ಕರೋನಾ ಸಮಯದಲ್ಲಿ ಕರ್ನಾಟಕದಲ್ಲಿ ನಡೆದಿದ್ದ ಕೋವಿಡ್ ಹಗರಣ ತನಿಖೆ ನಡೆಸಿರುವ ನ್ಯಾಯಮೂರ್ತಿ ಮೈಖೇಲ್ ಡಿ ಕುನ್ಹಾ ಸಮಿತಿಯು, ಅಕ್ರಮ ನಡೆಸಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಉನ್ನತ ಅಧಿಕಾರಿಗಳು ಹಾಗೂ ಬೆಂಗಳೂರು ಗ್ರಾಮಾಂತರ, ಗದಗ, ಕೊಪ್ಪಳ ಜಿಲ್ಲಾಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಶಿಫಾರಸು ಮಾಡಿದೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸರಿಸುಮಾರು 2,000 ಕೋಟಿ ರೂ. ಕೋವಿಡ್ ಹಗರಣ ನಡೆದಿದೆ ಎಂದು ಆರೋಪಿಸಲಾಗಿದೆ. ಆರೋಪಿತ ಹಗರಣದ ತನಿಖೆಗಾಗಿ ಹಾಲಿ ಕಾಂಗ್ರೆಸ್ ಸರ್ಕಾರವು 2023ರಲ್ಲಿ ಡಿ. ಕುನ್ಹಾ ನೇತೃತ್ವದ ಸಮಿತಿಯನ್ನು ರಚಿಸಿತ್ತು. ಸಮಿತಿಯು ಇತ್ತೀಚೆಗೆ ತನ್ನ 2ನೇ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಇದೀಗ ವರದಿಯ ಕೆಲ ಅಂಶಗಳು ಬಹಿರಂಗಗೊಂಡಿವೆ.
ಬಹಿರಂಗವಾದ ವರದಿಯ ಅಂಶಗಳು ವಿವರಿಸುವಂತೆ, ಹಗರಣದಲ್ಲಿ ಬಿಬಿಎಂಪಿ ಅಧಿಕಾರಿಗಳು ಮತ್ತು ಮೂವರು ಜಿಲ್ಲಾಧಿಕಾರಿಗಳು ಭಾಗಿಯಾಗಿದ್ದಾರೆ ಎಂಬುದನ್ನು ಸಮಿತಿಯು ಕಂಡುಕೊಂಡಿದೆ. ಅವರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿದೆ.
ವೈದ್ಯಕೀಯ ಉಪಕರಣಗಳನ್ನು ಖರೀದಿಯಲ್ಲಿ ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆ ಪಾವತಿಸಿ ಖರೀದಿ ಮಾಡಲಾಗಿದೆ. ಬಿಬಿಎಂಪಿಯ ನಾಲ್ಕು ವಿಭಾಗಗಳು ಮತ್ತು ಮೂರು ಜಿಲ್ಲೆಗಳಲ್ಲಿ ಶೇ.54ರಷ್ಟು (157.55) ಕೋಟಿ ರೂ. ಅವ್ಯವಹಾರ ನಡೆದಿದೆ. 2020ರಿಂದ 2022ರವರೆಗೆ ಬೊಮ್ಮನಹಳ್ಳಿ, ಬೆಂಗಳೂರು ದಕ್ಷಿಣ, ಬೆಂಗಳೂರು ಪಶ್ಚಿಮ ಮತ್ತು ಯಲಹಂಕ ವಲಯಗಳಲ್ಲಿ ಸೇವೆ ಸಲ್ಲಿಸಿದ್ದ ಮತ್ತು ಅವ್ಯವಹಾರದಲ್ಲಿ ಭಾಗಿಯಾಗಿದ್ದ ಜಂಟಿ ಆಯುಕ್ತರು, ಆರೋಗ್ಯ ವಿಭಾಗದ ಅಧಿಕಾರಿಗಳು ಮತ್ತಿತರರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಹೇಳಿದೆ.
ಈ ವರದಿ ಓದಿದ್ದೀರಾ?: ಬಿಜೆಪಿ ಕೋವಿಡ್ ಹಗರಣ ಬಟಾಬಯಲು | 330 ರೂ. ಕಿಟ್‌ಗೆ 2,200 ರೂ. ಪಾವತಿಸಿದ್ದ ಬಿಎಸ್‌ವೈ ಸರ್ಕಾರ; ಏಳು ಪಟ್ಟು ಹೆಚ್ಚು ಹಣಕ್ಕೆ ಕಾರಣಗಳೇ ಇಲ್ಲ!
ಬೆಂಗಳೂರಿನ ನಾಲ್ಕೂ ವಲಯಗಳಲ್ಲಿ 184.62 ಕೋಟಿ ರೂ. ಮೌಲ್ಯದ ವೈದ್ಯಕೀಯ ಉಪಕರಣಗಳು ಮತ್ತು ಔಷಧಿಗಳನ್ನು ಖರೀದಿಸಲಾಗಿದೆ. ಈ ಪೈಕಿ, 113.09 ಕೋಟಿ ರೂ. ಅಕ್ರಮ ನಡೆದಿದೆ. ಈ ಬಗ್ಗೆ ಲೋಕಾಯುಕ್ತ ಅಥವಾ ಸೂಕ್ತ ತನಿಖಾ ತಂಡದಿಂದ ತನಿಖೆ ನಡೆಸಬೇಕು ಎಂದು ಹೇಳಿದೆ.
ಅಂತೆಯೇ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 45.55 ಕೋಟಿ ರೂ. ಮೌಲ್ಯದ ವೈದ್ಯಕೀಯ ಖರೀದಿಯಲ್ಲಿ 27.83 ಕೋಟಿ ರೂ. ಅವ್ಯವಹಾರ ನಡೆದಿದೆ. ಕೊಪ್ಪಳ ಜಿಲ್ಲೆಯಲ್ಲಿ 23.71 ಕೋಟಿ ರೂ. ಖರೀದಿಯಲ್ಲಿ 5.04 ಕೋಟಿ ರೂ. ಹಾಗೂ ಗದಗ ಜಿಲ್ಲೆಯಲ್ಲಿ 35.13 ಕೋಟಿ ರೂ. ಖರೀದಿಯಲ್ಲಿ 23.71 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಸಮಿತಿಯ ವರದಿ ತಿಳಿಸಿದೆ.
ಈ ನಷ್ಟವನ್ನು ವೈದ್ಯಕೀಯ ಉಪಕರಣ ಮತ್ತು ಔಷಧಿಗಳನ್ನು ಪೂರೈಕೆ ಮಾಡಿರುವ ಕಂಪನಿಗಳಿಂದಲೇ ವಸೂಲಿ ಮಾಡಬೇಕು. ಕೆಟಿಟಿಪಿ ಕಾಯ್ದೆಯನ್ನು ಉಲ್ಲಂಘಿಸಿರುವ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶಿಫಾರಸು ಮಾಡಿದೆ.
ಕಳೆದ ವರ್ಷ, ಸಮಿತಿಯು ಮೊದಲ ವರದಿಯನ್ನು ಸರ್ಕರಕ್ಕೆ ಸಲ್ಲಿಸಿತ್ತು. ಆ ವರದಿಯಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಹಗರಣದಲ್ಲಿ ಭಾಗಿಯಾಗಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಶಿಫಾರಸ್ಸು ಮಾಡಿತ್ತು.




