ಮಹಿಳೆಯರಲ್ಲಿ ಗರ್ಭಕೋಶದ ಕ್ಯಾನ್ಸರ್ ಹೆಚ್ಚಾಗಿ ಕಂಡುಬರುತ್ತಿದೆ. ಈ ಸಮಸ್ಯೆಯಿಂದ ರಕ್ಷಣೆ ಪಡೆಯಲು ಮಹಿಳೆಯರು ಎಚ್‌ಪಿವಿ ಲಸಿಕೆ ಪಡೆಯುವುದು ಅತ್ಯಗತ್ಯ ಎಂದು ವೈದ್ಯ ಮಂಗಳ ತಿಳಿಸಿದ್ದಾರೆ.
ಕೋಲಾರ ಜಿಲ್ಲೆಯ ವೇಮಗಲ್ಲು ಗ್ರಾಮದಲ್ಲಿ ‘ಪ್ರಾಜೆಕ್ಟ್ ಶೀಲ್ಡ್ ಕರ್ನಾಟಕ’ ಅಭಿಮಾನದಡಿ ಶಾಲಾ ವಿದ್ಯಾರ್ಥಿನಿಯರಿಗೆ ಎಬ್‌ಪಿವಿ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “WHO ಪ್ರಕಾರ, ಇತ್ತೀಚೆಗೆ ಜಾಗತಿಕವಾಗಿ 6 ಲಕ್ಷ ಹೊಸ ಪ್ರಕರಣಗಳು ವರದಿಯಾಗಿವೆ. ಅವುಗಳಲ್ಲಿ ಅರ್ಧದಷ್ಟು ಪ್ರಕರಣಗಳಲ್ಲಿ ಮಹಿಳೆಯರ ಸಾವಿಗೆ ಕಾರಣವಾಗಿವೆ. ಗರ್ಭಕೋಶ ಕ್ಯಾನ್ಸರ್‌ನಿಂದ ಮೃತಪಟ್ಟವರಲ್ಲಿ ಹೆಚ್ಚಿನವರು ಬಡವರು, ಕಡಿಮೆ ಆದಾಯವುಳ್ಳ ಕುಟುಂಬಗಳಿಗೆ ಸೇರಿದವರಾಗಿದ್ದಾರೆ” ಎಂದು ತಿಳಿಸಿದರು.
“ಮಹಿಳೆಯರು ಗರ್ಭಕೋಶ ಕ್ಯಾನ್ಸರ್‌ಗೆ ತುತ್ತಾಗದಂತೆ ರಕ್ಷಿಸಲು ಬಹುಮುಖಿ ವಿಧಾನಗಳ ಅಗತ್ಯವಿದೆ. ಜಾಗೃತಿಯಿಂದ ಹಿಡಿದು ಸಮುದಾಯ ತಲುಪುವಿಕೆ, HPV ಲಸಿಕೆಗಳ ವಿತರಣೆ ಸೇರಿದಂತೆ ನಾನಾ ರೀತಿಯಲ್ಲಿ ಕೆಲಸ ಮಾಡಬೇಕಿದೆ” ಎಂದರು.
ಈ ಲೇಖನ ಓದಿದ್ದೀರಾ?: ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಬಳಸುವುದರಿಂದ ಉಂಟಾಗುವ ಬಿಕ್ಕಟ್ಟುಗಳೇನು ಬಲ್ಲಿರಾ?
“ಸ್ಥಳೀಯ ವೈದ್ಯರು, ಪುರಸಭೆಯ ಕೆಲಸಗಾರರು ಮತ್ತು ಆರೋಗ್ಯ ರಕ್ಷಣಾ ಸ್ವಯಂಸೇವಕರ ಸಹಾಯದಿಂದ ಪ್ರಾಜೆಕ್ಟ್ ಶೀಲ್ಡ್ ಕರ್ನಾಟಕ ಅಭಿಯಾನವನ್ನು ನಡೆಸಲಾಗುತ್ತಿದೆ. ಕರ್ನಾಟಕದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಎಲ್ಲ ಕುಟುಂಬಗಳ ಮಹಿಳೆಯರಿಗೆ ಎಚ್‌ಪಿವಿ ಲಸಿಕೆಯ ತಲುಪುವಿಕೆ, ಲಭ್ಯತೆ ಮತ್ತು ಬಳಕೆಯನ್ನು ವಿಸ್ತರಿಸುವುದು ಯೋಜನೆಯ ಉದ್ದೇಶವಾಗಿದೆ” ಎಂದರು.
“ಗ್ರಾಮದಲ್ಲಿ 9-15 ವರ್ಷ ವಯಸ್ಸಿನ 175ಕ್ಕೂ ಹೆಚ್ಚು ಹೆಣ್ಣು ಮಕ್ಕಳಿಗೆ ಎಚ್‌ಪಿವಿ ಲಸಿಕೆ ನೀಡಲಾಗಿದೆ” ಎಂದು ತಿಳಿಸಿದರು.




