ಲಕ್ಷಾಂತರ ಜನರಿಗೆ ಆ್ಯಪಲ್ ವಾಚ್ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ಇದು ನಮ್ಮ ಹೃದಯ ಬಡಿತ, ದೈನಂದಿನ ಹೆಜ್ಜೆಗಳು ಹಾಗೂ ನಿದ್ರೆಯನ್ನು ಸದ್ದಿಲ್ಲದೆ ಟ್ರ್ಯಾಕ್ ಮಾಡುವ ಸಂಗಾತಿಯಾಗಿದೆ. ಆದರೆ, ಬ್ರಿಟನ್ ಮೂಲದ ಪೌಷ್ಟಿಕತಜ್ಞರೊಬ್ಬರು ಆ್ಯಪಲ್ ವಾಚ್ ಬಳಕೆಯ ಕುರಿತು ಎಚ್ಚರಿಕೆಯ ಗಂಟೆ ಬಾರಿಸಿದ್ದಾರೆ. ಈ ಸಾಧನಗಳ ಮೇಲಿನ ಕುರುಡು ನಂಬಿಕೆಯು ಜನರನ್ನು ‘ವಿಷಕಾರಿ ಹೊರೆ’ಗೆ ಒಡ್ಡುತ್ತಿದೆ ಎಂದು ಅವರು ಎಚ್ಚರಿಸಿದ್ದಾರೆ.
ಆರೋಗ್ಯ ಸಂಬಂಧಿತ ವಿಷಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಹಂಚಿಕೊಳ್ಳುವ ಪೌಷ್ಟಿಕತಜ್ಞ ಜಿಬ್ ಅಟ್ಕಿನ್ಸ್ ಅವರು ‘ಆ್ಯಪಲ್ ವಾಚ್ ಧರಿಸುವುದನ್ನು ನಿಲ್ಲಿಸಿ’ (Stop wearing your Apple Watch) ಎಂಬ ಶೀರ್ಷಿಕೆಯಡಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ; “ಜೇಬಿನಲ್ಲಿರುವ ಸ್ಮಾರ್ಟ್‌ಫೋನ್ ಅಥವಾ ಮೇಜಿನ ಮೇಲಿರುವ ಲ್ಯಾಪ್‌ಟಾಪ್‌ಗಿಂತ ಭಿನ್ನವಾಗಿ, ಸ್ಮಾರ್ಟ್‌ವಾಚ್ ವಿಶಿಷ್ಟವಾಗಿದೆ. ಇದನ್ನು ದಿನದ 24 ಗಂಟೆಯೂ ಚರ್ಮದ ಸಂಪರ್ಕದಲ್ಲಿರುವಂತೆ ವಿನ್ಯಾಸಗೊಳಿಸಲಾಗಿದೆ. ಈ ನಿರಂತರ ಸಾಮೀಪ್ಯವೇ ಕಳವಳಕಾರಿ” ಎಂದು ಜಿಬ್ ಹೇಳಿದ್ದಾರೆ.
“ಹೆಚ್ಚಿನ ಜನರು ತಮ್ಮ ವಾಚ್‌ನ ಸುರಕ್ಷತೆಯ ಕುರಿತು ಪ್ರಶ್ನಿಸುವುದೇ ಇಲ್ಲ. ಏಕೆಂದರೆ, ಅದು ಜೀವನದ ಒಂದು ಸಾಮಾನ್ಯ ಭಾಗವಾಗಿಬಿಟ್ಟಿದೆ. ಆದರೆ, ಆ ಸಾಧನವು ರೇಡಿಯೋ ಫ್ರೀಕ್ವೆನ್ಸಿ (RF) ಸಂಕೇತಗಳನ್ನು ನೇರವಾಗಿ ನಿಮ್ಮ ಅಂಗಾಂಶಗಳಿಗೆ ಗಂಟೆಗಟ್ಟಲೆ ರವಾನಿಸುತ್ತಿರುತ್ತದೆ” ಎಂದು ಅವರು ವಿವರಿಸಿದ್ದಾರೆ.
“ಈ ರೇಡಿಯೋ ಫ್ರೀಕ್ವೆನ್ಸಿ ತರಂಗಾಂತರಗಳು ‘ಗ್ರೇಡ್ 2ಬಿ ಕಾರ್ಸಿನೋಜೆನ್’ (ಕ್ಯಾನ್ಸರ್ ಕಾರಕವಿರಬಹುದು) ಎಂದು ವಿಶ್ವ ಆರೋಗ್ಯ ಸಂಸ್ಥೆಯು ಎಂದು ವರ್ಗೀಕರಿಸಿದೆ. ಇವುಗಳ ಹೊರಸೂಸುವಿಕೆಯು ‘ಸುರಕ್ಷಿತ’ ಮಿತಿಯಲ್ಲಿದೆ ಎಂಬುದಾಗಿ ತಯಾರಕ ಸಂಸ್ಥೆಗಳು ಪ್ರತಿಪಾದಿಸುತ್ತಿದ್ದರೂ, ನಾವು ಮಲಗಿರುವಾಗಲೂ ದೇಹವನ್ನೇ ಅಂಟಿಕೊಳ್ಳುವ ಈ ಸಾಧನಗಳಿಗೆ ಆ ಮಿತಿಗಳನ್ನು ಅನ್ವಯಿಸಲು ಸಾಧ್ಯವಿಲ್ಲ” ಎಂದು ಜಿಬ್ ವಾದಿಸಿದ್ದಾರೆ.
ಮಂದುವರೆದು ಅವರು ವಾಚ್‌ಅನ್ನು ನಮ್ಮ ಮಣಿಕಟ್ಟಿಗೆ ಕಟ್ಟುವ ಪಟ್ಟಿಯ (Strap) ಬಗ್ಗೆಯೂ ಗಮನ ಸೆಳೆದಿದ್ದಾರೆ. ಎನ್‌ಆರ್‌ಎಎಎಂ 2024ರಲ್ಲಿ ನಡೆಸಿದ ಅಧ್ಯಯನವನ್ನು ಉಲ್ಲೇಖಿಸಿರುವ ಅವರು, “ಆ್ಯಪಲ್ ವಾಚ್‌ಗಳಲ್ಲಿ ಬಳಸಲಾಗುವ ನಯವಾದ ಮತ್ತು ಸುಲಭವಾಗಿ ಬಾಗುವ ‘ಫ್ಲೋರೋಲಾಸ್ಟೊಮರ್’ (fluoroelastomer) ಬ್ಯಾಂಡ್‌ಗಳಲ್ಲಿ ಹೆಚ್ಚಾಗಿ PFAS ಅಥವಾ ‘ಫಾರೆವರ್ ಕೆಮಿಕಲ್ಸ್’ ಇರುವುದು ಕಂಡುಬಂದಿದೆ. ಅಮೆರಿಕನ್ ಕೆಮಿಕಲ್ ಸೊಸೈಟಿಯ ಪ್ರಕಾರ, ಫ್ಲೋರಿನೇಟೆಡ್ ಸಿಂಥೆಟಿಕ್ ರಬ್ಬರ್‌ನಿಂದ ತಯಾರಿಸಿದ ದುಬಾರಿ ರಿಸ್ಟ್‌ಬ್ಯಾಂಡ್‌ಗಳಲ್ಲಿ ‘ಪರ್ಫ್ಲೋರೋಹೆಕ್ಸಾನೊಯಿಕ್ ಆಸಿಡ್’ (PFHxA) ಎಂಬ ಫಾರೆವರ್ ಕೆಮಿಕಲ್ ಹೆಚ್ಚಿನ ಮಟ್ಟದಲ್ಲಿರುವುದು ಕಂಡುಬಂದಿದೆ” ಎಂದು ಅವರು ವಿವರಿಸಿದ್ದಾರೆ.
“ಸಾಧನಗಳಲ್ಲಿರುವ ರಾಸಾಯನಿಕಗಳು ನಿಮ್ಮ ಚರ್ಮ ಮತ್ತು ರಕ್ತಕ್ಕೆ ಸೇರಬಹುದು. PFAS ರಾಸಾಯನಿಕಗಳು ವಿಘಟನೆಯಾಗುವುದಿಲ್ಲ. ಹಾಗಾಗಿ ಅವು ಕಾಲಾನಂತರದಲ್ಲಿ ಅಂಗಾಂಗಗಳಲ್ಲಿ ಶೇಖರಣೆಯಾಗುತ್ತವೆ. ಇದು ಯಕೃತ್ತಿನ ಒತ್ತಡ, ಮೂತ್ರಪಿಂಡದ ಸಮಸ್ಯೆಗಳು ಹಾಗೂ ಹಾರ್ಮೋನ್ ವ್ಯತ್ಯಯಗಳಿಗೆ ಕಾರಣವಾಗಬಹುದು ಎಂಬುದನ್ನು ಸಂಶೋಧನೆಗಳು ತೋರಿಸಿವೆ” ಎಂದು ಅವರು ವಿವರಿಸಿದ್ದಾರೆ.
ಪರೀಕ್ಷಿಸಲಾದ 22 ಜನಪ್ರಿಯ ಬ್ಯಾಂಡ್‌ಗಳಲ್ಲಿ 15 ಉತ್ಪನ್ನಗಳು ಇಂತಹ ವಿಷಕಾರಿ ಅಂಶಗಳನ್ನು ಹೊಂದಿವೆ ಎಂದು ಅಧ್ಯಯನವು ಬಹಿರಂಗಪಡಿಸಿರುವುದಾಗಿ ಅವರು ತಿಳಿಸಿದ್ದಾರೆ.
ಆದಾಗ್ಯೂ, ಭಯಪಡುವ ಅಗತ್ಯವಿಲ್ಲ ಎಂದಿರುವ ಜಿಬ್, “ಆ್ಯಪಲ್ ವಾಚ್ ಬಳಸುವವರನ್ನು ಭಯಪಡಿಸುವುದು ನನ್ನ ಉದ್ದೇಶವಲ್ಲ. ಇದು ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ. ನಾವು ಕಠಿಣ ಪ್ರಶ್ನೆಗಳನ್ನು ಕೇಳದೆಯೇ ಈ ಸಾಧನಗಳನ್ನು ನಮ್ಮ ಜೀವನದ ಭಾಗವಾಗಿಸಿಕೊಂಡಿದ್ದೇವೆ. ಆ್ಯಪಲ್ ವಾಚ್ ಒಂದು ಶಕ್ತಿಶಾಲಿ ಸಾಧನ. ಆದರೆ ಅದನ್ನು ನಮ್ಮ ದೇಹದ ನೈಸರ್ಗಿಕ ಭಾಗವೆಂದು ಪರಿಗಣಿಸುವುದನ್ನು ನಾವು ನಿಲ್ಲಿಸಬೇಕು” ಎಂದು ಹೇಳಿದ್ದಾರೆ.
ಆ್ಯಪಲ್ ವಾಚ್ ಬಳಕೆಯ ಕುರಿತು ಕೆಲವು ಸೂಚನೆಗಳನ್ನು ಅವರು ಹಂಚಿಕೊಂಡಿದ್ದಾರೆ; “ಸಿಂಥೆಟಿಕ್ ಫ್ಲೋರೋಲಾಸ್ಟೊಮರ್ ಬ್ಯಾಂಡ್‌ಗಳ ಬದಲಿಗೆ ಸಾವಯವ ಚರ್ಮ, ಸ್ಟೇನ್‌ಲೆಸ್ ಸ್ಟೀಲ್ ಅಥವಾ ಸೆಣಬಿನಂತಹ ನೈಸರ್ಗಿಕ ವಸ್ತುಗಳಿಂದ ಮಾಡಿದ ಬ್ಯಾಂಡ್‌ಗಳನ್ನು ಬಳಸಬೇಕು. ಕೆಲಸದ ಸಮಯದಲ್ಲಿ ಅಥವಾ ಮನೆಯಲ್ಲಿ ವಿಶ್ರಾಂತಿ ಪಡೆಯುವಾಗ ವಾಚ್ ಅನ್ನು ಬಿಚ್ಚಿಡಬೇಕು. ಮಲಗುವಾಗ ವಾಚ್ ಧರಿಸುವುದನ್ನು ನಿಲ್ಲಿಸಿ. ದೇಹವು ತನ್ನನ್ನು ತಾನು ಶುದ್ಧೀಕರಿಸುವ ಸಮಯವಿದು; ಈ ಸಮಯದಲ್ಲಿ ಇಎಮ್‌ಎಫ್ ಮತ್ತು ಇತರ ರಾಸಾಯನಿಕಗಳ ಸಂಪರ್ಕವು ಈ ಪ್ರಮುಖ ಪ್ರಕ್ರಿಯೆಗೆ ಅಡ್ಡಿಪಡಿಸಬಹುದು” ಎಂದು ಹೇಳಿದ್ದಾರೆ.
“ಇಂತಹ ಸಣ್ಣ ಬದಲಾವಣೆಗಳು ದೈನಂದಿನ ಅಪಾಯವನ್ನು ಕಡಿಮೆ ಮಾಡಬಹುದು. ಕಾಲಾನಂತರದಲ್ಲಿ ಇದು ಬಹಳ ಮುಖ್ಯವಾಗುತ್ತದೆ… ನಾವು ಪ್ರತಿದಿನ ಧರಿಸುವ ವಸ್ತುವಿನ ಸುರಕ್ಷತೆಯನ್ನು ಪ್ರಶ್ನಿಸುವ ಮೂಲಕ, ನಮ್ಮ ದೀರ್ಘಕಾಲೀನ ಆರೋಗ್ಯದ ನಿಯಂತ್ರಣವನ್ನು ನಾವು ಮರಳಿ ಪಡೆಯಬಹುದು” ಎಂದು ಅವರು ಪ್ರತಿಪಾದಿಸಿದ್ದಾರೆ.
ಓದುಗರ ಗಮನಕ್ಕೆ: ಈ ವರದಿಯು ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರು ಹಂಚಿಕೊಂಡ ವಿಷಯವನ್ನು ಆಧರಿಸಿದೆ. ಈ ಅಂಶಗಳು ಈದಿನ.ಕಾಮ್‌ನ ನಿಲುವು-ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದಿಲ್ಲ.




