ಈಗಿನ ಪೀಳಿಗೆಯವರಿಗೆ ಹಿಂದಿನವರಂತೆ 60 ವರ್ಷದವರೆಗೆ ದುಡಿಯುವ ಮನಸಿಲ್ಲ. ಅವರಿಗೆ ಬೇಕಿರುವುದು ಅರ್ಥಪೂರ್ಣ, ಸಾರ್ಥಕ ಬದುಕಿಗೆ ಪೂರಕವಾದ ಮೌಲ್ಯಯುತವಾದ ಕೆಲಸ, ಸಂಬಂಧಗಳು, ಪರಿಣಾಮಕಾರಿ ಯೋಜನೆಗಳು. ಅಲ್ಲದೆ ಈಗಿನ ವೇಗದ ಬದಲಾವಣೆಗಳಿಗೆ ತುರ್ತಿನ ಯೋಜನೆಗಳ ಅಗತ್ಯವಿದೆ.
ಇತ್ತೀಚೆಗೆ ನಡೆದ ಯುವಜನತೆ ಸಂಬಂಧಿತ ಶಿಬಿರವೊಂದರಲ್ಲಿ ಮದುವೆ ಕುರಿತ ಪ್ರಶ್ನೆಗಳಿಗೆ ಮಹತ್ವ ನೀಡಿದ್ದು ಶೇಕಡಾ 29 ರಷ್ಟು ಯುವಕರು ಮಾತ್ರ. ಹೆಚ್ಚಿನವರು ಮದುವೆಯ ಬಗ್ಗೆ ಆಸಕ್ತಿ ತೋರಲಿಲ್ಲ. ಆದರೆ ತಾವು ಬಯಸಿದ ಗುಣಗಳಿರುವ ಬಾಳ ಸಂಗಾತಿ ಸಿಕ್ಕರೆ, ಯಾರಿಗೂ ಮದುವೆ ಬೇಡವೆನಿಸಿದಂತೆ ತೋರಲಿಲ್ಲ.
ಈ ಭಾರೀ ಅಂತರಕ್ಕೆ ಹಲವು ಆಯಾಮಗಳ ಕಾರಣಗಳಿವೆ. ವ್ಯಕ್ತಿಯೊಬ್ಬ ತನ್ನನ್ನು ತಾನು ಅರಿತುಕೊಳ್ಳುವವರೆಗೆ, ಮಾನಸಿಕವಾಗಿ, ಭಾವನಾತ್ಮಕವಾಗಿ, ತನ್ನನ್ನು ತಾನು ನಿಭಾಯಿಸಲು ಕಲಿಯುವವರೆಗೆ, ಆರ್ಥಿಕವಾಗಿ ಸ್ವತಂತ್ರರಾಗುವವರೆಗೆ, ನಿರ್ಧಾರ ಕೈಗೊಳ್ಳಬಲ್ಲ ವಿವೇಚನೆ ಬಲಿಯುವವರೆಗೆ ಮದುವೆ ಎಂದರೆ ಹೆದರಿಕೆಯಾಗುವುದು ಅಸಹಜವೇನಲ್ಲ. ಜೊತೆಗೆ ಸಮಾಜದ contradicting ಅಂದರೆ ವಿರೋಧಾಭಾಸದ ಮೌಲ್ಯಗಳು, ಅವು ಮೂಡಿಸುವ ಗೊಂದಲಗಳು, ಪವಿತ್ರತೆ- ಹೆಣ್ಣು- ಮದುವೆ ಬಗ್ಗೆ ಮೂಡಿಸಿರುವ ಇಮೇಜ್‌ಗಳು ಮತ್ತು ಪೂರ್ವಾಗ್ರಹಗಳು ಸೇರಿ ಯೋಚಿಸಬೇಕಾದ ದಿಕ್ಕು ತಪ್ಪಿಸಿ ಯುವಜನತೆಯನ್ನು ಅಲೆಸುತ್ತಿವೆ.
ಈ ಸಮಸ್ಯೆಯಿಂದ ಮಿಲೇನಿಯಲ್ಸ್ (1981-1996 ನಡುವೆ ಹುಟ್ಟಿದವರು) ಎದುರಿಸಿರುವ ಸಮಸ್ಯೆ, ಪರಿಣಾಮಗಳ ಬಗ್ಗೆ ಸಂಶೋಧನಾ ಗ್ರಂಥವನ್ನೇ ಬರೆಯುವಷ್ಟಿದೆ. ಅವರ ಮುಂದಿನ ಪೀಳಿಗೆಗೂ ಇದು ಮುಂದುವರಿಯಬಾರದೆಂದರೆ, ಒಂದಲ್ಲ ಒಂದು ರೀತಿ ಎಲ್ಲರ ಮೇಲೂ ಬೀರಬಲ್ಲ ಯದ್ವಾ ತದ್ವಾ ಪರಿಣಾಮಗಳಾಗಬಾರದೆಂದರೆ, ಆ ನಿಟ್ಟಿನಲ್ಲಿ ಸೂಕ್ತ ಶಿಬಿರಗಳು, ಕೌನ್ಸೆಲಿಂಗ್ ಏರ್ಪಾಡಾಗಬೇಕು. ವಿವಿಧ ಮಾಧ್ಯಮಗಳಲ್ಲಿ ಅರಿವು ಮೂಡಿಸುವ ಇದೇ ಸಂಬಂಧಿತ ಹೆಚ್ಚೆಚ್ಚು ಬರಹಗಳು, ಸಿನಿಮಾಗಳು ಮೂಡಿಬರಬೇಕು.
ಹಲವಾರು ಚರ್ಚೆಗಳಲ್ಲಿ ಗಮನಿಸಿದ್ದೇನೆ. ಓದಿಕೊಂಡ ಬಹಳಷ್ಟು ಹಿರಿಯ ಪ್ರಜ್ಞಾವಂತರಲ್ಲೂ ಈ ಸಮಸ್ಯೆಯ ಕುರಿತು ಮುಂಗಾಣಿಕೆ, ದೂರದೃಷ್ಟಿಗಳಿಲ್ಲ. ಅವರು ತಾಳ್ಮೆ ಕಳೆದುಕೊಂಡಿರುವುದೂ ಹೌದು. ಇದಕ್ಕೆ ಕಾರಣ, ಬದಲಾಗಿರುವ ಜೀವನ ರೀತಿ, ತಂತ್ರಜ್ಞಾನ, ಜೀವನ ಮೌಲ್ಯ (ಕೆಟ್ಟ ರೀತಿಯದ್ದಲ್ಲ) ಇವೇ ಮೊದಲಾದವನ್ನು ಗಮನಿಸಲು ಅಸಮರ್ಥರಾಗಿರುವುದು, ಅವನ್ನು ರಿಲೇಟ್ ಮಾಡಿಕೊಳ್ಳಲು ಕಷ್ಟವಾಗಿರುವುದು, ಕನೆಕ್ಟ್ ಆಗಲು ಆಗದಿರುವುದು. ಕಾರಣ ಅವರು ಇನ್ನೂ ಹಳೆಯ ರೀತಿ ನೀತಿಗಳಿಗೆ ಜೋತು ಬಿದ್ದಿರುವುದೂ ಹೌದು. ಇವೆಲ್ಲಾ ಕಾರಣಕ್ಕೆ ಮದುವೆಯ ವಿಚಾರದಲ್ಲಿ ಕಿರಿಯರು ತಮ್ಮದೇ ದಾರಿಗಳ ಹುಡುಕಿಕೊಳ್ಳಬೇಕಿದೆ. ಹಿರಿಯರಿಂದ ಈ ವಿಚಾರದಲ್ಲಿ ಹೆಚ್ಚಿನ ಸಹಾಯವಾಗದು.

ಈಗಿನ ಪೀಳಿಗೆಯವರಿಗೆ ಹಿಂದಿನವರಂತೆ 60 ವರ್ಷದವರೆಗೆ ದುಡಿಯುವ ಮನಸಿಲ್ಲ. ಅವರಿಗೆ ಬೇಕಿರುವುದು ಅರ್ಥಪೂರ್ಣ, ಸಾರ್ಥಕ ಬದುಕಿಗೆ ಪೂರಕವಾದ ಮೌಲ್ಯಯುತವಾದ ಕೆಲಸ, ಸಂಬಂಧಗಳು, ಪರಿಣಾಮಕಾರಿ ಯೋಜನೆಗಳು. ಅಲ್ಲದೆ ಈಗಿನ ವೇಗದ ಬದಲಾವಣೆಗಳಿಗೆ ತುರ್ತಿನ ಯೋಜನೆಗಳ ಅಗತ್ಯವಿದೆ.
ಈ ನಿಟ್ಟಿನಲ್ಲಿ ಅವರು ತೊಡಗಿಸಿಕೊಳ್ಳುವ ಅನ್ವೇಷಣೆ, ಹುಡುಕಾಟಗಳು ಹೆಚ್ಚಿನ ಹಿರಿಯರಿಗೆೆ ಹುಚ್ಚಾಟದಂತೆ, ಚಂಚಲತೆಯಂತೆ ಕಾಣುತ್ತವೆ. ಇವೆಲ್ಲಾ ತೊಳಲಾಟದಲ್ಲಿ ಕಿರಿಯರು ಅನುಭವಿಸುತ್ತಿರುವ ಒತ್ತಡ, ಅವರು ಅಭಿವ್ಯಕ್ತಿಸಿ ತಲುಪಬೇಕಾದಲ್ಲೆಲ್ಲಾ ಮುಟ್ಟಿಸುವಂತಾಗಲಿ.
ಇದನ್ನೂ ಓದಿ ಜ್ಯೋತಿ ಜಗತಾಪ್- ಜನಜಾಗೃತಿ ಹಾಡು ಹಾಡಿದ್ದಕ್ಕಾಗಿ ಜೈಲುಪಾಲಾದ ಹೋರಾಟಗಾರ್ತಿ
ಈ ಹುಡುಕಾಟದಲ್ಲಿ ಇವರು ಮಾನಸಿಕವಾಗಿ, ದೈಹಿಕವಾಗಿ, ಭಾವನಾತ್ಮಕವಾಗಿ, ಪ್ರೀತಿ, ಕರುಣೆ ಮುಂತಾದ ಮೂಲ ಭಾವಗಳ- ಆಧ್ಯಾತ್ಮಿಕವಾಗಿ ತಮ್ಮನ್ನು ತಾವು ಅರಿಯುವ ಪ್ರಕ್ರಿಯೆಯಲ್ಲಿರುತ್ತಾರೆ ಸಹ. ಆ ಏನೋ ಒಂದರ ಹುಡುಕಾಟ ಇದೇ ಆಗಿರುತ್ತದೆ.
ಈ ಯುವ ಪೀಳಿಗೆಯಲ್ಲಿ ಉತ್ಸಾಹ, ಬುದ್ಧಿವಂತಿಕೆ, ಪ್ರತಿಭೆ ಹೆಚ್ಚಿರುವಾಗ ಹೇಗೆ ತಾನೇ ತಮ್ಮನ್ನು ತಾವು ಕುಗ್ಗಿಸಿಕೊಂಡಿರಬಲ್ಲರು ಮತ್ತು ಎಷ್ಟು ಕಾಲದವರೆಗೆ ಇದು ಸಾಧ್ಯವಾಗಬಲ್ಲದು?
ಹಿರಿಯರು, ಇತಿಹಾಸದ ಜೊತೆ ಬಾಳಿರುವ ಕಿರಿಯರಿಗೆ ಮುಂದೆ ಬೇಕಿರುವ ಜಗತ್ತು ಕಟ್ಟಲು Insights ಇದ್ದೇ ಇರುತ್ತದೆ. ಹಾಗಾಗಿ ಈ ಯುವ ಜನತೆಗೆ ಬೇಕಿರುವುದು ಅವರನ್ನು ನಂಬುವ, ಬೆಂಬಲಿಸುವ, ಜೊತೆಗಿದ್ದು ಅಲ್ಲಲ್ಲಿ ತಿದ್ದುವ, ದಾರಿ ತೋರುವ ಸ್ನೇಹಭಾವದ ಹಿರಿಯರು. ಅಷ್ಟಾದರೆ ಕಿರಿಯರು ತಮ್ಮ ಬದುಕಿನ ಪಯಣ ತಾವೇ ಕೈಗೊಳ್ಳಬಲ್ಲರು. ಎಷ್ಟೊಂದು ಬದಲಾವಣೆಗಳ ಈ ಹೊಸ ಜಗತ್ತಿಗೆ ಹೊಂದಿಕೊಳ್ಳಲು ಬೇಕಾದ ನೂತನತೆಗೆ ಹಿರಿಯರ ಜೊತೆಗೂಡುವಿಕೆಯು ಕಿರಿಯರಲ್ಲಿ ಅಭದ್ರತೆ, ಗೊಂದಲ, ಅವಿಶ್ವಾಸಗಳನ್ನು ಹೋಗಲಾಡಿಸಬಲ್ಲದು. ಬೆಳೆಯುವ (ಪರಂಪರೆಯ) ಮರಕ್ಕೆ ಬೇರಿಲ್ಲದಿದ್ದರೆ ಬದುಕು ಹೇಗೆ?
ಎಲ್ಲರೂ ಹೆಚ್ಚೆಚ್ಚು ಅರ್ಥಪೂರ್ಣ ಶಿಬಿರಗಳಲ್ಲಿ ಪಾಲ್ಗೊಳ್ಳಿ, ನಿಮಗೆ ನಿಮ್ಮ tribe ಅಂದರೆ ನಿಮ್ಮವರು, ಸಮಾನ ಮನಸ್ಕರು ದೊರಕುತ್ತಾರೆ. ಮುಕ್ತವಾಗಿ ನಿಮ್ಮ ಆಲೋಚನೆಗಳಿಗೆ ದನಿ ನೀಡಿ. ಪ್ರತಿ ದನಿಯೂ ಮುಖ್ಯವೇ. ಒಂದು ದನಿ ಮಹತ್ ಬದಲಾವಣೆಗೆ ಮುನ್ನುಡಿಯಾಗಿ ಮುನ್ನಡೆಸಬಲ್ಲದೆಂಬ ಮುನ್ನೋಟಕ್ಕೆ ಕಣ್ಣು ತೆರೆದಿರಲಿ.

ರೇಖಾ ಹೊಸಹಳ್ಳಿ
ಐಟಿ ಉದ್ಯೋಗಿ. ಬರಹ, ಡ್ಯಾನ್ಸ್, ಓದು, ಹೊಸತರ ಕಲಿಕೆ, ಚರ್ಚೆ, ನೆಟ್ವರ್ಕಿಂಗ್, ಸಾಹಿತ್ಯ, ಸಂಗೀತದ ಹವ್ಯಾಸಿ




