋದು ಸಾಧನೆಯಲ್ಲ, ನಾವು ಸತ್ತಾಗ ಎಷ್ಟು ಜನ ಬರುತ್ತಾರೆ, ನಮ್ಮ ಬಗ್ಗೆ ಯಾವ ಮಾತು ಆಡುತ್ತಾರೆ ಎನ್ನುವುದು ಸಾಧನೆಯ ಮಾನದಂಡ ಅಂತ ಹಿರಿಯರು ಹೇಳ್ತಾರೆ. ಈ ಮಾತನ್ನು ಈಗ ಖ್ಯಾತ ಗಾಯಕ ಝುಬಿನ್ ನಿಜವಾಗಿಸಿದ್ದಾರೆ. ಝುಬಿನ್ ದಾ ಒಬ್ಬ ನಿಜವಾದ ದೇಶಪ್ರೇಮಿಯಾಗಿದ್ದ. ತನ್ನ ತಾಯ್ನೆಲವನ್ನು ಅದರಲ್ಲಿ ಬದುಕಿ ಬಾಳುವ ಜನರನ್ನು ಹೃದಯಾಂತರಾಳದಿಂದ ಪ್ರೀತಿಸುತ್ತಿದ್ದ. ತನ್ನ ಜನರ ಉಸಿರಿನ ಉಸಿರಾಗಿ ಬೆರೆತು ಎಲ್ಲ ಕಾಲಕ್ಕೂ ಜೀವಂತವಾಗಿ ಉಳಿದಿದ್ದಾನೆ. ಸತ್ತು ಬದುಕುವುದು ಎಂದರೆ ಇದೇ ಅಲ್ಲವೇ?




