2026ರ ಫೆಬ್ರವರಿ ವೇಳೆಗೆ 108 ಆ್ಯಂಬುಲೆನ್ಸ್ ತುರ್ತುಸೇವೆಗಳ ಸಂಪೂರ್ಣ ನಿಯಂತ್ರಣ, ನಿರ್ವಹಣೆಯನ್ನು ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಸಜ್ಜಾಗಿದೆ. ತುರ್ತುಸೇವೆಗಳನ್ನು ಇಲಾಖೆಯೇ ನಿಭಾಯಿಸಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
108 ತುರ್ತುಸೇವೆಗಳ ದಕ್ಷತೆ ಮೇಲೆ ಗಮನವನ್ನು ಕೇಂದ್ರೀಕರಿಸಲಾಗುತ್ತಿದೆ. ಆ್ಯಂಬುಲೆನ್ಸ್‌ಗಾಗಿ ತುರ್ತು ವೈದ್ಯಕೀಯ ತಂತ್ರಜ್ಞರನ್ನು (ಇಎಂಟಿ) ನೇಮಿಸಿಕೊಳ್ಳಲು ಇಲಾಖೆಯು ಸ್ಪರ್ಧಾ ಪರೀಕ್ಷೆ ನಡೆಸಲು ಯೋಜಿಸುತ್ತಿದೆ. ಈ ತಂತ್ರಜ್ಞರು ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುವ ಸಮಯದಲ್ಲಿ ಆ್ಯಂಬುಲೆನ್ಸ್‌ನಲ್ಲಿ ಇರುತ್ತಾರೆ. ರೋಗಿಗಳಿಗೆ ಅಗತ್ಯ ಪ್ರಥಮ ಚಿಕಿತ್ಸೆ ಮತ್ತು ವೈದ್ಯಕೀಯ ಸೇವೆಗಳನ್ನು ಒದಗಿಸುತ್ತಾರೆ” ಎಂದು ಅವರು ತಿಳಿಸಿದ್ದಾರೆ.
“ದೇಶದಲ್ಲಿ ಮೊದಲ ಬಾರಿಗೆ ಇಂತಹ ಕ್ರಮವನ್ನು ಕೈಗೊಳ್ಳಲಾಗುತ್ತಿದೆ, ತುರ್ತು ಸೇವೆಗಳಲ್ಲಿ ಯಾವುದೇ ರಾಜಿ ಇರುವುದಿಲ್ಲ. ಸಕಾಲಕ್ಕೆ ಉತ್ತಮ ಸೇವೆ ದೊರೆಯುತ್ತದೆ ಎಂಬುದನ್ನು ನಾವು ಖಾತ್ರಿಪಡಿಸುತ್ತೇವೆ. ಉತ್ತಮ ಕಾರ್ಯನಿರ್ವಹಣೆಗಾಗಿ ಆರೋಗ್ಯ ಇಲಾಖೆಯು ರಸ್ತೆ ಸುರಕ್ಷತಾ ಪ್ರಾಧಿಕಾರದಿಂದ ಹೊಸ 175 ಆ್ಯಂಬುಲೆನ್ಸ್‌ಗಳನ್ನು ಖರೀದಿಸಲಿದೆ” ಎಂದು ಗುಂಡೂರಾವ್ ಹೇಳಿದ್ದಾರೆ.
“2018ರಲ್ಲಿ ಖರೀದಿಸಲಾಗಿದ್ದ ಆ್ಯಂಬುಲೆನ್ಸ್‌ಗಳ ಸೇವೆಯು ಸ್ಥಗಿತಗೊಳ್ಳುತ್ತಿವೆ. ಆದ್ದರಿಂದ, ತುರ್ತುಸೇವೆಗಳಲ್ಲಿ ತೊಡಕು ಉಂಟಾಗದಂತೆ ನೋಡಿಕೊಳ್ಳಲು, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಲು ಹೊಸ ಆ್ಯಂಬುಲೆನ್ಸ್‌ಗಳನ್ನು ಖರೀದಿಸುತ್ತೇವೆ” ತುರ್ತು ನಿರ್ವಹಣೆ ಮತ್ತು ಸಂಶೋಧನಾ ಸಂಸ್ಥೆಯ ಉಪ ನಿರ್ದೇಶಕ ಡಾ. ಪ್ರಭುದೇವ ಗೌಡ ಹೇಳಿದ್ದಾರೆ.
“ಹೊಸ ಆ್ಯಂಬುಲೆನ್ಸ್‌ಗಳು ಮೊಬೈಲ್ ಡೇಟಾ ಟರ್ಮಿನಲ್ಅನ್ನು ಹೊಂದಿರುತ್ತವೆ. ಇದರಿಂದ ತಂತ್ರಜ್ಞರು ಮತ್ತು ಚಾಲಕರು ರೋಗಿಗಳು ಮತ್ತು ಹತ್ತಿರದ ಆಸ್ಪತ್ರೆಗಳನ್ನು ಪತ್ತೆಹಚ್ಚಲು ಸಾಧ್ಯವಾಗುತ್ತದೆ” ಎಂದು ಅವರು ಹೇಳಿದ್ದಾರೆ.




