ಚಿತ್ರರಂಗದಲ್ಲಿ ಸ್ತ್ರೀ ಪೀಡನೆ- ಇಲ್ಲಿ ಶ್ರುತಿ ಹರಿಹರನ್‌, ಅಲ್ಲಿ ಮತ್ತೊಬ್ಬರು… ಅಷ್ಟೇ ವ್ಯತ್ಯಾಸ

Date:

ದಿಲೀಪ್‌ ಪ್ರಕರಣದ ತೀರ್ಪಿನ ಕುರಿತು ಪ್ರತಿಕ್ರಿಯಿಸಿರುವ ಮಲಯಾಳಂ ಮೂಲದ ನಟಿ ಶ್ರುತಿ ಹರಿಹರನ್‌, “ತೀರ್ಪೇನೋ ಬಂದಿದೆ. ಆದರೆ ಹೋರಾಟ ಅಂತ್ಯವಾಗಿಲ್ಲ. ಈ ಹೋರಾಟ ನಡೆದಿದ್ದೆ ನಿಜವಾದ ನ್ಯಾಯದ ಬೇಡಿಕೆ. ಏಕೆಂದರೆ ಈ ಹೋರಾಟ ನಮ್ಮಂಥವರ ಧ್ವನಿಗೆ ಧ್ವನಿಯಾದ ಹೋರಾಟ” ಎಂದಿದ್ದಾರೆ.

ಸುಮಾರು ಹನ್ನೊಂದು ವರ್ಷದ ಹಿಂದೆ ಅಂದರೆ 2014ರಲ್ಲಿ ಕನ್ನಡದಲ್ಲಿ ʻನ್ಯಾಯ ಎಲ್ಲಿದೆ?ʼ ಎಂಬ ಚಿತ್ರ ಬಿಡುಗಡೆಯಾಗಿತ್ತು. ಅದರಲ್ಲಿ “ನ್ಯಾಯಾ ಎಲ್ಲಿದೆ? ಅಣ್ಣ ಎಲ್ಲಿದೆಯೋ ನ್ಯಾಯ, ಬಡವರು ನ್ಯಾಯವ ಕೇಳುವುದೇ ಅನ್ಯಾಯ” ಎಂಬ ಗೀತೆಯೊಂದಿದೆ. ಕನ್ನಡ ಚಿತ್ರರಂಗದಲ್ಲಿ ಕಲಾವಿದೆಯರಿಗೆ, ತಂತ್ರಜ್ಞರಿಗೆ, ಇತರ ಕಲಾವಿದರು ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯ ಇಂದು ನಿನ್ನೆಯದಲ್ಲ. ಈ ಗೀತೆಯನ್ನು ಸ್ವಲ್ಪ ಬದಲಿಸಿ ಹೇಳಬಹುದಾದರೆ, “ನ್ಯಾಯಾ ಎಲ್ಲಿದೆ? ಅಣ್ಣ ಎಲ್ಲಿದೆಯೋ ನ್ಯಾಯ, ಸ್ತ್ರೀಯರು ನ್ಯಾಯವ ಕೇಳುವುದೇ ಅನ್ಯಾಯ…” ಎಂದು ಬದಲಿಸಬಹುದೇನೋ!

ಮಲೆಯಾಳಂ ಚಿತ್ರರಂಗವನ್ನು ವಿವಾದದ ಸುಳಿಯಲ್ಲಿ ಸಿಲುಕಿಸಿದ ದಿಲೀಪ್‌ ಪ್ರಕರಣದ ತೀರ್ಪಿನ ಕುರಿತು ಪ್ರತಿಕ್ರಿಯಿಸಿರುವ ಮಲೆಯಾಳಂ ಮೂಲದ ನಟಿ ಹಾಗೂ ಕನ್ನಡ ಚಿತ್ರರಂಗದಲ್ಲಿ ಒಂದು ಸ್ಥಾನವನ್ನು ಕಲ್ಪಿಸಿಕೊಂಡಿರುವ ಶ್ರುತಿ ಹರಿಹರನ್‌, “ತೀರ್ಪೇನೋ ಬಂದಿದೆ. ಆದರೆ ಹೋರಾಟ ಅಂತ್ಯವಾಗಿಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ. ಈ ಹೋರಾಟ ನಡೆದಿದ್ದೆ ನಿಜವಾದ ನ್ಯಾಯದ ಬೇಡಿಕೆ. ಏಕೆಂದರೆ ಈ ಹೋರಾಟ ನಮ್ಮಂಥವರ ಧ್ವನಿಗೆ ಧ್ವನಿಯಾದ ಹೋರಾಟ ಎಂದಿದ್ದಾರೆ. “ನಿಜವಾದ ಸತ್ಯವೆಂದರೆ ತೀರ್ಪು ನೀಡುವಾಗಲೇ ನ್ಯಾಯಾಲಯ ನೈತಿಕ ಮತ್ತು ವ್ಯವಸ್ಥೆಯ ತಪ್ಪುಗಳ ಬಗ್ಗೆ ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸದೇ ಹೋಗಿದ್ದು. ವ್ಯವಸ್ಥೆಯ ಜೊತೆಗಿನ ಹೋರಾಟದ ಮೇಲೆ ಈ ತೀರ್ಪು ಯಾವುದಾದರೂ ರೀತಿಯಲ್ಲಿ ಪರಿಣಾಮ ಬೀರಬೇಕಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಹೇಮಾ ಸಮಿತಿಯ ರಚನೆಯಾಗಲಿ, ಮಲೆಯಾಳಂ ಚಿತ್ರರಂಗದಲ್ಲಿ Women in Cinema Collective ಆಗಲಿ ಶೂನ್ಯದಿಂದ ಹುಟ್ಟಿದ್ದಲ್ಲ. ಇದಕ್ಕೆಲ್ಲ ಕಾರಣವೇ ಈ ಪ್ರಕರಣ ಎಂಬುದನ್ನು ನಾವು ಮರೆಯಬಾರದು. ಈ ತೀರ್ಪು ಈ ಕಾಲಕ್ಕೆ ಅಗತ್ಯವಿದ್ದ ಒಂದು ಕುಟುಕು ಜೀವ ನೀಡಿದೆ ಎಂದು ಪರಿಗಣಿಸಬಹುದು. ಇದು ದೌರ್ಜನ್ಯದ ವಿರುದ್ಧ ಮೌನವಾಗಿರಲು ಬಯಸದ ಸ್ತ್ರೀ ಬಂಡಾಯದ ಧ್ವನಿಯಂತೆ ಕೇಳಿಸುತ್ತದೆ. ಹಾಗಾಗಿ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ನೂರಾರು ಸಮಸ್ಯೆಗಳ ವಿರುದ್ಧದ ಹೋರಾಟದ ಆರಂಭ ಎನ್ನಬಹುದು” ಎಂದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಶ್ರುತಿ ಹರಿಹರನ್‌ ಕಳೆದ 13 ವರ್ಷಗಳಲ್ಲಿ ಕನ್ನಡ, ತಮಿಳು, ಮಲಯಾಳಂ ಭಾಷೆಗಳಲ್ಲಿನ ೩೦ಕ್ಕೂ  ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರ ಮೊದಲ ಚಿತ್ರ 2012ರಲ್ಲಿ ಬಿಡುಗಡೆಯಾದ ಮಲೆಯಾಳಂ ಭಾಷೆಯ ʻಸಿನಿಮಾ ಕಂಪನಿʼ. ಈ ಹದಿಮೂರು ವರ್ಷಗಳಲ್ಲಿ ಶ್ರುತಿ ಕಂಡಿರುವ ಏರಿಳಿತವನ್ನು ಯಾವುದೇ ನಟಿ ಕಂಡಿರುವ ಸಾಧ್ಯತೆ ಇಲ್ಲ.

ಆದರೆ, ತನ್ನ ದಿಟ್ಟ ನಿಲುವಿಗಾಗಿ, ಚಿತ್ರರಂಗದಲ್ಲಿ ಹೆಣ್ಣು ಕಲಾವಿದರು ಶೋಷಣೆಯನ್ನು ಸಹಿಸುವುದಿಲ್ಲ ಎಂದು ಪ್ರಕಟವಾಗಿ ಹೇಳಿದ ಕಾರಣಕ್ಕಾಗಿ ಇಷ್ಟು ವರ್ಷಗಳಲ್ಲಿ ಈ ಶ್ರುತಿ ಹರಿಹರನ್‌ ಎಂಬ ಕಲಾವಿದೆ ಅನುಭವಿಸಿದ ಸಂಕಷ್ಟಗಳನ್ನು ಕುರಿತು ಬರೆದರೆ ಅದೇ ಒಂದು ಕಾದಂಬರಿ ಆದೀತು. ಅಥವಾ ಒಂದು ಚಿತ್ರಕ್ಕೆ ವಸ್ತುವಾದೀತು.

ಅದೇನೇ ಇರಲಿ. ಬಂದ ಸವಾಲುಗಳನ್ನೆಲ್ಲ ಎದುರಿಸಿ, ಈ ಕಲಾವಿದೆ ಸುಟ್ಟು ಬೂದಿಯಾದರೂ, ಬೂದಿಯಿಂದ ಮತ್ತೆ ಹುಟ್ಟಿಬರುವ ಫೀನಿಕ್ಸ್‌ ನಂತೆ ತನ್ನನ್ನ ಮಾನಸಿಕವಾಗಿ ಹಿಂಸಿಸಿ ಸುಟ್ಟ ಜನರ ನಡುವೆಯೇ ಮತ್ತೆ ಮೇಲೆದ್ದು, ಬದುಕು ಕಟ್ಟಿಕೊಳ್ಳುತ್ತಿರುವುದು ಸಮಾಧಾನ ಸಂಗತಿ. ಏಕೆಂದರೆ ಚಿತ್ರರಂಗದ ಬಲಿಷ್ಠರು ಅವರನ್ನು ಚಿತ್ರರಂಗದಿಂದಲೇ ಬಹಿಷ್ಕರಿಸಿ, ಅವರನ್ನು ಚಿತ್ರಗಳಿಗೆ ತೆಗೆದುಕೊಳ್ಳದಂತೆ ಉಳಿದವರಿಗೆ ತಾಕೀತು ಮಾಡಿದ ಕಾರಣ, ಶ್ರುತಿ ಹರಿಹರನ್‌ ಅನುಭವಿಸಿದ ಸಂಕಷ್ಟ ಅಷ್ಟಿಷ್ಟಲ್ಲ. ತಮ್ಮನ್ನು ಹಿಂಸಿಸಿದವರಿಗೆ ಸವಾಲು ಹಾಕಿ ಈ ಕಲಾವಿದೆ ಮತ್ತೆ ಮತ್ತೆ ಚಿತ್ರರಂಗದಲ್ಲಿ ಕಾಣಿಸಿಕೊಂಡಿದ್ದಾರೆ. ಮೇಲಕ್ಕೇರುತ್ತಿದ್ದಾರೆ. ಬಹುಶಃ ಈ ನೋವಿನ ದಿನಗಳಲ್ಲಿಯೇ ಅವರ ʻನಾತಿಚರಾಮಿʼ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂದದ್ದು, ಚಿತ್ರರಂಗಕ್ಕೊಂದು ಪಾಠವಾಯಿತು. ಪ್ರತಿಭೆ ಇದ್ದವರನ್ನು ತುಳಿಯುವುದು ಅಷ್ಟು ಸುಲಭವೂ ಅಲ್ಲ ಎಂಬುದು ಮನವರಿಕೆಯಾಗಿರಬೇಕು.

ಶ್ರುತಿ ಹರಿಹರನ್‌ ತಮಗಾದ ಲೈಂಗಿಕ ಶೋಷಣೆಯನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲು ಏರಿದ್ದರೂ, ಕೊನೆಗೆ ನ್ಯಾಯಾಲಯದಲ್ಲಿ ಚಿತ್ರರಂಗದ ಬಲಿಷ್ಠರನ್ನು ಎದುರಿಸಿ ಹಣ್ಣುಗಾಯಿ, ನೀರುಗಾಯಿಯಾದದ್ದು ಕರ್ನಾಟಕದ ಚಿತ್ರರಂಗದ ಇತಿಹಾಸಕ್ಕೆ ಕಪ್ಪು ಚುಕ್ಕೆ ಎಂದೇ ಹೇಳಬಹುದು. ಒಲ್ಲದ ಮನಸ್ಸಿನಿಂದ ಶ್ರುತಿ ಅವರನ್ನು 2018ರ #MeToo ಅನುಭವದ ನಂತರ ಹಾಗೂ, ಇತ್ತೀಚೆಗೆ ಕೇರಳ ಚಿತ್ರರಂಗದಲ್ಲಿ ಹೇಮಾ ಸಮಿತಿ ವರದಿ ಎಬ್ಬಿಸಿದ ಬಿರುಗಾಳಿಯಿಂದ ಏನಾದರೂ ಬದಲಾವಣೆ ಕಂಡಿತೇ? ಎಂದು ಪ್ರಶ್ನಿಸಿದಾಗ ಅವರು ಸ್ವಲ್ಪವೂ ಮನಸ್ಸಿಗೆ ಹಚ್ಚಿಕೊಳ್ಳದೆ, “ಸಾಕಷ್ಟು ಬದಲಾಗಿದೆ” ಎಂದು ಒಪ್ಪಿಕೊಂಡರು. ಎಲ್ಲರೂ, ತಮ್ಮ ತಮ್ಮದೇ ಆದ ಗಡಿಯನ್ನು ಹಾಕಿಕೊಂಡು, ಯಾವುದೇ ರೀತಿಯಲ್ಲೂ ಮನಸ್ಸಿಗೆ ನೋವಾಗದಂತೆ, ಮುಜುಗರವಾಗದಂತೆ ನಡೆದುಕೊಳ್ಳುತ್ತಿದ್ದರು. ಒಂದು ರೀತಿಯಲ್ಲಿ ವೃತ್ತಿಪರ ವಾತಾವರಣ, ಹಿಂದಿರುಗಿದ್ದು, ನನ್ನ ಗಮನಕ್ಕೆ ಬಂತು. ಅದರಲ್ಲಿ ಅನುಮಾನವೇನಿಲ್ಲ” ಎಂದರು.

actress sruthi hariharan attends the 744634
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶ್ರುತಿ ಜೊತೆಗೆ ಮಾತುಕತೆಯಲ್ಲಿ ನಿರತರಾಗಿದ್ದ ಅಂಬರೀಶ್‌

ಫೈರ್‌ ಸಂಸ್ಥೆ ಕೊಟ್ಟ ಕೊಡುಗೆ

ಶ್ರುತಿ ಪ್ರಕರಣ ಬಹಿರಂಗಕ್ಕೆ ಬಂದಾಗ ದೇಶದಲ್ಲಿ MeToo ಪ್ರಕರಣ ಚರ್ಚೆಗೆ ಗ್ರಾಸವಾಗಿತ್ತು, ಬೇರೆ ಬೇರೆ ಚಿತ್ರರಂಗದ ಅಲೋಕ್ ನಾಥ್‌, ಎಂ.ಜೆ. ಅಕ್ಬರ್‌, ವೈರಮುತ್ತು ಮತ್ತು ನಾನಾ ಪಾಟೇಕರ್‌ ವಿವಾದದ ಸುಳಿಗೆ ಸಿಲುಕಿದ್ದರು. ಆ ಹೊತ್ತಿನಲ್ಲಿ ಕರ್ನಾಟಕದಲ್ಲಿ ಇಂಥ ಬೆಳವಣಿಗೆಯ ಬಗ್ಗೆ ಹೋರಾಟ ನಡೆಸಲು ನಟ ಮತ್ತು ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ ನೇತೃತ್ವದಲ್ಲಿ Film Industry for Rights and Equality (FIRE) ಸಂಸ್ಥೆ ಹುಟ್ಟಿಕೊಂಡಿತ್ತು. ಇದಕ್ಕೆ ಕನ್ನಡ ಚಿತ್ರರಂಗದ ಬಹುತೇಕ ನಟ ನಟಿಯರು ಬೆಂಬಲ ಸೂಚಿಸಿದ್ದರು. ಈ ಹೋರಾಟದಲ್ಲಿ ಕವಿತಾ ಲಂಕೇಶ್‌ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಕನ್ನಡ ಚಿತ್ರರಂಗದ ಬಲಾಢ್ಯರು FIRE ಸಂಸ್ಥೆಯ ಅಸ್ತಿತ್ವವನ್ನೇ ಪ್ರಶ್ನಿಸಿದರು. ಇದರಿಂದ ಆಗ ನಮ್ಮ ನಡುವಿದ್ದ ಹಿರಿಯ ನಟ ಅಂಬರೀಶ್‌ ಕೂಡ ನೊಂದಿದ್ದರು.

ಹೇಮಾ ಸಮಿತಿ ವರದಿ ಪ್ರಕಟವಾಗಿ ಭಾರೀ ಚರ್ಚೆಗೆ ಒಳಗಾದಾಗ, ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿರುವ ಮಹಿಳಾ ಕಲಾವಿದರು, ತಂತ್ರಜ್ಞರ ಕುರಿತು ವಿಚಾರಣೆ ನಡೆಸಲು ಅಂಥಹುದೇ ಸಂಸ್ಥೆ ರಚನೆಯಾಗಬೇಕು. ಸಮಗ್ರ ತನಿಖೆಯಾಗಬೇಕೆಂದು FIRE ಸಂಸ್ಥೆಯ ನೇತೃತ್ವದಲ್ಲಿ ಕವಿತಾ ಲಂಕೇಶ್‌ ಮತ್ತಿತರರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಅಂಥ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿಗಾಗಿ ಒತ್ತಾಯಿಸಿದರು. ಸಿದ್ದರಾಮಯ್ಯ ಕೂಡ ಒಪ್ಪಿಕೊಂಡಿದ್ದರು. ಕರ್ನಾಟಕ ಮಹಿಳಾ ಆಯೋಗ ಕೂಡ ಇದು ಸರಿಯಾದ ಕ್ರಮವೆಂದು ಹೇಳಿತ್ತು. ಆದರೆ, ಕನ್ನಡ ಚಿತ್ರರಂಗದ ಬಲಿಷ್ಠರು ಇದನ್ನು ವಿರೋಧಿಸಿದ್ದೇ ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈ ಕಟ್ಟಿ ಹಾಕಿದರು.

ಫೈಯರ್

ಮಂಡಳಿ ಒಪ್ಪದ ಸಮಿತಿ, ಮಂಡಳಿಯೇ ಮಾಡಿಕೊಂಡ ಸಮಿತಿ

ಆದರೆ, ಮಹಿಳಾ ಆಯೋಗದ ಒತ್ತಾಯಕ್ಕೆ ಮಣಿದು ಆಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿದ್ದ ಎಂ. ಎನ್.‌ ಸುರೇಶ್‌ ಅವರು, ಕವಿತಾ ಲಂಕೇಶ್‌ ನೇತೃತ್ವದಲ್ಲಿ Intenal Complaints Committee (ICC) ರಚಿಸಿ ಪ್ರಕಟಣೆ ಕೂಡ ನೀಡಿದರು. ಅದಾದ ಕೇವಲ 30 ನಿಮಿಷದಲ್ಲಿ ವಾಣಿಜ್ಯ ಮಂಡಳಿ ತನ್ನ ಆದೇಶದ ಪ್ರಕಟಣೆಯನ್ನು ಹಿಂದಕ್ಕೆ ಪಡೆಯಿತು ಎಂದು ಬಲಿಷ್ಠರ ಶಕ್ತಿ ಎಂಥದ್ದು, ಎಷ್ಟರ ಮಟ್ಟಿನದೆಂದು ಯಾರಾದರೂ ಅರ್ಥ ಮಾಡಿಕೊಳ್ಳಬಹುದು.

ಈ ಬೆಳವಣಿಗೆಯ ಎಷ್ಟೋ ವಾರಗಳ ನಂತರ ವಾಣಿಜ್ಯ ಮಂಡಳಿಯು ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆ ೨೦೧೩ರ ಅಡಿಯಲ್ಲಿ ಆಂತರಿಕ ದೂರು ಸಮಿತಿಯನ್ನು ಜನವರಿ 2025ರಲ್ಲಿ ರೂಪಿಸಿತು. ಇದಕ್ಕೆ ಆ ಸಮಯದ ಮಂಡಳಿಯ ಅಧ್ಯಕ್ಷ ಎಂ. ನರಸಿಂಹುಲು, ಎಂ. ಎನ್‌ ಸುರೇಶ್‌, ಸಾ.ರಾ ಗೋವಿಂದ್‌ ಸರ್ಕಾರೇತರ ಸೇವಾ ಸಂಸ್ಥೆಯ ಅನ್ನಪೂರ್ಣ, ನಿರ್ದೇಶಕ ನಾಗಣ್ಣ ಅವರು ಸದಸ್ಯರು.

ಆದರೆ ಇದುವರೆಗೆ ಕಳೆದ ಒಂದು ವರ್ಷದಲ್ಲಿ ಎಷ್ಟು ಪ್ರಕರಣಗಳು ದಾಖಲಾಗಿವೆ. ಎಷ್ಟರಲ್ಲಿ ನ್ಯಾಯದಕ್ಕಿದೆ ಎಂಬ ಮಾಹಿತಿ ಇಲ್ಲ. ಈ ಪತ್ರಕರ್ತನಿಗೆ ಗೊತ್ತಿರುವಂತೆ, ಪ್ರಕರಣ ದಾಖಲಾದ ಬಗ್ಗೆ ಯಾವುದೇ ತಿಳಿವಳಿಕೆ ಸಾರ್ವಜನಿಕ ವಲಯದಲ್ಲಿ ಪ್ರಕಟವಾಗಿಲ್ಲ.

ಪರಿಸ್ಥಿತಿ ಹೀಗಿರುವಾಗ, ಚಿತ್ರರಂಗದ ಪ್ರಮುಖ ಬಲಿಷ್ಠರು ಈ ಸಮಿತಿಯಲ್ಲಿರುವಾಗ ಚಿತ್ರರಂಗದ ಯಾವ ಹೆಣ್ಣು ತಾನೇ ತನಗೆ ಲೈಂಗಿಕ ಕಿರುಕುಳವಾಗಿದೆ ಎಂದು ದೂರು ಕೊಡಲು ಮುಂದಾಗುತ್ತಾರೆ. ಅಂಥ ಒಂದು ಪರಿಸ್ಥಿತಿಯನ್ನು ಊಹಿಸಲು ಸಾಧ್ಯವಿಲ್ಲ. ಏಕೆಂದರೆ, ಈ ರೀತಿ ದೂರು ದಾಖಲಿಸುವುದರಿಂದ, ಹೇಮಾ ಸಮಿತಿ ಮಾದರಿ ಸಮಿತಿಯನ್ನು ರಚಿಸುವುದರಿಂದ ಕನ್ನಡ ಚಿತ್ರರಂಗದ ವರ್ಚಸ್ಸಿಗೆ ಧಕ್ಕೆ ಬರುತ್ತದೆ ಎಂದು ವಾದಿಸಿ ಹೋರಾಟ ನಡೆಸಿದ ಮಂದಿ ಈ ಬಲಿಷ್ಠರು. ಇನ್ನು ನ್ಯಾಯದ ಪ್ರಶ್ನೆ ಎಲ್ಲಿದೆ ?

ಮೂಕಿ ಯುಗದಿಂದ ಡಿಜಿಟಲ್‌ ಕಾಲದಲ್ಲೂ…

ಹಾಗೆಂದು‍ ಶ್ರುತಿ ಹರಿಹರನ್‌ ಪ್ರಕರಣ ಚಿತ್ರರಂಗದಲ್ಲಿ ಹೆಣ್ಣು ಮಕ್ಕಳ ಶೋಷಣೆಯ ಆರಂಭವೂ ಅಲ್ಲ. ಅಂತ್ಯವೂ ಅಲ್ಲ. ಇದನ್ನು ಹೆಣ್ಣೊಬ್ಬಳು ಮೊದಲು ಧೈರ್ಯ ಮಾಡಿ ತನ್ನ ಬದುಕು-ಭವಿಷ್ಯವನ್ನು ಪಣಕ್ಕಿಟ್ಟು ನಡೆಸಿದ ಹೋರಾಟ ಅಥವಾ ಪ್ರತಿಭಟನೆ ಎಂದು ಭಾವಿಸಬಹುದು ಅಷ್ಟೆ.

ಕನ್ನಡ ಚಿತ್ರರಂಗದ ತೊಂಭತ್ತೊಂದು ವರ್ಷದ ಇತಿಹಾಸದೊಳಕ್ಕೆ ಇಣುಕಿದರೆ, ಅಥವಾ ಅದರ ಸೆಪಿಯಾ ಬಣ್ಣದ ಆಲ್ಬಂ ಅನ್ನು ತಿರುವುಹಾಕಿದರೆ ಇಂಥ ಬಹಳಷ್ಟು ಚಿತ್ರಗಳು ಕಾಣುತ್ತವೆ. ಅಂದರೆ ಇಂಥ ಘಟನೆಗಳು ಮೂಕಿ ಯುಗದಿಂದ ಇಂದಿನ ಡಿಜಿಟಲ್‌ ಯುಗದವರೆಗೂ ನಡೆದಿದೆ. ಈಗಿರುವ ಪರಿಸ್ಥಿತಿಯನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಇದು ಮುಂದುವರೆಯುವ ಸಾಧ್ಯತೆಯನ್ನು ತಳ್ಳಿ ಹಾಕಲಾಗುವುದಿಲ್ಲ  

ಬಿ. ಜಯಮ್ಮ ಕನ್ನಡ ರಂಗಭೂಮಿ, ಮತ್ತು ದಕ್ಷಿಣ ಭಾರತೀಯ ಚಿತ್ರರಂಗದ ಪ್ರಾರಂಭಿಕ ದಶಕಗಳ ದೊಡ್ಡ ಹೆಸರು. ರಸಿಕ ಜನಾನಂದ ನಾಟಕ ಸಭಾ ಕಂಪನಿಯ ನಾಟಕಗಳಲ್ಲಿ ಬಾಲ ಪಾತ್ರದಲ್ಲಿ ನಟಿಸಿದ್ದ ಜಯಮ್ಮ . ಮುಂದೆ ಅವರು ಗುಬ್ಬಿ ವೀರಣ್ಣ ನಾಟಕ ಸಂಸ್ಥೆಗೆ ಪ್ರವೇಶ ಪಡೆದರು. ಮುಂದೆ ಚಲನಚಿತ್ರರಂಗದಲ್ಲಿ ತ್ರಿಭಾಷಾ ನಟಿಯಾಗಿ ಮಿಂಚಿದ ಜಯಮ್ಮ ʻಹಿಸ್‌ ಲವ್‌ ಅಫೇರ್‌ (ಮೂಕಿ ಚಿತ್ರ), ಹರಿಮಾಯ, ಸದಾರಮೆ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದರು. ಅಣ್ಣ-ತಂಗಿ, ಮಾವನ ಮಗಳು, ಪ್ರೇಮಮಯಿ, ಇಮ್ಮಡಿ ಪುಲಿಕೇಶಿ, ಅಣ್ಣ ತಮ್ಮ, ಬೇಡಿ ಬಂದವಳು, ಮುಕ್ತಿ, ಸಾಕ್ಷಾತ್ಕಾರ ಮುಂತಾದ ಅನೇಕ ಚಲನಚಿತ್ರಗಳಲ್ಲಿ ವಿಜೃಂಭಿಸಿದರು. ಗಾಯಕಿಯೂ ಆಗಿದ್ದರು. ತಮ್ಮ ಬಹುತೇಕ ನಾಟಕ ಮತ್ತು ಚಲನಚಿತ್ರ ಪಾತ್ರಗಳಿಗೆ ಸ್ವತಃ ಅವರೇ ಗಾಯನವನ್ನೂ ನೀಡಿದ್ದರು. ಗುಬ್ಬಿ ವೀರಣ್ಣನವರ ಮೂರನೆಯ ಪತ್ನಿಯಾಗಿದ್ದ ಬಿ. ಜಯಮ್ಮನವರು ತಮ್ಮ ಪತಿಯವರೊಂದಿಗೇ ಹಲವಾರು ಚಲನಚಿತ್ರಗಳಲ್ಲಿ ಪಾತ್ರನಿರ್ವಹಿಸಿದ್ದರು. ಜಯಮ್ಮನವರು ಹಿರಿಯ ವಯಸ್ಸಿನಲ್ಲಿಯೂ ಕೆಲವೊಂದು ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದುಂಟು. ʻಹಿಸ್‌ ಲವ್‌ ಅಫೇರ್‌ʼ ಚಿತ್ರ ಯುವ ಪ್ರೇಮಿಗಳು ಆ ಕಾಲದ ಸಾಮಾಜಿಕ ಕಟ್ಟುಪಾಡುಗಳನ್ನು ಮುರಿದು ಒಟ್ಟಾಗಿ ಜೀವಿಸಿದ ಕಥೆ ಇದು.

ಇದ್ದೂ ಇಲ್ಲದ ಬೆಂಬಲ

ʼಹಿಸ್‌ ಲವ್‌ ಅಫೇರ್‌ʼ ಇಲ್ಲಿ ಪ್ರಸ್ತಾಪಿಸಲು ಕಾರಣವಿದೆ. Me Too ಕರ್ನಾಟಕ ಚಿತ್ರರಂಗವನ್ನು ಆವರಿಸಿಕೊಂಡ ಸಂದರ್ಭದಲ್ಲಿ ಲಿಂಗ ಸೂಕ್ಷ್ಮತೆಯ ಪ್ರಶ್ನೆ ಧುತ್ತನೆ ಮೇಲಕ್ಕೆದ್ದಿತು. ಆಗ ಕೆಲವು ಮಹಿಳಾ ಕಲಾವಿದರು ಶ್ರುತಿ ಹರಿಹರನ್‌ ಬೆಂಬಲಕ್ಕೆ ನಿಂತಿದ್ದು, ಒಂದು ಐತಿಹಾಸಿಕ ಬೆಳವಣಿಗೆ. ಆ ಸಂದರ್ಭದಲ್ಲಿ ಮಾತನಾಡಿದ ನಟಿ ಪಂಚಮಿ, “ಹೆಣ್ಣು ಮಕ್ಕಳ ಶೋಷಣೆ ʻಹಿಸ್‌ ಲವ್‌ ಅಫೇರ್‌ʼ ಕಾಲದಲ್ಲಿಯೇ ಇತ್ತು” ಎನ್ನುವ ಮೂಲಕ ಸ್ತ್ರೀ ಶೋಷಣೆಯ ಪ್ರಶ್ನೆಯನ್ನು ಹೆಚ್ಚು ಕಡಿಮೆ ಶತಮಾನದ ಹಿಂದಕ್ಕೆ ಕೊಂಡೊಯ್ದರು. ಈ ಪಂಚಮಿ ಗುಬ್ಬಿ ವೀರಣ್ಣನವರ ಮೊಮ್ಮಗಳು ಎನ್ನುವುದು ಇಲ್ಲಿ ಮುಖ್ಯವಾಗುತ್ತದೆ. “ಆ ಕಾಲದಲ್ಲಿಯೇ ಹೆಣ್ಣಿನ ಶೋಷಣೆ ಎಂಬುದು ಸೆಲ್ಯುಲಾಯಿಡ್‌ ಜಗತ್ತಿನ ಭಾಗವಾಗಿತ್ತು. ಮಹಿಳಾ ಕಲಾವಿದರು ಈ ಎಲ್ಲ ಶೋಷಣೆಯನ್ನೂ ʻsilent  ́ ಆಗಿ ಅಂದರೆ ಮೌನವಾಗಿ ಸಹಿಸಿಕೊಂಡಿದ್ದರು. ಏಕೆಂದರೆ ಅದನ್ನು ಪ್ರಶ್ನಿಸಲು ಆಗ ಕಾಲ ಪಕ್ವವಾಗಿರಲಿಲ್ಲ” ಎಂದಿದ್ದರು.

ಮೌನ ಸಮ್ಮತಿ, ಬೆಂಬಲ?

ಇದೇ ಸಂದರ್ಭದಲ್ಲಿ ಸಂಗೀತಾ ಭಟ್‌ ಎಂಬ ಕಲಾವಿದೆ ಸಂಗೀತ ಸಂಯೋಜಕ ರಘು ದೀಕ್ಷಿತ್‌ ವಿರುದ್ದ, ಲೈಂಗಿಕ ಶೋಷಣೆಯ ಆರೋಪ ಮಾಡಿದ್ದರು. ರಘು ದೀಕ್ಷಿತ್‌ ಕೂಡ ಇದನ್ನು ಒಪ್ಪಿಕೊಂಡಿದ್ದರು. ಆ ಸಂದರ್ಭದಲ್ಲಿ ಶ್ರದ್ಧಾ ಶ್ರೀನಾಥ್‌, ಪ್ರಕಾಶ್‌ ರಾಜ್‌ ಕೂಡ ಶ್ರುತಿ ಹರಿಹರನ್‌ ಪರವಾಗಿ ನಿಂತರು. ನಿರ್ದೇಶಕಿ ಕವಿತಾ ಲಂಕೇಶ್‌ ಈ ಬೆಳವಣಿಗೆಯನ್ನು ಪ್ರಶ್ನಿಸಿದರು. ಆದರೆ ಆರಂಭದಲ್ಲಿ ಜೊತೆಯಲ್ಲಿದ್ದ ಪ್ರಿಯಾಂಕ ಉಪೇಂದ್ರ ಮತ್ತಿತರರು ನಿಧಾನವಾಗಿ ಹಿಂದಕ್ಕೆ ಸರಿದರು. ಯಾಕೆಂಬ ಪ್ರಶ್ನೆಗೆ ಉತ್ತರ ಎಲ್ಲರಿಗೂ ಗೊತ್ತಿರುವಂಥದ್ದೇ.

ಕಪಾಟಿನೊಳಗೆ ಹುಗಿದುಹೋಗಿರುವ ನೆನಪುಗಳು

ಮತ್ತೊಬ್ಬ ನಟಿ ಜಯಶ್ರೀ ಕೂಡ ತಮ್ಮ ಮೇಲಾಗಿರುವ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಿದರು. ಈ ಪ್ರಕರಣದಲ್ಲಿ ನಟ ಧರ್ಮ ಅವರ ಹೆಸರು ಕೇಳಿ ಬಂತು. ಕೃಷಿ ತಾಪಂಡ ಎಂಬ ಕಲಾವಿದೆ ತಾವು ತಾರಾಗಣ ಆಯ್ಕೆ (casting couch)ಯ ಬೇಡಿಕೆ ಮಣಿಯದ ಕಾರಣ, ಹಲವು ಅವಕಾಶಗಳನ್ನು ಕಳೆದುಕೊಳ್ಳಬೇಕಾಯಿತು ಎಂದು ಸಾರ್ವಜನಿಕವಾಗಿಯೇ ಹೇಳಿದರು. ಇದೇ ಸಂದರ್ಭದಲ್ಲಿ ಅವಂತಿಕಾ ಶೆಟ್ಟಿ, ನೇಹಾ ಪಾಟೀಲ್‌, ಹರ್ಷಿಕಾ ಪೂಣಚ್ಚ ಕೂಡ ತಮಗಾದ ಕಿರುಕುಳವನ್ನು ಬಹಿರಂಗಪಡಿಸಿದರು. ಸಂಯುಕ್ತ ಹೆಗಡೆ, ರೂಪಾ ಅಯ್ಯರ್‌, ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ, ಜಯಲಕ್ಷ್ಮಿ ಪಾಟೀಲ್‌, ನೀತೂ ಶೆಟ್ಟಿ, ಭಾರತಿ ವಿಷ್ಣುವರ್ಧನ್‌, ಹೇಮಾ ಚೌಧರಿ, ನಿವೇದಿತಾ, ವೀಣಾ ಸುಂದರ್‌, ಪಲ್ಲವಿ, ಜಯಾ ಕೊಥಾರಿ, ಅಶ್ವಿನಿ ಮುಂತಾದವರು ಶೃತಿ ಹರಿಹರನ್‌ ಬೆಂಬಲಕ್ಕೆ ನಿಂತರು. ತಮಿಳು ಮೂಲದ ಖ್ಯಾತ ನಟಿ ಸುಹಾಸಿನಿ ಮಣಿರತ್ನಂ ಶ್ರುತಿ ಹರಿಹರನ್‌ ಅವರಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು. ಇದರಿಂದ ತಮಿಳು, ತೆಲುಗು ಚಿತ್ರರಂಗದ ಹಲವರು ತಮ್ಮ ಖಾಸಗಿ ಅನುಭವಗಳನ್ನು ಧೈರ್ಯವಾಗಿ ಸಾರ್ವಜನಿಕಗೊಳಿಸಿದರು. ಆಶ್ಚರ್ಯದ ಸಂಗತಿ ಎಂದರೆ, ಆ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘ ಶ್ರುತಿ ಹರಿಹರನ್‌ ಅವರನ್ನು ಟೀಕಿಸಿ, ಘಟನೆ ನಡೆದಾಗಲೇ ಹೇಳಬೇಕಿತ್ತು ಎಂಬ ವಾದವನ್ನು ಮಂಡಿಸಿದವು.

nagalakshmi choudry 696x696 1

ಮರೀಚಿಕೆಯಾದ ಹೇಮಾ ಸಮಿತಿ ಮಾದರಿಯ ಕರ್ನಾಟಕದ ಸಮಿತಿ

ಆದರೆ ಕೇರಳದ ಹೇಮಾ ಸಮಿತಿ ವರದಿ ಸಲ್ಲಿಸಿದಾಗ ಈ ಪ್ರಶ್ನೆಗಳು ಮತ್ತೆ ಮುನ್ನೆಲೆಗೆ ಬಂದವು. ಒಂದರ್ಥದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿತ್ರರಂಗದ ಬಲಿಷ್ಠರ ಒತ್ತಾಯಕ್ಕೆ ಮಣಿದರು. ಎಲ್ಲರ ಬೇಡಿಕೆಯಂತೆ ಹೇಮಾ ಸಮಿತಿ ಮಾದರಿಯ ನಿವೃತ್ತ ನ್ಯಾಯಾಧೀಶರ ಸಮಿತಿಯನ್ನು ರಚಿಸಿ ವಿಚಾರಣೆ ನಡೆಸಿದ್ದರೆ, ಮುಚ್ಚಿದ ಕಪಾಟಿನೊಳಗಿಂದ ಅದೆಷ್ಟು ಕಥೆಗಳು ಹೊರ ಉರುಳುತ್ತಿದ್ದವೋ ಗೊತ್ತಿಲ್ಲ. ಆದರೆ, ಅಂಥ ತನಿಖಾ ಸಂಸ್ಥೆ ರಚಿಸುವುದರಿಂದ ಕನ್ನಡ ಚಿತ್ರರಂಗದ ಮಾನ ಮೂರು ಕಾಸಿಗೆ ಹರಾಜಾಗುತ್ತದೆ ಎಂದು ವಾದಿಸಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ವಾದಕ್ಕೆ ಸಿದ್ದರಾಮಯ್ಯನವರೂ ತಲೆದೂಗಿ ತೆಪ್ಪಗಾದರು. ಆಗ ಹೇಮಾ ಸಮಿತಿ ಮಾದರಿಯಲ್ಲಿ ಕರ್ನಾಟಕದಲ್ಲೂ ಚಲನಚಿತ್ರ ಕಲಾವಿದೆಯರ ದೂರನ್ನು ಕೇಳಲು ಸಮಿತಿಯೊಂದು ರಚನೆಯಾಗಬೇಕೆಂದು ಕರ್ನಾಟಕದ ಮಹಿಳಾ ಆಯೋಗದ ಅಧ್ಯಕ್ಷೆ ಡಾ ನಾಗಲಕ್ಷ್ಮಿ ಚೌಧರಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರವೊಂದನ್ನು ಬರೆದು ಒತ್ತಾಯಿಸಿದ್ದರು. ಅದಕ್ಕಾಗಿ ಅವರು ನಿವೃತ್ತ ನ್ಯಾಯಾಧೀಶೆಯೊಬ್ಬರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ಕೂಡ ಅವರು ಸೂಚಿಸಿದ್ದರು. ಆ ಸೂಚಿತ ಸಮಿತಿಯ ಇಬ್ಬರು ಸದಸ್ಯರಲ್ಲಿ ಒಬ್ಬರು ಪತ್ರಕರ್ತೆ, ಮತ್ತೊಬ್ಬರು ಯುವ ನಿರ್ದೇಶಕಿ. ಸರ್ಕಾರ ಅರ್ಥಾತ್‌ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬೇಡಿಕೆಗಳಿಗೆ ಕಿವಿಗೊಡಲೇ ಇಲ್ಲ. ಕಾರಣ ಎಲ್ಲರಿಗೂ ಗೊತ್ತಿರುವಂಥದ್ದೆ.

ಅನಂತರ ಮೊದಲೇ ಹೇಳಿದಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಂದಿನ ಅಧ್ಯಕ್ಷರಾಗಿದ್ದ ಎಂ. ಎನ್‌ ಸುರೇಶ್‌ ಅವರು ಮಹಿಳಾ ಆಯೋಗದ ಒತ್ತಡಕ್ಕೆ ಮಣಿದು ಕವಿತಾ ಲಂಕೇಶ್‌ ನೇತೃತ್ವದಲ್ಲಿ ಅಲಿಪ್ತ ನಿಲುವಿನ ಸದಸ್ಯರ ಸಮಿತಿಯೊಂದನ್ನು ರಚಿಸಿ, ಪ್ರಕಟಿಸಿಯೂ ಬಿಟ್ಟರು. ಆದರೆ ಸಮಿತಿ ಪ್ರಕಟವಾದ ಒಂದು ಗಂಟೆಯಲ್ಲಿ ಆ ಸಮಿತಿ ರದ್ದಾದ ಪ್ರಕಟಣೆಯೂ ಬಂದಿದ್ದು, ಅತೀವ ಆಶ್ಚರ್ಯ ಹುಟ್ಟಿಸಿತು. ಅದಾದ ಕೆಲವು ತಿಂಗಳ ನಂತ ನರಸಿಂಹಲು ಅಧ್ಯಕ್ಷರಾದಾಗ ಅವರ ಮೂಗಿನ ನೇರದ ಸಮಿತಿಯನ್ನು ರಚಿಸಿದರು. ಇದುವರೆಗೆ ಆ ಸಮಿತಿಯ ಮುಂದೆ ಮಹಿಳಾ ಕಲಾವಿದೆಯರು, ತಂತ್ರಜ್ಞರು, ಶೋಷಿತ ಮಹಿಳೆಯರಿಂದ ಎಷ್ಟು ದೂರುಗಳು ಬಂದಿವೆ ಎಂಬುದು ಯಾರಿಗೂ ಅರಿವಿಲ್ಲ. ಕೇಳಿದರೆ ಸರಿಯಾದ ಉತ್ತರವೂ ದೊರೆಯುವುದಿಲ್ಲ.

ಇದನ್ನೂ ಓದಿ ಚಿತ್ರರಂಗದ ಅಂತ್ಯಕಾಣದ ʼಸ್ತ್ರೀ ಪೀಡಕʼ ಪ್ರವೃತ್ತಿ; ನ್ಯಾಯಕ್ಕಾಗಿ ನಡೆದಿರುವ ಕೊನೆ ಕಾಣದ ಹೋರಾಟ!

ಅಂತೂ ಇಂತು ಕುಂತಿ ಮಕ್ಕಳಿಗೆ ರಾಜ್ಯ ದೊರೆಯಲಿಲ್ಲ ಎಂಬಂತೆ ದ್ರೌಪದಿ, ಸೀತೆ, ಮುಂತಾದವರಿಗೆ ಆದಂತೆ ಕಣ್ಣಿದ್ದೂ ಕುರುಡರಂತಿರುವ ಧೃತರಾಷ್ಟ್ರ, ಗಾಂಧಾರಿಯಂಥವರಿರುವ ಸಮಿತಿಯಿಂದ ನ್ಯಾಯವನ್ನು ನಿರೀಕ್ಷಿಸುವುದೇ ಆನ್ಯಾಯ ಎನ್ನುವ ಸ್ಥಿತಿಯಲ್ಲಿ ಕನ್ನಡ ಚಿತ್ರರಂಗವಿದೆ. ಹಾಗಾಗಿ “ನ್ಯಾಯಾ ಎಲ್ಲಿದೆ? ಅಣ್ಣಾ  ಎಲ್ಲಿದೆಯೋ ನ್ಯಾಯ? ಮಹಿಳೆ ನ್ಯಾಯವ ಕೇಳುವುದೇ ಅನ್ಯಾಯ” ಎಂಬ ಹಾಡು ಹೆಣ್ಣು ಮಕ್ಕಳು ತಮ್ಮ ಚಿತ್ರರಂಗದ ಅಣ್ಣಂದಿರನ್ನು ಪ್ರಶ್ನಿಸುವಂತಿದೆ.

IMG 20251121 WA0005
ಮುರಳೀಧರ ಖಜಾನೆ
+ posts

ಹಿರಿಯ ಪತ್ರಕರ್ತ. ಉದಯವಾಣಿ, ಪ್ರಜಾವಾಣಿ, ದಿ ಹಿಂದೂ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಸದ್ಯ ಸ್ವತಂತ್ರ ಪತ್ರಕರ್ತರಾಗಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಮುರಳೀಧರ ಖಜಾನೆ
ಮುರಳೀಧರ ಖಜಾನೆ
ಹಿರಿಯ ಪತ್ರಕರ್ತ. ಉದಯವಾಣಿ, ಪ್ರಜಾವಾಣಿ, ದಿ ಹಿಂದೂ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಸದ್ಯ ಸ್ವತಂತ್ರ ಪತ್ರಕರ್ತರಾಗಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...