ಹಬ್ಬದ ವಿಶೇಷ ಆಡಿಯೊ | ಜನಪದರ ‘ದೀಪಾವಳಿ’ ಕಣ್ಣಲ್ಲಿ ಕರ್ನಾಟಕದ ಬಹುತ್ವ

Date:


(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ಸ್ ಅಥವಾ ಸ್ಪಾಟಿಫೈ ಮ್ಯೂಸಿಕ್)

ಬೇಡಗಂಪಣ ಬುಡಕಟ್ಟಿನ ಹೆಣ್ಣುಮಕ್ಕಳು ಮಾದಪ್ಪನಿಗೆ ನೊರೆಹಾಲು ಹೊತ್ತು ತರುವುದು, ಹಾಲಕ್ಕಿ ಒಕ್ಕಲಿಗರ ಬಲಿ ಆಚರಣೆ, ಮಧ್ಯ ಕರ್ನಾಟಕ ಬೇಡರ ಗುಗ್ಗರಿ ಹಬ್ಬ, ಕೊಪ್ಪಳ-ಕುಷ್ಟಗಿ ಭಾಗದ ‘ಕರಿಮಂಠ,’ ಮಾಳಪ್ಪನ ಮುಂಡಾಸು ಆಚರಣೆ, ಸಂಗಟಿ ಸಾರಿನ ಪ್ರಸಾದ, ತುಳುನಾಡಿನ ಮಾಂಕಾಳಿ ಕುಣಿತ, ಲಂಬಾಣಿ ಸಮುದಾಯದ ವಿಶಿಷ್ಟ ಆಚರಣೆಗಳು, ಮುಕರಿ ಸಮುದಾಯದ ಕತೆಗಳು, ಆಗೇರ ಸಮುದಾಯ ‘ದೇವಪಳಿಗೆ,’ ಬಾಗಲಕೋಟೆ ಬದಿಯ ಕುಸ್ತಿ, ಮಲೆನಾಡಿನ ಮೇಳಿ ಪೂಜೆ… ಹೀಗೆ, ದೀಪಾವಳಿ ಎಂದರೆ ನೂರಾರು ಬಗೆ 

ಕರ್ನಾಟಕದ ಬಹುಭಾಗಗಳಲ್ಲಿ ಮಳೆ ಇಲ್ಲದೆ ಬರದ ಛಾಯೆ ಆವರಿಸಿದೆ. ಇದರ ಮಧ್ಯೆಯೂ ಹಬ್ಬಗಳು ನಗರಗಳಲ್ಲಿ ಸಂಭ್ರಮದಿಂದ ನಡೆದರೆ, ಹಳ್ಳಿಗಳಲ್ಲಿ ಚೂರು ಮಂಕಾಗಿ ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಮತ್ತೊಂದು ದೀಪಾವಳಿ ಬಂದಿದೆ. ಇದು ನಗರಕೇಂದ್ರಿತ ಶ್ರೀಮಂತ, ಮಧ್ಯಮ ವರ್ಗದ ಹಬ್ಬವೆನ್ನುವಂತೆ ಬಿಂಬಿತವಾಗುತ್ತದೆ. ಹೀಗಾಗಿಯೇ, ದೀಪಾವಳಿ ಸಂದರ್ಭಕ್ಕೆ ದೊಡ್ಡ ವ್ಯಾಪಾರದ ವಹಿವಾಟು ಶುರುವಾಗುತ್ತದೆ. ಇದನ್ನೆಲ್ಲ ಆಚೆ ಸರಿಸಿ ನೋಡಿದರೆ, ದೀಪಾವಳಿ ಗ್ರಾಮೀಣ ಪ್ರದೇಶದ ಬಹುಸಂಸ್ಕೃತಿ ಅರಳುವ ಒಂದು ವಿದ್ಯಮಾನ. ಹೀಗೆ, ಬಹುಸಂಸ್ಕೃತಿಯ ಬೇರುಗಳನ್ನು ಪರಿಶೀಲಿಸಿದರೆ ದೀಪಾವಳಿಯ ಸಾಂಸ್ಕೃತಿಕ ಲೋಕವೊಂದು ತೆರೆದುಕೊಳ್ಳುತ್ತದೆ.

ನಾವು ಯಾವುದೇ ಹಬ್ಬಗಳನ್ನು ಇಂದು ನಗರಕೇಂದ್ರಿತವಾಗಿ ನೋಡುತ್ತಿದ್ದೇವೆ. ಅದೇ ನಿಜದ ಸ್ವರೂಪ ಎಂದು ಬಿಂಬಿಸಲಾಗುತ್ತದೆ. ದೀಪಾವಳಿ ವಿಷಯದಲ್ಲೂ ಹಾಗೆಯೇ ಆಗಿದೆ. ಆದರೆ, ಗ್ರಾಮೀಣ ಜಗತ್ತು ದೀಪಾವಳಿಯನ್ನು ಹೇಗೆ ಪರಿಭಾವಿಸಿದೆ ಎಂದು ಹುಡುಕಿದರೆ ಅಚ್ಚರಿಯಾಗುವಷ್ಟು ವೈವಿಧ್ಯವಿದೆ. ತುಂಬಾ ಫರಕುಗಳನ್ನು ಒಡಲೊಳಗಿಟ್ಟುಕೊಂಡಿದೆ. ಹಾಗೆ ನೋಡಿದರೆ, ಜನಪದರ ದೀಪಾವಳಿ ಒಂದಲ್ಲ ಹಲವಿವೆ. ಕರ್ನಾಟಕದ ಪ್ರಾದೇಶಿಕ ಭಿನ್ನತೆಗಳ ಜೊತೆ, ಹಲವು ಸಮುದಾಯಗಳ ಜೊತೆ, ಬೇರೆ-ಬೇರೆ ದೈವಗಳ ಜೊತೆ ವಿವಿಧ ಆಕಾರಗಳಲ್ಲಿ ಮೈದಾಳಿದೆ. ಹಾಗಾಗಿ, ಇದನ್ನು ಗ್ರಾಮಜಗತ್ತಿನ ಬಹುರೂಪಿ ದೀಪಾವಳಿಗಳು ಎನ್ನಬಹುದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕೊಳ್ಳೇಗಾಲ ಮತ್ತು ಚಾಮರಾಜನಗರ ಭಾಗದ ಬೇಡಗಂಪಣ ಸಮುದಾಯದ ದೀಪಾವಳಿ ವಿಶಿಷ್ಟ. ಮದುವೆಯಾಗದ 101 ಹೆಣ್ಣುಮಕ್ಕಳು ಮಲೆಯ ಮಾದೇಶ್ವರನಿಗೆ ‘ಹಾಲರಿವೆ ಸೇವೆ’ ಎಂಬ ಆಚರಣೆಯನ್ನು ಮಾಡುತ್ತಾರೆ. ಇದು ಬೇಡಗಂಪಣ ಮಹಿಳೆಯರಿಂದ ಮಾತ್ರ ಸಲ್ಲುತ್ತದೆ. ಇದಕ್ಕೊಂದು ಸೃಷ್ಟಿಪುರಾಣವಿದೆ. ಹಿಂದೆ ಶೇಷಣ್ಣೊಡೆಯ ಮಾದೇಶ್ವರ ಪೂಜೆಗೆ ಹಾಲರಿವೆ ಒಯ್ಯುವಾಗ, ಶೇಷನ ಪರೀಕ್ಷಿಸಲು ಮಾದೇಶ ಕಾಲಿನಿಂದ ಹಾಲರಿವೆ ಉರುಳಿಸುತ್ತಾನೆ. ಆಗ ಶೇಷಣ್ಣ ಮಾದೇಶ್ವರನಿಗೆ ಹಾಲಿಲ್ಲದಾಯಿತೆಂದು ಆತ್ಮಹತ್ಯೆಗೆ ಸಜ್ಜಾಗುತ್ತಾನೆ. ಆತನ ಭಕ್ತಿಗೆ ಮೆಚ್ಚಿದ ಮಾದೇಶ್ವರ, “ಈ ಹಾಲರಿವೆಯಿಂದ ಹರಿದ ಹಾಲು ಹಳ್ಳವಾಗಲಿ, ದೀಪಾವಳಿಯಲ್ಲಿ ಬೇಡಗಂಪಣರ ಕೋರು ಮಹಿಳೆಯರು ಹಾಲರಿವೆ ಸೇವೆ ಮಾಡಲಿ,” ಎಂದನಂತೆ. ಈಗ ಶೇಷಣ್ಣೊಡೆಯನ ವಂಶಸ್ಥ ಮಹಿಳೆಯರು ಹಾಲರಿವೆ ಸೇವೆ ಮಾಡುತ್ತಾರೆ.

ಹಾಲಕ್ಕಿ ಒಕ್ಕಲಿಗರಲ್ಲಿ ಬಲಿಯ ಆಚರಣೆ ನಡೆಯುವುದು ದೀಪಾವಳಿಯಲ್ಲಿ. ಬಲಿ ಹಾಲಕ್ಕಿಗಳ ಮನೆಗೆ ಬೆಳ್ಳಿ ರಥದಲ್ಲಿ ಬಂದು, ಗೋವಿನ ಮೇಲೆ ಮರಳುತ್ತಾನೆ. ಮಳೆ ನಿಂತು, ಬೆಳೆ ಕೊಯ್ಲಾಗಿ ಹೊಲಗಳಿಂದ ಕಣಗಳಿಗೆ ಬರುತ್ತದೆ. ಪಶುಪಾಲಕರಿಗೆ ನಿರ್ಬಂಧಗಳು ಇಲ್ಲವಾಗುವ ಈ ಕಾಲದಲ್ಲಿ ಬಲಿ ಆಚರಣೆ ಜೀವ ಪಡೆಯುತ್ತದೆ. ಹಾಗಾಗಿ, ದೀಪಾವಳಿ ಕೆಲ ಸಮುದಾಯಗಳಿಗೆ ಮಾಂಸಾಹಾರಿ ಹಬ್ಬ.

ಮಧ್ಯ ಕರ್ನಾಟಕದ ಬೇಡರು ದೀಪಾವಳಿಗೆ ಗುಗ್ಗರಿ ಹಬ್ಬ ಮಾಡುತ್ತಾರೆ. ಹೊಸ ಧಾನ್ಯ ಹುರುಳಿ-ಜೋಳದೊಂದಿಗೆ ಬಾಳೆಹಣ್ಣು ಮತ್ತು ಬೆಲ್ಲ ಸೇರಿಸಿ ವಿಶೇಷ ಆಹಾರ ಸಿದ್ದಪಡಿಸುತ್ತಾರೆ. ಉತ್ತರ ಕರ್ನಾಟಕದಲ್ಲಿ ಅಪರೂಪದ ಆಚರಣೆಗಳು ದೀಪಾವಳಿಯೊಂದಿಗೆ ಬೆಸೆದುಕೊಂಡಿವೆ. ಬೆಳಗಾವಿ, ವಿಜಯಪುರ ಭಾಗದ ಅಲೆಮಾರಿ ಕುರುಬರು ಕುರಿದಡ್ಡಿಗಳಲ್ಲಿ ‘ಹಾಲು ಬಿಂದಿಗೆ’ ಆಚರಣೆ ಮಾಡುತ್ತಾರೆ. ಕುರಿ ಕುಳ್ಳಿನ ಬೆಂಕಿಯಲ್ಲಿ ಕುರಿಹಾಲು ಕಾಯಿಸಿ, ಹಾಲು ಉಕ್ಕುವ ದಿಕ್ಕಿಗೆ ಮಳೆ-ಬೆಳೆ ಹೆಚ್ಚೆಂದು ನಂಬುತ್ತಾರೆ. ಆ ದಿಕ್ಕಿಗೆ ಕುರಿಗಳೊಂದಿಗೆ ವಲಸೆ ಹೋಗುತ್ತಾರೆ. ಕುರಿಗಾರ ಸಮುದಾಯಗಳು ಕುರಿಯನ್ನು ಲಕ್ಷ್ಮಿ ಎಂದು ಭಾವಿಸುತ್ತಾರೆ. ಹಾಗಾಗಿ, ಕುರಿಗಳನ್ನು ಪೂಜಿಸಿ ಓಡಿಸುವ ಆಚರಣೆಯೂ ಇದೆ. ಕುರಿದೊಡ್ಡಿಯನ್ನು ಹೊಲದ ಬೆಳೆಗಳಿಂದ ಅಲಂಕರಿಸಿ ವಿಶೇಷವಾಗಿ ಕುರಿಗಳಿಗೆ ಭಕ್ತಿಯನ್ನು ಅರ್ಪಿಸುವುದಿದೆ.

ಉತ್ತರ ಕರ್ನಾಟಕದ ಕೊಪ್ಪಳ, ಕುಷ್ಟಗಿ ಭಾಗದಲ್ಲಿ ಕುಂಬಾರ ಮನೆಯ ಕರಿಬೂದಿಯಿಂದ ಮನೆ ಮುಂದೆ ಎರಡು ದೀಪಸ್ತಂಬ ಬರೆಯುವುದಿದೆ. ಇದಕ್ಕೆ ‘ಕರಿಮಂಠ’ ಎಂದು ಕರೆಯುತ್ತಾರೆ. ಇದರ ಹಿನ್ನೆಲೆ (ಮಿತ್) ಕುತೂಹಲಕರ. ಒಮ್ಮೆ ಪತಿವ್ರತೆ ಲಕ್ಷ್ಮಿಪೂಜೆಗೆ ಅಡ್ಡಿಯಾಗದಿರಲೆಂದು ಕಾವಲಿಗೆ ಮಣ್ಣಿನ ಕರಿ ಮತ್ತು ಮಂಠ ಎಂಬ ಯೋಧರನ್ನು ನಿಲ್ಲಿಸುತ್ತಾಳೆ. ಇವಳ ಭಕ್ತಿ ಮೆಚ್ಚಿ ಸ್ವತಃ ಲಕ್ಷ್ಮಿಯೇ ಮನೆಗೆ ಬರುತ್ತಾಳೆ. ಆಗ ಕಾವಲಿನ ಕರಿ-ಮಂಠರು ಲಕ್ಷ್ಮಿಯನ್ನು ತಡೆದಾಗ ಕೋಪಗೊಂಡು ಇವರನ್ನು ಸಂಹರಿಸುತ್ತಾಳೆ. ಇದನ್ನು ಕಂಡ ಪತಿವ್ರತೆ ಗೋಳಾಡಿ, ಲಕ್ಷ್ಮಿಯಿಂದ ಅವರಿಬ್ಬರಿಗೂ ಮರುಜೀವ ಪಡೆಯುತ್ತಾಳೆ. ಈ ನೆನಪಿಗೆ ಕರಿಮಂಠನ ಆಚರಣೆ ನಡೆದುಕೊಂಡುಬಂದಿದೆ.

ಅಂತೆಯೇ, ಹುಲಿಜಂತಿಯಲ್ಲಿ ನಡೆವ ಕುರುಬರ ಮಾಳಪ್ಪನ ಮುಂಡಾಸು ಆಚರಣೆಯೊಂದಿದೆ. ದೀಪಾವಳಿ ಅಮವಾಸ್ಯೆಗೆ ಮಾಳಪ್ಪನ ಸಮಾಧಿ ಮೇಲೆ ಯಾವ ಕಡೆ ಮುಂಡಾಸ ಹೆಚ್ಚು ಬಿದ್ದಿರುತ್ತದೋ ಆ ಕಡೆ ಮಳೆ-ಬೆಳೆ ಹೆಚ್ಚೆಂದು ತಿಳಿಯುತ್ತಾರೆ. ಈ ಸಂದರ್ಭದ ಮಾಳಪ್ಪನ ಜಾತ್ರೆಗೆ ಗುರು ಬೀರಪ್ಪನ ಸಾಕುಮಗ ಬುಳ್ಳಪ್ಪ ಉಟಗಿ ಬರಮಲಿಂಗ, ಸೂನ್ಯಳ ವಿಠಲ, ಹುನೂರಿನ ಬೀರಪ್ಪ, ಬೀರಪ್ಪನ ತಂಗಿ ಶೀಲವಂತೆ ಸಿರಿಕೋನ ಜೀರಂಕಲಗಿ ಬೀರಪ್ಪ ದೈವಗಳ ಪಲ್ಲಕ್ಕಿಗಳು ಆಗಮವಾಗುತ್ತವೆ. ಈ ಪಲ್ಲಕ್ಕಿಗಳ ಉತ್ಸವ ರೋಮಾಂಚನಕಾರಿ. ಇದೇ ದೀಪಾವಳಿಗೆ ಜತ್ತ ತಾಲೂಕಿನ ಉಮದಿ ಮಲಕಾರಿಸಿದ್ಧ ಮತ್ತು ಮಂಗಳವೇಡ ತಾಲೂಕಿನ ಡೋಣಜದ ಮಹಾಸಿದ್ಧನ ಜಾತ್ರೆಗಳು ನಡೆಯುತ್ತವೆ.

ದೀಪಾವಳಿ ಪಾಡ್ಯಕ್ಕೆ ನಡೆವ ಭೀಮಾಂಬಿಕೆಯ ಜಾತ್ರೆಯಲ್ಲಿ ಬಂದವರಿಗೆಲ್ಲ ಸಂಗಟಿ ಸಾರಿನ ಪ್ರಸಾದವನ್ನು ವಿತರಿಸುತ್ತಾರೆ. ‘ಸಂಗಟಿ ಉಂಡು ಸಂಕಟ ಕಳೆದುಕೊಳ್ಳಿರಿ’ ಎಂದು ಭೀಮವ್ವ ವಚನ ನೀಡಿದ್ದಾಳೆಂದು ಜನ ನಂಬುತ್ತಾರೆ.

ತುಳುನಾಡಿನ ನಲಿಕೆ (ಪಾಣಾರ) ಸಮುದಾಯ ದೀಪಾವಳಿಯಲ್ಲಿ ಮಾಂಕಾಳಿ ಕುಣಿತ ನಡೆಸುತ್ತಾರೆ. ದೀಪಾವಳಿಯ ವೇಳೆ ಹೊಸ ಬತ್ತದಿಂದ ಮಡಿಯಲ್ಲಿ ತಯಾರಿಸಿದ ಅವಲಕ್ಕಿಯನ್ನು ನೈವೇದ್ಯವಾಗಿ ಅರ್ಪಿಸುವುದಿದೆ. ತನ್ನದಾಗಿದ್ದ ನಾಡಿನ ಬೆಳೆ ಭಾಗ್ಯಗಳನ್ನು ನೋಡಲು ಬರುವನೆನ್ನಲಾದ ಬಲೀಂದ್ರನಿಗೂ ಹೊಸ ಅವಲಕ್ಕಿಯ ಔತಣವನ್ನು ನೀಡುತ್ತಾರೆ.

ಲಂಬಾಣಿ ಮಹಿಳೆಯರಿಗೆ ದೀಪಾವಳಿ ವಿಶಿಷ್ಟ. ಇವರು ಲಕ್ಷ್ಮಿಪೂಜೆಗೆ ಮೊದಲು ಗೋಪೂಜೆ ಮಾಡುತ್ತಾರೆ. ಅಮವಾಸ್ಯೆಯ ರಾತ್ರಿ ಶೃಂಗರಿಸಿಕೊಂಡ ಯುವತಿಯರು ಹರಳೆಣ್ಣೆ ದೀಪದಿಂದ ತಾಂಡಾ ನಾಯಕನಿಗೆ ಬೆಳಗುತ್ತಾರೆ. ತಾಂಡಾದ ಮನೆಗಳಿಗೆ ಆರತಿ ಹೋದ ನಂತರ ಕಾಣಿಕೆಯಾಗಿ ಹಣವನ್ನು ಢಾಕಣಿಯಲ್ಲಿ (ಪಣತಿ) ಹಾಕುತ್ತಾರೆ. ಆಗ ಹುಡುಗಿಯರು ಮೇರಾ (ಆರತಿ) ಗೀತೆ ಹಾಡುತ್ತಾರೆ. ‘ಬಾಪು ತೋನ ಮೇರಾ/ ವರ್ಷೆ ದಾಡೇರ ಕೋಟ ದವಾಳಿ/ ಯಾರಿ ತೋನ ಮೇರಾ/ ವರ್ಷೆ ದಾಡೇರ ಕೋಟ ದವಾಳಿ/ ಭೀಯಾ ತೋನ ಮೇರಾ/ ವರ್ಷೆ ದಾಡೇರ ಕೋಟ ದವಾಳಿ’ ಎನ್ನುವಂತಹ ಹಾಡುಗಳಲ್ಲಿ ತಂದೆ, ತಾಯಿ, ಸಹೋದರರ ಗುಣಗಾನ ಮಾಡುತ್ತಾರೆ.

ಉತ್ತರ ಕನ್ನಡ ಭಾಗದ ಮುಕರಿ ಸಮುದಾಯದ ಮಹಿಳೆಯರಿಗೆ ದೀಪಾವಳಿ ದೊಡ್ಡ ಹಬ್ಬ. ವಾರಗಟ್ಟಲೆ ಹಬ್ಬದ ತಯಾರಿ ಮಾಡುತ್ತಾರೆ. ದೀಪಾವಳಿಯ ನೀರು ಮೀಯುವ ದಿನ ನಸುಕಿನಲ್ಲಿ ಸ್ನಾನ ಮಾಡಿ, ಒಂದು ಹಲಗೆಯ ಮಣೆಯ ಮೇಲೆ ಕುಡಿ ಬಾಳೆಯನ್ನಿಟ್ಟು, ಅದರ ಮೇಲೆ ಅಕ್ಕಿ ಹರಗಿ ಮೊಗ ಕಾಯಿಯನ್ನಿಟ್ಟು ಅದಕ್ಕೆ ಮಸಿಯಿಂದ ಮೀಸೆಯಿರುವ ಮುಖದಾಕೃತಿಯನ್ನು ಬಿಡಿಸಿ ಬಲೀಂದ್ರನೆಂದು ಪೂಜಿಸುತ್ತಾರೆ. ಮುಕರಿ ಅಜ್ಜಿಯರು ಮಕ್ಕಳಿಗೆ ಹಬ್ಬದ ಸಂಜೆ ಬಲೀಂದ್ರನ ಕತೆ, ಬಸ್ಯಾ ಹುಲಿ ಸವಾರಿ ಮಾಡಿದ ಕತೆ ಹೇಳುತ್ತಾಳೆ.

ಆಗೇರರ ಸಮುದಾಯ ದೀಪಾವಳಿಯನ್ನು ‘ದೇಪಳಿಗ’ ಹಬ್ಬ ಎನ್ನುತ್ತಾರೆ. ಎಣ್ಣೆ ಸ್ನಾನ ಮಾಡುವ ಕಾರಣಕ್ಕೆ ‘ನೀರ ಮೀಯಾ ಹಬ್ಬ’ ಎಂದೂ ಕರೆಯುತ್ತಾರೆ. ದೇಪಳಿಗದ ಹಿಂದಿನ ದಿನ ಹೆಂಗಸರದು ‘ಅಡಕಲ’ದಲ್ಲಿ (ದೊಡ್ಡ ಮಣ್ಣಿನ ಮಡಕೆ) ನೀರು ತುಂಬುವ ಸಂಭ್ರಮ. ಅಡಕಲನ್ನು ತೊಳೆದು, ಶೇಡಿ ಹಲಿ ಹೊಯ್ದು, ಅಡಕಲ ಕೊರಳಿಗೆ ಹಿಂಡಲಕಾಯಿ ಬಳ್ಳಿ-ಹೂಮಾಲಿ ಸುತ್ತಿ ಅಲಂಕರಿಸುತ್ತಾರೆ. ನೀರಿಗೆ ಬೇವಿನ ಎಲೆ, ನೇರಳಿ ಚಕ್ಕೆ ಹಾಕುತ್ತಾರೆ. ಚತುರ್ದಶಿಯ ದಿವಸ ಎಣ್ಣೆ ಹಚ್ಚಿ ಸ್ನಾನ ಮಾಡುತ್ತಾರೆ.

ದೀಪಾವಳಿಯಲ್ಲಿ ಕಹಿ ಬಳಕೆಯೇ ಒಂದು ವಿಶೇಷ. ಹಿಂಡಲಕಾಯವನ್ನು ಕಾಲಿನಿಂದ ಮೆಟ್ಟಿ ಒಡೆದು ಬೀಜವನ್ನು ಹೆಣೆಗೆ ಇಟ್ಟುಕೊಳ್ಳುವುದರ ಜೊತೆಗೆ (ವಿಷ್ಣು ಬಲಿ ಚಕ್ರವರ್ತಿಯನ್ನು ಮೆಟ್ಟಿದ ಸಾಂಕೇತಿಕ ಆಚರಣೆ) ಕಹಿಬೇವು, ಓಮ (ಅಜವಾನ), ಜೀರಿಗೆ ಅರೆದು ಕಹಿ ಮದ್ದನ್ನು ಮಾಡಿ ಕುಡಿಯುತ್ತಾರೆ. ಮೊಗೆಕಾಯಿಯ ಕಡುಬು ಈ ಹಬ್ಬದ ವಿಶೇಷ ಖಾದ್ಯ. ಅಂಕೋಲ ಭಾಗದಲ್ಲಿ ಮಣ್ಣಿನ ಹೊಂಡೆ ರಚಿಸಿ ಅದನ್ನು ಬಲೀಂದ್ರನ ಕೋಟೆ ಎಂದು ಕರೆಯುತ್ತಾರೆ. ಮನೆಗಳ ಪೂಜಾ ಕೋಣೆಯಲ್ಲಿ ಬೋರಜ್ಜಿ ಮತ್ತು ಬಲೀಂದ್ರನ ಮಣ್ಣಿನ ಮೂರ್ತಿ ಮಾಡಿ ಆರಾಧಿಸುವುದಿದೆ.

ಬಾಗಲಕೋಟೆ ಜಿಲ್ಲೆಯ ಸಿರೂರಿನಲ್ಲಿ ಕರ್ನಾಟಕದಲ್ಲಿ ಬೇರೆಲ್ಲೂ ಕಾಣದ ಆಚರಣೆಯೊಂದಿದೆ. ಪಾಡ್ಯದ ಮಧ್ಯರಾತ್ರಿ ಕೆರೆಯಂಗಳದ ಸಾಮಫಡಿಗೆ (ಕುಸ್ತಿ ತಾಲೀಮಿನ ಸ್ಥಳ) ಕುಸ್ತಿ ಜಟ್ಟಿಗಳೆಲ್ಲ ಮೆರವಣಿಗೆಯಲ್ಲಿ ಬಂದು ಸಾಮು ತೆಗೆಯುತ್ತಾರೆ. ನಂತರ ಎರಡು ಗರಡಿಮನೆಯವರ ಮಧ್ಯೆ ಸ್ಪರ್ಧೆಯೂ ಏರ್ಪಡುತ್ತದೆ. ಹೀಗೆ, ಸಾಮು ತೆಗೆಯುವಾಗ ಇದಕ್ಕೆ ಪೂರಕವಾದ ಜನಪದ ಗೀತೆಗಳನ್ನು ಹಾಡಲಾಗುತ್ತದೆ.

ಮಲೆನಾಡಿನ ಒಕ್ಕಲಿಗರು ಮಾಡುವ ಮೇಳಿಪೂಜೆ ರೈತಾಪಿ ಬದುಕನ್ನು ಬಿಂಬಿಸುತ್ತದೆ. ಬೇಸಾಯದ ಎಲ್ಲ ಸಾಮಗ್ರಿಗಳನ್ನು ಒಪ್ಪವಾಗಿಟ್ಟು, ಬೆಳೆಯುವ ಎಲ್ಲಾ ಬೆಳೆಗಳನ್ನು ಜೋಡಿಸಿ ವಿಶಿಷ್ಟವಾಗಿ ಪೂಜೆ ಮಾಡಲಾಗುತ್ತದೆ. ಕೆಲವೆಡೆ ಸೆಗಣಿಯಿಂದ ದೇವಿ ಮೂರ್ತಿ ಮಾಡಿ ಆರಾಧಿಸುವ ಪದ್ಧತಿ ಇದೆ. ಇದಕ್ಕವರು ‘ಕೆರಕ’ ಎಂದು ಕರೆಯುತ್ತಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಹಾಲೆಮರದ ಕಂಬಕ್ಕೆ ಶೃಂಗಾರ ಮಾಡಿ ಪೂಜೆ ಮಾಡುವುದಿದೆ.

ಉತ್ತರ ಕನ್ನಡ ಜಿಲ್ಲೆಯ ಕೆಲವೆಡೆ ದೀಪಾವಳಿಯನ್ನು ದೊಡ್ಡ ಹಬ್ಬ ಎಂದು ಕರೆಯುತ್ತಾರೆ. ಇದರಲ್ಲಿ ಗೋವುಗಳನ್ನು ಅಲಂಕರಿಸುತ್ತಾರೆ. ಎತ್ತುಗಳ ಕೊರಳಿಗೆ ನೋಟಿನ ಹಾರ, ಬೆಳ್ಳಿ ಬಂಗಾರದ ಸರಗಳನ್ನು ಹಾಕುವುದು, ಮದುಮಗನಂತೆ ಬಾಸಿಂಗ ಕಟ್ಟಿ ಶೃಂಗಾರ ಮಾಡುವುದು… ಹೀಗೆ ಶೃಂಗರಿಸಿದ ಎತ್ತು, ಆಕಳ ಜಾನುವಾರುಗಳನ್ನು ಪೂಜಿಸಿ ಊರ ಮುಂದೆ ತಂದು ಎಲ್ಲರೂ ಸಂಭ್ರಮಿಸುವುದಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ದೀಪಾವಳಿಗೆ ಮಣ್ಣಿನ ಬೊಂಬೆಗಳನ್ನು ಮಾಡುವುದಿದೆ. ಇದರಲ್ಲಿ ಕೋಟೆ-ಕೊತ್ತಲಗಳನ್ನು ಮಾಡಿ ಶಿವಾಜಿಯ ಪ್ರತಿಮೆ ಮಾಡುವುದಿದೆ. ಕೆಲವೊಮ್ಮೆ ವರ್ತಮಾನದ ವಿದ್ಯಮಾನಗಳನ್ನು ಆಧರಿಸಿಯೂ ಗೊಂಬೆಗಳನ್ನು ಮಾಡಲಾಗುತ್ತದೆ. ಹಾಗಾಗಿ, ಚಿಕ್ಕೋಡಿ ಭಾಗದವರಿಗೆ ದೀಪಾವಳಿಯೆಂದರೆ ಮಣ್ಣಿನ ಗೊಂಬೆಗಳ ಹಬ್ಬವೇ ಆಗಿದೆ.

ಮೊದಲೇ ಹೇಳಿದಂತೆ, ಕೆಲವು ಸಮುದಾಯಗಳಿಗೆ ದೀಪಾವಳಿ ಮಾಂಸಾಹಾರಿ ಹಬ್ಬ. ಕೊರಗ ಸಮುದಾಯಕ್ಕೆ ದೀಪಾವಳಿ ಹಿರಿಯರಿಗೆ ಹೆಡೆ ಅರ್ಪಿಸುವ ಹಬ್ಬ. ಸತ್ತ ವ್ಯಕ್ತಿಗಳ ಹೆಸರಲ್ಲಿ ಮಾಡಿದ ತಾಳಿಗಳನ್ನು ನೀರು ತುಂಬಿದ ಮಡಕೆಗಳ ಕಂಠಕ್ಕೆ ಕಟ್ಟುವ ವಿಶಿಷ್ಟ ಆಚರಣೆ ಇದೆ. ಕೊರಗರು ಈ ಹಬ್ಬಕ್ಕೆ ಹಂದಿಯನ್ನು ಕೊಯ್ಯುವುದು, ಹಂದಿ ಮಾಂಸ ಮಾಡುವುದು ಕೂಡ ವಿಶೇಷ.

ಗೊಂದಲಿಗ ಸಮುದಾಯವು ಈ ಹಬ್ಬದಲ್ಲಿ ಲಕ್ಷ್ಮಿಪೂಜೆಯನ್ನು ವಿಶೇಷವಾಗಿ ಮಾಡುತ್ತದೆ. ಗೊಂದಲಿಗ ಹೆಣ್ಣುಮಕ್ಕಳೆಲ್ಲ ಎಲ್ಲಿದ್ದರೂ ಈ ಹಬ್ಬಕ್ಕೆ ಕಡ್ಡಾಯವಾಗಿ ಊರಿಗೆ ಬರುತ್ತಾರೆ. ಅಂತೆಯೇ, ಗ್ರಾಮದೇವಿಗೆ ಬಲಿ ಕೊಡುವ ಆಚರಣೆಯೂ ಈ ಹಬ್ಬದಲ್ಲಿ ನಡೆಯುತ್ತದೆ.

ಕರ್ನಾಟಕದ ಹಲವೆಡೆ ಗ್ರಾಮೀಣ ಭಾಗಗಳಲ್ಲಿ ‘ಅಂಟಿಗೆ ಪಿಂಟಿಗೆ’ ಹಬ್ಬವು ದೀಪಾವಳಿಗೆ ಪರ್ಯಾಯವಾದ ಜನಪದರ ಹಬ್ಬವೆಂಬಂತೆ ಕಾಣುತ್ತದೆ. ಇದು ದನ ಕಾಯುವ ಹುಡುಗರು ಮತ್ತು ದನ ಸಾಕುವವರ ನಡುವೆ ಬಾಂಧವ್ಯ ಬೆಸೆವ ಸಂಕೇತದಂತೆ ಕಾಣುತ್ತದೆ. ದನ ಕಾಯುವ ಹುಡುಗರು ಹುಲ್ಲು, ಆಪು, ರವದಿ ಸೇರಿಸಿ ಒಂದು ವಿಶಿಷ್ಟವಾದ ಆಣೀಪೀಣೀ ದೀಪ ತಯಾರಿಸಿ, ಮನೆಗಳಿಗೆ ಮರಳಿ ದನಗಳಿಗೆ ಆರತಿ ಮಾಡುತ್ತ ಹಾಡು ಹೇಳುವುದಿದೆ. ವಿಜಯಪುರ, ಬೀದರ್, ಕಲಬುರಗಿ, ಧಾರವಾಡ, ಬೆಳಗಾವಿ ಮೊದಲಾದೆಡೆ ಈ ಆಚರಣೆ ಕಾಣುತ್ತದೆ.

ಸಾಗರ, ಸೊರಬ, ಸಿದ್ದಾಪುರ, ಸಿರಸಿ ಭಾಗದಲ್ಲಿ ಹಲಸರ ಸಮುದಾಯವು ದೀಪಾವಳಿಯನ್ನು ಹಬ್ಬಹಾಡುವುದೆನ್ನುತ್ತಾರೆ. ಪಾಡ್ಯದಿಂದ ಮೂರು ದಿನಗಳವರೆಗೆ ರಾತ್ರಿ ಮನೆಮನೆಗೆ ದೀಪವನ್ನು ಮುಟ್ಟಿಸಿ ದವಸ-ಧಾನ್ಯಗಳನ್ನು ಸಂಗ್ರಹಿಸುತ್ತಾರೆ. ಈ ಗುಂಪನ್ನು ‘ದೀವಳಿಗೆ ದಂಡು’ ಎನ್ನುತ್ತಾರೆ. ಅಂತೆಯೇ, ಈ ಸಂದರ್ಭಕ್ಕೆ ಭಗವಂತಿಕೆ ಮೇಳಗಳು ಹೊಸ ಉತ್ಸಾಹಗಳೊಂದಿಗೆ ಪಾಲ್ಗೊಳ್ಳುತ್ತವೆ.

ಹರಿಕಾಂತ ಸಮುದಾಯ ದೀಪಾವಳಿಯನ್ನು ‘ಕೃಷಿಸ್ವಾಮಿ ಹಬ್ಬ’ ಎಂದು ಕರೆಯುತ್ತದೆ. ಇವರನ್ನು ಅಂಟಿಗೆ ಪಿಂಟಿಗೆಯವರು ಎಂದೂ ಕರೆಯುತ್ತಾರೆ. ಹೀಗೆ, ಅಂಟಿಗೆ ಪಿಂಟಿಗೆ ಸಂಪ್ರದಾಯದ ಹಾಡು ಹೇಳುವುದು ಸ್ವಲ್ಪ ಫರಕುಗಳೊಂದಿಗೆ ಬೇರೆ-ಬೇರೆ ಭಾಗಗಲ್ಲಿ ನೆಲೆಸಿದೆ. ತೀರ್ಥಹಳ್ಳಿ, ಚಿಕ್ಕಮಗಳೂರು ಭಾಗದಲ್ಲಿ ಅಂಟಿಗೆ ಪಿಂಟಿಗೆ ಅಂದರೆ; ಶಿರಸಿ, ಸಿದ್ದಾಪುರ ಭಾಗದಲ್ಲಿ ಭಿಂಗಿ ಪದಗಳೆಂದೂ; ಹೊಸನಗರ, ಸಾಗರದ ಕಡೆ ದೀಪ ನೀಡುವುದೆಂದೂ; ಶಿವಮೊಗ್ಗ, ಸೊರಬ ಭಾಗದಲ್ಲಿ ಬಲ್ಲಾಳಿ ಪದಗಳೆಂದೂ ಭಿನ್ನವಾಗಿ ಗುರುತಿಸಲಾಗುತ್ತದೆ. ಈ ಸಂಪ್ರದಾಯವನ್ನು ಪ್ರಾದೇಶಿಕವಾಗಿ ‘ಆಡೀಪೀಡೀ,’ ‘ಆವಂಟಿಗ್ಯೋ ಪಾವಂಟಿಗ್ಯೋ,’ ‘ಅಂಟಿಸುಂಟಿ’ ಮುಂತಾಗಿ ಕರೆಯುತ್ತಾರೆ. ಬಹುಪಾಲು ಪಶುಪಾಲಕ ಜಾತಿಸಮುದಾಯಗಳು ಈ ಹಬ್ಬದಲ್ಲಿ ಭಾಗಿಯಾಗುತ್ತವೆ.

ಇಷ್ಟೆಲ್ಲ ದೀಪಾವಳಿ ವೈವಿಧ್ಯವನ್ನು ಹೇಳಿದ ಮೇಲೂ ಮತ್ತೊಂದು ಮಗ್ಗಲಿದೆ. ಕರ್ನಾಟಕದ ಸಾವಿರಾರು ಹಳ್ಳಿಗಳಿಗೆ ದೀಪಾವಳಿ ಹಬ್ಬ ಗೊತ್ತೇ ಇಲ್ಲ. ನನ್ನ ಬಾಲ್ಯದ – ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹಾರಕನಾಳೆಂಬ 300 ಮನೆಗಳ ಗ್ರಾಮದಲ್ಲಿ ಒಂದು ಜಂಗಮರ ಮನೆಯಲ್ಲಿ ಮಾತ್ರ ದೀಪಾವಳಿ ಮಾಡುತ್ತಿದ್ದರು. ಇಡೀ ಊರು ಈ ಮನೆಯನ್ನು ಕೌತುಕದಿಂದ ನೋಡುತ್ತಿತ್ತು. ಅಂತೆಯೇ, ಹಾರಕನಾಳು ಸಮೀಪದ ಕೊಟ್ಟೂರಿನಲ್ಲಿ ಕೃಷಿ ಮಾರುಕಟ್ಟೆಯ ದಲ್ಲಾಳಿ ಅಂಗಡಿಗಳಲ್ಲಿ ಅದ್ದೂರಿಯಾಗಿ ದೀಪಾವಳಿಯನ್ನು ಆಚರಿಸುತ್ತಾರೆ. ಆಗ ನಮ್ಮೂರಿನವರು ಕೃಷಿ ಸಾಲ ಪಡೆದ ದಲ್ಲಾಳಿ ಅಂಗಡಿಯವರ ದೀಪಾವಳಿ ಪೂಜೆಗೆ ತೆರಳುತ್ತಿದ್ದರು. ಲಕ್ಷ್ಮಿಪೂಜೆಯ ದಿನ ಹಳ್ಳಿಗರು ಪೂಜೆಯಲ್ಲಿ ಕೊಟ್ಟ ಹಣ್ಣು, ಸಿಹಿತಿಂಡಿಗಳನ್ನು ತಮ್ಮ ಟವಲ್ಲುಗಳಲ್ಲಿ ಕಟ್ಟಿಕೊಂಡು ಬರುತ್ತಿದ್ದರು. ಇದು ಹಾರಕನಾಳಿನ ಪಾಲಿನ ದೀಪಾವಳಿಯಾಗಿತ್ತು. ಇದನ್ನು ನೋಡಿದರೆ, ಎಷ್ಟೋ ಹಳ್ಳಿಗಳಲ್ಲಿ ದೀಪಾವಳಿ ಎಂದರೆ ಹಣವಿದ್ದ ಶ್ರೀಮಂತರು ಮಾಡುವ ಲಕ್ಷ್ಮಿಪೂಜೆಯ ಹಬ್ಬವೆಂದೂ, ನಗರದವರು ಮಾಡುವ ಹಬ್ಬವೆಂದೂ ತಿಳಿದಿದ್ದಾರೆ.

ಹೀಗೆ, ದೀಪಾವಳಿಯನ್ನು ಗ್ರಾಮಜಗತ್ತಿನ ಹಾಜರಿಯ ವೈವಿಧ್ಯ ಮತ್ತು ಗೈರುಹಾಜರಿಯ ನೆಲೆಯಲ್ಲಿ ಮರುಪರಿಶೀಲಿಸುವ ಅಗತ್ಯವಿದೆ. ಒಂದಂತೂ ಸತ್ಯ… ಜಗತ್ತು ಏಕರೂಪವಾಗುತ್ತಿರುವ ಹೊತ್ತಿನಲ್ಲಿ ದೀಪಾವಳಿ ತಮ್ಮ ಬಹುಸಂಸ್ಕೃತಿಯ ನೆಲೆಯಲ್ಲಿ ಬಹುತ್ವದ ಸಂಕೇತವಾಗಿ ಮುಖ್ಯವಾಗುತ್ತದೆ.

ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ

ಪೋಸ್ಟ್ ಹಂಚಿಕೊಳ್ಳಿ:

ಅರುಣ್‌ ಜೋಳದ ಕೂಡ್ಲಿಗಿ
ಅರುಣ್‌ ಜೋಳದ ಕೂಡ್ಲಿಗಿ
ಲೇಖಕ, ಜಾನಪದ ಸಂಶೋಧಕರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊರಳಿಗೆ ಸುತ್ತಿಕೊಂಡ ಇರಾನ್ ಯುದ್ಧ; ಅಮೆರಿಕದಲ್ಲಿ ತೈಲ ಬಿಕ್ಕಟ್ಟು – ಟ್ರಂಪ್ ಜನಪ್ರಿಯತೆಗೆ ಕುತ್ತು

ಟ್ರಂಪ್ ಸೃಷ್ಟಿಸಿದ ಈ ವಿನಾಶಕಾರಿ ಯುದ್ಧದ ಬಿಸಿ ಅಮೆರಿಕದ ಜನಸಾಮಾನ್ಯರ ಬದುಕನ್ನು...

ಮೊಜ್ತಬಾ ಖಮೇನಿ | ತೆರೆಯ ಹಿಂದಿದ್ದ ‘ಗೇಟ್‌ಕೀಪರ್’ ಈಗ ಇರಾನ್‌ನ ಪರಮೋಚ್ಚ ನಾಯಕ

ತಂದೆಯ 'ಸುಪ್ರೀಂ ಲೀಡರ್ ಕಚೇರಿ'ಯ ಸಂಪೂರ್ಣ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಮೊಜ್ತಬಾ ಅವರು...

ಮಹಿಳಾ ದಿನಾಚರಣೆ ವಿಶೇಷ: ಕಳೆದೆರಡು ದಶಕಗಳಲ್ಲಿ ಕ್ರೀಡಾಂಗಣವನ್ನಾಳಿದ 10 ಭಾರತೀಯ ಮಹಿಳೆಯರು

ಒಂದು ಕಾಲದಲ್ಲಿ ಕ್ರೀಡೆಯೆಂದರೆ ಕೇವಲ ಪುರುಷರ ಸ್ವತ್ತು ಎಂಬ ಅಲಿಖಿತ ನಿಯಮವಿತ್ತು;...